(ಕೆಲಸದಲ್ಲಿ ತೊಡಗಿರುವ ಬೋಳೇಶಂಕರನಲ್ಲಿಗೆ ಸಾವ್ಕಾರ ಓಡಿ ಬರುತ್ತಾನೆ)

ಸಾವ್ಕಾರ : ಬೋಳೇಶಂಕರಾ, ಬೋಳೇಶಂಕರಾ, ಎಂಥ ಕೆಲಸ ಮಾಡಿದೆ? ಬೇಜವಾಬ್ದಾರೀ ಹುಡಿಗೇರಿಗೆ ಆಡೋ ಮಕ್ಕಳಿಗೆ ಚಿನ್ನದ ನಾಣ್ಯ ಕೊಟ್ಟೆಯಂತಲ್ಲ. ನನಗೇ ಕೊಡಬಾರದಿತ್ತೆ? ನನಗೆ ತುಸು ಹಣ ಸಿಕ್ಕಿದ್ದರೆ ವ್ಯಾಪಾರ ಮಾಡಿ ಅದು ಪ್ರಪಂಚದ ಮೂಲೆ ಮೂಲೆಯಲ್ಲಿ ಚಿನ್ನದ ಮೊಟ್ಟೆಯಿಡೋ ಹಾಗೆ ಮಾಡ್ತಿದ್ದೆ.

ಬೋಳೇಶಂಕರ : ಅದಕ್ಕೇನಂತೆ ಹಾಗೇ ಆಗಲೇಳು. ನಿನಗೀಗಲೂ ನಾನು ಚಿನ್ನದ ನಾಣ್ಯ ಕೊಡಬಲ್ಲೆ. ಆದರೆ ಧಾನ್ಯದಿಂದ ನಾಣ್ಯ ಮಾಡಬೇಕಾಗುತ್ತೆ, ಪರವಾ ಇಲ್ಲವ?

ಡಬ್ಬು : ಯಾಕಿರುತ್ತೆ ಬಿಲ್ ಕುಲ್ ಪರವಾ ಇಲ್ಲ ಮಾರಾಯಾ.

ಬೋಳೇಶಂಕರ : ನನ್ನ ಹತ್ತಿರ ಧಾನ್ಯ ಹೆಚ್ಚಿಗಿಲ್ಲವಲ್ಲ, ಎಷ್ಟು ಬೇಕೀಗ?

ಡಬ್ಬು : ಒಂದೆರಡು ಚೀಲವಾದರೂ ಬೇಕು.

ಬೋಳೇಶಂಕರ : ಹಾಗೇ ಆಗಲೇಳು. (ಧಾನ್ಯದ ಚೀಲದ ಹತ್ತಿರ ನಿಂತು)

ಹಂಡೋಲ್ ಬಂಡೋಲ್ ಚಿಗರಿ
ಚಿಕಲಕ ಬಕಲಕ
ಸಾಲಕುದರಿ ಹನುಮಂತರಾಯಾ
ಧಾನ್ಯವೆಲ್ಲಾ ನಾಣ್ಯವಾಗ್ಲಿ
ನಾಣ್ಯವೆಲ್ಲಾ ಚಿನ್ನಾ ಆಗ್ಲಿ
ಬಚ್ಚಾಬೋಲ್
ಬೋಲಾತಿಬೋಲ್ ಹ್ರಾಂ ಲಂಗೋಟಿ ಕೋಲ್.

ಡಬ್ಬು : ಅಬ್ಬ! ಇದೆಲ್ಲಾ ಅಸಲಿ ಚಿನ್ನ ಏನಪ್ಪಾ?

ಬೋಳೇಶಂಕರ : ನೀನೇ ನೋಡಿಕೊಳ್ಳಣ್ಣಾ.

ಡಬ್ಬು : ಕಣ್ಣುಗಳನ್ನೇ ನಂಬಲಿಕ್ಕಾಗುತ್ತಿಲ್ಲ. ಅಬ್ಬಬ್ಬ ಅಸಲೀ ಚಿನ್ನದ ನಾಣ್ಯಗಳು!

ಬೋಳೇಶಂಕರ : ಈ ಚಿನ್ನದಿಂದ ತಿರಗಾ ಧಾನ್ಯ ಮಾಡಬೇಕಾದರೆ-

ಡಬ್ಬು : ಬೇಡಬೇಡ. ಚಿನ್ನ ಸಾಕನ್ನೋದುಂಟೆ?

ಬೋಳೇಶಂಕರ : ಹೌದು, ಚಿನ್ನ ತಿಂದು ಬದುಕಲಾಗುತ್ತ?

ಡಬ್ಬು : ಇಲ್ಲ. ಹಾಗಂತ ಮಣ್ಣು ತಿಂದೂ ಬದುಕಲಾಗೋದಿಲ್ಲ ತಮ್ಮ. ಚಿನ್ನ ಅಂದರೆ ಏನಂದುಕೊಂಡೆ-
ಚಿನ್ನವ ಹೊಗಳಯ್ಯಾ ನಾಣ್ಯವ ಹೊಗಳಯ್ಯಾ
ಜಗದಲಿ ಚಿನ್ನವೇ ಮಿಗಿಲೆಂದು ಹೊಗಳು.
ಹೊಗಳುದಕೆ ನಾಲಗೆ ಏಳದಿದ್ದರೆ ಬಾಯಿ
ಮುಚ್ಚಿಕೊಂಡಿರುವುದೆ ಮಿಗಿಲೆಂದು ಹೇಳು
ಎರಡೆರಡು ಸೇರಿದರೆ ಎಷ್ಟಾಯ್ತಪ್ಪ?

ಬೋಳೇಶಂಕರ : ನಾಲ್ಕು

ಡಬ್ಬು : ತಪ್ಪು
ಎರಡೆರಡು ಸೇರಿದರೆ ಏಳೆಂಟು ಆಗುವ
ಅದ್ಭುತಕೆ ತಲೆಬಾಗಿ ಬಾಯ್ತುಂಬ ಹೊಗಳು.
ಹೊಗಳುದಕೆ ನಾಲಗೆ ಏಳದಿದ್ದರೆ ಬಾಯಿ
ಮುಚ್ಚಿಕೊಂಡಿರುವುದೆ ಮಿಗಿಲೆಂದು ಹೇಳು.
ಕೈಯಿಂದ ಕೆಲಸ ಮಾಡತೀಯಾ, ತಲೆಯಿಂದ ಕೆಲಸ ಮಾಡ್ತೀಯಾ ನೀನು?

ಬೋಳೇಶಂಕರ : ಕೈಯಿಂದ.

ಡಬ್ಬು : ಕೂತಲ್ಲೆ ತಲೆಯಿಂದ ಕಾಯಕ ಮಾಡುತ್ತ
ಲೋಕವನಾಳುವ ಮಹಿಮೆಯ ಹೊಗಳು.
ಹೊಗಳುದಕ ನಾಲಗೆ ಏಳದಿದ್ದರೆ ಬಾಯಿ
ಮುಚ್ಚಿಕೊಂಡಿರುವುದೆ ಮಿಗಿಲೆಂದು ಹೇಳು
ಚಿನ್ನದ ನಾಣ್ಯದ ಮ್ಯಾಲಿನ ಗೊಂಬೆಯ
ನುಡಿಗಳನೆಂದಾರೆ ಕೇಳಿರುವೆಯ?

ಬೋಳೇಶಂಕರ : ಇಲ್ಲ

ಡಬ್ಬು : ಮಾತಾಡೊ ರಾಜನ ಹಾಡುವ ರಾಣಿಯ
ನುಡಿಗಳನೆಂದಾರೆ ಕೇಳಿರುವೆಯಾ?

ಬೋಳೇಶಂಕರ : ಇಲ್ಲ.

ಡಬ್ಬು : ಕೇಳದಿದ್ದರೆ ಬಾಯಿ ಮುಚ್ಚಿಕೊಂಡಿರುವುದೆ
ಸಾವಿರ ಪಾಲಿಗೆ ಮಿಗಿಲೆಂದು ಹೇಳು.

ಬೋಳೇಶಂಕರ : ಬಾಯಮುಚ್ಚಿರುವುದೆ
ಸಾವಿರ ಪಾಲಿಗೆ ಮಿಗಿಲು.
ಚಿನ್ನ ನೋಡಿ ನಿನಗಿಷ್ಟು ಸಂತೋಷವಾಗುತ್ತದೆ ಅಂತ ಗೊತ್ತೇ ಇರಲಿಲ್ಲ. ಇನ್ನಷ್ಟು ಬೇಕಾದರೆ ಸುಗ್ಗಿ ಆದ ಮೇಲೆ ಬಾ. ಈ ಸಲ ಪೈರು ಚೆನ್ನಾಗಿದೆ.

ಸಾವ್ಕಾರ : ತುಸು ಹೊತ್ತು ಇಲ್ಲೇ ಇರು. ಗಾಡಿ ತಂದು ತಗೊಂಡು ಹೋಗ್ತೀನಿ. ಹುಷಾರು ತಮ್ಮಾ, ಯಾರಾದರೂ ಚೀಲಕ್ಕೆ ಕೈ ಹಾಕಿಯಾರು. ನೀನೂ ಅಷ್ಟೇ, ಕೈ ಹಾಕಬೇಡ.
(ಸಾವ್ಕಾರ ಓಡಿಹೋಗುವನು. ಇನ್ನೊಂದು ಕಡೆಯಿಂದ ಕೋಡಂಗಿ ಮತ್ತು, ಸರದಾರ ಸೋಮಣ್ಣ ಬರುವರು.)

ಸರದಾರ : ಏನೋ ತಮ್ಮಾ! ನೀನು ತಯಾರಿಸಿದ ಜವಾನರನ್ನ ನೋಡಿ ನಿಜವಾಗ್ಲೂ ಆಶ್ಚರ್ಯ, ಸಂತೋಷ ಆಯ್ತಪ್ಪ. ಜವಾನರನ್ನ ಹುಟ್ಟಿಸೋ ವಿದ್ಯೆ ನಿನ್ನ ಹತ್ತಿರ ಇದೆ ಅಂತ ಗೊತ್ತಿದ್ದಿದ್ದರೆ ನಾನೇ ರಾಜನಾಗಿರುತ್ತಿದ್ದೆ. ನೀನು ಹೇಳಲೇ ಇಲ್ಲ ನಾನೂ ಕೇಳಲೇ ಇಲ್ಲ ಅಂತಿಟ್ಟುಕೊ. ಇರಲಿ, ಆಗಳೆ ಇದ್ದರಲ್ಲ, ಆ ಜವಾನರೆಲ್ಲ ಎಲ್ಲಿ?

ಬೋಳೇಶಂಕರ : ಹಾಡಿದರು, ಕುಣಿದರು, ಹೊರಟೋದರು.

ಸರದಾರ : ಎಲ್ಲಿಗೆ?

ಬೋಳೇಶಂಕರ : ಮೂಲದಲ್ಲಿ ಏನಿದ್ದರೋ ಆ ಅವಸ್ಥೆಗೆ.

ಸರದಾರ : ಜವಾನರು ಹಾಗೇ ಇರಬೇಕೇಳು. ಸೇನಾಪತಿ ಹೇಳಿದ ಹಾಗೆ ಕೇಳಬೇಕು. ಅವರನ್ನ ಹ್ಯಾಗೆ ಮಾಡಿದೆ?

ಬೋಳೇಶಂಕರ : ಅದರಿಂದ ನಿನಗೇನಾಗಬೇಕಾಗಿದೆ?

ಸರದಾರ : ಒಳ್ಳೆ ಪ್ರಶ್ನೆ. ಜವಾನರಿದ್ದರೆ ಏನೂ ಆಗಬಹುದು, ಏನೂ ಮಾಡಬಹುದು, ಬೇಕಾದರೆ ರಾಜ್ಯ ಕಟ್ಟಬಹುದು. ರಾಜ್ಯ ಗೆಲ್ಲಬಹುದು.

ಬೋಳೇಶಂಕರ : ಹೌದ! ಹಾಗಿದ್ದರೆ ನನಗೆ ಮೊದಲೇ ಯಾಕೆ ಹೇಳಲಿಲ್ಲ? ನಿನಗೆಷ್ಟು ಬೇಕೋ ಅಷ್ಟು ಜವಾನರನ್ನ ಮಾಡಿಕೊಡ್ತೇನೆ. ಈ ಸಲ ಹುಲ್ಲೂ ಹುಲುಸಾಗಿ ಬೆಳೆದಿದೆ. ಎಷ್ಟು ಜನ ಜವಾನರು ಬೇಕು?

ಸರದಾರ : ಸದ್ಯಕ್ಕೆ ಕೆಲವು ಸಾವಿರ ಜವಾನರು ಸಾಕು.

ಬೋಳೇಶಂಕರ : ಕೊಟ್ಟೇನು. ಆದರೆ ನಾನು ನಿನಗೆ ಜವಾನರನ್ನ ಮಾಡಿಕೊಟ್ಟ ತಕ್ಷಣ ನೀನು ಅವರನ್ನು ಕರೆದುಕೊಂಡು ಈ ಹಳ್ಳಿಯಿಂದ ಹೊರಟುಬಿಡಬೇಕು. ಅವರಿಗೇನಾದರೂ ಹೊಟ್ಟೆಗೆ ಹಾಕಬೇಕಾಗಿ ಬಂದರೆ ಕಷ್ಟ. ಒಂದೇ ದಿನದಲ್ಲಿ ಅವರು ಶಿವಾಪುರವನ್ನೆಲ್ಲಾ ತಿಂದು ಬಿಡುತ್ತಾರೆ.

ಸರದಾರ : ನಾನಾದರೂ ಇಲ್ಲಿದ್ದು ಮಾಡೋದೇನಿದೆ? ಆ ಕ್ಷಣವೇ ಹೊರಟುಬಿಡ್ತೀನಿ.

ಬೋಳೇಶಂಕರ : ಹಾಗಿದ್ದರೆ, ಇಕೊ:
(ಹುಲ್ಲು ತಗೊಂಡು ನಿಲ್ಲಿಸಿ)
ಹಂಡೋಲ್ ಬಂಡೋಲ್ ಚಿಗರಿ
ಚಿಕಲಕ ಬಕಲಕ
ಸಾಲಕುದರಿ ಹನುಮಂತರಾಯಾ
ಹುಲ್ಲಿನೆಸಳು ಜವಾನರಾಗ್ಲಿ ಬಚ್ಚಾಬೋಲ್
ಬೋಲಾತಿ ಬೋಲ್ ಹ್ರಾಂ ಲಂಗೋಟಿ ಕೋಲ್.
(ಜವಾನರು ಮಾರ್ಚ್ಫಾಸ್ಟ್ ಮಾಡುತ್ತ ಬರುತ್ತಾರೆ.)

ಬೋಳೇಶಂಕರ : ಇಷ್ಟು ಜನ ಸಾಕೆ?

ಸರದಾರ : ಸಾಕು ಸಾಕು. ತುಂಬಾ ಉಪಕಾರವಾಯ್ತು! ಬೆಪ್ತಕ್ಕಡಿ ನೋಡ್ತಾ ಇರು ಪ್ರಪಂಚಾನೆಲ್ಲ ಗೆದ್ದು ತಲೆಮೇಲೆ ಕಿರೀಟ ಇಟ್ಟುಕೊಂಡು ಬಂದು ನಿನ್ನನ್ನ ನನ್ನ ದರ್ಬಾರಿಗೆ ಕರೆಸಿ ಪ್ರಶಸ್ತಿ ನೀಡತೀನಿ.

ಬೋಳೇಶಂಕರ : ಸರಿಯಪ್ಪ. ನಿನಗೆ ಇನ್ನೂ ಜವಾನರು ಬೇಕಾದರೆ ಮತ್ತೆ ಬಾ, ಮಾಡಿಕೊಡುತ್ತೇನೆ. ಆದರೆ ಮುಂದಿನ ಸಲ ಹುಲ್ಲನ್ನು ನೀನೇ ತರಬೇಕು, ಅಷ್ಟೆ.

ಸರದಾರ : ಖಂಡಿತ ಆಗಲಪ್ಪ.

ಬೋಳೇಶಂಕರ : ಹೋಗಿ ಬಾ. ಶಿವ ನಿನಗೆ ಒಳ್ಳೇದ್ಮಾಡ್ಲಿ.
(ಸೈನಿಕರೊಂದಿಗೆ ಸರದಾರ ಹೋಗುವನು.)