(ಭಾಗವತ ಮತ್ತು ಕೋಡಂಗಿ)

ಕೋಡಂಗಿ : ಇವತ್ತು ನೀವು ನನ್ನ ಜೊತೆ ಅರಮನೆಗೆ ಬರಬೇಕಿತ್ತು ಭಾಗವತರೇ. ಎಂಥಾ ಅವಕಾಶ ವ್ಯರ್ಥ ಕಳೆದುಕೊಂಡಿರಿ ಅಂತ ನಿಮ್ಮ ಬಗ್ಗೆ ಕರುಣೆ ಬರ್ತಿದೆ ನನಗೆ.

ಭಾಗವತ : ಹೌದೇನಪ್ಪ? ಬಂದಿದ್ದರೆ ಏನಾಗ್ತಿತ್ತು,?

ಕೋಡಂಗಿ : ನನ್ನ ತಲೆ ಬೆಲೆ ತಿಳೀತಿತ್ತು ನಿಮಗೆ. ಇವತ್ತು ಸ್ವಯಂ ಮಹಾರಾಜರು ಹತ್ತು ಸಾವಿರ ರೂಪಾಯಿಗೆ ಕೇಳಿದರು ಗೊತ್ತ?

ಭಾಗವತ : ಏನನ್ನ?

ಕೋಡಂಗಿ : ನನ್ನ ತಲೆಯನ್ನ.

ಭಾಗವತ : ಎಷ್ಟಕ್ಕೆ?

ಕೋಡಂಗಿ : ಹತ್ತು ಸಾವಿರ!

ಭಾಗವತ : ಹತ್ತುಸಾವಿರ ರೂಪಾಯಿಗಳೊ? ಏಟುಗಳೊ?

ಕೋಡಂಗಿ : ಏನಾದರೂ ಅಂದುಕೊಳ್ರಿ, ನಾನು ಕೊಡಲಿಲ್ಲ, ಅದು ಮುಖ್ಯ. ತಲೆ ಕೊಟ್ಟರೆ ಏನಾದರೂ ಉಳೀತದೆಯೇ ಭಾಗವತರೆ?

ಭಾಗವತ : ಇಷ್ಟು ಬೆಲೆ ಬಾಳಬೇಕಾದರೆ ಆ ತಲೆಯಿಂದ ಏನೇನು ಕೆಲಸ ಮಾಡಿದೆಯಪ್ಪ?

ಕೋಡಂಗಿ : ಮುಖ್ಯವಾಗಿ ಮೂರು ಕೆಲಸ.

ಭಾಗವತ : ಯಾವ್ಯಾವ್ದಪ್ಪ?

ಕೋಡಂಗಿ : ಒಂದನೇದ್ದು, ಎರಡನೇದ್ದು, ಮೂರನೇದ್ದು.

ಭಾಗವತ : ಆ ಒಂದನೇದ್ದು ಎರಡನೇದ್ದು ಮೂರನೇದ್ದು ಯಾವ್ಯಾವ್ದಪ್ಪ?

ಕೋಡಂಗಿ : ಅವನ್ನು ಹೇಳಿದರೆ ನೀವು ಥಾಥಯ್ಯಾ ಹಾಡಿ ನನ್ನನ್ನೇ ಕುಣಿಸುತ್ತೀರೋ ಅಂತ ಭಯ.

ಭಾಗವತ : ಹಾಗೇನಿಲ್ಲ ಹೇಳಪ್ಪ.

ಕೋಡಂಗಿ : ಹಾಗಾದರೆ ಕೇಳಲಿಕ್ಕೆ ಸಿದ್ಧರಾಗಿ; ರಾಜಕುಮಾರಿಯ ಹೊಟ್ಟೆ ನೋವು ವಾಸಿ ಮಾಡಿದೆ. ಮೂರೂ ಪಿಶಾಚಿಗಳನ್ನು ಬಾಯಾರೆ ಕೊಂದು ಬಂದೆ. ನಾಡಿಗೆ ವಸಂತ ಮಾಸವನ್ನು ಕೈಯಾರೆ ಕರೆದುಕೊಂಡು ಬಂದೆ.

ಭಾಗವತ : ನಿನ್ನ ಜೊತೆ ಬೆಪ್ತಕ್ಕಡಿ ಬೋಳೇಶಂಕರ ಇರಲಿಲ್ಲವೋ?

ಕೋಡಂಗಿ : ಆ ಬೆಪ್ತಕ್ಕಡೀನೆ? ನಿಮಗೂ ಬುದ್ಧಿ ಬ್ಯಾಡವಾ ಭಾಗವತರೇ? ಆ ಬೆಪ್ತಕ್ಕಡಿಗೊಂದು ತಲೇನ? ಬೆರಳಿನ ಗಂಟು ಹಿಡೀದೇ ಎಣಿಸೋದಕ್ಕೆ ಬರೋದಿಲ್ಲ, ಆ ಧಡ್ಡ ಇದನ್ನೆಲ್ಲ ಮಾಡಬಲ್ಲನ? ಮನುಷ್ಯ ಮತ್ತು ಪಿಶಾಚಿಗಳ ಮಧ್ಯೆ ವ್ಯತ್ಯಾಸ ತಿಳಿಯೋದಿಲ್ಲ ಅವನಿಗೆ, ಆ ಪೆದ್ದ ಇದನ್ನೆಲ್ಲ ಮಾಡಬಲ್ಲನ? ಆ ಸೋಂಬೇರಿ, ಮೋಸ ಹೋಗಲಿಕ್ಕೆ ಹುಟ್ಟಿರೋ ಆ ಬೆಪ್ತಕ್ಕಡಿ ಬೋಳೇಶಂಕರ (ಬೋಳೇಶಂಕರ ಬರುವನು. ಅವನನ್ನು ನೋಡಿ ತಕ್ಷಣ ಮಾತು ಬದಲಿಸಿ) ಅಂತ ಏನೇನೋ ಹೇಳ್ತಿದಾರೆ, ಆವಾಗ ನಾ ಹೇಳಿದೆ. ತಮ್ಮಂದಿರಾ ನಮ್ಮ ಬೋಳೇಶಂಕರ  ಅಂದರೆ ಏನಂದುಕೊಂಡಿರಿ? ಅಂತ ತಿಳುವಳಿಕೆ ಹೇಳಿದೆ.

ಬೋಳೇಶಂಕರ : ನನ್ನ ಪರ ವಕೀಲಿ ಮಾಡಿದ್ದಕ್ಕಾಗಿ ನೋಡಯ್ಯಾ ನಿನಗೆ ಬೆಳ್ಳಿ ಚಮಚಾಗಿರಿ ಕೊಟ್ಟಿದ್ದೇನೆ, ಬದುಕಿಕೋ ಹೋಗು.
(ಅಷ್ಟರಲ್ಲಿ ಮಂತ್ರಿ ಬರುವನು)

ಮಂತ್ರಿ : ಅಯ್ಯಾ ಯಾರಲ್ಲಿ.

ಕೋಡಂಗಿ : ಮಂತ್ರಿ ಮಹಾಶಯರಿಗೆ ನಮಸ್ಕಾರ. ಬಹುಮಾನ ಕೊಡೋದಕ್ಕೆ ಬಂದಿರಿ ತಾನೆ?

ಮಂತ್ರಿ : ಬೆಪ್ತಕ್ಕಡಿ ಬೋಳೇಶಂಕರ, ಯಾರು?

ಕೋಡಂಗಿ : ನಾನೇ.

ಮಂತ್ರಿ : ರಾಜಕುಮಾರಿಗೆ ಮದ್ದು ಕೊಟ್ಟವನು ನೀನೆಯಾ?

ಕೋಡಂಗಿ : (ತನ್ನಲ್ಲಿ) ಏನೋ ಅಪಾಯವಾಗಿದೆ. ಈಗ ಬೋಳೇಶಂಕರನನ್ನು ಅವನ ಧಡ್ಡತನ ಕಾಪಾಡಬೇಕಷ್ಟೆ. (ಪ್ರಕಾಶ) ನಾನಲ್ಲ ಸ್ವಾಮಿ. ನನ್ನ ಮಿತ್ರ ಅಗೋ ಅಲ್ಲಿದ್ದಾನೆ ನೋಡಿ. ಅಯ್ಯಾ ನನ್ನ ಗಳಸ್ಯ ಕಂಠಸ್ಯ, ಮಹಾಮಂತ್ರಿಗಳು ನಿನ್ನ ದಡ್ಡತನಕ್ಕೆ ಬಹುಮಾನ ಕೊಡಬಂದಿದ್ದಾರೆ ತಗೊಂಡು ನೀನು ಹುಟ್ಟಿದ್ದನ್ನ ಸಾರ್ಥಕ ಮಾಡಿಕೊ.

ಬೋಳೇಶಂಕರ : ನಮಸ್ಕಾರ ಸ್ವಾಮೀ.

ಮಂತ್ರಿ : ನಿಮ್ಮ ಸುದೈವಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಬೋಳೇಶಂಕರ : ಯಾಕೆ ಸ್ವಾಮೀ ಇಂಥಾ ದೊಡ್ಡ ಮಾತು?

ಮಂತ್ರಿ : ನೀವು ಕೊಟ್ಟ ಮದ್ದಿನಿಂದ ರಾಜಕುಮಾರಿಯ ಹೊಟ್ಟೆನೋವು ವಾಸಿಯಾದ್ದು ಮಾತ್ರವಲ್ಲ ನಿಮಗೇ ಅವಳನ್ನು ಕೊಟ್ಟು ಮದುವೆ ಮಾಡಿ, ರಾಜನನ್ನಾಗಿ ಮಾಡಬೇಕಂತ ರಾಜರು ತಮ್ಮ ತೀರ್ಮಾನವನ್ನ ಸಾರಿಬಿಟ್ಟಿದ್ದಾರೆ. ಬೇಗನೆ ಬಂದು ಸದರಿ ಪದವಿಗಳನ್ನ ನೀವು ಒಪ್ಪಿಕೋಬೇಕು.

ಕೋಡಂಗಿ : ನೀವು ನನ್ನನ್ನು ಹೊಗಳ್ತಿದ್ದೀರೋ, ತೆಗಳ್ತದ್ದೀರೊ?

ಬೋಳೇಶಂಕರ : ಇದು ಏಕಪಕ್ಷೀಯವಾದ ತೀರ್ಮಾನ, ಇದಕ್ಕೆ ನನ್ನ ಅನುಮತಿಯೂ ಬೇಕಲ್ಲವೆ?

ಮಂತ್ರಿ : ಇಷ್ಟು ಸುಂದರವಾದ ಕಾಣಿಕೆಗಳನ್ನು ಯಾರು ಬೇಡ ಅಂತಾರೆ ಸ್ವಾಮಿ?

ಬೋಳೇಶಂಕರ : ನಾನಂತೀನಲ್ಲ.

ಮಂತ್ರಿ : ಮಹಾರಾಜರಲ್ಲಿ ಹೀಗೆಂದು ಅರಿಕೆ ಮಾಡಿಕೊಳ್ಳಲ?

ಬೋಳೇಶಂಕರ : ದಯವಿಟ್ಟು. ನದಿಯನ್ನ ಬಂಧಿಸಲಾಗೋದಿಲ್ಲ. ಬಂಧಿಸದರೆ ನೀರಿಗೆ ಅದರದೇ ಆದ ನಿಯಮಗಳಿವೆ ಅಂತ ಹೇಳಿ.

ಮಂತ್ರಿ : ಆ ನಿಯಮಗಳು ಯಾವವು ಅಂತ ತಿಳಿಯಬಹುದೊ?

ಬೋಳೇಶಂಕರ : ನಾನು ರಾಜನಾದರೆ ರಾಜ್ಯದಲ್ಲಿ ಸೈನ್ಯ ಇರೋದಿಲ್ಲ. ತೆರಿಗೆಗಳು ಇರೋದಿಲ್ಲ. ನಾಣ್ಯಗಳು ಇರೋದಿಲ್ಲ. ರಾಜರಾಣಿಯರಿಂದ ಹಿಡಿದು ಎಲ್ಲರೂ ದುಡೀತಾರೆ. ಎಲ್ಲರೂ ಉಣ್ಣುತ್ತಾರೆ. ದುಡಿಯದ ಸೋಂಬೇರಿಗಳಿಗೆ ಖಂಡಿತ ಅವಕಾಶವಿಲ್ಲ.

ಕೋಡಂಗಿ : ಅಂದರೆ ನಾವು ಉಪವಾಸ ಸಾಯಬೇಕಂತಲ?

ಬೋಳೇಶಂಕರ : ಅದೇನಿದ್ದರೂ ದುಡಿದವರು, ಮುದುಕರು-ಮಕ್ಕಳು, ದುರ್ಬಲರು ಉಂಡಾದ ಮೇಲೆ ನಿಮ್ಮ ಸರದಿ.

ಕೋಡಂಗಿ : ನನಗೀಗ ನನ್ನ ಪೂರ್ವಜರೆಲ್ಲರ ಸಿಟ್ಟು ಬರತ್ತಾ ಇದೆ. ನೀನು ಹೊಸ ರಾಜನ ಹಾಗಲ್ಲ, ಕಟುಕನ ಹಾಗೆ ಕಾಣಿಸ್ತೀಯಪ.

ಮಂತ್ರಿ : ಅನ್ಯರ ದಾಳಿಗಳಿಂದ ಪ್ರಜೆಗಳಿಗೆ ರಕ್ಷಣೆ ಬೇಡವೆ?

ಬೋಳೇಶಂಕರ : ಬಂದವರು ಏನು ಕೊಳ್ಳೆ ಹೊಡೆಯುತ್ತಾರೆ? ಏನಾದರೂ ಸಂಗ್ರಹಿಸಿದ್ದರಲ್ಲವೆ? ವಿನಿಮಯ ಕೆಲಸದಿಂದಾದರೆ, ನಾಣ್ಯದ ಅಗತ್ಯವಿಲ್ಲ. ನಾಣ್ಯ ಇಲ್ಲ ಎಂದಾದರೆ ಸಂಗ್ರಹ ಬೇಕಿಲ್ಲ.

ಮಂತ್ರಿ : ಕಾನೂನು, ಅದರ ರಕ್ಷಣೆ….

ಬೋಳೇಶಂಕರ : ದಾರಿ ತಪ್ಪಿದವರಿಗೆ ಗಾದೆ ಬಲ್ಲವರು ಬುದ್ಧಿ ಹೇಳುತ್ತಾರೆ; ಸಾಲದೆ?

ಕೋಡಂಗಿ : ಇವತ್ತು ಭೂಮಿ ಆಕಾಶ ಎರಡೂ ಸರಿಯಿಲ್ಲ. ವಾಯು ಮಂಡಲ ಹ್ಯಾಗೆ ಹ್ಯಾಗೋ ಬೀಸುತ್ತಿದೆ.

ಮಂತ್ರಿ : ಜೀವನ ಪದ್ಧತಿ ಇಷ್ಟು ಸರಳವಾಗಿರೋದು ಸಾಧ್ಯವೇ?

ಬೋಳೇಶಂಕರ : ಈ ತನಕ ಅನೇಕ ಪದ್ಧತಿಗಳನ್ನು ನೋಡಿದೆವಲ್ಲ. ಅವೆಲ್ಲ ವಿಭಿನ್ನ ಶೈಲಿಯಲ್ಲಿ ಎಂಜಲು ತಿನ್ನೋದನ್ನ ಕಲಿಸಿದವು, ಅಷ್ಟೆ. ಇದಕ್ಕಿಂತ ಸರಳ ಮತ್ತು ಉಪಯುಕ್ತ ಪದ್ಧತಿಗಳಿದ್ದಾವು. ಅದೇನಿದ್ದರೂ ಈ ವಿಧಾನದ ಮೂಲಕ ತಿಳಿಯಬೇಕಷ್ಟೆ. ಇದನ್ನ ಪ್ರಯೋಗಿಸಬೇಕಾದ ವಿಧಾನವೆಂದಾದರೂ ತಿಳಿಯಲಿ.

ಮಂತ್ರಿ : ಯಾವುದನ್ನೂ ಮಹಾರಾಜರಲ್ಲಿ ಅರಿಕೆ ಮಾಡುತ್ತೇನಪ್ಪ.

ಕೋಡಂಗಿ : ನೋಡಿ ಸ್ವಾಮೀ, ನಿಜ ಹೇಳಬೇಕಂದರೆ ಬೋಳೇಶಂಕರ ಈ ಮಾತುಗಳನ್ನು ಹೇಳಿರೋದು ಕೇವಲ ದೇಶಪ್ರೇಮದಿಂದ. ಅವನ ಹಾಗೆ ಈ ದೇಶವನ್ನು ಪ್ರೀತಿಸುವವರು ಇನ್ನೊಬ್ಬರಿಲ್ಲ. ಈ ದೇಶದಲ್ಲಿರೋ ಹೊಲಸುಕೂಡ ಚಂದ. ಇಷ್ಟು ಚಂದವಾದ ಹೊಲಸು ಬೇರೆಲ್ಲೂ ಇಲ್ಲ ಅಂತ ಅವನೇ ಹೇಳಿದ್ದು. ಆದ್ದರಿಂದ ರಾಜನೆದುರಿಗೆ ಹೇಳೋವಾಗ ಕೇವಲ ದೇಶಪ್ರೇಮದಿಂದ ಪ್ರೇರಿತನಾಗಿ ಹೇಳಿದ್ದು, ಅನ್ಯಥಾ ಭಾವಿಸಬೇಡಿ ಅಂತ ಸ್ವಲ್ಪ ಸಾರಿಸಿ ಹೇಳಿ.

ಮಂತ್ರಿ : ಆಗಲಪ್ಪ (ಹೋಗುವನು)

ಬೋಳೇಶಂಕರ : ಅಯ್ಯೋ ಕೋಡಂಗಿ, ಯಾಕೆ ಹೀಗೆ ತಬ್ಬಿಬ್ಬಾಗಿ ನಿಂತೆ? ವಸಂತೋತ್ಸವ ಬಂದಿದೆ. ನಮಗೆ ಲಭ್ಯವಾಗಿರೊ ಮಜಕೂರುಗಳನ್ನು ಮಕ್ಕಳಿಗೆ, ಹುಡಿಗೇರಿಗೆ ತೋರಿಸಿ ಸಂತೋಷಪಡೋಣ ನಡಿಯಯ್ಯಾ ಅಂದರೆ….

ಕೋಡಂಗಿ : ನಿಜ ನಿಜ. ನಾವು ಹಾಡೋದಕ್ಕೆ ಬೇಕಾದಷ್ಟು ಕಾರಣಗಳಿವೆ. ರಾಜರು ಕೊಡಲಿ, ಬಿಡಲಿ ಮಗಳನ್ನು ಕೊಡತೇನೆ ಅಂತ ಅಂದರಲ್ಲ; ಅದೇನು ಸಾಮಾನ್ಯವಾದ ಮಾತೆ? ಆ ಒಂದು ಮಾತಿಗೇ ಸಾವಿರ ಬಾರಿ ಲಾಗಹಾಕ ಬೇಕು. ನೀನು ಹುಲ್ಲು ತಗೊಂಬಾ; ನಾನು ಧಾನ್ಯ ತರುತ್ತೇನೆ. ಅಲ್ಲೀತನಕ ಭಾಗವತರೇ ಸಿಟಿಯ ಕಗ್ಗತ್ತಲೆಯಿಂದ ಪಾರಾಗಲು ಯತ್ನಸಿದವರ ಹಾಡನ್ನು ಹೇಳಿ

(ಇಬ್ಬರೂ ಹೋಗುವರು)