[ಅಲೆ ಏರಿ ಅಲೆ ಇಳಿವ ಕಾಡುಮಲೆ. ಕಡಿದಾಗಿ ಎತ್ತರವಾಗಿ ಗಿರಿಶ್ರೇಣಿ ಅವಿಶ್ರಾಂತವೆಂಬಂತೆ ದಿಗಂತಗಾಮಿಯಾಗಿದೆ. ಪೂರ್ವಾಹ್ನದ ತರುಣಾತಪವು ತರಂಗಿತ ಹರಿದ್ವರ್ಣದ ಪರ್ಣಾರ್ಣವದ ಮೇಲೆ ಹಬ್ಬಿದೆ, ಪನಿ ತಳ್ತ ಮರದಲೆಯ ತಳಿರರಾಶಿ ಮಿರು ಮಿರುಗುವಂತೆ. ದಟ್ಟವಾಗಿ ಹಳುಬೆಳೆದು ಮುಳ್ಳುಬಳ್ಳಿ ಪಿಣಿಲಾಗಿ ಹೆಣೆದುಕೊಂಡ ಒಂದು ಕಂದರ ಪ್ರಾಂತದಲ್ಲಿ ಅಶ್ವತ್ಥಾಮ ಪ್ರವೇಶಿಸುತ್ತಾನೆ. ಏಕಲವ್ಯನಷ್ಟೆ ತರುಣ. ಮಲ್ಲಗಚ್ಚೆ ಬಿಗಿದು ಬೇಂಟೆಗಾರರ ವೇಷದಲ್ಲಿದ್ದಾನೆ. ಕೈಯಲ್ಲಿ ಬಿಲ್ಲು; ಬೆನ್ನ ಮೇಲೆ ಬತ್ತಳಿಕೆ. ಬಟ್ಟೆಗೆ ಹಿಡಿದ ಮುಳ್ಳುಗಳನ್ನು ಬಿಡಿಸಿಕೊಳ್ಳುತ್ತಾ ಶ್ರಮದಿಂದ ನಡೆದು ಬರುತ್ತಾನೆ. ಅವನ ಸೊಂಟದೆತ್ತರಕ್ಕೂ ಮಿಗಿಲಾಗಿ ಬೆಳೆದಿದೆ ಹಳು. ಮರಗತ್ತಲೆಯಲ್ಲಿ ನಡುನಡುವೆ ತೂರಿಬಂದ ಬಿಸಿಲ ಕೋಲುಗಳು ಅವನ ಮೆಯ್ಯ ಮೇಲೆ ಬಿದ್ದಹಾಗೆಲ್ಲ ಆಯುಧಕಾಂತಿ ಮಿಂಚುತ್ತದೆ.]

ಅಶ್ವತ್ಥಾಮ(ನಿಂತು ಸುತ್ತಲೂ ಕಣ್ ಬೀಸಿ)
ಅಬ್ಬ ಎಂತಪ್ಪ ಪೇರಡವಿ ಇದು!
ಬಟ್ಟೆದೋರದೀ ಮುಳ್‌ಪಳುವದೋಳ್‌ ನುರ್ಗ್ಗಿ ನುರ್ಗ್ಗಿ
ಪರಿದು ಚೂರಾದುದುಟ್ಟುದೆಲ್ಲಂ. (ಮೇಲೆ ನೋಡಿ)
ಏನ್‌ ಮರಗಳಿವು, ಬಾನ್ ಮುಟ್ಟುತ್ತಿವೆ;
ಭೀಮ ವೃಕ್ಷಂಗಳ್‌! (ಹಿಂತಿರುಗಿನೋಡಿ ಕರೆಯುತ್ತಾನೆ.)
ಆರ್ಯ, ಇತ್ತಲ್, ಇತ್ತಲ್; ಎಡಕ್ಕೆ ತಿರುಗಿಮ್;
ಆ ವೇತ್ರಪುಂಜದ ದಕ್ಷಿಣಕೆ.
ಅಲ್ತಲ್ತು, ಅತ್ತಲಲ್ತು; ಅತ್ತ ಕೊರಕಲ್!
ಹ್ಞಾ! ಅಪು ದಪ್ಪುದು! ಅದೇ ಬಟ್ಟೆ! ಬನ್ನಿಮ್!

( ಕಡೆಯೆ ನೋಡುತ್ತಾ ನಿರೀಕ್ಷಿಸುತ್ತಿರುತ್ತಾನೆ. ಆಚಾರ್ಯ ದ್ರೋಣನು ಪೊದೆಗಳ ನಡುವೆ ತೂರಿ ತೂರಿ ಪ್ರವೇಶಿಸುತ್ತಾನೆ. ಎತ್ತರದ ಆಳು. ಚಿಂತಾಗಂಭೀರವಾದ ಮುಖಮುದ್ರೆ. ತಲೆಯುಡೆಯಿಂದ ಕೂದಲು ಇಳಿಯಬಿದ್ದಿದೆ. ಕಬಚ ತೊಟ್ಟೆದ್ದಾನೆ. ಮಲ್ಲಗಚ್ಚೆ ಹಾಕಿದ್ದಾನೆ. ಉತ್ತರೀಯ ಸ್ವಲ್ಪ ಅಸ್ತವ್ಯಸ್ತವಾಗಿ ಬಂದ ಹಾದಿಯ ಸ್ವರೂಪಕ್ಕೆ ಸಾಕ್ಷಿಯಾಗಿದೆ. ಬ್ರಾಹ್ಮಣ್ಯದ ಚಿಹ್ನೆಗಳಿಂದ ತೇಜಸ್ವಿಯಾಗಿ ತೋರುತ್ತಾನೆ.)

ದ್ರೋಣ(ನಿಂತು ಸುತ್ತಲೂ ದೃಷ್ಟಿಯಟ್ಟಿ, ಮಗನ ಕಡೆ ನಸುನಗೆಮೊಗವಾಗಿ ನೋಡಿ)
ಬಟ್ಟೆಯಿರದೆಡೆ ಬಟ್ಟೆಯರುಸುತಿರ್ಪಯ್, ವತ್ಸ!
ಪುಟ್ಟುಗುಣಮದು ನಿನಗೆ. ಚಿಹ್ನೆಯಾವುದುಮಿಲ್ಲಿ
ತೋರದಯ್ ನರ ಚರಣ ಸಂಚಾರದಾ!
(ಮೆಲೆ ನೋಡಿ, ಕಿಲಕ್ಕನೆ ನಕ್ಕು)
ಬಿಸಿಲುಮಡಿಯಿಡಲಳ್ಕುತಿರ್ಪುದೀ ಪಳುವೆಡೆಯ
ಕಾಳ್ಗಳ್ತಲೆಯ ಮುಳ್‌ಮನದ ಮುನಿಸಿಗಂಜಿ!
ಏನ್‌ ಬಿದಿರ ಮೆಲೆಗಳ್!
ಏನುಗ್ರ ಕಂಟಕದ ವೇತ್ರ ಪುಂಜಗಳ್!
ಏನ್ ತುರುಚೆಪಳು! ಕಾಲೂದುತಿರ್ಕುಂ!
ಸುರುವಿನೆಡೆ ನೀರ್ ತಣ್ಪಲೊಳ್ ಜಿಗಣೆಗಳ್,
ಪತ್ತಿ ಪೀರ್ವವು — ನಿತ್ತರುಣಿಗಳ್!
ಎಂತುಂ ನಲ್‌ಬಟ್ಟೆಗಳೆತಂದೆ ನೀನೆನ್ನನ್!
(ಬಗ್ಗಿ ಕಾಲಿಂದೇನನೊ ತೆಗೆದೆಸೆಯುವಂತೆ ಮಾಡಿ ಎದ್ದು)
ಪರಿವಾರಮಂ ಕರೆತರ್ಪಮೆಂದೊಡೆ
ಬೇಡಮೆಂದವರನಾ ಮಲೆಯಂಚಿನೊಳೆ ತೊರೆದೆ!
ಈಗಳ್ ಬಟ್ಟೆಗೆಟ್ಟುಂ
ಬಟ್ಟೆಯಿರದೆಡೆ ಬಟ್ಟೆಯರಸುತಿರ್ಪಯ್:
ಪುಟ್ಟೊಡನೆ ಬಂದುದಲ್ತೆ ನಿನಗೀ ವಕ್ರವರ್ತ್ಮಂ!

ಅಶ್ವತ್ಥಾಮ(ನಸುನಗುತ್ತಾ)
ಆರ್ಯ, ಇದೇನ್ ಹಸ್ತಿನಪುರದ ಉದ್ಯಾನದೊಂದು
ಬಹಿರ್ವಲಯಂಗೆತ್ತಿರೇನ್? ಇದು, ಅಡವಿ!
ಪರಿವಾರಮಂ ಕರೆತಂದ ಮಾತ್ರದಿಂ
ನಿಮಗೆ ಪಾದವೇದಿಕೆಯಾಗೆ ಅಡವಿಗೇಂ
ಬೈತಲೆಯ ಬಟ್ಟೆಯಂ ತೆಗೆಯುತಿರ್ದರೆ ಅವರ್?
ನೀಮಿಲ್ಲಿರಿಮ್;
ಪಳು ಸುತ್ತಿದೀ ಬಂಡಯಗ್ರದೊಳ್ ಕುಳ್ಳಿರಿಮ್.
ಮುನ್ನಡೆದು ನೇರ್ವಟ್ಟೆಯರಿತಾನ್ ಮರಳ್ದಪೆನ್,
ಬೇಗಮೈತರ್ಪೆನ್! (ಹೆಜ್ಜೆಯಿಟ್ಟು ನಿಂತು)
ಕೋಳ್ಮಿಗಳಿರ್ಪುವು; ಈ ಖಡುಗಮಿಲ್ಲಿರ್ಕೆ!
(ಕತ್ತಿಯನ್ನು ಬಂಡೆಯಮೇಲೆ ಸಶಬ್ದವಾಗಿ ಇಟ್ಟು ಹಳುವಿನಲ್ಲಿ ನುಗ್ಗಿ ಮರೆಯಾಗುತ್ತಾನೆ.)

ದ್ರೋಣ(ಮುನ್ನಡೆದು ಕತ್ತಿಯಿದ್ದಾ ಬಂಡೆಯ ನೆತ್ತಿಯನ್ನಡರಿ ಕುಳಿತು ಚಿಂತಾಮಗ್ನನಾಗಿ ಸುಯ್ಯುತ್ತಾನೆ.)
ಎನಿತು ತಣ್ಪಿರ್ಪುದೀ ಅಡವಿಯೆರ್ದೆಯೋಳ್!
ಕಾಡಾದೊಡಂ ನೂರುಮಡಿ ಲೇಸು
ಕರುಬು ಕಿಚ್ಚುರಿವ ಆ ನಮ್ಮ ನಾಡಿಗಿಂ.
ಧರ್ಮಸಂಕಟದೊಂದು ಚಿಂತಾಗ್ನಿಯಿಂದಳುರ್ವ
ನನ್ನೀ ಮನಕ್ಕೀ ವಿವಿಕ್ತದೇಶಂ
ವರ್ಷಿಸುತ್ತಿದೆ ಶಾಂತಿಪೀಯೂಷಮಂ.
(ತುಸುವೊತ್ತು ಅರೆಗಣ್ಣಾಗಿ ಶಾಂತಿಯನ್ನು ಅನುಭವಿಸುತ್ತಾನೆ)
ಅರಸುಮಕ್ಕಳ್ಗೊವಜುಗೆಯ್ವುದುಂ, ಮೇಣ್,
ಸಿಡಿಮದ್ದನರೆವುದುಂ ಎರಡುಮೊಂದೆ!
ಸೋಲ್ತದೆನ್ನೀ ಜೀವಮಾ ಕೌರವರ ಪಾಂಡವರ
ದಾಯಾದಿ ಮಚ್ಚರದ ಬೇಗೆಯೊಳ್ ಬೆಂದು —
(ಏನನ್ನೊ ಆಲೋಚಿಸಿ ಒಂದು ನಿರ್ಣಯಕ್ಕೆ ಬಂದಂತೆ)
ಈ ಅಹಂಕಾರಮೆಯೆ ಮೂಲಮನಿತರ್ಕಂ.
ಅಲ್ಲದಿರೆ ನಾನೇತಕಾ ಅರ್ಜುನಗೆ ಗುರುವಾಗಿ,
ದ್ರುಪದನಂ ಗೆಲ್ದು ತಂದೆನ್ನಡಿಗೆ ಕೆಡೆವವೊಲ್
ಮಾಡಿ, ನನ್ನೆರ್ದೆಯ ಬಿಂಕದ ದೆವ್ವಕೆಡೆಯಿತ್ತು.
ಸವ್ಯಸಾಚಿಯ ಹಂಗಿಗೊಳಗಾಗುತಿರ್ದೆನ್?
ಲೋಕತ್ರಯಂಗಳೊಳ್ ನಿನ್ನಂ ಮೀರ್ದರಿಲ್ಲಮೆನೆ
ನಿನಗೆ ಬಿಲ್‌ವಿಜ್ಜೆಯಂ ಕಲಿಪೆನೆಂದಾಡುತಿರ್ದೆನ್?
ಈಗಳೋ ಪಿಡಿದಿರ್ಪುದಾತಂಗೆ ಕೀರ್ತಿಶನಿ:
ಪೆಸರ್! ಪೆಸರ್! ಪೆಸರ್!
ತನ್ನೊಂದು ಪಿರಿಯ ಪೆಸರ್,
ತನ್ನದಾಗಲ್ ವೇಳ್ಕುಮೆಂಗುದಾತಂಗೆ ಪೈತ್ಯಂ!
ಏನಹಂಕಾರಮೋ ಈ ಕ್ರತ್ರಿಯರ ಮಕ್ಕಳ್ಗೆ!
ಪೆಸರ ಬಿಂಕಂ! ರಕ್ತ ಪಂಕಂ!
ಸೆಣಸುವಂಕಂ! ಲೋಕಕಾಂತಂಕಂ! —
ಪೆಸರಂತೆ ಪೆಸರ್? ಕೆಸರ್! ನೆತ್ತರ್ಗೆಸರ್!

(ಜುಗುಪ್ಸೆಯಿಂದ ಚಿಂತಾಮಗ್ನನಾಗುತ್ತಾನೆ. ಕಣ್ಮುಚ್ಚಿ ಸುಯ್ಯುತ್ತಾನೆ. ಮುಖ ಸುಕ್ಕಾಗುತ್ತದೆ. ಮತ್ತೆ ಕಣ್ದೆರೆದು)

ಬಿಂಕಕ್ಕೆ ಡೊಳ್ಳೀವುದದು ವಿದ್ಯೆಯೆ? ಅವಿದ್ಯೆ!
ತವಿಪುದಾವುದೊ ಅಹಂಕಾರಮಂ ಅದು ವಿದ್ಯೆ;
ಮಿಕ್ಕುದೆಲ್ಲಂ ಅವಿದ್ಯೆ!
ವಿದ್ಯೆಯೆಂಬಾ ಪೆಸರ ಮರೆಯೊಳಾನ್
ಅವಿದ್ಯೆಯಂ ಪೋಷಿಸುವ ಗುರುವಾದೆನಲ್ತೆ!
ಮತ್ತೇನ್? ಅಹಂಕಾರದೊಂದು ಛದ್ಮನೆಯಲ್ತೆ
ಕೀರ್ತಿಯೆಂಬಾ ಪೆಸರ ಪೆಸರಾಸೆ?
ಪೆಸರಂತೆ ಪೆಸರ್? ಏನವಿದ್ಯೆಯೊ ನಮಗೆ?
ಈ ಜನ್ಮದೊಳ್ ಈ ಪೆಸರ್;
ಮರುವುಟ್ಟೊಳಿನೊಂದು ಪೆಸರ್.
ಭರತಖಂಡೊದೊಳಿಂದು ದ್ರೋಣನ್!
ಬರ್ಪ ಜನ್ಮದೊಳಾವ ದೇಶದೊಳ್ ಅದಾವ ಪೆಸರೊ?
ಕೆನ್ನೀರ ನೀರ್ವೊಯ್ದು ಸಾಕಿ ಸಲಹುವೆಮಲ್ತೆ
ಈ ಪುಸಿಯ ಪೆಸರೆಂಬ ಕನಸು ಮರಮಂ?
ನಾನುಮಾ ಕೆಸರೊಳಳ್ದುವೆನಲ್ತೆ ಇಂದು ! —
ಮಾತೃಸೇವೆಯೊಳಿರ್ಪನ್,
ತಂದೆಯಿಲ್ಲದ ತಬ್ಬಲಿ;
ಆ ಕಾಡ ಬೇಡರ ಹುಡುಗನನ್ನ ಬೆರಳ್‌ಕೊಯ್ದು,
ಆ ರಕ್ತಪಂಕದೊಳಿವನ ಕೀರ್ತಿಪಂಕೇಜಮಂ
ಮೆರೆಯವೇಳ್ಕಂತೆ!
‘ಪೋಗು, ನೀನೆಯೆ ಮಲ್ಲಯದ್ಧಂತೆಯ್ದು ಗೆಲ್;
ಅವನೊಡನೆ ಕಾದಾಡಿ ಅವನನ್ ಕೊಲ್!’
ಎಂದೊಡದು ತನಗೆ ಪಳಿಯಂತೆ!
ಯಃಕಶ್ಚಿತನ್ ಆ ವ್ಯಾಧಬಾಲಕನೊರ್ವನನ್
ದ್ವಂದ್ವಯುದ್ಧಕ್ಕೆಂತು ಕರೆದಪನ್, ಪಾಪ,
ಈ ಪಾರ್ಥಿವ ಕುಲೋದ್ಭವನ್, ಪಾರ್ಥನ್?
(ವಿಡಂಬನದ ನಗೆ ಬೀರಿ)
ಏನ್ ಬಿಮ್ಮೊ? ಹಮ್ಮೀಗೊರ್ ಕೋರೆ ತಾನ್!

(ಕೊಂಬಿನ ದನಿ ಮಲೆಗಾಡು ಮರುದನಿಗೊಡುವಂತೆ ಕೇಳಿಸುತ್ತದೆ ದ್ರೋಣನು ಜಾಗ್ರತನಾಗಿ ಎದ್ದು ನಿಲ್ಲುತ್ತಾನೆ. ಆಲಿಸುತ್ತಾನೆ)

ಏನಿದೀ ತೂರ್ಯರಾವಂ,
ಅನುರಣಿತವಾಗುತಿದೆ ಗಿರಿಗಹ್ವರ ಗುಹಾಕಂಠದಿಂ!
ಎತ್ತಲಲೆದನೊ ವತ್ಸನ್?
ಬಟ್ಟೆದಪ್ಪಿದನೊ? ಮೇಣ್ ಪುಸಿವಟ್ಟೆವಿಡಿದನೊ?

(ತುಸು ಹೊತ್ತು ಕೆಮ್ಮನಿದ್ದು ಕಾಡಿನ ನೀರವತೆಯನ್ನೂ ನಿರ್ಜನೆಯನ್ನೂ ಬೃಹತ್ತನ್ನೂ ಮನಂಗೊಳ್ಳುವಂತೆ ಸಂವೀಕ್ಷಿಸಿ)

ಆಃ ದಿಟಂ ಭೀಮಾಕಾಂತಮೀ ಕಾಂತಾರಂ!
ಸಿಂಹಭವ್ಯಂ! ವ್ಯಾಘ್ರಸುಂದರಂ! ಪರಿಣಚಾರು!
ಫಣಿಭೈರವಂ! ಶಶಲಲಿತಂ! ಪಕ್ಷಿಮಧುರಂ!
ಏಂ ರುದ್ರ ರಮಣೀಯಮೀ ರುಂದ್ರಾಟವಿ!

(ಕೊಂಬಿನ ಕೂಗು, ಪರೆಯ ದನಿ, ಆಳ್ಗಳ ಗೆಲ್ಲುಲಿಮಲೆಯ ನೆತ್ತಿಯ ಕಡೆಯಿಂದ ಕೇಳಿಬರುತ್ತದೆ. ದ್ರೊಣನು ತುಸು ಮೊಗವೆತ್ತಿ ನಿಂತು ಕುತೂಹಲ ನಯನನಾಗಿ ನಿಟ್ಟಿಸುತ್ತ ನಿಲ್ಲುತ್ತಾನೆ. ಆಶ್ವತ್ಥಾಮನು ಶೀಘ್ರಗತಿಯಿಂದ ಪ್ರವೇಶಿಸುತ್ತಾನೆ.)
ಅದೇನ್, ವತ್ಸ, ಕಹಳೆ ಕೂಗುತಿದೆ?

ಅಶ್ವತ್ಥಾಮ(ನಿಡಿದಾಗಿ ಉಸಿರೆಳೆದು ಬಿಡುತ್ತಾ)
ಆ ಕೇಳ್ದುದದು ಏಕಲವ್ಯನ ಕಾವಲ್‌ಕಹಳೆ!
ಸಾರುತಿದೆ ನಾವ್ ಬಂದುದನ್!

ದ್ರೋಣ — ಎಂತರಿತರಾಮ್ ಬಂದುದನ್!

ಅಶ್ವತ್ಥಾಮ — ಮರಮರನ ಏರಿರ್ಪರವನ ಕಾವಲಾಳ್!
ಪಳುವದೊಲ್ ಬಟ್ಟೆಯರಸುತ್ತಾನ್ ಸಾಗುತ್ತಿರಲ್
“ನಿಲ್! ಮುಂಬರಿಯದಿರ್!”
ಎಂದೊರಲ್ದುದೊರ್ ಕೊರಲ್.
ಅಳ್ಕೆಗಲ್ತಚ್ಚರಿಗೆ ನಿಂದು ಸುತ್ತುಂ ನೋಡಿದೆನ್!
ಕಂಡೆನಿಲ್ಲಾರುಮನ್! ದನಿಗೆ ಸೋಜಿಗವಡುತೆ
ಒಂದೆರಳ್ ಪಜ್ಜೆ ಪರಿದುದೆ ತಡಂ. ಮತ್ತೆ,
“ನಿಲ್! ಮುಂಬರಿಯದಿರ್! ಪರಿಯೆ ಪೆಣನಪ್ಪೆ ನೀನ್‌!”
ಎಂದಾಣೆಯಿತ್ತುದಾ ಬನಗೊರಲ್.
ಬಿಲ್ಗೆ ಬಾಣಂ ಪೂಡಿ ಸೆಣಸಲಣಿಯಾಗಿ ನಿಂದನ್.
ನಾಂ ನಿಂದ ಬಳಿಯ ಪೆರ್ಮರನ ತಲೆಯೊಲೆದ ಸದ್ದಾಯ್ತು.
ಕಣ್ಣೆತ್ತಿ ನೋಡಿ ಕಂಡೆನ್, ಒರ್ವನಂ ಬಿಯದ ಬೀರನಂ.
ನೋಡುತಿರೆ ಮರನೆತ್ತಿಯಿಂದೆ ಚಣದೊಳಿಳಿದನ್,
ಕಿಳ್ಗೆ ನೆಗೆದನ್; ಬಳಿಸಾರ್ದನ್;
‘ಆರ್ ನೀಮ್? ಕೆಳೆಯೊ, ಪಗೆಯೊ?’ ಎನ್ನುತ್ತಾರ್ದನ್.
ನಗುತೆ ಮಾರ್ನುಡಿದೆನ್ “ಕೆಳಗೆ ಕೆಳೆ; ಪಗೆಗೆ ಪಗೆ!”
ಸಂತೋಷದಲೆಯನೊಂದನ್ ಮೊಗದಿ ಸುಳಿಸಿ ಕೇಳ್ದನ್:
‘ಆನೆವೂರಿಂ ಬರ್ಪ ಬಿಲ್ಲೊವಜರೇಂ?’
ಮೊದಲೆನಗೆ ತಿಳಿಯದಿರ್ದೊಡಮೊಡನೆ ಅರಿತೆನ್
ಆನೆವೂರ್ ಎಮ್ಮ ಹಸ್ತಿಪುರಕೆ ಕಾಡುವೆಸರೆಂದು!
‘ನಾನವರ ಕಡೆಯವನ್’ ಎಂದೆನ್
ಕೈಮುಗಿಯತೆಂದನ್ “ಬನ್ನಿಂ, ಒಳ್ವಟ್ಟೆಗುಯ್ದಪೆನ್.
ನಮ್ಮೊಡೆಯನಾಣೆಯಾಗಿರ್ಪುದೆಮಗೆ
ತಮ್ಮಡಿಯನ್ ಕಂಡೊಡನೆ ಕರೆತರ್ಪುದೆಂದು.”
ನಾನೆಂದನ್: “ಬಿಲ್ಲೋಜರಿಲ್ಲಿಲ್ಲಯ್,
ಕೆಳಗೆ ಕಣಿವೆಯೊಳಿರ್ಪರ್.
ಪಳುವಟ್ಟೆ ತಪ್ಪಿದುದು. ನಾನವರನ್ ಒರ್ಕಡೆ
ಕುಳ್ಳಿರಿಸಿ, ಬಟ್ಟೆಯರಿಯಲ್ಕೆಂದು ಬಂದೆನ್.” —
ಒಡನೆ ಸೊಂಡದೊಳಿರ್ದ ಕೊಂಬನ್ ಬಾಯ್ಗಿಟ್ಟು
ಬನಮದಿರೆ ಊದಿದನ್.
ಬೆಸಲೆಯಾದುವೊ ಮರಮರದ ಗಬ್ಬಂಗಳೆನಲ್
ಮೂಡಿ ಬಂದರ್ ಪಡೆಪಡೆಯ ವೇಡರ್.
ಬೆಸಸಿದನ್ ದಂಡಿಗೆಯನೊಂದನ್‌ ತರಲ್ಕೆ.
ನಮ್ಮನದರೊಳ್ ಪೊತ್ತು ಮಲೆನೆತ್ತಿಗುಯ್ಯಲ್.
ಅವರತ್ತವೊದರ್; ನಾನಿತ್ತವಂದೆನ್.

ದ್ರೋಣ — ನೀನವರ್ಗೀ ತಾಣಮಿರ್ಪೆಡೆಯನ್ ಪೇಳ್ದೆಯೇನ್?

ಅಶ್ವತ್ಥಾಮ — ಪೇಳ್ದೆನ್.

ದ್ರೋಣ — ಅಂತಪ್ಪೊಡಿನ್ ನೀನ್ ಪಿಂತಿರುಗು
ನಮ್ಮವರ್ ಬೀಡುವಿಟ್ಟೆಡೆಗೆ.
ನಾನೊರ್ವನೆಯೆ ಪೋದಪೆನ್.
(ಪ್ರಶ್ನ ದೃಷ್ಟಿಯಾಗಿ ಆಶ್ಚರ್ಯಪಡುತ್ತಾ ನಿಂದಿದ್ದವನನ್ನು ನೋಡಿ)
ಏಕಾಂತಮೊಂದಿರ್ಪುದಾ ಏಕಲವ್ಯನ ಕೂಡೆ!

ಅಶ್ವತ್ಥಾಮ(ತಂದೆಯ ಮೊಗದ ಕಡೆಗೆ ನೋಡುತ್ತಾ ತನ್ನ ಕಣ್ಣನ್ನು ಸಂಧಿಸದೆ ಅತ್ತ ಇತ್ತ ನೋಡುವ ನಿಮಿತ್ತ ವಂಚಿಸುತ್ತಿದ್ದ ದ್ರೋಣನ ಕಣ್ಣುಗಳಲ್ಲಿ ಹನಿಯಾಡುತ್ತಿದ್ದುದನ್ನು ಕಂಡು)
ಆರ್ಯ, ನಿಮ್ಮ  ಏಕಾಂತಕಾನ್ ಭಂಗಮನ್ ತಾರೆನ್.
ಒಡವಂದೊಡಂ ದೂರಮಿರ್ಪೆನ್.

ದ್ರೋಣ(ಅಸಹನೆಯಿಂದ)
ಒಡನೆ ವಂದೇನ್ ಮಾಳ್ಪಯ್!
ನಡೆವುದನ್ ತಡೆವೆಯೇನ್? ಮೇಣ್
ನೀನೆನಗೆ ಮೆಯ್‌ಗಾವಲೇನ್?
ನನ್ನ ನಾನ್ ರಕ್ಷಿಸಲ್ ಬಲ್ಲೆನಯ್!
(ಮೊಗದಿರುಹಿ ಕಹಳೆ ಕೇಳಿಸಿದ ಕಡೆಗೆ ನೋಡುತ್ತಿರುತ್ತಾನೆ.)

ಅಶ್ವತ್ಥಾಮ(ತನ್ನೊಳಗೆ)
ಇದೇನಾರ್ಯನೀ ವರ್ತನಂ?
ಅಪ್ರಸನ್ನನಾಗಿರ್ಪನ್!
ಆವುದೊ ಗುಹ್ಯಸಂಕಟಂ ಕೊರೆಯುತಿಹುದೊಳಗಂ!
ಪೇಳಲೊಲ್ಲನ್, ವಂಚಿಸುತ್ತಿರ್ಪನೆನ್ನನ್,
ಈ ಪಯಣಮಂ ಬೆಸಸಿದಾಗಳೆ ನನಗೆ
ಪುಟ್ಟಿದುದು ಶಂಕೆ! ಆವುದೊ ಅಮಂಗಳಕೆ
ಕೈಕೊಂಡನೀ ವನಯಾತ್ರೆಯಂ!
ಎಂತಾದೊಡಂ ತಿಳಿವೆನ್;
ಏನಾನುಮಕ್ಕೆ ತಿಳಿಯದೆಯೆ ಮಾಣೆನ್!
(ತಂದೆಯ ಕಡೆ ನೋಡಿ)
ಆರ್ಯ, ನಿಮ್ಮನ್ ರಕ್ಷಿಸಲ್ಕಾನೆನಿತು ಬಲ್ಲಿದನ್!
ರಕ್ಷಿಸಲ್ಕಲ್ತು, ಸೇವಿಸಲ್ಕೈತರ್ಪೆನ್.

ದ್ರೋಣ(ಮಗನ ಕಡೆ ನೋಡದೆ, ದಿಟ್ಟದನಿಯಿಂದ)
ಕೈಂಕರ್ಯಕಿರ್ಪನಾ ಏಕಲವ್ಯನ್;
ನಡೆ ನೀನ್ ಪಿಂತಿರುಗಿ ಬೀಡಿಂಗೆ.

ಅಶ್ವತ್ಥಾಮ — ಏಕೆ ಅಸ್ತಿರರಾಗಿ ತೋರ್ಪಿರಿ, ಆರ್ಯ?
ದೇಹಮಸ್ವಸ್ಥಮೋ? (ತುಸು ತಡೆದು)
ಮೇಣ್ ಮನಮೊ?

ದ್ರೋಣ(ಮುನಿದಂತೆ)
ವತ್ಸ, ನಿನಗೆ ಲೇಸಾಗುವಾಸೆಯಿರ್ಪೊಡೆ
ನನ್ನನೊರ್ವನೆಯೆ ಬಿಟ್ಟು ನಡೆ.

ಅಶ್ವತ್ಥಾಮ — ಮುನಿಯದಿರಿ ಆರ್ಯ!
ನಿಮ್ಮಾಜ್ಞೆಯಂತೆ ಪೋದಪೆನ್. ಆದೊಡಂ
ನಾನ್ ಗೆಯ್ದ ತಪ್ಪೇನ್ ಅದನ್ ತಿಳಿದೆ ಪೋದಪೆನ್.

ದ್ರೋಣ(ಮಗನನ್ನು ದುರುದುರು ನೋಡುತ್ತಾ)
ನಿನ್ನದೇನ್ ತಪ್ಪಿಲ್ಲ.
ಮನದೊಂದು ತುಮುಲಮೆಯೆ ಕಾರಣಂ.
ಆ ವ್ಯಾಧಿಗೀಗಳ್ ನಿರ್ಜನತೆ ಭೇಷಜಂ;
ನಿಶ್ಯಬ್ದಮೇ ತಾಂ ಪಥ್ಯಂ!

ಅಶ್ವತ್ಥಾಮ — ಕ್ಷಮಿಸಿಮಾರ್ಯ. ನಾನ್ ಪೆರನಲ್ಲನ್ ನಿಮಗೆ.
ಮೊನ್ನೆಯಿಂದವುದೋ ಗೂಢಶೋಕಂ
ಕೊರೆಯುತಿರ್ಪುದು ನಿಮ್ಮ ಜೀವಮಂ.
ಕಂಡೆನಾದೊಡಂ ಆರಿತೆನಿಲ್ಲ.
ದಿಟಂ ಪೇಳಿಂ; ಕಾಲ್ವಿಡ್ದು ಬೇಡುವೆನ್:
ಆವುದೊ ಅಮಂಗಳಕೆ ಕೈಕೊಂಡಿರೀ ಪಯಣಮಂ!

ದ್ರೋಣ(ಸುಯ್ದು) ನೀನೆಂದುದಹುದಾದೊಡಂ….
ಅನಿವಾರ್ಯಮದು, ವತ್ಸ!

ಅಶ್ವತ್ಥಾಮ(ಉದ್ವೇಗದಿಂದ)
ಏನದು, ಆರ್ಯ, ಪೇಳಿಮ್.
ದಿಟಿಮಪ್ಪವೋಲ್ ತೋರ್ಪುದೆನ್ನಾಶಂಕೆ:
ಆ ಅರ್ಜುನನೊ ಅದಕೆ ಕಾರಣಂ?

ದ್ರೋಣ(ಉದಾಸೀನವಾಣಿಯಿಂದ ಆದರೂ ದೃಢವಾಗಿ)
ವಿಧಿ, ಕಾರಣಂ!
ಅಂದು ಆ  ಅರ್ಜುನನ ಕೈಯಿಂದಮಾ ದ್ರುಪದನಂ
ಭಂಗಿಸಿದ ಕತದಿಂದಮಾತಂಗೆ ನಾನಿಂದು
ಋಣಿಯಾಗಿ ಕೈಕೊಂಡೆನೀ ಹೇಯಕಾರ್ಯಮಂ!
ನನ್ನಹಂಕಾರದಾ ಛಲಮೆ ಮರಿಯಿಕ್ಕಿದುದು
ಪಾರ್ಥನ ಅಹಂಕಾರದೀ ಕ್ರೂರ ಈಷ್ಯೇಯಂ.

ಅಶ್ವತ್ಥಾಮ(ಉಗ್ರವಾಗಿ ಅಕ್ಷರಗಳನ್ನು ವಿರಳವಿರಳವಾಗಿ ಉಚ್ಚರಿಸುತ್ತಾ)
ಕರುಬಿದನೊ ಏಕಲವ್ಯಂಗೆ ಆ ಕೀಳೆರ್ದೆಯನ್?

ದ್ರೋಣ(ಸುಯ್ದು)
ದ್ರುಪದನಂ ಗೆಲ್ದೆನ್ನ ಬಿಂಕಕ್ಕೆ ಬೇಳ್ವೆಯಂ
ಸಲ್ಲಿಸಿದ ಸಂತೋಷ ಸಮಯದೊಳ್ ಪೇಳ್ದೆನ್!
“ಅರ್ಜುನ, ನಿನಗುದೊ ಮಚ್ಚಿ ಪೂಣ್ದೆಪೆನ್:
ಜಗತ್ರಯದಿ ನಿನಗೆಣೆಗಳಿಲ್ಲದೊಲ್
ನಿನಗೆನ್ನ ಬಿಲ್ ಕಲ್ಪಿಯಂ ದಾನವೀವೆನ್!
ನಿನ್ನ ಪೆಸರಂ ಗಗನಕೆತ್ತುವೆನ್; ಮೇಣ್ ಅದನ್
ದಿಕ್ಕರಿಲಲಾಟದೊಳ್ ರಕ್ತಾಕ್ಷರದಿ ಕೆತ್ತುವೆನ್;
ಆಚಾರ್ಯ ದ್ರೋಣಂಗಿನ್ನಿಲ್ಲ ಶಿಷ್ಯನ್,
ನಿನ್ನಂ ಮಿರ್ವ ಶಿಷ್ಯನ್,
ಎಂಬ ಕೀರ್ತಿಯೆ ಕಿರೀತಮನೆ ಕಿರೀಟಿ ಎನಿಪೆನ್!”
ಅಂದಾಂ ಪೇಳ್ದುದನ್ ಅದನೆ ಬಲ್ಚಿಡಿವಿಡಿದು
ಆ ಬೇಡರಣುಗಂಗೆ ಕರುಬಿದನ್,
ಒಲದೆನ್ನನ್ ಈ ಪೊಲ್ಲಗೆಯ್ಮೆಗೆ ತರುಬಿದನ್.

ಅಶ್ವತ್ಥಾಮ(ಸುಯ್ದು)
ಈಗಳೇನ್ ಮಾಳ್ಪಿರಾ ಬೇಡರಣುಗಂಗೆ?

ದ್ರೋಣ(ಬಾನೆಡೆಗೆ ನೋಡುತ್ತ)
ಏನಾನುಮೊಂದನ್: ಪೂಣ್ಕೆ ನಿಲ್ವಂತೆ, ಮೇಣ್
ಅರ್ಜುನನ ಮಚ್ಚರಾಗ್ನಿಗೆ ಬೇಳ್ವೆ ಸಲ್ವಂತೆ!

ಅಶ್ವತ್ಥಾಮ(ದೃಢಧ್ವನಿಯಿಂದ)
ಪೇಳಿಮೇನ್ ಮಾಳ್ಪಿರೆಂಬುದಂ.
ಅಲ್ಲದಿರೆ ಬರ್ಪೆನಾನ್ ನಿಮ್ಮ ಬೆಂಬಳಿಯೆ.

ದ್ರೋಣ(ಕನಲ್ದು) ಬಂದೇನ್ ಮಾಳ್ಪಯ್?

ಅಶ್ವತ್ಥಾಮ(ದೃಢವಾಗಿ) ತಡೆವೆನನ್ಯಾಯಮಂ!

ದ್ರೋಣದ್ರೋಣನ್ ತಾನೆ ತಡೆಯಲಾರದುದನ್
ಎಂತು ತಡೆವನ್, ಪೇಳ್, ದ್ರೋಣಾತ್ಮಜನ್ ?

ಅಶ್ವತ್ಥಾಮ(ಕುಪಿತನಾಗಿ)
ಆ ಅರಸು ಮಕ್ಕಳ ಕೂಳ್ಗೆ ಆಳಾಗಿ
ಬಾಳ್ ಗೋಣನೊಡ್ಡುತಿರ್ಪಿರಿ ನರಕನಕ್ರದ ಬಾಯ್ಗೆ!

ದ್ರೋಣ(ಗಂಭೀರ ವಾಣಿಯಿಂದ ಸಾವಧಾನವಾಗಿ)
ಬರಿಯ ಜೋಳದ ಪಾಳಿಯಲ್ತು, ವತ್ಸ.
ಕೂಳ್‌ಮಿಣಿಯ ಪಿಡಿದಿರ್ಪುದಾ ಬಿದಿಯ ಕಯ್ !
ನೂಂಕುತಿಹುದನಿಬರಂ ತನ್ನ ಲೀಲಾರ್ಥಂ.
ಅಂತಲ್ಲದಿರೆ, ನಮ್ಮನೆತ್ತಣಿಂದಲೊ ಕರೆದು
ಒಯ್ದು ತಂದೀ ನೃಪಾಲರೂಳಿಗಕೆ ತಳ್ಳುತಿರ್ದುದೆ
ಈಶ್ವರೇಚ್ಛಾರೂಪದೆಮ್ಮ ಕರ್ಮಪಾಶಂ?
ವತ್ಸ, ಉಬ್ಬೆಗಂಗೊಳ್ಳದಿರ್ ನೀನ್;
ದೈವವೋಂದೊಳ್ವಟ್ಟೆಯಂ ಸೂಚಿಸಿರ್ಪುದು ನನಗೆ.
ಆ ದೈವಮಂ ನಿಮ್ಮಿ ಕೆಲಸಮಾಳ್ಪೆನ್,
ತಣಿಯುವಂತರ್ಜುನಂ,
ಸಲ್ವಂತೆ ನಾನಿತ್ತ ವಚನಂ, ಮೇಣ್
ಏಕಲವ್ಯಂಗೊದಗದೊಲ್ ಆವುದುಂ ಪೆರ್ ಕೇಡು.

ಅಶ್ವತ್ಥಾಮಕರ್ಣಂಗೆ ಪರಶುರಾಮಂ ಗೆಯ್ದವೋಲ್….

ದ್ರೋಣಚಿಃ ಚಿಃ ಅಂತಲ್ತು ನನ್ನ ಬಗೆ!
ಆದೊಡಂ ನೀಂ ಪರಶುರಾಮನಂ ತೆಗಳದಿರ್.

ಅಶ್ವತ್ಥಾಮಮತ್ತೇನ್? ಪೊಗಳವೇಳ್ಕುಮೊ?

ದ್ರೋಣನೀನಿನ್ನುಂ ಕಿರಿಯನ್, ಅಜ್ಞನ್.

ಅಶ್ವತ್ಥಾಮಭಕ್ತಿಯಿಂ ಸೇವಿಸಿದ ಶಿಷ್ಯಂಗೆ ಶಾಪಮಮ್
ಕೊಟ್ಟಾ ಕೊಡಲಿಗೊರವಂ ಮಹಾಪ್ರಾಜ್ಞನ್!

ದ್ರೋಣಮುಂದಪ್ಪುದಂ ಯೋಗದೃಷ್ಟಿಯೊಳರಿತು
ಚರಿಸುವಾತನ್ ಮಹಪ್ರಾಜ್ಞನೆ ವಲಂ!

ಅಶ್ವತ್ಥಾಮಏನ್ ಯೋಗಮೊ! ಏನ್ ದೃಷ್ಟಿಯೊ?
ನಿಮ್ಮನ್ನರಪ್ಪ ಗುರುಗಳ ಮಾರ್ಗಮಚಿಂತ್ಯಂ!

ದ್ರೋಣವತ್ಸ, ಕಲಿ ಕೈದಿವಂ ಸಮೆಯವೇಳ್ಕುಂ ದಿಟಂ
ಸಮೆದ ಮಾತ್ರದಿ ಸಮೆದ ಕೈದುಗಳನೆಲ್ಲಮಾಂ,
ಸಮಯದೌಚುತ್ಯಮಂ ಪಾತ್ರದೌಚಿತ್ಯಮಂ
ಹಿತಾಹಿತೌಚಿತ್ಯಮಂ ಮತ್ತೆ ದೈವೇಚ್ಛೆಯಂ
ತಿಳಿಯದೆಯೆ, ತೂಗದೆಯೆ, ಬಗೆಗೊಳ್ಳದೆಯೆ,
ಪೊಳಿವ ಕೈದುವ ನಿಶಿತಕಾಂತಿಗೆ ಮನಂಸೋಲ್ತು
ಪ್ರಯೋಗಿಸಲ್ ವೇಳ್ಕುಮೆಂಬುದು ಮರುಳ್ತನಂ.
ಕಬ್ಬಿಗಂ ತನ್ನೊಳಿರ್ಪುಪಮೆಗಳನೆಲ್ಲಮಂ
ಒಂದೆ ಕಬ್ಬದೊಳೊರ್ಮೆಯೆ ಪ್ರಯೊಗಿಸಲ್
ಬೆಳ್ತನಂ; ಕಬ್ಬಂ ಕೆಡುಗುಮಲ್ತೆ!
ಕೈದುವಂ ಸಮೆಯುವಾತಂಗೆ ಅದನ್ ಮುರಿಯಲುಂ,
ಸಮಯಕ್ಕೆ ತಗುವವೋಲದರ ತೀಕ್ಷ್ಣತೆಯನಿನಿತು
ಸಂಯಮಿಸಿ ದಿವ್ಯಲೀಲಾ ನಿಯಮಕನುಗೊಳಿಸಲುಂ,
ಅನಿವಾರ್ಯಮಾದೊಡಾ ಕೈದುವಂ
ಮುಂದೆ ಬರ್ಪೊಂದನ್ಯ ರಣಲೀಲೆಗೋಸುಗಂ,
ಒರೆಗಿಕ್ಕಿ ಬದಿಗಿರಿಸಲುಂ, ತಿಳಿಯುವೇಳ್ಕುಂ.
(ಇಬ್ಬರೂ ತುಸುಹೊತ್ತು ನೀರವವಾಗಿ ನಿಲ್ಲುತ್ತಾರೆ)
ಚಿಂತಿಸದಿರ್, ವತ್ಸ,
ನಿನ್ನ ಕೆಳೆಯಂಗಾ ಏಕಲವ್ಯಂಗಿನಿತು ಪೆರ್ ಕೇಡಡಸದೊಲ್
ಸಲಿಸಿ ಬರ್ಪೆನಾ ಬೀಭತ್ಸುವಿಂಗಿತ್ತ ವಚನಮನ್.
ನೀನ್ ಮರಲ್ ಬೀಡಿಂಗೆ.
ನೀನ್ ಬಂದೊಡೆನ್ನೊಡನೆ, ಕೇಳ್,
ಇರ್ಮಡಿಸುಗುಂ ನನ್ನ ಧರ್ಮಸಂಕಟಂ!

ಅಶ್ವತ್ಥಾಮಅರ್ಜುನಂಗಿತ್ತಂತೆ ನನಗೀಗಳಿತ್ತಿಹಿರಿ
ಭಾಷೆಯಂ, ಎಕಲವ್ಯಂಗಾವುದುಂ ಕೇಡಾಗದೊಲ್.

ದ್ರೋಣ(ಒತ್ತಿ ಹೇಳುತ್ತಾನೆ) ಪೆರ್ ಕೇಡಡಸದೊಲ್.
(ಗೆಲ್ಲುಲಿ ಕೊಂಬಿನ ಕೂಗುವೆರಸಿ ಕೇಳಿಬರುತ್ತದೆ)
ಅವರೈತರ್ಪ ಮುನ್ನಮೆಯೆ ನೀನ್ ಪೋಪುದೊಳಿತು.
ಕಂಡಮೇಲ್ ಮರಳಲೀಯನ್ ನಿನ್ನನ್ ಏಕಲವ್ಯನ್.
(ಅಶ್ವತ್ಥಾಮನು ಕಾಲೆಳೆದುಕೋಂದು ಹೋಗಿತ್ತಾನೆ.)
ಮಾಳ್ಪುದನ್ ಮಾಳ್ಪೆನ್ ! ತಾನ್ ಅಪ್ಪುದಕ್ಕೆ!
ಸರ್ವಜ್ಞಂ ಸರ್ವಶಕ್ತಂ ಆ ದೈವಮಿರ್ಕುಂ!

(ಜನರ ಗೆಲ್ಲುಲಿ ಬಳಿಸಾರುತ್ತದೆ. “ಗೆಲ್ ನಮ್ಮೊಡೆಯಾ!” “ನಲ್ ನಮ್ಮರಸಾ!” “ಗೆಲ್ ಹೋ! ನಲ್ ಹೋ!” ಎಂಬ ಘೋಷಗಳು ಬರುವತ್ತ ಕಡೆ ನೋಡುತ್ತಾ ನಿಲ್ಲುತ್ತಾನೆ.)