(ಕೆಲಸ ಮಾಡುತ್ತ ಬೋಳೇಶಂಕರ ಬರುವನು. ಜೊತೆಗೆ ಕೋಡಂಗಿಯೂ ಇದ್ದಾನೆ.)
ಕೋಡಂಗಿ : ಹೊಟ್ಟೆನೋವು ಅಂತಿ. ತುಸು ಆರಾಮ ತಗೊ ಮಾರಾಯಾ.
ಬೋಳೇಶಂಕರ : ಏನಪ್ಪ ಮಾಡೋದು? ಆರಾಮ ತಗೊ ಅಂತ ನೀ ಅಂತೀಯಾ. ಆರಾಮ್ ಹರಾಮ್ ಹೈ ಅಂತ ಹಿರೇರು ಹೇಳ್ತಾರೆ. ಯಾರ ಮಾತು ಕೇಳಬೇಕು, ನೀನೇ ಹೇಳು. ನನ್ನ ಹೊಟ್ಟೆನೋಯುತ್ತೆ ಅಂದರೆ ಜೀವನ ನಿಲ್ಲುತ್ತ? ಹಂಗಾಮು ನಿಲ್ಲುತ್ತ? ಹೋಗಲಿ ನಾ ನಿಲ್ಲಿಸಿದ ಕೆಲಸ ನೀನು ಮುಂದುವರಿಸ್ತೀಯ? ನೀನೋ ಸೋಂಬೇರಿ.
ಕೋಡಂಗಿ : ಬೆಳಿಗ್ಗೆಯಿಂದ ಕೆಲಸ ಮಾಡ್ತಾನೇ ಇದ್ದೀನಲ್ಲಪ.
ಬೋಳೇಶಂಕರ : ಏನೇನು ಮಾಡಿದೆ ಹೇಳು.
ಕೋಡಂಗಿ : ಹದಿನೆಂಟು ರೊಟ್ಟಿ ತಿಂದೆ. ಎಂಟು ಮುದ್ದೆ ನುಂಗಿದೆ. ಸೊಲಗಿ ಅನ್ನ ಉಂಡೆ. ಒಂದು ಗಡಿಗೆ ಅಂಬಲಿ ಕುಡಿದೆ. ಗಡದ್ದಾಗಿ ಮೂರು ಗಂಟೆ ನಿದ್ದೆ ಮಾಡಿದೆ….
ಬೋಳೇಶಂಕರ : ಭಾರೀ ಕೆಲಸ ಮಾಡಿದೆ ಬಿಡು. ನೀನು ಹೀಗೇ ಮಾಡ್ತ ಇರು; ನಿನಗೆ ತುಂಡು ರೊಟ್ಟಿ ಸಿಕ್ಕದ ಹಾಗೆ ಮಾಡ್ತೀನಿ.
ಪಿಶಾಚಿ ೧ : (ಕಾಣಿಸಿಕೊಂಡು) ಹೊಟ್ಟೆ ನೋಯುತ್ತಿದ್ದರೂ ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾನಲ್ಲ, ಈತನ ಕಂಡರೆ ನನಗೆ ಕಣ್ಣುಬೇನೆ ಬರುತ್ತದೆ. ಇವನ ನೆಮ್ಮದಿ ನನಗೆ ದೊಡ್ಡ ಅಡ್ಡಿ. ನನ್ನ ದುಡುಕು, ಅವಸರ ಮೂರ್ಖತನಗಳನ್ನು ಕೂಡ ಅದು ಮುಚ್ಚಿಡದೆ ತೋರಿಸಿಬಿಡುತ್ತದೆ. ಇರಲಿ ಈಗಿವನ ನೇಗಿಲಿಗೆ ದೊಡ್ಡ ಬೇರಾಗಿ ತೊಡಕಿ ಬಿಡ್ತೀನಿ. ಹ್ಯಾಗೆ ಬಿಡಿಸಿಕೊಳ್ತಾನೋ ನೋಡೇಬಿಡುವಾ. (ಪಿಶಾಚಿ ಮಾಯವಾಗುತ್ತದೆ. ತಕ್ಷಣ ನೇಗಿಲು ನಿಲ್ಲುತ್ತದೆ)
ಬೋಳೇಶಂಕರ : ಕೋಡಂಗೀ, ಇಲ್ಲೆಲ್ಲೂ ಅಕ್ಕಪಕ್ಕ ಮರ ಇಲ್ಲ ಅಲ್ಲವ?
ಕೋಡಂಗಿ : ಇಲ್ಲ.
ಬೋಳೇಶಂಕರ : ಹಿಂದೆಂದೂ ಇರಲಿಲ್ಲ, ಅಲ್ಲವ?
ಕೋಡಂಗಿ : ಇರಲಿಲ್ಲ.
ಬೋಳೇಶಂಕರ : ಆದರೂ ನೇಗಿಲಿಗೆ ಬೇರು ತಗಲಿದೆಯಲ್ಲ!
ಕೋಡಂಗಿ : ತಗಲಿದೆಯಲ್ಲ!
ಬೋಳೇಶಂಕರ : ಗುದ್ದಲಿ ತಗೊಂಬಾ, ಅಗಿದು ನೋಡೋಣ.
(ಇಬ್ಬರೂ ಅಗಿಯತೊಡಗುವರು. ಬೋಳೇಶಂಕರ ‘ಐಸಾ’ ಕೋಡಂಗಿರಾಜ ‘ಐಸಾ’ ಇತ್ಯಾದಿ ಹೇಳುತ್ತ ಅಗಿಯುತ್ತಿದ್ದಂತೆ ಕೋಡಂಗಿ ಚೀರಿ ದೂರ ಓಡುವನು)
ಕೋಡಂಗಿ : ಅಯ್ಯೋ ಹಾವು! ಹಾವು!….
ಬೋಳೇಶಂಕರ : (ಎತ್ತಿ ತೆಗೆಯುತ್ತ) ಹಾವಲ್ಲವೋ, ಎಂಥದೋ ವಿಚಿತ್ರ ಪ್ರಾಣಿ. ಹಾಳಾದ್ದು ಒದ್ದಾಡ್ತ ಇದೆ. ಶಿವಾ ಶಿವಾ….
ಪಿಶಾಚಿ ೧ : (ಪ್ರತ್ಯಕ್ಷವಾಗಿ) ಅಯ್ಯಯ್ಯೋ ಆ ಹೆಸರೆತ್ತಬೇಡ. ದಮ್ಮಯ್ಯಾ ನಿಮ್ಮ ಕೈಮುಗೀತೀನಿ.
ಕೋಡಂಗಿ : ಏನದು! ಮಾತಾಡುತ್ತಲ್ಲಯ್ಯಾ! ಆಶ್ಚರ್ಯ!
ಬೋಳೇಶಂಕರ : ಯಾವ ಹೆಸರು?
ಪಿಶಾಚಿ ೧ : ಆಗಲೇ ಹೇಳಿದಿರಲ್ಲ, ಆ ಹೆಸರು.
ಬೋಳೇಶಂಕರ : ಕೋಡಂಗೀ ಹೆಸರು ಹೇಳಿದರೆ ಅಷ್ಟು ಹೆದರಿಕೊಳ್ತೀಯಾ?
ಕೋಡಂಗಿ : ಮತ್ತೆ ನಾ ಅಂದರೆ ಏನಂದುಕೊಂಡೆ? ನನ್ನ ಹೆಸರು ಹೇಳಿದರೆ ಸಾಕು-ಹಾವು. ಮುಂಗಸಿ, ಇಲಿ ಇರುವೆ, ಹೆಗ್ಗಣಗಳು ಗಡಗಡಾಂತ ನಡುಗುತ್ತವೆ. ಆದರೆ ಅವುಗಳನ್ನು ಕಂಡರೆ ನಾನೂ ಹೆದರತ್ತೀನಿ. ಅದು ಬೇರೆ ಮಾತು.
ಬೋಳೇಶಂಕರ : (ಪಿಶಾಚಿಗೆ) ಈತನ್ನ ಕಂಡರೆ ನೀನ್ಯಾಕೆ ಹೆದರಬೇಕು?
ಕೋಡಂಗಿ : ಹಸಿದಾಗ ಹಾಗ್ಹಾಗೇ ನುಂಗತೀನಿ ಅಂತ ಗೊತ್ತಿಲ್ಲವೆ ಅವಕ್ಕೆ?
ಪಿಶಾಚಿ ೧ : ಅವನಿಗಲ್ಲ ಹೆದರಿದ್ದು, ನೀವು ಆಗಾಗ ಸ್ಮರಿಸೋ ಆ ಹೆಸರಿಗೆ.
ಬೋಳೇಶಂಕರ : ಅಂದರೆ ಶಿವನ ಹೆಸರಿಗಾ?
ಪಿಶಾಚಿ ೧ : ಅಯ್ಯಯ್ಯೋ ಆ ಹೆಸರು ಹೇಳಬೇಡೀ?
ಬೋಳೇಶಂಕರ : ಶಿವನ ಹೆಸರು ಹೆಳಬಾರದ?
ಪಿಶಾಚಿ ೧ : ದಯವಿಟ್ಟು ಹೇಳಬೇಡಿ. ನೀವು ಹೇಳಿದ್ದನ್ನ ಮಾಡ್ತೀನಿ,
ಬೋಳೇಶಂಕರ : ಏನು ಮಾಡಬಲ್ಲೆ?
ಪಿಶಾಚಿ ೧ : ನೀವು ಹೇಳಿದ್ದನ್ನ
ಬೋಳೇಶಂಕರ : (ತಲೆ ಕೆರೆದುಕೊಂಡು) ಹಾಗಾದರೆ ನನ್ನ ಹೊಟ್ಟೆ ನೋಯ್ತ ಇದೆ. ವಾಸಿ ಮಾಡಬಲ್ಲೆಯ?
ಪಿಶಾಚಿ ೧ : ಓಹೊ. ಈ ಕ್ಷಣವೆ ಮಾಡಬಲ್ಲೆ.
(ಹೋಗಿ ನೆಲ ಅಗಿದು ಮೂರು ಬೇರು ತರುತ್ತದೆ.)
ಇದನ್ನ ಯಾರೇ ನುಂಗಲಿ, ಅವರಿಗಿರೋ ಯಾವುದೇ ರೋಗ ತಕ್ಷಣ ವಾಸಿ ಆಗುತ್ತೆ.
ಬೋಳೇಶಂಕರ : (ನುಂಗುವನು) ಪರವಾ ಇಲ್ಲವೆ! ಹೊಟ್ಟೆನೋವೆಲ್ಲ ಮಾಯವಾಯ್ತು!
ಪಿಶಾಚಿ ೧ : ನಾನು ಹೋಗಲಾ?
ಬೋಳೇಶಂಕರ : ಇರಣ್ಣ, ಇನ್ನೊಂದು ವಿಷಯ ಹೇಳು: ಅದ್ಯಾಕೆ ನಿನಗೆ ಶಿವನ ಹೆಸರು ಕೇಳಿದರೆ ಆಗೋದಿಲ್ಲ?
ಪಿಶಾಚಿ ೧ : ಅಯ್ಯಯ್ಯೋ ಹೇಳಬೇಡಿ ಸಾಯತೀನಿ…. ಸಾಯತೀನಿ.
ಕೋಡಂಗಿ : (ಜೋರಿನಿಂದ) ಶಿವ ಶಿವ ಶಿವ…. ಸಾಂಬಸದಾಶಿವ ಬೋಳೇಶಂಕರ ಭೋಂ ಭೋಂ ಶಂಕರ ಪಾರ್ವತಿ ಶಂಕರ (ಪಿಶಾಚಿ ಕೇಳಲಾರದೆ ಕಿವಿ ಮುಚ್ಚಿಕೊಂಡು ತಿರುಗಿ ನೆಲದಲ್ಲಿ ಹೂತುಕೊಳ್ಳುತ್ತದೆ) ಒಳ್ಳೇ ಪಿಶಾಚಿ, ನೋಡಿದೆಯಾ ಮಿತ್ರ, ಹ್ಯಾಗಿದೆ ನನ್ನ ಪ್ರಭಾವ? ಆ ಪಿಶಾಚಿ ಕೊಟ್ಟ ಬೇರಿದೆಯೆ?
ಬೋಳೇಶಂಕರ : ಇದೆ.
ಕೋಡಂಗಿ : ನನಗೊಂಚೂರು ಕೊಡು, ಹಸಿವಾಗಿದೆ.
ಬೋಳೇಶಂಕರ : ಹಸಿದಾಗ ತಿನ್ನೋದಲ್ಲ ಅದು.
ಕೋಡಂಗಿ : ಹೊಟ್ಟೆಯಲ್ಲಿ ಕಿಚ್ಚಿದೆ ಕೊಡು ಮಾರಾಯಾ.
ಬೋಳೇಶಂಕರ : ಸುಳ್ಳು ಹೇಳಿದರೆ ಹೊಟ್ಟೆಯಲ್ಲಿ ನಿಜವಾದ ಕಿಚ್ಚಾಗುತ್ತೆ.
ಕೋಡಂಗಿ : ಹಾಗಿದ್ದರೆ ಬೇಡ. ನಾನೀಗಲೇ ಭಾಗವತರ ಹತ್ತಿರ ಹೋಗಿ ಜಂಬ ಕೊಚ್ಚಿ ಕೊಳ್ತೀನಿ.
Leave A Comment