ಸಂಗೀತ ಕ್ಷೇತ್ರದಲ್ಲಿ ಬೆಳಕವಾಡಿ ಮನೆತನ ತನ್ನದೇ ಆದ ಪ್ರತಿಷ್ಠೆ, ಕೀರ್ತಿಗಳನ್ನು ಹೊಂದಿದೆ. ಶ್ರೀನಿವಾಸ ಐಯ್ಯಂಗಾರರ ತೃತೀಯ ಪುತ್ರರಾಗಿ ೧೧-೬-೧೯೨೩ ರಂದು ಮಳವಳ್ಳಿ ತಾಲ್ಲೂಕಿನ ಬೆಳಕವಾಡಿಯಲ್ಲಿ ಜನಿಸಿದ ರಂಗಸ್ವಾಮಿಯವರು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ ಹಾಗೂ ವರದರಾಜ ಐಯ್ಯಂಗಾರ್ ಅವರುಗಳ ಕಿರಿಯ ಸಹೋದರರು. ಆಸ್ಥಾನ ವಿದ್ವಾಂಸರಾಗಿದ್ದ ಅಣ್ಣಂದಿರ ಶಿಕ್ಷಣದಲ್ಲಿ ರಂಗಸ್ವಾಮಿಯವರು ಉತ್ತಮ ವಿದ್ವಾಂಸರಾಗಿ ಸಿದ್ಧರಾದರು. ಪಲ್ಲವಿ ಗಾಯನದಲ್ಲಿ ವಿದ್ವಾನ್‌ ಸಿ.ಪಿ. ರಂಗಸ್ವಾಮಿ ಐಯ್ಯಂಗಾರ್ ಅವರಲ್ಲಿ ಹೆಚ್ಚಿನ ತರಬೇತಿ ಪಡೆದರು.

ಅಂದಿನ ಸಂಗೀತ ಕ್ಷೇತ್ರದ ದಿಗ್ಗಜಗಳೆನಿಸಿದ್ದ ವೀಣೆ ಸುಬ್ಬರಾಯರು, ವೀಣೆ ವೆಂಕಟಗಿರಿಯಪ್ಪ ಮುತ್ತಯ್ಯ ಭಾಗವತರು, ಮೈಸೂರು ವಾಸುದೇವಾಚಾರ್ಯ, ಟಿ. ಚೌಡಯ್ಯ ನಂತಹವರ ಪ್ರಶಂಸೆಗೆ ಪಾತ್ರರಾದ ಹೆಗ್ಗಳಿಕೆ ಇವರದು. ಸ್ವರ-ಲಯಗಳ ಬಗ್ಗೆ ಖಚಿತ್ಯ ಹೊಂದಿದ್ದು ಮುಂಬಯಿಯ ಮೈಸೂರು ಅಸೋಸಿಯೇಷನ್‌ಷಣ್ಮುಗಾನಂದ ಸಭಾ, ಊಟಿಯ ತ್ಯಾಗರಾಜ ಸಭಾ, ಬೆಂಗಳೂರಿನ ಹಲವಾರು ಪ್ರಮುಖ ಸಭೆಗಳಲ್ಲಿ ಹಾಡಿ ಶ್ರೋತೃಗಳ ಪ್ರಶಂಸೆಗೆ ಪಾತ್ರರಾದವರು. ಸುಮಾರು ಮೂರು ದಶಕಗಳ ಕಾಲ ಆಕಾಶವಾಣಿಯಿಂದ ಪ್ರಸಾರವಾದ ಇವರ ಕಾರ್ಯಕ್ರಮಗಳಿಂದ ಆನಂದಿಸಿರುವ ರಸಿಕರ ವೃಂದ ಬೃಹತ್ತಾದುದು. ಕರ್ನಾಟಕ ಸರ್ಕಾರ ನಡೆಸುವ ವಿಶೇಷ ಸಂಗೀತ ಪರೀಕ್ಷೆಗಳಿಗೆ ಇವರು ಪರೀಕ್ಷಕರಾಗಿಯೂ, ಸರ್ಕಾರ ಪ್ರೌಢ ಶಾಲೆಯಲ್ಲಿ ಸಂಗೀತ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಹಲವಾರು ಸಂಸ್ಥೆಗಳೂ, ಸಭೆಗಳೂ ಇವರ ಪ್ರೌಢಿಮೆಯನ್ನೂ, ಕಲಾ ಸಿರಿವಂತಿಕೆಯನ್ನೂ ಗುರುತಿಸಿ ಗೌರವಿಸಿರುತ್ತಾರೆ. ‘ಕಲಾ ಭೂಷಣ’, ‘ಕರ್ನಾಟಕ ಕಲಾತಿಲಕ’, ‘ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಉಲ್ಲೇಖಾರ್ಹವಾದುವು. ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಶ್ರೀಯುತರ ಶಿಷ್ಯ ವೃಂದ ಅವರ ಪರಂಪರೆಯನ್ನು ನಿರಂತರವಾಗಿರಿಸಲು ಸಿದ್ಧರಾಗಿದ್ದಾರೆ. (೧೯೯೩-೯೪)