(ಮೊದಲನೆಯ ದೃಶ್ಯದಲ್ಲಿದ್ದಂತೆಯೆ ಜಲಪಾತ, ಬಂಡೆಗಳು, ಶಿಲಾವೇದಿಕೆ, ದ್ರೋಣ್ ಪ್ರತೀಕ ಇತ್ಯಾದಿ. ಇಳಿ ಹೊತ್ತು. ಸೂರ್ಯನು ಪಶ್ಚಿಮ ದಿಗಂತಕ್ಕೆ ಅನತಿ ದೂರದಲ್ಲಿದ್ದಾನೆ. ನಿಲ್ ಬಂಡೆಗಳ ನೆಳಲುಗಳು ಮೂಡಲಿಗೆ ನೀಳ್ದುಬಿದ್ದಿವೆ. ದ್ರೋಣ ವಿಗ್ರಹಕ್ಕೆ ಇದಿರಾಗಿ ಆಚಾರ್ಯ ದ್ರೋಣನು ನಿಂತಿದ್ದಾನೆ. ಅವನ ಕೊರಳಲ್ಲಿ ಕಾಡು ಹೂಗಳಿಂದ ರಚಿತವಾದ ಒಂದು ಹಾರ ನೇಲುತ್ತಿದೆ. ತನ್ನ ಪ್ರತೀಕವನ್ನು ನಿಡುಹೊತ್ತು ನಿಟ್ಟಿಸಿ, ಹೆಮ್ಮೆಯಿಂದ ತಲೆದೂಗುತ್ತಾನೆ. ಮತ್ತೆ ಕೋರಳೆತ್ತಿ ದೂರನೋಡಿ ಏಕಲವ್ಯನನ್ನು ನಿರೀಕ್ಷಿಸುತ್ತಾನೆ.)
ದ್ರೋಣ — ಧನ್ಯನ್ ನೀನ್, ಎಕಲವ್ಯ, ಧನ್ಯನೆ ದಿಟಂ.
ಎನಿತೆನಿತೊ ಬಾಲರ್ಕಳನ್ ನಾನ್ ಕಂಡಿಹೆನ್,
ಕಲಿಸಿಹೆನ್. ಕಾಣೆನಾನ್ ಶ್ರದ್ಧೆಯೊಳ್ ನಿನಗೆಣೆಯನ್
ಇನ್ನೆವರಮ್. ಎನ್ನ ಹಿರಿಮೆಯನೆನಗೆ ತೋರಿದಯ್;
ಗುರುಕೃಪಾ ಮಹಿಮೆಯಂ ಲೋಕಕ್ಕೆ ಸಾರಿದಯ್.
ನೀನು ಗುರುವೆಂದೊಲಿದೆ ನನಗೆ ಗುರುತನವಿತ್ತೆ.
ಮೇಣ್, ಗುರುವಾದೆ. (ದೂರ ಏಕಲವ್ಯ ಬರುವುದನ್ನು ಕಂಡು)
ಅದೊ, ಪರ್ವತಾರಣ್ಯಚೇತನಮೆ
ಮೆಯ್ಗೆಂಡು ಬರ್ಪಂತೆ ಬರ್ಪನಾ ಏಕಲವ್ಯನ್,
ಗಾತ್ರ ಭವ್ಯನ್! ದಿವ್ಯಮವನಾ ಪಿಡಿದ ಚಾಪಂ,
ಉಪಾಸನಾ ಶಕ್ತಿರೂಪಂ! ಅಃ ಏನ್ ವಿನಯಶಾಲಿ!
ಅದೆಂತೆನ್ನನಾದರಿಸಿದನ್! ಅದೆಂತೆರಗಿ
ಪೂಜೆಗೈದನ್! ನನ್ನೆರ್ದೆಯ ಕಳ್ತಲೆಯ ಗವಿಯ
ದುರಭಿಸಂಧಿಯ ಪಾಪ ಘೂಕಾಕ್ಷಿ ತಾನ್
ಅವನೆರ್ದೆಯ ಸರಳಗೌರವ ದೀಪ್ತಿಗಳ್ಕಿ
ಕಣ್ ಮುಚ್ಚಿದುದು, ನಾಣ್ಚಿ ಕುಗ್ಗಿದೋಲ್. ಆ ನಾಗರಿಕ
ನೃಪಕುಮಾರರ ವಿನಯಮೇಗಳುಂ ಫಲವಾದಿ.
ಕಾಣೆನಾನ್ ಇಂತಪ್ಪ ನಿಷ್ಕಾಮಮಂ ಭಕ್ತಿಯಂ.
ಅವನಾ ಕೃತಜ್ಞತೆಯೊ, ಶರಧಿಯೊಳ್ ಅಮೇಯಪರಿಧಿ.
ಅಂದವನ್ ಬಂದಂದು ನಾನಿತ್ತುದಾದೊಡಮೇನ್?
ಅಲ್ಪಂ! ಆ ಅಲ್ಪದಿಂದೆಂತಪ್ಪ ಭೂಮಮಮ್
ಸಾಧಿಸಿರ್ಪನ್! — ಸವ್ಯಸಾಚಿಯ ಕರುಬು ಬರಿಯ
ಕರುಬಲ್ತು: ಭಯಮದಕೆ ಹೃದಯಕಾರಣಮಪ್ಪೊಡಂ
ಸಕಾರಣಂ!
(ಎಕಲವ್ಯ ಧನುರ್ಧಾರಿಯಾಗಿ ಮುಗುಳುನಗೆ ನಗುತ್ತಾ ಪ್ರವೇಶಿಸುತ್ತಾನೆ. ತುಂಬಿದ ಬತ್ತಳಿಕೆ ಬೆನ್ನ ಮೇಲಿದೆ.)
ಏಕಲವ್ಯ — (ಹೆಮ್ಮೆಯಿಂದ) ಆಚಾರ್ಯ, ತಂದೆನಿದೊ ಚಾಪಮನ್;
ಏನ್ ಬೆಸಸು ತೋರ್ದಪೆನ್.
ದ್ರೋಣ — ತೋರ್, ವತ್ಸ, ಕಣ್ತಣಿಯೆ
ಕಾಣ್ಬೆನಾ ನಿನ್ನ ಬಣ್ಣಿಸಿದ ಬಿಲ್ ಜಾಣ್ಮೆಯನ್.
ಏಕಲವ್ಯ — ನೀನ್ ಕೊಟ್ಟುದಾ ಜಾಣ್ಮೆ! ನನ್ನದೆಂತಕ್ಕುಮ್?
ದ್ರೋಣ — ನಮ್ಮ ಭಕ್ತಿಗೆ ಮೆಚ್ಚುವಾ ಸಚ್ಚಿದಾನಂದಮೆ
ಜಗದ್ಗುರು, ಏಕಲವ್ಯ ಬೇರೆ ಗುರುವುಂಟೆ?
ನರಗುರು ನಿಮಿತ್ತಮಾತ್ರನ್.
ಏಕಲವ್ಯ — (ಆಚಾರ್ಯನನ್ನು ಮೆಚ್ಚಿ ನೋಡುತ್ತಾ) ಅಂತಪ್ಪೊಡಾ
ಚಿಚ್ಛಕ್ತಿ ಪರಿಯಲ್ಕೆ ಪಾತ್ರನಪ್ಪಾತನುಂ
ಪೂಜ್ಯನ್, ನಿಮಿತ್ತಮಾತ್ರನುಂ. — ಪೂಜ್ಯ,
ಪೇಳ್, ಒದಗೆಯಿಲ್ಲದೆ ನೀರ್ ಪರಿದುಬರ್ಕುಮೆ
ನಾವ್ ಕರೆವ ತಾಣಕ್ಕೆ? — ಬೆಸರ್ಸು, ತೋರ್ಪೆನಾನ್
ನೀನ್ ಕಲಿಸಿದಾ ಧನಿರ್ವಿದ್ಯೆಯನ್!
ದ್ರೋಣ — (ಚಿಂತಾಮಗ್ನನಾಗಿ, ಏನನ್ನೊ ನಿರ್ಣಯಿಸಿ ಮೇಲೆನೋಡಿ)
ಕಾಣ್ಬುದೇನಾ ಗಗನ ಪಕ್ಷಿ?
ಏಕಲವ್ಯ — (ದಿಟ್ಟಿಸಿ) ಮುಗಿಲಾಚೆ ಮರೆವೊದುದಾ ಚುಕ್ಕಿ!
ದ್ರೋಣ — ಮರೆಯಾದೊಡೇನ್ ಕಣ್ಗೆ? ಕಿವಿಮರೆಯೆ ಕೇಳ್ವ ಉಲಿ?
ಏಕಲವ್ಯ — (ಆಲಿಸಿ) ಆಃ ಎನಿತು ಸವಿ! ಅದನೆಂಬರ್ ಪೊಂಗುಳಿ.
ಎಳೆವೆಯಿಂದಾ ದನಿಯನೆನಿತೊ ಸೂಳ್ ಕೇಳಿಹೆನ್:
ಅಬ್ಬೆಯಾ ತೋಳ್ತೊಟ್ಟಿಲೊಳ್ ಪಟ್ಟು ಕೇಳಿಹೆನ್;
ಅಯ್ಯನೊಡನಾಂ ತಿಪ್ಪತಿಪ್ಪಂ ಪಜ್ಜೆಯಿಟ್ಟು
ಮಲೆತಲೆಯನಲೆವಂದು ನವಿರ್ನಿಮಿರಿ ಕೇಳಿಹೆನ್;
ಮತ್ತೆನಿತೊ ಸೂಳ್ ಅದಕೆ ಮಾರುಲಿಯ ಕೊಡುವಂತೆ
ಕರೆದು ಕರೆದಣಕಿಸಿಹೆನ್ ಆನ್ ಅದನ್! ಆದೊಡಂ
ಆಲಿಸುವನೇಗುಳುಂ ಅದುವೆ ಮೊದಲೆಂಬುವೋಲ್.
ದ್ರೋಣ — (ಬಾನೆಡೆಗೆ ನೋಡುತ್ತಾ) ಎಚ್ಚು ಕೆಡವದನ್.
ಏಕಲವ್ಯ — (ಬೆಚ್ಚಿ ಹಿಂಜರಿದು) ಆಗದಾಗದು, ಆರ್ಯ!
ದ್ರೋಣ — ಕಾಣದಿರ್ದೊಡಮೇನ್? ಕೀಳ್ವುದದರಾ ಕೊರಳ್.
ಶಬ್ದವೇಧಿಯನರಿವೆಯಲ್ತೆ? ನೋಳ್ಪಮ್.
ಏಕಲವ್ಯ — ಇದೇನಿದಾರ್ಯ? ಅರಿಯದನೊಲ್ ಆಡುತಿರ್ಪಯ್!
ದ್ರೋಣ — (ಮರೆನಗೆ ನಗುತ್ತಾ)
ನೋಳ್ಪಮ್ ನಿನ್ನ ವಿದ್ಯಾಸಾಮರ್ಥ್ಯಮಂ;
ಇಸು, ಏಕಲವ್ಯ,
ಏಕಲವ್ಯ — ಅಪರಾಧಮಿಲ್ಲದಾ ಸಾಧುವಂ ಕೊಲಲ್ಕಲ್ತು,
ಆಚಾರ್ಯ, ಆ ವಿದ್ಯೆಯಂ ನೀನಿತ್ತುದೆನಗೆ.
ಮುನಿಗುಂ ಮಂತ್ರಾಧಿದೇವತೆ; ಮೇಣ್,
ದಿವ್ಯ ವಿದ್ಯಾ ಬಲದಿ ಪಾಪಕಾರ್ಯವನೆಸಗೆ
ಧರ್ಮಂ ಋತುಚ್ಯುತನೆನಗೆ ತಾನಗ್ರಮಕ್ಕುಂ; ಮೇಣ್,
ವಿದ್ಯಾಶಕ್ತಿ ತಾನೊಡನೆ ತಿರೋಹಿತಮಕ್ಕುಂ; ಮೇಣ್,
ಆತ್ಮ ಹಾನಿಯಿಂ ಸರ್ವನಾಶಮಕ್ಕುಂ. —
ತಾಮದನೆಲ್ಲಮಂ ಬಲ್ಲಿರಾದೊಡಂ,
ನನಗಿದು ಪರೀಕ್ಷೆಯಲ್ತೆ, ಈವೊಳ್ತು!
ದ್ರೋಣ — (ತೆಕ್ಕನೆ ಮುಂಬರಿದು ಏಕಲವ್ಯನನ್ನು ಆಲಿಂಗಿಸಿ)
ಪುಣ್ಯವಂತನ್ ನೀನ್, ಏಕಲವ್ಯ!
ಬರ್ದುಕಿದಿಯ್,
ನೀನ್ ಬರ್ದುಕಿ ನನ್ನಮಂ ಬರ್ದುಕಿಸಿದಯ್! —
ನಿನಗಲ್ತಿದು ಪರೀಕ್ಷೆ, ನನಗುಂ ಕಣಾ!
ವತ್ಸ, ನೀನೆಂತರಿವಯ್
ನನಗಾಗುತಿರ್ಪಾ ಪರೀಕ್ಷೆಯಂ?
ನಿನಗೆಂತುಸಿರ್ವೆನ್ ಅದನ್? (ನಿಡಿಸುಯ್ಯುತ್ತಾನೆ.)
ಏಕಲವ್ಯ — ಗುರುವಿಗಿನ್ನಾವುದೊ ಪರೀಕ್ಷೆ? ಶಿಷ್ಯಾಭ್ಯುದಯಮಲ್ತೆ?
ದ್ರೋಣ — ಶಿಷ್ಯರೀರ್ವರ್ ತಮ್ಮತಮ್ಮೊಳ್ ಪುರುಡಿಸಲ್?
ಒರ್ವನೇಳ್ಗೆಗೆ ಮತ್ತದೊರ್ವನ್ ಕರುಬಲ್?
ಏಕಲವ್ಯ — ಚಿಃ ಕರುಬೆ ಕಿಳ್ತನಂ! ಅದರೊಳುಂ
ಗುರುವದೊರ್ವಂಗಿರ್ವರುಂ ಶಿಷ್ಯರೆನೆ
ಅವರ್ ಸೋದರರ್.
ಸೋದರನ್ ಸೊದರನ ಏಳ್ಗೆಗೆ ನಲಿಯವೇಳ್ಕುಂ. —
ಅವನೇಳ್ಗೆ ಇವನೇಳ್ಗೆಯಲ್ತೆ?
ಅವನ ಬಲಮಿವನ ಬಲಮಲ್ತೆ?
ಅವನ ಉನ್ನತಿ ತನಗುಮುನ್ನತಿಯಲ್ತೆ?
ದ್ರೋಣ — ಅಂತಪ್ಪ ಶಿಷ್ಯನಂ ಪಡೆದ ಗುರು ಸುಕೃತಿ ದಲ್!
ಆ ಸುಕೃತಮೆನ್ನದಲ್ತು!
(ಸುಯ್ದು ಅಂತಸ್ಸಂಕಟವನ್ನು ಪ್ರಕಟಿಸುತ್ತಾನೆ.)
ಏಕಲವ್ಯ — ಆಚಾರ್ಯನಿಂತಪ್ಪ ಸಂಕಟಕೆ
ನಾನಾಗದಿರ್ಕೆ ಕಾರಣಂ.
ದ್ರೋಣ — (ಅಧೋವದನಾಗಿ)
ನೀನಲ್ತು; ನಿನ್ನಿಂದಮಾ ಕಾರಣಂ!
ಏಕಲವ್ಯ — ಆಚಾರ್ಯ, ನಿನ್ನ ಕೃಪೆ:
ನನ್ನ ಹೃದಯದೊಳಿನಿತ್ತಾದೊಡಂ ತಾವಿರದು
ಅಂತಪ್ಪ ಕರುಬೆಂಬ ಪೇಸಿಂಗೆ.
ದ್ರೋಣ — ಬಲ್ಲೆನ್, ವತ್ಸ; ಅದಕ್ಕಾಗಿಯೆ ಈ ಸಂಕಟಂ.
ಏಕಲವ್ಯ — ಅದಕೆ ಪರಿಹಾರಮೆನ್ನಧೀನಮಿರ್ಪೊಡೆ
ಸಮರ್ಪಿಸುವೆನೆನ್ನ ಸರ್ವಸ್ವಮಂ ನಿನ್ನಡಿಗೆ,
ಗುರುದೇವ, ಮೇಣ್ …
ದ್ರೋಣ — ನಿನ್ನಧೀನವೆಂ ಇರ್ಪುದಾದೊಡಂ …
(ಮಾತು ಪೂರೈಸದೆ ಸುಮ್ಮನೆ ದೂರಗತ ದೃಷ್ಟಿಯಾಗಿ ನಿಲ್ಲುತ್ತಾನೆ.)
ಏಕಲವ್ಯ — (ಧೃಢವಾಣಿಯಿಂದ)
ಸಮರ್ಪಿಸಿದೆನೆನ್ನ ಸರ್ವಸ್ವಮಂ ನಿನ್ನಡಿಗೆ.
ಆವುದಾದೊಡಮದನ್ ಬೆಸಸು ನೀನ್, ಆಚಾರ್ಯ.
ದ್ರೋಣ — (ಮುನಿದು ಏಕಲವ್ಯನನ್ನು ನೋಡಿ)
ಕಟುಕನಂ ಬೆಂಬಳಿವಿಡಿದು ಪೋಪ ಕುರಿಯಂತೆ
ನಡೆಯದಿರ್, ಏಕಲವ್ಯ.
ಏಕಲವ್ಯ — (ನಗುತ್ತ) ನೀನ್ ಕಟುಕನುಮಲ್ತು, ನಾನ್ ಕುರಿಯಮಲ್ತು,
ಆಚಾರ್ಯ.
ದ್ರೋಣ — (ತನ್ನ ಮೇಲೆ ತಾ ಮುನಿದು)
ನಿನ್ ಕುರಿಯಹುದೊ ಅಲ್ತೊ?
ನಾನಂತು ಕಟುಕನ್ ದಿಟಂ!
ನಂಬಿದವನಂ ಕೊರಲ್ ಕೊರೆವ ಕಜ್ಜಮಂ
ಕೈಕೊಂಡು ಬಂದೆನ್.
ಏಕಲವ್ಯ — ಆ ಹೊಣೆ ಅದೇನಿರ್ಪೊಡಂ ನಿನ್ನದಾರ್ಯ.
ನೀನೀವ ಪೊರಿಯಂ ಪೊರುವುದೆನಗೆ ಕಾರ್ಯ!
ದ್ರೋಣ — ನೀನಂದು ಆ ಪಾಂಡುಪುತ್ರಂಗೆ
ಶಬ್ದವೇಧೀ ವಿದ್ಯೆಯಂ ಮೆರೆದು
ಸಿಲ್ಕಿಸಿದೆ ನನ್ನನೀ ಧರ್ಮಸಂಕಟಕೆ.
ಏಕಲವ್ಯ — ಕರುಬಿದನೆ ನಿನಗೆ ಆ ಕ್ಷತ್ರಿಯೋತ್ತಮನ್?
ದ್ರೋಣ — ನಾನವಂಗೊಂದು ಸಮಯದೊಳಿತ್ತ ವಚನಂ
ಭಂಗವಡೆದತ್ತು ನಿನ್ನತ್ತಣಿಂ!
ಏಕಲವ್ಯ — (ಬೆಚ್ಚಿ) ನಾನರಿಯೆನಂತಪ್ಪ ಪಾಪಮಂ.
ದ್ರೋಣ — ನೀನರಿಯೆಯಾದೊಡಂ ನನಗಾಯ್ತು ವಚನಭಂಗಂ.
ಏಕಲವ್ಯ — ವಚನವೇನ್? ಭಂಗಮೇನ್? ಬೆಸಸು ಪರಿಹಾರಮನ್,
ಪರಿಹಾರಮಿರ್ಪೊಡೆ; ಅದಿಲ್ಲದಿರೆ ಪ್ರಾಯಶ್ಚಿತ್ತಮನ್!
ದ್ರೋಣ — ಲೋಕತ್ರಯಂಗಳೊಳ್ ನಿನಗೆ ಸಮನಿಲ್ಲದೊಲ್
ನಿನಗಾಂ ಧನುರ್ವಿದ್ಯೆಯಂ ಕಲಿಪೆನೆಂಬುದು
ಅರ್ಜುನಂಗಾನಿತ್ತ ವಚನಂ.
ನಾನೆ ಗುರುವೆಂದೆನಗೆ ಶಿಷ್ಯತ್ವಮಂ ನೀನೊಪ್ಪಿ,
ಅರ್ಜುನಂ ಕರುಬುವೊಲ್ ಬಿಲ್ಬಿಜ್ಜೆಯಂ ಮೆರೆದ
ನಿನ್ನಿಂದೆ ಸಂಭವಿಸಿದತ್ತಾ ವಚನಭಂಗಂ.
ನಾನಿತ್ತ ವಚನಕ್ಕೆ ಭಂಗಮೈತರದಂತೆ, ಮೇಣ್
ಅರ್ಜುನನ ಅದ್ವೀತೀಯತೆ ಲೋಕತ್ರಯಕೆ ನಿಲ್ವಂತೆ
ನೀನಿನಿತು ಶಕ್ತಿಯಂ ತ್ಯಾಗಮಾಳ್ಪುದೆ ಅದಕ್ಕೆ
ತಗುವ ಪರಿಹಾರಮ್. ಗುರದಕ್ಷಿಣೆಯೆ ಗೆತ್ತದಂ
ನಾಂ ಕೇಳ್ವುದಂ ಕುಡುವುದೆಯೆ ಪ್ರಾಯಶ್ಚಿತ್ತಮ್! —
ಬಾಯಿ ತೆರೆದಾಡುವೀ ಕ್ಲೇಶಮಂ ತಪ್ಪಿಸಲ್
ಪರಿಕಿಸುವ ನೆವದಿಂದೆ ನಾಂ ಬೆಸಸಿದೆನ್ ನಿನಗೆ,
ಇಸಲ್ಕಾ ವಿಯದ್ವಿಹಾರಿಯಂ ಪಕ್ಷಿಯಂ!
ನೀನೆಲ್ಲಿಯಾದೊಡಂ ಒಪ್ಪಿ, ಎಳ್ಚರ್ ಮರೆದು,
ಬಿಜ್ಜೆಯಂ ಮೆರೆವ ಪೆರ್ಮಗೆ ಧರ್ಮಮಂ ತೊರೆದು
ತಪ್ಪಿ ನಡೆದಿರ್ದೆಯಾದೊಡೆ ಸುಲಭದಿಂದೆನಗೆ
ಲಭಿಸುತಿರ್ದತ್ತು ನನ್ನಾಶೆ. ಆ ಕೈತವಕೆ
ಪೊರಗುಳಿದು ನೀನೆನ್ನನುಂ ಕಿತವೆತ್ವದಿಂ
ಪಾರುಗಾಣಿಸಿ ಪೊರೆದೆ.
ಏಕಲವ್ಯ — ಮುಂತೆನಗೆ ಬಟ್ಟೆಯೇನ್?
ಬೆಸಸು, ಆಚಾರ್ಯ, ಇತ್ತ ಗುರುವಿಂಗೀವುದೇನ್
ತ್ಯಾಗಮೆ? ಪರಮ ಸಂಪದಮದುವೆ ಪುರುಷಾರ್ಥ
ಸಾಧನಂ! ನಿನ್ನಿಂದೆ ಕಲ್ತೆನಧ್ಯಾತ್ಮಮಂ.
ಪಡೆವುದೆಲ್ಲಂ ಕೊಡುವುದಕ್ಕಲ್ತೆ, ಆರ್ಯ? ಮೇಣ್,
ಪೂರ್ಣಮಂ ಕೊಡದೆ ಪಡೆದಪೆವೆಂತು ಪೂರ್ಣಮಂ?
ಬೇಳ್ವಯೇನ್ ವೇಳ್ಕುಮಾ ದಕ್ಷಿಣೆಯನೊರೆ, ತೊರೆದು
ದಾಕ್ಷಿಣ್ಯಮಂ.
ದ್ರೋಣ — ನಾಣ್ಚುತಿಹುದಾಡಲಾ ಅಲ್ಪಮಮ್
ಈ ಜಿಹ್ವೆ.
ಏಕಲವ್ಯ — ನನ್ನ ಗುರುವಿನ ಜಿಹ್ವೆಯಾಡಿದುದೆ
ಗುರುವಕ್ಕುಂ; ಆಗದಲ್ಪಂ ಅದೆಂದಿಗುಂ.
ದ್ರೋಣ — ಅದು ದಿಟೆಮೆ. ಅಲ್ಪಮಲ್ತಾನ್ ಕೇಳ್ವ ದಕ್ಷಿಣೆ.
ಏಕಲವ್ಯ — ಏಕಲವ್ಯನ ಕೊಡುವ ಕಾಣ್ಕೆಗಲ್ಪತ್ವಮೊದಗದಿರ್ಕೆ.
ದ್ರೋಣ — ನಾನ್ ಕೇಳ್ವ ದಕ್ಷಿಣೆ ಮಿಗಿಲ್ ನಿನಗೆ ಹರಣಕಿಂ.
ಏಕಲವ್ಯ — ಧರ್ಮಮೊ? ಸತ್ಯಮೊ? ಪೌರುಷಮೊ?
ಪ್ರಾಣಕಿಂ ಮಿಗಿಲಾವುದಿನ್!
ದ್ರೋಣ — (ತುಸು ತಡೆದು) ಬೆರಳ್! ಪೆರ್ಬೆರಳ್!
ಏಕಲವ್ಯ — (ಚಕಿತನಾಗಿ) ಆಂ?
ದ್ರೋಣ — (ಒತ್ತಿ ಹೇಳುತ್ತಾನೆ) ದಕ್ಷಿಣೆಗೆ ದಕ್ಷಿಣೆದ ಪೆರ್ ಬೆರಳ್ !
ನಿನ್ನ ಬಿಲ್ ಬಿಜ್ಜೆಗುಸಿರಪ್ಪ ಆ ಪೆರ್ ಬೆರಳ್!
ಬಾಣಮಂ ಪಿಡಿದು ಸಿಂಜಿನಿಗುಯ್ವ ಪೆರ್ ಬೆರಳ್! —
ಕೆಮ್ಮನಿರ್ದಪೆ ಏಕೆ? ದುಮ್ಮಾನಮೋ, ವತ್ಸ?
ಏಕಲವ್ಯ — (ತಲೆಯಲ್ಲಾಡಿ) ದುಮ್ಮಾನಮಲ್ತು, ಆಚಾರ್ಯ,
ಪೋದಿರಳ್ ಕಂಡ ಕನಸೊಂದಂ ನೆನೆಯುತಿರ್ದೆ.
ಕೇಳ್, ಆರ್ಯ: ಸರ್ವಮಂ ನಿನಗಾಂ ಸಮರ್ಪಿಸಲ್
ಮನದಂದೆನೀ ಬೆರಳ್ ಅದೇನ್ ಪಿರಿದಲ್ತು,
ಪೆರ್ ಬೆರಳ್ ತಾನಾದೊಡಂ! — (ನಸುನಗುತ್ತಾನೆ)
ಅರ್ಜುನಂ
ತೃಪ್ತನಪ್ಪನೆ, ಆರ್ಯ, ನನ್ನ ಬೆರಳೊಂದರಿಂ? —
ಪೋದಿರಳ್ ಕಂಡೆ ಕನಸಿನೊಳೆರ್ವ ನೀಲಾಗನಂ.
ಹೆಡೆಯೆತ್ತಿದೆರಡು ಸರ್ಪಗಳವನ ತೋಳುಗಳ್!
ಕೇಳ್ದನಾತನ್ ತನಗೆ ಕೊರಳೆ ಬಲಿವೇಳ್ಕೆಂದು.
ಕೊಳ್ವೆಂದೆ ನಾನ್! ಕೊರಳನೆಯೆ ಬಲಿಯಿತ್ತವನ್
ಬೆರಳೊಂದನೀಯಲಂಜುವನೆ? ತೃಣಕೆಣೆಯಲ್ತೆ?
ದ್ರೋಣ — ಕೊಟ್ಟ ಮಾತದು ಸಲ್ವುದೆನ್ನಾಸೆ;
ಒಲಿದ ನಿನ್ನಂ ಕೊರಳ್ ಕುಯ್ವುದಲ್ತು! — (ಚಿಂತಿಸಿ)
ಜೀವಿಗಳ ಕರ್ಮ ಜಟಿಲತೆ, ಏಕಲವ್ಯ, ಈ
ಕುಟಿಲ ಕಾರ್ಯಂಗಳಿಗೆ ನಮ್ಮನ್ ನಿಯೋಜಿಪುದು
ದೇವನಿಚ್ಛೆಯ ದಿವ್ಯಲೀಲಾ ಪ್ರಯೋಜನಕೆ. —
ಪೋದಿರಳ್ ನೀನ್ ಕಂಡುದೇನ್ ಆ ಕನಸು? ಪೇಳ್.
ಏಕಲವ್ಯ — ನಿದ್ದೆಯೊಳಲೆಯತಿರ್ದೆ ಕನಸಿನೊರ್ ಕಾಡಿನೊಳ್.
ಕೇಳ್ದುದೊಂದೇಣನ ಕೊರಲ್. ಓಡಿದೆನ್, ಕಂಡೆನ್,
ಆಕ್ರಮಿಸಲಿರ್ದ ಪುಲಿಯಂ. ಕಿಳ್ತ ಕತ್ತಿಯಂ
ಪಿಡಿದು ಮೇಲ್ವಾಯ್ದೆನ್. ಬಣ್ಣದ ಬುಗ್ಗೆ ನೆಗೆವೋಲ್
ಕುಪ್ಪಳಿಸಿ ಬಂದಪ್ಪಿತಾ ಬಗ್ಗನೆನ್ನಂ. ಪೊಡೆಗೆ
ಗುರಿಯಿಟ್ಟಿರಿದೆನದರ ನೆತ್ತರ್ ಬುಗ್ಗೆಚಿಮ್ಮುವೋಲ್.
ಒಡನೆ, ಪುಲಿ ಮರೆಯಾದುದದರ ಮೇಯ್ಯಿಂ ಮೂಡಿ
ನಿಂದನೊರ್ವನ್ ನೀಲದೇಹಿ. ಕುಣಿದುದು ನವಿಲ್
ತಲೆಯ ಮೇಲೆ. ಹೆಡೆಯೆತ್ತಿದುರಗಗಳ್ ತೋಳ್ಗಳೊಲ್
ತೂಗಿದುವು, ಭುಜದೇಶದಿಂ ಪೊಣ್ಮಿ. ಕಂಡೊಡನೆ
ವೈರಂ ಮಾಣ್ದುದೆನಗೆ; ಸಂಚರಿಸಿತಾತ್ಮದೊಳ್
ಪೂಜ್ಯಭಾವಂ. ನಲಿದು ಕೈಮುಗಿದು ಕೇಳಿದೆನ್:
“ನೀನಾರ್, ಮಹಾತ್ಮಾ?” “ನಾ ನಿನ್ನ ಪರಮಾತ್ಮ!”
ಎಂದು ನಕ್ಕನ್, “ನಿನ್ನ ಕೊರಳನಪ್ಪಲ್ಕೆಂದು
ಮೈದೋರ್ದೆನೀ ಫಣಿಗಳೆನ್ನ ತೋಳ್!” ಹೆದರಿಕೆಗೆ
ಬದಲೆನಗೆ ಮೋಹಮುಕ್ಕಿದುದವನ ಮೇಲೆ. “ಕೊಳ್,
ಕೊಳ್ ಎನ್ನ ಸರ್ವಸ್ವವಂ!” ಎನುತೆ ಅವನೆರ್ದೆಗೆ
ನುರ್ಗ್ಗಿದೆನ್. ಬಿಗಿದಪ್ಪಿ ಸುತ್ತಿದುವು ನನ್ನ ಕೊರಳಂ
ಆ ಸರ್ಪಬಾಹುದ್ವಯಂ. ಹರ್ಷ ಪುಲಕಿತನ್,
ಆನಂದ ಚಕಿತನೆನ್, ಮೈತಿಳಿದನಾ ಸ್ವಪ್ನದಿಂ!
ದ್ರೋಣ — (ನಿಡುಸುಯ್ದು)
ನಿನ್ನ ಕನಸಂ ಕೇಲ್ದೆನಗೆ ನವಿರ್ ನಿಮಿರುತಿದೆ!
ದೇವಕಾರ್ಯಕ್ಕೆ ನೀನ್ ಅರ್ಪಿತಾತ್ಮನ್, ವತ್ಸ.
ಭಗವದರ್ಪಿತಮಾಗೆ, ಸಾವುದುಂ ಬರ್ದುಕುವೊಲ್
ಶ್ರೇಯಸ್ಕರಂ.
ಏಕಲವ್ಯ — (ಧ್ಯಾನದಿಂದೆಚ್ಚತ್ತವನಂತೆ)
ಕಲಿಕರದ ಕಾರ್ಮುಕದ ಹೆದೆಯೇರಿ
ಸಮರದೋಳ್ ಕಾದುವಾ ಕರ್ಮಮಯ ಕೈದುವೊಲೆ,
ಬತ್ತಳಿಗೆಯಂ ಸೇರಿ, ಬೇನ್ನೇರಿ, ತಾಳ್ಮೆಯಿಂ
ತನ್ನ ಸೂಳಂ ಕಾಯ್ವ ಕೈದುವ ಅಕರ್ಮಮುಂ
ಸಾರ್ಥಕಂ, ಮೇಣ್, ಕೃತಕೃತ್ಯಮಕ್ಕುಂ.
ಮೊದಲೆ ಹೆದೆಯೇರುವೊಂದು ತವಕಮಾ ಅರ್ಜುನಗೆ!
ಕಲಿಯ ಕಯ್ ತುಡುಕಿದಂದೇರ್ವೆನಾನ್ ಸಿಂಜಿನಿಗೆ.
ಕಾಯ್ವುದುಂ ಕರ್ಮಮೆಯೆ, ಭಗವನ್ನಿಷಂಗಮಂ
ಸೇರ್ದಬಳಿಕಂ! ಬತ್ತಳಿಕೆಯಂ ಸೇರಿ, ಶಿವನ
ಬನ್ನೇರ್ವುದಲ್ತೆ ಮುಖ್ಯಂ! ಬಾ, ಗುರುವೆ;
ಕೊಳ್ ದಕ್ಷಿಣೆಯನ್ ಇದನ್! ಗೆಲ್ಗೆ ಧರ್ಮಂ!
ಗೆಲ್ಗೆ ದೈವೇಚ್ಛೆ! ನಿಮ್ಮ ವಚನಂ ನಿಲ್ಗೆ!
ಮೇಣ್ ಅರ್ಜುನನ ಪೆರ್ ಬಯಕೆಯುಂ ಸಲ್ಗೆ!
(ಬತ್ತಳಿಕೆಯಲ್ಲಿದ್ದ ಒಂದು ಅಗಲಬಾಯಿಯ ಬಾಣವನ್ನು ಸಾವಧಾನವಾಗಿ ಕಿತ್ತು ತೆಗೆದು, ಶಾಂತಗಮನದಿಂದ ದ್ರೋಣನ ಪ್ರತೀಕದ ಬಳಿಗೆ ಸಾರ್ದು ಮೊಳಕಾಲೂರಿ)
ಕೊಳ್, ಗುರುದೇವ, ನಿನಗೆ ದಕ್ಷಿಣೆ,
ದಕ್ಷಿಣದ ಪೆರ್ ಬೆರಳಿಂದಂ!
ಪರಕೆಗೆಯ್, ಪೊರೆ ನಿನ್ನ ಕಂದನಂ!
(ಬಲಗೈಯ ಹೆಬ್ಬೆರಳನ್ನು ಹಾಸುಬಂಡೆಯ ಮೇಲಿಟ್ಟು, ಎಡಗೈಯ ಬಾಣದಿಂದ ಅದನ್ನು ಕತ್ತರಿಸುತ್ತಾನೆ. ನಿತ್ತರು ಚಿಮ್ಮಿ ಮಡು ನಿಲ್ಲುತ್ತದೆ. ಆ ಮಡುವಿನ ನಡುವೆ ತುಂಡಾದ ಹೆಬ್ಬೆರಳನ್ನು ಬಿಟ್ಟು ಮೇಲೇಳುತ್ತಾನೆ. ಕೆನ್ನೀರು ಸೊರುವ ಗಾಯವನ್ನು ಎಡಗೈಯಿಂದ ಮುಚ್ಚಿ ಮರೆಹಿಡಿದು, ವಿಷಣ್ಣನಾಗಿ ಕುಳಿತಿದ್ದ ದ್ರೋಣನ ಕಡೆ ತಿರುಗಿ)
ಮರ್ದ್ದಿಕ್ಕಿ ಬೇಗದಿಂ ಬಂದಪೆನ್, ಆಚಾರ್ಯ.
(ಎಂದು ನಿಷ್ಕ್ರಮಿಸುತ್ತಾನೆ. ಅವನು ಹೋದತ್ತ ಕಡೆಗೆ ಕಣ್ಣೀರು ತುಂಬಿ ಎವೆಯಿಕ್ಕದೆ ನೋಡುತ್ತಿದ್ದು, ಅವನು ಕಣ್ಮರೆಯಾದ ಮೇಲೆ ದ್ರೋಣನು ಪ್ರಯಾಸಪೂರ್ವಕವಾಗಿ ಎದ್ದು ನಿಲ್ಲುತ್ತಾನೆ. ದ್ರೋಣಪ್ರತೀಕದ ಬಳಿಗೆ ಮೆಲ್ಲಗೆ ನಡೆದುಬಂದು ಮಡು ನಿಂತ ನೆತ್ತರನ್ನೂ ಅದರ ನಡುವಿದ್ದ ಬೆರಳ ತುಂಡನ್ನೂ, ಮುಖದಲ್ಲಿ ಸಂಕಟವುಕ್ಕಿ ತೋರುವಂತೆ ನೋಡುತ್ತಾ ನಿಲ್ಲುತ್ತಾನೆ.)
ದ್ರೋಣ — ಕ್ಷತ್ರಿಯ ಕುಮಾರ, ನಿನ್ನಸೂಯಾಗ್ನಿ ತಣಿಯಲಿದೊ
ಬಿಯದ ಬಾಲಕನೀ ಬೆರಳ ಬೇಳ್ವೆ!
(ಎಂದು ಅದನ್ನು ತೆಗೆಯುವಂತೆ ಕುಳಿತು ಬಾಗುತ್ತಾನೆ. ಬಾಗಿ, ಹಾಗೆಯೇ ಮರವಟ್ಟು, ಬೆಚ್ಚಿ ಕೂಗುತ್ತಾನೆ.)
ಅಯ್ಯೊ, ಏಕಲವ್ಯ!
(ಕೂಗಿ ಹಿಂದಕ್ಕೆ ಕುಳಿತು ತನ್ನ ಕೈಮೇಲೊರಗುತ್ತಾನೆ)
ಏಕಲವ್ಯ — (ಕೈಗೆ ಮದ್ದು ಕಟ್ಟಿಕೊಂಡು, ಬೆರಗಾಗಿ ಓಡಿಬರುತ್ತಾನೆ.)
ಏನಾಯ್ತು? ಏನಾಯ್ತು, ಆಚಾರ್ಯ?
ಏಕಿಂತು ಕುಳಿತಿಹಿರಿ, ಮರವಟ್ಟನೋಲ್?
(ದ್ರೋಣನ ಬಳಿ ತುದಿಗಾಲಿನ ಮೇಲೆ ಕೂರುತ್ತಾನೆ.)
ದ್ರೋಣ — (ಆಯಾಸಗೊಂಡವನಂತೆ ತಲೆಯೆತ್ತಿ ಶಿಷ್ಯನನ್ನು ನೋಡುತ್ತಾ ಕಷ್ಟದಿಂದ ವಿರಳಾಕ್ಷರವಾಗಿ ಮಾತಾಡುತ್ತಾನೆ.)
ಬೆರಳ್ ಗೆ ಕೊರಳ್!
ವತ್ಸಾ, ನಿನ್ನ ಬೆರಳ್ಗೆ ನನ್ನ ಕೊರಳ್!
ಏಕಲವ್ಯ — ಏನಾಯ್ತು? ಏನಾಯ್ತು, ಆಚಾರ್ಯ?
ದ್ರೋಣ — (ಸ್ವಲ್ಪ ಸ್ಥಿರನಾಗಿ, ಎದ್ದು ನಿಂತು, ತನ್ನೊಡನೆ ಎದ್ದುನಿಂತ ಏಕಲವ್ಯನ ಹೆಗಲಮೇಲೆ ಕೈಯೂರಿ, ಮಡುನಿಂತ ನೆತ್ತರನ್ನು ತೋರಿಸುತ್ತಾ)
ವತ್ಸ, ಅದರೊಳೇನ್ ಕಾಣಿಪುದು? ಕಂಡು ಪೇಳ್.
ಏಕಲವ್ಯ — ಮತ್ತೇನ್ ಕಾಣಿಪುದು, ಆಚಾರ್ಯ?
ನೆತ್ತರ ಮೇಣ್ ಬೆರಳ್!
ದ್ರೋಣ — ಕಣ್ಣಿಟ್ಟು ಕಾಣ್.
ಏಕಲವ್ಯ — (ಈಕ್ಷಿಸಿ) ಕಾಣುತಿಹುದಂಬರಪ್ರತಿಬಿಂಬಂ, ಮೇಣ್
ತೇಲುತಿಹ ಬೆಳ್ಮುಗಿಲ ಮರುನೆಳಲ್.
ದ್ರೋಣ — ನಾನ್ ಕಂಡೆನನ್ಯಮಂ, ವತ್ಸ,
ಬೀಭತ್ಸ ದೃಶ್ಯಮಂ!
ನೀನ್ ಪೋಗಲೆಳ್ದು ಬಂದಾ ನೆತ್ತರೆಡೆ ಕುಳ್ತೆನ್.
ತುಂಡುವೆರಳಂ ತೆಗೆಯಲೆಂದಿನಿತು ಬಾಗಿದೆನ್.
ಕಂಡುದಾ ಕೆನ್ನೀರ ಕನ್ನಡಿಯೊಳೆನ್ನ ಪಡಿನೆಳಲ್.
ಆ ನನ್ನ ಮುಖವಿಕೃತಿಯಂ
ಪ್ರತಿಬಿಂಬದೊಳ್ ಕಂಡು ಬೆರಗಾಗಿರಲ್,
ಖಡ್ಗಮುಷ್ಟಿಯ ಭೀಮ ಹಸ್ತಮೊಂದೊಯ್ಕನೆರಗಿ
ಕಳ್ತರಿಸಿತಾ ನನ್ನ ಪಡಿನೆಳಲ ಕೊರಳಂ!
ಕೆಡೆದುರಳ್ದುದು ಮಂಡೆ!
ಕಂಡೆನ್
ರುಂಡವಿಲ್ಲದಾ ಮುಂಡಮಂ!
ಕಂಡು ನಿನ್ನನ್ ಕೂಗಿಕೊಂಡೆನ್!
ಮುಂದೇನ್ ಕಾದಿಹುದೊ ನನಗೆ?
ಬಿದಿಯರಿಗುಂ, ನಿನ್ನೀ ಬೆರಳ್ಗೆ
ಕೊಳ್ವುದೆಂದೇ ತೋರ್ಪುದಾ ಬಿದಿ
ನನ್ನ ಕೊರಳಂ!
ಏಕಲವ್ಯ — ನನ್ನ ಕನಸಂ ಕೇಳ್ದು ನೆನೆಯತಿರ್ದಾ ನಿಮಗೆ
ಇದು ಬರಿಯ ಕಣ್ಭ್ರಾಂತಿ, ಆಚಾರ್ಯ.
ಅದರ್ಕಿನಿತೇಕೆ ಪೇರುಬ್ಬೆಗಂ?
ದ್ರೋಣ — ಭ್ರಾಂತಿ ಕಣ್ಗಾದೊಡಂ, ಕಣ್ಣಲ್ತು ಭ್ರಾಂತಿಮೂಲಂ.
ನಿನ್ನ ಕೆನ್ನೀರ್ ಅಂಜನಮಿಕ್ಕಿದತ್ತಾ ಪಾಸರೆಗೆ:
ಮುಂದಪ್ಪುದಂ ಮುನ್ ಪೊಳೆದು ತೋರ್ದುದಾ ಕಲ್!
ಕಲ್ಲಾದೊಡೇನ್? ತಾನುಂ ವಿಶ್ವಚಿದ್ವಿನ್ಯಾಸಮಲ್ತೆ?
ಸರ್ವವಿತ್ ಆ ವಿಶ್ವಚಿತ್:
ಸೂಚಿಸಿತ್ತೆನೆಗೆ ತನ್ನೊಳಿರ್ಪ್ಪನಿವಾರ್ಯಮಂ!
ಅಂತೆ ಕರ್ಮದ ಪಾಂಗು: ಮರಿಗೆ ಮರಿ: ಮರಿಗೆ ಮರಿ:
ಬೆರಳ್ ಗೆ ಕೊರಳ್! (ಕೊಂಬು ಕೇಳಿಸುತ್ತದೆ)
ಏಕಲವ್ಯ — (ದೂರ ನೋಡುತ್ತ) ಬೈಗಾಯ್ತು, ಆಚಾರ್ಯ.
ಅಲೆ ಅಲೆ ಅಲೆವ ಮಲೆಗಾಡುಗಳ ಮೇಲೆ
ಬಾನ್ಕರೆಯೊಳಿಳಿಯಂತಿರ್ಪನ್ ಅದೊ ದಿನೇಶ್ವರನ್.
ಅಃ ಕೆನ್ನೀರಿನೋಕುಳಿಯೆ ಚೆಲ್ಲಿದೋಲಿರ್ಕುಮಾ
ಬೈಗುಕಾಂತಿ! ತುಂಬುತಿದೆ ನಿಶ್ಯಬ್ದತಾ ಶಾಂತಿ
ಅಸ್ತಮಯ ಸಮಯದ ಸಮಸ್ತ ಗಿರಿಮಸ್ತಕದ
ವಿಪಿನ ಪ್ರದೇಶಮಂ! — ನೀಂ ನಡೆಯಿಮಲ್ಲಿ
ಕಾದಿರ್ಪ ದಂಡಿಗೆಗೆ, ಅಬ್ಬೆ ಬರ್ಪಾ ಪೊಳ್ತು
ಈ ನೆತ್ತರವಳ ದಿಟ್ಟಿಗೆ ಬೀಳದೊಲ್ ತೊಳೆದು ಬಪ್ಪೆನ್.
(ತುಂಡಾಗಿ ಬಿದ್ದಿದ್ದ ಬೆರಳಿನ ಕಡೆಗೆ ದ್ರೋಣನು ನೋಡುತ್ತಾನೆ)
ತಂದೀವೆನದನುಂ, ಸವ್ಯಸಾಚಿಗೆ ಸಾಕ್ಷಿಯಂ!
ದ್ರೋಣ — ಬೇಡ, ವತ್ಸ, ಬೇಡ.
ಅನಿತ್ತು ಕಿಳ್ದೆಸೆಗೆ ಬಿಳ್ದಿಲ್ಲಮಿನ್ನುಮಾತನ್!
(ಏದುತ್ತಾ ಹೇಳುತ್ತಾನೆ)
ನಿನ್ನಬ್ಬೆ ನೋಡದಿರ್ಕಾ ಬೆರಳ ತುಂಡಂ, ವತ್ಸ:
ನನಗೊದಗದಿರೈ ಶೋಕಸಂತಪ್ತ ಮಾತೃಶಾಪಂ!
ಏಕಲವ್ಯ — ಅದನೆತ್ತಿ ಪಳು ಪೆಣೆದ ಕಿಬ್ಬಿಗೆಸೆವೆನ್,
ಪುಳುಗೌತಣಂ!
ನಡೆ ನೀನಾರ್ಯ, ಬೆನ್ನೊಳೆಯೆ ಬಂದುಪೆನ್,
ಕಜ್ಜಮಂ ಪೂರೈಸಿ ಬೇಗದಿಂ ಬಂದಪೆನ್.
(ದ್ರೋಣನು ಹೊರಡುತ್ತಾನೆ. ಏಕಲವ್ಯನು ದೃಶ್ಯದ ಅಂಚಿನವರೆಗೂ ಅವನನ್ನು ಕಳುಹಿ ಹಿಂತಿರುಗುತ್ತಾನೆ. ಬೆರಳ ನೋವಿಗೆ ಅವನ ಮುಖ ಸ್ವಲ್ಪ ಮುದುರುತ್ತದೆ.)
ಮನಮಳ್ಕಲೆಲ್ಲಾದೊಡಂ ಮೆಯ್ಯಳ್ಕುತಿರ್ಪುದೀ
ಪಸಿಗಾಯದುರಿಗೆ. ಮೆಯ್ ನೊಂದೊಡಂ
ಆತ್ಮವಾವುದೊ ತೃಪ್ತಿಯಂ ಸವಿದು ಸುಖಿಸುತಿದೆ:
ಗುರು ಅಪೇಕ್ಷಿಸಿದ ದಕ್ಷಿಣೆಯನಿತ್ತು
ತಣಿಯಿಸಿದೆನೆಂಬದೊ?
ದರ್ಮ ಸಂಕಟಕೆ ಸಿಲ್ಕಿರ್ದನಂ
ತಪ್ಪಿಸಿದನೆಂಬೊಂದು ತ್ಯಾಗಸಾಹಸ ಗೆಯ್ದು
ವೀರ ಸುಖಮೊ?
ದಿವ್ಯಲೀಲಾರ್ಥಮೆನ್ನನಾನ್
ಯಜ್ಞಗೆಯ್ಯಲ್ಕೆ ಮನಂದಂದೆನೆಂಬಾ
ಸಮರ್ಪಣಕೆ ಸಂಭವಿಸಿದೊಂದು ಭಗವದಾನಂದಮೊ?
ಆತ್ಮವಾವುದೊ ತೃಪ್ತಿಯಂ ಸವಿದು ಸುಖಿಸುತಿದೆ?
(ಸೂರ್ಯಾಸ್ತವನ್ನು ಅನಿಮೇಷನಾಗಿ ದೃಷ್ಟಿಸುತ್ತಾ)
ಅಃ ಈ ಅಸ್ತಮೇನ್ ಸುಂದರಂ!
ದಿಗ್ವನಿತೆ ಬೊಟ್ಟಿಟ್ಟವೊಲ್
ದಿಕ್ತಟದ ರೇಖೆಯಂ ಮೆಟ್ಟಿನಿಂದು
ರಂಜಿಸುತ್ತಿರ್ಪುದೀ ಬೈಗು ನೇಸರ್!
(ಮೈಮರೆತು ನೋಡುತ್ತಾ ನಿಲ್ಲುತ್ತಾನೆ. ಏಕಲವ್ಯನ ತಾಯಿ ಬೆಂಗಡೆಯಿಂದ ಪ್ರವೇಶಿಸುತ್ತಾಳೆ. ಮಗನು ಗಮನಿಸದೆ ನಿಂತುದನ್ನು ನೋಡಿ!)
ಅಬ್ಬೆ — ಇದೇನ್, ಬಚ್ಚ ನೀನೊರ್ವನಿರ್ಪಯ್!
ಬಿಲ್ಲೊಜನೆಲ್ಲಿದನ್?
(ಏಕಲವ್ಯ ತೆಕ್ಕನೆ ಎಚ್ಚತ್ತವನಂತೆ ತಿರುಗಿನೋಡಿ ಬೆಚ್ಚುತ್ತಾನೆ. ತನ್ನ ಬಲಗೈಯನ್ನು ಪಕ್ಕನೆ ಮುಚ್ಚಿಕೊಂಡು ತಾಯಿಯ ಕಡೆಗೊಮ್ಮೆ ನೆತ್ತರು ಮಡುನಿಂತ ಕಡೆಗೊಮ್ಮೆ ಬೆದರ್ ದಿಟ್ಟಿಯಟ್ಟುತ್ತಾನೆ.)
ಏಕಲವ್ಯ — (ತನ್ನಲ್ಲಿಯೆ)
ಅಯ್ಯೊ, ಬಂದೆ ಬಿಟ್ಟಳೆ, ಅಬ್ಬೆ! ಏನ್ ಗತಿ?
ಏನಾನುಮೊಂದನ್ ಹರವನೊಡ್ಡಿ
ಅವಳ್ ನೆತ್ತರ್ ನಿಂದುದನ್ ಕಾಣಪಮುನ್ನಮೆ
ಉಪಾಯದಿಂ ಪಿತಿರುಗಿಸಲ್ ವೇಳ್ಕುಂ. (ತಾಯಿಗೆ)
ಅಬ್ಬೆ, ನೀನೆತಕಿಲ್ಲಿಗೈತಂದೆ,
ಈ ಬೈಗು ಮರ್ಬಿನೊಳ್?
(ತಾಯಿಗೆ ನೆತ್ತರ್ ಮಡು ಕಾಣಿಸದಂತೆ ಮೆಲ್ಲಗೆ ಅಡ್ಡಬಂದು ನಿಲ್ಲುತ್ತಾನೆ)
ಅಬ್ಬೆ — ಬಯಗುವೊಳ್ತಿಗೆ ಮತ್ತೆ
ಕರೆತರ್ಪೆನೆಂದೆ ನೀನ್ ಬಿಲ್ಲೋಜನನ್?
ಪಣ್ಣುಣಿಸನಣಿಮಾಡಿ ಕಾದು ಸೋತೆನ್.
ಕಪ್ಪಾಗುವಾ ಮುನ್ನ ಕರೆದುಯ್ಯಲೈತಂದೆನ್.
ಏಕಲವ್ಯ — ಪೊಳ್ತಿಳಿವ ಮೊದಲೆ ತಾನಿಳಿವುದೊಳಿತೆಂದು
ಮಲೆಯ ಬುಡದಾ ಬೀಡಿಗಾಗಳೆಯೆ
ಬೀಳ್ಕೊಂಡನೋಜನ್.
ಅಬ್ಬೆ — ಮರೆತೆಯೇನ್ ಮರ್ಯಾದೆಯನ್
ಒಡವೋಗಿ ಕಳುಹಿ ಬರ್ಪುದನ್?
ಏಕಲವ್ಯ — (ಅವಸರವಾಗಿ) ಈಗಳೆಯೆ ಪೋದಪೆನ್.
ಬೆನ್ನೊಳೆಯೆ ಬರ್ಪೆನೆಂದಾಡಿದೆನ್.
(ತೆಕ್ಕನೆ ತಿರುಗಿ ನೋಡಿ ಮತ್ತೆ ಬೆದರುಗಣ್ಣಾಗುತ್ತಾನೆ.)
ಅಬ್ಬೆ — ಇದೇನ್, ಬಚ್ಚ? ತೊದಲು ನುಡಿ! ಬೆದರುಗಣ್ಣಾಗುತ್ತಾನೆ.)
(ಅವನುಡೆಯ ಮೇಲಿದ್ದ ರಕ್ತದ ಕಲೆಯನ್ನು ನೋಡುತ್ತಾಳೆ.)
ಏಕಲವ್ಯ — (ಉದಾಸೀನ ಧ್ವನಿಯನ್ನು ನಟಿಸುತ್ತಾ)
ಏನಿಲ್ಲ, ಅಬ್ಬೆ, ನೀನ್ ಬೀಡಿಂಗೆ ನಡೆ. ನಾನ್
ಓಜನನ್ ಬೀಳ್ಕೊಂಡು ಬೇಗಮೈತಂದೆಪೆನ್.
ಅಬ್ಬೆ — (ಕೈದೋರಿ) ಇದೇನ್, ಬಚ್ಚ, ಈ ನೆತ್ತರ್ ಮಚ್ಚೆ?
ಏಕಲವ್ಯ — ಓಜನ್ ಪರಿಕಿಸನೆನ್ನ ಬಿಲ್ಬಿಜ್ಜೆಯನ್:
ಸನಿಹದೊಳ್ ಎಚ್ಚೆನ್ ಒರ್ ಪಂದಿಯನ್.
ಅದರ ನೆತ್ತರ್, ಅಬ್ಬೆ, ಮತ್ತೇನುಮಲ್ತು!
ಅಬ್ಬೆ — (ಆ ಕಡೆ ತೋರಿ) ಅದೆನಯ್ ಆ ಕೆನ್ನೀರ್!
ಏಕಲವ್ಯ — (ನಗುವನ್ನು ನಟಿಸುತ್ತಾ)
ನಿನ್ನ ಮಗನೊಸಗೆಯೋಕಳಿ!
(ಅಲ್ಲಿಗೆ ಹೋಗಲೆಳಸಿದವಳನ್ನು ತಡೆದು)
ಬಿನದಕಾಡಿದೆನಬ್ಬೆ, ನಿನಗೇಂ ಮರುಳೆ?
ಪೂಜೆಗೆಂದರೆದ ತೀರ್ಥೋದಕಂ
ಪಾಸರೆಯ ನಿಮ್ನದೊಳ್ ಮಡುಗಟ್ಟಿ ನಿಂದು
ಮಾರ್ಪೊಳೆಯುತಿರ್ಪುದಾ ಬೈಗುಗೆಂಪಂ.
ಆಃ ದಿಟಮಬ್ಬೆ, ಕೆನ್ನೀರವೊಲೆ ಮಿರುಗುತಿದೆ!
ಮುದಗಣ್ಗಳಿರೈ ಎಂತಪ್ಪರುಂ ಭ್ರಾಂತರಪ್ಪರ್!
(ಅಬ್ಬೆ ಏಕಲವ್ಯನನ್ನು ಒತ್ತರಿಸಿ, ಮುಂಬರಿದು, ನೆತ್ತರ್ ನಿಂತ ಕಡೆಗೆ ಹೋಗುತ್ತಾಳೆ. ಬೆಚ್ಚಿ ನೋಡುತ್ತಾ ನಿಲ್ಲುತ್ತಾಳೆ. ಏಕಲವ್ಯ ನಿಂತಲ್ಲಿಂದ ಚಲಿಸದೆ ಪೆಚ್ಚಾಗಿ ಕೂಗಿ ಹೇಳುತ್ತಾನೆ.)
ದೇವತೆಗೆ ಬಲಿಯಿತ್ತ ಮಿಗದ ನೆತ್ತರ್ ಅಬ್ಬೆ!
ನೀರೆಂದು ಬಿನದಕ್ಕೆ ಪುಸಿವೇಳ್ದೆನೈಸೆ?
ಬಾ, ಪೋಗುವಂ; ಪೊಳ್ತಿಳಿದುದು ಕಾಣ್.
ಅಬ್ಬೆ — (ಬಗ್ಗಿನೋಡಿ ಉದ್ವೇಗದಿಂದ)
ಇದೇನ್, ಬಚ್ಚು ಕಡಿವೆರಳ್!
ಆರದಿದು? (ಅಳುದನಿಯಿಂದ) ನಿನ್ನದೇನ್? ಅಯ್ಯೋ!
ಏಕಲವ್ಯ — (ಓಡಿ ಬಂದು ತಾಯನ್ನು ಹಿಡಿದುಕೊಂಡು)
ಅಬ್ಬೆ, ಅಬ್ಬೆ, ಉಬ್ಬೆಗಂಗೊಳ್ಳದಿರ್!
ಹೆಬ್ಬೆರಳ್, ದಿಟಂ! ಬೆದರದಿರ್!
ನನ್ನದೆಯೆ! ಮತ್ತಾರದಲ್ತು!
ಅಬ್ಬೆ — (ಶೋಕಾಧಿಕ್ಯದ ಕೋಪದಿಂದ ಶಾಪರೌದ್ರಳಾಗಿ)
ಆರ್ಗೊ ಬಲಿ ನನ್ನ ಕಂದನ ಬೆರಳ್
ಬಲಿಯಕ್ಕೆ ಆ ಪಾಪಿಯ ಕೊರಳ್!
ಏಕಲವ್ಯ — (ಕೂಗುತ್ತಾನೆ) ಬೇಡವೇಡ! ನಿಲ್! ನಿಲ್! ನಿಲ್!
ಅಬ್ಬೆ — ಬೇಯುತಿಹುದಯ್ಯೊ ಹೆತ್ತೆನ್ನ ಕರುಳ್!
ಏಕಲವ್ಯ — (ತನ್ನೊಳಗೆ)
ಆಗಬಾರದುದಾಯ್ತೆ?
ಅಯ್ಯೊ, ನನ್ನ ತ್ಯಾಗಂ ವ್ಯರ್ಥಮಾಯ್ತೆ?
(ತಾಯಿಗೆ)
ಬಲಿಯಿತ್ತುದಲ್ತು, ಅಬ್ಬೆ.
ಪರೀಕ್ಷಾ ಸಮಯದೊಳ್ ಸರಳ್
ಆಕಸ್ಮಿಕಂ ತಗುಳೆ
ತುಂಡಾದುದೀ ಬೆರಳ್!
ಅಬ್ಬೆ — ನುಡಿಸಿತೆನ್ನಂ, ಬಚ್ಚ,
ವಾತ್ಸಲ್ಯಮುರಿಸಿದಾ ಮಾತೃಕೋಪಂ.
ಏಕಲವ್ಯ — ದುಡುಕಿದವ್, ಅಬ್ಬೆ,
ನನ್ನನುಂ ಕೊಳ್ಳದೆಯೆ ಬಿಡದು ನಿನ್ನೀ ಶಾಪಂ! (ಸುಯುತ್ತಾನೆ)
— ಕತ್ತಲೆಯ ಕರ್ಪಿಳಿಯುತಿರ್ಪುದು.
ತಳುವಿದೊಡೆ ಬಟ್ಟೆಗಾಣದು ನಿನಗೆ.
ನೀನಿತ್ತ ಶಾಪಕೆ ಗುರುಕ್ಷಮೆಯಂ ಬೇಡಿ, ….
ಬೇಡಿ, ಕಾಲ್ವಿಡಿದು ಬರ್ಪೆನ್.
ತೆರಳ್ ಬೀಡಿಂಗೆ, ಅಬ್ಬೆ.
ನೋಯದಿರ್ — ಮುನಿಯದಿರ್; ಕಾಲ್ಮುಟ್ಟಿ ಬೇಡುವೆನ್!
(ಎಂದು ಕಾಲು ಮುಟ್ಟುತ್ತಾನೆ. ಅಬ್ಬೆ ಮೌನವಾಗಿ ತುಸುಹೊತ್ತು ನಿಟ್ಟಿಸಿ, ಸುಯ್ದು ಕಂಬನಿಯುರುಳಿಸುತ್ತಾ ಹೊರಡುತ್ತಾಳೆ. ಏಕಲವ್ಯನು ಎದ್ದುನಿಂತು, ದೃಷ್ಟಿಬಾಹುಗಳಿಂದಲೆ ತಾಯಿಯನ್ನು ಹಿಡಿದು ನಡೆಯಿಸುತ್ತಾನೆ ಎಂಬಂತೆ, ಅವಳು ಹೋಗುವುದನ್ನೆ ನೋಡುತ್ತಾ ನಿಲ್ಲುತ್ತಾನೆ. ಮಬ್ಬಿನಲ್ಲಿ ಕಣ್ಮರೆಯಾದ ಮೇಲೆ, ದ್ರೋಣಪ್ರತೀಕದ ಕಡೆ ತಿರುಗಿ ನಿಲ್ಲುತ್ತಾನೆ. ಕತ್ತಲೆ ಕವಿದು ದೃಶ್ಯ ಅತೀವ ಅಸ್ಪಷ್ಟವಾಗುತ್ತದೆ. ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತವೆ. ಪಡುವಣ ಬಾನೆಡೆ ‘ಬೆಳ್ಳಿ‘ ತಳಿಸುತ್ತದೆ. ನಿರ್ಜನವಾಗಿ ಜಲಪಾತ ವಿನಾ ನಿಶ್ಯಬ್ದವಾಗಿ ನಿಶ್ಚಲವಾಗುತ್ತದೆ. ಕಂಡರೂ ಕಾಣಿಸದೆಂಬಂತೆ ಏಕಲವ್ಯನ ಆಕೃತಿ ಗೋಚರವಾಗುತ್ತಿರುತ್ತದೆ. ಬಂಡೆಯ ಮೇಲೆ ಬಿದ್ದಿದ್ದ ಬೆರಳ ತುಂಡನ್ನು ತೆಗೆದು ಕಿಬ್ಬಗೆಸೆಯುತ್ತಾನೆ. ಜಲಪಾತದ ನೀರನ್ನು ತುಳುಕಿಸಿ ನೆತ್ತರನ್ನು ತೊಳೆಯುತ್ತಾನೆ. ದ್ರೋಣಪ್ರತೀಕಕ್ಕೆ ಉದ್ದಂಡ ನಮಸ್ಕಾರ ಮಾಡಿ, ಪದ್ಮಾಸನ ಹಾಕಿ ಕುಳಿತುಕೊಳ್ಳುತ್ತಾನೆ. ಕತ್ತಲೆ ದಟ್ಟಯಿಸಿ ಕವಿದು ಭೂಮಿಯನ್ನೆಲ್ಲ ಅಳಿಸುತ್ತದೆ. ನೀರ್ ಬೀಳುವ ಮೊರೆ, ಕಿವಿಗೆ; ಕಣ್ ಮಿಟುಕುವ ಚುಕ್ಕಿ, ಕಣ್ಗೆ; ಏಕಲವ್ಯ ಸಂಪೂರ್ಣವಾಗಿ ಕತ್ತಲೆಯಲ್ಲಿ ಲೀನವಾಗುತ್ತಾನೆ. ಗಿರಿ ವಿಪಿನ ಭೂಮ್ಯಾಕಾಶಗಳನ್ನು ತುಂಬುವಂತೆ ಪ್ರಾರ್ಥನಾ ಗಾನವೊಂದು ಕೇಳಿಬರುತ್ತದೆ.)
ಅಂತರತಮ ನೀ ಗುರು,
ಹೇ ಆತ್ಮತಮೋಹಾರಿ!
ಜಟಿಲಕುಟಿಲತಮ ಅಂತರಂಗ ಬಹು
ಭಾವ ವಿಪಿನ ಸಂಚಾರಿ,
ಅಂತರತಮ ನೀ ಗುರು,
ಹೇ ಆತ್ಮತಮೋಹಾರಿ!
ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ
ಅಂತರತಮ ನೀ ಗುರು,
ಹೇ ಆತ್ಮತಮೋಹಾರಿ!
ಪಾಪಪುಣ್ಯ ನಾನಾ ಲಲಿತರುದ್ರ ಲೀಲಾ
ರೂಪ ಅರೂಪ ವಿಹಾರಿ,
ಅಂತರತಮ ನೀ ಗುರು,
ಹೇ ಆತ್ಮತಮೋಹಾರಿ!
Leave A Comment