ಕಿಟಕಿಬಾಗಿಲ ಮುಚ್ಚಿ ಒಳಗೆ ನಿದ್ರಿಸುತ್ತಿದ್ದೆ
ಬೆಳಗಾಯಿತೇನೋ ಎಂದು ಮೇಲೆದ್ದೆ.
ಹೌದು ; ಬೆಳಗಾಗಿತ್ತು
ಮೂಡುದೆಸೆ ರಂಗಾಗಿ ಕಂಗೊಳಿಸುತ್ತಿತ್ತು.
ಇರುಳ ತಪ ಸಫಲವಾಗಿತ್ತು.
ಮನಕೆ ಸಂಭ್ರಮವಾಯ್ತು ; ಕಿಟಕಿ-
ಯೊಂದನು ತೆರೆದೆ !

ಸ್ವರ್ಗ ಸುಂದರ ಕಿರಣವೊಂದೈತಂದು
ಕೋಣೆಯನು ಬೆಳಗಿತಂದು,
ಬಂದ ಬೆಳಕನುಕಂಡು ಬೆರಗಾದೆ
ಅದರಲಿ  ಮೈತೊಳೆದೆ ; ಮಣಿದೆ,
ಉಳಿದ ಕಿಟಕಿಗಳಲ್ಲು
ಬೆಳಕು ಬರುವುದು ಎಂದು
ಎಲ್ಲವನು ತೆರೆದೆ, ಅತಿಯಾಸೆಯಿಂದ !

ನೋಡುತಿರೆಯಿರೆ ನಾನು
ಬೇರೆ ದಿಕ್ಕುಗಳಿಂದ
ತೆರೆದ ಕಿಟಕಿಗಳಿಂದ
ರೊಯ್ಯನೆಯೆ ಬೀಸುತ್ತ ಬಂತೊಂದು ಬಿರುಗಾಳಿ
ಧೂಳು ಕಸ ಕಡ್ಡಿಗಳ ಹೊತ್ತು ಧಾಳಾ ಧಾಳಿ-
ಯಲಿ ಭೋರ್ಗರೆದು,
ಕೋಣೆಯಲಿ ಕಸದ ಮಳೆಗರೆದು !

ಬೆಳಕು ಒಳಬರಲೆಂದು ತೆರೆದ ಕಿಟಕಿಗಳಿಂದ
ಧೂಳನು ತೂರುವುದು ಯಾರ ಆನಂದ ?
ಬೆಳಕನಿತ್ತವನೇ ಮತ್ತೆ ಧೂಳನೂ ತೂರುವುದೆ ?
ಗುಡಿಸಿಕೊಳ್ಳಲಿ ಎಂದೆ ? ಇರಬೇಕು, ಅರ್ಥವಿದೆ.