ತಮಿಳುನಾಡಿನ ತಂಜಾವೂರು, ತಿರುವಯ್ಯಾರು, ಮಾಯಾವರಂ ಮತ್ತು ಕುಂಭಕೋಣಂ ಹೇಗೆ ಸುಪ್ರಸಿದ್ಧ ಕಲಾವಿದರನ್ನು ನೀಡಿತೋ, ಅದೇ ರೀತಿ ಮೈಸೂರು ನಾಡಿನ ಶ್ರೀರಂಗಪಟ್ಟಣ, ರುದ್ರಪಟ್ಟಣ, ಟಿ. ನರಸೀಪುರ ಮತ್ತು ಬೆಳಕವಾಡಿಯೂ ಉತ್ತಮ ಕಲಾವಿದರನ್ನು ನಾಡಿಗೆ ಸಮರ್ಪಿಸಿದೆ.

ಮಂಡ್ಯ ಜಿಲ್ಲೆಗೆ ಸೇರಿದ ಬೆಳಕವಾಡಿ ಎಂಬ ಗ್ರಾಮದಲ್ಲಿ ೯ನೇ ಮಾರ್ಚ್‌ ೧೯೧೧ರಂದು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ ಮತ್ತು ಲಕ್ಷ್ಮಮ್ಮನವರ ಜೇಷ್ಠ ಪುತ್ರರಾಗಿ ಬೆಳಕವಾಡಿ ಶ್ರೀನಿವಾಸ ಐಯಂಗಾರ್ಯರು ಜನಿಸಿದರು. ತಂದೆ ಮತ್ತು ಮಗನ ಹೆಸರು ಒಂದೇ ಗಿರುವುದು ಆಶ್ಚರ್ಯವಾಗುವಂಥ ವಿಷಯವೇ.! ಮಗ ಶ್ರೀನಿವಾಸ ಐಯಂಗಾರ್ಯರ ಹೆಸರು ಶ್ರೀನಿವಾಸ ರಂಗಾಚಾರ್ಯ. ಶಾಲೆಗೆ ಸೇರಿಸಿದಾಗ, ಶ್ರೀನಿವಾಸ ರಂಗಾಚಾರ್ಯ ಎಂಬ ಹೆಸರಿಗೆ ಬದಲಾಗಿ, ಬೆಳಕವಾಡಿ ಶ್ರೀನಿವಾಸ ಐಯಂಗಾರ್ ಎಂದು ತಪ್ಪಾಗಿ ನೋಂದಾಯಿಸಲ್ಪಟ್ಟಿತು. ಹಿರಿಯರು ಈ ತಪ್ಪನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಆದರೆ ಮುಂದೆ ಇದನ್ನು ಸರಿ ಮಾಡಿಸಲು ಹೋದಾಗ ಈ ತಪ್ಪು ತಿದ್ದಲಾಗದೆ ತಂದೆ ಮತ್ತು ಮಗನ ಹೆಸರು ಒಂದೇ ಆಯಿತು.

ಶ್ರೀನಿವಾಸ ಐಯಂಗಾರ್ಯರು ಮೂರು ವರ್ಷದವರಿದ್ದಾಗಲೇ ತಾಯಿ ಲಕ್ಷ್ಮಮ್ಮನವರು ಪ್ಲೇಗ್‌ ರೋಗಕ್ಕೆ ಬಲಿಯಾಗಿ ಮೃತರಾದರು. ಅಕ್ಕ ಶ್ರೀರಂಗಮ್ಮ ಮತ್ತು ತಮ್ಮ ವರದರಾಜ ಐಯ್ಯಂಗಾರ್ಯರೊಂದಿಗೆ ಇವರು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದರು. ಮೂರು ವರ್ಷಗಳ ನಂತರ ತಂದೆ, ಅಲಮೇಲಮ್ಮನವರನ್ನು ಮರು ವಿವಾಹವಾದರು. ಶ್ರೀನಿವಾಸ ಐಯಂಗಾರ್ಯರು ಸಂಗೀತಗಾರರ ಮನೆತನದಲ್ಲಿ ಹುಟ್ಟಿದವರು. ತಾತ ಶ್ರೀನಿವಾಸ ರಂಗಾಚಾರ್ಯರು ಶಿವನಸಮುದ್ರದ ಜಗನ್ಮೋಹನ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಅವರ ತಮ್ಮ ವರದದೇಶಿಕಾಚಾರ್ಯರು ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ವೀಣೆ ಸಾಂಬಯ್ಯನವರ ಶಿಷ್ಯರು. ಅಜ್ಜಿ ವೆಂಕಟಲಕ್ಷ್ಮಮ್ಮನವರ ಸಹೋದರ ಕುಪ್ಪಾಚಾರ್ಯರು ಪಿಟೀಲು ವಿದ್ವಾಂಸರು. ತಂದೆ ಶ್ರೀನಿವಾಸ ಐಯಂಗಾರ್ಯರು ವೀಣೆ ಸುಬ್ಬಣ್ಣನವರ ಶಿಷ್ಯರಾಗಿ ಹಾಡುಗಾರಿಕೆ, ಪಿಟೀಲು ಮತ್ತು ಗೋಟುವಾದ್ಯವನ್ನು ನುಡಿಸುವುದರಲ್ಲಿ ಪರಿಣತಿ ಪಡೆದಿದ್ದರು. ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದರು. ಒಳ್ಳೆ ನಟರಗಿಯೂ, ವಾಗ್ಗೇಯಕಾರರಾಗಿಯೂ ಹೆಸರು ವಾಸಿಯಾಗಿದ್ದಂಥವರು. ೧೯೧೬ರವರೆಗೂ ಬೆಳಕವಾಡಿಯಲ್ಲೇ ಇದ್ದು, ತಂದೆ ಮೈಸೂರು ಆಸ್ಥಾನ ವಿದ್ವಾಂಸರಾದ ನಂತರ, ೧೯೧೭ರಲ್ಲಿ ಮೈಸೂರಿಗೆ ಬಂದು ನೆಲೆಸಿದರು.

ಸಂಗೀತ ವಾತಾವರಣದಲ್ಲಿ ಬೆಳೆದ ಶ್ರೀನಿವಾಸ ಐಯಂಗಾರ್ಯರು ಸಂಗೀತದ ಕಡೆ ಒಲವನ್ನು ಬೆಳೆಸಿಕೊಂಡದ್ದು ಸಹಜವೇ! ಶಾಲೆಗೆ ಹೋಗುವುದರೊಂದಿಗೆ, ತಮ್ಮ ೧೦ನೇ ವಯಸ್ಸಿನಲ್ಲಿ ಸಂಗೀತವನ್ನು ತಿಟ್ಟೆ ನಾರಾಯಣ ಐಯ್ಯಂಗಾರ್ಯರಲ್ಲಿ ಪ್ರಾರಂಭ ಮಾಡಿದರು. ಸ್ವರ ಜತಿಗಳವರೆಗೂ ಇವರಲ್ಲಿ ಕಲಿತು ನಂತರ ತಂದೆಯವರಿಂದಲೇ ಮುಂದುವರೆಸಿದರು. ತಂದೆಯ ಕಚೇರಿಗಳಲ್ಲಿ ಹಾಡುಗಾರಿಕೆಯಲ್ಲಿ ಸಹಗಾಯನ ನೀಡುತ್ತಿದ್ದರು. ಮೈಸೂರು ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲದೆ ಮದರಾಸು, ತಿರುಚಿರಾಪಳ್ಳಿ, ಚೆಟ್ಟಿನಾಡು, ಮಧುರೈ, ರಾಮೇಶ್ವರಂ ಮುಂತಾದ ಅನೇಕ ಸ್ಥಳಗಳಲ್ಲಿ ಕಚೇರಿಗಳನ್ನು ನೀಡಿ ಸನ್ಮಾನಗಳನ್ನು ಪಡೆದಿದ್ದರು. ಒಬ್ಬರೇ ಕಚೇರಿಗಳಲ್ಲಿ ಹಾಡುವುದಲ್ಲದೆ ಒಮ್ಮೊಮ್ಮೆ ತಮ್ಮ ವರದರಾಜ ಐಯ್ಯಂಗಾರ್ಯರೊಡನೆಯುಗಳ ಕಚೇರಿಗಳನ್ನು ಮಾಡುತ್ತಿದ್ದರು.

ದಿನಾಂಕ ೧೦ರ ಮೇ ೧೯೨೮ರಂದು ಮೈಸೂರಿನಲ್ಲಿ ಡೆಪ್ಯೂಟಿ ಸೂಪರಿಂಟೆಂಡೆಂಟ್‌ ಆಫ್‌ ಪೋಲೀಸ್‌ ಆಗಿದ್ದ ರಂಗಸ್ವಾಮಿ ಐಯಂಗಾರ್ಯರ ಮಗಳು ಕಮಲಮ್ಮನವರನ್ನು ಲಗ್ನವಾದರು. ಅವರ ಮದುವೆಗೆ ಮಹಾರಾಜರಿಂದ ಬಂದ ಉಡುಗೊರೆಗಳು ಹಾಗೂ ಅರಮನೆಯಿಂದ ಮಾಡಿಕೊಟ್ಟ ಸವಲತ್ತು ಮುಂತಾದವುಗಳ ಪಟ್ಟಿ ಅರಮನೆಯ ಪತ್ರಾಗಾರದಲ್ಲಿ ದಾಖಲಾಗಿದೆ. ಆದರೆ ದುರದೃಷ್ಟವಶಾತ್‌ ಶ್ರೀನಿವಾಸ ಐಯಂಗಾರ್ಯರು ೨೮ ವರ್ಷದವರಿದ್ದಾಗಲೇ ಪತ್ನಿ ಅಕಾಲ ಮರಣಕ್ಕೆ ತುತ್ತಾದರು. ಕಮಲಮ್ಮನವರು ಮೃತರಾದಾಗ ತಮ್ಮ ಇಬ್ಬರು ಮಕ್ಕಳಲ್ಲಿ ಹಿರಿಯವಳು ಲಲಿತೆಗೆ ನಾಲ್ಕು ವರ್ಷ ಮತ್ತು ಕಿರಿಯ ಮಗ ಇಂದಿರ ೧೦ ತಿಂಗಳ ಹಸುಗೂಸು. ಪತ್ನಿಯ ವಿಯೋಗದ ನಂತರ ಮರುಮದುವೆಯಾಗದೆ ಸಂಗೀತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.

೧೯೨೭ರಲ್ಲಿ ಹರಿಕೇಶನಲ್ಲೂರು ಡಾ.ಎಲ್‌.ಮುತ್ತಯ್ಯ ಭಾಗವತರು ತಮಿಳುನಾಡಿನಿಂದ ಮೈಸೂರಿಗೆ ಬಂದು ಆಸ್ಥಾನ ವಿದ್ವಾಂಸರಾದರು. ಶ್ರೀನಿವಾಸ ಐಯಂಗಾರ್ಯರ ಸಂಸಾರಕ್ಕೆ ಆಪ್ತರಾದರು. ಶ್ರೀನಿವಾಸ ಮತ್ತು ಸಹೋದರ ವರದರಾಜ ಇಬ್ಬರೂ ಭಾಗವತರ ಶಿಷ್ಯ ರಾದರು. ೧೯೩೧-೩೨ರಲ್ಲಿ ಮದರಾಸು ವಿಶ್ವವಿದ್ಯಾಲಯವು ಸಂಗೀತದ ಡಿಪ್ಲೊಮಾ ತರಗತಿಗಳನ್ನು ಪ್ರಾರಂಭಿಸಿತು . ಅದೇ ವರ್ಷ ಶ್ರೀನಿವಾಸ ಐಯಂಗಾರ್ಯರು ಮದರಾಸಿಗೆ ಹೋಗಿ ಡಿಪ್ಲೋಮಾ ತರಗತಿಗೆ ಸೇರಿದರು. ಆಗ ಟೈಗರ್ ವರದಾಚಾರ್ಯರು ಅಲ್ಲಿನ ಪ್ರಾಂಶುಪಾಲರಾಗಿದ್ದರು. ಸಂಜೆ ಆರರಿಂದ ಎಂಟರವರೆಗೆ ಅಲ್ಲಿನ ತರಗತಿಗಳು. ಬೆಳಗಿನ ಹೊತ್ತನ್ನು ಸದುಪಯೋಗ ಮಾಡಿಕೊಳ್ಳಲು ಮದರಾಸು ಮ್ಯೀಸಿಕ್‌ ಅಕಾಡೆಮಿಯವರು ಪ್ರಾರಂಭ ಮಾಡಿದ್ದ ಸಂಗೀತದ ಉಪಾಧ್ಯಾಯರ ತರಬೇತಿ ಮಹಾವಿದ್ಯಾಲಯಕ್ಕೆ ಸೇರಿದರು. ಅಲ್ಲಿನ ಪ್ರಾಂಶುಪಾಲರು ಹರಿಕೇಶನಲ್ಲೂರ್‌ ಡಾ.ಎಲ್‌. ಮುತ್ತಯ್ಯ ಭಾಗವತರು. ಸಂಗೀತದ ದಿಗ್ಗಜರುಗಳೆರನಿಸಿದ ಟೈಗರ್ ವರದಾಚಾರ್ ಮತ್ತು ಮುತ್ತಯ್ಯಭಾಗವತರ್ ಇವರಿಬ್ಬರಿಂದಲೂ ಸಂಗೀತ ಕಲಿಯುವುದು ಒಂದು ಸುಯೋಗವೆನಿಸಿದರೂ ಅಭ್ಯಾಸ ಮಾಡುವುದಕ್ಕೆ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಬರಿಯ ಅಭ್ಯಾಸ ಮಾಡುವುದಷ್ಟಕ್ಕೆ ಮುಗಿಯುತ್ತಿರಲಿಲ್ಲ. ಇವರ ದಿನಚರಿ. ಅನ್ಯ ವಿದ್ವಾಂಸರ ಸಂಗೀತ ಕಚೇರಿಗಳನ್ನು ಕೇಳಲು, ಭಾಗವತರು ತಮ್ಮ ಕಾರಿನಲ್ಲಿ ಕಳಿಸಿಕೊಡುತ್ತಿದ್ದರು. ಕಚೇರಿ ಕೇಳಿ ಬಂದ ನಂತರ ಅದರ ಬಗ್ಗೆ ಚರ್ಚೆ ಗುರುಗಳೊಂದಿಗೆ. ಹಾಗಾಗಿ ಸೂರ್ಯೋದಯದಿಂದ ರಾತ್ರಿ ಮಲಗುವವರೆಗೂ ಸಂಗೀತದಲ್ಲಿಯೇ ಮುಳುಗಿರುತ್ತಿದ್ದರು ಶ್ರೀನಿವಾಸ ಐಯ್ಯಂಗಾರ್ಯರು. ಮೂರು ವರ್ಷಗಳ ಕಾಲ ಮುತ್ತಯ್ಯ ಭಾಗವತರ ಮನೆಯಲ್ಲಿಯೇ ತಂಗಿದ್ದು ಸತತವಾಗಿ ಶಿಕ್ಷಣವನ್ನು ಪಡೆದರು. ಎರಡು ಪದವಿಗಳಲ್ಲೂ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಮೈಸೂರಿಗೆ ಹಿಂತಿರುಗಿದ ನಂತರ ಪಾಶ್ಚಾತ್ಯ ಸಂಗೀತವನ್ನ ಕಲಿತರು. ೧೯೩೯ರಲ್ಲಿ ಲಂಡನ್ನಿನ ಟ್ರಿನಿಟಿ ಕಾಲೇಜಿನ ಸಂಗೀತದ ಇಂಟರ್ ಮೀಡಿಯೆಟ್‌ ಪರೀಕ್ಷೆಯಲ್ಲಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿ ನಾಲ್ವಡಿ ಕೃಷ್ಣರಾಜ ಒಡೆಯರಿಂಧ ಪ್ರಶಸ್ತಿ ಪತ್ರ ಪಡೆದಿದ್ದರು. ಬಹಳಷ್ಟು ಕಡೆ ಕಚೇರಿಗಳನ್ನು ಕೊಟ್ಟರೂ ಕೂಡ ಇವರು ಸಂಗೀತದ ಅಧ್ಯಾಪಕರಾಗಿ ವಿದ್ಯಾದಾನ ಮಾಡಬೇಕೆಂದು ಆಶಿಸಿದರು. ಅದರಂತೆಯೇ ೧೯೩೬ರಲ್ಲಿ ಇವರ ಅಧ್ಯಾಪಕ ವೃತ್ತಿ ಬೆಂಗಳೂರಿನ ವಾಣಿವಿಲಾಸ ಇನ್‌ ಸ್ಟಿಟ್ಯೂಟಿನಿಂದ ಪ್ರಾರಂಭವಾಯಿತು. ಹಲವು ತಿಂಗಳ ನಂತರ ತಂದೆ ನಿಧನರಾದ ಮೇಲೆ (೧೯೩೬), ಮೈಸೂರು ಸರ್ಕಾರದ ಟ್ರೈನಿಂಗ್‌ ಕಾಲೇಜಿಗೆ ವರ್ಗಾವಣೆ ಆಗಿ ೧೮ ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ೧೯೪೭ರಲ್ಲಿ ಶ್ರೀನಿವಾಸ ಐಯಂಗಾರ್ಯರು ಜಯ ಚಾಮರಾಝ ಒಡೆಯರ ಆಸ್ಥಾನ  ವಿದ್ವಾಂಸರಾಗಿ ನೇಮಕಗೊಂಡರು. ಅರಮನೆಯಿಂದ ಇವರಿಗೆ ನಿಗದಿ ಪಡಿಸಿದ ಸಂಬಳ ೨೫/-ರೂ. ಗಳು.

ಲಕ್ಷ್ಯ ಲಕ್ಷಣ ಭಾಗಳೆರಡರಲ್ಲೂ ಪಾಂಡಿತ್ಯ ಪಡೆದಿದ್ದ ಇವರು ಯಾವುದೇ ವಿಷಯ ಅಥವಾ ರಚನೆಯನ್ನು ತೆಗೆದುಕೊಂಡರೂ ಅದನ್ನು ಸಾಕಷ್ಟು ವಿಶ್ಲೇಷಣೆ ಮಾಡಿ ನಂತರ ಪಾಠ ಮಾಡುತ್ತಿದ್ದರು. ಜೊತೆಗೆ ರಚನೆಗಳಲ್ಲಿ ಸಾಹಿತ್ಯ ಮತ್ತು ತಾಳದ ವಿಶಿಷ್ಟತೆಗಳನ್ನು ಬಿಡಿಸಿ ಹೇಳುವುದು ಇವರ ವೈಶಿಷ್ಟ್ಯವಾಗಿತ್ತು. ಸುಮಾರು ೬೫ ವರ್ಷಗಳ ಕಾಲ ಮೈಸೂರಿನಲ್ಲಿದ್ದು ಅಂದಿನ ಸ್ಥಳೀಯ ಮತ್ತು ಪರಸ್ಥಳದ ಸಂಗೀತಗಾರರನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಚಿಕ್ಕ ವಯಸ್ಸಿನಲ್ಲಿ ಇವರು ಮೈಸೂರಿನ ದಳವಾಯಿ ಶಾಲೆಯಲ್ಲಿ ಓದುತ್ತಿದ್ದಾಗ ಹತ್ತಿರದಲ್ಲೇ ವೀಣೆ ಶೇಷಣ್ಣನವರ ಮನೆಯಿತ್ತು. ಅವರ ಮನೆಗೆ ಎಲ್ಲಾ ಹಿರಿಯ ವಿದ್ವಾಂಸರು ಬಂದು ಹಾಡುತ್ತಿದ್ದರು. ಶ್ರೀನಿವಾಸ ಐಯಂಗಾರ್ಯರಿಗೆ ಸಂಗೀತದ ಮೇಲೆ ಎಷ್ಟು ಆಸಕ್ತಿ ಇದ್ದಿತೆಂದರೆ, ಶಾಲೆಯಿಂದ ಶೇಷಣ್ಣನವರ ಮನೆಗೆ ಹೋಗಿ ಅಲ್ಲಿರುತ್ತಿದ್ದ ಹಿರಿಯ ವಿದ್ವಾಂಸರನ್ನು ನೋಡಿ ಅವರ ಸಂಗೀತವನ್ನು ಕೇಳಿ ಆನಂದ ಪಡುತ್ತಿದ್ದರು. ಅಂದಿನ ಸಂಗೀತದ ಬಗ್ಗೆ, ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುತ್ತಿದ್ದರು. ವಿದ್ಯಾರ್ಜನೆಗಾಗಿ ಯಾರೇ ಅವರಲ್ಲಿ ಹೋದರೂ ನಿರಾಸೆ ಮಾಡದೆ ತಮಗೆ ತಿಳಿದಿದ್ದ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಎಷ್ಟೇ ತಿಳಿದಿದ್ದರೂ ಉಪಾಧ್ಯಾಯನೂ ಯಾವಾಗಲೂ ಶಿಷ್ಯನೇ ಎಂಬ ಸತ್ಯವನ್ನು ಇವರು ಅರಿತಿದ್ದರಿಂದ ಬದುಕಿರುವವರೆಗೂ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಅವಕಾಶವಾಯಿತು.

ಶ್ರೀನಿವಾಸ ಐಯ್ಯಂಗಾರ್ಯರು ಬರೆದಿರುವ ಮಹಾ ವೈದ್ಯನಾಥ ಐಯ್ಯರ್, ಮುತ್ತಯ್ಯ ಭಾಗವತರ್, ಟೈಗರ್ ವರದಾಚಾರಿಯರ್ ಮುಂತಾದವರ ಜೀವನ ಚರಿತ್ರೆಗಳನ್ನು ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಐ.ಬಿ.ಹೆಚ್‌ ಪ್ರಕಾಶನಾಲಯದವರು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಇವರು ಕರ್ನಾಟಕ ಸರ್ಕಾರದ ಪರೀಕ್ಷಾ ಮಂಡಳಿಯ ಸದಸ್ಯರಾಗಿಯೂ ಆಕಾಶವಾಣಿ ಆಡಿಶನ್‌ ಮಂಡಳಿಯ ತೀರ್ಪುಗಾರರಾಗಿಯೂ ಬಹು ಕಾಲ ಸೇವೆ ಸಲ್ಲಿಸಿದ್ದಾರೆ.

ಇವರ ವಿದ್ವತ್ತಿಗೆ ಮೆಚ್ಚಿ ಸಂದ ಗೌರವಗಳು ಬಹಳಷ್ಟು. ೧೯೨೮ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಓರಿಯೆಂಟಲ್‌ ಕಾನ್‌ ಫೆರೆನ್ಸ್‌ನಲ್ಲಿ ಕಚೇರಿ ನಡೆಸಿ ಪ್ರಶಸ್ತಿ ಪತ್ರ ಪಡೆದಿದ್ದಾರೆ. ೧೯೮೦ರಲ್ಲಿ ಕರ್ನಾಟಕ ಗಾನಕಲಾ ಪರಿಷತ್‌ ನಡೆಸಿದ ಸಂಗೀತ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಗಾನಕಲಾ ಭೂಷಣ ಬಿರುದನ್ನೂ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರಿಂಧ ಕರ್ನಾಟಕ ಕಲಾ ತಿಲಕ ಬಿರುದನ್ನೂ ಪಡೆದಿದ್ದಾರೆ. ಬೆಂಗಳೂರು ಗಾಯನ ಸಮಾಜ, ತ್ಯಾಗರಾಜ ಗಾನ ಸಭಾ, ನಂದಿನಿ ರಸಿಕ ಸಭಾ, ಮೈಸೂರಿನ ಆರ್.ವಿ. ಎಜುಕೇಶನಲ್‌ ಟ್ರಸ್ಟ್‌, ಭಾರತೀಯ ಕರ್ನಾಟಕ ಸಂಘ ಮುಂತಾದ ಅನೇಕ ಸಂಘ ಸಂಸ್ಥೆಗಳು ಇವರನ್ನ ಸನ್ಮಾನಿಸಿವೆ. ೧೯೯೬ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಇವರಿಗೆ ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇಷ್ಟೆಲ್ಲಾ ಬಿರುದು ಸನ್ಮಾನಗಳಿದ್ದರೂ ಶ್ರೀನಿವಾಸ ಐಯಂಗಾರ್ಯರು ಎಲೆ ಮರೆಯ ಕಾಯಿಯಂತೆ ಬಹಳ ಸರಳವಾದ ಜೀವನವನ್ನು ನಡೆಸುತ್ತಿದ್ದರು. ಹೃದಯ ವಿಶಾಲತೆ, ಸ್ನೇಹಭಾವ, ಮುಗುಳ್ನಗೆ, ಸಹ ಕಲಾವಿದರ ಬಗ್ಗೆ ಗೌರವ ಶಿಷ್ಯವೃಂದಕ್ಕೆ ತೋರುತ್ತಿದ್ದ ವಾತ್ಸಲ್ಯ ಇಂತಹ ಸದ್ಗುಣಗಳನ್ನು ಪಡೆದಿದ್ದರು. ಇವರ ಅನೇಕ ಶಿಷ್ಯರಲ್ಲಿ ಪ್ರಮುಖರಾದವರು. ಅವರ ಕಡೆಯ ಸಹೋದರರಾದ ಬೆಳಕವಾಡಿ ರಂಗಸ್ವಾಮಿ ಐಯಂಗಾರ್, ಸುಧಾ ವಿ. ಮೂರ್ತಿ ಮತ್ತು ಬಿ.ವಿ. ವಿಜಯಲಕ್ಷ್ಮಿ. ಕರ್ನಾಟಕ ಸಂಗೀತದ ಬಗ್ಗೆ ಇವರು ನೀಡುತ್ತಿದ್ದ ಸೋದಾಹರಣ ಭಾಷಣಗಳು, ಬರೆಯುತ್ತಿದ್ದ ಲೇಖನಗಳು ಬಹಳ ಉತ್ತಮವೂ, ಬೋಧಪ್ರದವಾಗಿಯೂ ಇರುತ್ತಿತ್ತು. ೯೨ ವರ್ಷಗಳ ತುಂಬು ಜೀವನವನ್ನು ನಡೆಸಿದ ಬೆಳಕವಾಡಿ ಶ್ರೀನಿವಾಸ ಐಯಂಗಾರ್ಯರು ದಿನಾಂಕ ೫ ಫೆಬ್ರವರಿ ೨೦೦೨ ರಂದು ಬೆಂಗಳೂರಿನಲ್ಲಿ ನಿಧನರಾದರು.