ಬೆಳಗಾಗದಿರಲಯ್ಯ ಭಗವಂತ ಬೆಳಗಾಗದಿರಲಿ
ಒಂದು ದಿನ, ಒಂದೇ ಒಂದು ದಿನವಾದರೂ ಈ ರಾತ್ರಿ ಮುಗಿಯದಿರಲಿ.

ಬೆಳಗಾಗದಿರಲಯ್ಯ ಭಗವಂತ ಬೆಳಗಾಗದಿರಲಿ
ಮತ್ತೆ ಬೆಳಗಾಗಿ ತೆರೆಯದಿರಲಯ್ಯ ಈ ಮುಚ್ಚಿರುವ ರಣರಂಗ,
ಹೋರಾಡಿ ಸಾಕಾಗಿ ಹೋಗಿದೆ ನನಗೆ ; ಇರುಳಿರಲಿ
ಅಥವಾ ಎಂದೆಂದಿಗೂ ಬೆಳಕೇ ಬರದ ಕುರುಡಿರಲಿ.

ಬೆಳಗಾಗದಿರಲಯ್ಯ ಭಗವಂತ ಬೆಳಗಾಗದಿರಲಿ
ನಡೆದು ನಡೆದೂ ಸೋತು ಸುಣ್ಣವಾಗಿದ್ದೇನೆ ;
ದಾರಿಯ ತುಂಬ ಉರಿವ ಮನೆ, ಮುರಿದ ಸೇತುವೆ,
ಬುಸುಗುಡುವ ಹಳ್ಳ ಕೊಳ್ಳ, ಎಷ್ಟೆಂದು ದಾಟಲೊ ನಾನು?
ಕರುಣೆಯಿಲ್ಲವೆ ನಿನಗೆ ಬೆಳಗಾಗದಿರಲಿ.

ಬೆಳಗಾಗದಿರಲಯ್ಯ ಭಗವಂತ ಬೆಳಗಾಗದಿರಲಿ :
ಕೆಂಡದ ಚಾಟಿಯೇಟನು ಸಹಿಸಿ ಬೊಬ್ಬೆ ಬಂದಿದೆ ಬೆನ್ನು,
ಸದಾ ನನ್ನೆದುರು ಉರಿಯುವ ಕಣ್ಣು, ಸುತ್ತ ಹದ್ದಿನ ನೆರಳು.
ಎಳೆಯಲಾರೆನೊ ಮುಂದೆ ಈ ಕಂತೆಯನು
ತಬ್ಬಿಕೊಳಲಯ್ಯ ನಿನ್ನ ಈ ನೆಮ್ಮದಿಯ ಇರುಳು.

ಬೆಳಗಾಗದಿರಲಯ್ಯ ಭಗವಂತ ; ಒಂದೇ ಒಂದು ದಿನ
ರಜಾ ಕೊಡು ನಿನ್ನ ಸೂರ್ಯನಿಗೆ. ಇರಲಿ ಕತ್ತಲು ಹೀಗೆ.
ಬೆಳಕಿನಲಿ ಕಣ್ಣು ಬಿಡಲಾರೆನೋ. ಬೆಳಗಾಗಲೇ ಬೇಕೆ?
ಅದು ನಿಯಮವೆ? ಹಾಗಾದರೊಂದೇ ಒಂದು ಸಿಡಿಗುಂಡ
ತೂರಿಸಿಬಿಡೋ ನನ್ನ ತತ್ತರಿಸುವೆದೆಗೆ.