ಕೋಡಂಗಿ : ಏನು ಭಾಗವತರೇ, ಈ ಪರಿ ಗಾಳಿ ಬೀಸ್ತಿದೆ. ಇದು ನಿಮ್ಮ ಕಥೆಯಲ್ಲಿ ಬೀಸ್ತಿದೆಯಾ? ನಿಜವಾಗಿ ಬೀಸ್ತಿದೆಯಾ?

ಭಾಗವತ : ಬಿರುಗಾಳಿ ಬೀಸ್ತ ಇದೆ. ನದಿ ಹರಿಯೋದನ್ನ ನಿಲ್ಲಿಸಿ ಯಾರದೋ ಪಿಸುದನಿ ಕೇಳಿಸಿಕೊಳ್ತಾ ಇದೆ. ಅಕಾ, ಕಾಲು ಭೂಮಿ ಮ್ಯಾಲಿದ್ದರೂ ಮೋಡಗಳಲ್ಲಿ ಯಾರದೋ ತಲೆ ಕಂಡ ಹಾಗಾಯ್ತು. ಕಂಡೆಯಾ?

ಕೋಡಂಗಿ : ಇಲ್ಲವೆ!

ಭಾಗವತ : ಲೋಕ ಕುಟ್ಟಿ ಕೆಡಹುವ ಹಾಗೆ ಹೆಜ್ಜೆಯಿಡುತ್ತ ಯಾರೋ ಬರ್ತಿದಾರೆ, ಹೆಜ್ಜೆ ಸಪ್ಪಳ ಕೇಳಿಸ್ತ?

ಕೋಡಂಗಿ : ಇಲ್ಲವೆ!

ಭಾಗವತ : ಸೈತಾನ ಬರ್ತಿದಾನಯ್ಯ.

ಕೋಡಂಗಿ : ಸೈತಾನ ಅಂದರೆ ಬಣ್ಣದ ವೇಷ ತಾನೆ? ಅದನ್ನದರೂ ತರಿಸಿ ಮಾರಾಯರೆ, ಕಣ್ತುಂಬ ನೋಡೋಣ. ಅದೇನು ಕಥೆಗಾರಿಕೆಯೋ, ಬಡವನ್ನ ತೆಗಳ್ತೀರಿ. ಶ್ರೀಮಂತನ್ನ ಹೊಗಳ್ತೀರಿ. ಬಡವ ಬಂದರೆ ದುಃಖದ ರಾಗ ತಗೀತೀರಿ. ರಾಜ ಬಂದರೆ ಆನಂದದ ರಾಗ ಬಿಚ್ಚುತ್ತೀರಿ. ಹಳ್ಳಿ ಅಂದರೆ ಲಬೊ ಲಬೊ ಅಂತೀರಿ, ಸಿಟಿ ಅಂದರೆ ಹಾಹಾ ಅಂತೀರಿ.

ಭಾಗವತ : ನನಗೆ ಎಲ್ಲರೂ ಅಷ್ಟೆ ಕಣಪ್ಪ, ಯಾಕೆಂದರೆ ನಾನು ಕಥೆಗಾರ.

ಕೋಡಂಗಿ : ನಿಮ್ಮ ಕಥೆಯಲ್ಲಿ ನಿಮಗೇ ಗೊತ್ತಿಲ್ಲದೆ ಎಷ್ಟೆಷ್ಟೋ ಬದಲಾವಣೆ ಆಗಿವೆ ಗೊತ್ತ? ಬೋಳೇಶಂಕರ ಬೇಕೂಫನಾಗಿದಾನೆ, ಅಣ್ಣಂದಿರು ಮಹಾರಾಜರಾಗಿದ್ದಾರೆ. ಕಥೆಗಾರ ಕಥೆ ಮರತ್ತಿದಾನೆ. ರಾಜಕುಮಾರಿ ಸಾಮಾನ್ಯನ್ನ ಮದುವೆ ಆಗಿದ್ದಾಳೆ. ರಾಜಾ ಕೂಲಿ ಆಗಿದ್ದಾನೆ….

ಭಾಗವತ : ಪರವ ಇಲ್ಲ ನಿನಗೂ ವಿಷಯ ಗೊತ್ತಾಗಿದೆ, ಮುಂದಿನ ಕಥೆ ಇನ್ನು ಮೇಲೆ ನೀನೇ ಹೇಳಬಹುದು.

ಕೋಡಂಗಿ : ಹೇಳೋ ಹಾಗಿದ್ದರೆ ಇಲ್ಲೀತನಕ ಹೇಳುತ್ತಿದ್ದೆ. ಈಗ ಸೈತಾನ ಬರ್ತಿದಾನೆ ಅಂದಿರಲ್ಲ, ಇನ್ನು ಮೇಲೆ ಸಾಧ್ಯವಿಲ್ಲ ಸ್ವಾಮಿ. ಸೈತಾನನ್ನ ನಂಬೋದು ಕಷ್ಟ. ಯಾಕೆಂದರೆ ಯಾವ ಕಥೆಯಲ್ಲೂ ಅವನು ನನ್ನ ಮಾತು ಕೇಳಿಲ್ಲ.

ಭಾಗವತ : ಕೇಳದಿದ್ದರೆ ರಂಗದ ಮೇಲೆ ಕರೆತಂದು ಥಾಥಯ್ಯಾ ಹಾಡಿ ಎರಡು ಗಂಟೆ ಕುಣಿಸು; ತಾನೇ ದಾರಿಗೆ ಬರತ್ತಾನೆ.

ಕೋಡಂಗಿ : ರಾಕ್ಷಸರ ಸಹವಾಸ ಬ್ಯಾಡಿ ಭಾಗವತರೇ. ಎರಡೇನು ಹತ್ತು ಗಂಟೆ ಕುಣಿಸಿದರೂ ಮತ್ತೆ ಏರಿ ಬರತ್ತಾರೆ. ಅಕಾ ಬಣ್ಣದ ವೇಷ ಆರ್ಭಟ ಮಾಡ್ತ ಇದೆ ಗಂಟಲು ಹರಿಯೋ ಹಾಗೆ, ಹಾಡಿ ಮತ್ತೆ. ಬುಡ್ಡಿಗೆ ಹಾಕಿದ ಹೆಂಡ ಹೆಚ್ಚಾಗಿ ತುಳುಕೋ ಹಾಗೆ ನಿಮ್ಮ ಹಾಡುಕ್ಕಲಿ ಭಾಗವತರೇ.

ಭಾಗವತ : ಬಂದನೋ ಸೈತಾನ ಬಂದನು
ಸರ್ವ ಕೆಡುಕಿನ ಒಡೆಯ ಬಂದನು
ತನ್ನ ಚಿನ್ನದ ಹಲ್ಲು ಸಿಡಿವಂತವಗಡಿಸಿ ನಗುವ
ಚಿತ್ತದಲಿ ನರಕಗಳ ಸೃಷ್ಟಿಸಿ
ಬತ್ತಿಸುತ್ತಲಿ ಜೀವರಸಗಳ
ಕತ್ತಲೆಯ ನಿಜಜನಕ ಬಂದನು ಬೆಳಕನೋಡಿಸುತ.
(ಕುಣಿಯುತ್ತ ಸೈತಾನ ಬರುವನು)
ಅಯ್ಯಾ ಬಂದಂಥವರು ತಾವು ಧಾರು?

ಸೈತಾನ : ಅಯ್ಯಾ ಉರ್ವಿಯಲ್ಲಿ ಸರ್ವರಿಗೆ ಬಲು ಗರ್ವ ಕೊಟ್ಟು ಅವರಿಗೆ ದುರ್ವ್ಯಸನ ವಂಟಿಸಿ ನಿರ್ವಂಶ ಮಾಡುತ್ತ, ಸೃಷ್ಟಿಯ ಹಾಳುಮಾಡಿ ತುಷ್ಟಿಯ ಪಡುವಂಥ, ಸುಳ್ಳಿಗೆ ಹಳಬ, ಸತ್ಯಕ್ಕೆ ಹೊಸಬನಾಗಿರುವಂಥ ಬಗೆಬಗೆಯ ಭ್ರಮೆಗಳನ್ನು ಸೃಷ್ಟಿಸಿ ಸುಂದರ ಸುಳ್ಳುಗಳ ಸಾಗರದಲ್ಲಿ ಮಾನವರನ್ನು ಅದ್ದುತ್ತ ಅವರ ನಾಶವನ್ನೇ ಜೀವನಾಧಾರ ಮಾಡಿಕೊಂಡಿರುವಂಥ ಧೀಮಂತ ಯಾರೆಂದು ಬಲ್ಲಿರಿ?

ಭಾಗವತ : ಇಪ್ಪತ್ತೆಂಟು ನರಕಗಳ ಅಧಿಪತಿ ಸೈತಾನ ಮಹಾರಾಜರೇ ಸೈ.

ಸೈತಾನ : ಅವರೇ ನಾವೆಂದು ಭಾವಿಸೈ ಭಾಗವತ

ನೀನಾಗೈ ನನ್ನ ತುತ್ತೂರಿಯ ತೂತ.

ಭಾಗವತ : ಬಂದಂಥ ಕಾರಣ?

ಸೈತಾನ : ಅಯ್ಯಾ ಭಾಗವತ, ಶಿವಪುರದಲ್ಲಿರುವಂಥಾ ಬೆಪ್ತಕ್ಕಡಿ ಬೋಳೇಶಂಕರ ಮತ್ತು ಅವನ ಸೋದರರ ಮಧ್ಯೆ ವಿರಸವ ತಂದು, ಛಲದಿಂದ ಕಲಹವಾಡಿ, ಪರಸ್ಪರ ಅವಗಡಿಸಿ ಅವಮಾನಿಸಿ, ಕಿವಿ, ಮೂಗು, ಕಣ್ಣು, ಹಲ್ಲುಗಳ ಕಿತ್ತು ಆತ್ಮಗಳ ಕೊಳೆಯಾಗಿಸಿ ಸಾಯಿಸಲೆಂದು ಮೂರು ಪಿಶಾಚಿಗಳಿಗೆ ಆಜ್ಞೆಯ ನೀಡಿ ಕಳುಹಿಸಲಾಗಿ, ಅವರಿಂದ ಏನೊಂದೂ ಸುದ್ದಿ ಬಾರದೆ, ಹುಸಿ ಹೋದ ಬಾಣದ ಹಾಗೆ ಅವರ ವಿಚಾರವೇ ಗೊತ್ತಾಗದಾಗಿ ಖುದ್ದಾಗಿ ವಿಚಾರಿಸಿ ತಿಳಿದು ಬರೋಣವೆಂದುದ ಇಲ್ಲಿಗೆ ಬಂದೆವಯ್ಯಾ ಭಾಗವತಾ ನಿನ್ನ ಮಾತು ಮಜಭೂತ.

ಭಾಗವತ : ವಿಚಾರ ತಿಳಿಯಿತ?

ಸೈತಾನ : ತಿಳಿಯಿತು. ಮೂವರೂ ಪಿಶಾಚಿಗಳು ಬೆಪ್ತಕ್ಕಡಿಗೆ ಸೋತು ಕೈಯಲ್ಲಿದ್ದ ವರಗಳನ್ನು ಆಟಿಗೆಗಳಂತೆ ಬಳಸಿ ಕಳೆದುಕೊಂಡು ಸತ್ತು ಹೋಗಿದ್ದಾರೆ. ಈ ಮಧ್ಯೆ ಭೂಲೋಕ ಬೇಕಾದಷ್ಟು ಸಲ ತಿರುಗಿ, ಹೊಸ ಹೊಸ ವಾಯಿಮಂಡಲಗಳು ಬೀಸಿ, ಕೆಳಗಿನದು ಮ್ಯಾಲೆ, ಮ್ಯಾಲಿನದು ಕೆಳಗಾಗಿ, ಅರಸು ಆಳಾಗಿ ಆಳು ಅರಸಾಗಿ ಮೆರೆಯುತ್ತಿದ್ದಾರೆ. ಬೆಪ್ತಕ್ಕಡಿಯ ಅಣ್ಣಂದಿರು ರಾಜರಾಗಿದ್ದಾರೆಂದರೆ ಈ ಕಡೆ-ಈ ಬೆಪ್ತಕ್ಕಡಿಯೂ- ಅವನ ಸುದೈವಕ್ಕೆ ಬೆಂಕಿಬೀಳಲಿ-ಕಿರೀಟವಿಲ್ಲದ ರಾಜನಾಗಿದ್ದಾನೆ, ಬೇಕೂಫ!

ಕೋಡಂಗಿ : (ಅವನಿಗೆ ಕೇಳಿದಂತೆ) ಅವನೇನು ಮಗೂನ?

ಸೈತಾನ : ಇಪ್ಪತ್ತೆಂಟು ನರಕಗಳ ದೊರೆಯಾದ ನನಗೆ ಈ ಬೆಪ್ತಕ್ಕಡಿ ಬೋಳೇಶಂಕರ ಜೀರ್ಣವಾಗುತ್ತಿಲ್ಲವಲ್ಲ!

ಕೋಡಂಗಿ : ನನ್ನ ಹತ್ತಿರ ಜಾಪಾಳ ಮಾತ್ರೆ ಇದೆ, ಬೇಕ?

ಸೈತಾನ : ಈ ಬೋಳೇಶಂಕರನನ್ನ ಹಾಳು ಮಾಡಲೇಬೇಕಲ್ಲಾ, ಎನು ಮಾಡಲಿ?

ಕೋಡಂಗಿ : ಬೊಬ್ಬೆ ಹೊಡಿ.

ಸೈತಾನ : ಹುಷಾರಾಗಿ ಮೈತುಂಬ ಕಣ್ಣಾಗಿ ವ್ಯವಹರಿಸಬೇಕಾದ ವ್ಯಕ್ತಿಯೀತ!

ಕೋಡಂಗಿ : ಹಿಂಗ ಬಾ ದಾರಿಗೆ.

ಸೈತಾನ : ಬೆಪ್ತಕ್ಕಡಿ ಅಣ್ಣಂದಿರಿಬ್ಬರಿಗೂ ದುರಾಸೆಯ ಖಾಯಿಲೆ ಹಚ್ಚಿ ಅವರು ಆತ್ಮನಾಶ ಮಾಡಿಕೊಳ್ಳೋ ಹಾಗೆ ಮಾಡಿದ್ದೇನೆ . ಹಿರಿಯವನು ಸರದಾರ ಸೋಮಣ್ಣ. ಕಿರೀಟಗಳನ್ನು ಕೂಡಿಡುವ ಹವ್ಯಾಸದವನು. ಆಗಲೇ ಅನೇಕ ರಾಜರನ್ನು ಸೋಲಿಸಿ ಅವರ ಕಿರೀಟಗಳನ್ನು ಸಂಗ್ರಹಿಸಿದರೂ ಅವನಿಗೆ ತೃಪ್ತಿ ಇಲ್ಲ. ನರಕದ ಆಣೆ ಮಾಡಿ ಹೇಳುತ್ತೇನೆ ಅವನು ಇಂದ್ರನ ಕಿರೀಟ ಸಿಕ್ಕುವ ತನಕ ಸುಮ್ಮನಿರೋ ಪೈಕಿ ಅಲ್ಲ. ಅವನಾಗಲೇ ದೇವರ ಹಾಗೆ ನಿಲ್ಲುವುದಕ್ಕೆ ಕಲಿಯುತ್ತಿದ್ದ. ನಾನವನಿಗೆ ಬುದ್ಧಿ ಹೇಳಿ ದೇವರ ಹಾಗಲ್ಲ ಸ್ವಾಮೀ ದೇವರೂ ಹೆದರಿ ನಡುಗಬೇಕು – ಅಂಥಾ ಸೈತಾನ ಶೈಲಿಯನ್ನು ಅಭ್ಯಾಸಮಾಡಿ ಅಂದೆ. ಅದನ್ನೇ ಕಲೀತಿದ್ದಾನೆ. ಬರಲಿ ಅಯ್ಯಾ ಭಾಗವತರೇ ಸರದಾರ ಸೋಮಣ್ಣನ್ನ ಕರೆಸಿ.
(ಭಾಗವತ ಥಾಥಯ್ಯಾ ಹಾಡುವನು. ಸೋಮಣ್ಣ ಕುಣಿಯುತ್ತ ಬರುವನು)

ಸೈತಾನ : (ಭಾಗವತನಿಗೆ) ನಿಮಗೆ ನನ್ನ ನಿಜರೂಪದಲ್ಲಿ ಕಂಡಂತೆ ಅವನ ಕಣ್ಣಿಗೆ ನಾನೀಗ ಅವನ ಸೇನಾಪತಿಯಂತೆ ಕಾಣಬಲ್ಲೆ. (ಸೋಮಣ್ಣನಿಗೆ) ಸ್ವಾಮೀ,

ಸೋಮಣ್ಣ : ಅಯ್ಯಾ ಸೇನಾಪತಿ, ನನ್ನ ಪರಾಕ್ರಮದಿಂದ ಅತಳವಿತಳ ಪಾತಾಳ ರಸಾತಳದ ಅನೇಕ ರಾಜರನ್ನು ಮಣ್ಣು ಮುಕ್ಕಿಸಿ ಅವರ ಕಿರೀಟಗಳನ್ನು ಕಸಿದುಕೊಂಡು ಸಾಮಂತರನ್ನಾಗಿ ಮಾಡಿದ್ದಾಗಿದೆ. ಇನ್ನೂ ಅನೇಕ ರಾಜರು ಕಿರೀಟಗಳನ್ನುಳ್ಳ ತಮ್ಮ ತಲೆಯನ್ನು ನನಗೆ ಬಾಗಿಸದೆ ಮಲೆತುಕೊಂಡು ಹಾಗೇ ಇದ್ದಾರೆ. ಅವರೂ ನನಗೆ ತಲೆ ಬಾಗುವಂತೆ ಮಾಡುವ ಉಪಾಯವೇನಾದರೂ ಇದ್ದರೆ ಹೆಳಯ್ಯಾ ಸೇನಾಪತಿ.

ಸೈತಾನ : ಪ್ರಭು, ಅನೇಕ ರಾಜರು ರತ್ನಖಚಿತವಾದ ಕಿರೀಟಗಳನ್ನು ಧರಿಸಿಕೊಂಡು ನಿಮ್ಮಿಂದ ಸ್ವತಂತ್ರರಾಗಿ ಬದುಕುತ್ತಿರುವುದು ನಿಜ. ನೀವು ಈತನಕ ಕ್ಷುದ್ರವೆಂದು ತಿಳಿದಿದ್ದ ನಿಮ್ಮ ಸೋದರೆ ಬೆಪ್ತಕ್ಕಡಿ ಬೋಳೇಶಂಕರ ಕೂಡ ರಾಜನಾಗಿದ್ದಾನೆ. ಹೀಗಿರುವಲ್ಲಿ ತಾವು ಇವರ ಮೇಲೆ ದಾಳಿ ಮಾಡಿ ಕಿರೀಟ ಕಸಿಯಬೇಕಾದರೆ ಸೋರಗಿರುವ ನಮ್ಮ ಸೈನ್ಯ ಹತ್ತುಪಟ್ಟು  ಹೆಚ್ಚಾಗಬೇಕು. ಪಿಶಾಚಿಗಳನ್ನು ನವೀ ಕರಿಸಬೆಕು. ಏಕಕಾಲಕ್ಕೆ ನೂರು ಗುಂಡು ಹಾರಿಸಬಲ್ಲ ಬಂದೂಕುಗಳನ್ನು ಬರೀ ರಾಜಧಾನಿ ಮಾತ್ರವಲ್ಲ ಇಡೀ ರಾಜ್ಯವನ್ನೇ ಮೇಲಿನಿಂದ ಸಿಡಿದು ಅರಕ್ಷಣದಲ್ಲಿ ಧ್ವಂಸ ಮಾಡಬಲ್ಲ ಬಾಂಬುಗಳನ್ನು, ಆಕಾಶದಲ್ಲಿಟ್ಟುಕೊಂಡು ಕಾವಲುಕಾಯುವ ಸಿಡಿದೆಲೆಗಳನ್ನು ಮಾಡಬೇಕು.

ಸರದಾರ : ಹತ್ತು ಪಟ್ಟು ಸೈನ್ಯ ಎಲ್ಲಿಂದ ತರೋದು?

ಸೈತಾನ : ತಾವು ತಮ್ಮ ಸಾವ್ಕಾರ ತಮ್ಮನೊಂದಿಗೆ ಒಪ್ಪಂದ ಮಾಡಿಕೊಂಡರೆ ಅನುಕೂಲ. ನಿಮಗೆ ಸೈನ್ಯ ಬೇಕು. ಅದನ್ನು ನಿಭಾಯಿಸಲು ತಮ್ಮನಿಂದ ಹಣವೂ ಬೇಕು. ಎರಡನ್ನೂ ಮಾಡಕೊಡೋನು ಬೋಳೇಶಂಕರ. ಒಳ್ಳೆ ಮಾತುಗಳಲ್ಲಿ ಮಾಡಿಕೊಟ್ಟರೆ ಸರಿ; ಇಲ್ಲದಿದ್ದರೆ ಅವನ ರಾಜ್ಯವನ್ನು ನಿಮ್ಮದಕ್ಕೆ ಸೇರಿಸಿ ಕೊಂಡರೆ ತಾರೇ ದಾರಿಗೆ ಬರುತ್ತಾನೆ.

ಸರದಾರ : ನಿಜ. ಬೋಳೇಶಮಕರನ ಧಡ್ಡತನವನ್ನು ಸೈನ್ಯವಾಗಿ ಮಾರ್ಪಡಿಸಬಹುದು. ಕೂಡಲೇ ನನ್ನ ಸಾವ್ಕಾರ ತಮ್ಮನೊಂದಿಗೆ ಭೇಟಿ ಏರ್ಪಡಿಸು.

ಸೈತಾನ : ಆಗಲಿ ಪ್ರಭೋ ಅಲ್ಲೀತನಕ ತಾವು ವಿಶ್ರಾಂತಿ ತಗೊಳ್ಳಿ. (ಸರದಾರ ಹೋಗುವನು) ನೋಡಿದಿರಾ ಭಾಗವತರೇ,

ಭಾಗವತ : ನಿಮ್ಮ ಮಹಿಮೆ ಅಗಾಧವಾದದ್ದು ಸ್ವಾಮಿ.

ಸೈತಾನ : ಇನ್ನೊಬ್ಬನಿದ್ದಾನಲ್ಲ, ಅವನನ್ನೂ ಕರೆಯಿರಿ.
(ಭಾಗವತ ಥಾಥಯ್ಯಾ ಹಾಡುವನು. ಸಾವ್ಕಾರ ಕುಣಿಯುತ್ತ ಬರುವನು.)

ಸಾವ್ಕಾರ : ಅಯ್ಯಾ ಮಂತ್ರಿ,
ಸೈತಾನ : (ಭಾಗವತನಿಗೆ) ನಿಮಗೆ ನನ್ನ ನಿಜರೂಪದಲ್ಲಿ ಕಂಡಹಾಗೆ ಅವನಿಗೆ ನಾನೀಗ ಮಂತ್ರಿಯ ಹಾಗೆ ಕಾಣಿಸುತ್ತಿದ್ದೇನೆ. ಗೊಂದಲ ಮಾಡಿಕೋಬೇಡಿ.

ಕೋಡಂಗಿ : ನಮಗೆ ಕಾಣಿಸೋದಾದರೂ ನಿನ್ನ ನಿಜ ತಾನೆ?

ಸೈತಾನ : ಪ್ರಭು.

ಸಾವ್ಕಾರ : ಅಯ್ಯಾ ಮಂತ್ರಿ, ನನ್ನ ತಮ್ಮ ಬೋಳೇಶಂಕರನೂ ರಾಜನಾಗಿ ಚರಿತ್ರೆಯ ಮುಖಕ್ಕೆ ಮಸಿ ಬಳಿದನಲ್ಲಯ್ಯಾ! ಅವನು ರಾಜನಾದಾಗಿನಿಂದ ನನ್ನ ರಾಜ್ಯದಲ್ಲಿಯ ಧಡ್ಡರೆಲ್ಲ ಅವನ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ನನ್ನ ರಾಜ್ಯದಲ್ಲಿ ಎಲ್ಲಿ ನೋಡಿದಲ್ಲಿ ಖಾಲೀ ಮನೆಗಳೇ ಕಾಣುತ್ತಿವೆ.

ಸೈತಾನ : ಹಾಗೆಯೇ ಬೋಳೇಶಂಕರನ ರಾಜ್ಯದ ಬುದ್ಧಿಜೀವಿಗಳು ತಮ್ಮ ರಾಜ್ಯಕ್ಕೆ ಬಲಸೆ ಬರುತ್ತಿದ್ದಾರಲ್ಲ ಪ್ರಭು,

ಸಾವ್ಕಾರ : ಬುದ್ಧಿಜೀವಿಗಳದ್ದರೆಷ್ಟು ಬಿಟ್ಟರೆಷ್ಟು, ಅವರು ತೆರಿಗೆ ಕೊಡೋ ಜನಗಳಲ್ಲ ವಯ್ಯಾ. ತೆರಿಗೆ ಕೊಡೋ ಧಡ್ಡರೆಲ್ಲ ವಲಸೆ ಹೋದರೆ ನಾನೆಷ್ಟು ದಿನ ರಾಜ್ಯಭಾರ ಮಾಡಲಾದೀತು? ಭಂಡಾರವಾಗಲೇ ಖಾಲಿ ಆಗಿದೆ.

ಸೈತಾನ : ತಾವು ಸರದಾರ ಸೋಮಣ್ಣನವರೊಂದಿಗೆ ಒಪ್ಪಂದ ಮಾಡಿಕೊಂಡರೆ ಒಳ್ಳೆಯದು ಪ್ರಭು, ಅವರಿಗೆ ಸೈನ್ಯ ಬೇಕು. ತಮಗೆ ಚಿನ್ನ ಬೇಕು. ಎರಡನ್ನೂ ಕೊಡಬಲ್ಲವನು ಬೋಳೇಶಂಕರ. ನೀವಿಬ್ಬರೂ ಜೊತೆ ಹೋದರೆ ಇಲ್ಲ ಅನ್ನಲಾರ.

ಸಾವ್ಕಾರ : ಅದೇ ಸೈ. ಕೂಡಲೇ ಸರದಾರ ಸೋಮಣ್ಣನ ಜೊತೆ ಭೇಟಿ ಏರ್ಪಡಿಸು.