ವೇಣುಗ್ರಾಮ ಬಳ್ಳಿಗಾವಿ ಬೆಳಗಾವಿ

ರಾಜ್ಯದ ಅತ್ಯಂತ ಹಳೆಯ ಪಟ್ಟಣ ಬೆಳಗಾವಿ. ನಗರದ ಪೂರ್ವದಲ್ಲಿ ವರ್ತುಲಾಕಾರದ ಕೋಟೆಯಿದೆ. ಸುಭದ್ರವಾದ ೧೦ ಎಕರೆಯಷ್ಟು ವಿಸ್ತಾರವಾದ ಕೋಟೆ ಎರಡು ಬಾಗಿಲುಗಳನ್ನು ಹೊಂದಿದ್ದು, ಉತ್ತರದ ಬಾಗಿಲಲ್ಲಿ ದುರ್ಗಾದೇವಿಯ ದೇವಸ್ಥಾನವಿದೆ. ಸುತ್ತಲೂ ಕಂದಕವಿರುವ ಕೋಟೆಯ ಗೋಡೆ, ಶಿಲಾಲೇಖಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳಿಂದ ಕೂಡಿದೆ. ಕೋಟೆಯೊಳಗಿರುವ ಸಫಾ ಮಸೀದಿ, ರಾಮಕೃಷ್ಣ ಆಶ್ರಮ, ಐತಿಹಾಸಿಕ ಹಿನ್ನೆಲೆ ಹೊಂದಿದ ಅತ್ಯಂತ ಸುಂದರ ರಚನೆಗಳಾಗಿವೆ. ಇಲ್ಲಿರುವ ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರವು ರಾಷ್ಟ್ರಮಟ್ಟದ ಕಛೇರಿಯಾಗಿದೆ.

ಸಫಾ ಮಸೀದಿ ಕೋಟೆ, ಬೆಳಗಾವಿ

ಕೋಟೆಯ ಉತ್ತರ ದಿಕ್ಕಿನ ಹೆಬ್ಬಾಗಿಲ ಎದುರುಗಡೆ ಕೋಟೆ ಕೆರೆ ಇದೆ. ಪುರಾತನವಾದ ಈ ಕೆರೆಯನ್ನು ಆಧನೀಕರಣಗೊಳಿಸಿ ವಿಹಾರ ತಾಣವನ್ನಾಗಿಸಲಾಗಿದೆ. ಕೋಟೆಯಲ್ಲಿರುವ ಕಮಲ ಬಸದಿ ಹಾಗೂ ಇನ್ನಿತರ ಬಸದಿಗಳನ್ನು ಸುಮಾರು ೧೦-೧೨ನೇ ಶತಮಾನದ ಕಾಲಾವಧಿಯಲ್ಲಿ ಜೈನ ಅರಸರು ಕಟ್ಟಿಸಿದರೆಂದು ಇತಿಹಾಸದ ಪುಟಗಳು ಹೇಳುತ್ತವೆ. ಹಲವಾರು ಪುರಾತನ ಬಾವಿಗಳಿರುವ ಈ ಕೋಟೆಯಲ್ಲಿ ೧೦೮ ಬಸದಿಗಳು ಇದ್ದವೆಂದು ಪ್ರತೀತಿ.

ಕೋಟೆಕೆರೆ, ಬೆಳಗಾವಿ

ಕಮಲ ಬಸದಿ, ಕೋಟೆ ಬೆಳಗಾವಿ

ಬ್ರಿಟೀಷರ ಕಾಲದ ವಾಸ್ತುಶಿಲ್ಪವನ್ನು ಹೊಂದಿದ ಕಟ್ಟಡಗಳ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮಳ ಮೂರ್ತಿ ಇರುವ ಚನ್ನಮ್ಮ ವೃತ್ತ ಎಲ್ಲರ ಹೆಮ್ಮೆಯದು. ಪಕ್ಕದ ಜಿಲ್ಲಾಧಿಕಾರಿಗಳ ಕಟ್ಟಡದ ಹತ್ತಿರವೇ ಶೂರ ಸಂಗೊಳ್ಳಿ ರಾಯಣ್ಣನ ಸ್ಮಾರಕವಿದೆ.

ರಾಣಿ ಚೆನ್ನಮ್ಮ ವೃತ್ತ, ಬೆಳಗಾವಿ

ಸಂಗೊಳ್ಳಿ ರಾಯಣ್ಣನ ಪ್ರತಿಮೆ, ಬೆಳಗಾವಿ

ಉನ್ನತ ವಿದ್ಯಾಭ್ಯಾಸಕ್ಕೆ ಉತ್ತರ ಕರ್ನಾಟಕದ ಜನರ ವಿದ್ಯಾರ್ಥಿಗಳ ಹಸಿವು ನೀಗಿಸಿದ ಕೆ.ಎಲ್‌.ಇ. ಸಂಸ್ಥೆ ಸಿರಸಂಗಿ ಲಿಂಗರಾಜರ ಮಹಾವಿದ್ಯಾಲಯ, ರಾಜಾ ಲಖಮಗೌಡ ವಿಜ್ಞಾನ ವಿದ್ಯಾಲಯಗಳು ವಾಸ್ತುಶಿಲ್ಪದಲ್ಲಿಯೂ ಪ್ರಾಚೀನ ಸೊಬಗನ್ನು ಹೊಂದಿವೆ. ಸಂಭಾಜಿ ವೃತ್ತದ ಮನೆ ಪುರಾತನ ವಾಸ್ತುಶಿಲ್ಪದ ಆಕರ್ಷಣೆ ಹೊಂದಿದೆ. ದಂಡು ಪ್ರದೇಶದ ಸೇಂಟ್‌ಮೇರಿ ಚರ್ಚ್‌, ಮಹದೇವ ಮಂದಿರ, ದೇಶಕ್ಕೆ ಅಗ್ರಗಣ್ಯ ಕಮಾಂಡೋಗಳನ್ನು ಒದಗಿಸುವ ಮರಾಠಾ ಲೈಟ್‌ಇಣ್‌ಫೆಂಟ್ರಿ ವಿಭಾಗದಲ್ಲಿರುವ ಯುದ್ಧ ಟ್ಯಾಂಕರಗಳು ಆಕರ್ಷಣೀಯವಾಗಿವೆ.

ಸೇಂಟ್‌ಮೇರಿ ಚರ್ಚ್‌, ಬೆಳಗಾವಿ

ಮಿಲಿಟರಿ ವಸ್ತು ಸಂಗ್ರಹಾಲಯ, ಬೆಳಗಾವಿ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕಪಿಲೇಶ್ವರ ದೇವಸ್ಥಾನ, ಟಿಳಕವಾಡಿಯ ಸಾಯಿಮಂದಿರ, ಮಾರುತಿಗಲ್ಲಿಯ ಮಾರುತಿ ದೇವಸ್ಥಾನ, ಪಾಟೀಲ ಗಲ್ಲಿಯ ಶನಿಮಂದಿರ, ಮಾಳಮಾರುತಿಯ ಮಾರುತಿ ದೇವಸ್ಥಾನಗಳು ಐತಿಹಾಸಿಕ ಹಿನ್ನೆಲೆಯೊಂದಿಗೆ ಶ್ರದ್ಧಾ-ಭಕ್ತಿಯ ಕೇಂದ್ರಗಳೂ ಆಗಿವೆ.

ಮರಾಠಾ ಲೈಟ್‌ ಇನ್‌ಫೆಂಟ್ರಿ, ಕ್ಯಾಂಪ್‌, ಬೆಳಗಾವಿ

ವೀರಸೌಧ, ಬೆಳಗಾವಿ

ಶಹಾಪುರದಲ್ಲಿರುವ ಕುಮಾರ ಗಂಧರ್ವರ ಮನೆ, ಹಳೆಯ ಕಾರ್ಪೋರೇಶನ ಕಟ್ಟಡದ ಪಕ್ಕದಲ್ಲಿರುವ ವಿವೇಕಾನಂದರು ವಾಸಮಾಡಿದ್ದ ಮನೆ, ಬೆನನ್‌ಸ್ಮಿಥ್‌ಹೈಸ್ಕೂಲ ಹಿಂಭಾಗದ ಹಾಗೂ ರೇಲ್ವೇ ಸೇತುವೆಯ ಹತ್ತಿರದ ಬ್ರಿಟಿಷ್‌ಅಧಿಕಾರಿಗಳ ಸಮಾಧಿಗಳು ಇತಿಹಾಸದ ಹೆಜ್ಜೆ ಗುರುತುಗಳಾಗಿವೆ. ಗಣಪತಿ ಗಲ್ಲಿಯ ಗಡಿಯಾರ, ಶಿವಾಜಿ ಉದ್ಯಾನವನ, ಗಾಂಧೀಜಿ ಉದ್ಯಾನವನ, ಅಂಬೇಡ್ಕರ ಉದ್ಯಾನವನಗಳು ನಗರದ ಹೆಗ್ಗುರುತುಗಳಾಗಿವೆ.

ಕಪಿಲೇಶ್ವರ ದೇವಾಲಯ, ಬೆಳಗಾವಿ

ಶಿವಾಜಿ ಗಾರ್ಡನ್‌, ಬೆಳಗಾವಿ

ವೈಜ್ಞಾನಿಕ ಚಿಂತನೆ ಹಾಗೂ ಬಾಹ್ಯಾಕಾಶ ಅಧ್ಯಯನಕ್ಕಾಗಿ ಶಿವಬಸವ ನಗರದ ವಿಜ್ಞಾನ ಕೇಂದ್ರ, ಅಂಧ ಮಕ್ಕಳಿಗೆ ಜ್ಞಾನದ ದೃಷ್ಟಿಯಿಂದ ಜಗತ್ತನ್ನು ತೋರಿಸುವ ಮಹೇಶ್ವರಿ ಅಂಧ ಮಕ್ಕಳ ಶಾಲೆ ನಾಡಿಗೆ ಮಾದರಿಯಾಗಿವೆ.

ಕೆ.ಎಲ್‌.ಇ. ಸಂಸ್ಥೆಯ ವೈದ್ಯಕೀಯ ಆಸ್ಪತ್ರೆ, ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾವಿ