ಬೈಲಹೊಂಗಲ

ಕಿತ್ತೂರ

ಜಿ. ಕೇಂದ್ರದಿಂದ – ೪೫ ಕಿ.ಮೀ.
ತಾ. ಕೇಂದ್ರದಿಂದ – ೩೦ ಕಿ.ಮೀ.

ಕ್ರಿ.ಶ. ೧೫೮೫ ರಿಂದ ೧೮೨೪ ರವರೆಗೆ ೨೩೯ ವರ್ಷಗಳವರೆಗೆ ಆಡಳಿತ ನಡೆಸಿದ ೧೨ ಜನ ಕಿತ್ತೂರು ಅರಸರ ಇತಿಹಾಸ ಕಿತ್ತೂರಿನದು. ಶಿವಮೊಗ್ಗ ಜಿಲ್ಲೆ ಸಾಗರದ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿಗಳಿಂದ ಪ್ರಾರಂಭವಾಗಿ ಭರತ ಸ್ವಾತಂತ್ರ‍್ಯ ಚಳುವಳಿಯ ಬೆಳ್ಳಿಚುಕ್ಕಿ ರಾಣಿ ಚನ್ನಮ್ಮನವರೆಗೆ ಮುಂದುವರೆದುದು. ೧೬೬೦ ರಿಂದ ೧೬೯೧ ರವರೆಗೆ ರಾಜ್ಯ ಆಳಿದ ಅಲ್ಲಪ್ಪಗೌಡ ಸರದೇಸಾಯಿ ವಿಖ್ಯಾತನು. ಕೆಚ್ಚೆದೆಯ ಕನ್ನಡಿಗರು ಎಂದು ಹೆಮ್ಮೆಯಿಂದ ಬಾಳಿದ ಕಿತ್ತೂರ ಸಂಸ್ಥನದ ಗತ ವೈಭವವನ್ನು ಹೇಳುವ ಕೋಟೆ ಅವಶೇಷ ಕಿತ್ತೂರಿನಲ್ಲಿದೆ. ವಿಶಾಲದ್ವಾರ ಮಂಟಪ, ತೇಗಿನ ಮರದ ಕಂಬದ ಶ್ರೇಣಿ, ಅತಿಥಿ ಕೋಣೆಗಳು, ಸಭಾಗೃಹ, ಭೋಜನಾಲಯ, ಉಗ್ರಾಣ, ಸ್ನಾನದ ಮನೆ, ನೀರಿನ ಬಾವಿ, ನೀರು ಪೂರೈಕೆಯ ತಾಮ್ರದ ಕೊಳವೆ, ಕಲ್ಲಿನ ಪಾತ್ರೆಗಳು, ಬಾನಿಗಳು ಏನೆಲ್ಲವನ್ನು ಒಳಗೊಂಡ ಮೂರಂತಸ್ತಿನ ಅರಮನೆ ಇದಾಗಿತ್ತು.

 

ಬೈಲಹೊಂಗಲ

೧೮೨೪ರ ಅಕ್ಟೋಬರ ೨೩ ರ ವಿಜಯೋತ್ಸವದ ನಂತರ ಡಿಸೆಂಬರ ೫ ರಂದು ಬಂದಿಯಾದ ಚನ್ನಮ್ಮನನ್ನು ಬೈಲಹೊಂಗಲದ ಜೈಲಿನಲ್ಲಿಡಲಾಯಿತು. ೧೮೨೯ನೇ ಫೆಬ್ರವರಿ ೨ ರಂದು ಚನ್ನಮ್ಮ ಕೊನೆಯುಸಿರೆಳೆದಳು. ವೀರ ರಾಣಿಯ ಸಮಾಧಿ ಬೈಲಹೊಂಗದಲ್ಲಿದೆ.

ಬೆಳವಡಿ ಮಲ್ಲಮ್ಮ – ಕರ್ನಾಟಕ ಇತಿಹಾಸದಲ್ಲಿ ಬೆಳವಡಿ ಮಲ್ಲಮ್ಮಳ ಹೆಸರು ಸುಪ್ರಸಿದ್ಧ. ಶಿವಾಜಿಯೊಂದಿಗೆ ಕಾದಾಡಿ ಜಯ ಪಡೆದು ತನ್ನ ಸಂಸ್ಥಾನವನ್ನು ರಕ್ಷಿಸಿದಳು.

 

ಸಂದರ್ಶಿಸಬಹುದಾದ ಇತರ ಸ್ಥಳಗಳು

 • ಗಂಗಾಂಬಿಕಾ ಮುಕ್ತಿಕ್ಷೇತ್ರ
 • ಕಾದರವಳ್ಳಿ-ಸೀಮೀಮಠ
 • ರಾಯಣ್ಣನ ಸಂಗೊಳ್ಳಿ
 • ತುರಕರ ಸೀಗೀಹಳ್ಳಿ
 • ದೇಶನೂರ ನಿರಂಜನ ಮಹಲ
 • ತಿಗಡಿ ಜಲಾಶಯ
 • ಕಿತ್ತೂರಿನ ಕಲ್ಮಠ
 • ಬಾಲಕಿಯರ ಸೈನಿಕ ವಸತಿ ಶಾಲೆ ಕಿತ್ತೂರ
 • ಅಕ್ಕನಾಗಲಾಂಬಿಕಾ ಸಮಾಧಿ ಮರಡಿನಾಗಲಾಪೂರ
 • ಕಿತ್ತೂರ ಬತೇರಿ
 • ತಿರುಳಗನ್ನಡ ನಾಡು ವಕ್ಕುಂದ
 • ಮಲ್ಲಮ್ಮನ ಬೆಳವಡಿ

 

ಸವದತ್ತಿ

ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ.

ಹಿಂದೆ ಸುಗಂಧವರ್ತಿ ಎಂದು ಪ್ರಸಿದ್ಧವಾದ ಇಂದಿನ ಸವದತ್ತಿ ಯಲ್ಲಮ್ಮನಿಂದಾಗಿ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಶಕ್ತಿ ಸ್ಥಳವಾಗಿದೆ. ಪರಶುರಾಮನ ತಾಯಿ, ಜಮದಗ್ನಿಯ ಪತ್ನಿ ಪಾವಿತ್ರ‍್ಯತೆಯ ಪ್ರತೀಕ ರೇಣುಕಾದೇವಿ. ಮಲಪ್ರಭೆಯ ದಡದಲ್ಲಿ ಯಲ್ಲಮ್ಮನ ಗುಡ್ಡದಲ್ಲಿ ಎಲ್ಲರ ಅಮ್ಮ ಎಲ್ಲಮ್ಮನೆನಿಸಿರುವಳು. ವರ್ಷದ ೬ ತಿಂಗಳು ನಿರಂತರ ಜಾತ್ರೆ ನಡೆಯುತ್ತಿರುತ್ತದೆ.

ಸವದತ್ತಿ ಕೋಟೆ

ಸವದತ್ತಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ೯ ಕೊಟೆಗಳಿವೆ. ಪರಸಗಡ, ಹೂಲಿ, ತಲ್ಲೂರ, ಮುರಗೋಡ ಹಾಗೂ ಚಚಡಿ ಕೋಟೆ ಮಹತ್ವದ್ದಾಗಿವೆ. ಸವದತ್ತಿ ಕೋಟೆಯನ್ನು ೧೦೯೬ರಲ್ಲಿ ಇಮ್ಮಡಿ ಕಾರ್ತಿವೀರ ಕಟ್ಟಿದನೆಂದು ಹೇಳುತ್ತಾರೆ. ಎತ್ತರವಾದ ಹಾಗೂ ಗಟ್ಟಿಮುಟ್ಟಾದ ಗೋಡೆ ಕಲ್ಲಿನಿಂದ ನಿರ್ಮಿತವಾದ ಬಾಗಿಲುಗಳು, ಗುಪ್ತಮಾರ್ಗ, ಅರಮನೆ ಮುಂತಾದ ಅಂಶಗಳನ್ನು ಹೊಂದಿದ ಸವದತ್ತಿ ಕೋಟೆ ಶೈಕ್ಷಣಿಕ ಮಾರ್ಗದರ್ಶಿಯಾಗಿದೆ.

ಸವದತ್ತಿಯಿಂದ – ೯ ಕಿ.ಮೀ.
ಬೆಳಗಾವಿಯಿಂದ – ೮೭ ಕಿ.ಮೀ.

ಹೂಲಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವು ಸುಮಾರು ೧೦೪೪ರಲ್ಲಿ ಕಟ್ಟಿಸಿದ ಪುರಾತನ ದೇವಾಲಯವಾಗಿದೆ. ೫ ಗರ್ಭಗುಡಿಗಳನ್ನು ಹೊಂದಿರುವುದಕ್ಕೆ ಇದು ಪಂಚಲಿಂಗೇಶ್ವರ ದೇವಾಲಯವಾಗಿರಬಹುದು. ವಿಶಾಲವಾದ  ನವರಂಗ, ಸುಂದರ ಕೆತ್ತನೆ, ೨೦ ಕಂಬಗಳು, ೧೨ ಅಂಕಣಗಳು ಇವೆ. ಪ್ರಾಚೀನ ಶಿಲ್ಪಕಲೆಯ ಈ ಮಾದರಿ ಆಕರ್ಷಕವಾಗಿದೆ.

ಸವದತ್ತಿಯಿಂದ – ೨೫ ಕಿ.ಮೀ.
ಬೆಳಗಾವಿಯಿಂದ – ೫೫ ಕಿ.ಮೀ.
ಬೈಲಹೊಂಗಲದಿಂದ – ೧೫ ಕಿ.ಮೀ.

ಶಿವ-ಪಾರ‍್ವತಿಯರ ಕಲ್ಯಾಣ ಕ್ಷೇತ್ರವೆಂದು ಪ್ರಸಿದ್ಧವಾದ ಸೊಗಲ ಸೋಮೇಶ್ವರ ದೇವಸ್ಥಾನ ಪುರಾತನ ಶಿಲ್ಪ ಶೈಲಿಯನ್ನು ಹೊಂದಿದೆ. ದೇವಸ್ಥಾನದ ಎದುರಿಗೆ ಇರುವ ಜಲಪಾತ ಬೆನ್ನುನೋವು ನಿವಾರಕವೆಂದು ಪ್ರಸಿದ್ಧವಾಗಿದೆ.

ಬೆಳಗಾವಿಯಿಂದ – ೬೩ ಕಿ.ಮೀ.
ಸವದತ್ತಿಯಿಂದ – ೨೦ ಕಿ.ಮೀ.

ಬೆಟ್ಟಗುಡ್ಡಗಳಲ್ಲಿ ಹರಿಯುವ ಮಲಪ್ರಭೆ ಮುನವಳ್ಳಿಯ ಹತ್ತಿರದ ಈ ಪ್ರದೇಶದಲ್ಲಿ ವಿಶಾಲ ಬೆಟ್ಟಗಳಿಂದಾಗಿ ನಿಂತಾಗ ನವಿಲೊಂದು ಬೆಟ್ಟದ ಮೇಲೆ ನಿಂತು ಮಲಪ್ರಭೆಯನ್ನು ಹೀಯಾಳಿಸಿತಂತೆ. ಆಗ ಮಲಪ್ರಭೆ ತನ್ನ ಶಕ್ತಿಯನ್ನೆಲ್ಲ ಬಳಸಿ ಬೆಟ್ಟ ಹಾಗೂ ನವಿಲನ್ನು ನಾಶಮಾಡಿ ಮುನ್ನುಗ್ಗಿತಂತೆ. ಅದಕ್ಕಾಗಿ ನವಿಲುತೀರ್ಥವೆಂಬ ಹೆಸರು ಬಂದಿತೆಂದು ಪ್ರತೀತಿ. ಬೆಳಗಾವಿ, ಧಾರವಾಡ ಜಿಲ್ಲೆಯ ರೈತರ, ಕುಡಿಯುವ ನೀರಿನ ಆಸರೆಯಾಗಿರುವ ಅಣೆಕಟ್ಟೆಗೆ ಹತ್ತಿರದ ರೇಣುಕಾ ಎಲ್ಲಮ್ಮನ ಹೆಸರನ್ನಿಡಲಾಗಿದೆ. ಅಣೆಕಟ್ಟು ಪ್ರದೇಶದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ಆಕರ್ಷಣೀಯ ಪ್ರವಾಸ ಕೇಂದ್ರವಾಗಿದೆ.

 

ಸಂದರ್ಶಿಸಬಹುದಾದ ಇತರ ಸ್ಥಳಗಳು

 • ಮುರಗೋಡ ದುರದುಂಡೇಶ್ವರ ಮಠ
 • ಇಂಚಲ
 • ಕಾರಿಮನಿ
 • ಶಿವಾಪುರ (ಕಡಬಿ)
 • ಚಚಡಿ
 • ಶಿರಸಂಗಿ
 • ಚಿದಂಬರೇಶ್ವರ ದೇವಾಲಯ ಮುರಗೋಡ
 • ಸಿದ್ಧನಕೊಳ್ಳ ಜಲಧಾರೆ
 • ಚಿಕ್ಕ ಸೋಮೇಶ್ವರ ಕ್ಷೇತ್ರ
 • ವರವಿಕೊಳ್ಳ ಮುನವಳ್ಳಿ
 • ಸೊಗಲ ಸಿದ್ದಪ್ಪಜ್ಜನ ದೇವಸ್ಥಾನ ಸೊಗಲ

 

ರಾಮದುರ್ಗ

ಬೆಳಗಾವಿಯಿಂದ ೧೦೫ ಕಿ.ಮೀ.

ರಾಮದುರ್ಗ ಅರಮನೆ

ಶಿವಾಜಿ ಆಡಳಿತ ಕಾಲದಲ್ಲಿ ಭುಜಬಲ ದುರ್ಗವಾಗಿದ್ದ ಈ ಊರು ಔರಂಗಜೇಬನ ಆಡಳಿತದಲ್ಲಿ ಭಾವೆ ಮನೆತನ ಆಡಳಿತಕ್ಕೊಳಪಟ್ಟಿತು. ಅವರ ರಾಮ ಭಕ್ತಿಯಿಂದ ರಾಮದುರ್ಗವಾಯಿತು. ಭಾರತ ಸ್ವಾತಂತ್ರ‍್ಯದವರೆಗೆ ರಾಮದುರ್ಗ ಆಳಿದ ಭಾವೆ ಮನೆತನದಿಂದ ನಿರ್ಮಾಣವಾದ ಭವ್ಯ ಅರಮನೆ ಇದು. ಉತ್ಕೃಷ್ಠ ವಾಸ್ತು ಶಿಲ್ಪವನ್ನು ಹೊಂದಿರುವ ಕೋಟೆ ಅಧ್ಯಯನ ಯೋಗ್ಯವಾದುದು.

ಬೆಳಗಾವಿಯಿಂದ ೧೧೫ ಕಿ.ಮೀ.
ರಾಮದುರ್ಗದಿಂದ ೧೦ ಕಿ.ಮೀ.

ಮರಾಠಾ ಭಾವೆ ಮನೆತನದ ಆಡಳಿತಕ್ಕೊಳಪಟ್ಟ ಸಮಯದಲ್ಲಿ ಮುದಕವಿ ನಾಮಾಂಕಿತ ಹೊಂದಿದ ಅರಸನಿಂದ ಕಟ್ಟಲ್ಪಟ್ಟ ಕೋಟೆ. ಮರಾಠಾ ಆಡಳಿತಕ್ಕೆ ಒಳಪಟ್ಟ ಪ್ರದೇಶವಾದರೂ ಸ್ವಾತಂತ್ರ‍್ಯ ನಂತರ ಕನ್ನಡಮಯವಾಗಿ ಪರಿವರ್ತನೆ ಹೊಂದಿದೆ.

ಬೆಳಗಾವಿಯಿಂದ – ೧೦೫ ಕಿ.ಮೀ.
ರಾಮದುರ್ಗದಿಂದ – ೧೨ ಕಿ.ಮೀ.

ಕಿಲ್ಲಾ ತೋರಗಲ್ಲ ಮತ್ತು ದೇವಸ್ಥಾನ

ಮರಾಠರ ಆಡಳಿತ ಅವಧಿಯಲ್ಲಿ ಶಿಂಧೆ ಮಹಾರಾಜನು ಕಟ್ಟಿಸಿದ ಏಳು ಸುತ್ತಿನ ಕೋಟೆ. ಶಿಥಿಲಾವಸ್ಥೆಯಲ್ಲಿರುವ ಕೋಟೆಯು ಐತಿಹಾಸಿಕ ಅಧ್ಯಯನಕ್ಕೆ ಯೋಗ್ಯವಾದುದಾಗಿದೆ.

ಬೆಳಗಾವಿಯಿಂದ ೧೨೦ ಕಿ.ಮೀ.
ರಾಮದುರ್ಗದಿಂದ ೧೦ ಕಿ.ಮೀ.

ಸುರೇಬಾನದಿಂದ ೩ ಕಿ.ಮೀ. ಅಂತರದಲ್ಲಿರುವ ನಿಸರ್ಗದ ಮಡಿಲಿನಲ್ಲಿಯ ಶಬರಿಕೊಳ್ಳ ರಾಮಾಯಣದ ಐತಿಹ್ಯ ಉಳ್ಳದ್ದು. ಶ್ರೀ ರಾಮನಿಗಾಗಿ ಶಬರಿ ಕಾಯ್ದದ್ದು ಇಲ್ಲಿಯೇ ಎನ್ನುವ ನಂಬಿಕೆ. ಸದ್ಯ ಇಲ್ಲಿ ನಡೆಯುವ ಜಾತ್ರೆ, ಸಮಾರಂಭಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೆರೆಯುತ್ತಿವೆ.

ಬೆಳಗಾವಿಯಿಂದ ೫೦ ಕಿ.ಮೀ.
ರಾಮದುರ್ಗದಿಂದ ೧೪ ಕಿ.ಮೀ.

ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧವಾದ ಗೊಡಚಿ ವೀರಭದ್ರ ದೇವಾಲಯವು ನದಿ ತೀರದಲ್ಲಿದೆ. ಈ ದೇವಾಲಯ ವಿಜಯನಗರ ಶಿಲ್ಪಶೈಲಿಯಂತಿದೆ. ಮುಖ್ಯ ದೇವರು ವೀರಭದ್ರನಾದರೂ ಕಾಳಮ್ಮ, ಮಾರುತಿಯ ಚಿಕ್ಕ ಗುಡಿಗಳು ಆವರಣದಲ್ಲಿವೆ. ಗರ್ಭಗೃಹ, ಮುಖಮಂಟಪವನ್ನು ದೇವಾಲಯ ಹೊಂದಿದೆ. ಡಿಸೆಂಬರ್‌ ತಿಂಗಳಲ್ಲಿ ಬೃಹತ್‌ ಜಾತ್ರೆ ಜರುಗುತ್ತದೆ.

 

ಸಂದರ್ಶಿಸಬಹುದಾದ ಇತರ ಸ್ಥಳಗಳು

 • ಮೇಗುಂಡೇಶ್ವರ ಕೊಳ್ಳ
 • ಸಿದ್ಧರಾಮೇಶ್ವರ ಕೊಳ್ಳ
 • ಮುಳ್ಳೂರ ಘಾಟ
 • ಚಂದರಗಿ ಕ್ರೀಡಾ ಶಾಲೆ
 • ತೋರಗಲ್‌ ಮಠ
 • ಅವರಾದಿ ಮಠ