(ಬಳಿಯಿದ್ದ ಬಂಡೆಯ ಮೇಲೆ ತಾಯಿಯನ್ನು ಕುಳಿತುಕೊಳ್ಳುವಂತೆ ಮಾಡಿ ತಾನು ಇದಿರಿಗೆ ನಿಂತು ಉತ್ಸಾಹದಿಂದ ಹೇಳುತ್ತಾನೆ.)

ಬಲ್ ಸೊಗಸು ಆ ಕತೆ, ಅಬ್ಬೆ!

ಅಬ್ಬೆ — ಕಂಡು ನಿನ್ನುತ್ಸಾಹಮಂ ಈ ನೀರ್ಬೀಳಮೇ
ನಾಣ್ಚಿ ಬೆಳ್ಳಂಗೆಡೆಯುತಿದೆ. ಪೇಳ್, ಬಚ್ಚು, ಪೇಳ್:
ನಿನ್ನ ದನಿಗೇಳ್ವುದೆಯೆ ನನಗೆ ಹಬ್ಬಮೆನೆ,
ಆ ದನಿಗೆ ನಲ್‌ಗತೆಯೆ ಸವಿ ನೆರೆಯೆ ಕಿವಿಗೆ ಜೇನ್!

ಏಕಲವ್ಯ — ಬಲ್ ಸೊಗಸು, ಅಬ್ಬೆ! ಬಲ್ ಸೊಗಸು, ಕೇಳ್.
ಆ ಕತೆಗೆ ನಾಯಕಂ ನಾನೆ, ಕವಿಯುಂ ನಾನೆ!
ನೆನೆಹಿರ್ಪುದೇನ್ ನಿನಗೆ?
ಅಂದು ಪೊಳ್ತರೆ,
ಪುತ್ತೊಳಿರ್ದಾ ತುಡುವೆ ಜೇನಂ ಕಿಳ್ತು
ತುಪ್ಪಮಂ ತಂದಿತ್ತೆನಲ್ಲೆ ಆ ಪೊಳ್ತರೆ —
(ತಲೆಯೆತ್ತಿ ದೂರನೋಡಿ ದಿಕ್ಕಿಗೆ ತೋರ್ ಬೆರಳುಮಾಡಿ)
ನೋಡಲ್ಲಿ ಮೇಲೆದ್ದು ನಿಮರ್ದು ಮೆರೆದಿದೆ ಕೋಡು,
ಆ ಮಲೆಯ ತಲೆಗೆ ಪೋದೆನ್.
ನಟ್ಟ ನಡುಗಾಡಿನೊಳ್ ಗೂಡುಗೆಯ್ದು
ಮೊಟ್ಟೆಯಿಟ್ಟಿರ್ದೊಂದು ನವಿಲರ್ಕೆದಾಣಮಂ
ನೋಳ್ಪೆನೆಂಬಾತುರದಿ ಓಡಿ ನಡೆದೆನ್,
ಕಾಲ್ಗೆ ಗರಿಮೂಡಿತೆಂಬಂತೆವೋಲ್.
ಪೋಗಿ ನೋಳ್ಪೆನ್: ನೋಳ್ಪುದೇನನ್?
ಮೊಟ್ಟೆಯಂ ತಿನಲೆಂದು ಬಂದಿರ್ದ ಪಾವೊಡನೆ
ಬಲ್‌ಗಾಳೆಗಂಗೊಡುತ್ತಿರ್ದುದಂ ಕಂಡೆನಾ ನವಿಲನ್.
ಸರಳೆಚ್ಚು ಫಣಿಯನಾಯೆಡೆಯೆ ಕೊಂದು,
ನವಿಲಬ್ಬೆಯಂ ಸಂತಯ್ಸಿ ರಕ್ಷೆಯನಿತ್ತು,
ಮೊಟ್ಟೆಮೇಲದನ್ ಕಾವ್ ಕೂರವೊಲ್ ಮಾಡಿ,
ಬಿನದಕ್ಕೆ ಪೆರ್ಮರವನೊಂದನ್ ನೆತ್ತಿಗೆರ್ದು,
ಕಣ್ಬೊಲದ ದೃಶ್ಯವೈಶಾಲ್ಯಮಂ ನೋಳ್ಪ
ಪ್ರಕೃತಿ ಭೋಗದೊಳಾಸಕ್ತನಾಗಿರ್ದೆನ್.
ಇರಲಿರಲ್,
ದೂರದಿಂ ಕಿವಿಗೆವಂದುದು ಬೇಂಟೆಯಬ್ಬರಂ.
ಕೇಳುತಿರೆ ಹತ್ತೆಸಾರ್ದುದಾ ತುಮುಲರಾವಂ.
ಮುನಿಸುರಿದುದೆನಗೆ:
ನನ್ನ ರಕ್ಷೆಯೀ ಅರಣ್ಯ ಸೀಮೆಯಂ
ಮುತ್ತಿದವರಂ ಸೊರ್ಕಿಳಿಸಿ ಪಿಂತೆಳ್ಪಿದಪೆನೆಂದು
ರೊಷದಿಂ ತರಿಸಂದು, ಮರದಿಂದಿಳಿದು,
ಬಿಲ್ಲಕೊಪ್ಪಿಗೆ ಹೆದೆಯನೇರಿಸುತ್ತಿರೆಯಿರೆ
ತೆಕ್ಕನೆಯೆ ಕಿವಿಗೆ ಕಿಕ್ಕಿಯಿರಿದುದೊಂದಾರ್ಭಟಂ
ಹೂಂಕರಿಸುವೆಕ್ಕಲನ!
ಮಲೆಯೆ ಗುಟುಗಿತ್ತು; ಕಾಡೆ ನಡುಗಿತ್ತು;
ಪೂಡಿದೆನ್ ಕೂಡೆ ಸರಳನ್ ಹೆದೆಗೆ!
ಹೂಂಕೃತಿಯ ಕೇಳ್ದು ಗುರಿಯೆಟ್ಟೆನ್, ಎಚ್ಚೆನ್!

ಅಬ್ಬೆ(ಮಗನನ್ನು ರಕ್ಷಿಸಲು ತಬ್ಬುವಂತೆ ಅಭಿನಯಿಸಿ)
ಅಬ್ಬ! ನೀನೆರ್ದೆಡೆಗೆ ನುರ್ಗಿದುದೆ ಆ ಎಕ್ಕಲಂ?

ಏಕಲವ್ಯ — ಅಲ್ತಲ್ತು, ಕಣ್ಬೊಲಂ ಮೀರ್ದಿರ್ದುದಾ ಕಾಳ್ಮಿಗಂ,
ದೂರದೊಳ್ ಪೇರಡವಿ ಪೊಡೆಯೊಳ್,

ಅಬ್ಬೆ — ಮತ್ತೆ? ಗುರಿಗಂಡುದೆಂತು ನೀನ್?

ಏಕಲವ್ಯ — ಶಬ್ದವೇಧಿ ಎಂಬ ಬಿಜ್ಜೆಯಿಂದಬ್ಬೆ!

ಅಬ್ಬೆ — ಅಂತೆನಲ್?

ಏಕಲವ್ಯ — ಗುರಿ ಕಣ್ಗೆ ಕಾಣದಿರ್ದೊಡಂ
ಎಚ್ಚಂಬು ತಗುಳ್ವುದು ಗುರಿಗಮೊಘಂ,
ಅದೊಂದತೀಂದಿಯ ಸಾಮರ್ಥ್ಯಂ.

ಅಬ್ಬೆ(ಬೆರಗಾಗಿ ಮಗನನ್ನು ಮೆಚ್ಚಿ ನೋಡಿ)
ನೀನೆಂತು ಕಲಿತಯ್, ಬಚ್ಚು, ಅಂತಪ್ಪ ಬಿಜ್ಜೆಯಂ?

ಏಕಲವ್ಯ — ಗುರಕೃಪೆಯಿಂ.

ಅಬ್ಬೆ — ಆರ್ ಆ ಗುರು?

ಏಕಲವ್ಯ(ದ್ರೋಣನ ಪ್ರತೀಕವಾದ ಶಿಲಾಕಾರವನ್ನು ತೋರಿಸಿ)
ಆ ಪೂಜ್ಯನ್!

ಅಬ್ಬೆ — ಕಲ್‌ಗೊಂಬೆಯದು ಕಲಿಪುದೆಂತಯ್?
ಅದೇನ್ ದೇವರೆ?

ಏಕಲವ್ಯ — ದೇವರೆ ದಿಟಂ?

ಅಬ್ಬೆ — ಆವ ದೇವರೊ?
ನಮಗಿರ್ಪುದೊಂದೆ: ಬೇಂಟೆ ದೇವರ್!
ನೀನಾಡುವಾ ಗೊಂಬೆ ಬೇಂಟೆ ದೇವರೇನ್‌?

ಏಕಲವ್ಯ — ಅಲ್ತಲ್ತು. ಗುರದೇವನ್.

ಅಬ್ಬೆ — ಅದಾವುದಾ ಪೊಸದೇವರ್? ಪುಟ್ಟಿದುದೊ?
ಬೇಂಟೆ ದೇವರ ಮರಿಯೊ?

ಏಕಲವ್ಯ(ನಗುತ್ತ)
ಮರಿಯಿಕ್ಕಲೇಂ ನೀನ್ ಸಾಕುವಾ ಕೋಳಿಯೋ?

ಅಬ್ಬೆ — ಇರ್ಪೊರ್ವ ದೇವರ್ ಮರಿಯಿಕ್ಕದಿರೆ
ಮತ್ತೆಂತು ಬರ್ಕುಮಾ ಪೊಸತು ದೇವರ್?

ಏಕಲವ್ಯ — ಕಾಡೊಳಿರ್ಪೀ ನಮ್ಮ ಬೇಂಟೆ ದೇವರೆ ದೇವರ್;
ಇನ್ನಿಲ್ಲಮೆಂದರಿತೆಯೇನ್?
ಎನಿತೆನಿತೊ ದೇವರ್ಕಳಿರ್ಪರ್ ಆ ನಾಡಿನೊಳ್.

ಅಬ್ಬೆ — ಅವರೊಳೊಂದೋ ಈ ಕಲ್ ಗೊಂಬೆ?

ಏಕಲವ್ಯ — ಅಂತಪ್ಪ ದೇವರಲ್ತು, ಈತನ್ ಗುರು.
ಉಣ್ಣನ್, ಉಸಿರ್ವನ್, ನಮ್ಮಂತೆ ಬರ್ದುಕಿರ್ಪನ್.
ಹಸ್ತಿಪುರ ರಾಜಧಾನಿಯೊಳೀತನಿರ್ಪನ್.
ಅರಸುಮಕ್ಕಳ್ಗಿವನೆ ಗರುಡಿಯಾಚಾರ್ಯನ್.
ಬಿಲ್ಲೋಜನ್, ಪಾರ್ವರೊಳ್ ಪಾರ್ವನ್.
ದ್ವಿಜವರೇಣ್ಯನ್, ಗಣ್ಯನ್, ಅಗ್ರಗಣ್ಯನ್.
ದ್ರೋಣನೆಂಬುದು ಪೆಸರ್.
ಪರಮಗುರು ನನಗೆಲ ಅವನ ಕೃಪೆಯಿಂದೆನೆಗೆ
ಬಿಲ್‌ಬಿಜ್ಜೆ ದೊರಕೊಂಡುದಿನ್ನೆಣೆಯೆ ಇಲ್ಲದೊಲ್.
ನೀನ್ ಕಾಣ್ಪುದೀ ವಿಗ್ರಹಂ ದ್ರೋಣಂಗೆ ಪ್ತತಿಮೆ.

ಅಬ್ಬೆ — ಅಯ್ಯೊ ನಾನೆಂತಪ್ಪ ಬೆಪ್ಪು!
ನಿನ್ನಣುಗುತನದಾಟಕ್ಕೆ ಸಮೆದೊಂದು
ಕಲ್ ಗೊಂಬೆಯೆಂದಿರ್ದೆನ್! ತಪ್ಪಾಯ್ತು!
(ವಿಗ್ರಹಕ್ಕೆ ಕ್ಷಮೆ ಬೇಡುವಂತೆ ಕೈಮುಗಿಯುತ್ತಾಳೆ)

ಏಕಲವ್ಯ — ಅಬ್ಬೆ, ನೀನರಿಯೆ ಆ ಗುರು ಮಹಿಮೆಯನ್:
ತಿಳಿದವನ್, ಅಳ್ಕರೆಯುಳ್ಳವನ್, ತಿಳಿಗೊಂಡವನ್.
ದಿವ್ಯಜ್ಞಾನಿಯೆಂಬರ್, ಸಮದರ್ಶಿಯೆಂಬರ್,
ಧನುರ್ವಿದ್ಯಾದೇವನೆಂಬರ್.
ಅಂದು, ನನ್ನಯ್ಯನಿರ್ದಂದು, ಕೇಳ್ದೆನವನಿಂ
ದ್ರೋಣ ಮಹಿಮೆಯಂ, ಸಾಮರ್ಥ್ಯಮಂ.
ನಾನುಮಾ ಗುರುವಿನೆಡೆಗೆಯ್ದಿ ಬಿಲ್‌ಬಿಜ್ಜೆಯನ್‌
ಕಲ್ತು ಬರ್ಪೆನ್ ಎಂದು ಬೇಡಿದೆನ್.
ಅಯ್ಯನೆಂದನ್: “ಅವರ್ ಪಾರ್ವರ್.
ಬಿಯದರ್ಗೆ ಒವಜುಗೆಯ್ಯಲ್ಕೆ ಒಪ್ಪರ್.
ನಿನ್ನನ್ ಗಹಗಹಿಸಿ ನಕ್ಕು ನೂಂಕುವರ್.”
ನಾನೆಂದನ್: “ನಿನ್ನ ಕಾಲ್ವಿಡಿವೆನಯ್ಯ,
ಕಳಿಪು ನನ್ನನ್.
ಎಂತಾದೊಡಂ ಗುರುಮನವನೊಲಿಸಿ
ಕಲ್ತು ಬರ್ಪೆನ್.”
ಅಯ್ಯನ್ ಎನ್ನಾಸೆಯಂರಿಯನ್ ಕಂಡು ಕನಿಕರಿಸಿ
ಪೋಗಿ ಬಾ ಎಂದೊಪ್ಪಿ ಪರಸಿದನ್.
ನಾನ್ ಪೋದೆನ್.
ಅರಸರೂರೊಳ್ ಕಾಡಂಗೆನಗೆ ಕಣ್ ಗೆಟ್ಟವೋಲಾಯ್ತು.
ನನ್ನ್ ಸೈಪೆನಲೆ ವೇಳ್ಕುಂ:
ಗುರುಪುತ್ರನ್, ನನ್ನೋರಗೆಯಾತನ್,
ನನ್ನೊಳ್ ನೇಹಮುಕ್ಕಿ ತನ್ನಯ್ಯಂಗೆ ಕಾಣಿಸಿದನ್.
ಅಬ್ಬೆ! ಏನ್ ತೇಜಮಾ ಆಚಾರ್ಯನದು!
ತಳತಳಿಪ ಆಯುಧಾಗಾರಮಂ ಪೊಕ್ಕವೋಲಾಯ್ತು
ನನಗಾತನಂ ಕಂಡು!
ನಾಣ್ಚಿ ಬೆದರುತ್ತಿರ್ದ್ದೆನ್ನಂ ಅಳ್ಕರಿಂ ನುಡಿಸಿದೆನ್.
ತೊದಲ್ ಒರೆದು ಪೇಳ್ದೆನ್ ಎನ್ನೆರ್ದೆಯ ಪೇರಾಸೆಯಂ.
ನಾನ್ ಶೂದ್ರನೆಂಬುದನರಿತೊಡಂ –
ನಮ್ಮನಾ ಪಾರ್ವರ್ ಶೂದ್ರರೆಂದಾಡುವರ್ —
ಪೂಜ್ಯನ್ ತಿರಸ್ಕರಿಸಲಿಲ್ಲ.
ಮುಡಿಯಿಂದಮಡಿವರೆಗೆ ನನ್ನಂ ನೋಡಿ
ಮಗನ ಕಡೆ ತಿರುಗಿ ಪೇಳ್ದನ್;
“ಅಶ್ಥತ್ಥಾಮ, ನಮ್ಮ ಚಟ್ಟರೊಳಿವನುಮೊರ್ವನ್
ನಿನ್ನ ನೇರ್ಗಿರಿಯನೆಂದೀತನನ್ ಕಾಣ್.”
ಕೇಳ್ದದನ್, ನನಗೆ ಮೂಡಿದ ಕೋಡು
ಸಗ್ಗದೈರಾವತದ ದಂತಮಂ ಸೆಣಸಿ
ತಿವಿದುದಲ್ತೆ? — ಆದೊಡೇನ್? –
ಅರಸು ಮಕ್ಕಳ ಅಸೂಯೆ ಅಡ್ಡವಂದುದು ನನಗೆ.
ಪಾಂಡವರೊಳೊರ್ವನಾ ಬಿಂಕಗುಳಿ ಅರ್ಜುನನ್
ನನ್ನ ಬಿಲ್ಲೇಳ್ಗೆಯಂ ಕಂಡು ಕರುಬಿದನ್.
ಶೂದ್ರನೊಡನೆಮಗೆ ಸಮಚರೈ ಸಲ್ಲದೆಂದಾಡಿ
ಸೆಡೆತನ್, ಮುನಿದನ್; ಕೀಳವೋಲಾಡಿದನ್.
ಆಚಾರ್ಯನೆಂದನ್ “ಶೂದ್ರನಾದೊಡಮೇನ್?
ಸಮರ್ಥನ್, ವಿನಯಶಾಲಿ. ಕಲ್ತ ಮೇಲಿಂ ಬಳಿಂ
ನಿಮಗೆ ಸಲ್ವನ್, ನಿಮ್ಮ ಸೇವೆಯೊಳೆ ನಿಲ್ವನ್.
ಬಲ್ಲಿದನ್ ಕೈಂಕರ್ಯವೆಸಗೆ ಬಲ್ಲಿದರ್ ನೀಮಲ್ತೆ?”
ದ್ರೋಣನುಪದೇಶಮನ್ ಕಡೆಗಣ್ಚಿದರ್.
ಪೊರಗಟ್ಟಿದರ್ ನನ್ನನ್.
ಕಣ್ಬನಿದುಂಬಿದೆನ್ನಂ ನೋಡಿ ಕರುಣಿ ಗುರು
ಕೈವಿಡಿದು ತಲೆದಡವಿ ಸಂತಯ್ಸಿ ಪೇಳ್ದನ್:
‘ಏಕಲವ್ಯ’ — ಅವನಿತ್ತುದೆಯೆ ಆ ಪೆಸರ್:
ಬಚ್ಚನೆಂದೊಡೆ ನಗುವರೆಂದು
ಬೇರೊಂದು ಪೆಸರನಿಟ್ಟನ್. _
ಪೇಳ್ದನ್ ಗುರು “ಏಕಲವ್ಯ, ಆಳಲದಿರ್,
ಆಸೆಗೆಡದಿರ್. ನೀನೆಮ್ಮ ಮನೆಯೊಳಾಳಾಗಿರು.
ಈ ಗರುಡಿಗೆನ್ನ ಸೇವೆಗೈತರುತೆ
ದೂರದಿಂ ಕಂಡು ಕಲಿ, ಕಲ್ವನಿತಂ.
ಮತ್ತುಳಿದುದಂ ಮನೆಯೊಳೆಯೆ ಕಲಿಯುವನಿತಂ
ಕಲಿಪೆನಶ್ವತ್ಥಾಮನೊಡನೆ.”
ಕೇಳ್ದು, ಧೈರ್ಯಂ ಮೊಳೆತುದೆನಗೆ;
ಕೃತಜ್ಞತೆಗೆ ಕಾಲ್ವಿಡಿದು ಪೊಡಮಟ್ಟೆನ್.
ಆಶೀರ್ವದಿಸಿದನ್ ಗುರು –
ಕಲಿಸಿದನ್ ಬಿಲ್ ಬಿಜ್ಜೆಯೊಡನೆ ಸಕ್ಕದಕ್ಕರ ಬಿಜ್ಜೆಯಂ.
ನಿಚ್ಚಮುಂ ನಾಂ ಪಾಡುವಾ ಕಬ್ಬಂಗಳಂ
ಕೇಳ್ದಿರ್ಪೆಯಲ್ತೆ? ಅವೆಲ್ಲಂ ಸಕ್ಕದಂ.
ಕಲ್ಪಿ ಪೂರೈಸುವನಿತರೊಳೆ ನನ್ನಯ್ಯನ್
ಬಗ್ಗನಿಂದೇರುಗೊಂಡಾ ಸುದ್ದಿಯಂ ತಂದನ್
ನೀನಟ್ಟಿದಾ ಆಳ್.
ಬಿಲ್ಲೋಜನಾಣೆಯಂ ಮೇಣ್ ಪರಕೆಯಂ ಪಡೆದು
ಮರಳಿ ಬೇಗಂ ಬಪ್ಪೆನೆಂದಾಡಿ,
ಓಡೋಡಿ ಬಂದೆನ್ ನಿನ್ನೆಡೆಗೆ –
ಅಯ್ಯೊ, ಮಡಿದನಯ್ಯನ್ ಪುಣ್ಗೂರ್ತು! —
ನಿನ್ನೊರ್ವಳನೆ ಬಿಟ್ಟು ನಾನೆಂತು ಮರಳ್ವೆನ್ ?

(ಅಬ್ಬೆ ಕಣ್ಣೀರೊರಸಿಕೊಳ್ಳುತ್ತಾಳೆ. ಏಕಲವ್ಯನೂ ಮೂಗೊರಸಿಕೊಳ್ಳುತ್ತಾನೆ.)

ಇಲ್ಲಿಯೆ ನಿಂದೆನ್.
ಈ ಗುರುಪ್ರತಿಮೆಯನೆ ದ್ರೋಣಂಗೆತ್ತು
ಮುಂಬರಿಸಿದೆನ್ ಬಿಲ್‌ಬಿಜ್ಜೆಯಭ್ಯಾಸಮಂ.
ಅಬ್ಬೆ, ಸೋಜಿಗವನೇನೆಂಬೆ !
ಎಳ್ಚರ್ತ ಪೊಳ್ತು ನನಗರಿಯದಭ್ಯಾಸಮಂ
ಕನಸಿನೊಳ್ ಬಂದು ಬೋಧಿಸಿದನಾ ದಿವ್ಯಗುರು!
ಎಂತೆಂತಪ್ಪ ಬಿಜ್ಜೆಗಳೊ ಕೈಸಾರ್ದುವೆನಗೆ!
ಶಬ್ದವೇಧಿಯುಮದರೊಳೊಂದು.

ಅಬ್ಬೆ(ಮೆಚ್ಚಿ) ಅರಿತೆನ್, ಈಗಳರಿತೆನ್, ಆ ಪಂದಿ ಬಿಳ್ದುದೊ?

ಏಕಲವ್ಯಕಡೆದುರುಳ್ದುದು: ಆಲಿಸಬ್ಬೆ, ಮುನ್ನಡೆದುದಂ.
ಕೆಡದೊರಲುತಿರ್ದೆಕ್ಕಲನ ದಿಕ್ಕರಿತು ನಿರ್ಗ್ಗಿ
ಓಡಿದೆನ್ ಪಳುವದೊಳ್. ನೋಡಿದೆನ್;
ಕಂಡೆನೊಂದಚ್ಚರಿಯ ನೋಟಮನ್.
ಒರ್ವನ್ ತರುಣನ್ ರಾಜಪುರುಷನ್
ಆಜಾನುಬಾಹು, ತೇಜಸ್ವಿ,
ಬಿಳ್ದಾ ಪೆರ್ಬಂದಿಯ ಬಳಿಯೆ,
ಮಿಗದ ಬಿಸುಗೆನ್ನೀರ್ ತೊಯ್ದ ನಲದೊಳ್ ನಿಂದು,
ಪೊರಳ್ವ ಪಂದಿಯ ಬರಿಯೊಳ್ ನಟ್ಟುದಂ
ನನ್ನ ಬಿಟ್ಟಾ ಬಾಣಮಂ,
ನಟ್ಟಾಲಿಯಾಗಿ ನಿಟ್ಟಿಸುತ್ತಿರ್ದನ್!
ನಾನ್ ಬಳಿ ಸಾರಲ್, ಪಳುವನಾಲಿಸಿ,
ಶಿರವನುನ್ನತಮೆತ್ತಿ ನನ್ನನ್ ನೋಡಿದನ್.
ಮುಗಳ್ನಗೆಯ ತೆರೆಯೊಂದು ಮೊಗದೊಳಲೆಯಲೆಯಾಗಿ
ಸುಳಿಯುತಿರೆ ಕೇಳ್ದನ್: “ವನಚರ,
ಆರ್ ಎಚ್ಚರೀ ವರಾಹಮನ್?”
ಪೇಳ್ದೆನ್: “ನಾಗರಿಕ, ಓದಿ ತಿಳಿ;
ಕಲಿಪುದಾ ಬಾಣಾಕ್ಷರಂ!”
ಮೊಗಂ ಕೆಂಪೇರ್ದುದಾತಂಗೆ.
ನಟ್ಟು ನೋಡಿದನೆನ್ನ ಮೊಗಮಂ;
ನಾನುಂ ನೋಡಿದೆನ್.
ನೋಡಿ, ಕುರುಪುವಿಡಿದೆನ್ ಆತನನ್!

ಅಬ್ಬೆ — ಆರ್ ಅವನ್?

ಏಕಲವ್ಯಮುನ್ನಮಾನ್ ನಿನಗೆ ಪೇಳ್ದಾ ಅರ್ಜುನನ್.
ಪಾಂಡುಪುತ್ರನ್,
ಗುರುದ್ರೋಣಂಗೆ ನಚ್ಚಿನ ಶಿಷ್ಯನ್:
ಕಿರಾತನೆಂದೆನ್ನನ್ ಸಹಾಧ್ಯಾಯಿಯಾಗಲೊಲ್ಲದೆ
ಅಸೂಯೆಯಿಂ ತಿರಸ್ಕರಿಸಿದಾತನ್!

ಅಬ್ಬೆ(ಕೆರಳ್ದ ಕುತೂಹಲದಿಂದ) ಮುಂದೆ?

ಏಕಲವ್ಯಪುಸಿನಗೆ ನಕ್ಕು ಮತ್ತೆ ಕೇಳ್ದನ್: “ಆರೊ ನೀನ್?”
ನುಡಿದೆನ್: ನೀನೆ ಸಂಬೋಧಿಸಿದವೊಲ್ ವನಛರನ್!”
ನಸುಕೆರಳ್ದೆಂದನ್: “ನಾಲಗೆಯ ನೆರಂ ಬೇಕೆ?
ನಿನ್ನಿರ್ಕೆಯೆ ಪೇಳ್ದಪುದದನ್,
ನಿನ್ನ ಕೈರಾತ್ಯಮಂ!
ನಾನ್ ಕೇಳ್ದುದು ನಿನ್ನ ಪೆಸರನ್;
ಅನಾಮನೇನ್ ನೀನ್?”
ಮಾರ್ನುಡಿದೆನ್ “ವನಚರರ್ ಅನಸೂಯಾಶೀಲರ್,
ಅರಿಯರ್ ಪೆಸರಂ ಮೆರೆವ ಅಹಂಕಾರಮಂ.
ಪೆಸರಾಸೆ, ಅದೊಂದು ನಾಗರಿಕರ್ಗೆ ಮಿಸಲಾಗಿರ್ಪ
ಮನೋಜಾಡ್ಯಂ ಕಾಣಾ!
ಮೊದಲ್ ಪೇಳ್ ನಿನ್ನ ಪೆರ್ಮೆಯಾ ಪೆಸರಂ.”
“ಕಾಡವಂಗೇಂ ಬಿಂಕಂ!” ಎಂದುಕೊಂಡನ್;
ಮತ್ತೆಂದನ್ “ನಾವಾರಂದಿರ್ಪೆ? ಆಳ್ವವರ್! ನೀನಾಳ್!”
ಮಾರ್ನುಡ್ದೆನ್ ಬಿಂಕಕ್ಕೆ ಬಿಂಕಮೊಡ್ಡಿ
“ನನ್ನಯ್ಯನಿಂದೆನಗೆ ಬಂದಡವಿ ಈ ಪೊಡವಿ.
ನನ್ನಯ್ಯನಾದಿಂ ಬಳಿಂ ನಾನಿಲ್ಲಿಗೊಡೆಯನ್.
ನನ್ನಾಜ್ಞೆಯಿಲ್ಲದೆಯೆ ನನ್ನಡವಿಯಂ ಪೊಕ್ಕು
ರಕ್ಷೆಯ ಮೃಗಂಗಳಂ ಬೇಂಟೆಯಾಡುವ ನೀನ್
ಕೊಳ್ಳೆಗಾರನ್, ಕಳ್ಳನ್, ದಂಡನಾರ್ಹನ್!
ನಿನ್ನ ಊರತ್ತಣ್ಗೆಯಿರ್ಕೆ ನಿನ್ನಾಳ್ವ ಬಿಂಕಂ.
ನಾನೆಚ್ಚುದೀ ವರಾಹನನ್ ಉಳಿದು
ಕ್ಷೇಮದಿಂ ಬಿಟ್ಟು ತೊಲಗೀ ಆಡವಿಯಂ!”
ಕಿಲಕ್ಕನೆ ನಕ್ಕನಾತನ್, ಲಘವೆಣಿಸಿ ನಾನೆಂದುನ್.
ಕೇಳ್ದನ್: “ನೀನೆಚ್ಚುದೆಂತೊ, ಬಿಯದ?
ನಾನಿಲ್ಲಿಗೈತಂದ ವೇಳೆಯೊಳ್
ನೀನೆಲ್ಲಿಯುಂ ಕಣ್ಬೊಲದೊಳಿರ್ದುದಿಲ್ಲ.
ಹೂಂಕಾರಮಂ ಕೇಳ್ದು ಗುರಿಯೆಚ್ಚೆಯೋ?”
ಹಾಸ್ಯಕಾ ಪ್ರಶ್ನೆಗೇಳ್ದನ್. ನಾನೆಂದೆನ್:
“ದಿಟವೊರೆದೆಯಯ್!
ನಿನಗೆಂತೊ ತಿಳಿದುದಾ ನನ್ನ ಬಿಲ್ ಜಾಣ್ಮೆ?”
ನಕ್ಕಾಡಿದನ್: “ಓವೊ ನೀನ್ ಬಲ್ ಜಾಣನ್?
ಶಬ್ದವೇಧೀ ವಿದ್ಯೆ ನಿನಗೆ ಅಂಗಯ್ ನೆಲ್ಲಿಯಲ್ತೆ?”
ಉತ್ತರಂಗೊಟ್ಟೆನ್; “ನೀಂ ದಲ್ ಸತ್ಯವಾಕ್ ಕಣಾ!
ಕರತಲಾಮಲಕಮಾ ಬಿಜ್ಜೆ ನನಗೆ!”
ಕಿಚ್ಚು ಕೆರಳ್ದೆಂದನ್: “ಪುಸಿಯದಿರ್, ಕಾಡ!
ಜಗತ್ರಯದೊಳೊರ್ವನಿರ್ಪನ್,
ಅವನರಿವನಾ ವಿದ್ಯೆಯಂ.”
ಎಂದೆನ್: “ನನಗರಿಯದಾ ಸರ್ವಜ್ಞತೆಯ ಪೆರ್ಮೆ.
ಆದೊಡಂ, ನೀನ್ ಪೇಳ್ದುದದು ನನ್ನಿಯಪ್ಪೊಡೆ,
ನಿನ್ನಿದಿರೆ ನಿಂದಿರ್ಪನಾ ನೀನ್ ಮಣ್ಣಿಪಾತನ್ !”
ಕನಲ್ದೆಂದನ್ ಕೂಗಿ: “ನೀನವನಲ್ತೊ ! ನಾನ್ ಬಲ್ಲೆನ್ !”
ನಾನ್ ಚುಚ್ಚಿದೆನ್; “ಎಂತು ಬಲ್ಲಯ್?
ಸರ್ವಜ್ಞನೋ ನೀನ್?”
ಏದುತೆಂದನ್: “ಎಂತೆನೆ. . . . ಎಂತೆನೆ. . . . ಕೇಳ್. . . .
ನಾನೆ ಅವನ್! ಕೇಳ್ದರಿಯೆಯಾ ನೀನ್
ತ್ರೈಲೋಕ್ಯ ವೀರನನ್ ಅರ್ಜುನ ನಾಮನನ್?”
ನಕ್ಕು ಬೆರಗು ನಟಿಸಿ ಕೇಳ್ದೆನ್:”ಅವನಾರ್?”
ಅವನೆಂದನ್: “ಅಜ್ಞಾತ ನೀನ್; ವನಚರನ್;
ನಿನಗಿರ್ಪುದೆಂತಾ ಜ್ಞಾನಮ್? ಕೇಳ್, ತಿಳಿ;
ಅರ್ಜುನನ್ ಪಾಂಡುಪುತ್ರನ್?”
ಎಂದೆನ್: “ಆರ್ ಅವನ್ ಆ ಪಾಂಡು?”
ಧಿಃಕರಿಸಿ ನುಡಿದನ್: “ರಾಜೇಂದ್ರನ್!”
ನಾನುಂ ತಿರಸ್ಕರಿಸುತೆಂದೆನ್: “ಅಲ್ಪಖ್ಯಾತರಾ
ಸಂಬಂಧಮಂ ಪೇಳ್ದೇನ್ ಪ್ರಯೋಜನಂ?
ನಿನಗೆ ಸಂಬಂಧರೊಳರೆ ಪ್ರಖ್ಯಾತರೊರ್ವರುಂ?
ತನ್ನ ಪೆಸರಮ್ ಪೇಳ್ವೆ;
ತನ್ನ ಮೆಯ್ಯಂ ಪೆತ್ತವರ ಪಸರ್ವೇಳ್ವೆ!
ನಿನಗಿಲ್ತೆ ಆತ್ಮಮಂ ಕೊಟ್ಟವರ್?
ಬಿಜ್ಜೆಗಲಿಸಿದವರ್?
ಎಲವೊ ಗರ್ಜಿನ, ಕೇಳ್,
ನಿನಗೊಂದು ನಯಮಂ ಕಲಿಪನೀ ವನಚರನ್.”
ತನ್ನ ಪೆಸರಂ ತಪ್ಪು ವೇಳ್ದುದಕೆ
ಅಹಂಕಾರಂ ಪೊತ್ತಿ ಗರ್ಜಿಸಿದನ್ :
” ಗರ್ಜಿನ ಎಂಲ್ತೊ! ಆರ್ಜುನ ಎಂದೊರೆ, ಅನಾಗರಿಕ!”
“ಅಕ್ಕಕ್ಕೆ! ಅರ್ಜುನ, ಕೇಳ್” ಎಂದೆನ್
“ನನಗುಮಿರ್ಪುದೊ ನಿನಗಿರ್ಪವೊಲ್ ಒರ್ವೆಸರ್.
ಆದರದು ಅಹಂಕಾರಮಂ ಮೆರೆಯಲ್ಕಲ್ತು,
ವಿನಯಮಂ ನಿವೇದಿಲ್ಕಿರ್ಪುದು.”
ಎನುತ್ತೊಡನೆ ಪಂದಿಯಂ ನಟ್ಟಿರ್ದ ಬಾಣಮಂ
ಕಿಳ್ತೆನ್; ನೆತ್ತರ್ ಕೀಸಿ ತಳಿರ್ಗೊರಸಿದೆನ್;
ನೀಡಿದೆನವನ ಕಯ್ಗೆ.
ಕೊಳ್ಳಲೊಲ್ಲದೆಯೆ ಮಲೆತಿರ್ದವಂಗೆಂದನ್:
“ಅಣ್ಣ ಓದಿದನ್.
ಓದುವುದೆ ಪೂಜೆಯಪ್ಪುದು ನಿನಗೆ!
ಪುಣ್ಯಮಂ ಪೊತ್ತು ತಂದಪುದಾ  ಪೆಸರ್!
ನಿನಗೆ ಬೇಡದ ಕಾಡ ಬೇಡನನ್ ನನ್ನನ್
ನಿನಗೆ ತಮ್ಮನಂ ಮಾಳ್ಪುದಯ್!
ಓದು, ಅಣ್ಣ.”
ನನ್ನ ವಿನಯದಾ ದಾಕ್ಷಿಣ್ಯಕೊಳಗಾಗಿ
ಬಾಣಮಂ ಕೈಗಾಂತು, ಕಣ್ಮುಂದೆ ಪಿಡಿದು,
ನೋಡ ತೊಡಗಿದನ್, ಇರಲಿರಲ್,
ಕಣ್ ಅರಳ್ದುದು. ಮಲರ್ದುದು ಮೊಗದೊಳೊರ್ ಬೆರಗು.
ಮತ್ತಮೊಯ್ಯನೆ ನಡುವೆ ಹೆಡೆಯಿಣುಕಿತೊರ್ ಕೊರಗು!
ತಲೆಯೆತ್ತದೆಯೆ ಕೇಳ್ದನ್:
“ಇದೆಯೆ ನಿನ್ನಾ ಪೆಸರ್!”
“ಓದಣ್ಣ, ಏನೆಂದಿದೆ?” ನಗುತೆಂದೆನಾನ್.
“ಇದೆನಗುಂ ಪೆಸರಕ್ಕುಂ” ಎಂದನವನ್
ಕೇಳ್ದೆನ್: “ಅರ್ಜುನ ಎಂದಿದೆಯೆ?”
ಪೇಳ್ದನ್ :”ದ್ರೋಣ ಶಿಷ್ಯನ್ ಎಂದಿದೆ!”
ಕೇಳ್ದೆನ್: “ನೀನೇನ್ ನನ್ನ ಗುರುದೇವಂಗೆ ಶಿಷ್ಯನೊ?”
“ಶಿಷ್ಯನ್? ಮೆಚ್ಚಿನ ಶಿಷ್ಯನ್! ಶಿಷ್ಯೋತ್ತಮನ್!”
ಎನುತೆ ಮಲೆತು ನಿಮಿರ್ದಂಗೆ ನಾನೆಂದೆನ್:
“ಆ ಗರ್ವಮೆಲತಲ್ತು, ಕ್ಞತ್ರಿಯ ಕುಮರ!
ಆಚಾರ್ಯನೆನಿತೊ ಶಿಷ್ಯರೊಳ್ ಆನುಂ ಒರ್ವನ್:
ಭಕ್ತಿಯೊಳ್ ಮತ್ತಾರ್ಗಂ ದ್ವಿತೀಯನಲ್ತು!”
ಕೇಳ್ವನ್: “ನೀನೆಂತೊ ಗುರು ದ್ರೋಣಂಗೆ ಶಿಷ್ಯನ್?”
“ನೀನೆಂತೋ ಅಂತೇ!” ಮಾರ್ನುಡಿದೆನ್.
ಮತ್ತೆಂದನ್: “ಕುರುಪಾವುದೋ ಪೇಳ್ ಅದರ್ಕ್ಕೆ?”
ಪೇಳ್ದೆನ್: “ಈ ಬಾಣಮೆ ಪೇಳದೆ?
ತಾನೆ ಪೇಳದೆ ಶಬ್ದವೇಧೀ ವಿದ್ಯೆ?”
ಅಸೂಯೆಯಿಂದೆಂದನ್:
“ಭಾಷೆಯಿತ್ತಿಹನೆನಗೆ ಗುರು.
ನನಗಲ್ಲದನ್ಯರ್ಗೆ ದೊರೆಕೊಳ್ಳದಾ ವಿದ್ಯಾ!”
ನಗುತ್ತೆಂದನ್: “ಆದೊಂದೆಯೆ ಅಲ್ತು.
ಆಚಾರ್ಯ ಕೃಪೆಯಿಂ ಮೇಣೆನ್ನ ಗುರುಭಕ್ತಿಯಿಂ
ನಿಖಿಲಾಸ್ತ್ರ ವಿದ್ಯೆಗಳ್ ಕೈಸೇರ್ದುವೆನಗೆ!”
ಅಬ್ಬೆ, ಮುಂತೇನ್ ನಡೆಯುತಿರ್ದುದೊ ಆರಿಯೆನ್.
ಅನಿತರೊಳ್ ಬಂದುದಲ್ಲಿಗೆ ಅವನ ಪರಿವಾರಂ.
ಅಚ್ಚರಿಯೊಳಚ್ಚರಿ! ಕಂಡೆನಶ್ವತ್ಥಾಮನಂ,
ಬೇಂಟೆಪಡೆಯೊಡನೆ ಬಿನದವಂದಿರ್ದನಂ.
ಓಡಿ ಬಂದೆನ್ನನಪ್ಪಿದನ್;
ಪರಿಚಯವನೊರೆದನರ್ಜುನಂಗೆ;
ಪೇಳ್ದನಾ ಪೂರ್ವ ವೃತ್ತಾಂತಮಂ.
ನಾನುಂ ಪೇಳ್ದನೆನ್ನ ಕಥೆಯಂ.
ಕೇಳ್ದನ್ ಮೂಗುವೆರಗಾದರನಿಬರುಂ.
ಮೇಲೆಮೇಲರ್ಜುನನ್ ನಗುತ್ತೆನ್ನನಭಿನಂದಿಸಿದನ್;
ಆದೊಡಂ ಒಳಗೊಳಗೇಗುತಿರ್ದುದು ಅಸೂಯಾಗ್ನಿ!

ಅಬ್ಬೆ — ಕಾಡವರೊಡನೆ ಮಚ್ಚರಮೆ ನಾಡವರ್ಗೆ?
ಅರಸು ಮಕ್ಕಳ್ ಗೊಡವೆ ನಮಗೇಕೆ?
ಮಾಣ್, ಬಚ್ಚು, ಮಚ್ಚರಮಂ:
ಅವರ ನಾಡವರ ಪಾಡು; ನಮಗಿರ್ಕೆ ನಮ್ಮ ಕಾಡು.

ಏಕಲವ್ಯ — ಅವರ್ಗೆತ್ತಣಿಂದಂ ಪೇಳ್ ಅಂತಪ್ಪ ತೃಪ್ತಿ?
ತಮಗೆ ಬಾಯ್ಕೇಳವೇಳ್ಕುಮೆಂಬರ್
ಕಾಡುನಾಡೆಲ್ಲಮುಂ. (ಸಲ್ಪ ರೋಷವುಕ್ಕಿ)
ನನ್ನಡವಿ ಗೊಡೆವೆಗವರ್ ಬರದಿರೈ.
ಬಂದೊಡಕ್ಕು ತಕ್ಕ ಶಾಸನಂ! —

(ಇವರಿಬ್ಬರೂ ಮಾತಾಡುತ್ತಿರುವಾಗ ಸುತ್ತಲೂ ದೃಶ್ಯಕ್ಕೆ ಉಚಿತವಾದ ಅರಣ್ಯ ಮೃಗಪಕ್ಷಿಗಳ ವನ್ಯವ್ಯಾಪಾರಗಳು ಸಾಗುತ್ತಿರುತ್ತವೆ. ಜಿಂಕೆಮರಿಯೊಂದು ಆಡುತ್ತ ಬಂದು ಹೊಂಬಾಳೆಯಲ್ಲಿದ್ದ ಹಣ್ಣನ್ನೂ ಜೇನನ್ನೂ ಪಳಾರಮಾಡುತ್ತಿದ್ದುದನ್ನು ಕಂಡು)

ಅಕ್ಕೊ, ಅಬ್ವೆ! ನೀನೆನಗೆ ತಂದುದಾ ಎಡೆ
ನೈವೇದ್ಯಮಾಯಿತ್ತು, ಕಾಣ್, ಬೇಂಟೆದೇವರ್ಗೆ!

ಅಬ್ಬೆ(ನೋಡಿ)
ಕಂಡೆಯಾ; — ನಾನೆನಿತ್ತಟ್ಟಿದೊಡಂ
ಬಿಡದೆ ಬೆಂಬಳಿವಿಡಿದು ಪುಡುಕಿ ಬಂದುದಲ್ತೆ!
ಚಿಃ ಕಳ್ಳಮರಿ!
ಒರ್ ದಿನಂ ತೋಳನುಣಿಸಪ್ಪೆ ನೀನ್
ಇಂತಲೆಯೆ ಕಾಡನ್!
(ಮಿಗದ ಮರಿಯಿಂದ ಹೊಂಬಾಳೆಯನ್ನು ಎಳೆದುಕೊಳ್ಳುತ್ತಾಳೆ.)

ಏಕಲವ್ಯ(ಮೋರೆಯೆತ್ತಿ ಹೊಂಬಾಳೆಯನ್ನೆ ಹಿಂಬಾಲಿಸಿದ ಮರಿಯನ್ನು ಬಾಚಿ ಎತ್ತಿ ಮುಂಡಾಡುತ್ತಾ)
ತೋಳನೆ?
ತೋಳನೆಲ್ಲಿರ್ಕ್ಕುಮ್ ಈ ನನ್ನ ಮಲೆಯೊಳ್?
(ಕಲ್ಲಮೇಲಿಟ್ಟಿದ್ದ ಬಿಲ್ಲನ್ನು ನಿರ್ದೇಶಿಸಿ)
ಈ ಬಿಲ್ಲ ಸಿಂಜಿನಿಯ ಟಂಕೃತಿಗೆ ಬೆಬ್ಬಳಸಿ
ಕೋಳ್ಮಿಗಗಳಿತ್ತಣ್ಗೆ ಸುಳಿಯವಬ್ಬೆ!
(ಮಿಗವರಿಯನ್ನು ಮುಂಡಾಡುತ್ತಾ ಅದನ್ನು ಸಂಬೋಧಿಸಿ)
ಮುದ್ದ, ಮನಂ ಬಂದತ್ತ ನೀನ್ ಅಲೆ!
ನಿನ್ನ ಮೈಗಾವಲಲ್ತೆ ನಾನ್!

ಅಬ್ಬೆ — ಬಚ್ಚು, ಈಗಳೇನ್ ನೀನುಣ್ಬೆಯೋ ……….

ಏಕಲವ್ಯ(ನಡುವೆ ಬಾಯಿಹಾಕಿ) ಆಗಳೆಯ ಪೇಳ್ದೆನಲ್ದೆ?
ನೋಂಪಿ ಮುಗಿದಿಂ ಬಳಿಯೆ ಉಣ್ಬೆನೆಂದು!
ಇಂದು (ದ್ರೋಣನ ಪ್ರತೀಕವನ್ನು ತೋರಿಸಿ)
ಆ ಗುರು ನನ್ನನ್ ಅನುಗ್ರಹಿಸೆ ಬಂದಪನ್.

ಅಬ್ಬೆ — ಆರ್ ಪೇಳ್ದರ್ ನಿನಗದನ್?

ಏಕಲವ್ಯ — ಮಿತ್ರನಾ ಗುರುಪುತ್ರನಟ್ಟಿರ್ದ್ದೊರ್ವನ್ ಓಲೆಕಾರನ್.

ಅಬ್ಬೆ(ಹೆಮ್ಮೆಯಿಂದ) ಬಂದಪನೆ ಗುರು? ಏಕೆ ಬಂದಪನ್?

ಏಕಲವ್ಯ — ಮತ್ತೇಕೆ? ಶಿಷ್ಯನಂ ಪರಸಲ್ಕೆ!

ಅಬ್ಬೆ(ಸ್ವಲ್ಪ ಆಲೋಚಿಸಿ ಹಿಗ್ಗಿ) ಮೇಣ್ ….
(ಮಗನಕಡೆ ಅರ್ಥಪೂರ್ಣವಾಗಿ ನೋಡುತ್ತಾಳೆ.)

ಏಕಲವ್ಯ(ಅಕ್ಕರೆಯ ತೋಳ್ಸೆರೆಯಿಂದ ತಪ್ಪಿಸಿಕೊಳ್ಳಲು ಒದ್ದಾಡಿಕೊಳ್ಳುತ್ತಿದ್ದ ಮರಿಯನ್ನು ಕೆಳಕ್ಕೆ ಬಿಟ್ಟು, ಅದು ಚೆಂಗನೆ ನೆಗೆದು ಓಡಿಹೋಗುವುದನ್ನೆ ನೋಡುತ್ತಾ)
ಮೇಣ್?

ಅಬ್ಬೆ(ಹುಬ್ಬು ಸುಕ್ಕಾಗುವಂತೆ ಚಿಂತಾಮಗ್ನಳಾಗುತ್ತಾ)
ನಿನ್ನ ಬಿಲ್ ಜಾಣ್ಮೆಯಂ ಕೇಳ್ದು
ಅರಸರ್ಗೆ ಕೆಳೆಯ ನೆರಮಾಗಲೇಂ
ಬಳಿಯನಟ್ಟುವರೊ?

ಏಕಲವ್ಯ(ಹಾಸ್ಯದಿಂದ)
ಅಬ್ಬೆ, ನಿನ್ನಳ್ಕರೂಹೆ
ದಬ್ಬೆಯೊಳ್ ಕಬ್ಬಂ ಕಾಣ್ಬ ಕಬ್ಬಿಗಂಗಂ
ಅಬ್ಬಬ್ಬಮಕ್ಕುಂ!

ಅಬ್ಬೆ(ಮಗನ ವಿಡಂಬನೆಯನ್ನು ಕಡೆಗಾಣ್ಚೆ ಲೆಕ್ಕಿಸದೆ)
ನೀನಾ ದೊರೆಗಳೂರ್ಗೆ ತೆರಳಲ್
ಈ ಕಾಡೊಳ್ ನಾನೆಂತೂರ್ವಳಿರ್ಪೆನ್? (ಸುಯ್ವಳ್)
(ಕಾಡಿನ ಕಣಿವೆಯ ದೂರದಲ್ಲಿ ಕಹಳೆಯ ಸದ್ದಾಗುತ್ತದೆ. ಏಕಲವ್ಯನು ಉಕ್ಕಿದುತ್ಸಾಹಸದಿಂದ ನೆಗೆದು ನಿಂತು ತನ್ನ ಸೊಂಟದಲ್ಲಿದ್ದ ಸುರುಳಿಗೊಂಬನ್ನು ತೆಗದು ಬಾಯ್ಗಿಟ್ಟು ಕಾಡೆಲ್ಲ ತುಂಬುವಂತೆ ದೀರ್ಘವಾಗಿ ತುತ್ತುರಿಯೂದುತ್ತಾನೆ. ಮತ್ತೆ ಕಹಳೆ ಪ್ರತ್ಯುತ್ತರ ಕೊಡುತ್ತದೆ.)

ಅಬ್ಬೆ(ಬೆಚ್ಚಿ ನಿಂತು ಬೆರಗಾಗಿ) ಏನದು, ಬಚ್ಚು?

ಏಕಲವ್ಯ — ಏನಿಲ್ಲ, ಅಬ್ಬೆ, ಬೆದರದಿರ್.
ನಾನಾಜ್ಞೆಯಿತ್ತಂತೆ ಗುರುವಿನಾಗಮನಮಂ
ಸಾರುತಿದೆ ನಮ್ಮ ಕಾವಲ್‌ಕಹಳೆ? ನೀನ್ ನಡೆ ನಮ್ಮರವೀಡಿಂಗೆ.
ಅಣಿಗೆಯ್ ಪಣ್‌ಪಲಂಗಳ ಕಂಡಿದಿರ್ಗೊಂಡು
ಪೊಡೆವಟ್ಟು ಕರೆದು ತರ್ಪೆನ್.

ಅಬ್ಬೆ(ಮಗನ ವೇಷಭೂಷಣಗಳ ಕಡೆಗೆ ಕೈದೋರುತ್ತಾ)
ನೀನಿಂತೆ ಪೋಗಿ ಕಾಣ್ಬುದೇನ್?
ಬಿಯದರೊಡೆಯಂಗೆ ತಗುವುಡುಗೆ ತೊಡುಗೆಯನಾಂತು
ಪೋಪುದೊಳಿತಲ್ತೆ?
ರಾಜಗುರುಗಾ ಮರ್ಯಾದೆವೇಳ್ಕುಂ.

ಏಕಲವ್ಯ — ಅಂತಪ್ಪ ಹಮ್ಮುಬಿಮ್ಮಿನ ಬೆಳ್ಪಲ್ತು
ನನ್ನ ಬಿಲ್ಲೊವಜನ್, ಅಬ್ಬೆ.
ಅಲ್ಲದೆಯೆ, ನೀನ್ ಪೇಳ್ವ ನಮ್ಮುಡುಗೆತೊಡುಗೆಗಳ್, —
ಕವಡೆ, ಗರಿ, ಪಲ್, ಉಗುರ್ ತೊವಲ್‌ಗಳ್‌, —
ಸೇರವವರಾ ನಾಗರಿಕ ರುಚಿಗೆ! (ಮತ್ತೆ ಕಹಳೆ ಕೇಳಿಸುತ್ತದೆ)
ತಳುವದಿರ್, ನಡೆ ಬೇಗಂ, ಅಬ್ಬೆ!
(ಅಬ್ಬೆ ಹೊಂಬಾಳೆ ಎತ್ತಿಕೊಂಡು ಹೊರಡುತ್ತಾಳೆ)

ಏಕಲವ್ಯ(ಏರುತ್ತಿರುವ ಬಿಸಿಲಿನಲ್ಲಿ ಹಣೆಗೆ ಕೈಮರೆಮಾಡಿ ದೂರ ಹಬ್ಬಿರುವ ಕಣಿವೆಗಳ ಕಡೆಗೆ ದೃಷ್ಟಿಪ್ರಸಾರಮಾಡಿ)

ಓ ಅತ್ತಣಿಂದೈತರ್ಪುದಾ ಕಹಳೆ ದನಿ.
ಧನ್ಯನಾನಿಂದು ಧನ್ಯಂ ದಿಟಂ!
ಗುರಚರಣ ಧೂಳಿಯಿಂ ಧನ್ಯಮೀಯೆನ್ನಡವಿಪೊಡವಿ!
ಗರುಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರಃ
ಗರುರೇವ ಪರಬ್ರಹ್ಮ ತಸ್ಮೈ ಶ್ರೀಗರವೇ ನಮಃ ||

(ಆಘೋಷಿಸುತ್ತಾ ದ್ರೋಣಪ್ರತಿಕಕ್ಕೆ ದೀರ್ಘದಂಡಪ್ರಣಾಮ ಮಾಡುತ್ತಾನೆ. ಗಾಳಿ ಬೀಸುತ್ತದೆ. ಸುತ್ತಲೂ ಮರದ ಹೂ ಉದುರುತ್ತವೆ. ಜಲಪಾತದ ನೀರು ತುಂತುರು ತುಂತುರೆದ್ದು ಚಿಮ್ಮುತ್ತದೆ. ಅದರ ಮೊರೆ ಹಕ್ಕಿಗಳುಲಿಯೊಡನೆ ಬೆರೆತು ಓಂಕಾರಲಯವಾಗುತ್ತದೆ.)