ಬೆಳಗಾವಿಯಿಂದ ೧೮ ಕಿ.ಮೀ. ದೂರದಲ್ಲಿರುವ ಸೂಳೆಬಾವಿ ಶಾಸ್ತ್ರೀಯ ಸಂಗೀತ ದಿಗ್ಗಜ ಕುಮಾರ ಗಂಧರ‍್ವರ ಜನ್ಮಸ್ಥಳ. ಇಲ್ಲಿಯ ಲಕ್ಷ್ಮೀದೇವಿ ದೇವಸ್ಥನ ಶಕ್ತಿ ಸ್ಥಳವೆಂದು ಪ್ರಸಿದ್ಧವಾಗಿದೆ. ವೇಶ್ಯೆಯೊಬ್ಬಳು ಸಮಾಜಸೇವಾ ಕಾರ‍್ಯನಿರತವಾಗಿ ಕುಡಿಯುವ ನೀರಿನ ಬಾವಿ ತೆಗೆಸಿದ್ದಕ್ಕಾಗಿ ಇದು ಸೂಳೆಬಾವಿ.

 

ಬೆಳಗಾವಿಯಿಂದ ೧೭ ಕಿ.ಮೀ. ದೂರದಲ್ಲಿರುವ ಸದ್ಗುರು ಪಂತ ಮಹಾರಾಜ ಸಮರ್ಥರ ಮಂದಿರವಿರುವ ಬಾಳೇಕುಂದ್ರಿ, ಪಂತ ಬಾಳೇಕುಂದ್ರಿ ಎಂದೇ ಪ್ರಸಿದ್ಧವಾದುದು. ೧೯೦೫ರಲ್ಲಿ ದತ್ತಾತ್ರೇಯ ದೇವಾಲಯ ನಿರ್ಮಿಸಲಾಗಿದೆ. ಶಾಲಾ ಶಿಕ್ಷಕರಾಗಿದ್ದ ಪಂತ ಮಹಾರಾಜರು ಆಧ್ಯಾತ್ಮ ಚಿಂತನೆಯೊಂದಿಗೆ ಜನರಲ್ಲಿ ಧಾರ್ಮಿಕ ವಿಚಾರಧಾರೆಯನ್ನು ಬಿತ್ತಿದರು. ಈ ಭಗದ ಜನರ ಆರಾಧ್ಯದೈವ, ಬದುಕಿಗೆ ದಾರಿತೋರಿಸಿದ ಸದ್ಗುರುವಾದರು. ಪಂತ ಮಹಾರಾಜರ ವಿಚಾರಧಾರೆಯ ಸಮಾಜ ಕಾರ್ಯ ಇಂದಿಗೂ ಮುಂದುವರೆದಿವೆ.

ರಾಜಹಂಸಗಡ ಕೋಟೆ ಯಳ್ಳೂರ ಗ್ರಾಮವ್ಯಾಪ್ತಿಯಲ್ಲಿ ಬರುತ್ತದೆ. ಇದು ೧೬೭೮ರಲ್ಲಿ ಛತ್ರಪತಿ ಶಿವಾಜಿ ನಿರ್ಮಿಸಿದ್ದಾಗಿದೆ. ಗೋವಾ ಹಾಗೂ ಕಾರವಾರ ಭಾಗದಿಂದ ಬರಬಹುದಾದ ಆಪತ್ತನ್ನು ಅರಿಯುವ ಸಲುವಾಗಿ ನಿರ್ಮಿಸಿದ ಕೋಟೆ ಇದಾಗಿದೆ. ಇಲ್ಲಿಂದ ಧಾರವಾಡ, ಸವದತ್ತಿ, ನವಿಲುತೀರ್ಥ, ಬೆಳಗಾವಿ ನಗರ, ಖಾನಾಪೂರ, ಕಾರವಾರ ಪ್ರದೇಶಗಳನ್ನು ನೋಡಬಹುದು.

ಬೆಳಗಾವಿಯಿಂದ ಪಶ್ಚಿಮ ನಗರಕ್ಕೆ ಅಂಟಿಕೊಂಡಿರುವ ಮಿಲಿಟರಿ ಪ್ರದೇಶದಲ್ಲಿರುವ ಗಣಪತಿ ದೇವಾಲಯ ಭಕ್ತರ ಮೆಚ್ಚಿನ ಸ್ಥಳ. ಯೋಧರ ಶಿಸ್ತನ್ನು ದೇವಾಲಯದಲ್ಲೂ ಕಾಣಬಹುದು. ಭಕ್ತಿ-ವಿಹಾರ ಎರಡಕ್ಕೂ ಪ್ರಸಿದ್ಧವಾದ ಈ ಸ್ಥಳ ಎಲ್ಲರ ಆಕರ್ಷಣೆಯಾಗಿದೆ. ಪ್ರಸಿದ್ಧ ಜೈಲು ಇರುವ ಹಿಂಡಲಗಾಕ್ಕೆ ಅಂಟಿಕೊಂಡಿರುವುದರಿಂದ ಹಿಂಡಲಗಾ ಗಣಪತಿ ಎಂದೇ ಪ್ರಸಿದ್ಧವಾಗಿದೆ.

ನಗರದಿಂದ ೫ ಕಿ.ಮೀ. ಅಂತರದಲ್ಲಿರುವ ಹಿಂಡಲಗಾ ಜೈಲು ದೇಶದ ಹಳೆಯ ಜೈಲುಗಳಲ್ಲಿ ಒಂದು. ಗಲ್ಲು ಶಿಕ್ಷೆ ವಿಧಿಸುವ ವ್ಯವಸ್ಥೆ ಇರುವ ಜೈಲುಗಳಲ್ಲಿ ಇದೂ ಒಂದು. ಸ್ವಾತಂತ್ರ‍್ಯ ಚಳುವಳಿಯ ಕಾಲದಲ್ಲಿ ದೇಶದ ಶ್ರೇಷ್ಠ ದೇಶಭಕ್ತರನ್ನು ತನ್ನಲ್ಲಿರಿಸಿಕೊಂಡ ಹೆಮ್ಮೆ ಇದರದು.

ಬೆಳಗಾವಿಯಿಂದ ೧೫ ಕಿ.ಮೀ. ದೂರದಲ್ಲಿ ಮಾರ್ಕಂಡೇಯ ನದಿಗೆ ರಕ್ಕಸಕೊಪ್ಪದ ಹತ್ತಿರ ಅಣೆಕಟ್ಟು ಕಟ್ಟಿ ಬೆಳಗಾವಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸಿದ ಜಲಾಶಯ ಇದು. ಹಿಂದೆ ರಕ್ಕಸನೊಬ್ಬ ಇಲ್ಲಿ ವಾಸವಾಗಿದ್ದನೆಂಬ ಕಾರಣಕ್ಕೆ ಇದು ರಕ್ಕಸಕೊಪ್ಪವೆಂದು ಪ್ರಸಿದ್ಧವಾಗಿದೆ.

ಬೆಳಗಾವಿ ನಗರದಿಂದ ೧೦ ಕಿ.ಮೀ. ಅಂತರದಲ್ಲಿರುವ ಕಾಕತಿ, ಭಾರತ ಸ್ವಾತಂತ್ರ‍್ಯ ಚಳುವಳಿಯ ಬೆಳ್ಳಿ ಚುಕ್ಕಿ ಕಿತ್ತೂರು ಚನ್ನಮ್ಮನ ಜನ್ಮಸ್ಥಳವಾಗಿ ಪ್ರಸಿದ್ಧ. ಕಿತ್ತೂರು ಅರಸ ಮಲ್ಲಸರ್ಜನ ಮನಗೆದ್ದು, ದೇಶಕ್ಕೆ ಕೀರ್ತಿ ತಂದ ವೀರ ರಾಣಿಯ ತವರುಮನೆ ದೇಸಾಯಿ ಗಲ್ಲಿಯ ವಾಡೆಯಿಂದ ಸುರಂಗ ಮಾರ್ಗವಿತ್ತೆಂದು ಹೇಳುವ ಕೋಟೆ ಕಾಕತಿಯಿಂದ ಪೂರ್ವ ದಿಕ್ಕಿಗೆ ೧ ಕಿ.ಮೀ. ನಲ್ಲಿದೆ ರಾಷ್ಟ್ರೀಯ ಹೆದ್ದಾರಿ ೪ರ ಪಕ್ಕದಲ್ಲಿಯ ಶಿಥಿಲಾವಸ್ಥೆಯ ಕೋಟೆ ಚನ್ನಮ್ಮನ ಸಾಹಸದ ಪಳೆಯುಳಿಕೆಯಂತೆ ಗುಡ್ಡದ ಮೇಲೆ ವಿರಮಿಸುತ್ತಿದೆ.

 

ಸಂದರ್ಶಿಸಬಹುದಾದ ಇತರ ಸ್ಥಳಗಳು

 • ಕಣಬರ್ಗಿಯ ರಾಮತೀರ್ಥ
 • ಹುದಲಿ ಖಾದಿ ಗ್ರಾಮೋದ್ಯೋಗ ಕೇಂದ್ರ
 • ಮುಕ್ತಿಮಠ
 • ರಾಣಿಚೆನ್ನಮ್ಮ ಜಿಂಕೆವನ ಭೂತರಾಮನಹಟ್ಟಿ
 • ಸಾಂಬ್ರಾ ವಿಮಾನ ನಿಲ್ದಾಣ
 • ಮುಚ್ಚಂಡಿ ಸಿದ್ಧೇಶ್ವರ ದೇವಸ್ಥಾನ
 • ಸಿದ್ದೇಶ್ವರ ದೇವಸ್ಥಾನ ಕಣಬರ್ಗಿ
 • ಬಡೇಕೊಳ್ಳಮಠ ತಾರೀಹಾಳ
 • ಹುದಲಿ ಗಾಂಧಿಘರ
 • ರಾಣಿ ಚನ್ನಮ್ಮಾ ವಿಶ್ವವಿದ್ಯಾನಿಲಯ
 • ಕಾಕತಿ ಸಿದ್ಧೇಶ್ವರ ದೇವಸ್ಥಾನ
 • ಹುಂಚಿಹೊರಿ ದೇವಸ್ಥಾನ, ನಿಸರ್ಗ ಕಾಕತಿ

 

ಖಾನಾಪೂರ

ತಾಲೂಕಾ ಕೇಂದ್ರದಿಂದ – ೨೦ ಕಿ.ಮೀ.
ಜಿಲ್ಲಾಕೇಂದ್ರದಿಂದ – ೪೫ ಕಿ.ಮೀ.

ಬನವಾಸಿ ಕದಂಬರ ಎರಡನೇ ರಾಜಧಾನಿಯಾದ ಹಲಸಿ (ಪಲಸಿಕಾ)ಯ ಶಿವ ದೇವಾಲಯವನ್ನು ಕಲ್ಮೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. ಸುಮಾರು ೧೦-೧೧ನೇ ಶತಮಾನದಲ್ಲಿ ಕಟ್ಟಿದ ಕಟ್ಟಡವಾಗಿದೆ. ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯದಾಗಿದೆ.

ನರಸಿಂಹ ದೇವಾಲಯವು ಗೋವಾ ಕದಂಬರ ಕಾಲದಲ್ಲಿಯೇ ನಿರ್ಮಾಣಗೊಂಡದ್ದಾಗಿದೆ.

ಇದಲ್ಲದೇ ಹಲವಾರು ಅವಶೇಷಗಳು, ಶಾಸನಗಳು ಹಲಸಿಯನ್ನು ಪ್ರಾಚೀನ ಇತಿಹಾಸದ ಮುಖವನ್ನಾಗಿಸಿವೆ. ಜ್ಞಾನ ದಾಹಿಗಳ ಸ್ವರ್ಗವಾಗಿದೆ.

 

ಮಹದಾಯಿ ನದಿ – ಸೂರಲ ಜಲಪಾತ

ತಾಲೂಕಾ ಕೇಂದ್ರದಿಂದ – ೨೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೪೦ ಕಿ.ಮೀ.

ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಸಂಗಮ ಕ್ಷೇತ್ರದಲ್ಲಿರುವ ಸೂರಲ ಜಲಪಾತವು ಮಹದಾಯಿ ನದಿಯಿಂದಾದ ಸುಮದರ ರಚನೆ. ನಿಸರ್ಗ ಪ್ರಿಯರಿಗೆ, ಅಧ್ಯಯನಾಸಕ್ತರ ಸ್ವರ್ಗ ಈ ಮಹದಾಯಿಯ ಸೂರಲ ಜಲಪಾತ.

 

ಕಣಕುಂಬಿ

ತಾ. ಕೇಂ. ದೂರ – ೨೦ ಕಿ.ಮೀ.
ಜಿ. ಕೇಂ ದೂರ – ೩೫ ಕಿ.ಮೀ.

ಕಣಕುಂಬಿ ಮಲಪ್ರಭಾ ನದಿಯ ಉಗಮಸ್ಥಾನ. ಕಣಕುಂಬೇಶ್ವರ, ಮಾವುಲಿದೇವಿ ದೇವಸ್ಥಾನಗಳಿರುವ ಈ ಪ್ರದೇಶ ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.

 

ನಂದಗಡ

ಬೆಳಗಾವಿಯಿಂದ – ೩೮ ಕಿ.ಮೀ.
ಖಾನಾಪುರದಿಂದ – ೧೨ ಕಿ.ಮೀ.

ನಂದಗಡದಲ್ಲಿ ಪ್ರತಾಪಗಡ ಕೊಟೆಯು ಇತಿಹಾಸ ಪ್ರಸಿದ್ಧವಾಗಿದೆ. ಕಿತ್ತೂರಿನ ಅರಸ ಮಲ್ಲಸರ್ಜನು ಈ ಕೋಟೆಯನ್ನು ನಿರ್ಮಾಣ ಮಾಡಿದನು.

ಕಿತ್ತೂರು ಸಂಸ್ಥನದ ಕೊನೆಯ ದಿನಗಳಲ್ಲಿ ಸಮಸ್ಥಾನದ ಮುಕ್ತಿಗಾಗಿ ಹೋರಾಡಿದ ಚನ್ನಮ್ಮನ ಬಲಗೈ ಬಂಟ ರಾಯಣ್ಣನನ್ನು ಗಲ್ಲಿಗೇರಿಸಿದ್ದು ನಂದಗಡದಲ್ಲಿಯೇ. ರಾಯಣ್ಣನ ಸಮಾಧಿ ಮತ್ತು ಅದರ ಮೇಲೆ ನೆಟ್ಟ ಆಲದ ಮರ ಸ್ವಾತಂತ್ರ‍್ಯ ಹೋರಾಟದ ನೆನಪು ಮಾಡುತ್ತವೆ.

 

ಸಂದರ್ಶಿಸಬಹುದಾದ ಇತರ ಸ್ಥಳಗಳು

 • ವಜ್ರಾ ಫಾಲ್ಸ್‌
 • ಹಂಚು, ಇಟ್ಟಿಗೆ, ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಕೇಂದ್ರಗಳು
 • ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ
 • ಹಂಡಿಬಡಗನಾಥ ದೇವಾಲಯ
 • ಗೋಕರ್ಣೇಶ್ವರ ದೇವಾಲಯ, ಹಲಸಿ
 • ಸುವರ್ಣೇಶ್ವರ ದೇವಾಲಯ, ಹಲಸಿ
 • ರಾಮತೀರ್ಥ – ರಾಮಲಿಂಗೇಶ್ವರ ದೇವಾಲಯ, ಹಲಸಿ
 • ನಂದಗಡ ಮೊರಾರ್ಜಿ ದೇಸಾಯಿ ವಸತಿ ಶಾಲೆ