ಹಿಂದುಸ್ತಾನಿ ಕಾಪಿ ರಾಗದಲ್ಲಿ ಇಂದು, ಪ್ರಚಾರದಲ್ಲಿರುವ ಪುರಂದರದಾಸರ “ಆಡಿಸಿದಳೆಶೋದೆ ಜಗದೋದ್ಧಾರನ” ಪದಕ್ಕೆ, ರಾಗ ಸಂಯೋಜನೆ ಮಾಡಿ ಜೀವ ತುಂಬಿದವರೇ ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ಯರು.

ಶ್ರೀವೈಷ್ಣವ ಸಂಪ್ರದಾಯಕ್ಕೆ ಸೇರಿದ್ದ ಶ್ರೀನಿವಾಸ ರಂಗಾಚಾರ್ಯರು, ಶಿವನ ಸಮುದ್ರದ ಜಗನ್ಮೋಹನ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಇವರ ಧರ್ಮಪತ್ನಿ ವೆಂಕಟಲಕ್ಷಮ್ಮ. ಹುಟ್ಟಿದ್ದ ಐದು ಮಕ್ಕಳನ್ನೂ

ಕಳೆದುಕೊಂಡಿದ್ದ ಈ ದಂಪತಿಗಳಿಗೆ ರಂಗನಾಥನ ದಯೆಯಿಂದ ೧೩ನೇ ಮಾರ್ಚ್ ೧೮೮೮ರಂದು, ಕರ್ನಾಟಕದ ಶಿವಗಂಗೆಯ ಹತ್ತಿರವಿದ್ದ ಶ್ರೀಗಿರಿಪುರದಲ್ಲಿ ಒಂದು ಗಂಡು ಮಗು ಜನನವಾಯಿತು. ಕುಪ್ಪಸ್ವಾಮಿ ಎಂದು ನಾಮಕರಣ ಮಾಡಿದರೂ, ಮುಂದೆ ಆ ಮಗು ಹೆಸರು ವಾಸಿಯಾದದ್ದು ಶ್ರೀನಿವಾಸ ಐಯ್ಯಂಗಾರ್ಯರೆಂಬ ಹೆಸರಿನಿಂದ.

ದುರದೃಷ್ಟವಶಾತ್‌ ತಮ್ಮ ಆರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಶ್ರೀನಿವಾಸ ಐಯ್ಯಂಗಾರ್ಯರು, ಚಿಕ್ಕಪ್ಪ ವರದದೇಶಿಕಾಚಾರ್ಯರ ಮನೆಯಲ್ಲಿ ಬೆಳೆದರು. ವರದದೇಶಿಕಾಚಾರ್ಯರು ವೇದಾಂತ, ತರ್ಕ, ವ್ಯಾಕರಣ, ಸಂಸ್ಕೃತ, ಜ್ಯೋತಿಷ್ಯ, ಸಾಹಿತ್ಯಗಳಲ್ಲಿ ಪಂಡಿತರಾಗಿದ್ದರಲ್ಲದೆ, ಆಯುರ್ವೇದ ವೈದ್ಯರೂ ಆಗಿದ್ದರು. ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ, ವೀಣೆ ಸಾಂಬಯ್ಯನವರ ಶಿಷ್ಯರಾಗಿದ್ದ ದೇಶಿಕಾಚಾರ್ಯರು, ಎಂಟು ವರ್ಷದ ಶ್ರೀನಿವಾಸನಿಗೆ ಹಾಡುಗಾರಿಕೆಯನ್ನು ಪ್ರಾರಂಭ ಮಾಡಿದರು. ಶ್ರೀಗಿರಿಪುರದಲ್ಲಿದ್ದ ಸೋದರಮಾವ ಕುಪ್ಪಾಚಾರ್ಯರಿಂದ ಪಿಟೀಲನ್ನು ಕಲಿತು, ಅನಂತರ ಕೊಳ್ಳೆಗಾಲದ ಕೃಷ್ಣಭಾಗವತರಿಂದ ಸಂಗೀತವನ್ನು ಮುಂದುವರೆಸಿದರು. ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ಹತ್ತು ವರ್ಷದ ಬೆಳಕವಾಡಿಯ ಲಕ್ಷ್ಮಮ್ಮನವರನ್ನು ಲಗ್ನವಾದರು. ಆದರೆ ದೈವೇಚ್ಛೆ ಬೇರೆಯೇ ಆಗಿದ್ದಿತು. ೧೯೧೩ರಲ್ಲಿ ಲಕ್ಷ್ಮಮ್ಮನವರು ಪ್ಲೇಗ್‌ ರೋಗಕ್ಕೆ ಬಲಿಯಾಗಿ, ತಮ್ಮ ಮೂರು ಮಕ್ಕಳು ಶ್ರೀರಂಗಮ್ಮ, ಶ್ರೀನಿವಾಸ ರಂಗಾಚಾರ್ಯ ಮತ್ತು ವರದರಾಜರನ್ನ ತಬ್ಬಲಿ ಮಾಡಿ, ಮೃತರಾದರು, ಮೂರು ವರ್ಷಗಳ ನಂತರ ಶ್ರೀನಿವಾಸ ಐಯ್ಯಂಗಾರ್ಯರು ಅಲಮೇಲಮ್ಮನವರನ್ನು ಮರು ಲಗ್ನವಾದರು. ಇವರಿಗೆ ಹುಟ್ಟಿದ ಮಕ್ಕಳೇ ನಾಗರತ್ನ ಮತ್ತು ರಂಗಸ್ವಾಮಿ.

ಈ ಹೊತ್ತಿಗಾಗಲೇ ಶ್ರೀನಿವಾಸ ಐಯಂಗಾರ್ಯರು ಸಂಗೀತ ಕಚೇರಿಗಳನ್ನು ನೀಡಿ, ಹೆಸರುವಾಸಿಯಾಗಿದ್ದರು ಆಗಿನ ಕಾಲದಲ್ಲಿ ಎಲ್ಲ ಕಡೆಗೂ ರೈಲಿನ ಸೌಲಭ್ಯವಿರಲಿಲ್ಲ. ಸ್ವಲ್ಪ ದೂರ ರೈಲಿನಲ್ಲಿ ಪ್ರಯಾಣ ಮಾಡಿ, ನಂತರ ಬಂಡಿಯಲ್ಲಿ ಪ್ರಯಾಣ ಮುಂದುವರೆಸುವ ವಾಡಿಕೆಯಿತ್ತು. ಹೀಗೆ ಗದ್ವಾಲ್‌, ವಾನಪರ್ತಿ, ಆತ್ಮಾಕೂರ್‌, ಮತ್ತು ತೆಲುಗು ಸೀಮೆಯ ಇನ್ನೂ ಅನೇಕ ಸಂಸ್ಥಾನಗಳಲ್ಲಿ ಕಚೇರಿಗಳನ್ನು ನಡೆಸಿ, ಎಲ್ಲಾ ಕಡೆಯೂ ಶಾಲು ಜೋಡಿ ಮತ್ತು ೧೦೧/-ರೂಗಳ ಸಂಭಾವನೆಯೊಂದಿಗೆ ಗೌರವಿಸಲ್ಪಟ್ಟಿದ್ದರು. ಕೆಲವು ಕಡೆ ಕಂಠೀಹಾರದಿಂದಲೂ ಸನ್ಮಾನಿತರಾಗಿದ್ದರು.

ಮೈಸೂರಿನಲ್ಲಿ ಆಗ ವೀಣೆ ಶೇಷಣ್ಣ, ಭಕ್ಷಿ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ ಮುಂತಾದ ಇನ್ನೂ ಅನೇಕ ಸಂಗೀತ ದಿಗ್ಗಜರುಗಳು ಇದ್ದಂಥ ಕಾಲ. ಶ್ರೀನಿವಾಸ ಐಯ್ಯಂಗಾರ್ಯರು ವೀಣಾ ಭಕ್ಷಿ ಸುಬ್ಬಣ್ಣನವರ ಶಿಷ್ಯರಾಗಬೇಕೆಂಬ ಆಸೆಯಿಂದ, ೧೯೧೨ರಲ್ಲಿ ಮೈಸೂರಿಗೆ ಬಂದರು. ಸುಬ್ಬಣ್ಣನವರು ಸಂತೋಷದಿಂದ ಇವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ನಾಲ್ಕು ವರ್ಷಗಳ ಕಾಲ ಸುಬ್ಬಣ್ಣನವರ ಗುರುಕುಲ ವಾಸದಲ್ಲಿ ಸಂಗೀತವನ್ನು ಮತ್ತಷ್ಟು ವೃದ್ಧಿ ಮಾಡಿಕೊಂಡು ಒಬ್ಬ ಅತ್ಯುತ್ತಮ ಸಂಗೀತಗಾರರೆನಿಸಿಕೊಂಡರು. ಸುಬ್ಬಣ್ಣನವರಿಗಂತೂ ಶಿಷ್ಯನ ಸಂಗೀತವೆಂದರೆ ಹೆಗ್ಗಳಿಕೆ. ಅಂದಿನ ದೊರೆಗಳಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಹತ್ತಿರ ಶ್ರೀನಿವಾಸ ಐಯ್ಯಂಗಾರ್ಯರನ್ನು ಕರೆದುಕೊಂಡು ಹೋಗಿ ಶಿಷ್ಯನ ಹಾಡುಗಾರಿಕೆಯನ್ನು ದೊರೆಗಳು ಕೇಳಬೇಕೆಂದು ವಿನಂತಿಸಿಕೊಂಡರು. ಮಹಾರಾಜರು ಶೇಷಣ್ಣ, ಸುಬ್ಬಣ್ಣನವರ ಮಾತುಗಳನ್ನು ತಳ್ಳಿಹಾಕುತ್ತಿರಲಿಲ್ಲ. ಒಡೆಯರ ಸಮ್ಮುಖದಲ್ಲಿ ಐಯ್ಯಂಗಾರ್ಯರ ಮೂರು ಕಚೇರಿಗಳು ನಡೆದವು. ಇವರ ವಿದ್ವತ್ತಿಗೆ ಮೆಚ್ಚಿ, ೧೯೧೬ರಲ್ಲಿ ನಾಲ್ವಡಿ ಕೃಷ್ಣರಾಜರು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ಯರನ್ನು ೧೫ ರೂಗಳ ಸಂಬಳದ ಮೇಲೆ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡರು. ಆಸ್ಥಾನ ವಿದ್ವಾಂಸರಾದ ನಂತರ, ೧೯೧೭ರಲ್ಲಿ ಐಯ್ಯಂಗಾರ್ಯರು, ಅದುವರೆಗೂ ಬೆಳಕವಾಡಿಯಲ್ಲೇ ನೆಲೆಸಿದ್ದ ತಮ್ಮ ಸಂಸಾರವನ್ನು ಮೈಸೂರಿಗೆ ಕರೆಸಿಕೊಂಡರು.

ಅರಮನೆಯ ಚಂದ್ರ ಶಾಲಾ ತೊಟ್ಟಿಯಲ್ಲಿ, ಮಹಾರಾಜರು ಸಂಗೀತ ಶಾಲೆಯನ್ನು ಪ್ರಾರಂಭಿಸಿ, ಸಾಮಾನ್ಯ ಜನರು ಸಂಗೀತವನ್ನು ಕಲಿಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು. ಈ ಸಂಗೀತ ಶಾಲೆಯಲ್ಲಿ ಹಿರಿಯ ವಿದ್ವಾಂಸರು ಪಾಠ ಮಾಡುತ್ತಿದ್ದರು. ಅವರುಗಳಲ್ಲಿ ಶ್ರೀನಿವಾಸ ಐಯ್ಯಂಗಾರ್ಯರು ಒಬ್ಬರು. ಇದರೊಂದಿಗೆ ಅರಮನೆ ವಾದ್ಯವೃಂದದಲ್ಲೂ ಭಾಗವಹಿಸುತ್ತಿದ್ದರು. ಐಯ್ಯಂಗಾರ್ಯರಿಗೆ ಮಧ್ಯಾಹ್ನದ ಹೊತ್ತು ನಿದ್ದೆ ಮಾಡುವ ಪರಿಪಾಠವಿತ್ತು. ಇದನ್ನು ತಪ್ಪಿಸಲು ಆಸ್ಥಾನದಲ್ಲಿ ಕನ್ನಡ ಪಂಡಿತರಾಗಿದ್ದ, ಅವರ ಸ್ನೇಹಿತರು ಆನವಟ್ಟಿಕ ರಾಮರಾಯರು, ಐಯ್ಯಂಗಾರ್ಯರನ್ನು ಕಿವುಡರು ಮತ್ತು ಮೂಗರ ಶಾಲೆಯಲ್ಲಿ ಸಂಗೀತ ಅಧ್ಯಾಪಕರನ್ನಾಗಿ ಸೇರಿಸಿದರು. ಅನಂತರ ೧೯೨೮ರಲ್ಲಿ ಮೈಸೂರು ಸರ್ಕಾರದ ತರಬೇತಿ ಕಾಲೇಜಿಗೆ ವರ್ಗವಾಗಿ ೧೯೩೬ರವರೆಗೆ ಸೇವೆ ಸಲ್ಲಿಸಿದರು.

ಶ್ರೀನಿವಾಸ ಐಯ್ಯಂಗಾರ್ಯರಿಗೆ ಹಾಡುಗಾರಿಕೆ, ಪಿಟೀಲುಗಳಲ್ಲದೆ ಗೋಟುವಾದ್ಯವನ್ನು ನುಡಿಸುವುದರಲ್ಲೂ ಪರಿಶ್ರಮವಿತ್ತು. ಆಗ ಮೈಸೂರಿನಲ್ಲಿ ಗೋಟುವಾದ್ಯ ಅಷ್ಟು ಪ್ರಚಾರದಲ್ಲಿರಲಿಲ್ಲ. ಅಂಥ ಒಳ್ಳೆಯ ವಾದ್ಯವನ್ನು ಎಲ್ಲರೂ ಕಲಿಯಲೆನ್ನುವ ದೃಷ್ಟಿಯಿಂದ, ಮುತ್ತಯ್ಯ ಭಾಗವತರು ಗೋಟುವಾದ್ಯ ನುಡಿಸುವ ಸ್ಪರ್ಧೆಯನ್ನು ಏರ್ಪಡಿಸಿದರು. ಆಗ ಬಹಳಷ್ಟು ವಿದ್ವಾಂಸರು ಈ ವಾದ್ಯವನ್ನು ಕಲಿತು ನುಡಿಸಿದರು. ಶ್ರೀನಿವಾಸ ಐಯ್ಯಂಗಾರ್ಯರೇ ಆ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದು, ಚಿನ್ನದ ಸರ ಮತ್ತು ಪದಕದೊಂದಿಗೆ ಸನ್ಮಾನಿತರಾದರು. ಮುಂದೆ ೧೯೩೪ರಲ್ಲಿ, ಗುಬ್ಬಿ ವೀರಣ್ಣನವರ ಸದಾರಮೆ ಚಿತ್ರದ, ಹಿನ್ನೆಲೆ ಸಂಗೀತಕ್ಕೆ ಗೋಟುವಾದ್ಯವನ್ನು ನುಡಿಸಿದರು. ಇದರ ಧ್ವನಿ ಮುದ್ರಣಕ್ಕೆ, ಬೊಂಬಾಯಿಗೆ ಹೋಗಿ, ಬರುವ ಖರ್ಚು ನೀಡಿ ಜೊತೆಗೆ ೧೦೦೦/ ರೂ.ಗಳ ಸಂಭಾವನೆಯನ್ನು ಕೊಟ್ಟು ಐಯ್ಯಂಗಾರ್ಯರನ್ನು ಕರೆಸಿಕೊಂಡರು.

ಶ್ರೀನಿವಾಸ ಐಯ್ಯಂಗಾರ್ ಅವರು ಮೈಸೂರಲ್ಲದೆ ಮದರಾಸು, ತಿರುಚಿರಾಪಳ್ಳಿ, ರಾಮೇಶ್ವರಂ, ಮಧುರೈ, ದೇವಕೋಟೆ ಮುಂತಾದ ಅನೇಕ ಸಂಸ್ಥಾನಗಳಲ್ಲಿ ಕಚೇರಿಗಳನ್ನು ನಡೆಸಿ, ಬಿರುದು ಬಹುಮಾನಗಳನ್ನು ಪಡೆದಿದ್ದರು. ತೋಡಿ ಮತ್ತು ಕಾಂಬೋಧಿ ರಾಗಗಳು ಇವರ ಅಚ್ಚುಮೆಚ್ಚಿನ ರಾಗಗಳು. ಅವರ ಆಲಾಪನೆಯಲ್ಲಿ, ಪುನರಾವರ್ತನೆಗಳಿಲ್ಲದ ಸಂಗತಿಗಳೊಂದಿಗೆ, ಆ ರಾಗದ ಒಂದು ಸಂಪೂರ್ಣ ಚಿತ್ರಣವನ್ನು ತೋರಿಸುವುದು. ಶ್ರೀನಿವಾಸ ಐಯ್ಯಂಗಾರ್ಯರ ವೈಶಿಷ್ಟ್ಯತೆ ಎಂದು ಅವರ ಸಂಗೀತವನ್ನು ಕೇಳಿದವರು ನೆನಪಿಸಿಕೊಳ್ಳುವುದುಂಟು. ಒಮ್ಮೆ ಕೊಟ್ಟಿಯೂರಿನಲ್ಲಿ ಒಂದು ಮದುವೆ ಸಮಾರಂಭ. ಅಲ್ಲಿ ಐಯ್ಯಂಗಾರ್ಯರದೇ ಹಾಡುಗಾರಿಕೆ. ಕಾರೈಕುಡಿ ಸಹೋದರರಲ್ಲದೆ ಇನ್ನೂ ಅನೇಕ ಸಂಗೀತ ವಿದ್ವಾಂಶರು ಉಪಸ್ಥಿತರಿದ್ದರು. ರಾಗ, ತಾನವನ್ನ ವಿಸ್ತರಿಸಿ, ಇನ್ನೇನು ಪಲ್ಲವಿಯನ್ನು ಹಾಡಬೇಕೆನ್ನುವಷ್ಟರಲ್ಲಿ, ಕಾರೈಕುಡಿ ಸಹೋದರಲ್ಲೊಬ್ಬರಾದ ಸಾಂಬಶಿವ ಐಯ್ಯರ್ ರವರು ವೇದಿಕೆಗೆ ಬಂದರು. ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದ ಹಾಗೆ, ಒಂದು ಜರತಾರಿ ಅಂಗವಸ್ತ್ರವನ್ನು ಶ್ರೀನಿವಾಸ ಐಯ್ಯಂಗಾರ್ಯರಿಗೆ ಹೊದ್ದಿಸಿ, “ಮೈಸೂರಿನ ಮಧುರಾಯಿ ಪುಷ್ಪವನಂ” ಅಂತ ಹೊಗಳಿದರು.

ಮೈಸೂರಿನ ಕಲಾ ರಸಿಕರು ರಂಗಾಚಾರ್ಲು ಸ್ಮಾರಕ ಭವನದಲ್ಲಿ ಒಂದು ಸಮಾರಂಭವನ್ನು ಏರ್ಪಡಿಸಿ, ಶ್ರೀನಿವಾಸ ಐಯ್ಯಂಗಾರ್ಯರಿಗೆ ಗಜಲಕ್ಷಿ ವಿಗ್ರಹವನ್ನು ಕೆತ್ತಿದ್ದ ಪದಕದೊಂದಿಗೆ ಬಂಗಾರದ ಸರವನ್ನು ವೀಣೆ ಶೇಷಣ್ಣನವರಿಂದ ತೊಡಿಸಿ ಸನ್ಮಾನಿಸಿದರು. ಆಗಿನ ದಿನಗಳಲ್ಲಿ ಶೇಷಣ್ಣ, ಸುಬ್ಬಣ್ಣ ಮುಂತಾದವರ ಮನೆಗಳಲ್ಲಿ ಸ್ಥಳೀಯ ಮತ್ತು ಪರಸ್ಥಳಗಳಿಂದ ಬರುತ್ತಿದ್ದ ವಿದ್ವಾಂಸರ ಕಚೇರಿಗಳು ನಡೆಯುತ್ತಿದ್ದವು. ಹಾಗೊಮ್ಮೆ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ಯರು ಶೇಷಣ್ಣನವರ ಮನೆಗೆ ಬಂದಾಗ, ಶ್ರೀನಿವಾಸ ಐಯಂಗಾರ್ಯರಿಂದ ಹಾಡಿಸಿ “ನಮ್ಮ ಮೈಸೂರು ಸಂಗೀತ ಕೇಳಿ ಐಯ್ಯಂಗಾರ್ಯರೇ” ಅಂತ ಜಂಭದಿಂದ ಶೇಷಣ್ಣನವರು ಹೇಳಿಕೊಂಡರಂತೆ. ಅಂದು ಶ್ರೀನಿವಾಸ ಐಯಂಗಾರ್ಯರ ಹಾಡುವಿಕೆಗೆ ಪಿಟೀಲಿನಲ್ಲಿ ವೆಂಕಟರಮಣ ಮತ್ತು ಮುತ್ತುಸ್ವಾಮಿ ತೇವರ್ ಮೃದಂಗದಲ್ಲಿ ಸಹಕರಿಸಿದರಂತೆ. ಕಚೇರಿ ಆದ ಮೇಲೆ “ನಾಮಕ್ಕೆ ನಾಮಾನೇ ಎದುರಾಯಿತಲ್ಲಾ” ಅಂತ ಶೇಷಣ್ಣನವರು ತಮಾಷೆ ಮಾಡಿದ್ದನ್ನು ಉಪಸ್ಥಿತರಿದ್ದ ಹಲವಾರು ವಿದ್ವಾಂಸರು ನೆನಪಿಸಿಕೊಂಡಿರುವುದುಂಟು.

ಇನ್ನೊಮ್ಮೆ ಶೇಷಣ್ಣನವರ ಮನೆಯಲ್ಲಿ ಶ್ರೀನಿವಾಸ ಐಯ್ಯಂಗಾರ್ಯರು ಭೈರವಿ ರಾಗವನ್ನು ಹಾಡಿದರು. ಆ ಇಂಪು ಮತ್ತು ವಿದ್ವತ್ತಿಗೆ ಮೆಚ್ಚಿ ಶೇಷಣ್ಣನವರು ಸಂತೋಷದಿಂದ “ನಿನ್ನೆ ನನ್ನದಾಗಿದ್ದ ಭೈರವಿ ಇವತ್ತು ನಿಂದಾಯಿತಲ್ಲೋ ಶ್ರೀನಿವಾಸ” ಅಂದರಂತೆ. ಅಲ್ಲೇ ಇದ್ದ ವೀಣೆ ವೆಂಕಟಗಿರಿಯಪ್ಪನವರು ತಮ್ಮ ಉಂಗುರವನ್ನು ತೆಗೆದು “ಶ್ರೀ ವೈಷ್ಣವರು ತುಂಬಾ ಚೆನ್ನಾಗಿ ಹಾಡಿದ್ದಾರೆ ಇದನ್ನು ಅವರಿಗೆ ತೊಡಿಸಿ” ಅಂತ ಶೇಷಣ್ಣನವರಿಗೆ ಕೊಟ್ಟರಂತಗೆ. ಚಿಕ್ಕವರೇ ಆಗಲಿ ದೊಡ್ಡವರೇ ಆಗಲಿ, ವಿದ್ವತ್‌ ಪ್ರದರ್ಶನವಾದಾಗ, ಅಂದಿನ ಹಿರಿಯ ವಿದ್ವಾಂಸರು, ತಲೆದೂಗಿ, ಪ್ರಶಂಸಿಸಿ, ಉತ್ತೇಜನವನ್ನು ನೀಡಿ, ಬಹುಮಾನಗಳನ್ನು ಕೊಡುತ್ತಿದ್ದ ಕಾಲವದು.

೧೯೨೬ರಲ್ಲಿ ಶರ್ಮ ಸಹೋದರರು ಮೈಸೂರಿಗೆ ಬಂದಿದ್ದರು. ಒಬ್ಬರು ವೀಣೆ ಮತ್ತೊಬ್ಬರು ಪಿಟೀಲು ನುಡಿಸುತ್ತಿದ್ದರು. ದ್ವಂದ್ವ ಕಚೇರಿಗಳನ್ನು ನೀಡುತ್ತಿದ್ದರು. ಇದರಿಂದ ಪ್ರೇರಿತರಾಗಿ ಶ್ರೀನಿವಾಸ ಐಯ್ಯಂಗಾರ್ಯರು ಮತ್ತು ಭೈರವಿ ಲಕ್ಷ್ಮಿ ನಾರಾಣಪ್ಪನವರು, ಪಿಟೀಲು ಮತ್ತು ವೀಣೆಯನ್ನು ನುಡಿಸಿ ದ್ವಂಧ್ವ ಕಚೇರಿಗಳನ್ನು ನೀಡಿ, ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ, ಮೈಸೂರಿನ ಪ್ರತಿಷ್ಠಿತ, ವಿದ್ವಾಂಸರನೇಕರು ಪಾಲ್ಗೊಂಡಿದ್ದರು. ಅದರಲ್ಲಿ ಐಯ್ಯಂಗಾರ್ಯರು ಒಬ್ಬರು. ಮಹಾತ್ಮಾ ಗಾಂಧಿ ಮತ್ತು ಇತರ ಗಣ್ಯವ್ಯಕ್ತಿಗಳ ಸಮಕ್ಷಮದಲ್ಲಿ ಐಯ್ಯಂಗಾರ್ಯರು ಹಾಡಿ, ಪ್ರಶಂಸೆ ಪಡೆದಿದ್ದರು.

ಆಗಿನ ಕಾಲದ ನಾಟಕಗಳು ಶಾಸ್ತ್ರೀಯ ಸಂಗೀತದಿಂದ ತುಂಬಿ ತುಳುಕುತ್ತಿದ್ದವು. ಸಾಧಾರಣವಾಗಿ ಮುಖ್ಯ ಪಾತ್ರಗಳನ್ನು ಸಂಗೀತಗಾರರೇ ಅಭಿನಯಿಸುತ್ತಿದ್ದರು. ನಾಟಕಗಳಲ್ಲಿ ಹಾಡುಗಳ ಮುಖಾಂತರವೇ ತಮ್ಮ ಅನಿಸಿಕೆಗಳನ್ನು ತೋಡಿಕೊಳ್ಳುತ್ತಿದ್ದರು. ಆ ಪಾತ್ರಧಾರಿಗಳು. ರಾಗಮಾಲಿಕೆಗಳಲ್ಲಿ ವಾದವಿವಾದಗಳು ನಡೆಯುತ್ತಿದ್ದವು. ಅಷ್ಟು ಶಾಸ್ತ್ರೀಯವಾಗಿಯೂ, ಉತ್ಕೃಷ್ಟವಾಗಿಯೂ ಇರುತ್ತಿದ್ದವು ಅಂದಿನ ನಾಟಕಗಳು.

ಶ್ರೀನಿವಾಸ ಐಯ್ಯಂಗಾರ್ಯರು ಒಳ್ಳೆಯ ನಟರು. ಚಿಕ್ಕ ವಯಸ್ಸಿನಿಂದಲೇ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಬೆಳಕವಾಡಿಯಲ್ಲಿ ಒಂದು ನಾಟಕ ಕಂಪೆನಿಯನ್ನು ಪ್ರಾರಂಭ ಮಾಡಿ, ಹೆಚ್ಚಾಗಿ ಪೌರಾಣಿಕ ನಾಟಕಗಳನ್ನೇ ಆಡುತ್ತಿದ್ದರು. ಅವುಗಳಲ್ಲಿ ಐಯ್ಯಂಗಾರ್ಯರೇ ನಾಯಕನ ಪಾತ್ರವನ್ನು ಅಭಿನಯಿಸುತ್ತಿದ್ದುದು. ಮೈಸೂರಿಗೆ ಬಂದ ನಂತರ ಇವರ ನಟನೆಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿತು. ಅರಮನೆ ನಾಟಕ ಕಂಪೆನಿಯಲ್ಲಿ ಸೇರುವ ಮೊದಲು ಎ.ವಿ. ವರದಾಚಾರ್ ಕಂಪನಿಯಲ್ಲಿ ಪಾತ್ರ ಮಾಡುತ್ತಿದ್ದರು. ಅರಮನೆಗೆ ಸೇರಿದ್ದ ಶಾಕುಂತಲ ನಾಟಕ ಕರ್ನಾಟಕ ಸಭೆಯಲ್ಲಿ ಚಿಕ್ಕರಾಮರಾಯರೊಂದಿಗೆ ಬಹಳಷ್ಟು ನಾಟಕಗಳಲ್ಲಿ ಭಾಗವಹಿಸಿದ್ದರು. ಇವರಿಬ್ಬರ ಜೋಡಿ ಅದ್ಭುತವಾಗಿರುತ್ತಿತ್ತೆಂದು ನೋಡಿರುವವರು ನೆನೆಸಿಕೊಳ್ಳುವುದುಂಟು. ಶ್ರೀನಿವಾಸ ಐಯಂಗಾರ್ಯರು ಅರ್ಜುನನಾದರೆ, ಚಿಕ್ಕರಾಮರಾಯರು ಬಬ್ರುವಾಹನನಾಗುತ್ತಿದ್ದರು. ಅಥವಾ ಐಯ್ಯಂಗಾರ್ಯರು ರಾಮನಾದರೆ, ರಾಮರಾಯರು ದಶರಥನಾಗುತ್ತಿದ್ದರು. ೧೯೨೪ರವರೆಗೂ ನಟಿಸಿ, ನಾಟಕಗಳಿಂದ ನಿವೃತ್ತಿ ಹೊಂದಿದರು. ವೀರಸಿಂಹ ಚರಿತ್ರೆ, ಬಬ್ರುವಾಹನ, ಸುಧನ್ವ ಚರಿತ್ರೆ, ಗುಳೆಬಕಾವಲಿ, ವಿರಾಟಪರ್ವ, ಧ್ರುವಚರಿತ್ರೆ, ರುಕ್ಮಾಂಗದ ಚರಿತ್ರೆ, ಅಭಿಜ್ಞಾನ ಶಾಕುಂತಲ, ಮುಂತಾದ ನಾಟಕಗಳಲ್ಲಿ ನಾಯಕ ನಟನಾಗಿ ಅಭಿನಯಿಸಿ, ಜನರ ಮೆಚ್ಚುಗೆಯನ್ನು ಪಡೆದಿದ್ದರು. ಒಮ್ಮೆ ಇವರ ನಾಟಕ ಕಂಪೆನಿ ಮದರಾಸಿನಲ್ಲಿ ಪ್ರದರ್ಶನ ನೀಡಿದಾಗ, ಶ್ರೀನಿವಾಸ ಐಯ್ಯಂಗಾರ್ಯರ ಅಭಿನಯಕ್ಕೆ ಮೆಚ್ಚಿ, ಬೆಳ್ಳಿ ಲೋಟವನ್ನಿತ್ತು ಸನ್ಮಾನಿಸಿದ್ದರು.

ಇವರು ಬೆಳಕವಾಡಿಯಿಂದ ಮೈಸೂರಿಗೆ ಬಂದ ನಂತರವೇ ವಾಗ್ಗೇಯಕಾರರಾಗಿದ್ದು. ಕಿವುಡರು ಮತ್ತು ಮೂಗರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ಸಲುವಾಗಿ, ಪುಟ್ಟ ಹಾಡುಗಳನ್ನು ರಚಿಸಿದರು. ಮುಂದೆ ವರ್ಣಗಳು ಮತ್ತು ಕೃತಿಗಳು ರೂಪ ತಾಳಿದವು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪಾಂಡಿತ್ಯವಿದ್ದಿದ್ದರಿಂದ, ಕೃತಿಗಳು ಆ ಭಾಷೆಗಳಲ್ಲಿವೆ. “ಶ್ರೀನಿವಾಸ” ಇವರು ಬಳಸಿರುವ ಅಂಕಿತ.

ಮಧುರೈ ಪೊನ್ನುಸ್ವಾಮಿಯು ನಾಗಸ್ವರದಲ್ಲಿ ನುಡಿಸಿದ ಸಿಂಹೇಂದ್ರ ಮಧ್ಯಮ ರಾಗಾಲಾಪನೆಯಿಂದ ಪ್ರೇರಿತರಾಗಿ “ಮನಸುಲೋನಿ” ಎಂಬ ಕೃತಿಯನ್ನು ಅದೇ ರಾಗದಲ್ಲಿ ರಚಿಸಿದ್ದಾರೆ. ಸರಸ್ವತಿ ರಾಗದಲ್ಲಿ ರಚಿತವಾಗಿರುವ “ಏಪಾಪಮು” ಕೃತಿ ರೂಪ ತಾಳಿದ್ದು, ತಂದೆಯ ನಂತರ ಸಾಕಿ ಸಲುಹಿದ ಚಿಕ್ಕಪ್ಪ ನಿಧನರಾದಾಗ, ದುಃಖಸ್ತರಾಗಿದ್ದಾಗ ರಚಿಸಿರುವ ಕೃತಿ ಎಂದು ಅದರ ಸಾಹಿತ್ಯದಿಂದಲೇ ತಿಳಿಯುತ್ತದೆ. ಹೀಗೆ ಹಲವಾರು ಸನ್ನಿವೇಶಗಳಿಂದ ಪ್ರೇರಿತವಾಗಿ, ಐಯ್ಯಂಗಾರ್ಯರು ಕೃತಿಗಳನ್ನು ರಚಿಸಿದರು. ಬಹಳ ವಿಶೇಷವಾದ ಸಂಗತಿಯೆಂದರೆ ಇವರು ೭೨ ಮೇಳ ಕರ್ತರಾಗಗಳೆಲ್ಲದರಲ್ಲೂ ಕೃತಿಗಳನ್ನು ರಚನೆ ಮಾಡಿದ್ದಾರೆ.

ಒಮ್ಮೆ ನಾಗಸ್ವರ ವಿದ್ವಾಂಸರಾದ ಮಧುರೈ ಪೊನ್ನುಸ್ವಾಮಿಯವರು ಮೈಸೂರು ಸಂಸ್ಥಾನಕ್ಕೆ ಭೇಟಿಯಿತ್ತಾಗ, ೭೨ ಮೇಳ ಕರ್ತರಾಗಗಳಲ್ಲಿ ಕೆಲವು ಮಾತ್ರ ಕೃತಿ ರಚನೆಗೆ ಯೋಗ್ಯವಾಗಿದ್ದು, ಮಿಕ್ಕವು ಉಪಯುಕ್ತವಿಲ್ಲವೆಂದೂ, ಬೇಡವಾದ ರಾಗಗಳನ್ನು ತೆಗೆದುಬಿಡಬೇಕೆಂದು ಹೇಳಿದರು. ಮೈಸೂರು ಅರಸರಾಗಿದ್ದ, ನಾಲ್ವಡಿ ಕೃಷ್ಣರಾಜ ಒಡೆಯರು ಇದರಿಂದ ಬೇಸರಗೊಂಡು, ಎಲ್ಲಾ ೭೨ ಮೇಳ ಕರ್ತರಾಗಗಳಲ್ಲೂ ಕೃತಿಗಳನ್ನು ರಚನೆ ಮಾಡಬೇಕೆಂದು ಆಸ್ಥಾನ ವಿದ್ವಾಂಸರಿಗೆಲ್ಲಾ ಆದೇಶಿದರು, ಹೀಗೆ ೭೨ ರಾಗಗಳಲ್ಲೂ ಕೃತಿಗಳನ್ನು ರಚನೆ ಮಾಡಿ, ಮಹಾರಾಜರಿಗೆ ಸಮರ್ಪಿಸಿದ ಮೊದಲ ವಿದ್ವಾಂಸರು ಬೆಳಕವಾಡಿ ಶ್ರೀನಿವಾಸ ಐಯಂಗಾರ್ಯರು. ಆಗಿನ ಕಾಲದಲ್ಲಿ ರಾಜ ನಿಷ್ಠೆ ಬಹಳ ಇತ್ತು. ಕೃತಿಗಳ ಒಂದು ಪ್ರತಿಯನ್ನು ತಮ್ಮಲ್ಲಿ ಇಟ್ಟುಕೊಂಡು ಮತ್ತೊಂದನ್ನು ಅರಮನೆಗೆ ನೀಡಬೇಕೆಂದು ಆಲೋಚಿಸಲಿಲ್ಲ. ಇದ್ದ ಒಂದು ಪ್ರತಿಯನ್ನು ಮಹಾ ಪ್ರಭುಗಳಿಗೆ ಅರ್ಪಿಸಿದ್ದು, ಇಂದು ಅವು ನಮಗೆ ಲಭ್ಯವಾಗದಿರುವುದು ಶೋಚನೀಯ. ಇವರು ೭೨ ಮೇಳಕರ್ತರಾಗಗಳಲ್ಲಿ ರಚನೆ ಮಾಡಿ, ಅರಮನೆಗೆ ಅರ್ಪಿಸಿದ್ದಕ್ಕೆ ಸಾಕ್ಷಿ, ಅರಮನೆ ಪತ್ರಾಗಾರದಲ್ಲಿ ಸಿಗುವ ಮಾಹಿತಿಗಳಿಂದ ಮಾತ್ರ. ೫ನೇ ಏಪ್ರಿಲ್‌ ೧೯೨೬ ಮತ್ತು ೩ನೇ ಮೇ ೧೯೨೭ ರಂದು ಸ್ವತಃ ಭಕ್ಷಿಯವರೆ ಮಹಾರಾಜರಿಗೆ ಬರೆದ ಪತ್ರಗಳಿಂದ ಅಲ್ಲದೆ ಬೇಸಿಗೆ ಅರಮನೆಯಲ್ಲಿ ಸ್ವತಃ ಮಹಾರಾಜರೇ, ಐಯ್ಯಂಗಾರ್ಯರೊಡನೆ ೭೨ ರಾಗಗಳು ಮತ್ತು ಕೃತಿಗಳ ಬಗ್ಗೆ ಚರ್ಚಿಸಿ, ಶ್ರೀನಿವಾಸ ಐಯಂಗಾರ್ಯರು ಪಿಟೀಲಿನಲ್ಲಿ ಅವುಗಳನ್ನು ನುಡಿಸಿ ತೋರಿಸಿದ್ದರು. ಮಹಾರಾಜರು ಮೆಚ್ಚಿ ೧೦೦೦/- ರೂಗಳ ಬಹುಮಾನವನ್ನೂ ನೀಡಿದ್ದರೆಂದು ದಾಖಲೆಗಳಿಂದ ತಿಳಿದು ಬರುತ್ತವೆ.

ಇವರು ಸಂಗೀತದ ಶಾಸ್ತ್ರ ಮತ್ತು ಪ್ರಯೋಗ ಭಾಗಗಳೆರಡೂ ಒಳಗೊಂಡಿರುವಂತೆ “ಗಾನಾಮೃತ” ಎಂಬ ಪುಸ್ತಕವನ್ನು ಕನ್ನಡದಲ್ಲಿ ಬರೆದರು. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಪಯೋಗವಾಗಬೇಕೆಂದು ಯೋಚಿಸಿ, ಪಬ್ಲಿಕ್‌ ಇನ್‌ಸ್ಟ್ರಕ್ಷನ್ನಿನ ನಿರ್ದೇಶಕರಾಗಿದ್ದ ಎನ್‌.ಎಸ್‌.ಸುಬ್ಬರಾಯರು ಶ್ರೀನಿವಾಸ ಐಯಂಗಾರ್ಯರಿಂದ ಈ ಪುಸ್ತಕವನ್ನು ಬರೆಸಿದರು. ದುರದೃಷ್ಟವಶಾತ್‌ ಈ ಪುಸ್ತಕ ಪ್ರಕಟಣೆಯಾಗುವ ಮೊದಲೇ ಐಯ್ಯಂಗಾರ್ಯರು ನಿಧನರಾದರು. ಅವರ ಮಗ ಶ್ರೀನಿವಾಸ ಐಯಂಗಾರ್ಯರು, ಪುಸ್ತಕದ ಮೊದಲ ಪ್ರತಿಯನ್ನು ಪರಿಶೋಧಿಸಿ, ೧೯೩೬ರಲ್ಲಿ ಅದನ್ನು ಪ್ರಕಟಿಸಿದರು. ಪುಸ್ತಕ ಬರೆದಿದ್ದಕ್ಕೆ ಲೇಖರಿಗೆ, ಇಲಾಖೆಯಿಂದ ೪೦೦ ರೂ. ಗಳ ಸಂಭಾವನೆ ನೀಡಲಾಯಿತು.

ಇವರ ಶಿಷ್ಯರನೇಕರಲ್ಲಿ ಅವರ ಪುತ್ರರು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್, ವರದರಾಜ ಐಯ್ಯಂಗಾರ್ (ಇಬ್ಬರೂ ಆಸ್ಥಾನ ವಿದ್ವಾಂಸರು), ರಂಗಸ್ವಾಮಿ ಐಯ್ಯಂಗಾರ್, ಪಿಟೀಲು ವೆಂಕಟರಮಣ, ಸುಬ್ಬುಕೃಷ್ಣಯ್ಯ, ರಾಮಯ್ಯರ್ ಮುಂತಾದವರು ಪ್ರಮುಖರು.

ಶ್ರೀನಿವಾಸ ಐಯ್ಯಂಗಾರ್ಯರು ತಮ್ಮ ೪೮ನೇ ವಯಸ್ಸಿನಲ್ಲಿ, ನೌಕರಿಯಲ್ಲಿರುವಾಗಲೇ ದೈವಾಧೀನರಾದರು. ಸಂಗೀತ ಪ್ರಪಂಚಕ್ಕೆ ಇನ್ನೂ ಬಹಳಷ್ಟು ಸೇವೆಯನ್ನು ಮಾಡಬೇಕಾಗಿದ್ದವರು ತಮ್ಮ ಮಧ್ಯ ವಯಸ್ಸಿನಲ್ಲಿಯೇ ಅಂದರೆ ೧೭ನೇ ಸೆಪ್ಟೆಂಬರ್‌ ೧೯೩೬ರಂದು ನಿಧನರಾದರು.