ಸೋಮವಾರದ ಒಡೆಯ ಶಿವನಿಗು
ನಮ್ಮ ಕಾಯುವ ತಾಯಿ ಗಿರಿಜೆಗು
ಸ್ವಾಮಿ ಗಣಪತಿ ನಮನ ಮಾಡುತ ಕಾಡಿ
ಬೇಡುವೆನು ||
ಬೆಪ್ಪುತಕ್ಕಡಿ ಕಥೆಯ ಸಾರವ
ಒಪ್ಪುಗೊಳ್ಳುವ ಹಾಗೆ ಹೇಳುವೆ
ತಪ್ಪು ತಡೆ ಒಂದಾಗದಿರಲೆಂದೆಂದು
ಕೈ ಮುಗಿವೆ ||

ಕೋಡಂಗಿ : ಹೋಯ್ ಭಾಗವತಣ್ಣಾ.

ಭಾಗವತ : ಏನಪ್ಪ?

ಕೋಡಂಗಿ : ಎಷ್ಟೊತ್ತಾಯ್ತು ಕುಣೀತಾ ಇದ್ದೀನಿ. ಕರೆದು ಮಾತಾಡಿಸೋದೇ ಇಲ್ಲವೆ?

ಭಾಗವತ : ಮಾತಾಡಿಸಬೇಕ? ಯಾರಪ್ಪ ನೀನು?

ಕೋಡಂಗಿ : ನಾನು ಯಾರೂಂತ ಗೊತ್ತಿಲ್ಲವೆ? ನನ್ನನ್ನೊಮ್ಮೆ ಕಂಡವರು ಮತ್ತೆ ಮರೆಯೋದು ಸಾಧ್ಯವೇ ಇಲ್ಲ ಮಾರಾಯರೇ. ನನ್ನ ಕಥೆ ಕೇಳಿ ಎಷ್ಟು ಜನ ನಗಾಡುತ್ತ ಸಂತೋಷ ಪಡುತ್ತಾರೆ ಗೊತ್ತ? ಬೇಕಾದರೆ ಈ ಊರಿನ ಯಾರನ್ನೇ ನನ್ನ ಬಗ್ಗೆ ಕೇಳಿ ಉರಿದುರಿದು ಉಗೀತಾರೆ.

ಭಾಗವತ : ಅಷ್ಟು ಖ್ಯಾತನೇನಪ್ಪಾ ನೀನು?

ಕೋಡಂಗಿ :  ಅಯ್ಯೋ ಖ್ಯಾತನಲ್ಲದಿದ್ದರೆ ಈಕಡೆ ಬರುತ್ತಿದ್ದೆನಾ? ಯಾಕೆ ಬಂದೆ ಕೋಡಂಗೀ ಅನ್ನಿ.

ಭಾಗವತ : ಯಾಕೆ ಬಂದೆ ಕೋಡಂಗೀ?

ಕೋಡಂಗಿ : ನೀವೇನೋ ಕಥೆ ಮಾಡ್ತೀರಂತೆ. ಕಥೆ ಕೇಳಿದರೆ ಆರೋಗ್ಯಕ್ಕೆ ಒಳ್ಳೇದಂತಲ್ಲ. ಐಲೀ ಕಡೆ ನನ್ನ ಆರೋಗ್ಯ ಕೆಟ್ಟಿದೆ. ಅದಕ್ಕೇ ಕಥೆ ಕೇಳೋಣ ಅಂತ ಬಂದೆ.

ಭಾಗವತ : ಯಾವ ಕಥೆ ಹೇಳೋಣಪ್ಪ?

ಕೋಡಂಗಿ : ಹಳೇಕಥೆ ಬೇಡ ಸ್ವಾಮಿ, ಹಿಂದೆ ನಡೆದದ್ದೂ ಅಲ್ಲ, ಈಗ ಹಾಲಿ ನಡೆಯುತ್ತಿರೋ ಕಥೆಯೂ ಅಲ್ಲ. ಮುಂದೆ ನಡೀಬೇಕಾದ್ದು ಹೆಳಲಾ ಕೋಡಂಗೀ ಅನ್ನಿ.

ಭಾಗವತ : ಹೇಳಲಾ ಕೋಡಂಗೀ?
ಕೋಡಂಗಿ : ಹೇಳು ಸ್ವಾಮಿ.

ಭಾಗವತ : ಹಾಗಿದ್ದರೆ ಕೇಳಯ್ಯಾ: ಒಂದಾನೊಂದು ಕಾಲದಲ್ಲಿ ಒಂದಾನೊಂದೂರು-

ಕೋಡಂಗಿ : ಒಂದಾನೊಂದೂರು ಅಂದರೆ ನಮ್ಮೂರು ಆದೀತೊ?

ಭಾಗವತ : ನಿಮ್ಮೂರು ಯಾವುದು?

ಕೋಡಂಗಿ : ಶಿವಾಪುರ.

ಭಾಗವತ : ಆದೀತು.

ಕೋಡಂಗಿ : ಶಿವಾಪುರವಾಗೋದಾದರೆ ನನ್ನ ಮಿತ್ರ ಉರ್ಫ್ ಯಜಮಾನನ ಕಥೆ ಆಗಬಹುದಲ್ಲಾ?

ಭಾಗವತ : ಯಾರಪ್ಪ ನಿನ್ನ ಮಿತ್ರ ಉರ್ಫ್ ಯಜಮಾನ?

ಕೋಡಂಗಿ : ಬೆಪ್ತಕ್ಕಡಿ ಬೋಳೇಶಂಕರ.

ಭಾಗವತ : ಏನಪ್ಪಾ ಅವನ ವಿಶೇಷ?

ಕೋಡಂಗಿ : ಅಯ್ಯೋ ಎಷ್ಟೂಂತ ಹೇಳ್ತೀರಾ? ಅವನ ವಿಶೇಷ ಎಷ್ಟಿವೆ ಅಂದರೆ ಒಂದೂ ಹೇಳಾಕಾಗೋದೇ ಇಲ್ಲ.

ಭಾಗವತ : ನೀನು ಅವನಲ್ಲಿ ಕೆಲಸಕ್ಕಿದ್ದೀಯೊ?

ಕೋಡಂಗಿ : ಹೌದು.

ಭಾಗವತ : ಎಷ್ಟಪ್ಪ ನಿನ್ನ ಸಂಬಳ?

ಕೋಡಂಗಿ : ದಿನಕ್ಕೆ ಕೆನ್ನೆ ಮೇಲೆ ಹತ್ತೇಟು.

ಭಾಗವತ : ದಿನಕ್ಕೆ ಹತ್ತಾದರೆ ತಿಂಗಳಿಗೆ ಮುನ್ನೂರಾಯ್ತು. ವರ್ಷಕ್ಕೆ ಮೂರು ಸಾವಿರದಾ ಆರುನೂರೇಟಾಯ್ತು. ತಗಳಪ್ಪ ಯಾರಿಗುಂಟು ಯಾರಿಗಿಲ್ಲ? ಇಷ್ಟು ಸಂಬಳ ತಗಂಡೇನಪ್ಪ ಮಾಡ್ತಿ?

ಕೋಡಂಗಿ : ಬ್ಯಾಂಕಿನಲ್ಲಿ ಕೂಡಿಸಿಟ್ಟು ಮದುವೆ ಆದ ಮೇಲೆ ಹೆಂಡತಿಗೆ ಕೊಡ್ತೀನಿ.

ಭಾಗವತ : ಭಲೆ, ದೊಡ್ಡ ಶ್ರೀಮಂತನಪ್ಪ ನೀನು. ಈಗೇನು ನಿನ್ನ ಕಥೆ ಹೇಳಲಾ? ಬೋಳೇಶಂಕರನ ಕಥೆ ಹೇಳಲಾ?

ಕೋಡಂಗಿ : ಯಜಮಾನರ ಕಥೆ ಹೇಳಿ ಸ್ವಾಮಿ.

ಭಾಗವತ : ಆಯ್ತಪ್ಪ ಒಂದಾನೊಂದು ಕಾಲದಲ್ಲಿ ಒಂದಾನೊಂದೂರು ಶಿವಾಪುರದಲ್ಲಿ ಬೆಪ್ತಕ್ಕಡಿ ಬೋಳೇಶಂಕರ ಅಂತಿದ್ದ. ಅವನ ತಂದೆ ಯಾರು?

ಕೋಡಂಗಿ : ಅವರಪ್ಪ.

ಭಾಗವತ : ಅವರಪ್ಪ ಯಾರು?

ಕೋಡಂಗಿ : ಅವನ ತಂದೆ.

ಭಾಗವತ : ಅವನ ತಂದೆ ಯಾರು?

ಕೋಡಂಗಿ : ಅವರಪ್ಪನ ತಂದೆಯ ಅಪ್ಪನ ತಂದೆಯ ಅಪ್ಪನ ತಂದೆ. ಸ್ವಾಮಿ ಆ ಕುಟುಂಬ ಎಷ್ಟು ಹಳೇದು ಅಂದರೆ ಅದರ ಮೂಲ ಪುರುಷ ಯಾರೂಂತ್ಲೇ ಗೊತ್ತಿಲ್ಲ.

ಭಾಗವತ : ಮೂಲಪುರಷ ಮಂಗನಂಥ ಮಾನವನೊ?

ಕೋಡಂಗಿ : ಮಂಗನಂಥಾ ಮಾನವನೋ, ಮಾನವನಂಥಾ ಮಂಗನೊ-ಅಂತೂ ಭಾರೀ ಪುರಾತನ ವಂಶ ಸ್ವಾಮಿ. ಅದೇನೋ ಮಂಗನಂಥ ಮಾನವ ಅಂದಿರಲ್ಲಾ, ನಿಜ ಇರಬೇಕು. ಯಾಕಂತೀರೊ- ನಮ್ಮ ಮಿತ್ರನ ವಂಶದವರಿಗೆ ಈಗಲೂ ಮೀಸೆ ದಾಡಿ  ಬೆಳೆಯುತ್ತವೆ. ದಿನಾ ಬೋಳಿಸಿಕೊಳ್ತಾರೆ.

ಭಾಗವತ : ಭಾರೀ ಹಳೇ ಮನೆತನ ಅಂತಾಯ್ತು. ಇನ್ನು ಮುಂದೆ ಕಥೆ ಹೇಳೋಣವಾ ಕೋಡಂಗಿ?

ಕೋಡಂಗಿ : ಹೇಳಿ ಸ್ವಾಮಿ.

ಭಾಗವತ : ಹಾಗಿದ್ದರೆ ಶಿವಾಪುರದ ಬಗ್ಗೆ ಒಂದು ಹಾಡು ಹೇಳಿ ಕುಣಿ. ಆಮೇಲೆ ಕಥೆ ಸುರು ಮಾಡೋಣ. (ಕೋಡಂಗಿ ಹಾಡುತ್ತಾ ಕುಣಿಯುತ್ತಿರುವಾಗ ಬೆಪ್ತಕ್ಕಡಿ ಬೋಳೇಶಂಕರ ನೆಲ ಉಳುತ್ತ ಬರುತ್ತಾನೆ.)

ಕೋಡಂಗಿ : ಕಾಯ್ದ ಕಂಗಳ ಕೂಲು ಮಾಡುವ
ಹುಲ್ಲು ಎಲ್ಲಿದೆ ಹೇಳಿರಿ.
ತೆರೆಯ ಚಿಮುಕಿಸಿ ಕರಿಯ ಪಾಪವ
ತೊಳೆವ ತೊರೆಯನು ತೋರಿರಿ.
ಅವಳ ಕತ್ತಲ ದೂರ ಮಾಡುವ
ಸೂರ್ಯಕಾಂತಿಯ ತೋರಿರಿ.
ಉಗುರು ಬೆಚ್ಚನೆ ಪ್ರೀತಿ ಎಲ್ಲಿದೆ
ಅಲ್ಲಿ ಶಿವಪುರ ಎನ್ನಿರಿ.

ಭಾಗವತ : ಓಂ ಪ್ರಥಮದಲ್ಲಿ ಸಾವಳಗಿ ಶಿವಲಿಂಗ, ಭೂಸನೂರಮಠದಯ್ಯ, ಘೋಡಗೇರಿ ಬಸವಣ್ಣೆಪ್ಪ-ಇವರ ಸ್ಮರಣೆಯ ಮಾಡಿ ಭೂಮಿಯ ಆದಿಮ ಸ್ಥಿತಿಯಲ್ಲಿದ್ದ ಶಿವಾಪುರದ ವರ್ಣನೆ ಮಾಡಬೇಕಾದರೆ : ಆದಿಗೆ ಮೊದಲು ಅನಾದಿಯಿತ್ತು. ಅನಾದಿಯಲ್ಲಿ ಭೂಮಿಯ ಮ್ಯಾಲೆ ತರುಮರಾದಿಗಳಿದ್ದವು. ತರುಮರಾದಿಗಳನ್ನು ನೂರೊಂದು ಜಾತಿಯ ಸಾವಿರದೆಂಟು ಪಕ್ಷಿಗಳಿದ್ದವು. ಆ ಪಕ್ಷಿಗಳು ಸಾವಿರದೆಂಟು ದನಿ ಮಾಡಿ ಹಾಡುತ್ತಿದ್ದವು. ಇಂಥಾ ತರುಮರಾದಿಗಳ ಕೆಲಗೆ ತಂಪು ನೆರಳಿತ್ತು. ತಂಪು ನೆರಳಲ್ಲಿ ಹಸಿರು ಹುಲ್ಲಿತ್ತು. ಹಸಿರು ಹುಲ್ಲಿನ ಮ್ಯಾಲೆ ಶಿವಾಪುರವಿತ್ತು. ಆ ಯಾವ ಶಿವಾಪುರದಲ್ಲಿ ಮಾನವರು ವಾಸವಾಗಿದ್ದರು, ಆ ಮಾನವರಲ್ಲಿ ಮೂರು ಜನ ಅಣ್ಣತಮ್ಮಂದಿರು. ದೊಡ್ಡೋನು ಬಂದು ಸರದಾರ ಸೋಮಣ್ಣ. ಅಳೋದಕ್ಕೆ ಹುಟ್ಟಿದವನು. ಕುರಿ ಕೋಳಿ ಕೊಂದವನು. ಅವು ಸಿಗದಿದ್ದರೆ ಮತ್ತು ಸಾಧ್ಯವಾದರೆ ಮನುಷ್ಯರನ್ನೂ ಕೊಲ್ಲಬಲ್ಲವನು. ಎರಡನೆಯವನು ಬಂದು ಸಾವ್ಕಾರ ಕಾಮಣ್ಣ. ಹೊಟ್ಟೆ ಮಜಬೂತಣ್ಣ. ಅದಕ್ಕೇ ಅವನ ಉರ್ಫ್‌ನಾಮೆ ಡಬ್ಬಣ್ಣ. ಎಣಿಸೋದರಲ್ಲಿ ಜಾಣ. ಹಸು ಎಣಿಸುತ್ತಾನೆ, ಹಣ ಎಣಿಸುತ್ತಾನೆ. ಯಾರಯಾರ ಜಮೀನು ಎಷ್ಟೆಕರೆ ಐತಣ್ಣ ಅಂದರೆ ತಕ್ಷಣ ಅಂಕಿಯೊಳಗೇ ಹೇಳುವಾತ. ಇನ್ನು ಮೂರನೆಯವನು ಬೆಪ್ತಕ್ಕಡಿ ಬೋಳೇಶಂಕರ. ಅವನಿಗೆ ಅವನಾಯ್ತು, ಭೂಮಿಸೀಮೆ ಆಯ್ತು, ಮಳೆ ಬೆಳೆ ಆಯ್ತು. ಒಂದು ನೊಣ ನೋಯಿಸಿದವನಲ್ಲ. ಮಳೆ ಬರೋದನ್ನ ಒಂದು ವಾರಕ್ಕೆ ಮುಂಚೇನೇ ಹೇಳಬಲ್ಲ. ನಿಂತ ನೀರಿಗೆ ಹರಿಯೋದಕ್ಕೆ ಕಾಲುವೆ ತೋಡಬಲ್ಲ. ಹಕ್ಕೀ ಹಾಡಿನ ಅರ್ಥ ಹೇಳಬಲ್ಲ. ಹೂವಿಗೆ ಬೀಳುವ ಕನಸು ಹೇಳಬಲ್ಲ, ಇನ್ನೇನಪ್ಪ ಅಂದರೆ ಕೈಬೆರಳಿಲ್ಲದೆ ಎಣಿಸೋದಕ್ಕೆ ಬರೋದಿಲ್ಲ.

ಕೋಡಂಗಿ : ಅಷ್ಟೆ ಅಲ್ಲ, ಒಂದಿನ ಅವರಣ್ಣ ಹಣಕೊಟ್ಟು “ಎಣಿಸಿ ಎಷ್ಟಿದೆ ಹೇಳೋ ಬೆಪ್ತಕ್ಕಡಿ” ಅಂದ. ಎಣಿಸಿ ಮೂರು ಕೈಯಿದೆ ಅಂದ. ಅವರಣ್ಣ ಬಿದ್ದೂ ಬಿದ್ದೂ ನಕ್ಕ. ಅವನ ಹೆಂಡತಿ ಬಿದ್ದೂ ಬಿದ್ದೂ ನಕ್ಕಳು. ಬಿದ್ದೂ ಬಿದ್ದೂ ನಕ್ಕದ್ದರಿಂದ ಅವರ ತಲೆಗೆ ಏಟಾಯ್ತು. ಆವಾಗ ಬೋಳೇಶಂಕರ ಏನೆಂದ ಗೊತ್ತ ಭಾಗವತರೇ: “ಅಯ್ಯೊ ಕೋಡಂಗೀ, ಇದರ ನೀತಿ ಏನಪ್ಪಾ ಅಂದರೆ ಇನ್ನೊಬ್ಬರನ್ನು ನೋಡಿ ಬಿದ್ದೂ ಬಿದ್ದೂ ನಗಬಾರದು. ನಕ್ಕರೆ ಗೊತ್ತಲ್ಲ- ತಲೆಗೆ ಏಟಾಗುತ್ತೆ”

ಭಾಗವತ : ಹಾಗಿದ್ದರೆ ಎಣಿಸೋದರಲ್ಲಿ ನೀನು ಜಾಣನೊ?

ಕೋಡಂಗಿ : ಓಹೊ.

ಭಾಗವತ : ಹಾಗಿದ್ದರೆ ಹೇಳೋಪ್ಪ: ನಿನ್ನ ಹತ್ತಿರ ಹತ್ತು ರೂಪಾಯಿದೆ. ಕಳ್ಳ ಬಂದು ಐದು ತಗೊಂಡು ಹೋದರೆ ಎಷ್ಟುಳೀತು?

ಕೋಡಂಗಿ : ನನ್ನ ಹತ್ತಿರ ಹಣ ಇಲ್ಲ ಭಾಗವತರೇ.

ಭಾಗವತ : ಇದೆ. ನಾನೇ ಕೊಟ್ಟೆ ಅಂತ ಇಟ್ಕೊಳಪ್ಪ.

ಕೋಡಂಗಿ : ಇನ್ನೊಬ್ಬರ ಹಣ ನನಗೆ ಬೇಡ ಸ್ವಾಮೀ.

ಭಾಗವತ : ಅಯ್ಯೋ ಇದೆ ಅಂತ ಇಟ್ಕೊಳ್ಳಯ್ಯ.

ಕೋಡಂಗಿ : ಹೂ ಇದೆ.

ಭಾಗವತ : ಹತ್ತಿದೆ. ಕಳ್ಳ ಬಂದು ಐದನ್ನೊಯ್ದ. ಎಷ್ಟುಳೀತು?

ಕೋಡಂಗಿ : (ಬೆರಳೆಣಿಸಿ ಲೆಕ್ಕ ಮಾಡಿ) ಐದು.

ಬೋಳೇಶಂಕರ : ಕೋಡಂಗೀ ಹಾಗೆಲ್ಲ ತಪ್ಪು ಉತ್ತರ ಹೇಳಬಾರದು. ಕಳ್ಳ ಬಂದು ಐದನ್ನಿಟ್ಟು ಐದ್ಯಾಕೆ ಒಯ್ತಾನೆ? ಸಿಕ್ಕರೆ ಅಷ್ಟೂ ತಕ್ಕೊಂಡೇ ಹೋಗ್ತಾನೆ. ಆದ್ದರಿಂದ ಏನೂ ಉಳೀಲಿಲ್ಲ ಅನ್ನು.

ಭಾಗವತ : ಭಲೇ! ಯಾರಯ್ಯಾ ಈ ಬೃಹಸ್ಪತಿ?

ಕೋಡಂಗಿ : ಇವರೇ ನಮ್ಮ ಕಥಾನಾಯಕರು ಸ್ವಾಮಿ, ಹ್ಯಾಗಿದಾರೆ?

ಭಾಗವತ : ಪರವಾ ಇಲ್ಲವೆ!

ಕೋಡಂಗಿ : ಯಾಕಿಲ್ಲ? ಅದೂ ಇದೆ ಭಾಗವತರೇ. ನಮ್ಮ ಕಥಾನಾಯಕರು ಎಷ್ಟು ತಿಳಿದುಕೊಂಡಿದ್ದಾರೆ ಅಂದರೆ ಅವರ ಜೀವಮಾನವಿಡೀ ಒಂದೇ ಒಂದು ಸಂಶಯ ಬಂದಿಲ್ಲ ಅವರಿಗೆ.

ಬೋಳೇಶಂಕರ : ಯಾಕಪ್ಪ ಸಂಶಯ ಬರಬೇಕು? ನೀವು ಓದೋದು ಎಣಿಸೋದು ಯಾವುದಕ್ಕಾಗಿ? ಸಮಾಜದಲ್ಲಿ ಚೆನ್ನಾಗಿ ಬದುಕಬೇಕು ಅಂತ ತಾನೆ? ಚೆನ್ನಾಗಿ ಬದುಕಿದರಾಯ್ತು, ಸಂಶಯ ಯಾಕೆ ಬರುತ್ತದೆ ಹೇಳಿ. ನೀವು ಹೀಗೆ ಮಾತಾಡ್ತಾ ಇರಿ. ನಾನೊಂದು ಹಾಡು ಹೇಳ್ತೇನೆ. ಯಾಕೆಂದರೆ ಹೊಲದಲ್ಲಿರೋವಾಗ ಹಾಡದೆ ಇರಲಿಕ್ಕಾಗೋದಿಲ್ಲ.

ಕಾಡು ನದಿ ಮಣ್ಣು ದೇವರ ಕಾಯಾ
ಏನಂತ ಹಾಡಲಿ ದೇವರ ಮಾಯಾ ||

ಗುಡ್ಡದಂಚಿಗೆ ಬೆಳ್ಳಿ ಚೆಲ್ಲುವ ಚಂದಿರಗೆ
ಬಾನಲ್ಲಿ ಕಣ್ಣ ಹೊಡೆಯುವ ಚಿಕ್ಕೆಗೆ
ಏನೆನ್ನಲೇ ಶಿವನೆ ಏನೆನ್ನಲೇ ||

ಹೊಳೆಯುವ ನೀರಿನ ತೆರೆಗಳ ನಗಿಸುತ
ಕಿರಣವ ಹೆಣೆಯುವ ಸೂರ್ಯನಿಗೆ
ಏನೆನ್ನಲೇ ಶಿವನೆ ಏನೆನ್ನಲೇ ||

ಬೆದೆಕುಣಿವ, ಬೆನ್ನೀನ ಹುರಿ ಬಿಗಿದ ಮಣಕಿಗೆ
ನಡೆಯುವ ನಡೆಯೆಲ್ಲ ಥೈ ಕುಣಿತವೆ |
ಹಳೆಯ ದೇವರನೆಲ್ಲ ಪಳಗಿಸಿ ನಗುವಂಥ
ಕೂಸಿನ ಕಣ್ಣೊಳಗೆ ಕಮಲಗಳೆ ||

ಚಿಮ್ಮುವ ಹೂವಿನ ಘಮ್ಮಾನ ವಾಸನೆ
ಸುಮ್ಮಾನ ಸಡಗರಕೇನೆನ್ನಲೇ |
ಸುಡುಗಾಡುದೊಳಗಡೆ ಹೂಬಿಡುವ ಮುಳ್ಳಿಗೆ
ಏನೆಂಬ ಹೆಸರಿಂದ ಕರೆಯುವೆನೇ ||

ಒಣನೆಲದ ಬಿರುಕಿನಲಿ ಉದ್ಗಾರದುಸಿರೇನ
ಉಸಿರೆಲ್ಲ ಹಸಿರೇರಿ ಲಕಲಕಿಸಿವೆ |
ನೆಲದಾಳ ಅಕ್ಕರೆಗೆ ರೆಕ್ಕೆ ಮೂಡಿವೆಯೇನ
ಚಿಟ್ಟೆಗಳು ಚಿಮ್ಮಿವೆ ಹೂ ಹೂವಿಗೆ ||

ಬದುಕಿನ ಖುಷಿಗೆ ಕುರುಡಾದ ಮಂದಿಗೆ
ಕಿಲುಬಿದ ಮನಸಿಗೆ ಏನೆನ್ನಲೇ |
ಸೈತಾನನ ಒಕ್ಕಲಾಗಿ ಕೆಟ್ಟಾಸೆಗಳ ಬಿತ್ತಿ
ನರಕಗಳ ಬೆಳೆವವರಿಗೇನೆನ್ನಲೇ ||

ಕಷ್ಟ ಸಾವಿರವಿರಲಿ ದುಃಖ ಸಾವಿರವಿರಲಿ
ಬದುಕು ನನಗಿರಲಿ ಶಿವದೇವರೇ |
ಸಾವಿರ ಮುಳ್ಳಿರಲಿ ಆದರು ಅದರಲ್ಲಿ
ಒಂದಾರೆ ಅರಳಿದ ಹೂವಿರಲಿ ಶಿವನೇ ||

( ಹಾಡು ನಡೆಯುತ್ತಿರುವಾಗ ಸರದಾರ ಸೋಮಣ್ಣ, ಸಾವ್ಕಾರ ಕಾಮಣ್ಣ ಇಬ್ಬರೂ ತಂತಮ್ಮ ಹೆಂಡದಿರ ಜೊತೆ ಬಂದು ಹೊಲದ ಕೆಲಸ ಮಾಡುವರು. ಬೋಳೇಶಂಕರನಂಥ ಸಂತೋಷ ಅವರಲ್ಲಿಲ್ಲ. ಒತ್ತಾಯಕ್ಕಾಗಿ ಕೆಲಸ ಮಾಡುತ್ತಿದ್ದವರಂತೆ ಕಾಣುತ್ತಾರೆ. ಹಾಡು ಮುಗಿದಾಗ ಬಿರುಗಾಳಿ ಬೀಸುತ್ತದೆ. ಬೋಳೇಶಂಕರನ ದನ ಮುಂದೆ ಸಾಗದೆ ನಿಲ್ಲುತ್ತವೆ.)

ಬೋಳೇಶಂಕರ : ಮರದೆಲೆ  ಬಾಡುತ್ತಿವೆ. ಯಾರದೋ ನಿಟ್ಟುಸಿರಿನ ಹಾಗೆ ಗಾಳಿ ಬೀಸುತ್ತಿದೆ. ಮೋಡ ಉರಿಯುತ್ತಿರುವ ಹಾಗೆ ಕಾಣಿಸುತ್ತಿದೆ. ಯಾಕಿದ್ದೀತು?

ಸ. ಹೆಂಡತಿ : ರೀ ನನ್ನ ಕರೆದಿರಾ?

ಸರದಾರ : ನಾನೂ ಅದನ್ನೇ ಕೇಳೋಣ ಅಂತಿದ್ದೆ: ನೀ ನನ್ನ ಕರೀಲಿಲ್ಲವೆ?

ಸ. ಹೆಂಡತಿ : ಥೂ ನಿಮಗೆ ಹೊತ್ತು ಗೊತ್ತು ಒಂದೂ ಇಲ್ಲ. ದೂರ ಸರೀರಿ ಅಂದರೆ.

ಸರದಾರ : ಲೇ ಲೇ ನಾನೇನೂ ಮಾಡಲಿಲ್ಲ ಕಣೇ. ನೀನು ಬೆನ್ನ ಮೇಲೆ ಕೈಯಿಡ್ತಿದ್ದೀಯಾ, ನೋಡು ತಮ್ಮಂದಿರು ಇಲ್ಲೇ ಇದ್ದಾರೆ. ಅವರೆಲ್ಲ ಏನಂದುಕೊಳ್ತಾರೆ, ದೂರ ಸರಿಯೆ.

ಸ. ಹೆಂಡತಿ : ರೀರೀ ಒಂದು ಕೆಲಸ ಮಾಡ್ತೀರಾ?

ಸರದಾರ : ಏನದು?

ಸ. ಹೆಂಡತಿ : ಅಗೋ ಅಲ್ಲಿದೆಯಲ್ಲ, ಎತ್ತರವಾದ ಬೆಟ್ಟ. ಅದರ ನೆತ್ತೀ ಮೇಲಿಂದ ಕೆಳಕ್ಕೆ ನೀವು ನೆಗೆದರೆ ಎಷ್ಟು ಚೆನ್ನಾಗಿರುತ್ತಲ್ಲವ ನೋಡೋದಕ್ಕೆ!

ಸರದಾರ : ಏನೇ ನಿನ್ನ ಮೈಯಲ್ಲಿ ಹುಷಾರಿದೆ ತಾನೆ?

ಸ. ಹೆಂಡತಿ : ಬೇಗ ಹೋಗಿ ನೆಗೀರಿ ಅಂದರೆ. ಇಲ್ಲದಿದ್ದರೆ ನಾನೇ ನೆಗೀತೀನಿ ಅಷ್ಟೆ.

ಸರದಾರ : ಬೇಕಾದರೆ ಇಬ್ಬರೂ ನೆಗಿಯೋಣ, ಅದಕ್ಕೇನಂತೆ. ಆದರೆ ಅದ್ಯಾಕೆ ಈ ಪರಿ ಆಸೆ ಆಗ್ತಿವೆ ಇಬ್ಬರಿಗೂ? ಒಂದು ಮಾತು ತಮ್ಮನನ್ನು ಕೇಳೋಣ ಇರು. (ಇಬ್ಬರೂ ಆಗಲೇ ಬೆಟ್ಟದ ಕಡೆ ಅವಾಕ್ಕಾಗಿ ನೋಡುತ್ತಿರುವ ಸಾವ್ಕಾರಣ್ಣ, ಅವನ ಹೆಂಡತಿ ಹತ್ತಿರ ಹೋಗುತ್ತಾರೆ.)

ಸಾವ್ಕಾರಣ್ಣ : ಅಣ್ಣಾ ನಿನಗೆ ಆ ಬೆಟ್ಟದ ಮೇಲಿಂದ ಬೀಳೋಣ ಅಂತ ಅನ್ನಿಸುತ್ತ?

ಸರದಾರ : ಎಲಾ ಇವನ! ಅದನ್ನೇ ಕೇಳೋಣ ಅಂತ ಬಂದೆ ಕಣಪ್ಪ. ನಿನಗೂ ಹಾಗೇ ಅನ್ನಿಸ್ತಿದೆಯಾ?

ಸ. ಹೆಂಡತಿ :  ನನಗೂ ಅಷ್ಟೇ.

ಸಾವ್ಕಾರಣ್ಣ : ನಮಗೆಂದೂ ಹಿಂಗೆ ಹೀಗಾದದ್ದಿಲ್ಲ, ಬೋಳೇಶಂಕರನಿಗೂ ಹೀಗೆ ಆಗುತ್ತೇನೊ ಕೇಳೋಣ ಬಾ. (ಅವನ ಬಳಿಗೆ ಹೋಗುವರು)

ಸರದಾರ : ಅಯ್ಯಾ ಬೆಪ್ತಕ್ಕಡಿ, ಆ ಬೆಟ್ಟದ ತುದಿಯಿಂದ ಹಾಗಿ ಬೀಳೋಣ ಅಂತ ನಿನಗೇನಾದರೂ ಅನ್ನಿಸುತ್ತ?

ಬೋಳೇಶಂಕರ : ನಿಮಗೆ ಹಾಗನ್ನಿಸುತ್ತ?

ಸರದಾರ : ನಮಗೆಲ್ಲರಿಗೂ ಹಾಗನ್ನಿಸುತ್ತ ಇದೆ. ನಿನಗೂ ಅನ್ನಿಸ್ತಿದೆಯೆ?

ಬೋಳೇಶಂಕರ : ಇಲ್ಲವಲ್ಲ.

ಸಾವ್ಕಾರಣ್ಣ : ಹೇಳಿ ಕೇಳಿ ಬೆಪ್ತಕ್ಕಡಿ ಬೋಳೇಶಂಕರ; ಅವನಿಗೇನನ್ನಿಸುತ್ತೆ?

ಬೋಳೇಶಂಕರ : ಆದರೆ ಮನುಷ್ಯ ಹೌದೊ?

ಸರದಾರ : ನಾವು ನಾಲ್ವರಿಗೂ ಅನ್ನಿಸಿದ್ದು ನಿನಗೊಬ್ಬನಿಗೇ ಅನ್ನಿಸೋದಿಲ್ಲ ಅಂದರೆ ಅದೂ ಅನುಮಾನವೇ.

ಸಾವ್ಕಾರಣ್ಣ : ಅಣ್ಣಾ, ಅಕಾ ಆ ಬೆಟ್ಟದ ಮೇಲೆ ಕೆಂಪು ಹೂವಿನ ಮೆಳೆ ಇದೆಯಲ್ಲ, ಅದರ ಮರೆಯಲ್ಲೊಬ್ಬ ದೇವತೆ ನಿಂತುಕೊಂಡು ಕೈಮಾಡಿ ಕರೆದಂತೆ ಕಾಣಿಸೋದಿಲ್ಲವ?

ಸರದಾರ : ಹೌದು ದುಂಡಗೆ ಉರಿಯೋ ಕಣ್ಣಿವೆ!

ಸಾ. ಹೆಂಡತಿ : ಹೌದು ಹೊಳೆಯೋ ಹಲ್ಲಿವೆ!

ಸ. ಹೆಂಡತಿ : ಎತ್ತಿನ ಹಾಗೆ ಕೊಂಬಿವೆ! ಆದರೆ ಆ ದೇವತೆಗಳು ಇಬ್ಬರಿದ್ದಾರೆ.

ಬೋಳೇಶಂಕರ : ದೇವತೆಗಳಾಗಿದ್ದರೆ ನನಗೂ ಕಾಣಿಸಬಹುದಿತ್ತಲ್ಲ?

ಸ. ಹೆಂಡತಿ : ಮನುಷ್ಯರಿಗೆ ಮಾತ್ರ ದೇವತೆಗಳು ಕಾಣಿಸೋದು.

ಸಾ. ಹೆಂಡತಿ : ನಿನಗೆ ದೆವ್ವಭೂತ ಮಾತ್ರ ಕಾಣೋದು ಸಾಧ್ಯ.

ಬೋಳೇಶಂಕರ : ಒಮ್ಮೊಮ್ಮೆ ಪಿಶಾಚಿಗಳು ಈ ರೀತಿ ಆಟ ಆಡೋದಿದೆ. ಭಕ್ತಿಯಿಂದ ಒಮ್ಮೆ ಶಿವನ ಹೆಸರು ತಗೊಂಡು ಆ ಕಡೆ ನೋಡಿ. ನನಗಂತೂ ಬೆಟ್ಟ ಮಳೆ ಬಿಟ್ಟು ಇನ್ನೇನ್ನೂ ಕಾಣಿಸಲಿಲ್ಲ. ಏನೂ ಅನ್ನಿಸಲೂ ಇಲ್ಲ. ಹಾ ನಿಮ್ಮನ್ನೋಡಿ ನಗಬೇಕಂತ ಒಂದು ಬಾರಿ ಅನ್ನಿಸಿದ್ದು ನಿಜ.

ಸಾ. ಹೆಂಡತಿ : ದೊಡ್ಡ ಮನುಷ್ಯ ಅಲ್ಲವೆ! ತಿಂದ ರೊಟ್ಟಿ ಲೆಕ್ಕ ಕೂಡ ಗೊತ್ತಾಗೋದಿಲ್ಲ, ನಮ್ಮನ್ನೋಡಿ ನಗಬೇಕನ್ನಿಸ್ತಂತೆ.

ಸ. ಹೆಂಡತಿ : ನೋಡಿ, ಬೆಪ್ತಕ್ಕಡಿಗೆ ಮನುಷ್ಯರು ಅಂದರೆ ಅಷ್ಟಕಷ್ಟೆ. ಎತ್ತಿನ ಜೊತೆಗಿದ್ದಾಗಷ್ಟೆ ಅವನಿಗೆ ಸಂತೋಷವಾಗೋದು. ಯಾಕೆಂದರೆ ಎತ್ತಿಗಿಂತ ತನಗೆ ಜಾಸ್ತಿ ಬುದ್ಧಿ ಇದೆ ಅಂತ ಅವನಿಗ್ಗೊತ್ತು.

ಬೋಳೇಶಂಕರ : ನೋಡಿ, ನಾನು ದಡ್ಡ ಇರಬಹುದು. ಆದ್ದರಿಂದ ನೀವೇನು ಹೇಳ್ತೀರಿ ಅಂತ ಅರ್ಥವಾಗಲಿಲ್ಲ, ಅರ್ಥವಾದರೂ ನಾನು ಒಪ್ಪೋದಿಲ್ಲ. ಆಯ್ತಲ್ಲ ನನಗನ್ನಿಸಿದ್ದನ್ನ ಹೇಳಿದ್ದೇನೆ. ನಿಮಗೆ ನಂಬಿಕೆ ಬರದಿದ್ದರೆ ಸೀದಾ ನೀವು ನರಕಕ್ಕೆ ಹೋಗಬಹುದು. (ಕೆಲಸಕ್ಕೆ ತೊಡಗುವನು)

ಸ. ಹೆಂಡತಿ : ನಮಗೆ ನರಕಕ್ಕೆ ಹೋಗು ಅನ್ನೋನ್ನ ನೋಡಿಕೊಂಡು ಸುಮ್ಮನೇ ಇದ್ದೀರಲ್ಲರೀ, ನೀವೇನು ಗಂಡಸರ? ಪ್ರಾಣಿಗಳ? ಈ ಪ್ರಾಣಿಯಂಥವನ ಜೊತೆಗಿರೋದಕ್ಕಿಂತ ಯಾರೋ ರಾಜರ ಕೈಲಿ ಸಿಪಾಯಿ ಆಗಿರೋದು ಮೇಲು.

ಸಾ. ಹೆಂಡತಿ : ಈ ಬೆಪ್ತಕ್ಕಡಿ ಜೊತೆ ಇರೋದಕ್ಕಿಂತ ಯಾರದೋ ಅಂಗಡೀಲಿ ಲೆಕ್ಕ ಬರೀತ ಜೀವನ ಮಾಡೋದು ಮೇಲು.

ಸ. ಹೆಂಡತಿ : ರೀ ಆಸ್ತಿ ಪಾಲು ಮಾಡಿ ಈಸಿಕೊಳ್ಳಿ. ಬೇಕಾದ ಹಾಗೆ ಪಾಳೇಗಾರನಾಗಿ ಇರಬಹುದು.

ಸಾ. ಹೆಂಡತಿ : ರೀ ಆಸ್ತಿ ಭಾಗ ಮಾಡಿ. ನಮಗೆ ಬಂದಷ್ಟರಿಂದಲೇ ಹೊಟ್ಟೆಮೇಲೆ ಕೈಯಾಡಿಸಿಕೊಂಡು ಸಾವ್ಕಾರಾಗಿ ಇರಬಹುದು.

ಸರದಾರ : ಅಯ್ಯಾ ಕಾಮಣ್ಣಾ, ನಮಗಿರೋ ಆಸ್ತಿ ಮೂರು ಭಾಗ ಮಾಡಿ ಒಂದು ಭಾಗ ನನಗೆ ಕೊಡು-ಎಲ್ಲಾದರು ಪಾಳೇಗಾರಿಕೆ ಮಾಡಿಕೊಂಡಿರುತ್ತೇನೆ. ಆದರೆ ಖಂಡಿತ ಈ ಬೆಪ್ತಕ್ಕಡಿ ಜೊತೆ ಇರೋಲ್ಲ.

ಸಾವ್ಕಾರಣ್ಣ : ನಾನೂ ಅಷ್ಟೆ. ಬೇಕಾದರೆ ಯಾರದೋ ಜಮಾಖರ್ಚು ಬರೆದುಕೊಂಡಿದ್ದೇನು, ಈ ಬೆಪ್ತಕ್ಕಡಿ ಜೊತೆಗಿರೋದಿಲ್ಲ.

ಬೋಳೇಶಂಕರ : ನೋಡಿ; ನೀವಾಗಲಿ ನಿಮ್ಮ ಹೆಂಡಂದಿರಾಗಲಿ ಹೊಲದಲ್ಲಿ ದುಡಿದವರಲ್ಲ, ಕಷ್ಟಪಟ್ಟವರಲ್ಲ.

ಸಾ. ಹೆಂಡತಿ : ಕೇಳಿದಿರಾ ಏನಂತಾನೆ ಬೆಪ್ತಕ್ಕಡಿ: ನಾವು ದುಡಿದವರಲ್ಲ, ಕಷ್ಟಪಟ್ಟವರಲ್ಲ ಅಂತೆ!

ಸ. ಹೆಂಡತಿ : ಅಂದರೆ ನಿನ್ನೊಬ್ಬನ ಕಷ್ಟದಿಂದಾನೇ ನಾವೆಲ್ಲ ಬದುಕಿದೆವು ಅಂತಲ ನಿನ್ನ ಮಾತಿನರ್ಥ?

ಸರದಾರ : ಅಯ್ಯಾ ಆಸ್ತಿ ಮೂರು ಭಾಗ ಮಾಡಿ ಒಂದು ಭಾಗ ನೀ ತಗೊ.

ಸ. ಹೆಂಡತಿ : ಒಂದು ಭಾಗವಾದರೂ ಇವನಿಗ್ಯಾಕೆ? ಇವನಿಗೇನು ಹೆಂಡತೀನೇ? ಮಕ್ಕಳೆ? ಮುಂದೆ ಕೂಡ ಇವನಿಗೆ ಹೆಣ್ಣು ಕೊಡುವಂಥ ಉದಾರಿ ದಯವಂತರುಯಾರಿಲ್ಲ. ದಿನಾ ಅನ್ನ ಹಾಕಿದರೂ ತಿರುಪೆ ಹುಡುಗಿ ಕೂಡ ಇವನನ್ನ ಮದುವೆಯಾಗೋದಕ್ಕೆ ದಯಮಾಡಿ ಒಪ್ಪೋದಿಲ್ಲ.

ಬೋಳೇಶಂಕರ : ನಿಮ್ಮಿಬ್ಬರ ಹಿಂದೆ ಪಿಶಾಚಿಗಳು ನಿಂತು ಮಾತಾಡುತ್ತಿವೆ ಅಂತ ನನಗ್ಗೊತ್ತು. ನಿಮಗೇನು ಬೇಕೋ ಅದನ್ನು ತಗೊಳ್ಳಿ.

ಸಾ. ಹೆಂಡತಿ : ಎಲಾ ಬೆಪ್ತಕ್ಕಡಿ! ನಮಗೆ ಪಿಶಾಚಿಗಳು ಅಂತಾನೆ, ಕೇಳಿದೇನೆ ಅಕ್ಕಾ?

ಸ. ಹೆಂಡತಿ : ಕೇಳಿಸಿಕೊಂಡು ಸುಮ್ಮನೇ ನಿಂತಿದೀರಲ್ಲರೀ ನೀವೇನು ಗಂಡಂದಿರಾ?

ಸಾವ್ಕಾರಣ್ಣ : ಇನ್ನು ತಡೆದು ಪ್ರಯೋಜನವಿಲ್ಲ, ನೋಡಣ್ಣಾ-ದುಡ್ಡಿರೋ ಪೆಟ್ಟಿಗೆ ಆಭರಣ ನನಗಿರಲಿ; ಒಳ್ಳೆ ಗದ್ದೆ, ತೋಟ, ಹೊಲವೆಲ್ಲಾ ನಿನಗೆ. ನದಿ ಹತ್ತಿರ ಕಲ್ಲು ಮರಡಿ ಇದೆಯಲ್ಲ ಅದು ಬೆಪ್ತಕ್ಕಡಿಗೆ. ಸರಿಯೇನೋ ಬೋಳೇಶಂಕರಾ?

ಬೋಳೇಶಂಕರ : ನಿಮಗೇನು ಬೇಕೋ ಅದನ್ನು ತಗಂಡು ನಿಮ್ಮ ಪಿಶಾಚಿಗಳ ಸಮೇತ ಹೋಗಿ.

ಸರದಾರ : ಮತ್ತೆ ಪಿಶಾಚಿ ಅಂತೀಯಾ?

ಸಾವ್ಕಾರಣ್ಣ : ನಾವು ಕೇಳಿದ್ದನ್ನ ಕೊಟ್ಟಿದ್ದಾನೆ. ಮತ್ತೆ ಕೋಪ ಯಾಕೆ? ಬಾರಣ್ಣಾ ಹೋಗೋಣ. (ಹೋಗುವರು)

ಬೋಳೇಶಂಕರ : ನಾನು ಧಡ್ಡ ಅಂತ ಅವರ ಅಭಿಪ್ರಾಯ. ಸ್ವಂತ ಅಭಿಪ್ರಾಯ ಇಟ್ಟುಕೊಳ್ಳೋದಕ್ಕೆ ಎಲ್ಲಾರಿಗೂ ಹಕ್ಕಿದೆ. ನನಗೂ ಇದೆ. ಆದರೆ ನಾನ್ಯಾರ ಮ್ಯಾಲೂ ನನ್ನ ಅಭಿಪ್ರಾಯ ಹೇರೋದಿಲ್ಲ ಅಷ್ಟೆ.

ನಗಬೇಕೋ ಅಣ್ಣಾ ನಗಬೇಕೋ ನೀನು
ಹೂವಿನ ಹಾಗೇನೆ ನಗಬೇಕೋ.
ಮುಳ್ಳು ಹಾಸಿಗೆ ಮ್ಯಾಲೆ ಮಲಗಿದ್ದರೂ ಚೆಂಗು
ಲಾಬಿ ಹೂವಿನ ನಗೆಯ ನಗಬೇಕು.