ಕೋಡಂಗಿ : ಹೋಯ್ ಭಾಗವತರೇ,

ಭಾಗವತ : ಏನಪ್ಪ?

ಕೋಡಂಗಿ : ನನ್ನ ಪ್ರತಾಪ ಹೊಗೊಳೋದಕ್ಕೆ ನಿಮಗೆ ಅರ್ಹತೆ ಕಮ್ಮಿ ಇದೆಯ ಅಂತ.

ಭಾಗವತ : ಏನಪ್ಪ ಅಂಥ ಕೆಲಸ ಮಾಡಿದೆ?

ಕೋಡಂಗಿ : ಪಿಶಾಚಿ, ಪಿಶಾಚೀನ್ನ ಕೊಂದು ಬೋಳೇಶಂಕರನನ್ನ ಬದುಕಿಸಿದ ಸ್ವಾಮೀ, ನೀವಲ್ಲಿ ಇದ್ದಿದ್ದರೆ ಖಂಡಿತ ನನ್ನ ಬಗ್ಗೆ ಒಂದು ಹಾಡನ್ನು ಕಟ್ಟುತ್ತಿದ್ದಿರಿ.

ಭಾಗವತ : ಪಿಶಾಚೀನ್ನ ಬೋಳೇಶಂಕರ ಕೊಂದನ?

ಕೋಡಂಗಿ : ನಿಮಗೆ ಕಿವೀನೇ ಸರಿ ಇಲ್ಲವೋ ಏನೊ. ಬೋಳೇಶಂಕರ ಹೆದರಿಕೊಂಡು ಗಡಗಡ ನಡುಗುತ್ತಾ ನಿಂತಿದ್ದ. ಹೆದರಬೇಡ ಅಂತ ಆಶ್ವಾಸನೆ ಕೊಟ್ಟು ಪಿಶಾಚಿಗೆ ನಾನು ಯಾರೂಂತ ಹೇಳ್ದೆ. ಹೇಳಿದ್ದೇ ತಡ ನಡುಗೋದಕ್ಕೆ ಸುರು ಮಾಡಿತು.

ಭಾಗವತ : ಯಾರ ಹೆಸರು ಹೇಳ್ದೆ?

ಕೋಡಂಗಿ : ಶಿವನ ಹೆಸರಲ್ಲ, ನನ್ನ ಹೆಸರು. ನಾನೆಂದರೆ ಸೋಂಬೇರಿ ಅಂದುಕೊಂಡಿದ್ದ ನಲ್ಲವ? ಪಿಶಾಚೀನ್ನ ಕೊಂದೆ ನೋಡಿ. ಮೂಗಿನ ಮೇಲೆ ಬೆರಳಿಟ್ಟುಕೊಂಡು ಸುಮ್ಮನೆ ಕೂತು ಬಿಟ್ಟವನು ಅಲ್ಲೇ ಕೂತೇ ಇದಾನೆ! ಈಗವನು ಏನು ಅಂದುಕೊಳ್ತಿದಾನೆ ಗೊತ್ತ? ಎಂಥವನಪ್ಪಾ ನನ್ನ ಮಗ ಕೋಡಂಗಿ ಇವನು! ಇವನ ಹೆಸರು ಹೇಳಿದರೆ ಪಿಶಾಚಿಗಳು ನಡುಗುತ್ತವೆ! ಇನ್ನೂ ಇಂತೆಂಥ ದೆವ್ವಭೂತ ವಶಮಾಡಿಕೊಂಡಿದ್ದಾನೊ! ಛೇ, ಈ ಕೋಡಂಗಿಗೆ ದೇವರೂ ಹೆದರುತ್ತಾನೋ ಏನೊ! ಇವನನ್ನ ಮಿತ್ರನನ್ನಾಗಿ ಪಡೆದ ನಾನೇ ಧನ್ಯ! ಏನಿದ್ದರೂ ಇವನು ಕೆಲಸಕ್ಕೆ ಹೆದರಿ ನನ್ನ ಮನೆ ಬಿಟ್ಟು ಹೋಗದ ಹಾಗೆ ನೋಡಿಕೋಬೇಕು-ಅಂತ.

ಭಾಗವತ : ಭಲೆ! ಕೊನೆಗೂ ನಿನ್ನ ಬೆಲೆ ಬೋಳೇಶಂಕರನಿಗೆ ಗೊತ್ತಾಯಿತಲ್ಲ. ಬಹುಮಾನವಾಗಿ ಏನಾದರೂ….

ಕೋಡಂಗಿ : ಎರಡೇಟು ಜಾಸ್ತಿ ಕೊಟ್ಟ.

ಭಾಗವತ : ಎರಡೇಟು ಬೋನಸ್ ಪಡೆದೆಯಲ್ಲ, ಏನಾದರೂ ಕೆಲಸ ಮಾಡಿದೆಯ?

ಕೋಡಂಗಿ : ಏನು ಭಾಗವತರೇ, ನೀವೂ ಬೋಳೇಶಂಕರನ ಥರ ಮಾತಾಡ್ತೀರಿ.

ಭಾಗವತ : ಅಲ್ಲವಯ್ಯಾ, ಆ ಕಡೆ ಬೋಳೇಶಂಕರನ ಹೊಲದಲ್ಲಿರಬೇಕಾದರೆ ಮನೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಂದಲ್ಲವೊ?

ಕೋಡಂಗಿ : ಪೂರ್ತಿ ಮನೆ ಅಲ್ಲ, ಅಡಿಗೆ ಮನೆ ಜವಾಬ್ದಾರಿ ಮಾತ್ರ.

ಭಾಗವತ : ಅಡಿಗೆ ಮನೆಯಲ್ಲಾದರೂ ಏನಾಗ್ತಿದೆ ಅಂತ ನೋಡಿದ್ದೀಯೇನಯ್ಯಾ?

ಕೋಡಂಗಿ : ನೋಡೋ ಅಗತ್ಯ ಏನಿದೆ ಭಾಗವತರೇ. ಮೂಗಿನ ವಾಸನೆಯಿಂದಲೇ ಎಲ್ಲ ಹೇಳಬಲ್ಲೆ. ನನ್ನ ಮೂಗು ನನ್ನ ಮುಖದ ಮೇಳೆ ಕೂತುಕೊಂಡೇ ಪ್ರಪಂಚದ ಮೂಲೆಯಲ್ಲಿ ತಯಾರಾಗೋ ತಿಂಡಿತಿನಿಸಿನ ವಿಚಾರ ಹೇಳ ಬಲ್ಲುದು.

ಭಾಗವತ : ಹಾಗಿದ್ದರೆ ಬೋಳೇಶಂಕರನ ಅಡಿಗೆ ಮನೆಯಲ್ಲಿ ಏನಾಗ್ತಿದೆ ಹೇಳಪ್ಪ.

ಕೋಡಂಗಿ : ಚಕ್ಕುಲಿ, ಕೋಡಬಳೆ, ಕರಜಿಕಾಯಿ, ಹೋಳಿಗೆ, ಲಾಡು, ಜಿಲೇಬಿ-ಎಲ್ಲಾ ತಿನಿಸಿನ ವಾಸನೆ ಬರತ್ತಾ ಇದೆಯಲ್ಲ ಭಾಗವತರೇ!

ಭಾಗವತ : ಇದ್ನೆಲ್ಲ ಯಾರಪ್ಪಾ ಮಾಡ್ತಿದಾರೆ?

ಕೋಡಂಗಿ : ಎಲಾ ಎಲಾ ಹೌದಲ್ಲಾ ಭಾಗವತರೇ, ಇವರು ಬೋಳೇಶಂಕರನ ಅಣ್ಣಂದಿರಲ್ಲವೆ? ಜಗಳಾಡಿ ಪಾಲಿಗೆ ಬಂದದ್ದನ್ನು ತಗೊಂಡು ದೇಶ ಆಳ್ತೀವಿ ಅಂತ ಹೋದವರು ಪುನಃ ಬೆಪ್ತಕ್ಕಡಿ ಮನೆಗೇ ಬಂದಿದ್ದಾರೆ! ಪಿಶಾಚಿಗಳನ್ನ ಸುಲಭವಾಗಿ ಓಡಿಸಬಹುದು. ಇವರನ್ನ ಓಡಿಸಲಿಕ್ಕಾಗೋದಿಲ್ಲ ಭಾಗವತರೇ…. ಅಗೋ ಅವನೇ ಬಂದ ನಿಭಾಯಿಸಲಿ.
(ಮೇಲಿನ ಕೋಡಂಗಿಯ ಮಾತು ನಡೆಯುತ್ತಿರುವಂತೆಯೇ ಸರದಾರ ಸೋಮಣ್ಣ, ಸಾವ್ಕಾರ ಡಬ್ಬು, ಅವರ ಹೆಂಡಂದಿರು ಬೋಳೇಶಂಕರ ಮನೆಯಲ್ಲಿ ಐಷಾರಾಮವಾಗಿ ಅಡಿಗೆ ಮಾಡುತ್ತಿದ್ದಾರೆ. ಇನ್ನೊಂದು ಕಡೆಗೆ ಪಿಶಾಚಿಗಳು ಕಾಣಿಸಿಕೊಳ್ಳುತ್ತವೆ.)

ಪಿಶಾಚಿ ೩ : ಬೋಳೇಶಂಕರ ಬರ್ತಿದಾನೆ.

ಪಿಶಾಚಿ ೨ : ಹುಷಾರಾಗಿರಬೇಕು.

ಪಿಶಾಚಿ ೩ : ಸರದಾರನಿಗಿಂತ ಅವನ ಹೆಂಡತೀನೇ ವಾಸಿ.

ಪಿಶಾಚಿ ೨ : ಡಬ್ಬೂನ ಹೆಂಡತೀನೂ ಅಷ್ಟೆ.

ಪಿಶಾಚಿ ೩ : ಅವಳ ಬಾಯಲ್ಲೆರಡು ಕೋರೆ ಹಲ್ಲು ಮೂಡಿಸಿದ್ದೀನಿ.

ಪಿಶಾಚಿ ೨ : ಹಾಗೇ ಅವಳ ಜೊಲ್ಲಿಗೆ ವಿಷ ಬೆರಸು. ಡಬ್ಬೂನ ಹೆಂಡತಿಗೆ ಎರಡು ಕೊಂಬು ಮೂಡಿಸಿದ್ದೀನಿ.

ಪಿಶಾಚಿ ೩ : ಅವುಗಳಲ್ಲಿ ಒಂದೊಂದು ಚೂರಿ ಇಡು.

ಪಿಶಾಚಿ ೨ : ಗಂಡಸರ ಬಾಯಲ್ಲಿ ಮದ್ದಿಡೋಣ. ಹೆಂಗಸರ ಕೈಯಲ್ಲಿ ಬೆಂಕಿ ಇಡೋಣ. ಕಿಡಿ ತಾಗಿದರೆ ಸಾಕು, ನನ್ಮಗ ಬೆಪ್ತಕ್ಕಡಿ ನರಕದ ಶಾಪಗಳನ್ನೆಲ್ಲ ಅವರ ಮೇಲೆ ಸುರೀಬೇಕು.

ಪಿಶಾಚಿ ೩ : ಎರಡೇ ಗಳಿಗೇಲಿ ಮನೆ ಸ್ಮಶಾನವಾಗಬೇಕು.

ಪಿಶಾಚಿ ೨ : ಅಗೋ ಬಂದ. (ಬೋಳೇಶಂಕರ ಗಳೆ ಸಾಮಾನಿನೊಂದಿಗೆ ಬರುವನು)

ಸರದಾರ : ತೋಟದಿಂದ ಈಗ ಬಂದೆಯಾ ಬೋಳೇಶಂಕರ? ನಾ ನಿನ್ನ ಜೊತೆಗೆ ಇರೋಣ ಅಂತ ಬಂದೆ. ಇದ್ದ ಕೆಲಸ ಹೋಯ್ತು. ಇನ್ನೊಂದು ಕೆಲಸ ಸಿಕ್ಕೋವರೆಗೂ ನನಗೂ ನನ್ನ ಹೆಂಡತಿಗೂ ನೀನೇ ದಿಕ್ಕು. ಇಲ್ಲ ಅನ್ನಬೇಡ.

ಡಬ್ಬು : ಚಿನ್ನಾಗಿದ್ದೀಯಾ ಶಂಕರ? ನೋಡಿದರೇ ಗೊತ್ತಾಗುತ್ತಲ್ಲ- ಎಷ್ಟು ಚೆನ್ನಾಗಿದ್ದೀಯಾ ಅಂತ. ಪುನಃ ಆಸ್ತಿ ಕೆಳಲಿಕ್ಕೆ ಬಂದವರಲ್ಲ ನಾವು. ಏನು ಮಾಡೋದು ಹೇಳು ಯಾವುದಕ್ಕೂ ವಿಧಿ ಅಂತ ಒಂದಿರುತ್ತಲ್ಲ. ಅದರ ಕೋಪಕ್ಕೆ ತುತ್ತಾಗಿ ಇಲ್ಲಿಗೆ ಬರಬೇಕಾಯ್ತು.

ಬೋಳೇಶಂಕರ : ಓಹೊ ಹೀಗಾಯ್ತೊ!

ಸರದಾರ : ಈಗ ನೀನು ದೊಡ್ಡ ಮನಸ್ಸು ಮಾಡಬೇಕು.

ಸ. ಹೆಡಂತಿ : ನಿನ್ನ ಮನೆಗೆ ಅತಿಥಿಯಾಗಿ ಬಂದವರು ಯಾರೆಂದು ತಿಳಿದುಕೊ. ನಿನ್ನ ದೊಡ್ಡ ಅಣ್ಣ ಸೇನಾಪತಿಯಾಗಿ ದೇಶ ಆಳಿದವರು. ಸಣ್ಣ ಅಣ್ಣ ಸಾವ್ಕಾರನಾಗಿ ಸರಕಾರ ಕೊಂಡು ಮಾರಿದವರು. ನಾವಿರೋತನಕ ಸೇವೆ ಮಾಡಿ ಧನ್ಯನಾಗೋ ಅವಕಾಶ ತಾನಾಗೇ ಬಂದಾಗ ಬಿಟ್ಟುಕೊಡಬೇಕು.

ಸಾ. ಹೆಂಡತಿ : ಅಷ್ಟಾಗಿ ನಾವು ಕೂತು ತಿನ್ನೋದಿಲ್ಲ. ನಮ್ಮ ಕೂಳು ನಾವು ತಾನೇ ಬೇಯಿಸಿಕೊಳ್ಳಬೇಕು? ನಿನಗೊಂದು ಹೆಂಡತಿಯೇ, ಸಂಸಾರವೆ? ಅದು ಈ ಜನ್ಮದಲ್ಲಿ ಸಾಧ್ಯವೂ ಇಲ್ಲ.

ಬೋಳೇಶಂಕರ : ಆಗಲೇಳಿ ಅದಕ್ಕೇನಂತೆ. ಎಲ್ಲರೂ ನನ್ನ ಜೊತೆಗಿರಿ. ಆಗಲೇ ಅತ್ತಿಗೆ ಹೇಳಿದ ಹಾಗೆ ಅನ್ನಬೇಯಿಸಿ ಹಾಕೋದಕ್ಕೆ ನನಗೂ ಯಾರು ಇಲ್ಲ. ಈಗಲಾದರೂ ಹೆಂಗಸಿನ ಕೈ ಅನ್ನ ಉಣ್ಣಬಹುದು.
(ಸಾಮಾನು ಇಡಲು ಬೇರೆ ಕಡೆ ಹೋಗುವನು)_

ಸ. ಹೆಡಂತಿ : ನೋಡಿ, ನಿಮ್ಮ ತಮ್ಮನಿಗೆ ಕೂಳು ಕುದಿಸಿ ಹಾಕೋದಕ್ಕೆ ನಾವು ಅವನ ಆಳುಗಳಲ್ಲ.

ಸರದಾರ : ಆದರೆ ನಾವಿರೋದು ಅವನ ಮನೇಲಲ್ಲವೆ?

ಸ. ಹೆಡಂತಿ : ಅದು ನಿಮಗ್ಗೊತ್ತು. ಒಂದೇ ಕರುಳು ಹಂಚಿಕೊಂಡವರಿಗೆ ಇಷ್ಟು ಆಶ್ರಯ ಕೊಡೋದೇನು ಹೆಚ್ಚಲ್ಲ. ಅದು ತಮ್ಮನ ಕರ್ತವ್ಯ, ಪುಣ್ಯದ ಕೆಲಸ

ಸಾ. ಹೆಂಡತಿ : ಬೇಕಾದರೆ ಕೂಳು ನಾವು ಬೇಯಿಸ್ತೀವಿ. ಅವನು ಹೊರಗಡೆ ದನದ ಕೊಟ್ಟಿಗೇಲಿ ಊಟ ಮಾಡಲಿ. ಅಕಾ ಅವನು ಒಳಗಡೆ ಊಟಕ್ಕೆ ಬರೋದಕ್ಕೆ ತಯಾರಾಗ್ತಿದಾನೆ.

ಸಾವ್ಕಾರ : ಅವನ ದಡ್ಡತನವೇ ನಮಗೆ ಆಸರೆ. ಆದಕ್ಕೇನಾದರೂ ನೋವಾದರೆ ನಾವಿಲ್ಲಿ ಇರಲಿಕ್ಕಾಗುತ್ತೇನೆ?

ಸಾ. ಹೆಂಡತಿ : ಹಾಕಿದ್ದನ್ನ ತಿನ್ನೋ ನಾಯಿ ಅದು. ನೋವಾದದ್ದು ಅದಕ್ಕೆಲ್ಲಿ ಗೊತ್ತಾಗುತ್ತೇರಿ?

ಸರದಾರ : ಬೇಕಾದರೆ ನಾವಿಬ್ಬರೂ ಅವನ ಜೊತೆ ಕೊಟ್ಟಿಗೇಲಿ ಕೂತು ಊಟ ಮಾಡ್ತೀವಿ. ನೀವು ಆಮೇಲೆ ಒಳಕ್ಕೆ ಊಟ ಮಾಡಿ.

ಸ. ಹೆಡಂತಿ : ಹಾಗಿದ್ದರೆ ಆಮೇಲೆ ನಿಮ್ಮನ್ನೂ ನಾವು ಒಳಕ್ಕೆ ಸೇರಿಸೋದಿಲ್ಲ, ಹುಷಾರ್

ಸಾವ್ಕಾರ : ಇದೊಳ್ಳೇದಾಯ್ತೆ!

ಸಾ. ಹೆಂಡತಿ :  ಅವನ್ನ ನೋಡಿದರೇ ಕಣ್ಣುಬೇನೆ ಬರುತ್ತೆ; ಥೂ ಅಸಾಧ್ಯ ಕೊಳಕ.

ಸ. ಹೆಡಂತಿ : ಬರ್ತಿದಾನೆ, ಈಗೇನು ನೀವೇ ಹೇಳ್ತೀರೊ, ನಾವೇ ಹೇಳೋಣವೊ?

ಸಾವ್ಕಾರ : ಹೇಳ್ತೀನಿರೇ.
(ಬೋಳೇಶಂಕರ ಊಟಕ್ಕೆ ರೆಡಿಯಾಗಿ ಬರುವನು.)

ಬೋಳೇಶಂಕರ : ಒಬ್ಬನ ಜೀವನದಲ್ಲಿ ಇಂಥ ಸುದಿನಗಳು ಬರೋದು ಅಪರೂಪ. ಜೊತೆ ಕೂತು ಊಟ ಮಾಡಿ ಎಷ್ಟು ದಿನಗಳಾದವು! ಬನ್ನಿ ಅಣ್ಣತಮ್ಮಂದಿರು ಒಟ್ಟಿಗೆ ಊಟ ಮಾಡೋಣ. ಹೆಣ್ಣಿದ್ದ ಮನೆಯ ಸೌಭಾಗ್ಯವೇ ಬೇರೆ. ಅತ್ತಿಗೆಯವರ ಹಸ್ತಗುಣದಿಂದ ಅಡಿಗೆ ಮನೆಯಾಗಲೇ ಪರಿಮಳಭರಿತವಾಗಿದೆ, ಬನ್ನಿ.

ಸಾವ್ಕಾರ : ಅಯ್ಯಾ ಬೋಳೇಶಂಕರಾ, ಸದ್ಯ ನೀನೊಬ್ಬನೇ ಊಟ ಮಾಡು. ನಾವು ಆಮೇಲೆ ಮಾಡ್ತೀವಿ.

ಬೋಳೇಶಂಕರ : ಆಗಲೇಳಿ. ನಿಮಗಿನ್ನೂ ಹಸಿವಾಗಿರಲ್ಲಿಕ್ಕಿಲ್ಲ. ನನಗಾಗಿದೆ. ನಾನು ಊಟ ಮಾಡ್ತೀನಿ.

ಸರದಾರಾ : ತಮ್ಮಾ ಬೋಳೇಶಂಕರಾ, ಊಟಕ್ಕೆ ನೀನು ಕೊಟ್ಟಿಗೆ ಹತ್ತಿರ ಕೂತಿರ್ತೀಯಾ? ಹೆಂಗಸರಿಗೆ ನಿನ್ನ ಮೈ ವಾಸನೆ ಆಗೋದಿಲ್ಲವಂತೆ.

ಬೋಳೇಶಂಕರ : ಆಗಲೇಳು, ಅದಕ್ಕೇನಂತೆ. ಬೇಕಂದರೆ ಊಟ ಕಟ್ಟಿಕೊಡಲಿ. ತೋಟದಲ್ಲೇ ಊಟ ಮಾಡಿ ಮಲಕ್ಕೋತೇನೆ.

ಸಾವ್ಕಾರ : ಹಾಗೇ ಬೆಳಿಗ್ಗೆದ್ದು ಒಂದಷ್ಟು ಮರ ಕಡಿದು ಬಿಡಪ್ಪ. ನಮಗೆರಡು ಮನೆ ಕಟ್ಟಿಸಿ ಕೊಟ್ಟರೆ ಚೆನ್ನಾಗಿರುತ್ತೆ. ನಿನ್ನ ಮನೆಯಲ್ಲೇ ಎಷ್ಟಂತ ಇರೋದು?

ಬೋಳೇಶಂಕರ : ಹಾಗೇ ಆಗಲೇಳು.

ಸರದಾರ : ಹಾಗೇ ಬೆಳಿಗ್ಗೆದ್ದು ನನ್ನ ಕುದುರೆಗೆ ಒಂದಷ್ಟು ಹುಲ್ಲುತಾರಪ್ಪ. ಕೆಲಸ ಕೊಟ್ಟೆ ಅಂತ ಬೇಜಾರು ಮಾಡಿಕೋಬೇಡ.

ಬೋಳೇಶಂಕರ :  ಆಗಲೇಳು ಅದಕ್ಕೇನಂತೆ.

ಸಾ. ಹೆಂಡತಿ :  ಇಕಾ ಕಟ್ಟಿದ ಬುತ್ತಿ ತಯಾರಾಗೇ ಇದೆ.

ಬೋಳೇಶಂಕರ : ಅಗಲೇಳಿ, ಆಮೇಲೆ ಕೋಡಂಗಿಗೆ ಊಟ ಹಾಕಿ.
(ಉಳಿದವರೆಲ್ಲ ಮರೆಯಾಗಿ ಬೋಳೇಶಂಕರ ಮತ್ತು ಕೋಡಂಗಿ ಮುಂದೆ ಬರುತ್ತಾರೆ.)

ಕೋಡಂಗಿ : ಅದೇನೊ ಸರಿ. ನೀ ಮಾಡೋ ಪುಣ್ಯಗಳ ಲೆಕ್ಕ ಚಿತ್ರಗುಪ್ತರು ಸರಿಯಾಗಿ ಬರದುಕೊಳ್ಳುತ್ತಿದ್ದರೆ ಸರಿ. ಅವರು ತೆಪ್ಪಗೆ ಮಲಗಿದ್ದರೆ ನೀನು ಎಷ್ಟು ಒಳ್ಳೆ ಕೆಲಸ ಮಾಡಿದರೇನು ಪ್ರಯೋಜನ?

ಬೋಳೇಶಂಕರ : ಒಬ್ಬ ಒಳ್ಳೆ ಕೆಲಸ ಮಾಡೋದು ಪುಣ್ಯದ ತುರಾಯಿಗಳನ್ನ ರುಂಬಾಲಿಗೆ ಸಿಕ್ಕಿಸಿಕೊಳ್ಳಲಿಕ್ಕಲ್ಲ. ಅದು ಅವನ ಜೀವನರೀತಿ ಅಷ್ಟೆ. ಅದಿರಲ್ಲಯ್ಯಾ, ಊಟ ಬಿಟ್ಟು ನೀಯಾಕೆ ಬಂದೆ?

ಕೋಡಂಗಿ : ನನಗಿವತ್ತು, ಊಟ ಬೇಡ ಅನ್ನಿಸ್ತು. ನಿನ್ನ ಜೊತೆ ನಾನೂ ತೋಟದಲ್ಲೇ ಮಲಗತೀನಿ. ಆದರೂ ನಿನ್ನ ಅಣ್ಣಂದಿರ ಇವತ್ತಿನ ನಡತೆ ನನಗೆ ಸರಿ ಕಾಣಲಿಲ್ಲ.

ಬೋಳೇಶಂಕರ : ಯಾಕೆ ಹಾಗಂದೆ?

ಕೋಡಂಗಿ : ಚೆನ್ನಾಗಿದೆ. ಜೇಬು ನಿಂದು, ಹಣ ನಿಂದು ಅವರು ಖರ್ಚು ಮಾಡುತ್ತಾರಂತೆ. ಇದ್ಯಾವ ಸೀಮೆ ಲೆಕ್ಕ?

ಬೋಳೇಶಂಕರ : ಅನಗತ್ಯವಾಗಿ ತಲೆ ಕೆಡಿಸಿಕೊಳ್ತಿ ಅಂತಲೇ ನಿನಗೆ ಕಮಂಗಿ ಅನ್ನೋದು. ಅಗೊ ಆ ಹಸಿರನ್ನ ನೋಡು. ಹಸಿರನ್ನ ಪ್ರೀತಿಸಬೇಕಾದರೆ ನೀನು ಪುಸ್ತಕದ ಭಾಷೆಯಲ್ಲಿ ಸಮರ್ಥಿಸಿಕೊಳ್ಳಬೇಕಾದ್ದಿಲ್ಲ. ಅಂತಃಕರಣ ತೆರೆದರೆ ಸಾಕು; ಅದು ಒಳಗೆ ಪ್ರವೇಶಿಸುತ್ತದೆ. ಒಳಗಿನ ಕೊಳೆ ತೊಳೆದು ಹೃದಯವನ್ನು ಪರಿಶುದ್ಧವಾದ ಸ್ವಚ್ಛವಾದ ಕೊಳದ ಥರ ಮಾಡುತ್ತದೆ. ತೆರೆ ಏಳದ ಹಾಗೆ ನಾವು ಕಾಳಜಿ ವಹಿಸೋದಾದರೆ ನಮ್ಮ ಆತ್ಮ ಅದರಲ್ಲಿ ಸ್ಪಷ್ಟವಾಗಿ ಮೂಡುತ್ತದೆ. ನಿಸ್ತರಂಗ ಕೊಳದಲ್ಲಿ ಚಂದ್ರ ಮೂಡೋದಿಲ್ಲವೆ, ಹಾಗೆ. ಅಯ್ಯಾ ಕೋಡಂಗಿ, ಹಸಿರು ಸಾಮ್ರಾಜ್ಯದ ನಮ್ರ ಪ್ರಜೆ ಕಣಯ್ಯಾ ನಾನು.

ಕೋಡಂಗಿ : ನಿನಗೂ ಪಿಶಾಚಿ ಕಾಟವೋ ಏನೋ! ಏನೇನೋ ಮಾತಾಡಲಿಕ್ಕೆ ಸುರು ಮಾಡಿದೆ. ನಡಿ ನಡಿ….
(ಅವರು ಮರೆಯಾಗುತ್ತಿರುವಂತೆ ನಿರಾಶರಾದ ಪಿಶಾಚಿಗಳು ಬರುತ್ತವೆ)

ಪಿಶಾಚಿ ೩ : ಜಗಳ ಆಗಲೇ ಇಲ್ಲವೆ!

ಪಿಶಾಚಿ ೨ : ನಾವಿಟ್ಟ ಮದ್ದೆಲ್ಲ ಈ ಬೆಪ್ತಕ್ಕಡಿ ಮುಂದೆ ಒದ್ದೆಯಾಯ್ತೆ!

ಪಿಶಾಚಿ ೩ : ತಮ್ಮ ಹೇಳಿದ ಹಾಗೆ ಇವನು ಅಸಾಧ್ಯನೇ ಸರಿ. ಇವನನ್ನ ಹೀಗಲ್ಲ ದಾರಿಗೆ ತರೋದು. ಈ ಬೆಪ್ತಕ್ಕಡಿ ಹತ್ತಿರ ತಮ್ಮ ಕೊಟ್ಟ ಬೇರಿದೆಯಲ್ಲವೆ? ನಾನು ಹೋಗಿ ರಾಜಕುಮಾರೀನ್ನ ಹಿಡೀತೇನೆ. ಬೇರಿರೋದರಿಂದ ರಾಜಕುಮಾರಿಯ ರೋಗ ವಾಸಿ ಮಾಡಬೇಕಂತ ಬರ್ತಾನೆ. ದಾರಿಯಲ್ಲಿ ಯಾವುದೋ ವೇಷದಲ್ಲಿ ಅವನನ್ನ ಭೇಟಿ ಮಾಡಿ ಆ ಬೇರು ಕಿತ್ತುಕೊ. ಅರಮನೆಗೆ ಬಂದ ಮೇಲೆ ವಾಸಿ ಮಾಡಲಿಕ್ಕಾಗೋದಿಲ್ಲವಲ್ಲ – ಆವಾಗ ರಾಜನಿಂದ ನಾನವನ ಕತ್ತು ಕುಯ್ಸಿ ಹಾಕ್ತೀನಿ. ಹ್ಯಾಗಿದೆ ಉಪಾಯ?

ಪಿಶಾಚಿ ೨ : ಖಂಡಿತ ಚೆನ್ನಾಗಿದೆ, ನಡಿ.

ಭಾಗವತ : ನಮ್ಮೂರಿನಲ್ಲೊಬ್ಬ ಭಡವಯ್ಯ ಇದ್ದ
ಅವನಿಗೆ ಅಂತಿದ್ದರೆಲ್ಲರು ಪೆದ್ದ
ಮನೆಮಾರು ಇರಲಿಲ್ಲ ಮಕ್ಕಳು ಮಡದಿ
ಇರಲಿಲ್ಲ ಅವನಿಗೆ ಕರಗುವ ಮಂದಿ
ಆಗೀಗ ಕೊಡುತಿದ್ದ ಉಪದೇಶ ಉಚಿತ
ಕಣ್ಣುಗಳು ಕೆಡದಂತೆ ಓದಿರಿ ಅಂತ
ಅದಕೆ ಪಂಡಿತಮಂದಿ ಹಾಕುತ್ತ ಉಸಿರ
ಬರೆಯುತ್ತಲಿರಲಿಲ್ಲ ಆತನ ಹೆಸರ.