ಬೆಳಕು ಹರಿಯಿತು ಹೊರಗಡೆ
ಹಕ್ಕಿ ಹಾಡಿತು – ‘ಬಂತು ಬಿಡುಗಡೆ
ಬಂತು ಬಿಡುಗಡೆ ಭುವನಕೆ
ಕಾಳರಾತ್ರಿಯು ಕರಗಿಹೋಯಿತು
ಬಂತು ಬೆಳಗಿನ ಚೆಲ್ವಿಕೆ.’

ಬೆಳಕು ಹರಿಯಿತು ಹೊರಗಡೆ
ಕತ್ತಲಿನ್ನೂ ಒಳಗಡೆ :
ಮೊಗದ ಮೇಗಡೆ ಮುಸುಕನೆಳೆದು
ತನ್ನ ಉಸಿರನು ತಾನೆ ಕುಡಿದು
ನಾಲ್ಕು ಗೋಡೆಯ ನಡುವೆ ಮಲಗಿ
ಜೀವ ನಿದ್ರಿಸತೊಡಗಿದೆ,
ಒಳಗೆ ಕತ್ತಲು ತುಂಬಿದೆ.

ಕಿಟಕಿ ಬಾಗಿಲು ಬಿಚ್ಚಲಿಲ್ಲ
ಬೇರೆ ಗಾಳಿಯು ಬೀಸಲಿಲ್ಲ
ಕುಡಿದ ಗಾಳಿಯ ಕುಡಿದು ಕುಡಿದೂ
ಯಂತ್ರದಂತೆದೆ ಮಿಡಿದು ಮಿಡಿದೂ
ಜೀವ ಕತ್ತಲೊಳದ್ದಿದೆ
ಜಡದವೋಲದು ಬಿದ್ದಿದೆ.

ಹೊರಗೆ ಮೊಳಗಿದೆ ಹಕ್ಕಿಹಾಡು
ಒಳಗೆ ಜೀವಕೆ ಇದುವೆ ಪಾಡು !
ಇದಕೆ ಎಚ್ಚರ ಎಂದಿಗೆ ?
ಎಂದು ಬಿಡುಗಡೆ ಬಂದಿಗೆ ?
ಯಾವ ವೀರನ ತೂರ್ಯ ನಿಸ್ವನ
ಬಿಡಿಸಬಹುದೀ ಜಡತನ ?
ಎಂದು ಒಳಗಡೆ ಬೆಳಕು ಹರಿವುದೊ
ಅಂದು ಹರಿವುದು ಬಂಧನ.