ಆತ್ಮೀಯರೆ,

ಬೆಳಗಾವಿ ಜಿಲ್ಲೆಯ ಚಿಣ್ಣರ ಜಿಲ್ಲಾ ದರ್ಶನಕ್ಕೆ ತಮಗೆಲ್ಲ ಸ್ವಾಗತ. ವೇಣುಗ್ರಾಮ, ಬೆಳ್ಳಿಗಾವಿ, ಬೆಳಗಾವಿ ಎಂದು ಪ್ರಸಿದ್ಧವಾದ ಕರ್ನಾಟಕದ ವಾಯುವ್ಯ ದಿಕ್ಕಿನಲ್ಲಿ, ಸಹ್ಯಾದ್ರಿ ಪರ್ವತ ಶ್ರೇಣಿಯ ಸೆರಗಿನಲ್ಲಿರುವ ಬೆಳಗಾವಿ ಜಿಲ್ಲೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ನದಿ, ಪರ್ವತ, ಜಲಪಾತಗಳಿಂದ ತುಂಬಿ ಭತ್ತ, ಹತ್ತಿ, ಜೋಳ, ಕಬ್ಬು, ತಂಬಾಕು ಬೆಳೆಗಳನ್ನು ಸಮೃದ್ಧವಾಗಿ ಬೆಳೆದು, ಸಾಹಿತಿ, ಕಲಾವಿದರ ತವರೂರಾಗಿ ಔದ್ಯೋಗಿಕ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿ, ರಾಜ್ಯದ ಎರಡನೇ ರಾಜಧಾನಿ ಎನಿಸಿದೆ.

ಕರ್ನಾಟಕದ ಇತಿಹಾಸ ಮತ್ತು ಭಾರತ ಸ್ವಾತಂತ್ರ‍್ಯ ಹೋರಾಟದ ಪುಟಗಳಲ್ಲಿ ಅಗ್ರಸ್ಥಾನ ಪಡೆದ ಹೆಮ್ಮೆ ನಮ್ಮದು. ಕನ್ನಡದ ಕೀರ್ತಿ ಪತಾಕೆಯನ್ನು ಬಾನಿನೆತ್ತರಕ್ಕೆ ಹಾರಿಸಿದ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಬೆಳ್ಳಿಚುಕ್ಕಿ ಕತ್ತೂರ ರಾಣಿ ಚೆನ್ನಮ್ಮ ನಮ್ಮವಳು. ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬಿಚ್ಚುಗತ್ತಿ ಚನ್ನಬಸಪ್ಪ, ಶಿವಾಪುರದ ಸತ್ಯಪ್ಪ ದೇಶಭಕ್ತಿಗೆ ಮಾದರಿ. ಜಿಲ್ಲೆಯಲ್ಲಿರುವಷ್ಟು ಕೋಟೆ ಕೊತ್ತಲಗಳು ರಾಜ್ಯದಲ್ಲಿ ಬೇರೆಲ್ಲೂ ಸಿಗಲಾರವು. ವೀರ ಇತಿಹಾಸಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಇಲ್ಲ. ಅದಕ್ಕಾಗಿಯೇ ಇದು ಗಂಡು ಮೆಟ್ಟಿನ ನಾಡು.

ಕುಂತಲನಾಡು-ಕುಂದರನಾಡು, ಕುಹಂಭ-ಮೂರು ಸಾವಿರ ಪ್ರದೇಶ ಎಂದು ಇತಿಹಾಸ ಕಾಲದಿಂದಲೂ ಪ್ರಸಿದ್ಧವಾದ ಬೆಳಗಾವಿ ಕರ್ನಾಟಕವನ್ನು ಆಳಿದ ಮೊದಲ ಅಚ್ಚ ಕನ್ನಡದ ಅರಸರಾದ ರಟ್ಟರು ಅಂದರೆ ರಾಷ್ಟ್ರಕೂಟರ ಮೂಲ ಸ್ಥಾನವಾಗಿದೆ. ರಟ್ಟರು, ದೇವಗಿರಿಯ ಯಾದವರು, ಉತ್ತರದ ಮಹ್ಮದಬಿನ್‌ತುಘಲಕ್‌, ವಿಜಯನಗರದ ಅರಸರು, ಬಹಮನಿ ಸುಲ್ತಾನರು, ಆದಿಲ್‌ಷಾಹಿಗಳು, ಮರಾಠರು, ಕದಂಬರು  ಹೀಗೆ ಹಲವಾರು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟರೂ ತನ್ನತನ ಕಾಯ್ದುಕೊಂಡು ಬಂದಿದೆ.

೧೨ನೇ ಶತಮಾನದ ಶರಣ ಕ್ರಾಂತಿಯ ಹೆಜ್ಜೆಗುರುತುಗಳು ಇಲ್ಲಿ ಅಚ್ಚಳಿಯದೆ ಮೂಡಿವೆ. ಕಲ್ಯಾಣದಲ್ಲಿ ಶರಣರನ್ನು ಕೊಲ್ಲಲಾರಂಭಿಸಿದಾಗ ಚನ್ನಬಸವಣ್ಣನ ಮುಂದಾಳತ್ವದಲ್ಲಿ (೧೧೬೭ರಲ್ಲಿ) ಕಲ್ಯಾಣದಿಂದ ಉಳವಿಯೆಡೆಗೆ ಹೊರಟರು. ಮಾರ್ಗ ಮಧ್ಯದ ಬೆಳಗಾವಿ ಜಿಲ್ಲೆಯ ಕಲ್ಲೂರಿನಲ್ಲಿ ಕಲ್ಯಾಣಮ್ಮ, ಮರಡಿ ನಾಗಲಾಪುರದಲ್ಲಿ ಅಕ್ಕ ನಾಗಲಾಂಬಿಕೆ, ಹುಣಶೀಕಟ್ಟಿಯಲ್ಲಿ ರುದ್ರಮುನಿ ದೇವರು, ಎಂ.ಕೆ. ಹುಬ್ಬಳ್ಳಿಯ ಮಲಪ್ರಭೆಯಲ್ಲಿ ಗಂಗಾಂಬಿಕೆ, ಕಕ್ಕೇರಿಯಲ್ಲಿ ಕಕ್ಕಯ್ಯ ಲಿಂಗೈಕ್ಯರಾದರು. ಅಂದು ಅವರು ಬಿತ್ತಿದ ಶರಣ ಸಂಪ್ರದಾಯ ಇಂದಿಗೂ ಜನರಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಜೀವಂತವಾಗಿಸಿದೆ.

ದುರ್ಗಗಳು, ವಾಡೆಗಳು, ಬಸದಿಗಳು, ದೇಗುಲಗಳು, ಮಠಮಾನ್ಯಗಳು, ಮಸೀದಿಗಳು, ಚರ್ಚ್‌ಗಳು, ಸಮಾಧಿಗಳ ಜೊತೆಗೆ ಅಸಂಖ್ಯಾತ ಪುರಾತನ ಸ್ಮಾರಕಗಳು ತಮ್ಮ ಗತವೈಭವವನ್ನು, ನೋವು-ನಲಿವುಗಳನ್ನು ನಮ್ಮ ಮುಂದೆ ಹೇಳಲು ಕಾತರವಾಗಿವೆ. ನಮ್ಮ ಮುಂದಿನ ಜೀವನಕ್ಕೆ ದಾರಿದೀಪವೂ ಸಹ ಆಗಿವೆ.

ಇಲ್ಲಿ ಸುಂದರ ನದಿ ಕಣಿವೆಗಳಿವೆ. ಅದ್ಭುತವಾದ ಗುಡ್ಡಗಾಡುಗಳು, ರಮ್ಯ ಅರಣ್ಯ ಪ್ರದೇಶ, ಗಾಂಭೀರ್ಯದ ಕೋಟೆ ಕೊತ್ತಲುಗಳು, ಪ್ರಗತಿಯ ಔದ್ಯೋಗಿಕ ಕೇಂದ್ರಗಳು, ಉನ್ನತ ಶಿಕ್ಷಣದ ಜ್ಞಾನ ದೇಗುಲಗಳು, ಜಾಗತಿಕ ಮಟ್ಟದ ಆರೋಗ್ಯ ಸೇವೆ ಎಲ್ಲವೂ ಇವೆ.

ಕೊಳವಿ, ಹುದಲಿ, ಕುಮರಿ, ಸಂಪಗಾಂವ, ಶಿವಾಪುರ ಗ್ರಾಮಗಳು ಸ್ವಾತಂತ್ರ‍್ಯ ಚಳುವಳಿಗೆ ವೀರ ಯೋಧರನ್ನು ನೀಡಿ ಧನ್ಯವಾಗಿವೆ. ಇಲ್ಲಿಯ ಸ್ವಾತಂತ್ರ‍್ಯ ಚಳುವಳಿಯ ಅಗಾಧತೆ ಗಾಂಧೀಜಿಯವರನ್ನು ಕರೆಸಿಕೊಂಡಿತು. ಸೇವಾದಳದ ಸಂಸ್ಥಾಪಕ ಡಾ|| ನಾ.ಸು. ಹರ್ಡೀಕರರ ಕಾರ್ಯಕ್ಷೇತ್ರವಾಯಿತು. ದೇಶ ಬಿಟ್ಟು ತೊಲಗಿ ಚಳುವಳಿಯಲ್ಲಿ ದೇಶದಲ್ಲಿಯೇ ಹೆಚ್ಚು ಸ್ವಾತಂತ್ರ‍್ಯ ಯೋಧರು ಸೆರೆಮನೆವಾಸ ಕಂಡ ಜಿಲ್ಲೆ ನಮ್ಮದು. ಗಂಗಾಧರರಾವ ದೇಶಪಾಂಡೆ, ವಾಲಿ ಚನ್ನಪ್ಪ, ಅಣ್ಣುಗುರೂಜಿ, ಯಶವಂತರಾವ ಯಾಳಗಿ, ಬಿದರಿ ದಂಪತಿಗಳು, ಮಿರ್ಜಿ ಅಣ್ಣಾರಾಯ, ಗುರುಬಸಮ್ಮ ಮರಿಲಿಂಗನವರ ಮುಂತಾದ ಸಾವಿರಾರು ಜನ ಸ್ವಾತಂತ್ರ‍್ಯ ಹೋರಾಟಗಾರರು ನಮ್ಮ ಜಿಲ್ಲೆಯವರು.

ಸವದತ್ತಿ, ಚಿಂಚಲಿ, ಮಂಗಸೂಳಿ, ಕೊಕಟನೂರ, ಕುಡಚಿ, ಗೊಡಚಿ, ಬಡಕುಂದ್ರಿ, ಹೂಲಿ, ಅಮ್ಮಣಗಿ, ಅರಭಾವಿ, ವಡಗಾಂವಿ, ಮರಡಿ ನಾಗಲಾಪೂರ, ಬಾಳೇಕುಂದ್ರಿ, ಸುಳೇಭಾವಿಗಳಲ್ಲಿ ನಡೆಯುವ ಜಾತ್ರೆಗಳು ಜಿಲ್ಲೆಯ ವಿಭಿನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪರಿಚಯಿಸುತ್ತವೆ.

ಸಹ್ಯಾದ್ರಿಯ ಬೆಟ್ಟ ಸಾಲುಗಳಿಂದ ಹರಿಯುವ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ಮಾರ್ಕಂಡೇಯ, ಪಂಚಗಂಗಾ, ಮಹಾದಾಯಿ ನದಿಗಳು ಜಿಲ್ಲೆಯ ಜೀವನದಿಗಳಾಗಿವೆ. ಹಿಡಕಲ್‌ನ ರಾಜಾ ಲಖಮಗೌಡ, ನವಿಲುತೀರ್ಥದ ರೇಣುಕಾ ಸಾಗರ ದೂಫದಾಳ ಅಣೆಕಟ್ಟು, ತಿಗಡಿಯ ಹರಿನಾಲಾ ಅಣೆಕಟ್ಟು, ಶಿರೂರ ಅಣೆಕಟ್ಟು ನೀರಾವರಿ ಚಟುವಟಿಕೆಗಳಿಗೆ ಆಶ್ರಯವಾಗಿವೆ.

ವಜ್ರಪೋ, ಕಳಸಾ, ಓಜರ್‌, ಗೋಕಾಕ, ಗೊಡಚಿನಮಲ್ಕಿ, ಅಂಬೋಳಿ ಜಲಪಾತಗಳು, ಲೋಂಡಾ, ಗುಂಜಿ, ಜಾಂಬೋಟಿ, ಕಣಕುಂಬಿ, ಕೃಷ್ಣಾಪುರ ಮೊದಲಾದ ಚಾರಣಸ್ಥಳಗಳು ಸಾಹಸ ಕ್ರೀಡೆಗಳಾದ ಚಾರಣ, ಬೆಟ್ಟ ಹತ್ತುವುದು, ನದಿ ದಾಟುವುದು, ರೋವಿಂಗ್‌ಮುಂತಾದವುಗಳಿಗೆ ಪ್ರಸಿದ್ಧವಾಗಿವೆ. ಭೂತರಾಮನಹಟ್ಟಿಯ ಜಿಂಕೆ ಪಾರ್ಕ್‌, ದೂಫದಾಳದ ಪಕ್ಷಿಧಾಮ ವನ್ಯಮೃಗ ಪಕ್ಷಿ ವೀಕ್ಷಣೆಗೆ ಹೇರಳ ಅವಕಾಶ ಒದಗಿಸಿವೆ.

ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುವ ತರಕಾರಿಗೆ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಬೇಡಿಕೆ ಇದೆ. ಮೂರು ರಾಜ್ಯಗಳಿಗಾಗುವಷ್ಟು ತರಕಾರಿಯನ್ನು ಈ ಒಂದು ಜಿಲ್ಲೆಯಲ್ಲಿಯೇ ಬೆಳೆಯಲಾಗುತ್ತದೆ. ಜೊತೆಗೆ ಹತ್ತಿ, ತಂಬಾಕು, ಜೋಳ, ಬೇಳೆಕಾಳೂ, ಭತ್ತ ಬೆಳೆದು ಸಮೃದ್ಧವಾಗಿದೆ. ಹೇರಳವಾಗಿ ಕಬ್ಬು ಬೆಳೆಯುವುದರಿಂದ ಹಲವಾರು ಸಕ್ಕರೆ ಕಾರ್ಖಾನೆಗಳು ಇಲ್ಲಿವೆ. ಅದಕ್ಕಾಗಿಯೇ ಇದ ಸಕ್ಕರೆಯ ಸಿಹಿ ಜಿಲ್ಲೆ.

ಔದ್ಯೋಗಿಕವಾಗಿ ಬೆಳಗಾವಿ ಸಾಕಷ್ಟು ಬೆಳೆದಿದೆ. ಗುಡಿ ಕೈಗಾರಿಕೆಯಿಂದ ಬೃಹತ್‌ಉದ್ಯಮದವರೆಗೆ ಸಾಗಿದೆ. ವಿದೇಶಗಳಿಗೆ ರಫ್ತು ಮಾಡುವ ಸೀರೆ ತಯಾರಿಸುವಲ್ಲಿ ವಡಗಾವಿ, ಹಳೆ ಬೆಳಗಾವಿ, ಸುಳೇಭಾವಿ, ದೇಶನೂರ, ರಾಮದುರ್ಗಗಳು ಪ್ರಸಿದ್ಧಿ ಪಡೆದಿವೆ. ಹುದಲಿಯ ಖಾದಿಯ ಖದಿರು ದೇಶಕ್ಕೆಲ್ಲ ಹರಡಿದೆ. ವಾಹನಗಳ ಬಿಡಿಭಾಗಗಳನ್ನು ತಯಾರಿಸುವ ಉದ್ಯಮಬಾಗ ದೇಶದ ವಾಹನ ತಯಾರಿಕಾ ಕೈಗಾರಿಕೆಯ ಆಧಾರ ಸ್ತಂಭವಾಗಿದೆ. ಬಸ್ಸು, ಲಾರಿಗಳ ಕವಚ ಕಟ್ಟುವ ಕೈಗಾರಿಕೆ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಖಾನಾಪುರದ ಹಂಚು ಇಟ್ಟಿಗೆ, ಮಡಿಕೆಗಳಿಗೆ ಹೊರರಾಜ್ಯದಲ್ಲೂ ಬೇಡಿಕೆಯಿದೆ.

ಬೆಳಗಾವಿ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಕೇಂದ್ರವಾಗಿದೆ. ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಸರಕಾರಿ ಶಾಲೆಗಳ ಜೊತೆಗೆ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳಗಾವಿಯಲ್ಲಿ ಇವೆ. ಕೆ.ಎಲ್‌.ಇ, ನಾಗನೂರ ಶಿವಬಸವ, ರಾಣಿ ಚನ್ನಮ್ಮಾ ವಿಶ್ವವಿದ್ಯಾನಿಲಯ, ಜಿ.ಐ.ಟಿ., ಬಿಮ್ಸ್‌, ಬಿ.ಕೆ. ಮಾಡೆಲ್‌, ಅಂಗಡಿ ತಾಂತ್ರಿಕ ಕಾಲೇಜಿ, ಗೋಮಟೇಶ ವಿದ್ಯಾಪೀಠ ಮುಂತಾದ ಶಿಕ್ಷಣ ಸಂಸ್ಥೆಗಳು ಪೂರ್ವ ಪ್ರಾಥಮಿಕ ವಿಭಾಗದಿಂದ ವೈದ್ಯಕೀಯ, ತಾಂತ್ರಿಕ ಶಿಕ್ಷಣದ ಸ್ನಾತಕೋತ್ತರ ಹಂತದವರೆಗೆ ಕೊಡುವ ಶಿಕ್ಷಣ ಅಂತರಾಷ್ಟ್ರೀಯ ಮಟ್ಟದ್ದು. ಗುಣಮಟ್ಟದ ಹಾಗೂ ಹೃದಯವಂತ ಶಿಕ್ಷಕರನ್ನು ತರಬೇತಿಗೊಳಿಸುವ ಡಯಟ, ಸಿಟಿಇ ಜೊತೆಗೆ ಹಲವಾರು ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿವೆ. ದೇಶದ ಹೆಮ್ಮೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆ.ಎಲ್‌.ಇ. ಆಸ್ಪತ್ರೆ ಏಷ್ಯಾದಲ್ಲಿಯೇ ದೊಡ್ಡದು ಮತ್ತು ಆಧುನಿಕವಾದುದು. ಟಿಳಕವಾಡಿಯ ವ್ಯಾಕ್ಸಿನ್‌ಡಿಪೋ ದೇಶದ ಮಹತ್ವದ ಲಸಿಕಾ ಕೇಂದ್ರವಾಗಿದೆ. ಕೋಟೆಯಲ್ಲಿಯ ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರ ದೇಶಕ್ಕೆ ಒಂದೇ.

ವೀರ ಸನ್ಯಾಸಿ ವಿವೇಕಾನಂದರು ಭೇಟಿ ನೀಡಿ ಆಧ್ಯಾತ್ಮಿಕ ಮಾರ್ಗದರ್ಶನ ನಮಗೆಲ್ಲ ನೀಡಿದ್ದಾರೆ. ೧೯೨೪ರ ಬೆಳಗಾವಿ ಕಾಂಗ್ರೆಸ್‌ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮಾ ಗಾಂಧಿಯವರು. ಕುಮಾರ ಗಂಧರ್ವ, ಏಣಗಿ ಬಾಳಪ್ಪ, ಹುಕ್ಕೇರಿ ಬಾಳಪ್ಪ, ಶಾಂತವ್ವ ಪಾತ್ರೋಟ ಮುಂತಾದವರು ನಮ್ಮ ಜಿಲ್ಲೆಯ ಹೆಮ್ಮೆಯ ಕಲಾವಿದರು.

ಪೋರ್ಚುಗೀಸರ ನೆಲೆಯಾಗಿದ್ದ ಗೋವಾವನ್ನು ಭಾರತ ಗಣರಾಜ್ಯದಲ್ಲಿ ಸೇರಿಸಲು ನಡೆದ ಯುದ್ಧದಲ್ಲಿ ಭಾರತೀಯ ವಾಯುದಳದ ನೆಲೆ ಬೆಳಗಾವಿಯಾಗಿತ್ತು. ಸಾಂಬ್ರಾ ವಿಮಾನ ನಿಲ್ದಾಣ ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ನಾಗರಿಕ ವಿಮಾನಯಾನ ಸೌಲಭ್ಯವನ್ನು ಹೊಂದುವುದರ ಜೊತೆಗೆ ವಾಯುಸೇನೆಯ ಪ್ರಮುಖ ತರಬೇತಿ ಕೇಂದ್ರವಾಗಿದೆ.

ಸಜನಾ ಕಾವ್ಯನಾಮದೊಂದಿಗೆ ವೈಜ್ಞಾನಿಕ ಹಾಗೂ ವೈದ್ಯಕೀಯ ಕೃತಿಗಳನ್ನು ರಚಿಸಿ ಜನರಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದ ಡಾ. ಸ.ಜ. ನಾಗಲೋತಿಮಠ ಅವರು ಆಧುನಿಕ ವೈದ್ಯಕೀಯ ವಿಜ್ಞಾನದೊಂದಿಗೆ ಶರಣ ಸಂಪ್ರದಾಯವನ್ನು ಮೇಳವಿಸಿದವರು. ಅವರ ಹೆಸರಿನ ವಿಜ್ಞಾನ ಕೇಂದ್ರ ಬೆಳಗಾವಿಗೆ ಕಿರೀಟಪ್ರಾಯ.

ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಬೆಳಗಾವಿ ಕುಂದಾ, ಗೋಕಾಕದ ಕರದಂಟು ಜಗತ್ಪ್ರಸಿದ್ಧ. ಇಲ್ಲಿಯ ಜನರ ಮಾತು ಕರದಂಟಿನಂತೆ ಒರಟಾಗಿದ್ದರೂ ಇವರ ಹೃದಯ ಕುಂದಾದಷ್ಟೇ ಸಿಹಿ.