(ಕುಡಿದು ಪಿಶಾಚಿಗಳು ಹಾಡುತ್ತ ಬರುತ್ತವೆ. ಮೂರನೇದ್ದು ಚಿಂತೆ ಮಾಡುತ್ತ ಕೂತಿದೆ.)

ಪಿಶಾಚಿಗಳು : ಜಯವು ನರಕದ ಮಾಲಿಕ
ನಿನ್ನ ಖುಶಿಗೀ ಪಾನಕ.
ಎಲುಬಿನೊಳಗಡೆ ಇಳಿದು ಆತ್ಮದ
ಖಾಲಿ ತುಂಬುವ ಪಾನಕ.
ಅಡಿಗಡಿಗೆ ನಡೆಗೆಡಿಸಿ ಪಾತಾಳಕ್ಕೆ ತಳ್ಳುವ ಪಾನಕ ||

ಪಿಶಾಚಿ ೩ : ಅದ್ಯಾಕೆ ನಾನು ಕುಡಿದಾಗೆಲ್ಲ ಈ ಲೋಕ ತೂರಾಡ್ತದೆ?

ಪಿಶಾಚಿ ೨ : ಸೆಗಣಿ ಮೇಲೆ ಕಾಲಿಟ್ಟರೂ ಜಾರೋದಿಲ್ಲ ನಾನು, ಗೊತ್ತ?

ಪಿಶಾಚಿ ೩ : ನೀನು ಕುಡಿದದ್ದು ನೀರು; ಹೆಂಡ ಅಂತ ತಿಳಿದುಕೊಂಡಿದ್ದೀಯಾ ಅಷ್ಟೆ.

ಪಿಶಾಚಿ ೨ : ನೀರಿನ ವೈರಿ ಕಣ್ಣಾ ನಾನು. ನೀರು ಬೆರಸೋದೇ ಇಲ್ಲ. ನೇರ ಹಾಗ್ಯಾಗೇ ಮೈಚರ್ಮ ತುಂಬೋತನಕ ಕುಡೀತೀನಿ. ನೀರು ಕುಡಿಯೋನು ಅಂತ ನನಗಂತೀಯಾ ಬೇಕೂಫಾ? ನಿನ್ನಮ್ಮ ನೀರು ಕುಡಿಯೋಳು, ನಿನ್ನಪ್ಪ ನೀರು ಕುಡಿಯೋನು.

ಪಿಶಾಚಿ ೩ : ಥೂ ಮನುಷ್ಯರ ಥರ ಮಾತಾಡಿ ಪಿಶಾಚಿಗಳಿಗೆ ಅವಮಾನ ಮಾಡ್ತೀಯಲ್ಲೋ ಭೋಸಡೀಕೆ.

ಪಿಶಾಚಿ ೨ :  ನನಗೇ ಮನುಷ್ಯ ಅಂತೀಯೇನೋ ಖದೀಮಾ? ನೀ ಮನುಷ್ಯ, ನಿನ್ನಪ್ಪ ಮನುಷ್ಯ.

ಪಿಶಾಚಿ ೩ :  ಸಕಾಲದಲ್ಲಿ ಬಾಯಿ ಮುಚ್ಚದಿದ್ದರೆ ಅನ್ನಬಾರದ್ದನ್ನ ಅಂದುಬಿಡ್ತೇನೆ.

ಪಿಶಾಚಿ ೨ :  ಹೆದರಿಕೆ ಹಾಕ್ತೀಯೇನೋ ಭಡವಾ? ನಿನ್ನ ತಾತ ಮನುಷ್ಯ ನಿನ್ನಜ್ಜ ಮನುಷ್ಯ.

ಪಿಶಾಚಿ ೩ :  ನನ್ನ ತಾಳ್ಮೆ ಪರೀಕ್ಷೆ ಮಾಡ್ತಾ ಇದ್ದೀಯ.

ಪಿಶಾಚಿ ೨ :  ನಿನ್ನಜ್ಜಿ ಮುತ್ತಜ್ಜಿ-ಅವರೆಲ್ಲಾ ಮನುಷ್ಯರು ಕಣೊ.

ಪಿಶಾಚಿ ೩ :  ಬೋಸಡೀಕೆ ನೀನ್ಯಾವಳೋ ಹರಾಮಿ ದೆವ್ವಕ್ಕೆ ಹುಟ್ಟಿದೋನು ಕಣೊ.

ಪಿಶಾಚಿ ೨ :  ಅನ್ನು, ನೂರು ಬಾರಿ ಅನ್ನು ಹ ಹ ಹ ….

ಪಿಶಾಚಿ ೩ :  ಬೇಕೂಫ್ ನನ್ ಮಗನೆ ನಿನ್ನಮ್ಮ ಬಡ್ಡಿ.

ಪಿಶಾಚಿ ೨ :  ಹಾಗಂತ ಸಾವಿರ ಬಾರಿ ಹೇಳು, ನನಗೆ ಸಿಟ್ಟೇ ಬರೋದಿಲ್ಲ.

ಪಿಶಾಚಿ ೧ : ಬೇವಾರ್ಸಿ ನನ ಮಗನೇ ನಿನ್ನಮ್ಮ ಬಜಾರಿ; ಯಾವನೋ ಭಿಕ್ಷುಕ ಮನುಷ್ಯನಿಗೆ ನಿನ್ನನ್ನ ಹೆತ್ತಲು ಗೊತ್ತ?

ಪಿಶಾಚಿ ೨ :  ಇನ್ನೂ ಸಾವಿರ ಬಾರಿ ಹೇಳಾ ಮಾತನ್ನ ಹ ಹ ಹ….

ಪಿಶಾಚಿ ೩ :  ಲೋಫರ್ ನನ್ನ ಮಗನೇ ನಿನ್ನಮ್ಮ ದೇವತೆ ಕಣೊ.

ಪಿಶಾಚಿ ೨ :  (ಆಘಾತಹೊಂದಿ) ಏನಂದೆ ನನ್ನಮ್ಮ ದೇವತೆ ಅಂದೆಯಾ! ಅಯ್ಯೊ ಅಯ್ಯೊ ಸೈತಾನ ತಂದೇ, ನೀನೇ ಕಾಪಾಡೋ ಎಪ್ಪಾ…. (ಅಳುವನು) ಅಯ್ಯೋ ದೇವತೆ ಅಂದೆಯಲ್ಲೋ ನನ್ನಮ್ಮ್‌ಮನ್ನ. ಹ್ಯಾಗೋ ಅವಳ ಮುಖ ನೋಡಲಿ? ಅವಳಿಗೆ ಈ ವಿಷಯ ಗೊತ್ತಾದರೆ…. ಅಯ್ಯೋ …. ಯಜಮಾನರಿಗೆ ಹೇಳಿ ನರಕದಿಂದ ನಿನ್ನನ್ನು ಹೊರಗೆ ಹಾಕಿಸದಿದ್ದರೆ ನಾನು ಪಿಶಾಚೀನೇ ಅಲ್ಲ.

ಪಿಶಾಚಿ ೩ :  ನಮ್ಮಿಬ್ಬರ ಜಗಳದಲ್ಲಿ ಯಾಕಣ್ಣಾ ಯಜಮಾನರ ಹೆಸರು ತರಬೇಕು?

ಪಿಶಾಚಿ ೨ :  ಮತ್ತೆ ನೀ ನನ್ನಮ್ಮನಿಗೆ ದೇವತೆ ಅಂದದ್ದು?

ಪಿಶಾಚಿ ೩ :  ಅಲ್ಲವೊ, ನಾವು ಪಿಶಾಚಿಗಳು. ಸುಳ್ಳು ಹೇಳೋದೇ ನಮ್ಮಲ್ಲಿ ಸಭ್ಯತೆ ಅಲ್ಲವ?

ಪಿಶಾಚಿ ೨ :  ಅಂದರೆ?

ಪಿಶಾಚಿ ೩ :  ಅಂದರೆ ನಾ ನಿನನ್ನಮ್ಮನ್ನ ದೇವತೆ ಅಂದದ್ದು ಸುಳ್ಳು ಸುಳ್ಳೇ ಕಣ್ಣಾ; ನಿನ್ನಮ್ಮ ಎಂಥ ಹಡಬಿ ಅಂತ ನನಗ್ಗೊತ್ತಿಲ್ಲವ?

ಪಿಶಾಚಿ ೨ :  ಹಂಗೇಳು ಮತ್ತೆ.

ಪಿಶಾಚಿ ೩ :  ನೀ ನನಗೆ ಮನುಷ್ಯ ಅಂದದ್ದು ಸುಳ್ಳು ತಾನೆ?

ಪಿಶಾಚಿ ೨ :  ಓಹೋ.

ಪಿಶಾಚಿ ೩ :  ಬಾ ಹೋಗೋಣ. ಬೋಳೇಶಂಕರ ಹತ್ತಿರ ಹೋದನಲ್ಲ ತಮ್ಮ, ಅವನಿಗೇ ನಾಯ್ತು ನೋಡೋಣ.

ಇಬ್ಬರೂ : ಜಯವು ನರಕದ ಮಾಲಿಕ
ನಿನ್ನ ಖುಶಿಗೀ ಪಾನಕ.
ಒಂದು ಗುಟುಕು ಪೂರಕ
ಎರಡು ಗುಟುಕಿಗೆ ಮಾರಕ
ಮೂರು ಗುಟಿಕಿಗೆ ತಾರಕ
ನಾಲ್ಕು ಗುಟುಕಿಗೆ ನಾರಕ ||

ಪಿಶಾಚಿ ೩ : ಅರೆ, ನಮ್ಮ ತಮ್ಮ ಇಲ್ಲೇ ಕುಂತವ್ನೆ.

ಪಿಶಾಚಿ ೨ :  ಯೋ ದ್ರಾಬೆ, ಏನೋ ಮಾಡ್ತ ಇದ್ದೀಯ?

ಪಿಶಾಚಿ ೧ : ನನ್ನ ದುರ್ದೈವದ ಮೇಲೆ ಒಂದಿಷ್ಟು ಉಗೀತಾ ಇದ್ದೀನಿ.

ಪಿಶಾಚಿ ೨ : ನಿನಗೆ ನೀನೇ ಮರ್ಯಾದೆ ಮಾಡಿಕೊಳ್ತೀಯಲ್ಲಪ್ಪ, ನಮಗೂ ಅವಕಾಶ ಕೊಡು ಥೂ! (೩ನೇ ಪಿಶಾಚಿಯ ಮೇಲೆ ಉಗಿಯುವನು)

ಪಿಶಾಚಿ ೩ : ನಗಾಡಿ ಹಾಡೋ ಕಾಲದಲ್ಲಿ ಏಟು ತಿಂದ ನಾಯೀ ಹಾಗೆ ಕೂತಿದ್ದೀಯಲ್ಲ, ಏನು ಕಥೆ?

ಪಿಶಾಚಿ ೧ : ನಿಮಗೆ ಸಂತೋಷವಾಗಿರೋದಕ್ಕೆ ಕಾರಣಗಳಿರಬೇಕು, ನನಗಿಲ್ಲ. ಹೋಗಲಿ ನಿಮ್ಮ ಕೆಲಸವೇನಾಯ್ತು ಹೇಳಿ.

ಪಿಶಾಚಿ ೩ : ಆಗೋದೇನು, ಇಬ್ಬರೂ ಅಣ್ಣಂದಿರು ನೀನು ಯಾರನ್ನ ತೋರಿಸಿದರೆ ಅವರ ಕರುಳು ಕಿತ್ತು ತಿನ್ನುತ್ತಾರೆ. ಅವರಿಬ್ಬರೂ ತಂತಮ್ಮ ಹೆಂಡಂದಿರನ್ನ ಕೊಂದು ಕುಣಿದಾಡೋ ದೃಶ್ಯ ನೋಡಬೇಕೊ? ಬೇಕಿದ್ದರೆ ಹೇಳು.

ಪಿಶಾಚಿ ೨ : ನಿನಗೆ ಮನರಂಜನೆ ಬೇಕಿದ್ದರೆ ಹೇಳು. ಆ ಮೀಸೆ ಮತ್ತು ಹೊಟ್ಟೆಯವನನ್ನು ಹಿಡಿದುಕೊಂಡು ಬರೋದು ಎರಡು ನಿಮಿಷದ ಕೆಲಸ.

ಪಿಶಾಚಿ ೧ : ಇದನ್ನೆಲ್ಲ ಹ್ಯಾಗೆ ಸಾಧಿಸಿದಿರಿ ?

ಪಿಶಾಚಿ ೩ : ಸರದಾರ ಸೋಮಣ್ಣ ಇದ್ದಾನಲ್ಲಾ-ಮೊದಲು ಅವನ ಮೀಸೆ ಹುಲುಸಾಗಿ ಬೆಳೆಯೋ ಹಾಗೆ ಮಾಡಿದೆ. ಬೆಳೀತೋ ಇಲ್ಲವೋ; ಶೂರಧೀರ ಅಂತ ಜಂಬ ಕೊಚ್ಚಿಕೊಳ್ಳೋ ಹಾಗೆ ಮಾಡಿ ಮೀಸೆ ತೀಡಿಕೊಳ್ಳೋ ಹಾಗೆ ಮಾಡಿದೆ. ಆಮೇಲೆ ಒಬ್ಬ ರಾಜನ ಹತ್ತಿರ ಕಳಿಸಿದೆ. ರಾಜ ಇವನನ್ನ ಸೇನಾಪತಿ ಮಾಡಿದ. ಆದರೂ ಇವನ ಮೀಸೆ ಬೆಳೀತಾನೇ ಇತ್ತು. ಮೀಸೆ ಎಷ್ಟಪ್ಪ ಬೆಳೀತು ಅಂದರೆ ಅವನಿಗೆ ದೇಶವೇ ಕಾಣದಾಯ್ತು. ಯಾರಯಾರನ್ನೋ ತುಳಿದ. ಯಾರಯಾರನ್ನೋ ಎಡವಿದ. ಕೊನೆಗೆ ಇಂಡಿಯಾ ದೇಶದ ರಾಜನ ಮೇಲೆ ದಂಡೆತ್ತಿ ಹೋಗೋ ಹಾಗೆ ಮಾಡಿದೆ. ಇಂಡಿಯಾ ದೇಶದ ರಾಜನಿಗಾದರೆ ಕಣ್ಣು ಸರಿಯಾಗಿ ಕಾಣಿಸುತ್ತಿತ್ತು. ಜೊತೆಗೆ ಹುಲ್ಲಿನಿಂದ ಒಂದು ಲಕ್ಷ್ಯ ಸೈನ್ಯ ತಯಾರಿಸಿ ಕೊಟ್ಟಿದ್ದೆ. ಕೊನೆಗೆ ನಮ್ಮ ಮೀಸೆ ಸೋತು ಸೆರೆ ಸಿಕ್ಕ. ಇಂಡಿಯಾದ ರಾಜ ಅವನ ಮೀಸೆಗೆ ಮಣ್ಣು ಹಚ್ಚಿ ತಾನೇ ಖುದ್ದಾಗಿ ಆ ಮೀಸೆ ಬೋಳಿಸಿ ಇವನನ್ನು ಜೇಲಲ್ಲಿಟ್ಟಿದ್ದಾನೆ. ಈಗ ನಾನು ಮಾಡಬೇಕಾದ್ದು ಒಂದೇ ಸಣ್ಣ ಕೆಲಸ. ಅವನನ್ನ ಮುಗಿಸೋದು.

ಪಿಶಾಚಿ ೧ : ನೀನೇನು ಮಾಡಿದೆಯಣ್ಣ?

ಪಿಶಾಚಿ ೨ : ನನ್ನ ಬಗ್ಗೆ ನೀವ್ಯಾರೂ ಯೋಚನೆ ಮಾಡೋದೇ ಬೇಡ. ಸಾವ್ಕಾರ ಡಬ್ಬೂ- ನನ್ನ ಸರಿಯಾಗಿ ಹಿಡಿದು ಬಿಟ್ಟಿದ್ದೀನಿ. ಈಗವನ ಹೊಟ್ಟೆ ಎಷ್ಟು ದೊಡ್ಡದಾಗಿದೆಯೆಂದರೆ ಅವನು ತನ್ನ ಮೊಳಕಾಲು ನೋಡಿದರೆ ಗುರುತು ಹಿಡಿಯೋದೇ ಇಲ್ಲ. ಹ್ಯಾಗಪ್ಪ ಇದನ್ನೆಲ್ಲ ಮಾಡಿದೆ ಅಂದರೆ ಮೊದಲು ಅವನಿಗೆ ಐದೆಲೆ ಆಟ ಕಲಿಸಿ ಎರಡು ಎರಡು ಸೇರಿ ಐದಾಗೋದನ್ನ ತೊರಿಸಿದೆ. ಆಸೆ ಜಾಸ್ತಿ ಆಯ್ತು. ಮೋಸ ಮಾಡಿದ. ಕಳ್ಳತನ ಮಾಡಿದ. ಇತ್ತೀಚೆಗಂತೂ ಖೋಟಾ ನೋಟಿನ ವ್ಯವಹಾರವೆಲ್ಲ ಅವನದೇ. ಖೋಟಾ ನೋಟಿನವನ ಹೆಂಡತಿ ಯಾವತ್ತೂ ವಿಧವೆ ಅಂತಾರಲ್ಲ ಹಾಗೆ. ನೀನು ಯಾವಾಗ ಆಗಲಿ ಅಂದರೆ ಆವಾಗ ಅವನನ್ನ ಸೆರೆ ಹಿಡಿಸಿ ಕೊಲ್ಲೋದಕ್ಕೆ ನಾನು ರೆಡಿ, ಆಯ್ತಲ್ಲಯ್ಯಾ, ನಿನ್ನ ಕಥೆ ಏನು?

ಪಿಶಾಚಿ ೧ : ಕಷ್ಟಕ್ಕಿಟ್ಟುಕೊಂಡಿದೆ.

ಪಿಶಾಚಿ ೨ : ಅಂಥಾದ್ದೇನಯ್ಯಾ?

ಪಿಶಾಚಿ ೧ : ಅವನ ಸಹವಾಸ ಭಾರೀ ಕಷ್ಟ ಕಣ್ರಯ್ಯಾ. ಯಾವ ಪಟ್ಟುಹಾಕಿದರೂ ನುಣುಚಿ ಕೊಳ್ತಾನೆ. ನಾನು ಚಾಪೆ ಕೆಳಗೆ ನುಗ್ಗಿದರೆ ಅವನು ರಂಗೋಲಿ ಕೆಳಗೆ ನುಸುಳ್ತಾನೆ. ಅಪ್ಪ ಅಂದರೆ ನಿನ್ನಮ್ಮ ಅಂತಾನೆ.

ಪಿಶಾಚಿ ೩ : ಯಾರು ಬೆಪ್ತಕ್ಕಡೀನಾ?

ಪಿಶಾಚಿ ೨ : ಬೆಪ್ತಕ್ಕಡಿ ಬೋಳೇಶಂಕರನಾ?

ಪಿಶಾಚಿ ೧ : ಅವನೇ ಕಣಯ್ಯಾ! ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ ಗೊತ್ತ?

ಪಿಶಾಚಿ ೨ : ಹೋಗಲಿ, ನೀನು ಏನೇನು ಪ್ರಯತ್ನ ಮಾಡಿದೆ ಹೇಳು?

ಪಿಶಾಚಿ ೧ : ಪಿಶಾಚಿ ಥರ ಬೈದಾಡಲಿ ಅಂತ ರೊಟ್ಟಿ ಕದ್ದೆ, ಸಿಟ್ಟಿಗೇಳಲಿಲ್ಲ. ತಂತ್ರಿಯಾಗಲಿ ಅಂತ ನರಿ ರಕ್ತ, ಹಸಿದು ಕ್ರೂರಿಯಗಲಿ ಅಂತ ತೋಳದ ರಕ್ತ, ಕೊಚ್ಚಿಯಲ್ಲಿ ಬಿದ್ದು ಉರುಳಾಡಲಿ ಅಂತ ಹಂದಿ ರಕ್ತಾ – ಈ ಮೂರನ್ನೂ ಬೆರಸಿ ಪಾನಕ ಮಾಡಿಕೊಟ್ಟೆ. ಹೊಟ್ಟೆ ನೋವು ಅಂತ ಒಂದು ಸಾರಿ ಹೊಟ್ಟೆ ಹಿಡಿದುಕೊಂಡುದ್ದೆಷ್ಟೋ ಅಷ್ಟೆ. ಆಮೇಲೆ ಸುಮ್ಮನಾದನೆ! ಐದೆಲೆ ಆಟ ಕಲಿಸ್ತೇನೆ ಅಂದೆ. ಕಳೆಯೋ ಆಟ ಕಲಿಸ್ತೇನೆ ಅಂದೆ. ಯಾವುದಕ್ಕೂ ಜಪ್ಪಯ್ಯಾ ಅನ್ನೋಲ್ವೆ! ನಾವು ಉದ್ದೇಶಪೂರ್ವಕ ಮರೆತವನ ಹೆಸರನ್ನ ಕ್ಷಣಕ್ಕೊಮ್ಮೆ ಸ್ಮರಿಸುತ್ತಿದ್ದರೆ ಅವನ ಹತ್ತಿರ ಹೋಗೋದು ಹ್ಯಾಗೆ?

ಪಿಶಾಚಿ ೨ : ಎಲಾ ಅಯೋಗ್ಯ? ಬೆಪ್ತಕ್ಕಡಿ ಇಂಥಾ ದೇವತೆ ಅಂತ ಗೊತ್ತಿರಲಿಲ್ಲವೆ?

ಪಿಶಾಚಿ ೩ : ಯಜಮಾನರಿಗಿದು ಗೊತ್ತಾದರೆ ನಿನ್ನನ್ನ ಫಂಡರಾಪುರವೋ, ಸಾವಳಗಿ ಮಠವೋ ಇಂಥ ಯಾವುದಾದರು ಪುಣ್ಯಕ್ಷೇತ್ರದಲ್ಲಿ ಎಸೆಯೋದು ಗ್ಯಾರಂಟಿ.

ಪಿಶಾಚಿ ೨ : ಕೈಲಾಸದಲ್ಲಿ ಎಸೆದರೂ ಆಶ್ಚರ್ಯ ಇಲ್ಲವೆ!

ಪಿಶಾಚಿ ೧ : ಏನಾದರೂ ಬದುಕೋ ಉಪಾಯ ಹೇಳ್ರಯ್ಯಾ ಅಂದರೆ….

ಪಿಶಾಚಿ ೩ : ಹೀಗೆ ಮಾಡಿದರೆ ನಿನಗೆ ಸಹಾಯವಾಗುತ್ತ ನೋಡು; ಹ್ಯಾಗೂ ಸರದಾರ ಸೋಮಣ್ಣ ಸಾವ್ಕಾರ ಕಾಮಣ್ಣ ನಮ್ಮ ಕೈಯಲ್ಲಿದ್ದಾರೆ. ಹೇಳಿದ ಹಾಗೆ ಕೇಳ್ತಾರೆ. ಅವರನ್ನ ಅಲ್ಲಲ್ಲೇ ಕೊಲ್ಲೋದರ ಬದಲು ಬೆಪ್ತಕ್ಕಡಿ ಹತ್ತಿರ ಕಳಿಸಿದರೆ ಹ್ಯಾಗೆ?

ಪಿಶಾಚಿ ೨ : ಹ್ಯಾಗೇನು ಸರಿಯಾಗೇ ಇರುತ್ತೆ. ಇಬ್ಬರಿಗೂ ಅವನ ನೆಮ್ಮದಿ ನೋಡಿ ಹೊಟ್ಟೆ ಉರಿಯುತ್ತೆ.ದ ಹೊಟ್ಟೆ ಉರಿದರೆ ಜಗಳಾಡ್ತಾರೆ. ಜಗಳಾಡಿದರೆ ಬೆಪ್ತಕ್ಕಡೀನೂ ರೇಗಿ ಶಾಪಹಕ್ತಾನೆ. ಅಲ್ಲಿಗೆ ನಮ್ಮ ಸೀಮೆಯಲ್ಲಿ ಅವನೊಂದು ಹೆಜ್ಜೆ ಹಾಕಿದ ಹಾಗೆ.

ಪಿಶಾಚಿ ೩ : ನಾವಿಬ್ಬರೂ ನಿನ್ನ ಸಹಾಯಕ್ಕೆ ಅಲ್ಲೇ ನಿಂತಿರುತ್ತೇವೆ. ನಾವು ಮೂರವರೂ ಪಿಶಾಚಿಗಳನ್ನು ಮೀರುವ ತಾಕತ್ತು ಅವನಲ್ಲಿದೆ ಅನ್ನೋದನ್ನ ನಾನಂತೂ ನಂಬೋದಿಲ್ಲ.

ಪಿಶಾಚಿ ೧ : ಸಧ್ಯಕ್ಕೆ ನಮಗಿರೋ ಉಪಾಯ ಇದೊಂದೇ.

ಪಿಶಾಚಿ ೩ : ಹಾಗಿದ್ದರೆ ನಾವು ಬರೋತನಕ ಅವನ ಆತ್ಮ ಕೊಳೆ ಮಾಡೋದಕ್ಕೆ ನಿನ್ನ ಕೈಲಾದ ಪ್ರಯತ್ನ ಮಾಡುತ್ತಿರು. ನಾವು ಬಂದಮೇಲೆ ಎಲ್ಲ ಸರಿಹೋಗುತ್ತದೆ.