ಚಿಕ್ಕ ಮಕ್ಕಳನ್ನು ಎದುರಿಗೆ ಕುಳ್ಳಿರಿಸಿಕೊಂಡು ತಾಯಿಯಾಗಲಿ, ಅಜ್ಜಿಯರಾಗಲಿ, ಅಕ್ಕಂದಿರಾಗಲಿ, ಮಗುವಿನ ಕೈಯನ್ನು ಅಂಗೈ ಮೇಲೆ ಮಾಡಿ ಎಡಗೈಯಲ್ಲಿ ಹಿಡಿದುಕೊಂಡು ತಮ್ಮ ಬಲಗೈಯನ್ನು ಎತ್ತರಕ್ಕೆ ಏರಿಸಿ ಮುಷ್ಟಿ ಕಟ್ಟಿ, ಮುಷ್ಟಿಯಲ್ಲಿ  ಏನನ್ನೋ ತಂದಂತೆ ನಟಿಸುತ್ತ “ಅಂಬಾರ್ದ ಮೆಲಂದ್ ಬಿತ್ ಬಿತ್ ಬಿತ್” ಎನ್ನುತ್ತ ಮಗುವಿನ ಅಂಗೈಯಲ್ಲಿ ಏನನ್ನೋ ಇಟ್ಟಂತೆ ನಟಿಸುತ್ತಾರೆ. ಅನಂತರ ಮಕ್ಕಳ ಕಿರಿ ಬೆರಳಿನಿಂದ ಹೆಬ್ಬರಳ ವರೆಗೂ ಒಂದೊಂದೇ ಬೆರಳು ಮಡುಚುತ್ತ, ಪ್ರತಿ ಬೆರಳಿಗೂ ಕೆಳಗಿನಂತೆ ಒಂದೊಂದು ಶಬ್ದ ಹೇಳುವರು. ಬೆರಳನ್ನೆಲ್ಲ ಮಡಚಿದರೂ ಪದ್ಯ ಮುಗಿಯದಿದ್ದರೆ ಮತ್ತೊಂದು ಸುತ್ತು ಬೆರಳು ಮಡಚುವರು. “ಅಂಡೆ, ಉಂಡೆ, ಕಾಳಿ, ಬೋಳಿ, ಅಕ್ಕಚ್, ಹೊಯ್ದೆ, ಜಾಯ್, ಕರ್ದೆ, ಹುಲ್ಲ್ ಹಾಕ್ದೆ, ಜಾಯ್ ಹಾಂ” ಕೊನೆಯ ಶಬ್ದ ಮುಗಿಯುತ್ತಲೇ “ಕಂಕಾರ ಅಜ್ನ ಮನೆ ಹೋಪ್ ದಾರೆವ್ದು: ಅನ್ನುತ್ತಾ ತಮ್ಮ ಬೆರಳುಗಳನ್ನು ಕುಂಕುಳವರೆಗೆ ನಡೆಸಿ ಕೈ ಹಾಕಿ ನಗಿಸುವರು. ಅಳುವ ಮಕ್ಕಳು ಅಳು ಬಿಟ್ಟು ನಕ್ಕು ನಲಿಯುವರು. ಇನ್ನೂ ಹೆಚ್ಚು ನಗಿಸಲು ಬೇರೆ ಊರಿನ ಹೆಸರು ಹೇಳಿ……..ಗೆ ಹೋಪ್ ದಾರಿ ಯಾವ್ದು ಎಂದು ಹಲವು ಸಾರಿ ಹೇಳಿ ನಗುವರು; ನಗಿಸುವರು.