ಆಟಗಾರರು ನೆಲದ ಮೇಲೆ ವರ್ತುಳಾಕಾರದಲ್ಲಿ ಕುಳಿತುಕೊಳ್ಳುವರು. ಎಲ್ಲರೂ ತಮ್ಮ ಎರಡೂ ಕೈಗಳನ್ನು ನೆಲದ ಮೇಲಿಟ್ಟು ಬೆರಳುಗಳನ್ನು ನೀಡುವರು. ಅವರಲೊಬ್ಬನು ತನ್ನ ಒಂದು ಕೈಯನ್ನು ಮಾತ್ರ ನೆಲದ ಮೇಲಿಡುವನು. ಆತನು ಸಾದು-ಗೋದು- ಪಿರಂಗಿ-ಚಾರಿ ಕೊಣ ಎನ್ನುತ್ತ ಪ್ರತಿಶಬ್ದಕ್ಕೂ ಒಂದೊಂದು ಬೆರಳ ಮೇಲೆ ತನ್ನ ಬೆರಳನ್ನಿಡುತ್ತ (ಎಣಿಸಿದಂತೆ) ಹೋಗುವನು. ‘ಕೋಣಾ ಎಂದಾಗ ಮುಟ್ಟಿದ ಬೆರಳನ್ನು ಮಡಚುವರು. ಎಲ್ಲ ಬೆರಳುಗಳನ್ನು ಮಡಚುವ ವರೆಗೂ ಆಟ ಮುಂದುವರಿಯುತ್ತದೆ. ಒಬ್ಬರ ಎಲ್ಲ ಬೆರಳುಗಳು ಮಡಚಿದಾಗ ಅವರು ತಮ್ಮ ಕೈಯನ್ನು ಬೆನ್ನ ಹಿಂದೆ ಅಡಗಿಸಿಕೊಳ್ಳಬೇಕು. ಹೀಗೆ ಎಲ್ಲ ಕೈಗಳನ್ನೂ ಅಡಗಿಸಿಕೊಂಡಾದ ಮೇಲೆ ಸಾದು-ಗೋದು ಎಂದು ಎಣಿಸುತ್ತಿದ್ದವರಿಗೂ, ಇತರರಿಗೂ ಸಂಭಾಷಣೆ ನಡೆಯುತ್ತದೆ.

ಪ್ರಶ್ನೆ ಉತ್ತರ
ಮಕ್ಕಳ್ರಾ ಮಕ್ಕಳ್ರಾ ನಿಮ್ ಕೈಯೆಲ್ಲಾ ಎಲ್ಲೀಗೋತು? ಸಂತೆಗೋತು
ಸಂತೀಂದ್ ಏನ್ ತಂತು? ಬಾಳೆಹಣ್ ತಂತು
ಬಾಳೆಹಣ್ ಎಲ್ ಹಾಕ್ದೆ? ಕದ್ ಮುಲ್ಲೆಲ್ ಹೊಕ್ಕೊಂಡ್ ತಿಂದೆ
ಕದ್ ಮುಲ್ಲೇನ್ ಕೊಟ್ತು? ಸಪ್ಪೆ ಕೊಟ್ತು
ಸಪ್ಪೆಲ್ಲಾಕ್ದೆ? ಬಸ್ವಂಗ್ ಕೊಟ್ಟೆ
ಬಸ್ವ ಏನ್ ಕೊಟ್ಟಾ? ಸಗ್ಣೀ ಕೊಟ್ಟಾ
ಸಗ್ಣೀ ಏಲ್ಲಾಕ್ದೆ? ಗೆದ್ದೆಗ್ ಹಾಕ್ದೆ
ಗೆದ್ದೆಂತಾ ಕೊಟ್ತು? ಬತ್ತಾ ಕೊಟ್ತು
ಬತ್ತಾ ಎಲ್ಲಾಕ್ದೆ? ಒಳ್ಳೀಗ್ ಹಾಕ್ದೆ
ಒಳ್ಳೇನ್ ಕೊಟ್ತು? ಅಕ್ಕೀ ಕೊಟ್ತು
ಅಕ್ಕೀ ಎಲ್ಲಾಕ್ದೆ? ಕುಂಬಾರಂಗ್ ಕೊಟ್ಟೆ
ಕುಂಬಾರ್ ಎಂತಾ ಕೊಟ್ಟಾ? ತಟ್ ಮಡ್ಕಿ ಕೊಟ್ಟಾ
ತಟ್ ಮಡ್ಕಿ ಎಲ್ಲಾಕ್ದೆ? ಹೊಳ್ಬಾವೀಗ್ ಹೊತಾಕ್ದೆ
ಹೊಳ್ಬಾವೆಂತಾ ಕೊಟ್ತು? ನೀರ್ ಕೊಟ್ತು
ನೀರ್ ಎಲ್ಲಾಕ್ದೆ? ಜಾಜೀಗೆಡಕ್ ಹಾಕ್ದೆ
ಜಾಜಿ ಗಿಡಾ ಎಂತಾ ಕೊಟ್ತು? ಹೂಗ್ ಕೊಟ್ತು
ಹೂಗ್ ಎಲ್ಲಾಕ್ದೆ? ದೆವ್ರಿಗ್ ಹಾಕ್ಕೆ
ದೆವ್ರೆಂತಾ ಕೊಟ್ಟಾ? ಬುದ್ದಿ (ಪುಣ್ಯ) ಕೊಟ್ಟಾ
ಬುದ್ಧಿ ಎಲ್ಲಾಕ್ದೆ? ಮಾವಂಗ್ ಕೊಟ್ಟೆ
ಮಾವೇನ್ ಕೊಟ್ಟಾ? ಪಟ್ಟೆ ಕೊಟ್ಟಾ
ಪಟ್ಟೆ ಏನ್ ಮಾಡ್ದೆ? ಅತ್ತೆಗ್ ಕೊಟ್ಟೆ
ಅತ್ಯೆಂತಾ ಕೊಟ್ತು? ಕೂಸ್ನ ಕೊಟ್ತು
ಕೂಸ್ನ ಎಲ್ಲಾಕ್ದೆ? ಹೆ (ಎ) ಣ್ಣಿಲ್ದಿಗಿದ್ದೇ ಬೆಣ್ಣಿಲ್ದಿಗಿದ್ದೇ ಸಿರ್ದೊಣ್ಣೆ ಅಥವಾ ಬಳ್ಕೋಟ್ಟೆ