ಆಸ್ಥಾನ ವಿದ್ವಾನ್‌ ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರರ ದ್ವಿತೀಯ ಪುತ್ರರಾಗಿ ವರದರಾಜ ಐಯ್ಯಂಗಾರರು ಮಳವಳ್ಳಿ ತಾಲ್ಲೂಕಿನ ಬೆಳಕವಾಡಿಯಲ್ಲಿ ೧೯೧೨ರಲ್ಲಿ ಜನಿಸಿದರು. ಅನುವಂಶಿಕವಾಗಿ ಬಂದ ಸಂಗೀತ ವಿದ್ಯೆಯಲ್ಲಿ ಸಹಜವಾಗಿಯೇ ಬಾಲಕ ವರದರಾಜನಿಗೆ ಆಸಕ್ತಿ. ಅಭಿರುಚಿ ಇತ್ತು. ಆರಂಭದ ಶಿಕ್ಷಣವನ್ನು ತಂದೆ ಮತ್ತು ತಿಟ್ಟೆ ನಾರಾಯಣ ಐಯ್ಯಂಗಾರರಲ್ಲಿ ಪಡೆದು ನಂತರ ಹರಿಕೇಶ ನಲ್ಲೂರು ಮುತ್ತಯ್ಯ ಭಾಗವತರ ನೆಚ್ಚಿನ ಶಿಷ್ಯರಾಗಿ ಗುರುಕುಲ ಪದ್ಧತಿಯಲ್ಲಿ ಸಾಂಗವಾಗಿ ಸಂಗೀತದ ಮರ್ಮಗಳನ್ನೆಲ್ಲಾ ಅರಿತು ಸಾಧನೆಯಿಂದ ತಮ್ಮ ಗಾಯನವನ್ನು ಪಕ್ವಗೊಳಿಸಿಕೊಂಡರು.

ಹೈದರಾಬಾದಿನ ಕೃಷ್ಣಗಾನ ಸಭೆಯಲ್ಲಿ ಆರಂಭವಾದ ಅವರ ಕಛೇರಿ ಜೀವನ ಅವಿರತವಾಗಿ ಮುನ್ನಡೆಯುತ್ತಲೇ ಇತ್ತು. ದೇಶದಾದ್ಯಂತ ಮೊಳಗಿದ ಅವರ ನಾದ ಮಾಧುರ್ಯ ಅಪಾರವಾದ ಕೀರ್ತಿ, ಯಶಸ್ಸುಗಳನ್ನು  ಅವರಿಗೆ ತಂದಿತು. ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನ ಸಂಗೀತ ವಿಭಾಗದಲ್ಲಿ ಅಧ್ಯಾಪಕರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದರು. ಲಕ್ಷ್ಯ-ಲಕ್ಷಣ ವಿಚಕ್ಷಣರಾಗಿದ್ದ ಇವರ ಶಿಷ್ಯ ವೃಂದವೂ ಬಹು  ದೊಡ್ಡದು.

ಅಧ್ಯಾಪಕ ವೃತ್ತಿಯಿಂದ ಹೊರ ಬಂದ ನಂತರ ಮೈಸೂರಿನಲ್ಲಿ ನೆಲೆಸಿ ತಮ್ಮ ಕೆಲಸವನ್ನು ಮುಂದುವರೆಸಿದರು. ಮುತ್ತಯ್ಯ ಭಾಗವತರ ದೇವೀ ಕೃತಿಗಳನ್ನು ಸಂಕಲಿಸಿ ಪ್ರಕಟಿಸಿದರು. ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ವಿದ್ವತ್‌ಗೋಷ್ಠಿಯಲ್ಲಿ ತ್ಯಾಗರಾಜರ ಅಕಾರದಿಂದ ಕ್ಷಕಾರದವರೆಗಿನ ಕೃತಿಗಳನ್ನು ಅವಿಚ್ಛಿನ್ನವಾಗಿ ಒಂದಾದ ಮೇಲೆ ಒಂದರಂತೆ ಹಾಡಿ ಒಂದು ದಾಖಲೆಯನ್ನೇ ನಿರ್ಮಿಸಿದರು. ‘ಗಾನ ಕಲಾಭೂಷಣ’ ಬಿರುದಿನಿಂದ ಶೋಭಿತರಾಗಿದ್ದ ಇವರು ೧೯೮೫-೮೬ರ ಸಾಲಿನಲ್ಲಿ ರಾಜ್ಯ ಸಂಗೀತ ನೃತ್ಯ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ಪಡೆದರು.

ಸೌಜನ್ಯ ಸರಳತೆ ಸಂಪ್ರದಾಯಶೀಲತೆಗಳ ಸಂಗಮವಾಗಿದ್ದ ವರದರಾಜ ಐಯ್ಯಂಗಾರ್ಯರು ೨೮-೧೦-೧೯೮೬ ರಂದು ಐಹಿಕ ಜಗತ್ತಿನಿಂದ ಮರೆಯಾದರು.