(ರಾಜಕುಮಾರಿ ಮಲಗಿ ನರಳುತ್ತಿದ್ದಾಳೆ. ಪಕ್ಕದಲ್ಲಿ ರಾಜ, ಮಂತ್ರಿ)

ರಾಜ : ಮೂರು ದಿನಗಳಿಂದ ರಾಜಕುಮಾರಿ ಹೀಗೇ ನರಳುತ್ತಿದ್ದಾಳೆ. ಇವಳ ಹೊಟ್ಟೆ ನೋವನ್ನ ವಾಸಿ ಮಾಡುವಂಥ ಒಬ್ಬ ವೈದ್ಯನೂ ಸಿಕ್ಕಲಿಲ್ಲವೆ ಮಂತ್ರಿಗಳೆ?

ಮಂತ್ರಿ : ಇಲ್ಲ ಪ್ರಭು; ಯಾರ ವೈದ್ಯವೂ ರಾಜಕುಮಾರಿಯ ಮೇಲೆ ಪರಿಣಾಮ ಬೀರುತ್ತಿಲ್ಲ. ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ಪರ ರಾಜ್ಯಗಳಲ್ಲೂ ರಾಜಕುಮಾರಿಯ ಹೊಟ್ಟೆನೋವು ವಾಸಿಮಾಡುವ ವೈದ್ಯರಿಗೆ ಯೋಗ್ಯ ಬಹುಮಾನ ಕೊಡುವುದಾಗಿ ಡಂಗುರ ಸಾರಿಸಿದ್ದೇನೆ.

ರಾಜಕುಮಾರಿ : ಅಯ್ಯೋ ನೋವು, ಹೊಟ್ಟೆನೋವಪ್ಪಾ….

ರಾಜ : ಮಂತ್ರಿ, ಮಗಳು ಈ ಪರಿ ಸಂಕಟ ಪಡೋದನ್ನ ನೋಡಲಾರೆ. ಇವಳ ನೋವು ವಾಸಿ ಮಾಡಿದವರಿಗೆ ಅರ್ಧ ರಾಜ್ಯ ಕೊಡತೀನೀಂತ ಡಂಗುರ ಸಾರಿಸು.

ಮಂತ್ರಿ : ಅಪ್ಪಣೆ ಪ್ರಭು, (ಹೊರಡುವನು)

ರಾಜಕುಮಾರಿ : ಅಯ್ಯಯ್ಯೋ ನೋವು ತಡೀಲಾರೆ.

ರಾಜ : ಮಂತ್ರಿ ನಿಲ್ಲು. ಈ ನೋವು ವಾಸಿ ಮಾಡಿದವರಿಗೆ ಇಡೀ ರಾಜ್ಯ ಕೊಡತೀನಿ ಅಂತ ಡಂಗುರ ಸಾರು.

ಮಂತ್ರಿ : ಹಾಗೇ ಆಗಲಿ ಪ್ರಭು. (ಹೊರಡುವನು)

ರಾಜಕುಮಾರಿ : ಅಯ್ಯೋ ಅಪ್ಪಾ, ಸಾಯತೇನೆ, ನನಗೆ ವಿಷ ಕೊಡಿ.

ರಾಜ : ಅಯ್ಯಾ ಮಂತ್ರಿ ರಾಜ್ಯವನ್ನಲ್ಲದೆ ರಾಜಕುಮಾರೀನ್ನೂ ಮದುವೆ ಮಾಡಿಕೊಡ್ತೀನಿ ಅಂತ ಡಂಗುರ ಸಾರಯ್ಯಾ-

ಮಂತ್ರಿ : ಅಪ್ಪಣೆ ಪ್ರಭು.
(ಹೊರಡುವಷ್ಟರಲ್ಲಿ ಸೇವಕ ಬಂದು ನಮಸ್ಕರಿಸಿ ನಿಲ್ಲವನು)

ಸೇವಕ : ಪ್ರಭು ಬೆಪ್ತಕ್ಕಡಿ ಬೋಳೇಶಂಕರ ಬಂದವನೆ. ಅವನ ಹತ್ತಿರ ಮದ್ದಿದೆಯಂತೆ.

ಮಂತ್ರಿ : ಬೆಪ್ತಕ್ಕಡಿಗಳಿಗೆಲ್ಲಾ ಸಗ್ಗುವ ರೋಗ ಅಲ್ಲವಯ್ಯಾ ಇದು. ರಾಜಕುಮಾರಿಗೆ ಬಂದಿರೋದು, ರಾಜರೋಗ. ಅದ್ದರಿಂದ ರಾಜವೈದ್ಯರೇ ಬರಬೇಕು.

ರಾಜ : ಎಲ್ಲರನ್ನೂ ನೋಡಿದ್ದಾಯ್ತಲ್ಲ ಮಂತ್ರಿಗಳೇ.

ಮಂತ್ರಿ : ಪ್ರಭು ಬಹುಮಾನದ ಆಸೆಯಿಂದ ಹಾದಿಬೀದಿ ದಾಸಯ್ಯಗಳೆಲ್ಲ ವೈದ್ಯ ಮಾಡೋದಕ್ಕೆ ಬರ್ತಿದಾರೆ. ಅವರನ್ನ ತಡೆಯೋದೇ ಕಷ್ಟವಾಗಿದೆ.

ರಾಜಕುಮಾರಿ : ಬೆಪ್ತಕ್ಕಡಿ- ಅದು ಅವನ ಹೆಸರ? ವಿಶೇಷಣವ?

ಸೇವಕ : ಎರಡೂ ಹೌದು ರಾಜಕುಮಾರಿ.

ರಾಜ : ಯಾರು ನೋಡಿದರೂ ಪ್ರಯೋಜನ ಇಲ್ಲ ಅಂದಮೇಲೆ ಸಾಮಾನ್ಯ ಬೆಪ್ತಕ್ಕಡೀನೂ ನೋಡಲೇಳು. ಕರೆತಾರಯ್ಯ ಅವನ್ನ.
(ಸೇವಕ ಹೋಗಿ ಬೋಳೇಶಂಕರ ಹಾಗೂ ಕೋಡಂಗಿಯನ್ನ ಕರೆತರುವನು.)

ಬೋಳೇಶಂಕರ : ಪ್ರಭುಗಳಿಗೆ ನಮಸ್ಕಾರ. ತಾವು ನಂಬುಗೆ ಇಡೋದಾದರೆ ರಾಜಕುಮಾರಿಗೆ ನಾನು ಮುದ್ದು ಕೊಡಬಲ್ಲೆ.

ರಾಜ : ನಾಟಿ ವೈದ್ಯವೊ?

ಬೋಳೇಶಂಕರ : ಹೌದು ಪ್ರಭು.

ರಾಜ : ಅಪಾಯವೇನೂ ಇಲ್ಲ ತಾನೆ?

ಬೋಳೇಶಂಕರ : ಇದನ್ನ ಸೇವಿಸಿದವರು ಖಂಡಿತ ಸಾಯೋದಿಲ್ಲ.

ಮಂತ್ರಿ : ಎತ್ತಿಕೊಳ್ತಾನೇ ಸಾವು ಅಂತೀಯಲ್ಲಯ್ಯಾ, ನೀನೇನು ವೈದ್ಯನೋ, ಗೋರಿ ಅಗಿಯೋ ಕೆಲಸದವನೊ?

ಬೋಳೇಶಂಕರ : ಎರಡೂ ಅಲ್ಲ, ಸಾಮಾನ್ಯ ರೈತ ಸ್ವಾಮೀ.

ಮಂತ್ರಿ : ಇದ್ಯಾಕೋ ಸರಿಹೋಗಲಿಲ್ಲ ಪ್ರಭು, ರಾಜವೈದ್ಯರಿಗಾಗದ್ದು ರೈತನಿಂದ ವಾಸಿ ಆಗುತ್ತೆ ಅಂದರೆ…. ಬಹುಮಾನದ ಆಸೆಗಾಗಿ….

ಬೋಳೇಶಂಕರ : ಅದಕ್ಕೇ ನಂಬುಗೆ ಇಡೋದಾದರೆ ಅಂದೆ.

ರಾಜಕುಮಾರಿ : ಅಯ್ಯೋ ಅಪ್ಪಾ ನೋವಿನಿಂದಾ ಸಾಯತೇನೆ….

ರಾಜ : ಅದೇನು ವೈದ್ಯ ಮಾಡುತ್ತೀಯೋ ಮಾಡಿಬಿಡಯ್ಯಾ.

ಬೋಳೇಶಂಕರ : ರಾಜಕುಮಾರಿ ಈ ಬೇರನ್ನ ಬಾಯಲ್ಲಿಟ್ಟುಕೊಂಡು ಜಗಿದು ನುಂಗಬೇಕು, ಶಿವ ನಿಮಗೆ ಒಳ್ಳೇದನ್ಮಾಡುತ್ತಾನೆ..
(ರಾಜಕುಮಾರಿಯ ಹಾಸಿಗೆ ಕೆಳಗಿರೊ ಪಿಶಾಚಿಅಯ್ಯಯ್ಯೋ ಹಾಗನ್ನಬೇಡ, ದಯಮಾಡಿಎಂದು ಹೇಳಿದ್ದನ್ನ ಕೇಳಿ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಕೂಡಲೇ ಕೋಡಂಗಿಶಿವ ಶಿವ ಶಿವಎಂದು ಕೂಗುತ್ತಾನೆ. ಪಿಶಾಚಿ ನಡುಗುತ್ತ ಹೊರಬರುತ್ತದೆ. ಮಂತ್ರಿ ಮತ್ತು ಸೇವಕ ಹೆದರಿ ಓಡುತ್ತಾರೆ. ರಾಜ ಮೂರ್ಛೆ ಬೀಳುತ್ತಾನೆ)

ಬೋಳೇಶಂಕರ : ಎಲಾ ಅನಿಷ್ಟವೇ ಮತ್ತೆ ಬಂದೆಯಾ?

ಪಿಶಾಚಿ ೩ : ನಾನಲ್ಲ ಮೊದಲು ನಿನಗೆ ಸಿಕ್ಕವನು ನನ್ನ ತಮ್ಮ. ನಾನು ನಿನ್ನಣ್ಣ ಸರದಾರ ಸೋಮಣ್ಣನ ಹತ್ತಿರ ಇದ್ದವನು.

ಬೋಳೇಶಂಕರ : ನೀನು ಯಾರಾದರೂ ಆಗಿರು, ನಿನ್ನ ತಮ್ಮಂದಿರಿಗಾದ ಗತಿಯೇ ನಿನಗೂ ಕಾದಿದೆ.
(ಹೊಡೆಯ ಹೋಗುವನು)

ಕೋಡಂಗಿ : ಇರು ಇರು ಮಿತ್ರಾ, ಇದೇನು ಲಾಭ ಕೊಡುತ್ತದೊ ನೋಡೋಣ ಇರು.

ಪಿಶಾಚಿ ೩ : ಅಯ್ಯಯ್ಯೋ ದಮ್ಮಯ್ಯಾ ನನ್ನನ್ನ ಬಿಟ್ಟುಬಿಡು. ಇನ್ನು ಮ್ಯಾಲೆಂದೂ ನಿನ್ನ ತಂಟೆಗೆ ಬರೋದಿಲ್ಲ. ಬೇಕಾದರೆ ನಿನಗೆ ಸಹಾಯ ಮಾಡತೀನಿ.

ಬೋಳೇಶಂಕರ : ಏನು ಮಾಡಬಲ್ಲೆ?

ಪಿಶಾಚಿ ೩ : ಸಿಪಾಯಿಗಳನ್ನು ಮಾಡಬಲ್ಲೆ.

ಬೋಳೇಶಂಕರ : ಅವರಿಂದೇನುಪಯೋಗ?

ಪಿಶಾಚಿ ೩ : ನೀನೇನು ಹೇಳಿದರೂ ಮಾಡುತ್ತಾರೆ.

ಬೋಳೇಶಂಕರ : ಅವರು ಹಾಡಬಲ್ಲರೊ?

ಕೋಡಂಗಿ : ಅವರು ಕುಣಿಯಬಲ್ಲರೊ?

ಪಿಶಾಚಿ ೩ : ನೀನು ಇಷ್ಟಪಟ್ಟರೆ ಹಾಡುತ್ತಾರೆ.

ಬೋಳೇಶಂಕರ : ಆಗಲೇಳು, ಸ್ವಲ್ಪಜನ ಸಿಪಾಯಿಗಳನ್ನು ಮಾಡಿ ತೋರಿಸು.

ಪಿಶಾಚಿ ೩ : ಹುಲ್ಲಿನ ಹೊರೆ ತಗೊಂಬಂದು ನೆಲದ ಮೇಲೆ ನಿಲ್ಲಿಸು.

ಬೋಳೇಶಂಕರ : ಇರು. ಕೋಡಂಗೀ ಕುದುರೆ ಲಾಯದಿಂದ ಒಂದು ಹೊರೆಹುಲ್ಲು ತಗಂಬಾ (ಕೋಡಂಗಿ ಓಡುವನು) ನಿಜ ಹೇಳು, ರಾಜಕುಮಾರೀನ್ನ ನೀನು ಯಾಕೆ ಹಿಡಿದೆ?

ಪಿಶಾಚಿ ೩ : ನೀನು ಇಲ್ಲಿಗೆ ಬರಲಿ ಅಂತ.

ಬೋಳೇಶಂಕರ : ನಿಮ್ಮನ್ನ ನನ್ನಲ್ಲಿಗೆ ಕಳಿಸಿದವರು ಯಾರು?

ಪಿಶಾಚಿ ೩ : ನಮ್ಮ ಯಜಮಾನ; ಸೈತಾನ ದೊರೆ.
(ಕೋಡಂಗಿ ಬರುವನು.)

ಬೋಳೇಶಂಕರ : ಈಗ ಮಾಡು.

ಪಿಶಾಚಿ ೩ : (ಹುಲ್ಲನ್ನ ನೆಲದ ಮೇಲೆ ನಿಲ್ಲಿಸಿ)

ಹಂಡೋಲ ಬಂಡೋಲ
ಚಿಗರಿ ಚಿಕಲಕ ಬಕಲಕ
ಸಾಲಕುದರಿ ಹನುಮಂತರಾಯಾ
ಹುಲ್ಲಿನೆಸಳು ಸಿಪಾಯಾಗ್ಲಿ
ಬಚ್ಚಾ ಬೋಲ್
ಬೋಲಾತಿ ಬೋಲ್ ಹ್ರಾಂ ಲಂಗೋಟಿಕೋಲ್
(ಈಗ ಒಂದೊಂದು ಹುಲ್ಲೆಸಲಿನಿಂದ ಒಬ್ಬೊಬ್ಬ ಜವಾನ ಬರುತ್ತಾನೆ.)

ಬೋಳೇಶಂಕರ : ಚೆನ್ನಾಗಿದೆ, ಆಟ ತುಂಬ ಚೆನ್ನಾಗಿದೆ. ಇದನ್ನು ತೋರಿಸಿದರೆ ಮಕ್ಕಳು, ಹುಡಿಗೇರು ತುಂಬ ಖುಷಿ ಪಡುತ್ತಾರೆ!

ಪಿಶಾಚಿ ೩ : ಈಗ ನಾನು ಹೋಗಲಾ?

ಬೋಳೇಶಂಕರ : ಇರಯ್ಯಾ. ಈ ಸಿಪಾಯಿಗಳನ್ನು ಮೊದಲಿನ ಹಾಗೇ ಹುಲ್ಲು ಮಾಡು. ಇಲ್ಲದಿದ್ದರೆ ಒಳ್ಳೇ ಹುಲ್ಲು ದಂಡವಾಗುತ್ತದೆ.

ಪಿಶಾಚಿ ೩ : ಮಂತ್ರವನ್ನು ತಿರುಗಾ ಮುರುಗಾ ಹೀಗೆ ಹೇಳಿ;

ಕಲಬಕ ಕಲಕಚಿ ರಿಗಚಿ ಲಂಡೋಲ್ ಕಿರಿ
ಸಾಲ ಕುದರಿ ಹನುಮಂತರಾಯಾ
ಎಲ್ಲಾ ಸಿಪಾಯಿ ಹುಲ್ಲಾಗ್ಲಿ ಬಚ್ಚಾಬೋಲ್
ಬೋಲಾತಿಬೋಲ್ ಹ್ರೀಂ ಲಂಗೋಟಿ ಕೋಲ್

(ಈಗ ಪುನಃ ಸಿಪಾಯಿಗಳೆಲ್ಲ ಹುಲ್ಲು ಹೊರೆಯಾಗುವರು)

ಪಿಶಾಚಿ ೩ : ನಾನಿನ್ನು ಹೋಗಲಾ?

ಕೋಡಂಗಿ : ಆಯ್ತು ಹೊರಡು ಶಿವ ಶಿವ ಶಿವ ಶಿವ ಭೋಂ ಭೋಂ ಶಂಕರ, ಬೋಳೇ ಶಂಕರ….

ಪಿಶಾಚಿ ೩ : ಅಯ್ಯಯ್ಯೋ ಆ ಹೆಸರೆತ್ತಬೇಡಿ. ಸಾಯತೀನಿ…. ಅಯ್ಯಯ್ಯೋ.
(ಪಿಶಾಚಿ ತಂತಾನೆ ಸುತ್ತಿ ಸುತ್ತಿ ಸಾಯುತ್ತದೆ)