ಅಂದು ನಿಮ್ಮಳ್ಕರೆಯ ಪರಸಿತೆನ್ನಂ ಮೊದಲ್:
ಇಂದು ರಾಮಾಯಣಕೆ ತಿರುಗಿ ಆ ಕೊಳಲಿನ ತೊದಲ್
ಕಾವ್ಯಗೈದಿದೆ ಬೃಹದ್ ಗಾನಮಂ. “ನನ್ನೊಡನೆ ಬಾ;
ಕನ್ನಡದ ನಾಡನೆಳ್ಚರಿಸುವಾವೇಶಮಂ ತಾ.
ವಾಙ್ಮಯ ತಪೋಬಲದಿ ಜಿಹ್ವಾತಟಿಚ್ಛಕ್ತಿ ತಾಂ
ಹೃದಯ ಗಹ್ವರದಲ್ಲಿ ಚಿಜ್ಚ್ಯೋತಿಃಪ್ರದೀಪಮಂ.
ಪೊತ್ತಿಪೋಲ್ ಮಾಳ್ಪಂ, ತವಿಸಿ ತಮಶ್ಯಾಪಮಂ.”
— ಇಂತೆನಿತ್ತೆನಿತೊ ನೀಂ ಪೆಳ್ದೆನ್ನ ಕರೆದೊಡಂ
ನಾಂ ಪೊರಮಟ್ಟೆನಿಲ್ಲೆನ್ನ ಪೊಕ್ಕ ವಲ್ಮೀಕದಿಂ:
“ನಿಮ್ಮ ಧರ್ಮ ನಿಮಗೆ; ನನ್ನ ಧರ್ಮಂ ನನಗೆ.
ಪಲವು ಬಟ್ಟೆಗಳಲ್ತೆ ಭಗವದಿಚ್ಛೆಯ ಮನೆಗೆ?
— ಕೈಕೊಂಡ ರಸತಪಸ್ ಸಿದ್ಧಿಯ ಅನಂತರಮೆ
ನೋಳ್ಪೆನ್; ಅದಕಿಂ ಮುನ್ನ ಏಳ್ವುದೇಂ ತರಮೆ?”
ಎಂದೆನ್. ಅರಿತವರಲ್ತೆ ಸೊಗಸುತೆಂದಿರಿ “ನಲ್!
ಆ ಋದ್ಧಿಯ ಸಮುದ್ರದ ತರಂಗಮೊಂದೆನಲ್
ನಿಮಗಿದು ನಿವೇದನಂ ಈ “ಬೆರಳ್ ಗೆ ಕೊರಳ್!”