ಭಾಗವತ : ತಾಯಿ ಭಾರತಮಾತೆ ಜಯಜಯಾ ಎಂದು
ಕೂಗಿದೆವು ಗಾಂಧಿಗೂ ಜಯವಾಗಲೆಂದು
ಆತ್ಮವಿಲ್ಲದ ಸಿಟಿಯ ಮಧ್ಯದಲ್ಲಿ ಬಂದು
ಕೊಳೆ ಚರಂಡಿಯ ಕೊಚ್ಚೆ ನೀರಿನಲ್ಲಿಳಿದು
ತಡವರಿಸಿ ದೌಡಾಯಿಸುತ್ತ ದಂಡೆ
ಸಾಧ್ಯವಾದರೆ ಬೇಗ ಸೇರಬೇಕೆಂದೇ
ಬಿಸಿಲು ಬೆಳಗುವ ಹಸಿರ ಸಿರಿನಾಡ ಸೀಮೆ
ಸಿಗಲೆಂದು ಹಾರೈಸಿ ಕನಸುಗಳ ನಾಡೆ
ಕೂಗಿದೆವು ಗಾಂಧಿಗೂ ಜಯವಾಗಲೆಂದು
ತಾಯಿ ಭಾರತ ಮಾತೆ ಜಯಜಯಾ ಎಂದು.

ನಕ್ಷತ್ರ ಇರಲಿಲ್ಲ ಆಕಾಶದಲ್ಲಿ
ಎಷ್ಟೂ ಬೆಳಕಿರಲಿಲ್ಲ ಇಡಿ ಸೀಮೆಯಲ್ಲಿ
ಆಸೆ ಇದ್ದಿರಲಿಲ್ಲ ನಮ್ಮ ಕಣ್ಣಲ್ಲಿ
ಕತ್ತು ಸಹ ಮುಳುಗಿತ್ತು ಕರಿ ನೀರಿನಲ್ಲಿ
ನೆಲೆಯ ಕಾಣಿಸಲಿಲ್ಲ ಗಟ್ಟಿ ನೆಲ ಕುಸಿದು
ಈಜಿದೆವು ಬೆಳಕಿರುವ ಸೀಮೆ ಸಿಗಲೆಂದು
ಆತನಕ ಮೈಯಲ್ಲಿ ಬಲವು ಬರಲೆಂದು
ಕೂಗಿದೆವು ಗಾಂಧಿಗೂ ಜಯವಾಗಲೆಂದೇ.

ಯಾರಿಗಾದರೂ ನಮ್ಮ ದನಿ ಕೇಳಲೆಂದು
ಹುಲ್ಲು ಕಡ್ಡಿಯನೊಂದ ಎಸೆಯಬಹುದೆಂದು
ಈಜಿದೆವು ಸಿಟ್ಟಿದೈವ ಕಾಪಾಡಲೆಂದು
ಕಣ್ಣೀರು ನೀರುಗಳ ಬೆರಸಿ ಹಾಡಿದೆವುದ
ದಿಕ್ಕಿಗೂ ನಮ್ಮ ದನಿ ಕೇಳಿಸಲೆ ಇಲ್ಲ
ಆಚೆದಂಡೆಗಳು, ನೀರು, ಬೆಳಕಿಗೂ ಇಲ್ಲ
ನಮ್ಮ ದನಿ ನಮಗೇನೆ ಬಂತು ತಿರುತಿರುಗಿ
ಕರಿನೀರ ತೆರೆಯ ಜತೆ ಕಿವಿಗೆ ಅಪ್ಪಳಿಸಿ
ಮ್ಯಾಲೆ ಹೊಂಚಿದ ಮೋಡ ಇದೆ ಸಮಯವೆಂದು
ಕರಿನೀರ ಆಳಗಲ ಹೆಚ್ಚಿಸಿತು ಸುರಿದು
ಆಳಕ್ಕೆ ಬೀಳಲಿದೆ ನೀರು ಸನಿಹದಲೆ
ಅಲ್ಲಿ ಮುಗಿವುದು ನಮ್ಮ ಈಜು ಇಷ್ಟರಲೆ
ಹಾಡಲಿರುವುದು ಭಂಡ ಗಾಳಿ ಹಾಡನ್ನು
ನಮ್ಮ ಪಾಲಿಗೆ ಬೆಳಕು ಇನ್ನಿಲ್ಲವೆಂದು
ಆಯ್ತು. ಬೆಳಗಿನ ನಿಮ್ಮ ರೇಡಿಯೋದಲ್ಲಿ
ಕೇಳಿ ನಲಿಯಿರಿ ನಾವು ಮುಳುಗಿರುವ ಗೀತೆ.

(ಹಾಡು ಮುಗಿಯುವುದರೊಳಗೆ ಬೋಳೇಶಂಕರ ಬಂದಿದ್ದಾನೆ. ಮಕ್ಕಳು ಹುಡುಗ ಹುಡುಗಿಯರೂ ಸೇರುತ್ತಿದ್ದಾರೆ. ಕೋಡಂಗಿಯೂ ಬರುತ್ತಾನೆ.)

ಕೋಡಂಗಿ : ನನ್ನ ದುರ್ದೈವ ಮತ್ತು ನಿನನ್ನ ಸುದೈವ ಎರಡಕ್ಕೂ ಧಿಕ್ಕಾರ. ಅಯ್ಯಾ ಮಿತ್ರ, ಅಗೋ ಆ ಮುದಿಮಂತ್ರಿ ಪುನಃ ಬಂದು ಕರೀತಿದಾನೆ.

ಬೋಳೇಶಂಕರ : ಯಾಕಂತೆ ಹೋಗಿ ಕೇಳು.
(ಹೋಗಿ ಬಂದು)

ಕೋಡಂಗಿ : ಅಂತಾನೆ; ನೀನು ಕಟುಕನಲ್ಲ ನಿಜ, ಆದರೆ ನಾವಂತೂ ಕುರಿಗಳು, ನೀನು ಕೊನೇಪಕ್ಷ ಕುರುಬನಾದರೂ ಆಗಲೇಬೇಕಂತೆ.

ಬೋಳೇಶಂಕರ : ಯೋ, ಅದೇನು ಸರಿಯಾಗಿ ಬೊಗಳಯ್ಯಾ.
(ಮಂತ್ರಿ, ರಾಜಕುಮಾರಿ, ಒಬ್ಬ ಸೇವಕಿಯ ಜೊತೆ ಬರುವರು)

ಕೋಡಂಗಿ : ನಿನ್ನ ಷರತ್ತಿಗೆ ಮಹಾರಾಜರ ಒಪ್ಪಿಗೆ ಇದೆಯಂತೆ. ರಾಜಕುಮಾರಿ ನಿನ್ನ ಧಡ್ಡತನವನ್ನು ಮನಸಾರೆ ಮೆಚ್ಚಿ ಹುಡುಗಿಯರ ಜೊತೆ ಹಾಡೋದಕ್ಕೆ ಬಂದಿದ್ದಾಳೆ ಬಾ.

ಮಂತ್ರಿ : ಹೌದು ಮಹಾರಾಜ.

ಬೋಳೇಶಂಕರ : ಹಾಗೇ ಆಗಲೇಳು. ಶಿವನ ಇಚ್ಛೆ ಇದ್ದ ಹಾಗಾಗಲಿ.

ಕೋಡಂಗಿ : ಲೇ ಚಿಳ್ಳೆಗಳ್ರಾ, ಪಿಳ್ಳೆಗಳ್ರಾ, ಹುಡಿಗೀರಾ – ಬೆಪ್ತಕ್ಕಡಿ ಬೋಳೇಶಂಕರ ಮಹಾರಾಜನಿಗೆ ಜಯವಾಗಲಿ ಅನ್ನಿ. ಇನ್ನು ಮೇಲೆ ಬೋಳೇಶಂಕರನೇ ಈ ದೇಶದ ಮಹಾರಾಜ. ರಾಜಕುಮಾರಿ ಜೊತೆ ಮದುವೆ ಆಗಲಿದ್ದಾನೆ. ನಂಬಿಕೆ ಇಲ್ಲದಿದ್ದರೆ ಇಕೋ ಮಂತ್ರಿಗಳು ಬಂದಿದ್ದಾರೆ, ಕೇಳಿ ಖಾತ್ರಿ ಮಾಡಿಕೊಳ್ಳಿ. ಅಲ್ಲವೇ ಮಂತ್ರಿಗಳೇ? ಅಲ್ಲವೆ ರಾಜಕುಮಾರಿ?
(ರಾಜಕುಮಾರಿ ನಾಚುವಳು)

ಮಂತ್ರಿ : ಹೌದು ಹೌದು.

ಕೋಡಂಗಿ : ಹುಡಿಗೇರು ಈಗ ಹಾಡಿ ಮಡ್ಡಿ ಸುಬ್ಬಿ ಎಮ್ಮೆಯಂಥಾ ಸರಸಿ, ಕಾಗೆದನಿ ಬಾಗಿರ್ತಿ ಹಾಡೋದಿಲ್ಲವೇ?
ಹಾಡು ಹೇಳೋದಿಲ್ಲವೇ?

ಬೋಳೇಶಂಕರ : ಕೋಡಂಗೀನ್ನ ನೋಡಿ ನಗೋದಿಲ್ಲವೆ?

ಕೋಡಂಗಿ : ಪಿಶಾಚಿಗಳು ಹೆದರಿದ ಹಾಗೆ ಇವರೂ ನನಗೆ ಹೆದರುತ್ತಾರೋ ಏನೊ. ಹೆದರಬೇಡಿ ನಾ ನಿಮ್ಮನ್ನ ತಿನ್ನೋದಿಲ್ಲ. ರಾತ್ರಿ ಕನಸಲ್ಲಿ ಬಂದು ಹೆದರಿಸೋದಿಲ್ಲ.

ಬೋಳೇಶಂಕರ : ನನ್ನ ಹಾಗೆ ದನಿ ಏರಿಸಿ
ಪದ ಪಲ್ಲವಿ ಚರಣ ಸಮೇತ
ಹಾಡು ಒದರಮ್ಮಾ, ನಿಂಗಿ
ಹಾಡು ಒರಲಮ್ಮಾ

ಹುಡುಗಿ ೧ : ಆಸೆಯೇನೋ ಭಾರಿ ಐತಿ
ಹಾಡಬೇಕಂತ
ಬಾಯಿ ತೆರೆದರೆ ದನಿಯೇ ಭರದು
ನಾಲಗಿ ಬಂತಷ್ಟೆ.

ಕೋಡಂಗಿ : ಹಾಡೋನಿದ್ದೀನಿ ಹಾಕ್ಕೊಳ್ರಯ್ಯಾ
ಕಿವಿ ತುಂಬಾ ಹತ್ತಿ
ಕುಣಿಯೋನಿದ್ದೀನಿ ಮುಚ್ಚಿಕೊಳ್ರಯ್ಯಾ
ಎರಡೂ ಕಣ್ ರೆಪ್ಪಿ.

ಬೋಳೇಶಂಕರ : ಲೇ ಹುಡಿಗೇರಾ,
ಹೊಗಲಿ ಹಾಡಿದರೆ ನೀವು ನನ್ನನ್ನ
ಕೋಡುತೀನಿ ಅದ್ಭುತ ಬಹುಮಾನವನ್ನ.

ಕೋಡಂಗಿ : ನೀವೆಂದೂ ಇಂಥಾದ್ದು ಕಂಡಿಲ್ಲ ಹಿಂದೆ.
ಕಾಣೋದೂ ಇಲ್ಲ ಇನ್ನಿಂಥಾದ್ದು ಮುಂದೆ

ಹುಡುಗಿ ೨ : ನಮ್ಮ ದೇವರ ವಿಷಯ ನಮಗೆ
ಗೊತ್ತಿಲ್ಲವೆ?
ಬೆಪ್ತಕ್ಕಡಿ ಬಹುಮಾನವನ್ನ
ಕೊಡಬಹುದೆ

ಬೋಳೇಶಂಕರ : ಹಾಡಿ ನೋಡೆ ಹುಡುಗಿ ಆಮೇಲಿನಿಂದ
ಹುಡುಗಿ ಚಂದಿದ್ದರೆ ಹಾಡು ಸಹ ಚಂದ.

ಹುಡಗಿ ೨ : ಹಾಡಿದ ಮೇಲೆ ಬಹುಮಾನ
ಇಲ್ಲಾ ಅನಬಾರದು

ಬೋಳೇಶಂಕರ : ಅನ್ನೋದಿಲ್ಲ.

ಹುಡುಗಿ ೩ : ಬಹುಮಾನ ತೋರಿಸ್ತೀಯ? ಕೊಡತೀಯಾ?

ಕೋಡಂಗಿ : ತೋರಿಸ್ತೀವಿ, ಕೊಡತೀವಿ.
ಆದರೆ ಹಾಡು ಚೆನ್ನಾಗಿರಲಿ ಸೈರನ್ನಿಗಿಂತ.

ಹುಡುಗಿಯರು : ಬರೇ ಮೇಳ ಹೇಳ್ರಿ |
ಬೋಳೇಶಂಕರ ಶಿವ |
ಬೆಪ್ತಕ್ಕಡಿ ಸದಾಶಿವ |
ಅವ್ ನೋಡ ಶೂರ
ಸೀಮೆ ಸರದಾರ
ಹಾಡಿನ ಒಡೆಯಾ ಬಾರಯ್ಯಾ ||

ಉಲ್ಲಾಸ ಚೆಲ್ಲವನೆ
ಚಿಂತೆ ಜಾಲಡುವನೆ
ಶಿವ ಶಿವ ಎಂಬರು
ಎದ್ದರು ಕೂತರು
ಊರಿನ ಜನ ದನ ಎಲ್ಲಾರು ||

ಕಲ್ಲಿಗೆ ಕಲ್ಲಂತ
ಹೇಳಿದ ಸತ್ಯವಂತ
ಹುಲ್ಲಿನ ಪೆಂಟಿ
ಚಿನ್ನದ ಗಟ್ಟಿ
ಹುಲ್ಲೇನೆ ಮಿಗಿಲಂತ ಆಯ್ದನಗೆ ||

ಅವ್ವ ಎಲ್ಲರಿಗಿಂತ
ದೊಡ್ಡ ತಲೆಯಾತ
ಎಡ ಯಾವುದಂತ
ಬಲ ಯಾವುದಂತ
ತೋರಿದ ಮೊದಲನೆ ಬುದ್ಧಿವಂತ ||

ಬೋಳೇಶಂಕರ : ಹೊಗಳಿದ್ದಕ್ಕೆ ವಂದನೆಗಳು. ಆದರೂ ನಿನ್ನ ಹಾಡು ಚೆನ್ನಾಗಿರಲಿಲ್ಲಮ್ಮ.

ಹುಡುಗಿ ೧ : ಅದೆಲ್ಲಾ ಕೇಳೋದಿಲ್ಲಾ. ನೀನೀಗ ಬಹುಮಾನ ಕೊಡಲೇಬೇಕು.

ಬೋಳೇಶಂಕರ : ಎಷ್ಟು ಚೆನ್ನಾಗಿ ಕೆಟ್ಟ ಹಾಡು ಹಾಡಿದಿರಿ ಅಂತ ಬಹುಮಾನ ಕೊಡಬೇಕ?

ಹುಡುಗಿ ೧ : ಹಾಗಂತ ಹೇಳಲಿಲ್ಲವ ನೀನು?

ಬೋಳೇಶಂಕರ : ಕೋಡಂಗೀ, ಜೋಳದ ಚೀಲ ಎಲ್ಲಿಟ್ಟೆ?

ಕೋಡಂಗಿ : ಇಲ್ಲಿದೆ.

ಬೋಳೇಶಂಕರ : ಆಯ್ತು ಬಹುಮಾನ ಕೊಡ್ತೇನೆ. ಎಲ್ರೂ ಕಣ್ಣು ಮುಚ್ಚಿಕೊಳ್ಳಿ ನೋಡೋಣ. ನಾನು ಹೇಳೋತನಕ ಯಾರೂ ತಪ್ಪಿ ಕೂಡ ಕಣ್ಣು ಬಿಡಬಾರದು.

ಎಲ್ಲರೂ :  ಮುಚ್ಚಿಕೊಂಡಿವೆ.

ಬೋಳೇಶಂಕರ : ಕೋಡಂಗಿ ಹತ್ತೆಣಿಸುತ್ತಾನೆ. ಎಣಿಸಿದ ಮೇಲೇ ಕಣ್ಣು ಬಿಡಬೇಕು.
(ಬೋಳದ ಚೀಲದ ಹತ್ತಿರ ಹುಡಿಗೇರು, ಮಕ್ಕಳ ಕಡೆಗೆ ಬೆನ್ನು ತಿರುಗಿಸಿ ನಿಂತು ಮಂತ್ರ ಹಾಕುತ್ತಾನೆ.)

ಕೋಡಂಗಿ : ಒಂದು, ಎರಡು…. ಮೂರು…. ನಾಲ್ಕು ನೋಡಿ ನೋಡಿ ಆ ಬೆಕ್ಕಿನ ಕಣ್ಣಿನ ಬಾಗಿರ್ತಿ ಕಣ್ಣು ತೆರೆದಳು. ಇದಾಗೋದಿಲ್ಲ. ಪುನಃ ಎಣಿಸ್ತೇನೆ, ಒಂದು ಎರಡು ಮೂರು …. ನಾಲ್ಕು ಐದು ಆರು ಏಳು ಎಂಟು ಒಂಬತ್ತೋ …. ಹತ್ತೋ!

ಬೋಳೇಶಂಕರ : ಎಲ್ಲಿ, ಕಣ್ಣು ತೆಗೀರಿ.
(ಚಿನ್ನದ ನಾಣ್ಯಗಳನ್ನು ಎಸೆಯುವನು. ಎಲ್ಲರೂ ಚಕಿತರಾಗಿ ಗಲಾಟೆ ಮಾಡುತ್ತ ನನಗೆ ತನಗೆ ಎಂದು ಆಯ್ದುಕೊಳ್ಳುವರು. ಇನ್ನಷ್ಟು ಮತ್ತಷ್ಟು ಎಸೆಯುವರು. ಮತ್ತೂ ಆನಂದದಿಂದ ಆಯುವರು.)

ಹುಡುಗಿ ೧ : ಬೆಪ್ತಕ್ಕಡಿ ನನಗೆ ಇನ್ನೆರಡು ಎಸೆಯಣ್ಣ.

ಹುಡುಗಿ ೩ : ನನಗೆರಡು.

ಹುಡುಗಿ ೪ : ನನಗೆರಡೇ ಎರಡು ಕೊಟ್ಟು ಬಿಡು.

ಬೋಳೇಶಂಕರ : ನನ್ನ ಹತ್ತಿರ ಇನ್ನೇನೂ ಉಳಿದಿಲ್ಲ. ಇನ್ನೊಂದು ಸಲ ಇನ್ನಷ್ಟು ಕೊಡತೀನಿ. ಈಗ ಕುಣಿಯೋಣ. ನಿಮ್ಮ ಹಾಡು ಹೇಳಿ.

ಹುಡುಗಿ ೨ : ನಮ್ಮ ಹಾಡು ಚೆನ್ನಾಗಿಲ್ಲ ಅಂತೀಯಾ. ನಮಗಿಂತ ಚೆನ್ನಾಗಿ ಯಾರು ಹಾಡ್ತಾರೆ ತೋರಿಸು ನೋಡೋಣ.

ಬೋಳೇಶಂಕರ : ತೋರಿಸಲ? ಇರು ಹಾಗಾದರೆ. ಕೋಡಂಗೀ ಹುಲ್ಲಿನ ಹೊರೆ ಎಲ್ಲಿಟ್ಟೆ?

ಕೋಡಂಗಿ : ಅಕೋ ಆ ಗೋಡೆ ಹಿಂದೆ.

ಬೋಳೇಶಂಕರ : ಸರಿ ಹಾಗಾದರೆ. ಎಲ್ಲಿ ಎಲ್ಲರೂ ಕಣ್ಣು ಮುಚ್ಚಿ ನೋಡೋಣ. ಕೋಡಂಗೀ ನೀ ಹತ್ತರತನಕ ಎಣಿಸು.

ಕೋಡಂಗಿ : ಒಂದು ಎರಡು ಮೂರು ನಾಲ್ಕು
ಐದು ಆರು ಏಳು ಎಂಟು
ಒಂದೆರಡ್ಮೂರನ್ನಾಲ್ಕ್
ಐದಾರೇಳೆಂಟ್
ಒಂಬತ್ತು ಹತ್ತು.
(ಗೋಡೆಯ ಮರೆಯಿಂದ ಹಾಡು ಕೇಳಿಸತೊಡಗುವುದು, ಬಂದೂಕು ಧಾರಿ ಸಿಪಾಯಿಗಳು ಸಾಲಾಗಿ ಹಾಡುತ್ತ ಬರುವರು. ಸಿಪಾಯಿಗಳು ಹಾಡುತ್ತ ಕವಾಯತು ಮಾಡುವರು.)

ಸೈನಿಕರು : ಜಯವು ನಮ್ಮ ಕೋವಿಗೆ
ದೇವರಂಥ ಕೋವಿಗೆ
ವಿಜಯಲಕ್ಷ್ಮಿ ಒಲಿದು ಬರಲಿ ನಮ್ಮ ಕೋವಿಗೆ
ನುಗ್ಗಿ ನಡೆವ ಒದ್ದು ನಡೆವ ಕುಣಿವ ಕೋವಿಗೆ
ಕೆಂಪು ಭಾಷೆಯಾಡುವೆಮ್ಮ ಕರಿಯ ಕೋವಿಗೆ
ಗುಂಡು ಮಳೆಯ ಸುರಿಸಿ ಶಾಂತಿ ಬೆಳೆವ ಕೋವಿಗೆ
ಸಿಡಿವುದಕ್ಕೆ ತಾರೆಗಳಿಗೆ 
ಹಾಡಲಿಕ್ಕೆ ಸೈರನ್ನಿಗೆ
ಒದೆವ ಕಾಲ ನೆಕ್ಕುವಂಥ ನಾಯಿ ವಿದ್ಯೆ ಕಲಿಸುವ
ಕೋವಿಗೆ ಜಯವಾಗಲೆಂದು ಬನ್ನಿ ಬನ್ನಿ ಹೇಳುವ.

ಬೋಳೇಶಂಕರ : ನನ್ನ ಮಕ್ಕಳ್ರಾ, ಕೋವಿಗೆ ಜಯವಾಗಲಿ ಅಂತ ಹಾಡ್ತೀರಲ್ಲ. ಬುದ್ಧಿ ಇದೆಯ ನಿಮಗೆ? ಇನ್ನು ಬೇರೆ ಹಾಡಿಲ್ಲವ ನಿಮ್ಮ ಹತ್ತಿರ.
ಸೈನಿಕ : ಸಿಟಿ ಬಗ್ಗೆ ಒಂದು ಹಾಡಿದೆ, ಹೇಳೋಣವೆ?

ಬೋಳೇಶಂಕರ : ಹೇಳಿ.

ಸೈನಿಕರು : ಮಿಲ್ಲಿನ ಹೊಗೆ ದಟ್ಟೈಸಿದೆ ಬಾನ್ನೀಲಿಯ ತುಂಬ
ಸೈರನ್ನಿನ ದನಿ ತುಂಬಿದೆ ಎಳೆ ಕಿವಿಗಳ ತುಂಬ.
ಕೊಳೆಗೇರಿಯ ಕೊಚ್ಚೆಯಲ್ಲಿ ತೇಲಾಡಿ ಮಕ್ಕಳು
ಆಲದೆಲೆಯ ಮೇಲಾಡುವ ಕ್ಯಾಲೆಂಡರ ಕೃಷ್ಣರು.
ತಂಬೆಲರಿನ ತುಂಬಾ ಇದೆ ಪೆಟ್ರೋಲಿನ ನಾತ
ವಾಹನಗಳ ತುಟಿತುಟಿಯಲಿ ತುಳುಕಿದೆ ನವನೀತ.
ಕಪ್ಪಾಗಿವೆ ಕುಂಡದ ಗಿಡಬಳ್ಳಿಯ ಎಲೆ ಹೂವು
ಲಾಲ್ ಬಾಗಿನ ತರುಲತೆಯಲಿ ಅರಳಿರುವವು ನೋವು.

ಬೋಳೇಶಂಕರ : ಯೋ ದರಿದ್ರ ನನ್ನ ಮಕ್ಕಳ್ರಾ, ನಮ್ಮೂರು ಶಿವಾಪುರದ ಬಗ್ಗೆ ಹಾಡು ಹೇಳ್ರಯ್ಯಾ ಅಂದರೆ,

ಸೈನಿಕ : ನಮಗೆ ಗೊತ್ತಿಲ್ಲ.

ಬೋಳೇಶಂಕರ : ಹಾಗಿದ್ದರೆ ನಾ ಹೇಳಿದ ಹಾಗೆ ಹೇಳಿ.

ಬೋಳೇಶಂಕರ : ಜಯ ಜಯಾ ಶಿವಪೂರಿಗೆ
ಹಸಿರಿನ ತವರೂರಿಗೆ
ಹಾಡು ಬೆಳೆವ ಕಾಡಿಗೆ
ನಮ್ಮ ಛಳಿಗೆ ಬಿಸಿಯಾಗುವ
ಕಣ್ಣುಗಳಿಗೆ ಕನಸು ಕೊಡುವ
ಯೌವನವನು ಕಾಪಾಡುವ
ಮುಳ್ಳಿನಲ್ಲು ಹೂಹೂಗಳ ನಗೆಯ ನಗುವ ಸೀಮೆಗೆ
ಜಯ ಜಯ ಶಿವಪೂರಿಗೆ ||

ಹಕ್ಕಿಯ ಸಖಿಗೀತಗಳಿಗೆ
ರಾಗ ತಾಳ ಹಾಕಿ ಕುಣಿವ
ಎಳೆಯರಿರುವ ಊರಿಗೆ.
ನೀರಿಗಿಂತ ಆಳವಾದ
ಒಲವ ಬಲ್ಲ ಸೀಮೆಗೆ.
ನೀರಿನಲ್ಲಿ ಮೀನ ಹೆಜ್ಜೆ
ಗುರುತು ಹಿಡಿವರೂರಿಗೆ.
ಸುಕ್ಕಿನ ಗೆರೆ ಸಾಣೆ ಹಿಡಿವ
ಜಾಣ ಮುದುಕರೂರಿಗೆ.
ಆಳದಲ್ಲಿ ಲಾವಣಿಗಳನುಳ್ಳ
ನದಿಯ ಊರಿಗೆ.
ಋತುಮಾನದ ಪೈರು ಬೆಳೆವ
ದಂಟಿಗೆಂಟು ತೆನೆಗಳಿರುವ
ತೆನೆಗೆ ಒಂದು ಹಾಡುವಂಥ
ಹಕ್ಕಿಯಿರುವ ಊರಿಗೆ.
ಜಯ ಜಯ ಶಿವಪೂರಿಗೆ ||

ಬೋಳೇಶಂಕರ : ಕೋಡಂಗಿ, ಊರ ತುಂಬ ಇವರ ಮೆರವಣಿಗೆ ಮಾಡಿಸು. ಊರಲ್ಲಿರೋ ಮಕ್ಕಳೂ ಹೆಂಗಸರೂ ನೋಡಲಿ. ಆಮೇಲೆ ತೋಟದ ಹತ್ತಿರ ಕರೆದುಕೊಂಡು ಬಾ. ತಿಳಿಯಿತೊ?

ಕೋಡಂಗಿ : ಆಯ್ತು.
(ಸೈನಿಕರು ಹಾಡುತ್ತ ಕೋಡಂಗಿಯ ಬೆನ್ನು ಹತ್ತುವರು.)