(ಬೋಳೇಶಂಕರ ಮತ್ತು ಅವನ ರಾಣಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ.)

ರಾಜಕುಮಾರಿ : ಸ್ವಾಮಿ ನೀವೇನೋ ಹೇಳುತ್ತಿದ್ದಿರಿ.

ಬೋಳೇಶಂಕರ : ಅದೇ ಆ ದಿನ ಅರಮನೆಗೆ ಬಂದಾಗ ನೀವು ಹಾಸಿಗೆಯಲ್ಲೊರಗಿ ಹೊಟ್ಟೆ ನೋವಿನಿಂದ ಸಂಕಟ ಪಡುತ್ತಿದ್ದಿರಿ.

ರಾಜಕುಮಾರಿ : ಹೌದು, ಆಮೇಲೆ?

ಬೋಳೇಶಂಕರ : ಪ್ರೇಮಿಗಳು ಅಂದರೆ –

ರಾಜಕುಮಾರಿ : ಪ್ರೇಮಿಗಳು ಅಂದಿರಿ. ನಿಮ್ಮಲ್ಲಿ ಅದೇ ಇಲ್ಲ.

ಬೋಳೇಶಂಕರ : ಯಾಕಿಲ್ಲ? ಇದೆ.

ರಾಜಕುಮಾರಿ : ಮತ್ತೆ ಒಮ್ಮೆಯೂ ಹಾಗಂತ ಹೆಳಲೇ ಇಲ್ಲವಲ್ಲ.

ಬೋಳೇಶಂಕರ : ಹೇಳಿದೆನಲ್ಲ.

ರಾಜಕುಮಾರಿ : ಏನಂತ?

ಬೋಳೇಶಂಕರ : ಇದೆ ಅಂತ.

ರಾಜಕುಮಾರಿ : ಏನಿದೆ ಅಂತ?

ಬೋಳೇಶಂಕರ : ಅದನ್ನೇ ಹೇಳೋಣಾಂತ ಬಂದೆ. ಆ ದಿನ ಏನಾಯ್ತು – ಕೇಳಿ.

ರಾಜಕುಮಾರಿ : ಆ ದಿನ ಏನಾಯ್ತು?

ಬೋಳೇಶಂಕರ : ಅರಮನೆಗೆ ನಾನು ಮದ್ದಿನೊಂದಿಗೆ ಬಂದಾಗ ನೀವು ಹಾಸಿಗೆಯಲ್ಲೊರಗಿ ಹೊಟ್ಟೆನೋವಿನಿಂದ ಸಂಕಟ ಪಡುತ್ತಿದ್ದಿರಿ.

ರಾಜಕುಮಾರಿ : ಹೌದು, ಆಮೇಲೆ?

ಬೋಳೇಶಂಕರ : ಬಾಡಿದ ಹೂವಿನಂಥ ನಿಮ್ಮ ಮುಖ ನೋಡಿದೆ.

ರಾಣಿ : ನಾನು ಸಂಕಟ ಪಡುತ್ತಿದ್ದರೆ ಮುಖ ಹೂವಿನ ಹಾಗೆ ಕಂಡಿತೆ?

ಬೋಳೇಶಂಕರ : ಬಾಡಿದ ಹೂವಿನ ಹಾಗೆ.

ರಾಜಕುಮಾರಿ : ಇಷ್ಟೇನಾ, ಇನ್ನೇನಾದರು ವಿಶೇಷ ಇದೆಯ?

ಬೋಳೇಶಂಕರ : ಓಹೋ ಬೇಕಾದಷ್ಟಿದೆ. ನಾಡಿ ನೋಡುವ ನೆಪದಲ್ಲಿ ನಿಮ್ಮ ಕೈಹಿಡಿದು ಬೇಕಾದಷ್ಟು ಸಲ ರೋಮಾಂಚನಗೊಂಡೆ.

ರಾಜಕುಮಾರಿ : ಆಮೇಲೆ?

ಬೋಳೇಶಂಕರ : ಬೇಕಾದಷ್ಟು ಸಲ ನಿಮ್ಮನ್ನೋಡಿದೆ.

ರಾಜಕುಮಾರಿ : ಆಮೇಲೆ?

ಬೋಳೇಶಂಕರ : ನಾನು ಆಗಲೇ ನಿಶ್ಚಯಿಸಿಬಿಟ್ಟೆ, ಏನಪ್ಪಾ ಅಂದರೆ….

ರಾಜಕುಮಾರಿ : ಗೊತ್ತಾಯ್ತು ಬಿಡಿ, ಹೇಳಬೇಡಿ. ನನಗೆ ನಾಚಿಕೆ ಬರುತ್ತೆ.

ಬೋಳೇಶಂಕರ : ಏನನ್ನ ನಿಶ್ಚಯ ಮಾಡಿದೆ ಅಂತ ಹೇಳಬೇಡವಾ?

ರಾಜಕುಮಾರಿ : ನನಗಾಗಲೇ ಗೊತ್ತು.

ಬೋಳೇಶಂಕರ : ಏನು ಹೇಳಿ?

ರಾಜಕುಮಾರಿ : ಇವಳನ್ನೇ ಪ್ರೀತಿಸಬೇಕು ಅಂತ.

ಬೋಳೇಶಂಕರ : ಅಲ್ಲ, ಇವಳನ್ನೇ ಪ್ರೀತಿಸಬಾರದು ಅಂತ.

ರಾಜಕುಮಾರಿ : ಯಾಕೆ ಹೇಳಿ, ನಾನಷ್ಟು ಕೆಟ್ಟವಳ?

ಬೋಳೇಶಂಕರ : ಸಮಸ್ಯೆ ಬಂದಿರೋದು ನೀವು ಜಾಸ್ತಿ ಒಳ್ಳೆಯವರಾದುದರಿಂದ. ನೀವಾದರೆ ಹೂವಿನಂಥವರು. ನಾನೋ ಒಬ್ಬ ಹುಂಬ ಬೆಪ್ತಕ್ಕಡಿ ರೈತ. ಎಲ್ಲಿದೆಲ್ಲಿಯ ಜೋಡಿ ಅಂತ.

ರಾಜಕುಮಾರಿ : ನೀವು ಹೀಗೆಲ್ಲ ಮಾತಾಡಿದರೆ ಒಂದು ಒಳ್ಳೇ ದಿನ ನೋಡಿ ನಾನು ಸತ್ತು ಬಿಡುತ್ತೇನಷ್ಟೆ.

ಬೋಳೇಶಂಕರ : ದಯವಿಟ್ಟು ಹಾಗೆ ಹೇಳಬೇಡಿ; ನನಗೆ ನೋವಾಗುತ್ತೆ.

ಕೋಡಂಗಿ : (ಬರುವನು) ಏನಯ್ಯಾ ಮಿತ್ರಾ, ರಾಜನಾಗಿ ಅರಮನೆಯಲ್ಲಿ ಆರಾಮಾಗಿರೋದನ್ನ ಬಿಟ್ಟು ಸಾಮಾನ್ಯ ರೈತನ ಹಾಗೆ ಹೊಲದಲ್ಲಿ ಕೆಲಸ ಮಾಡ್ತೀಯಲ್ಲಾ.

ಬೋಳೇಶಂಕರ : ಬಾರಯ್ಯಾ ಕೋಡಂಗಿ, ನೀನು ರಾಜನೇ ಆಗಿರು, ರೈತನೇ ಆಗಿರು- ಯಾರಾಗಿದ್ದರೂ ಉಂಡ ಅನ್ನ ಮೈಗೆ ಹತ್ತಬೇಕಾದರೆ ಮೈಮುರಿದು ದುಡೀಬೇಕಪ್ಪ. ಕೂತು ಉಂಡರೆ ರಾಜ್ಯ ನಡೀತದ?

ಕೋಡಂಗಿ : ಮಹಾರಾಣಿಯವರಿಗೆ ನಮಸ್ಕಾರ. ದೇಶದ ಮಹಾರಾಣಿಯಾಗಿ ಅರಮನೆಯಲ್ಲಿರೋದನ್ನ ಬಿಟ್ಟು ಸಾಮಾನ್ಯರ ಹಾಗೆ ಕೆಲಸ ಮಾಡಬಹುದೆ?

ರಾಜಕುಮಾರಿ :  ಮಲ್ಲಿಗೆ ಇದ್ದಲ್ಲಿ ನಾರು. ಅವರಿದ್ದಲ್ಲಿ ನಾನು.

ಕೋಡಂಗಿ : (ತನ್ನಲ್ಲಿ) ಇಬ್ಬರಲ್ಲಿ ಯಾರು ಜಾಸ್ತಿ ಧಡ್ಡರು ಅಂತ ಸ್ಪರ್ಧೆ ನಡೀತಿರಬೇಕಾದರೆ ನಾನೂ ಒಬ್ಬ ಸ್ಪರ್ಧಿಯಾಗಿ ಸೇರದಿರೋದೇ ಮೇಲು. ಬಂದ ಕಾರಣ ಹೇಳುತ್ತೇನೆ. (ಪ್ರಕಾಶ) ಅಯ್ಯಾ ಮಿತ್ರಾ, ಸೈತಾನನಿಂದ ಪ್ರಚೋದಿತರಾಗಿ ನಿನ್ನ ಅಣ್ಣಂದಿರಿಬ್ಬರೂ ನಿನ್ನ ನೋಡೋದಕ್ಕೆ ಬಂದಿದ್ದಾರೆ. ಬರಹೇಳಲಾ?

ಬೋಳೇಶಂಕರ : ಇಲ್ಲೇ ನೋಡುತ್ತಾರಂತೊ? ಮನೆಯಲ್ಲೊ?

ಕೋಡಂಗಿ : ಇಲ್ಲೇ ಈಗಲೇ.

ಬೋಳೇಶಂಕರ : ಬರಲೇಳು ಅದಕ್ಕೇನಂತೆ. ದೇವಿ ನೀನು ಗುಡಿಸಲಲ್ಲಿರು. (ಒಳಗೆ ಹೋಗುವಳು)

ಕೋಡಂಗಿ : ಆದರೂ ಒಂದು ಮಾತನ್ನು ಹೇಳಲೇಬೇಕು; ನಿನ್ನ ಔದಾರ್ಯಕ್ಕೆ ನೀನೇ ಮೋಸ ಹೋಗುವುದು ಸರಿಯಲ್ಲ ಮಾರಾಯಾ.
(ಸರದಾರ ಮತ್ತು ಸಾವ್ಕಾರ ಇಬ್ಬರನ್ನೂ ಕರೆತಂದು ಮರೆಯಾಗುವನು)

ಸಾವ್ಕಾರ : ನಮಸ್ಕಾರ ತಮ್ಮಾ. ನೀನು ರಾಜನಾದದ್ದನ್ನ ಕೇಳಿ ನಾನೇ ರಾಜನಾದಷ್ಟು ಸಂತೋಷವಾಯ್ತು ನನಗೆ.

ಸರದಾರ : ತಮ್ಮಾ ನೀನು ರಾಜನಾದದ್ದನ್ನು ಕೇಳಿ ನನಗೆ ಇನ್ನೊಂದು ಕಿರೀಟ ಸಿಕ್ಕಷ್ಟು ಸಂತೋಷವಾಯ್ತು.

ಬೋಳೇಶಂಕರ : ಅಗಲೇಳಿ. ಆಗಾಗ ಸಂತೋಷಪಡೋದು ಆರೋಗ್ಯಕ್ಕೆ ಒಳ್ಳೆಯದು.

ಸಾವ್ಕಾರ : ಇದೇ ಏನಪ್ಪ ನಿನ್ನ ದರ್ಬಾರು?

ಬೋಳೇಶಂಕರ : ಜನ ಎಲ್ಲಿ ಸೇರಿದರೆ ಅಲ್ಲೇ ದರ್ಬಾರು.

ಸರದಾರ : ಅಣ್ಣಂದಿರು ಅಂತ ಇಬ್ಬರಿದ್ದೇವೆ. ಪಟ್ಟಾಭಿಷೇಕದ ಕಾಲಕ್ಕೆ ಒಂದು ಮಾತು ಹೇಳಿಕೇಳಿಸಿದ್ದರೆ ನಾವೂ ಬರುತ್ತಿರಲಿಲ್ಲವೇನಪ್ಪ?

ಬೋಳೇಶಂಕರ : ಪಟ್ಟಾಭಿಷೇಕ ಅಂತ ಒಂದು ಸಮಾರಂಭ ನಡೆದಿದ್ದರಲ್ಲವೆ?

ಸಾವ್ಕಾರ : ಮದುವೆ ಅಂತಾದರೂ ಒಂದು ಆಯ್ತಲ್ಲಪ.

ಬೋಳೇಶಂಕರ : ಧಡ್ಡರ ಮದುವೆಗೆ ರಾಜಮಹಾರಾಜರ್ಯಾಕೆ ಅಂತ ಹೇಳಿ ಕಳಿಸಲಿಲ್ಲ.

ಸಾವ್ಕಾರ : ಅಯ್ಯಾ ಬೋಳೇಶಂಕರಾ, ನೀನು ಅದೆಂಥದೋ ಸೈನ್ಯ, ನಾಣ್ಯ, ತೆರಿಗೆ ಇಲ್ಲದ ರಾಜ್ಯಭಾರ ಮಾಡ್ತಿದ್ದೀಯಂತೆ ಹೌದ?

ಬೋಳೇಶಂಕರ : ಹೌದು.

ಸರದಾರ : ನೀನೇನೋ ಧಡ್ಡರ ರಾಜ್ಯ ಕಟ್ಟಿ ಇತಿಹಾಸಕ್ಕೆ ಅಪಹಾಸ್ಯ ಮಾಡಬಹುದಪ್ಪ. ನಾನು ಹಾಗೆ ಮಡಲಿಕ್ಕಾಗುತ್ತ? ಸೈನ್ಯ ಹಣ ಎಲ್ಲಾ ಬೇಕು. ಈಗ ನಾನು ಬಂದ ಕಾರಣವೂ ಅದೇ. ನನ್ನ ಬಳಿ ಸಾಕಾಗುವಷ್ಟು ಜವಾನರಿಲ್ಲ. ಹುಲ್ಲಿನ ಒಂದೆರಡು ಬಣಿವೆಯಷ್ಟು ಜವಾನರನ್ನು ಮಾಡಿಕೊಡು. ಇಡೀ ಪ್ರಪಂಚದ ರಾಜರನ್ನೆಲ್ಲ ಗೆದ್ದು ನೀನು ನನ್ನ ಬಗ್ಗೆ ಅಭಿಮಾನ ಪಡೋ ಹಾಗೆ ಮಾಡುತ್ತೇನೆ.

ಬೋಳೇಶಂಕರ : ಅದಾಗದು. ನಿನಗೆ ಒಬ್ಬನೇ ಒಬ್ಬ ಜವಾನನನ್ನೂ ಮಾಡಿಕೊಡುವುದಿಲ್ಲ.

ಸರದಾರ : ಯಾಕೆ, ಹಿಂದೆ ಇನ್ನೂ ಜವಾನರು ಬೇಕಿದ್ದರೆ ಬಾ ಅಂತ ಮಾತು ಕೊಟ್ಟಿರಲಿಲ್ಲವೇನೊ ಬೆಪ್ತಕ್ಕಡಿ?

ಬೋಳೇಶಂಕರ : ಬೆಪ್ತಕ್ಕಡಿ ಅಲ್ಲದೆ ಬೇರೆ ಯಾರಾಗಿದ್ದರೂ ಜವಾನರನ್ನು ಮಾಡಿಕೊಡುವುದು ಸಾಧ್ಯವಿತ್ತೆ? ಜವಾನರು ಹಾಡಿಕೊಂಡು ಸಾಲಾಗಿ ಕುಣಿಯುತ್ತಾರೆ ಅಂತ ಮಾತ್ರ ನಾನು ತಿಳಿದಿದ್ದೆ. ಆದರೆ ಇಲ್ಲಿ ನೋಡಿದರೆ ನಿನ್ನ ಜವಾನರು ಬೇರೆಯವರನ್ನು ಕೊಲ್ಲುತ್ತಿದ್ದಾರೆ. ನಿನ್ನ ಜವಾನರಿಂದಾಗಿ ಎಷ್ಟು ಜನ ಮಕ್ಕಳು, ವಯಸ್ಸಾದವರು ಅನಾಥರಾಗಿದ್ದಾರೆ ಗೊತ್ತೇನು? ದಿನ ಬೆಳಗಾದರೆ ಅಂಥವರು ನನ್ನ ರಾಜ್ಯಕ್ಕೆ ವಲಸೆ ಬರುತ್ತಿದ್ದಾರೆ. ಅವರ ಗೋಳು ಕೇಳಿದ ಮೇಲೂ ಜವಾನರನ್ನ ಮಾಡಿ ಕೊಡೋದು ಇನ್ನೂ ಭಯಂಕರ ಮೂರ್ಖತನ.

ಸಾವ್ಕಾರ : ನೋಡು ಬೋಳೇಶಂಕರಾ, ನಾನು ನಿನ್ನ ಹಿತೈಷಿ ಅಂತ ಸಾರಿಸಾರಿ ಹೇಳುತ್ತೇನೆ. ನನಗಾದರೂ ಮೊದಲೇ ಮಾತು ಕೊಟ್ಟಿದ್ದಂತೆ ಹತ್ತೆಂಟು ಲಾರಿ ಚಿನ್ನದ ನಾಣ್ಯ ಮಾಡಿಕೊಡುತ್ತಿ ತಾನೆ?

ಬೋಳೇಶಂಕರ : ಖಂಡಿತ ಇಲ್ಲ. ನಿನ್ನ ತೆರಿಗೆ ಭಾರ ಸಹಿಸದೆ ಜನ ತಮ್ಮಲ್ಲಿಯ ಹಸುಕರು ಮಾರಿ ತೆರಿಗೆ ಕಟ್ಟಿ ನನ್ನ ರಾಜ್ಯಕ್ಕೆ ವಲಸೆ ಬರುತ್ತಿದ್ದಾರೆ. ನಿನ್ನ ಕಾರ್ಖಾನೆಗಳ ಹೊಗೆ ನುಂಗಲಾರದೆ ಜನ ಓಡಿಬರುತ್ತಿದ್ದಾರೆ. ಬೆಳೆಯೋ ಮಕ್ಕಳಿಗೆ ಹಸುವಿನ ಹಾಲು ಸಿಕ್ಕೋದಿಲ್ಲ ಅಂದರೆ ಇದೇನೋ ನೀವು ರಾಜ್ಯಭಾರ ಮಾಡೋ ರೀತಿ?

ಸಾವ್ಕಾರ : ಲೋ ಬೆಪ್ತಕ್ಕಡಿ, ಬುದ್ಧಿ ಇದ್ದವರ ಹಾಗೆ ಮಾತಾಡಿ ದಾರಿಯ ಜಗಳ ಮನೆಗೆ ಸೇರಿಸ್ಕೊಬೇಡ.

ಸರದಾರ : ನಮ್ಮ ಬೋಳೇಶಂಕರ ಒಳ್ಳೆಯವನೆ; ಸ್ವಲ್ಪ ಧಡ್ಡ ಅಷ್ಟೆ. ಇಲ್ಲದಿದ್ದರೆ ಬುದ್ಧಿವಂತಿಕೆಯ ಮೊದಲ ಸ್ಪರ್ಶಕ್ಕೇ ಇಷ್ಟು ಹಿಗ್ಗುತ್ತಿರಲಿಲ್ಲ.

ಬೋಳೇಶಂಕರ : ಬುದ್ಧಿವಂತಿಕೆ ಹೌದು ಎಂದಾದರೆ ನೀವು ನನ್ನ ಮಾತು ಕೇಳಿ: ನಿಮ್ಮಿಬ್ಬರಿಗೂ ಅತಿಯಾಸೆಯ ರೋಗ ಹಿಡಿದಿದೆ. ಯಾವ ಮದ್ದಿನಿಂದಲೂ ವಾಸಿಯಾಗದ ರೋಗ ಅದು. ಸಾವಿನತನಕ ನಿಮ್ಮನ್ನದು ಬಿಡೋದಿಲ್ಲ. ರೋಗಿಯಾಗಿ ಸಾಯಬೇಕೆಂದು ಒಮ್ಮತದಿಂದ ನೀವು ತೀರ್ಮಾನಿಸಿದ್ದರೆ ಅದು ನಿಮ್ಮ ಆಯ್ಕೆ. ಆದರೆ ಬಲ್ಲವರು ಹೇಳುತ್ತಾರೆ: ಅದೊಮ್ಮೆ ರೋಗ ಅಂತ ಗೊತ್ತಾದರೆ ಅದಕ್ಕೆ ಮದ್ದು ಮಾಡುವುದು ಒಳ್ಳೆಯದು ಅಂತ.

ಸೈತಾನ : ಇದು ಬಿಟ್ಟಿ ಉಪದೇಶ ತಾನೆ?

ಬೋಳೇಶಂಕರ : ಖಂಡಿತ.

ಸೈತಾನ : ಹಾಗಿದ್ದರೆ ಇನ್ನಷ್ಟು ಹೇಳು.

ಬೋಳೇಶಂಕರ : ನಿಮ್ಮಿಬ್ಬರ ಮಧ್ಯೆ ಇಗೋ ಈ ಸೈತಾನ ಸಲಹೆಗಾರನಾಗಿ ನಿಂತಿದ್ದಾನೆ. ನಿಮ್ಮ ತಲೆಯಲ್ಲಿ ಭಯಂಕರ ಕನಸುಗಳನ್ನು ಹಾಕಿದ್ದಾನೆ. ಆ ಕನಸುಗಳಿಗೆ ಕೊಳ್ಳಿಯಿಟ್ಟು ನಿಮ್ಮಾತ್ಮ ಪೂರ್ತಿ ಸುಡೋ ಹಾಗೆ ಸೀಮೆಎಣ್ಣೆ ಸುರಿಯುತ್ತಿದ್ದಾನೆ. ಸಮಯ ಮೀರಿಲ್ಲ. ಈಗಲಾದರೂ ಹುಷಾರಾಗಿ.

ಸಾವ್ಕಾರ : ಎಣಿಸೋದಕ್ಕೆ ಬೆರಳುಪಯೋಗಿಸೋನು ನನಗೆ ಬುದ್ಧಿ ಹೆಳಬಂದನೆ?

ಬೋಳೇಶಂಕರ : ಕೇಳೋದಾದರೆ.

ಸಾವ್ಕಾರ : ಲೋ ಬೆಪ್ತಕ್ಕಡಿ ತೆರಿಗೆ ಕೊಡುವ ನನ್ನ ಪ್ರಜೆಗಳಿಗೆ ಸುಳ್ಳು ಆಮಿಷ ತೋರಿಸಿ ನಿನ್ನ ರಾಜ್ಯ ಭರ್ತಿ ಮಾಡಿಕೊಳ್ತ ಇದ್ದೀಯಲ್ಲ, ಇದೊಂದೇ ಕಾರಣ ಸಾಕು ನಿನ್ನನ್ನು ನೂರು ವರ್ಷ ಸೆರೆಮನೆಗೆ ಕಳಿಸಲಿಕ್ಕೆ. ಒಳ್ಳೆ ಮಾತಿನಿಂದ ಹತ್ತೆಂಟು ಲಾರಿ ಚಿನ್ನ ಮಾಡಿಕೊಡು. ಬೇಕಾದರೆ ಧಾನ್ಯ ನಾನೇ ಕೊಡುತ್ತೇನೆ.

ಸರದಾರ : ಅಯ್ಯಾ ಬೆಪ್ತಕ್ಕಡಿ ಕಿರೀಟ ಸಂಗ್ರಹಿಸುವ ನನ್ನ ಆಸೆಯ ಮೇಲೆ ತಣ್ಣೀರೆರಚಬೇಡ. ಒಳ್ಳೆ ಮಾತಿನಿಂದ ಎರಡು ಬಣಿವೆಯಷ್ಟು ಜವಾನರನ್ನ ಮಾಡಿಕೊಡು. ಬೇಕಾದರೆ ಪ್ರತಿಯಾಗಿ ಹತ್ತು ಬಣಿವೆಯಷ್ಟು ಹುಟ್ಟು ಕೊಡೋಣ.

ಬೋಳೇಶಂಕರ : ಅದಾಗದಿದ್ದರೆ?

ಸೈತಾನ : ನಿನ್ನ ರಾಜ್ಯ ಭಸ್ಮವಾಗುತ್ತದೆ. ನಿನ್ನಷ್ಟೇ ಧಡ್ಡಿಯಾದ ಆ ನಿನ್ನ ರಾಣಿ ನಮ್ಮ ರಾಜ್ಯದಲ್ಲಿ ಭಿಕ್ಷೆ ಎತ್ತಬೇಕಾಗುತ್ತದೆ. ನೀನು ಹೊಟ್ಟೆಪಾಡಿಗಾಗಿ ನಮ್ಮ ಜವಾನರ ಮುಂದೆ ಲಾಗ ಹಾಕಿ ಮನರಂಜನೆ ಒದಗಿಸಬೇಕಾಗುತ್ತದೆ.

ಬೋಳೇಶಂಕರ : ಶಿವನಿಚ್ಛೆ.

ಸೈತಾನ : ಏನಂದೆ?

ಬೋಳೇಶಂಕರ : ಶಿವನಿಚ್ಛೆ ಹಾಗಿದ್ದರೆ ಹಾಗೆ ಆಗಲೇಳು ಅಂದೆ.

ಸರದಾರ : ನನಗೆ ಕೋಪ ಬರುತ್ತಿದೆ.

ಬೋಳೇಶಂಕರ : ಆ ಕೋಪವನ್ನ ಯಾವ ದರಿದ್ರ ಸೈತಾನನಿಂದ ಪಡೆದೆಯೋ ಅದನ್ನ ಅವನಿಗೇ ವಾಪಸ್ ಕೊಡು.

ಸಾವ್ಕಾರ : ಬೋಳೇಶಂಕರಾ ನನ್ನ ಮಾತು ಕೇಳು.

ಬೋಳೇಶಂಕರ : ಈ ತನಕ ಬೇಕಾದಷ್ಟು ಕೇಳಿದ್ದಾಗಿದೆ. ನಿಮ್ಮ ರೋಗಾಣು ನನ್ನ ರಾಜ್ಯದಲ್ಲಿ ಹರಡುವ ಮೊದಲೇ ಇಲ್ಲಿಂದ ಹೊರಡಿ. (ಬೋಳೇಶಂಕರ ಹೋಗುವನು.)