(ಕೋಡಂಗಿ ಹಾಡುತ್ತ ಕುಣಿಯುವನು)

ಕೋಡಂಗಿ : ಎಲ್ಲರಂಥವಳಲ್ಲ ನಮ್ಮಾಕಿ
ಸಲ್ಲು ಸಲ್ಲಿಗೆ ತುರುಬು ಕಟ್ಟಾಕಿ ||
ಹಲ್ಲು ಕಿರಿಯೋದನ್ನ ಕಲಿಸಿ
ಜುಟ್ಟು ಹಿಡಿದು ನಡೆಸಿದಾಕಿ
ಹಸಿವು ಬಾಯಾರಿಕೆಯ ಹುಟ್ಟಿಸಿ
ಬಿಸಿಲುಗುದುರೆಯ ಹಾಗೆ ನೆಗೆದು
ಕೂಳು ನೀರಿಗೆ ಬದಲು ಬೈಗಳ
ಮಳೆಯ ಸುರಿವಾಕಿ. | ಈಕಿ. ||
ಉರಿವ ಬೆಂಕಿಯ ಮುಂದೆ ನಿಂತು
ಬೆಳಕಿನಲ್ಲಿ ತಲೆಯ ಕೆದರಿ
ಹಿಂದೆ ಬೆಳಗುವ ಪ್ರಭಾವಳಿಗಳ
ತೋರಿ ತಾ ಜಗದಂಬೆಯೆನ್ನುತ
ಸೆಡ್ಡು ಹೊಡೆವಾಕಿ. | ಈಕಿ. ||

ಬೋಳೇಶಂಕರ : ಏನಯ್ಯಾ ಕೋಡಂಗೀ ತುಂಬ ಖುಶಿಯಿಂದಿರೋ ಹಾಗಿದೆ. ಹೆಂಡ್ತಿ ಬಗ್ಗೆ ಹಾಡು ಬೇರೆ ಹೇಳ್ತಿದ್ದೀಯ?

ಕೋಡಂಗಿ : ಮಿತ್ರಾ, ನನಗಿವತ್ತಾದಷ್ಟು ಖುಶಿ ಇನ್ಯ್ನಾವತ್ತೂ  ಆಗಿರಲಿಲ್ಲ ಬಿಡು.

ಬೋಳೇಶಂಕರ : ನನಗೂ ತುಸು ಹಂಚಿಕೊಡಪ್ಪ ಅಂಥಾದ್ದೇನಾಯ್ತು?

ಕೋಡಂಗಿ : ವಿಷಯ ಗೊತ್ತಿಲ್ಲ ಅನ್ನು. ಡಂಗುರ ಕೇಳಲಿಲ್ಲವೆ?

ಬೋಳೇಶಂಕರ : ಇಲ್ಲವಲ್ಲ ಏನು ವಿಷಯ?

ಕೋಡಂಗಿ : ರಾಜಕುಮಾರಿಗೆ ಹೊಟ್ಟೆನೋವು!

ಬೋಳೇಶಂಕರ : ಅದಕ್ಕೆ ಸಂತೋಷಪಡ್ತಿದ್ದೀಯಾ?

ಕೋಡಂಗಿ : ಹಂಗಲ್ಲಪ್ಪ, ಅದನ್ನ ವಾಸಿ ಮಾಡಿದವರಿಗೆ ಭಾರೀ ಬಹುಮಾನ ಕೊಡ್ತಾರಂತೆ.

ಬೋಳೇಶಂಕರ : ಹೌದು, ವಾಸಿ ಮಾಡಿದವರಿಗೆ, ನಿನಗಲ್ಲವಲ್ಲ.

ಕೋಡಂಗಿ : ನೀನು ಹೀಗೆ ಕೈಬಿಟ್ಟರೆ ನಾನು ಬದುಕೋದುಂಟೆ ಬೋಳೇಶಂಕರ? ನಿನ್ನ ಹತ್ತಿರ ಆ ಬೇರು ಇದೆಯಲ್ಲ….

ಬೋಳೇಶಂಕರ : ಯಾವುದಪ್ಪ?

ಕೋಡಂಗಿ : ಅದೇ ನಿನ್ನ ಹೊಟ್ಟೆನೋವಿಗಾಗಿ ಮೊನ್ನೆ ಆ ಪಿಶಾಚಿ ಕೊಟ್ಟಿತ್ತಲ್ಲ?

ಬೋಳೇಶಂಕರ :  (ಜೇಬುಗಳಲ್ಲಿ ಹುಡುಕಿ) ಹೌದು, ಇದೆ.

ಕೋಡಂಗಿ : ಅದನ್ನು ಕೊಟ್ಟರೆ ಹೋಗಿ ರಾಜಕುಮಾರಿಗೆ ಕೊಟ್ಟು ವಾಸಿ ಮಾಡಿ ಬಹುಮಾನ ಗಿಟ್ಟಿಸಿಕೊಂಡು ಬರೋಣ ಅಂತ. ಬಹುಮಾನದಲ್ಲಿ ನಿನಗೂ ಅಷ್ಟೊ ಇಷ್ಟೋ ಕೊಟ್ಟೇ ಕೊಡ್ತೀನಯ್ಯಾ, ಲಫಂಗ ಅಲ್ಲ ನಾನು. ನೀನು ದೊಡ್ಡ ಮನಸ್ಸು ಮಾಡಬೇಕಷ್ಟೆ.

ಬೋಳೇಶಂಕರ : ಅದಕ್ಕೇನಂತೆ ಕೊಡೋಣ ಬಿಡು. ಒಬ್ಬರಿಗೆ ನೋವಿದ್ದಾಗ ಮದ್ದಿಟ್ಟುಕೊಂಡು ಸುಮ್ಮನೆ ಇರಲಿಕ್ಕಾಗತ್ತ? ಅರಮನೆಗೆ ಯಾವಾಗ ಹೋಗ್ತೀಯಾ?

ಕೋಡಂಗಿ : ಕೊಟ್ಟರೆ ಈಗಲೇ ಹೋಗ್ತೀನಿ. ಆದರೆ ಒಂದನುಮಾನ. ಸಾಮಾನ್ಯವಾಗಿ ರಾಜಕುಮಾರಿಯ ರೋಗ ವಾಸಿ ಮಾಡಿದವರಿಗೆ ರಾಜಕುಮಾರೀನ್ನೇ ಮದುವೆ ಮಾಡಿಕೊಡೋದು ಕಥೆಗಳಲ್ಲಿ ಪದ್ಧತಿ ಅಲ್ಲವ? ಹಾಗೇನಾದರೂ ಅವಳನ್ನ ಕೊಟ್ಟರೆ ಹ್ಯಾಗೆ ಮಾಡೋದು ಅಂತ ಯೋಚನೆ.

ಬೋಳೇಶಂಕರ : ಭಲೆ, ಆಗಲೇ ಅದನ್ನೂ ಯೋಚನೆ ಮಾಡಿಬಿಟ್ಟಿದ್ದೀಯಲ್ಲಯ್ಯಾ! ಆಯ್ತಪ್ಪ, ನನಗೇನೂ ಕೊಡಬೇಕಾದ್ದಿಲ್ಲ. ಹೋಗ್ತೀಯಾ?

ಕೋಡಂಗಿ : ಓಹೊ!
(ಮುದುಕಿಯೊಬ್ಬಳು ಅಳುತ್ತ ಬರುವಳು)

ಬೋಳೇಶಂಕರ : ಯಾಕಮ್ಮ ಏನಗಿದೆ ನಿನಗೆ ಅಳೋದಕ್ಕೆ?

ಮುದುಕಿ : ಅಯ್ಯೋ ಹೊಟ್ಟೆನೋವು ಸ್ವಾಮೀ. ಕರುಳು ಕಿತ್ತು ಬಾಯಿಗೆ ಬರುತ್ತಿವೆ. ಏನು ಮದ್ದು ಕುಡಿದರೂ ವಾಸಿ ಆಗದು ಸ್ವಾಮಿ, ಅಯ್ಯೋ….

ಬೋಳೇಶಂಕರ : ತಗೊ ಬೇಗನೆ ಬಾಯಲ್ಲಿಟ್ಟುಕೊಂಡು ಅಗಿ. ಶಿವ ನಿನಗೆ ಒಳ್ಳೇದ್ಮಾಡ್ಲಿ. (ಬೇರು ಕೊಡಹೋಗುವನು.)

ಮುದುಕಿ : ಅಯ್ಯಯ್ಯೋ ಆ ಹೆಸರು ಹೆಳಬೇಡಿ. ನನ್ನ ಹೊಟ್ಟೆನೋವು ಜಾಸ್ತಿಯಾಗುತ್ತೆ;

ಬೋಳೇಶಂಕರ : ಶಿವನ ಹೆಸರ ಹೇಳಿದರೆ ತಾನೆ?

ಮುದುಕಿ : ಹೌದು ಅಯ್ಯಯ್ಯೋ….

ಕೋಡಂಗಿ : ಶಿವ ಶಿವ ಶಿವ ….
(ಈಗ ಮುದುಕಿಯ ರೂಪ ಹೋಗಿ ಪಿಶಾಚಿಯ ರೂಪ ಬರುತ್ತದೆ.)

ಬೋಳೇಶಂಕರ : ಎಲಾ ಅನಿಷ್ಟವೆ ಮತ್ತೆ ಬಂದೆಯೊ?

ಪಿಶಾಚಿ ೨ : ನಾನು ಬೇರೆ, ನಿನ್ನಣ್ಣ ಸಾವ್ಕಾರ ಡಬ್ಬೂನ ಜೊತೆಗಿದ್ದವನು.

ಬೋಳೇಶಂಕರ : ನೀನು ಯಾರಾದರೂ ಆಗರು. ನಿನ್ನ ತಮ್ಮನಿಗಾದ ಗತಿಯೇ ನಿನಗೂ ಕಾದಿದೆ. ಶಿವಾ ಶಿವಾ….

ಪಿಶಾಚಿ ೨ : ಅದನ್ನು ಹೇಳಬೇಡ. ನೀನು ಎನು ಹೇಳಿದರೂ ಮಾಡತೇನೆ.

ಬೋಳೇಶಂಕರ : ನೀನೇನು ಮಡಬಲ್ಲೆ?

ಪಿಶಾಚಿ ೨ : ನಿನಗೆ ಬೇಕಾದಷ್ಟು ಚಿನ್ನದ ನಾಣ್ಯ ಕೊಡಬಲ್ಲೆ.

ಬೋಳೇಶಂಕರ : ಆಗಲೇಳು, ಸ್ವಲ್ಪ ಚಿನ್ನದ ನಾಣ್ಯ ಕೊಡು, ನೋಡೋಣ

ಪಿಶಾಚಿ ೨ : ಆ ತೆನೆಯಿಂದ ಕಾಳು ಉದುರಿಸಿ ಕೈಮುಟ್ಟು.
(ಬೋಳೇಶಂಕರ ಹಾಗೇ ಮಾಡುವನು.)

ಈಗ ಹೇಳು :
ಹಂಡೋಲ ಬಂಡೋಲ ಚಿಗರಿ ಚಿಕಲಕ ಬಕಲಕ
ಸಾಲಕುದರಿ ಹನುಮಂತರಾಯಾ
ಧಾನ್ಯವೆಲ್ಲಾ ನಾಣ್ಯವಾಗ್ಲಿ ನಾಣ್ಯವೆಲ್ಲ ಚಿನ್ನವಾಗ್ಲಿ
ಬಚ್ಚಾಬೋಲ್
ಬೋಲಾತಿಬೋಲ್ ಹ್ರಾಂ ಲಂಗೋಟಿ ಕೋಲ್
(ಬೋಳೇಶಂಕರ ಹಾಗೇ ಅನ್ನುವನು. ಧಾನ್ಯವೆಲ್ಲ ಚಿನ್ನದ್ದಾಗುತ್ತದೆ.)
ಈಗ ನಾನು ಹೋಗಲಾ?

ಬೋಳೇಶಂಕರ : ಇರಯ್ಯಾ. ಈ ಚಿನ್ನವನ್ನೆಲ್ಲಾ ಮೊದಲು ಧಾನ್ಯಮಾಡು. ಇಷ್ಟು ಧಾನ್ಯ ವ್ಯರ್ಥ ಪೋಲಾದರೆ ಹೇಗೆ?

ಪಿಶಾಚಿ ೨ : ಆ ಮಂತ್ರಾನ್ನೇ ತಿರಗಮುರುಗ ಹೇಳಿ, ಹೀಗೆ:
ಕಲಬಕ ಕಲಕಚಿ ರಿಗಚಿ ಲಂಡೋಲ ಕಿರಿ
ಸಾಲಕುದರಿ ಹನುಮಂತರಾಯಾ
ಚಿನ್ನವೆಲ್ಲಾ ನಾಣ್ಯಾವಾಗ್ಲಿ ನಾಣ್ಯವೆಲ್ಲಾ ಧಾನ್ಯವಾಗ್ಲಿ
ಬಚ್ಚಾಬೋಲ್
ಬೋಲಾತಿ ಬೋಲ್ ಹ್ರೀಂ ಲಂಗೋಟಿ ಕೋಲ್
(ಈಗ ಚಿನ್ನ ಧಾನ್ಯವಾಗುತ್ತದೆ)

ಬೋಳೇಶಂಕರ : ಮಕ್ಕಳಿಗೆ, ಹುಡಿಗೇರಿಗೆ ಈ ಆಟ ತೋರಿಸಿದರೆ ತುಂಬ ನಗಾಡುತ್ತಾರಲ್ಲಾ!

ಪಿಶಾಚಿ ೨ : ಈಗ ನಾನು ಹೋಗಲಾ?

ಬೋಳೇಶಂಕರ : ಆಗಲೇಳು; ಶಿವ ನಿನಗೆ ಒಳ್ಳೆದನ್ನು ಮಾಡಲಿ.

ಪಿಶಾಚಿ ೨ : ಅಯ್ಯಯ್ಯೋ ಆ ಹೆಸರು ಹೇಳಬೇಡಿ.

ಕೋಡಂಗಿ : ಶಿವ ಶಿವ ಶಿವ ಶಿವಶಂಕರ ಭೋಂ ಭೋಂ ಶಂಕರ ಬೋಳೇಶಂಕರ.
(ಕೇಳಲಾರದೆ ಪಿಶಾಚಿ ಅಲ್ಲೆ ಸುತ್ತಿರಿಗಿ ಸಾಯುತ್ತದೆ.)