[ಚುಕ್ಕಿ ಕಿಕ್ಕಿರಿದ ಬಾನೆ ಕಣ್ಣಾಗಿ ಸಹಸ್ರಾಕ್ಷಿಣಿಯಾದ ವ್ಯೋಮದೇವಿ ಭೂಮಿಯ ಕಡೆ ನೋಡುತ್ತಿದ್ದಾಳೆ. ಕರಿಯಿರುಳು ತುದಿಯನೆಯ್ದುತಿದೆ. ಕತ್ತಲೆಯ ದಟ್ಟತೆರೆ ಬೆಟ್ಟಗಾಡಿನ ಮೇಲೆ ಕವಿದಿದ್ದರೂ ಮೂಡಣದನಿಡುದೂರದ ದಿಗಂತ ರೇಕೆಯ ಗುರುತು ಕಾಣುವಂತೆ ಬಾನ ಕರೆಯಲ್ಲಿ ನಸುಗುವೆಳಗು ಮಲರತೊಡಗಿದೆ. ಮೆಲ್ಲಮೆಲ್ಲನೆ ಉಷಃಕಾಂತಿ ಹೆಚ್ಚಿದಂತೆಲ್ಲ, ಕತ್ತಲೆಯ ಕಡಲಿನಲ್ಲಿ ಮುಳುಗಿ ಹುದುಗಿದಂತಿದ್ದ ಕಣಿವೆ ಮಲೆಗಾಡು ಶ್ರೇಣಿ ಶ್ರೇಣಿಯಾಗಿ ಇನಿತಿನಿತೆ ದೃಗ್ಗೋಚರವಾಗುತ್ತವೆ. ಒಮ್ಮೆ ಇಮ್ಮೆ ಕೋಳ್ಮಿಗಗಳ ಗರ್ಜನೆಯಿಂದ ಕ್ಷುಬ್ಧವಾಗಿ ಮತ್ತೆ ಅರ್ಬ್ಬಿಯ ದುಮುಕುದನಿ ವಿನಾ ನಿಶ್ಯಬ್ಧ ಅಬ್ಧಿಯಾಗಿದ್ದ ಅರಣ್ಯದಲ್ಲಿ ಅಲ್ಲೊಂದು ಇಲ್ಲೊಂದು ದನಿಯ ಅಲೆ ಹಕ್ಕಿಗೊರಲಿಂದುಣ್ಮಿ, ಇಂಚರವಾಗಿ ಸಂಚರಿಸಿ, ವಿಪಿನ ದೇಶದ ಅನಿಲ ಶರೀರ ಪುಲಕಿತವಾಗುತ್ತದೆ. ಕತ್ತಲೆಯ ಬಸಿರ ಅಂತರಾಳದಿಂದಲೆಂಬಂತೆ, ಬಹುದೂರದಿಂದ ಮೊದಲಾಗಿ ಹತ್ತೆ ಹತ್ತೆ ಬಳಿಸಾರುವಂತೆ, ಗುರುಸ್ತುತಿ ಧೀರವಾಗಿ, ಮಧುರವಾಗಿ, ಭಕ್ತಿಭಾವ ಪೂರ್ವಕವಾಗಿ, ತರಂಗ ತರಂಗಾಯತವಾಗಿ, ದಿಗಂತದಿಂದ ಒಯ್ಯೊಯ್ಯನೆ ತುಳುಕುವ ಬೆಳಕಿನೊಡನೆ ಸ್ಪರ್ಧಿಸುವಂತೆ ಬುಗ್ಗೆ ಯುಕ್ಕಿ ಕೇಳಿಬರುತ್ತದೆ.]

ಓಂ
ಗುರುರ್ಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರಃ |
ಗುರುದೇವ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||
ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
ಚಿನ್ಮಯಂ ವ್ಯಾಪಿತಂ ಸರ್ವಂ ತ್ರೈಲೋಕ್ಯಂ ಸಚರಾಚರಂ ||
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ |
ಅನೇಕ ಜನ್ಮ ಸಂಪ್ರಾಪ್ತ ಕರ್ಮಬಂಧ ವಿಧಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||
ಮನ್ನಾಥಃ ಶ್ರೀ ಜಗನ್ನಾಥೋ ಮದ್ಗುರುಃ ಶ್ರೀ ಜಗದ್ಗುರುಃ |
ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ||
ಬ್ರಹ್ಮಾನಂದಂ ಪರಮಸುಖದಂ ಕೇವಲ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿ ಲಕ್ಷ್ಯಂ |
ಏಕಂ ನಿತ್ಯಂ ವಿಮಲಮಚಲಂ ಸರ್ವಧೀ ಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||
ನಿತ್ಯಂ ಶುದ್ಧಂ ನಿರಾಕಾರಂ ನಿರಾಭಾಸಂ ನಿರಂಜನಂ |
ನಿತ್ಯಬೊಧಂ ಚಿದಾನಂದಂ ಗುರುಂ ಬ್ರಹ್ಮ ನಮಾಮ್ಯಹಂ ||

ಕ್ರಮೇಣ, ಬೆಳಕು ತುಳುಕಿ, ಪರ್ವತ ವಿಪಿನ ಕಂದರಾಳಿ ಸುಸ್ಪಷ್ತತರವಾದ ಹಾಗೆಲ್ಲ, ಆಡವಿಯ ತುಂಬು ಮೌನವೆ ಮೊಳೆತು ಕವಲೊಡೆದು ವಿಧವಿಧ ವಿಹಂಗಗಳ ತರತರದ ಮಧುರ ಕೂಜಿತದಿಂದ ನಾದಮಯವಾಗುತ್ತದೆ. ಮರಮರದ ಹಸುರುಗಳೂ ಹೂವುಗಳ ಬಿಳಿದು ಹಳದಿ ಕೆಂಪು ಬಣ್ಣಗಳೂ ಕಂಗೊಳಿಸುತ್ತವೆ. ರಾತ್ರಿಯ ತಿಮಿರ ಗರ್ಭದಿಂದ ಇವುಗಳೆಲ್ಲ ಮೂಡಿದಂತೆಯೆ, ಅರುಣ್ತೆ ಮಾಗುತ್ತಿರುವ ಪ್ರಾಚೀದಿಕ್ತಟಕ್ಕೆದುರಾಗಿ ಮಲೆತು ತಲೆಯೆತ್ತಿರುವ ಮಲೆಯ ನೆತ್ತಿಯೊಂದರಲ್ಲಿ ಗಿಡುಬಳ್ಳಿಗಳ ಇಡುಕುರೆಡೆಯೆಡೆ ಬೆಳ್ನೊರೆಯ ಚವರವೀಸಿ ಕಲ್ಲರೆಯ ನಡುವೆ ದುಮುಕುತ್ತಿರುವೊಂದರ್ಬ್ಬಿಯ ಬಳಿ, ಅದರ ಚರಣ ಸ್ಥಾನದಂತಿರುವ ಒಂದುಹಾಸುಬಂಡೆಯ ಮೇಲೆ ಏಕಲ್ಯನ ಗಾತ್ರ ಕೊರೆದು ಬಿಡಿಸಿದಂತೆ ಮೂಡಿ ಕಣ್‌ಗೊಳಿಸುತ್ತದೆ.

ಮೊದಮೊದಲು ಮಬ್ಬಾಗಿ ಸುತ್ತಲೂ ಎದ್ದಿರುವ ಕೋಡುಗಲ್ಲುಗಳೊಡನೆ ತಾನೂ ಒಂದು ಮನುಷ್ಯಾಕಾರದ ಕಲ್ ಕೋಡಾಗಿ ಕಾಣಿಸಿಕೊಳ್ಳುತ್ತಾನೆ. ಉಷಃಕಾನ್ತಿ ಅರುಣ ದೀಪ್ತಿಗೆ ತಿರುಗಿದಂತೆಲ್ಲ ಅವನ ಅಕಾರದಿಂದ ರೂಪ ಹೊಮ್ಮುತ್ತದೆ. ಅಸ್ಥೂಲಕಾಯದ ದೀರ್ಘೋನ್ನತಾಕೃತಿ, ನಸುಗಪ್ಪು, ಆದರೆ ಕಪ್ಪಲ್ಲ, ಮೈ ಬಣ್ಣ. ಸೊಂಟಕ್ಕೆ ಚಿರತೆಯ ಚರ್ಮ ಅಲಂಕೃತವಾಗಿದೆ. ಬತ್ತಲೆಯಾಗಿರುವ ವಿಶಾಲ ವಕ್ಷಸ್ಥಲವು ತುಂಬಿದ ಮೆಯ್ಗೆ ಸೌಂದರ್ಯದ  ಜೊತೆಗೆ ಗೌರವವನ್ನೂ ನಿವೇದಿಸುತ್ತಿದೆ. ಹುಲಿಯುಗುರುಗಳ ಕೋದ ಕಂಠಾಭರಣವೊಂದು ತುಂಬೆದೆಗೆ ಕಣ್ಣಾಸರಾಗದಂತೆ ರಕ್ಷೆಯಾಗಿದೆ. ತೋಳ್ಗಳೆರಡಕ್ಕೂ ಕಲ್ಮಣಿಗಳ ತೊಡವುಗಳಿವೆ. ಸರಳು ತುಂಬಿದ ಬತ್ತಳಿಕೆ ಹೆಗಲತ್ತಣಿಂದ ಹೆಡೆಯೆದ್ದಿದೆ. ಅದನ್ನು ಬೆನ್ಗೆ ಬಿಗಿದ ಸರ್ಪಚರ್ಮಪಟ್ಟಿಕೆ ಅಡ್ಡಡ್ಡವಾಗಿ ಹಾದುಹೋಗಿರುವ ವಕ್ಷ ದೇಶ, ಹಾವು ಸುತ್ತಿದ ಹುತ್ತದಂತೆ, ಭೀಮಕಾಂತವಾಗಿದೆ. ಮಿಂದು ಕೆದರಿದ ಕೂದಲು ಹೆಗಲಮೇಲ್ ಬಿದ್ದು ಬತ್ತಳಿಕೆಗೆ ಸಂವಾದಿಯಾಗಿ ಮತ್ತೊಂದು ಕಡೆಯಿಂದ ಬೆನ್ದೆಸೆಗೆ ಹರಿದಿದೆ. ಉದಯಸಮಯದ ಪೂರ್ವಾಕಾಶದಲ್ಲಿ ನಿಡು ಬೆಳ್ ಮಿಗಿಲು ಗೆರೆಹರಡುವಂತೆ ಹಣೆಯ ಮೇಲಣ ವಿಭೂತಿ ಪಟ್ಟೆಪಟ್ಟೆಯಾಗಿದೆ! ಕಣ್ಣು ಕರ್ರಗೆ, ಉಜ್ವಲ. ಮೂಗು ನೀಳಾವಾಗಿ ಗಿಣಿಕೊಕ್ಕಿನಂತೆ ತುಸು ಬಾಗಿದೆ. ತುಪ್ಪುಳ್ ಮಿಸೆ ಬಹು ಮೋಹಕ. ತೆಳ್ದುಟಿ ಮೂಗಿನ ನೀಳ್ಪಿಗೂ ಕಣ್ಣಿನ ಉಜ್ವಲತೆಗೂ ಹೊಯ್ ಕಯ್ ಆಗಿ ಸಂಸ್ಕಾರದ ರುಚಿಸೂಕ್ಷ್ಮತೆಗೆ ಸಾಕ್ಷಿಯಾಗಿದೆ. ಎಡಗೈ ಮುಷ್ಟಿ ಹೆದೆಯೇರಿಸಿದ ಬಿಲ್ಲಿನ ತುದಿಯನ್ನು ಹಿಡಿದಿದೆ. ಬಿಲ್ಲಿನ ಮತ್ತೊಂದು ತುದಿ ಕಲ್ಲಿನ ಮೇಲೆ ಊರಿದೆ. ನಾರಿ ಸಡಿಲವಾಗಿದೆ.

ಅವನಿಗೆ ಬೆನ್ನೆಲೆ ನೀರ್ಬೀಳ. ಅಕ್ಕಪಕ್ಕದಲ್ಲಿ ನಿಡುಬಂಡೆಗಳು ಕೋಡು ಕೋಡಾಗಿ ಧೀರಭಂಗಿಯಿಂದ ಕರ್ರೆಗೆ ಎದ್ದು ನಿಂತಿವೆ. ಗಿಡಬಳ್ಳಿ ಅಲ್ಲಲ್ಲಿ ಹೆಣೆದುಕೊಂಡಿವೆ. ಏಕಲವ್ಯನ ಬಲಭಾಗಕ್ಕೆ, ಅವನಿಗೆ ಮುಟ್ಟಮುಟ್ಟ ಪಕ್ಕದಲ್ಲಿ, ಅತಿ ಸ್ಥೂಲ ದೃಷ್ಟಿಯಿಂದ ನರಾಕಾರ ಎನ್ನಬಹುದಾದ ಒಂದು ಬಮಡೆಗೋಡು ಕಾಣಿಸುತ್ತದೆ. ಅದರ ತುಂಬ ಹೂವು, ಎಲೆ, ನವಿಲ್ಗರಿ, ಹಕ್ಕಿಯ ಬಣ್ಣಪುಕ್ಕ, ಹಂದಿಯ ಐಕಿಲ್ ಬೆಳ್ ಕೋರೆ, ಚಿರತೆಯ ಚಿತ್ರಮಯ ಚರ್ಮ ಮೊದಲಾದುವುಗಳಿಂದ ವಿರಚಿಸಿದ ಅಲಂಕಾರಗಳು ಮೆರೆಯುತ್ತವೆ. ಆ ಕಲ್ಗೋಡಿನ  ಅಗ್ರ ದೇಶದಲ್ಲಿ ಸುಣ್ಣದ ದಪ್ಪಗೆರೆಗಳಿಂದ ಮನುಷ್ಯ ಮುಖರೂಪ ಚಿತ್ರಿತವಾಗಿದೆ. ಆ ಶೈಲವಿಗ್ರಹಕ್ಕೆ ಬಹುಕಾಲದಿಂದಲೂ ಪೂಜೆ ನಡೆಯುತ್ತಿದೆ ಎಂಬ ಲಕ್ಷಣ ಸುತ್ತಮುತ್ತಲೂ ಸುಸ್ಪಷ್ಟ. ಅದುವೆ ಏಕಲವ್ಯನು ಗುರುವೆಂದು ಪೂಜಿಸುತ್ತಿರುವ ದ್ರೋಣಪ್ರತೀಕ.

ಏಕಲವ್ಯ(ಪೂರ್ವೋಕ್ತ ವರ್ಣನೆಗೆ ವಿವರವಿವರವಾಗಿ, ಅನುಸಾರವಾಗಿ, ವಾಚಿಕ ಆಂಗಿಕ ವ್ಯಾಪಾರಗಳು ಅನ್ವಿತವಾಗುವಂತೆ)

ಈಸು ದಿನ ಬದುಕಿದುದಕೀ ಸುದಿನಮನ್ ಕಂಡೆನ್:
ಇಂದು ಗುರುವೈತಪ್ಪನೆನ್ನೀ ವನಸ್ಥಲಕೆ!
ಪವಿತ್ರತರಮಪ್ಪುದೀ ಕಾಡುಮಲೆ ದಲ್ ದಿಟಂ,
ಪೂಜ್ಯ ಗುರುಪದ ಧೂಳಿಯಿಂ!
(ಉಷಃಕಾಲದ ದಿಗಂತದ ಕಡೆಗೆ ನಿಡುನೋಡಿ ಉನ್ನೇಷಿತ ಉತ್ಸಾಹದಿಂದ)
ದಿಟಮ್ ಇಂದು ಗುರು ಬರ್ಪುದೆನ್ನೀ ವನಸ್ಥಲಕೆ!
ಕಣ್ ತೆರೆ, ಓ ನಿಮೀಲಿತಾ ಉಷಾಲಲಿತೆ,
ನಿನ್ನಾ ದಿಗಂತ ದೀರ್ಘ ಕಟಾಕ್ಷ ವಿಕ್ಷೇಪದಿಂ
ಸುಪ್ರಸನ್ನತೆಯಕ್ಕೆ ಈ ಗಿರಿಧರಾ ಚೇತನಕೆ.
ಮೂಡಿ ಬಾ, ಓ ನಲ್ ಪಗಲೆ,
ರಶ್ಮಿಸೂತ್ರದ ಕಾಂತಿಧೋತ್ರದಿ ಅಲಂಕರಿಸುತೀ
ವಿಪಿನ ಸುಂದರ ಪರ್ವತಾಂಗಮಂ!

(ತುಸುವೊತ್ತು ನೀರವವಾಗಿ ದೃಷ್ಟಿಪ್ರಸಾರಮಾಡುತ್ತಾ ಮತ್ತೆ ಉಕ್ಕುವ ಉತ್ಸಾಹದಿಂದ)

ದಿಟಮ್ ಇಂದು ಗುರು ಬರ್ಪನೆನ್ನೀ ವನಸ್ಥಲಕೆ!
ಕಂದರದೊಳಲೆಯುತಿಹ ಮಂಜು ಮೋಡಂ, ನೋಡ,
ಗುರುವುಟ್ಟು ಧವಳೋತ್ತರೀಯದಂಚಲಮೆನಲ್
ಸಂಚಲಿಸುತಿಪ್ಪುದು ಕೆರಳ್ಚುತಾಕಾಂಕ್ಷೆಯಂ.
ಅಃ ಆಲಿಸಾ ಅಲೆಯುತಿಹ ಪರಪುಟ್ಟನಿಂಚರಂ
ಬೆಳ್ಳಂಗೆಡೆಯುವೀ ಅರ್ಬ್ಬಿಯೋಂಕಾರಮಂ ಮೀರ್ದು
ಸಾರುತಿಹುದಿಂಗಿತದಿ ಗುರುದೇವನಾಗಮನಮಂ!
ದುಮುಕುವೀ ಅರ್ಬ್ಬಿಮೊರೆಯಂ ಶ್ರುತಿಯವೋಲಾಶ್ರಯಿಸಿ
ತಾನತಾನದಿ ಗಾನಗೈಯುತಿದೆ ಕಾಜಾಣವದೊ
ಸುಸ್ವನದಿ, ಕೇಳ್, ಸುಖಾಗಮನ ಸಂಗೀತಮಂ!

(ಮತ್ತೆ ಅತ್ತ ಇತ್ತ ಆಲಿ ನಟ್ಟು ನೋಡಿ)

ಅಲರಿಮ್, ಎಲೆ ಸಸ್ಯ ಸೋದರರಿರಾ,
ಪುಷ್ಪಮಯಮಪ್ಪವೋಲ್ ಗುರು ಬೆರ್ಪ ಗಿರಿಪಥಂ.
ಮೂಡಿ ಬರ್ಪೀ ಮುಂಬಿಸಿಲ ಹೊಂಬಣ್ಣದೊಳ್
ಮಿರುಮಿರುಗುವಿರ್ಬನಿಯ ತಳಿರ ತೋರಣಗಟ್ಟಿ
ಮದ್ಗುರುಗೆ ಸುಸ್ವಾಗತಂಗೆಯ್ಯಿಂ, ಓ ತರುಗಳಿರ.

(ತನ್ನ ಹಿಂಬದಿಯಿರುವ ಜಲಪಾತದ ಕಡೆ ನೋಡಿ, ಕಣ್ ನಟ್ಟು, ಭಾವಾವೇಗದಿಂದ ಅದಕ್ಕೆ ಕೈಮುಗಿದು)

ದಿಟಂ, ದಲ್! ಇಂದು ಗುರು ಬಂದಿಪ್ಪನಾಗಳೆಯೆ
ನನ್ನೀ ಮನಃಸ್ಥಲಕೆ! ಗಿರಿಜಾತೆ, ಮನೋಲ್ಲಾಸೆ,
ಹೇ ಮಧುರೆ, ದುಮುದುಮುಕಿ ಮುತ್ತೆರಚಿ ನಲಿವ,
ಓ ಲಾಸ್ಯಮಯಿ, ನಿರ್ಝರಿಣಿ, ನಿನಗಿದೊ ನಮಸ್ಕಾರ!
ಗಿರಿ ಶಿವ ಜಟಾಜೂಟದಿ ಜಗುಳ್ದಿಳಿವ ಗಂಗೆ,
ಶೈಲ ಶಂಕರನಂಕವನಲಂಕರಿಪ
ಅರಣ್ಯ ಪಾರ್ವತಿಯ ತಂಗೆ,
ನನ್ನ ಕಿವಿಗಿಂದಾವ ಮಂತ್ರವನಿಂತು ಘೋಷಿಸುವೆ?
ಕಾಲ ಗಹ್ವರ ಗುಹ್ಯ ಗರ್ಭದೊಳ್
ಸುರುಳಿ ಸುತ್ತಿರುವಾವ ವಿಧಿಯಂ ಮೊರೆದು ಕರೆದು
ಜಾಗ್ರತಂಗೊಳಿಸುತಿಹೆ? ಪುಟ್ಟಿದಂದಿಂ ತೊಟ್ಟು
ನಿನ್ನ ಜೋಗುಳವೆನ್ನ ತೊಟ್ಟಿಲಂ ತೂಗಿರ್ಪುದಾದೊಡಂ
ನಿನ್ನ ನೀರ್ಗೋರಳಿಂದು ಬೇರೆಯೇಂಬಂದದಿಂ
ಹೃದಯಮಸ್ಥಿರಮಾಗೆ ಸಾರುತಿಹುದಾದೇಶಮಂ.
ಪೋದ ಜನ್ಮದ ಮೊರೆಯೊ? ಬರ್ಪ ಪುಟ್ಟಿನ ಕರೆಯೊ?
ಮೇಣ್, ಮುಂದಿರ್ಪ ಬಾಳಂ ಮುನ್ನೊರೆವ
ತೊರೆಯ ಮರೆಯಾಂತುಲಿವ ಬಿದಿಯ ನಾಲಗೆಯೊ?
(ಅಂತರ್ಮಖಿಯಾಗಿ ನಿಡುಸುಯ್ದು ಚಿಂತಾಮುದ್ರೆಯಿಂದ)
ಪೋದಿರುಳ್ ಅದೆಂತಪ್ಪ ಕನಸು ಕಂಡೆನ್ !
(ತುಸು ಹೊತ್ತು ಭಾವಿಸುತ್ತ ನಿಂತು ಚಿಂತಾ ಪ್ರವಾಹವನ್ನು ತಡೆಗಟ್ಟಿ ನಿಲ್ಲಿಸುವ ಮುಖಮುದ್ರೆಯಿಂದ)
ದುಃಸ್ವಪ್ನ ಮಾದೊಡಂ ದಿವ್ಯ  ದಿಟಂ!
ಇಂತಪ್ಪ ಶುಭದಿನಕೆ ಅದೆಂತಪ್ಪ ನಾಂದಿಯೊ! –
ಅದಂತಿರ್ಕೆ! —
ಶುಭಂ ಬಪ್ಪ ರೀತಿಯಂ ತರಿಸಲಲ್ ನಾಮಾರ್?
ದೈವಮೆ ಸಮರ್ಥಂ! ಮಾಣ್, ಮನಮೆ, ಮಾಣ್!
(ಇದ್ದಕ್ಕಿದ್ದಂತೆ ಮರುಕೊಳಿಸಿದ ಉತ್ಸಾಹದಿಂದ)
ಕಾಣ್, ಕಾಣ್, ಏನ್ ಚೆಲ್ಲು ಮೂಡುತಿಹುದೀ
ಬೆಳ್ಳಂಗೆಡೆವ ನೀರ್ ಬೀಳದೊಳ್!
ನೇಸರ್ ಕದಿರ್ ಚವರಿ ತಾನ್ ಕುಂಚಮಂ ಬೀಸಲ್ಕೆ
ದೇನ್ ಮಾಯೆ! ಅದೊ ಕಾಣ್, ಪವಾಡಮೆ ದಿಟಂ
ಈ ಬಣ್ಣಂಗುಣಿವ ಕಾಮಧನುಗಳ್!

(ತನ್ನ ಧನುರ್ದಂಡವನೆತ್ತಿ ನೀರಾಟ್ವಾಡುತ್ತಾನೆ. ಆರೊ ಕೂಗುವ ಸದ್ದು ನೀರ್ಮೊರೆಗೂಡಿ ಕೇಳಿಬರುತ್ತದೆ. ಅದನ್ನು ಗಮನಿಸದ ಏಕಲವ್ಯ ನೀರಾಡುತ್ತಲೆ ಇರುತ್ತಾನೆ. ಕರೆ ಇನ್ನೂ ಹತ್ತಿರವಾಗಿ ಸ್ಪಷ್ಟತರವಾಗುತ್ತದೆ. ‘ಬಚ್ಚಾ! ಬಚ್ಚಾ! ‘ ಎಂಬ ದನಿಗೆ ಏಕಲವ್ಯ ತಟಕ್ಕನೆ ನಿಮಿರಿ ಕಿವಿಗೊಡುತ್ತಾನೆ.)

ಆರೊ ಕೂಗುವರಲ್ತೆ? ಈ ಅರ್ಬ್ಬಿಯಬ್ಬರಮೊ
ಪುಲಿಯ ಗರ್ಜನೆಯುಮಂ ನುಂಗಿ ನೊಣೆದಪುದು!
(ಮತ್ತೆ ಬಚ್ಚೂ! ಬಚ್ಚೂ !” ಕೇಳಿಬರುತ್ತದೆ)
ಓವೊ, ಅಬ್ಬೆ ಇರಲ್ ವೇಳ್ಕುಂ! (ನಗೆಗೂಡಿ)
ಅರ್ಬ್ಬಿಯಂ ಮಿರಲ್ಕೆ ಸೆಣಸಿದಪಳಲ್ತೆ! (ಚಿಂತಿಸಿ)
ಅರಸಿ ಬಂದಪಳೆನಗೆ ಬೆಳಗಿನುಣಿಸಂ ಕುಡುಲ್:
ಇರುಳ ಕರ್ಪಳಿವ ಮುನ್ನಮೆಯೆ ಮುಂಬೊಳ್ತಿನೊಳೆ
ಅಬ್ಬೆಗೊರೆಯದೆ ಬಂದೆನೀಯೆಡೆಗೆ,
ಗುರುವಿನಾಗಮನದೊಂದು ಉತ್ಸಾಹದೊಳ್ ಕೊಚ್ಚಿ,
ವಿನಯಮಂ ಮರೆತು!

(ಮತ್ತೆ ಕರೆ ಕೇಳೆಸುತ್ತದೆ. ಏಕಲವ್ಯ ಗಟ್ಟಿಯಾಗಿ ಕೊಳ್ಳುತ್ತಾ ಮರಹಸುರು ತುಂಬಿ ಏರಿದ ಮಲೆಯ ಓರೆಯ ಕಡೆಗೆ, ಕರೆ ಕೇಳಿಬಂದ ದಿಕ್ಕಿಗೆ ಕಣ್ಣಾಗುತ್ತಾನೆ. ಮುಖದಲ್ಲಿ ನಗೆ ಅರಳುತ್ತದೆ, ತಾಯಿಯನ್ನು ಕಂಡ ಉಲ್ಲಾಸಕೆ.)

ಅಕ್ಕೊ, ಅಲ್ಲೆ ಬರುತಿರ್ಪಳಬ್ಬೆ!
ಏರಲಾರದೆ ಕೋಡುಗಲ್ಲೇರುತಿರ್ಪಳ್!
ಬಟ್ಟೆದಪ್ಪುವಳೇನೋ ಈ ಕಲ್ಮರಗಳಿರ್ಕಟ್ಟಿನೊಳ್!

(ಚಪ್ಪಾಳೆ ತಟ್ಟಿಅಬ್ಬೇ!” ಎಂದು ಕೂಗಿ ತಾಯಿಯ ಗಮನವನ್ನು ತಾನಿರುವೆಡೆಗೆ ಸೆಳೆಯುತ್ತಾನೆ. ತಾನಿರುವ ಜಲಪಾತದ ದಿಬ್ಬಕೆ ಬರುವಂತೆ ದಾರಿ ತೋರುವ ಸಲುವಾಗಿ ಕೈಸನ್ನೆ ಮಾಡುತ್ತಾನೆ.)

ಇತ್ತಲಿತ್ತಲ್, ಅಬ್ಬೆ,
ಆ ತಾರಿಮರನೆಡೆವಿಡಿದು ಬಾ!

(ಹಾಗೆಯೆ ನೋಡುತ್ತಿದ್ದು ತಾಯಿ ಸರಿದಾರಿ ಹಿಡಿದು ಕಣ್ಮರೆಯಾದುದನು ಕಂಡು, ತುಂಟಗಣ್ಣು ಮಾಡಿ, ವಿನೋದವನ್ನು ನೆನೆದು ನಕ್ಕು)

ಇನ್ನೆಗಂ, ಒರ್ಮೆಯಾದೊಡಂ,
ಎನಿತೊ ಸೂಳ್ ಬಾ ಎಂದು ಪೀಡಿಸಿದೊಡಂ,
ಅಬ್ಬೆ ಇಲ್ಲಿಗೈತಂದುದಿಲ್ಲ.
ಇಂದಚ್ಚರಿಯನೊಂದನೊಡ್ಡು ವೆನ್,
ಬಿನದಂ ಬಡಿಸಿ ನಗಿಸುವೆನ್!

(ಜಲಪಾತದ ಹಿಂಗಡೆಗೆ ನೀರಧಾರೆಯ ಬೆನ್ಗೆ ಮುಳುಗಿ ಹೋದನೆಂಬಂತೆ ಮರೆಯಾಗುತ್ತಾನೆ. ಏಕಲವ್ಯನ ತಾಯಿ ಹೊಂಬಾಳೆಯಲ್ಲಿ ಉಣಿಸುಹೊತ್ತು ಏದುತ್ತ ಪ್ರವೇಶಿಸಿ, ಏಕಲವ್ಯನು ನಿಂತಿದ್ದ ಹಾಸುಬಂಡೆಗೆ ಬರುತ್ತಾಳೆ. ಅವಳಿಗೆ ನಡುವಯಸ್ಸು ಮೀರಿದೆ. ಮಲೆಯರ ಉಡುಗೆ ಬಿಗಿದುಟ್ಟಿದ್ದಾಳೆ. ತೊಡುಗೆ ಇಲ್ಲ. ಹಣೆಗೆ ವಿಭೂತಿ. ಸುತ್ತಲೂ ನೋಡಿ, ಯಾರನ್ನು ಕಾಣದೆ ಬೆರಗಾಗುತ್ತಾಳೆ.)

ಅಬ್ಬೆ — ಬಚ್ಚಾ! ಏ ಬಚ್ಚಾ! (ಸುತ್ತಲೂ ಹುಡುಕುನೋಡಿ)
ಈ ಎಡೆಯೆ ಇರ್ದವನ್ ಮತ್ತೆತ್ತಲೆಯ್ದಿದನ್?
ಕೂಳ್ ವೊತ್ತು ಉಣಿಸನೀಯಲ್ಕರಸಿ ಸಾಕಾಯ್ತು !
ಉಂಡ ಮೇಲಾದಡಂ ಪೋಗಲಾಗದೆ ಅಡವಿಗೆ?
ಕಾಡೇನ್ ಮಂಜೆ? ಬಿಸಿಲೇರ್ದೊಡಳಿವುದಕೆ?
ನಿಚ್ಚಮುಂ ಇವನದು ಇದೊಂದು ಪಾಡು !
ಕಾಡು! ಕಾಡು! ಕಾಡು
ಬೈಗು ಬೆಳಗೂ ಕಾಡು!
ಕನಸಿನಲ್ಲಿಯು ಕಾಡು!

(ತೆಕ್ಕನೆ ಏಕಲವ್ಯನು ಪೂಜಿಸಿದ್ದ ದ್ರೋಣಪ್ರತೀಕವನ್ನು ಕಂಡು ಅಚ್ಚರಿಯಿಂದ ಕಣ್ ನಟ್ಟು ನಿಲ್ಲುತ್ತಾಳೆ.ಅಚ್ಚರಿ ಬಿನದಕ್ಕೆ ತಿರುಗಿ ಮುಗುಳುನಗುತ್ತಾ ತಲೆಯೊಲೆಯುತ್ತಾ)

ಇದೇನ್ ಗೋಂಬೆಯಾಟಮೊ, ನನ್ನಣುಗಂಗೆ !
ಈ ಅಡವಿಯೊಳಗೆಲ್ಲಿ ನೋಡಿದೊಡಲ್ಲಿ
ಇವನ ಈ ಗೊಂಬೆಗಳ್ ! (ಒಂದು ತೆರನಾದ ನಿರ್ವೇಗದಿಂದ)
ಹ್ಞು! ಅಣುಗನಲ್ತೆ ಆಡಲಿ!
ಪಿಂತಿಲ್ಲ, ಮುಂತಿಲ್ಲ, ಬೆನ್ನಿಲ್ಲ, ಬಸಿರಿಲ್ಲ;
ಒರ್ವನೋಂಟಿಗನಲ್ತೆ? ಬೇಸರ್ ಕಳೆವುದೆಂತು?
ಮಿಗಗಲ್, ಪಕಿಗಳ್, ಮರಗಳ್, ಕಲ್ಗಳ್,
ತಿಂಗಳ್, ನೇಸರ್, ಉದಯಾಸ್ತಂಗಳ್,
ತೊರೆಗಳ್, — (ಜಲಪಾತವನ್ನು ನೋಡುತ್ತಾ)
ಮೇಣಿಂತಪ್ಪ ನೀರ್ ಬೀಳಗಳ್?
ಇವೆ ಅಲ್ತೆ ಒಡವುಟ್ಟುಗಳ್ ಮೇಣ್ ಒಡನಾಡಿಗಳ್ !

(ಜಲಪಾತದ ಹಿಂದಿನಿಂದ ಏಕಲವ್ಯಅಬ್ಬೆ !” ಎಂದು ಕೂಗಿ ಕರೆಯುತ್ತಾನೆ. ಅಬ್ಬೆ ಬೆಚ್ಚಿಬಿದ್ದು ಸುತ್ತಲೂ ನೋಡಿ)

ಇದೇನ್ ಬಚ್ಚನೊ? ಅರ್ಬ್ಬಿಯ ಪರೇತಮೊ?
ಅರ್ ಕರೆದವರ್ !

(ತಾಯಿ ದಿಗ್ ಭ್ರಾಂತೆಯಾಗುತ್ತಿರುವುದನ್ನು ಕಂಡು ಜಲಪಾತದ ನೀರ್ ತೆರೆಯ ಹಿಂದಿನಿಂದ ಹಹ್ಹಹ್ಹ ಎಂದು ಚಪ್ಪಾಳೆ ಹೋಡೆದು ನಗುತ್ತ ಏಕಲವ್ಯನು ತಾಯೆಡೆಗೆ ನೆಗೆದೋಡಿ ಬರುತ್ತಾನೆ,)

ಅಬ್ಬೆ  — (ಬೆಚ್ಚಿ ಬಿದ್ದು ಹುಸಿಮುನಿಸಿನಿಂದ)
ಚಿಃ! ನಿನಗಿದೇನ್ ಬಿನದಮೊ ನನ್ನೊಡನೆ, ಬಚ್ಚು?
ಮೀಸೆ ಮೊಳೆದೋರ್ದಡಂ ನಿನಗಣುಗು ಬಿಡದು.

ಏಕಲವ್ಯ(ಮುಗುಳು ನಗುತ್ತ)
ಅಬ್ಬೆ, ನೀನಿದಿರ್ ನಿಂದಿರಲ್
ಗಡ್ಡ ನರೆತೊಡಂ ಅಣುಗೆ ನಾನ್ !
ಏನ್ ಪುಕ್ಕೊ ನಿನಗೆ? ದೆಯ್ಯಮೆಂದಳ್ಕಿದೆಯಾ?

ಅಬ್ಬೆ(ಬೆರಗಾಗಿ ಒಂದಿನಿತೂ ಒದ್ದೆಯಾಗದ ಮಗನ ಮೆಯ್ಯನ್ನು ಈಕ್ಷಿಸುತ್ತಾ)
ನೀರೊಳ್ ಅದೆಂತಿರ್ದೆಯೊ?
ಮುಳುಗಿಯುಂ ಮೆಯ್ ತೊಯ್ದುದಿಲ್ಲ !

ಏಕಲವ್ಯ(ಹಾಸ್ಯಕ್ಕೆ)ಮಂತ್ರಶಕ್ತಿ, ಅಬ್ಬೆ; ಜಲಸ್ತಂಭಮೆಂಬರ್ !

ಅಬ್ಬೆ — ಮೊನ್ನೆ ಆ ಮಡುವಿನೊಳ್ ಅಡಿ ಜಗುಳ್ದುರುಳ್ದು
ತೊಪ್ಪನೆಯ ತೊಯ್ದು ನಡುನಡುಗುತ್ತೆಯ್ತುಂದೆ!

ಏಕಲವ್ಯ(ಹಾಸ್ಯ ಮುಖಮುದ್ರೆಯಿಂದ)
ನಿನ್ನೆ ತಾನಾದುದೀ ಸಿದ್ಧಿ, ಅಬ್ಬೆ!
(ತಾಯಿ ಬೆಕ್ಕಸವಡುತ್ತಿರಲು ಏಕಲವ್ಯನು ಜಲಪಾತದ ಕಡೆ ಕೈದೋರಿ)
ನಿನಗೇಂ ಮಂಕೆ, ಅಬ್ಬೆ?
ನಾನೇನಂ ಪೇಳ್ದೊಡಂ ನಂಬಿ ಬೆರಗಪ್ಪೆ.
ಒಂದಿನಿತೂ ಬಿನದಮನರಿಯಲಾರೆ!

ಅಬ್ಬೆ(ದುಃಖಧ್ವನಿಯಿಂದ) — ಪಿಂತೆ ಪೋದುದಾ ಪೊಳ್ತು, ಬಚ್ಚು.
ನಿನ್ನಯಂಗೆ ಉಸಿರ್ ನಿಂದಂದೆ
ನನ್ನನಿತು ಬಿನದಮುಂ ಆ ಬೆಂಬಳಿಯೆ ನಡೆದತ್ತು!
ಮತ್ತೆ ನಾನ್ ಬಿನದಮನರಿವುದೆಂತು? —
ಇನ್ ನಂಬುಗೆಯ ಮಾತು?
ಇನ್ ಮೇಣ್ ನಿನ್ನೆಂಬುದನ್ ನಾನ್ ನಂಬದಂದು
ದೆಸೆಗೆಟ್ಟೆನೆಂದೆ ತಿಳಿ.

ಏಕಲವ್ಯ(ತನಗಿಂತಲೂ ಕುಳ್ಳಾಗಿ ಕೃಶಳಾಗಿದ್ದ ತಾಯನ್ನು ಅಕ್ಕರೆಯಿಂದ ತಬ್ಬಿ)
ಅಳಲದಿರ್, ಅಬ್ಬೆ!
ವಿನೋದಂ ವಿಷಾದಮಂ ಬಗೆಗೆ ತಂದುದು,
ನನ್ನದಪರಾಧಮಾಯ್ತು. —
ಕಾಣ್, ಅಬ್ಬೆ; ಅಲ್ಲಿ ಆ ನೀರ್ ಬೀಳುವಾಚೆ
ನೀರ್ ಕೊರೆದ ಕಲ್‌ಪೊಟರೆಯಿರ್ಕುಂ.
ನೀನಾದೊಡಂ ಅಲ್ಲಿ ತೊಯ್ಯದೆಯೆ ಇರಲ್ ಬರ್ಪುದು.
ಬಿಸಿಲಳುರೆ ಎನಿತ್ತೆನಿತೊ ಬೇಸಗೆಯ ಪಗಲೊಳ್
ನಾನಲ್ಲಿ ಪೊಕ್ಕು ಹಿಮಗುಹೆಯ ತಣ್ಮನನುಭವಿಸುವೆನ್.
ನೀರೀಂಟಲೈತರ್ಪ ಕಾಳ್ಮಗಗಳನ್
ಮರೆಯಿಂ ಸಮೀಕ್ಷಲ್ ಸೊಗಸುದಾಣಂ!

ಅಬ್ಬೆ(ತಾನು ತಂದ ಹೊಂಬಾಳೆಯನ್ನು ಹಾಸುಗಲ್ಲಿನ ಮೇಲೆ ಇಡುತ್ತಾ)
ಏನ್ ಮಿಗವೊ? ಏನ್ ಖಗವೊ? ಏನ್ ಗಿರಿಯೊ? ಏನ್ ದರಿಯೊ?
ಪಸಿವು ನೀರಳ್ಕೆಗಳಂ ಮರೆಯಿಪ್ಪವೋಲ್ ಮಾಳ್ಪ
ಆ ಪ್ರಕೃತಿಗಳ್ ದಿಟಂ ಸುಕೃತಿಗಳ್!
ನನ್ನನುಂ ಮರೆವವೊಲ್ ಮಾಳ್ಪುವೆಂಬುದೆ ನನಗೆ ಶಂಕೆ!

ಏಕಲವ್ಯ(ಮಾತೃಪ್ರೇಮಾತಿಶಯದಿಂದ)
ಅಬ್ಬೆ! ಅಬ್ಬೆ! ಚುಚ್ಚುನುಡಿ ನುಡಿಯದಿರ್!
ನನ್ನ ಬರ್ದುಕೆಲ್ಮಮಂ ನೀನೆ ತುಂಬಿರ್ಪೆಯಯ್‌:
ನೀನ್‌ ಎರ್ದೆಯ ತುಂಬಿರಲ್‌ ಬಾಳ್‌ ತುಂಬುವುದು ನನಗೆ.
ಇಲ್ಲದಿರೆ ಬರಿದಪ್ಪ ಬಾಳ್ ಬರಿಯ ಗಾಳ್!
ನಿನ್ನೊಲ್ಮೆ ಬಾಳ್ಗೆ ಬೆಳಕಾಗಿರಲ್
ಖಗಂ ಮಿಗಂ, ಗಿರಿ ದರಿ, ಬಾನ್ ಕಾನ್,
ಎಲ್ಲವುಂ ಸವಿ;
ನೀನಿಲ್ಲದಂದವೆಲ್ಲಂ ಕಳ್ತಲೆಯ ಸೊನ್ನೆಗವಿ!

ಅಬ್ಬೆ(ಮುದ್ದು ಸೂಸೆ ಮೊಗನೋಡಿ)
ಮತ್ತೆ, ನೀನಿಂದೇಕೆ ಬೆಳಗಪ್ಪ ಮುನ್ನಮೆಯೆ
ನನಗೆ ಪೇಳದೆಯೆ ಪರೊಮಟ್ಟುದಯ್ ಬನಕೆ?
ಪೊಳ್ತರೆಯ ತಣ್ಗೂಳುಮಂ ಪಣ್‌ಜೇನ್ಗಳಂ
ಪೊಂಬಾಳೆಯೊಳ್‌ ಪೊತ್ತು ಕರೆದಲೆದು ದಣಿದೆಲ್ತೆ?
ಬಾ ಕೊಳ್, ಕುಳಿತು ಉಣ್;
ಇದೆಕೊ ಜೇನ್, ಇದೆಕೊ ಪಣ್.
(ಹೊಂಬಾಳೆಯನ್ನು ಅಣಿಮಾಡಿಡುತ್ತಾಳೆ)

ಏಕಲವ್ಯ(ಮೊಗವರಳಿ ಅಣಿಯಾದ ಉಣಿಸಿನ ಕಡೆಗೆ ನೋಡಿ)
ಅಬ್ಬೆ, ನಿನ್ನಕ್ಕರೆಯೆ ಮೆಯ್ವೆತ್ತವೋಲ್
ಇರ್ಪುದೀ ಜೇನ್!
ಪಣ್ತ ತಾಯ್ತನದ ಪಡಿಮೆಯೆ ದಿಟಂ
ತನಿರಸಂ ತುಂಬಿ ತುಳ್ಕುತಿರ್ಪೀ ಇನಿವಣ್!

ಅಬ್ಬೆ — ಇರ್ಕೆ, ಸಾಲ್ಗುಂ ಬಣ್ಣನೆ. ಬಾ, ಉಣ್.
ಪೊಡೆ ತಣಿವುದೇನ್ ತಣಿಯಲ್ಕೆ ಕಣ್?

ಏಕಲವ್ಯ — ಇಂದೊಂದು ನೋಪಿಯನ್ ನೋಂತಿಹನ್;
ನೋಂಪಿ ಮುಗಿದಿಂಬಳಿಯೆ, ಅಬ್ಬೆ, ಉಣ್ಬೆನ್.

ಅಬ್ಬೆ — ಪಾರ್ವರಾ ಪಾಡು, ಬಿಯದರ್ಗದೇಂ ನೋಂಪಿ?

ಏಕಲವ್ಯ — ಬಿಯದರೇಂ? ಪಾರ್ವರೇಂ? ನೋಂಪಿಗೆರಡುಂಟೆ?

ಅಬ್ಬೆ(ಮುಗುಳುನಗೆಯಿಂದ) ಆವುದೊ ಬಯಕೆ? ಚೆಲ್ವು ಪೆಣ್?

ಏಕಲವ್ಯ — ನನಗೇವುದಾ ಚಿಂತೆ! ಪೆಣ್ ಪಾಡು ನಿನಗಲ್ತೆ?

ಅಬ್ಬೆ — ಮತ್ತದೇನ್, ಬಲ್ ಬೇಂಟೆ ಕೈಗೂಡಲೆಂದೆ?

ಏಕಲವ್ಯ — ಆ ಅಂಗೆಗಾಲಿಕ್ಕುವುದನೆಂದೊ ನಾನ್ ಪಿಂತಿಕ್ಕಿದೆನ್.
ಗುರಕೃಪೆಯಿಂದಾ ಬಿಜ್ಜೆ ಕರತಲಾಮಲಕಂ.
ಪುಲಿಯೊ? ಸಿಂಹಮೊ? ಫಣಿಯೊ? ಪೇರಾನೆಯೊ?
ಬಳಿಯೊ? ಗೆಂಟರೊ? ಕಾಣ್ಗೆ ಮೇಣ್ ಕಾಣದಿರೈ
ಕಣ್ಬೊಲದೊಳಿರ್ಕೆ ಮೇಣ್ ಪೊರಗಿರ್ಕೆ
ಹೆದೆಯನೇರಿಸಿ ಬಿಲ್ಗೆ ಬಾಣಮಂ ಪೂಡಿ,
ನೆನೆದು ಗುರದೇವನಂ, ಬಿಟ್ಟೆನೆನೆ
ತಪ್ಪದೆಂದರಿ ನಾನಿಟ್ಟ ಗುರಿ!
ಮೊನ್ನೆ ನಿನಗಾನ್ ಪೇಳ್ದೆನಲ್ತೆ ನಡೆದೊಂದು ಕತೆಯಂ.

ಅಬ್ಬೆ — ಅದಾವ ಕತೆ?
ಎನಿತೆನೆತೊ ಪೇಳ್ವೆ ನೀನೆನಗೆ ಕತೆಗಳಂ.

ಏಕಲವ್ಯ — ಕಟ್ಟುಕತೆಯಲ್ತು. ನಡೆದ ಕತೆ.
ಪೇಳ್ದೆನಿಲ್ಲವೆ ನಿನಗೆ,
ನನಗೆ ಮೇಣಾ ಅರ್ಜುನಗೆ ನಡೆದ ಕಲಹಮಂ.

ಅಬ್ಬೆ — ಏನ್ ಕಲಹಮ್? ಆರ್ ಅವನ್? ಏಕೆ?

ಏಕಲವ್ಯ — ಬಲ್‌ ಸೊಗಸದನ್ ನಿನಗೆ ಪೇಳ್ದೆನೆಂದಿರ್ದೆನ್.
ಬಾ ಇಲ್ಲಿ; ಈ ಅರೆಯ ಮೇಲ್ ಕುಳ್ತು ಕೇಳ್.