ಬೆಳಧಡಿ ಬ್ರಹ್ಮಾನಂದರು ಬ್ರಹ್ಮಚೈತನ್ಯರ ಭಕ್ತರು. ಅವರಿಂದ ಉಪದೇಶ ಪಡೆದರು. ರಾಮನಾಮವನ್ನು ನಂಬಿ ಬದುಕಿದರು. ಬದುಕುವ ದಾರಿಯನ್ನು ಇತರರಿಗೆ ತೋರಿಸಿದರು. |
ಬೆಳಧಡಿ ಬ್ರಹ್ಮಾನಂದರು
ಹುಟ್ಟಿದ್ದು ಕರ್ನಾಟಕ, ಓಡಾಡಿದ್ದು ದೇಶದ ಉದ್ದಗಲ, ನಂಬಿದ್ದು ರಾಮನಾಮ, ಮಾಡಿದ್ದು ಲೋಕ ಸಂಗ್ರಹ, ಜನರ ಸೇವೆ. ಭಕ್ತಿಯೇ ಮಾರ್ಗ, ಆದರೂ ಬುದ್ಧಿಯ ಒರೆಗಲ್ಲಿಗೆ ಹಚ್ಚಿನೋಡುವ ಸ್ವಭಾವ. ಅವರೇ ಕರ್ನಾಟಕದ ಸಂತ ಬೆಳಧಡಿಯ ಶ್ರೀ ಬ್ರಹ್ಮಾನಂದರು.
ಧರ್ಮನಿಷ್ಠ ಮನೆತನ
ಉತ್ತರ ಕರ್ನಾಟಕದ ಜಾಲಿಹಾಳ ಬ್ರಹ್ಮಾನಂದರ ಹುಟ್ಟೂರು. ಇವರ ಮನೆತನ ಗಾಡಗೋಳಿ. ತಾತ ಪ್ರಸಿದ್ಧ ವೈದಿಕರಾದ ರಾಮಭಟ್ಟರು. ಧರ್ಮಾಚರಣೆ ಮನೆತನದ ನೆಲೆಗಟ್ಟು. ರಾಮಭಟ್ಟರ ಎರಡನೆಯ ಮಗನೇ ಬಾಳಂಭಟ್ಟ, ವೇದಶಾಸ್ತ್ರ ಪಂಡಿತರು. ಪರಮ ಶಾಂತ ಸ್ವಭಾವ. ಜೀವೂಬಾಯಿ ಇವರ ಪತ್ನಿ. ಅತಿಥಿ ಸತ್ಕಾರ ಆಕೆಯ ಜೀವನದ ಶ್ರದ್ಧೆ. ಇವರಿಗೆ ಗುರುನಾಥಭಟ್ಟ, ವೆಂಕಣ್ಣ ಭಟ್ಟ, ಅನಂತಶಾಸ್ತ್ರಿ, ನಾರಾಯಣ ಭಟ್ಟ ಮತ್ತು ಗಂಗಾಬಾಯಿ ಎಂಬ ಮಕ್ಕಳು. ಇವರಲ್ಲಿ ಅನಂತನೇ ಈ ಕೃತಿಯ ನಾಯಕ.
ಎಲ್ಲರಂತಲ್ಲ ಈ ಹುಡುಗ
ಇವನಿಗೆ ಅನಂತನೆಂದು ಹೆಸರು ಬಂದದ್ದು ಆಕಸ್ಮಿಕವಾಗಿ. ತಂದೆ ಬಾಳಂಭಟ್ಟರು ಎಂದಿನಂತೆ ಸ್ನಾನಕ್ಕಾಗಿ ಊರ ಹೊರಗಿನ ಕೆರೆಗೆ ಹೋದರು. ಮುಳುಗು ಹಾಕಿದರು. ಎದ್ದಾಗ ಅನಂತನ ದಾರವಿರುವ ಕೆಂಪು ಗಂಟು ಸಿಕ್ಕಿತು. ಅಂದಿನಿಂದ ಅನಂತನ ವ್ರತ ಅವರ ಮನೆಯಲ್ಲಿ ಪ್ರಾರಂಭವಾಯಿತು. ಅದೇ ವರ್ಷ ಅವರಿಗೆ ಗಂಡು ಮಗುವೊಂದು ಹುಟ್ಟಿತು. ಶಾಲಿವಾಹನ ಶಕ ೧೭೮೦ ಕಾಳೆಯುಕ್ತಿ ಸಂವತ್ಸರದ ಮಾಘ ಮಾಸದ ಕೃಷ್ಣಪಕ್ಷ ದಶಮಿ, ಗುರುವಾರ, ಅಂದರೆ ೧೮೫೯ರ ಫೆಬ್ರವರಿ ೨೭ನೇ ತಾರೀಖು. ಮಗುವಿಗೆ ಅನಂತನೆಂದೇ ಹೆಸರು ಇಟ್ಟರು.
ಅನಂತ ದಿನೇ ದಿನೇ ಬೆಳೆದ. ಮಗುವಾಗಿದ್ದಾಗಲೇ ಪುರಾಣ ಪುಣ್ಯಕಥೆಗಳು ಅವನಿಗೆ ಇಷ್ಟ. ಆ ಸ್ಥಳಗಳಲ್ಲಿ ಎಲ್ಲರಿಗಿಂತ ಮೊದಲು ಅವನು ಹಾಜರು. ತದೇಕಚಿತ್ತನಾಗಿ ಕಥೆ ಆಲಿಸುತ್ತಿದ್ದ. ಕೊನೆಯಲ್ಲಿ ಪೂಜೆ ಮಾಡುವಾಗ ಅವನೇ ಗಂಟೆ ಬಾರಿಸಬೇಕು, ಹಠ. ಪ್ರಸಾದ ತಾನೇ ಹಂಚಬೇಕು, ಮೊಂಡು. ನಾಮ ಸಂಕೀರ್ತನೆ ಆಗುವಾಗ ಹೊರ ಪ್ರಪಂಚದ ಅರಿವಿರುತ್ತಿರಲಿಲ್ಲ. ತೀರ್ಥವನ್ನೆರಚಿ ಎಬ್ಬಿಸ ಬೇಕಾಗುತ್ತಿತ್ತು. ಮುಗ್ಧ ಬಾಲಕ, ಮೇಲೆ ಅಸಾಧಾರಣ ಭಕ್ತಿಭಾವ, ಸುತ್ತಲಿನ ಜನ ಆನಂದ ಪಡುತ್ತಿದ್ದರು.
ತುಂಟ ಪೋರ
ವಯಸ್ಸಿಗೆ ತಕ್ಕ ಹಾಗೆ ಅನಂತ ತುಂಟತನ ವನ್ನು ಮಾಡುತ್ತಿದ್ದ. ಅದನ್ನು ತಡೆಯುವುದಕ್ಕಾಗಿ ಶಾಲೆಗೆ ಹಾಕಿದರು. ಶಾಲೆ ತಪ್ಪಿಸಿ ಚಿನ್ನಿ-ದಾಂಡು ಆಟವಾಡುತ್ತಿದ್ದ. ಊರಿನ ಸೀಬೆ, ದಾಳಿಂಬೆ, ಮಾವು ಇವನಿಗೆ ಬಲಿಯಾಗುತ್ತಿದ್ದವು. ಉಪಾಧ್ಯಾಯರು ಇವನ ಕಾಟದಿಂದ ಬೇಸತ್ತರು. ಬಾಳಂಭಟ್ಟರನ್ನು ಕಂಡು, ಅನಂತನ ಬಗ್ಗೆ ದೂರಿತ್ತರು. ಅವನಿಗೆ ಬುದ್ಧಿ ಕಲಿಸಲು ತಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದರು.
ತುಂಟ ವಟು
ತಂದೆತಾಯಿಗಳು ಬೇಸರಗೊಂಡರು, ಒಳಗೊಳಗೆ ಕೊರಗಿದರು. ಉಪನಯನ ಮಾಡಿದರೆ ಸರಿಹೋಗ ಬಹುದು ಎನ್ನಿಸಿತು. ಸರಿ, ಎಂಟನೆಯ ವರ್ಷದಲ್ಲಿ ಬ್ರಹ್ಮೋಪದೇಶ ಮಾಡಿದರು. ಮೂರೇ ದಿನಗಳಲ್ಲಿ ಸಂಧ್ಯಾವಂದನೆ ಶ್ಲೋಕಗಳು ಬಾಯಿಗೆ ಬಂದವು. ವಿಷ್ಣು ಸಹಸ್ರನಾಮ, ಭಗವದ್ಗೀತಾ, ಶಿವಕವಚ, ರಾಮರಕ್ಷಾ ಅವನಿಗೆ ಕಂಠಪಾಠವಾದವು. ವೇದ, ತರ್ಕ, ವ್ಯಾಕರಣ ಮುಂತಾದವುಗಳ ಪಾಠ ಶುರುವಾಯಿತು. ಅನಂತ ತುಂಟ, ದಿಟ. ಆದರೆ ಏಕಪಾಠಿ, ಆದುದರಿಂದ ಅವನನ್ನು ಬೈಯುವುದು ಕಷ್ಟವಾಗುತ್ತಿತ್ತು.
ಉಪನಯನವೇನೋ ಆಯಿತು, ಆದರೆ ತುಂಟತನ ತಪ್ಪಲಿಲ್ಲ. ಇಂದು ಯಾರದೋ ತೋಟಕ್ಕೆ ನುಗ್ಗಿದ, ಯಾರದೋ ಮನೆಯಲ್ಲಿ ಬೆಣ್ಣೆ ಕದ್ದ, ಗೆಳೆಯರೊಂದಿಗೆ ಹೊಡೆದಾಟವಾಡಿದ ಮುಂತಾದ ದೂರುಗಳ ಸಾಲು ತಂದೆತಾಯಿಯರನ್ನು ಚಿಂತೆಗೀಡುಮಾಡಿತು.
ಎಲ್ಲಿ ಬ್ರಹ್ಮಪಿಶಾಚಿ ?
ತುಂಡಾಡಿಗ ಅನಂತ ಮತ್ತೊಂದು ಭರ್ಜರಿ ಕೆಲಸ ಮಾಡಿದ. ಊರಾಚೆ ಮಾವಿನ ತೋಪಿತ್ತು. ಹಾಡು ಹಗಲಲ್ಲೇ ಜನ ಅಲ್ಲಿಗೆ ಹೋಗಲು ಹೆದರುತ್ತಿದ್ದರು. ಬ್ರಹ್ಮಪಿಶಾಚಿಯೊಂದು ಅಲ್ಲಿದೆ ಎಂಬುದೇ ಕಾರಣ. ಅನಂತ ಬ್ರಹ್ಮಪಿಶಾಚಿಯನ್ನು ಹುಡುಕಿಕೊಂಡು ಅಲ್ಲಿಗೆ ಹೊರಟ. ಮರ ಹತ್ತಿ ಕುಳಿತ. ಇಡೀ ದಿನ ಕಾದ. ಅನಂತ ಊರಲ್ಲಿ ನಾಪತ್ತೆ. ತಂದೆತಾಯಿಗಳು ಗಾಬರಿಯಾದರು. ಅಲ್ಲಲ್ಲೇ ವಿಚಾರಿಸಿದರು. ಕೊನೆಗೊಬ್ಬ ಹುಡುಗ ಬ್ರಹ್ಮಪಿಶಾಚಿಯನ್ನು ಹುಡುಕಲು ತೋಪಿನಲ್ಲಿದ್ದಾನೆ ಎಂದು ಹೆದರುತ್ತಾ ಹೇಳಿದನು. ಅನಂತನ ವಿರುದ್ಧ ಚಾಡಿ ಹೇಳಲು ಭಯ. ಸುದ್ದಿ ತಿಳಿದೊಡನೆ ತಂದೆತಾಯಿಗಳು ತೋಪಿಗೆ ಓಡಿದರು. ಹುಡುಗ ಅನಂತ ಸುಖವಾಗಿ ಮರದ ಮೇಲೆ ಕುಳಿತಿದ್ದಾನೆ. ಜೋಂಪು ಹತ್ತಿದೆ. ತಾಯಿ ಕೂಗಿದಳು.
‘ಅನಂತ ಇಳಿಯೋ.’
ಮರದ ಮೇಲಿಂದಲೇ ಜೋರು ಧ್ವನಿಯಲ್ಲಿ ಕೂಗಿದ ‘ಅಮ್ಮಾ, ಇಲ್ಲಿ ಪಿಶಾಚಿಯೂ ಇಲ್ಲ, ದೆವ್ವವೂ ಇಲ್ಲ. ಎಲ್ಲ ಸುಳ್ಳು, ಬೆಳಿಗ್ಗೆಯಿಂದ ಕಾದಿದ್ದೇನೆ. ಏನೂ ಸಿಕ್ಕಲಿಲ್ಲ’.
ತಂದೆತಾಯಿಗಳು ಗಡ ಗಡ ನಡುಗಿದರು. ಊರಿನ ಜನ ಇವನೆಂಟೆದೆಯನ್ನು ಕಂಡು ಆಶ್ಚರ್ಯಚಕಿತರಾದರು.
ಹೋಳಿಹಬ್ಬ ಬಂದರೆ ಇವನಿಗೆ ಖುಷಿ. ಬಣ್ಣ ಎರಚುವುದು, ಸಿಕ್ಕಿದ್ದನ್ನು ಕಾಮನ ಬೆಂಕಿಗೆ ಹಾಕುವುದು, ಎಲ್ಲರನ್ನೂ ಗೋಳು ಹುಯ್ದು ಕೊಳ್ಳುವುದು ಅವನ ಕೆಲಸ. ಇದನ್ನು ಕಂಡವರು ಉಡಾಳ ಅನಂತನೆಂದು ಕರೆಯುತ್ತಿದ್ದರು. ಆದರೂ ಅವನ ಧೈರ್ಯ ಎಲ್ಲರನ್ನೂ ವಿಸ್ಮಯರನ್ನಾಗಿ ಮಾಡಿತ್ತು.
ಭಯವಿಲ್ಲದ ಬಾಲಕ
ಪಕ್ಕದ ಊರು ಬನಶಂಕರಿ ದೇವಸ್ಥಾನ ನವರಾತ್ರಿ ಉತ್ಸವಕ್ಕೆ ಹೆಸರುವಾಸಿ. ಊರು ಊರಿನಿಂದ ಜನ ಅಲ್ಲಿ ಸೇರಿದ್ದರು. ಇವನ ಗುಂಪು ಉತ್ಸವಕ್ಕೆ ಬಂದಿತ್ತು. ಮೇಳದಲ್ಲಿ ಮನಬಂದಷ್ಟು ಸ್ನೇಹಿತರೊಡಗೂಡಿ ಅಡ್ಡಾಡಿದ. ಪೀಪಿ, ತುತ್ತೂರಿ, ಬತ್ತಾಸು ಇತ್ಯಾದಿಯನ್ನು ಕೊಂಡ. ಅರವಟ್ಟಿಗೆಯಲ್ಲಿ ಎಲ್ಲರೊಡನೆ ಹೊಟ್ಟೆತುಂಬ ತಿಂದು ತೇಗಿದ. ಕತ್ತಲಾಗುತ್ತಾ ಬಂದಾಗ ಊರಿಗೆ ಹೋಗಬೇಕು. ಹೋಗುವುದಾದರೂ ಹೇಗೆ? ಎಲ್ಲರೂ ಸುಸ್ತಾಗಿದ್ದರು.
ಆ ಸಮಯಕ್ಕೆ ಸರಿಯಾಗಿ ಹೊಸ ಹೋರಿಯನ್ನು ಹೂಡಿದ ಬಂಡಿಯೊಂದು ಬಂತು. ಆ ಬಂಡಿ ಜಾಲಿಹಾಳಕ್ಕೆ ಹೋಗುತ್ತಿತ್ತು. ಬಂಡಿಯನ್ನು ನಿಲ್ಲಿಸಿದರು, ಬಂಡಿಯೇರಿದರು. ಕುಳಿತ ಮೇಲೆ ತಮ್ಮದೇ ವಿಧಾನದಲ್ಲಿ ಕೂಗಾಡಹತ್ತಿದರು. ಮೊದಲೇ ಹೊಸ ಹೋರಿಗಳು, ಮೇಲೆ ಹುಡುಗರ ಗಲಾಟೆ, ಹೋರಿಗಳು ಬೆದರಿದವು. ಓಡ ತೊಡಗಿದವು, ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ಹುಡುಗರು ಭಯದಿಂದ ಅತ್ತರು. ಗಾಡಿ ನಿಲ್ಲಿಸುವಂತೆ ಕೇಳಿಕೊಂಡರು. ಅನಂತ ನಿರ್ಭಯದಿಂದ ಇದ್ದ. ಗಾಡಿಯಿಂದ ಧುಮುಕಿದ. ಹೋರಿಗಳ ಮೂಗುದಾರ ಹಿಡಿದು ನಿಲ್ಲಿಸಿದ. ಆತಂಕ ಮರೆಯಾಯಿತು, ಭೀತಿ ನಿವಾರಣೆಯಾಯಿತು. ಗೆಳೆಯರಿಗಂತೂ ಅವನೊಬ್ಬ ಅಸಾಧಾರಣ ನಾಯಕನಾದ. ಭೀತಿಯರಿಯದ ಸ್ನೇಹಿತನಾದ.
ಒಮ್ಮೆ ಮನೆಯಲ್ಲಿ ಊಟ ಮಾಡುತ್ತಿದ್ದ. ಹೊರಗಡೆ ಭಿಕ್ಷುಕನೊಬ್ಬ ನಿಂತಿದ್ದ. ಹಣ್ಣು ಹಣ್ಣು ಮುದುಕ. ತನ್ನ ಇಡೀ ತಟ್ಟೆಯನ್ನು ಅವನ ಮಡಿಲಿಗೆ ಹಾಕಿದ. ತಾಯಿ ಕೇಳಿದಳು ‘ಮಗೂ ಅಷ್ಟೂ ಯಾಕೆ ಹಾಕಿದೆಯೋ?’
‘ನನಗೆ ಊಟ ಹಾಕಲು ನೀನಿದ್ದಿ. ಅವನಿಗೆ ಯಾರಿದ್ದಾರೆ?’
ಅಪ್ರಬುದ್ಧ ಮಗುವಿನ ಪ್ರಬುದ್ಧ ಮಾತು ಗಳನ್ನು ಕಂಡು ತಾಯಿ ಬೆದರಿದಳು. ಇವನು ನನಗೆ ದಕ್ಕುವುದಿಲ್ಲ ಎಂದುಕೊಂಡಳು. ಪ್ರಾರ್ಥಿಸಿದಳು ‘ದೇವರೇ ಇವನನ್ನು ಕಾಪಾಡು’.
ಅನಂತ ಉಡಾಳ, ಕರುಣಾಮಯಿ ದಿಟ. ಆದರೆ ಅವನನ್ನು ತಡೆಯುವುದು ಬಹಳ ಕಷ್ಟವಾಯಿತು. ತಂದೆ ಒಮ್ಮೆ ಮೃದುವಾಗಿ ಹೇಳಿದರು :
‘ಮಗೂ, ನಾವು ಬಡವರು, ವಿದ್ಯೆಯೇ ನಮ್ಮ ಸಂಪತ್ತು. ನೀನದನ್ನು ಕಲಿಯದಿದ್ದರೆ ನಮಗೆ ಬಹಳ ಕಷ್ಟವಾಗುತ್ತದೆ.’
ವಿದ್ಯೆಗಾಗಿ
ಅನಂತ ಬೇಜಾರುಗೊಂಡ. ಆಗ ಅವನಿಗೆ ಹದಿನಾಲ್ಕು ವರ್ಷ. ಯಾರಿಗೂ ಹೇಳದೆ ಕೇಳದೆ ಊರು ಬಿಟ್ಟ. ಕಲಿಯುವುದಕ್ಕಾಗಿ ಮೆಣಸಿಗೆ ಗ್ರಾಮಕ್ಕೆ ಬಂದ. ಧೋಂಡಾಭಟ್ಟ ದಾದಾ ಇವರಲ್ಲಿ ವೇದಾಧ್ಯಯನಕ್ಕೆ ಸೇರಿದ.
ಸಂಸ್ಕೃತ ಸುಲಭವಾಗಿ ಅವನಿಗೆ ಕರಗತವಾಯಿತು. ಚಿಕ್ಕವನಾದರೂ ಅಧ್ಯಯನದಿಂದ ಹದವಾಗುತ್ತಾ ಬಂದನು. ಉಡಾಳ ಅನಂತ ಗುರುವಿನ ಕೈಯಲ್ಲಿ ಪಕ್ವವಾಗುತ್ತಾ ಬಂದನು. ಗುರುವಾಣಿ ಅವನು ತಲೆಯಲ್ಲಿ ಪರಿಣಾಮ ಬೀರುತ್ತಿತ್ತು. ಅಂಟಿಕೊಂಡು ಬಿಡುತ್ತಿತ್ತು. ಪ್ರತಿ ಯೊಂದು ಪಾಠವೂ ಮುಖೋದ್ಗತವಾಯಿತು.
ದಾದಾ ಅವರಿಗಂತೂ ಶಿಷ್ಯನನ್ನು ಕಂಡರೆ ಬಲು ಪ್ರೀತಿ. ಒಂದು ದಿನ ಅನಂತನನ್ನು ಕರೆದರು. ಹತ್ತಿರ ಕೂಡಿಸಿಕೊಂಡರು. ‘ನಾನು ಕಲಿಸುವುದು ಮುಗಿಯಿತು. ಇನ್ನುಮುಂದೆ ಕಲಿಯಬೇಕೆಂದಿದ್ದರೆ ಮುಳಗುಂದಕ್ಕೆ ಹೋಗು, ಸಕಲ ಶಾಸ್ತ್ರಪಾರಂಗತನಾಗಿ ಕೀರ್ತಿಶಾಲಿ ಯಾಗು’ ಎಂದು ಹರಸಿದರು.
ಮಾರ್ಗ ಮಧ್ಯೆ ಮನೆಗೆ ಬಂದ. ಸುತ್ತಲಿನ ಗ್ರಾಮೀಣರನ್ನು ಆಕರ್ಷಿಸಿದ. ಸುಶೀಲತೆಯ ಸೌಂಗಧವನ್ನು ಬೀರಿದ. ಜನ ಪ್ರೀತಿಯಿಂದ ಅವನನ್ನು ಅನಂತಭಟ್ಟನೆಂದು ಕರೆದರು.
ಅನಂತ ಭಟ್ಟರು, ಅನಂತಶಾಸ್ತ್ರಿಗಳು
ಮುಳಗುಂದ ಗದುಗಿನಿಂದ ಹನ್ನೆರಡು ಮೈಲಿ ದೂರ, ವೇದ ವ್ಯಾಸಂಗಕ್ಕೆ ಹೆಸರುವಾಸಿ. ಜಂತ್ಲಿ ಗುರುನಾಥ ಶಾಸ್ತ್ರಿಗಳು ಪ್ರಸಿದ್ಧ ವೇದ ಪಂಡಿತರು. ಅವರಲ್ಲಿ ಶಿಷ್ಯನಾದ. ಚೆನ್ನಾಗಿ ಅಭ್ಯಾಸ ಮಾಡಿದ. ಗುರುಸೇವೆ ಅವ್ಯಾಹತವಾಗಿ ನಡೆಸಿ ಕಾವ್ಯ, ನಾಟಕ, ಅಲಂಕಾರ, ತರ್ಕ, ನ್ಯಾಯ, ವ್ಯಾಕರಣವನ್ನು ಕಲಿತ. ಗುರುಗಳು ಆಗಾಗ್ಗೆ ತಮ್ಮ ಜೊತೆಯಲ್ಲಿ ಪ್ರವಚನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅನಂತಭಟ್ಟರಿಗೂ ಭಾಷಣ ಮಾಡಲು ಹೇಳುತ್ತಿದ್ದರು. ಜನ ಇವರ ಮಾತಿನ ಮೋಡಿಗೆ ತಲೆದೂಗುತ್ತಿದ್ದರು, ಭಕ್ತಿವಶರಾಗುತ್ತಿದ್ದರು. ಬರುಬರುತ್ತಾ ಜನರು ಅನಂತಭಟ್ಟರನ್ನು ಅನಂತ ಶಾಸ್ತ್ರಿಗಳೆಂದು ಕರೆದರು. ವೇದಾಂತ ಜ್ಞಾನಕ್ಕೆ ಅನಂತಶಾಸ್ತ್ರಿಗಳು ಇನ್ನೊಂದು ಹೆಸರಾದರು.ತಾನೇತಾನಾಗಿ ಅವರ ಬಗ್ಗೆ ಗೌರವ ಮೂಡಿತು.
ತಂದೆ ಬಾಳಂಭಟ್ಟರು ಈ ಮಧ್ಯೆ ಕಾಲವಶರಾದರು. ಅನಂತಶಾಸ್ತ್ರಿಗಳ ಮನಸ್ಸು ತುಂಬಾ ಸಂಕಟಪಟ್ಟಿತು. ಸಂಕಟಪಟ್ಟ ಮನಸ್ಸು ಆಧ್ಯಾತ್ಮವನ್ನಪ್ಪಿತು. ಭಾಗವತ ಜೀವನದ ಊರುಗೋಲಾಯಿತು.
ಮದುವೆ ಬೇಡ
ವಯಸ್ಸಿಗೆ ಬಂದ ಅನಂತಶಾಸ್ತ್ರಿಗಳನ್ನು ಕಂಡು ತಾಯಿ ಜೀವೂಬಾಯಿ ಹಿರಿಹಿರಿ ಹಿಗ್ಗಿದಳು. ಮದುವೆಯೊಂದು ಮಾಡಿದರೆ ತನ್ನ ಭಾರ ಕಳೆಯಿತೆಂದು ಬಗೆದಳು. ಹೆಣ್ಣು ಹುಡುಕಲು ಪ್ರಾರಂಭವಾಯಿತು. ಈ ಸಮಯದಲ್ಲಿ ಅನಂತಶಾಸ್ತ್ರಿಗಳು ಬೆಳಧಡಿ ಗ್ರಾಮದಲ್ಲಿದ್ದರು. ಪುರಾಣ ಪ್ರವಚನವನ್ನು ಮಾಡುತ್ತಾ ಕಾಲ ತಳ್ಳುತ್ತಿದ್ದರು. ಮೊದಲೇ ಆಧ್ಯಾತ್ಮ ಪ್ರವೃತ್ತಿ, ವೈರಾಗ್ಯ ಹೊದಿಕೆಯಾಗಿ ಹರಡಿ ಕೊಂಡಿರುವಾಗ ಶರೀರದ ಮೇಲೆ ಅಲ್ಲಲ್ಲಿ ಬಿಳಿಯ ಮಚ್ಚೆಗಳು ಕಾಣತೊಡಗಿದವು.
ಹೆಣ್ಣು ಹಡೆದ ಜನ ಒಬ್ಬರ ಮೇಲೊಬ್ಬರು ಅನಂತ ಶಾಸ್ತ್ರಿಗಳನ್ನು ಅಳಿಯನನ್ನಾಗಿ ಪಡೆಯಲು ಮುಂದೆ ಬಂದರು. ಅನೇಕ ಜಾತಕಗಳು ಕೂಡಿಬಂದವು. ಕನ್ಯೆಯನ್ನು ಪರೀಕ್ಷಿಸುವುದಕ್ಕಾಗಿ ಬರಬೇಕೆಂದು ಅಣ್ಣ ಗುರುನಾಥಭಟ್ಟರು ಅನಂತ ಶಾಸ್ತ್ರಿಗಳಿಗೆ ಹೇಳಿ ಕಳುಹಿಸಿದರು. ಸುದ್ದಿ ತಂದ ಮಿತ್ರರಿಗೆ ನಿರಾಸೆ ಕಾದಿತ್ತು. ಅನಂತಶಾಸ್ತ್ರಿಗಳು ಬ್ರಹ್ಮಚಾರಿಯಾಗಿ ಇರಬೇಕೆಂದು ನಿರ್ಧರಿಸಿದ್ದರು ಆದರೆ ನೆಂಟರಿಷ್ಟರು ಇಷ್ಟಕ್ಕೆ ಬಗ್ಗುವವರಲ್ಲ, ಒತ್ತಾಯ ತಂದರು. ಅನಂತಶಾಸ್ತ್ರಿಗಳು ಭಯಗೊಂಡರು. ದೊಡ್ಡಣ್ಣ ತಂದೆಗೆ ಸಮಾನ. ಅವನ ಮುಂದೆ ಎದುರಾಡುವ ಧೈರ್ಯವಿರಲಿಲ್ಲ. ಪಲಾಯನ ಸೂತ್ರ ಹಿಡಿದರು. ಬೆಳಧಡಿಯಲ್ಲಿದ್ದ ಮಹಾದೇವ ಭಟ್ಟ ಹರ್ಲಾಪುರ ಎಂಬುವವರಿಗೆ ‘ನನ್ನ ಅಣ್ಣಂದಿರು ನನ್ನನ್ನು ಹುಡುಕಿ ಇಲ್ಲಿಗೆ ಬರುತ್ತಾರೆ. ನಾನು ಮದುವೆಯಾಗುವುದಿಲ್ಲವೆಂದು ತಿಳಿಸಿ. ಅಸಹ್ಯವಾದ ತೊನ್ನುರೋಗ ವಿರುವುದರಿಂದ, ಅದು ವಾಸಿಯಾದನಂತರವೇ ಮದುವೆ ವಿಷಯ ಆಲೋಚನೆ ಮಾಡುವೆನೆಂದು ತಿಳಿಸಿ’ ಎಂದು ಹೇಳಿದರು. ಯಾರಿಗೂ ತಿಳಿಸದೆ ಊರುಬಿಟ್ಟರು.
ಬೆಳಧಡಿಯ ಪಕ್ಕದಲ್ಲಿದ್ದ ಕಪ್ಪತ್ತಗುಡ್ಡ ಅವರ ಆಶ್ರಯ ವಾಯಿತು. ಅಲ್ಲಿಯ ಗುಹೆ ಧ್ಯಾನ ಮಂದಿರವಾಯಿತು. ತಪಸ್ಸು ಮಾಡಲು ಕುಳಿತರು.
ತಮ್ಮನನ್ನು ಹುಡುಕಿ ಗುರುನಾಥಭಟ್ಟರು ಬಂದರು. ತಮ್ಮ ಇಲ್ಲ, ಮನಸ್ಸಿಗೆ ನೋವಾಯಿತು. ಮರಳಿ ಬಂದ ದಾರಿ ತುಳಿದರು.
ತಪಸ್ಸು
ಅನಂತಶಾಸ್ತ್ರಿಗಳ ತಪಸ್ಸು ಘೋರವಾಯಿತು. ದಿನ ಕಳೆಯಿತು, ಮನಸ್ಸಿಗೆ ಶಾಂತಿ ಇಲ್ಲ. ಅನಂತಶಾಸ್ತ್ರಿಗಳಿಗೆ ವೆಂಕಟಾಪುರಕ್ಕೆ ಹೋಗಲು ಮನಸ್ಸಾಯಿತು.
ವೆಂಕಟಾಪುರ ಪ್ರಸಿದ್ಧ ತೀರ್ಥಕ್ಷೇತ್ರ. ಹೆಚ್ಚು ಜನ ವಸತಿ ಇಲ್ಲದ ಆ ಊರಲ್ಲಿ ವೆಂಕಟಪತಿ ಸೇವೆಯನ್ನು ಮಾಡಲು ಶುರುಮಾಡಿದರು. ತಮ್ಮದೇ ಭಾವನಾ ಸಾಮ್ರಾಜ್ಯ. ವೆಂಕಟಪತಿಗೆ ಮಾನಸ ಪೂಜೆ, ದಿನ ಮಧುಕರಿ ಊಟ, ಕಾಲ ಉರುಳಿತು. ಭಿಕ್ಷೆಯನ್ನು ನಿಲ್ಲಿಸಿದರು. ಅಯಾಚಿತ ಅನ್ನವನ್ನು ಸ್ವೀಕರಿಸಲು ನಿರ್ಧರಿಸಿದರು. ಭಗವಂತ ಜೀವನದ ಉಸಿರಾದ. ಅನೇಕ ದಿನ ಉಪವಾಸವಾಯಿತು.
ಕರಕೀ ರಸ, ಬೇವಿನ ರಸ ಸೇವಿಸುತ್ತಾ ವೆಂಕಟಪತಿಯ ಸೇವೆಯನ್ನು ಮಾಡಿದೆನೆಂದು ಸ್ವತಃ ಬ್ರಹ್ಮಾನಂದರೇ ಹೇಳಿದ್ದುಂಟು.
ಕಾಲ ಕ್ರಮಿಸಿತು. ಮನಸ್ಸು ಮಮ್ಮಲ ಮರುಗಿತು. ಗುರುವಿಗಾಗಿ ಶೋಧನೆ ಮಾಡಲು ಮನಸ್ಸಾಯಿತು ಗುರುವಿಲ್ಲದೆ ಮೋಕ್ಷವಿಲ್ಲ, ಸಾಧನೆಯಿಲ್ಲ. ಕೊರಗ ಹತ್ತಿದರು. ಅದಕ್ಕಾಗಿ ಗುರುವನ್ನು ಹುಡುಕಿಕೊಂಡು ತೀರ್ಥಯಾತ್ರೆ ಮಾಡಲು ನಿರ್ಧರಿಸಿದರು.
ಮನ್ನಣೆ
ಗದುಗಿನ ವೀರನಾರಾಯಣನಿಗೆ ನಮಸ್ಕರಿಸಿದರು. ಬೆಳಗಾವಿಯ ಮಾರ್ಗವಾಗಿ ಅನಂತಶಾಸ್ತ್ರಿಗಳು ಪುಣೆಗೆ ಬಂದರು. ಪುಣೆ ವಿದ್ಯಾನಗರವಾಗಿತ್ತು. ಊರತುಂಬ ಪ್ರಕಾಂಡ ಪಂಡಿತರಿದ್ದರು. ಊರಿನಲ್ಲಿ ಇವರು ಬಂದ ಸುದ್ದಿ ಹರಡಿತು. ‘ಗೀರ್ವಾಣ ವಾಗ್ವರ್ಧಿನೀ’ ಎಂಬ ಸಂಸ್ಥೆಯ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನಂತಶಾಸ್ತ್ರಿಗಳಿಗೆ ಕರೆ ಬಂದಿತು. ಶಾಸ್ತ್ರಿಗಳು ಒಪ್ಪಿದರು. ಸಭೆಯಲ್ಲಿ ಮಹಾ ಮಹಾ ಪಂಡಿತರು ಸೇರಿದ್ದರು. ಶಾಸ್ತ್ರಿಗಳು ಕಿಕ್ಕಿರಿದು ತುಂಬಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗಂಗಾಸಲಿಲದಂತೆ ಅವರ ಮಾತಿನ ಪ್ರವಾಹ ಹರಿಯಿತು. ಅವ್ಯಾಹತವಾಗಿ ಮೂರು ಗಂಟೆಗಳ ಕಾಲ ಭಾಷಣವಾಯಿತು. ಪುಣೆಯ ಜನ ಬೆರಗಾದರು. ಆ ಮಾತಿನ ಶೈಲಿ, ಶಬ್ದ ಸಂಪತ್ತು ಮಿಗಿಲಾಗಿ ಪೌರುಷಯುಕ್ತ ಧ್ವನಿ ಎಲ್ಲರನ್ನು ಆಕರ್ಷಿಸಿತು. ಸಭೆಯವರು ಶಾಲನ್ನು ಹೊದಿಸಿದರು. ಹೂಹಾರ ಹಾಕಿ ಗೌರವಿಸಿದರು.
ಸಭೆ ಮುಗಿಸಿ ಶಾಸ್ತ್ರಿಗಳು ಈಚೆ ಬಂದರು. ನನಗೇತಕ್ಕೆ ಈ ಶಾಲು ಎಂದು ಹೊರಗಡೆ ನಿಂತಿದ್ದ ಅರ್ಧ ನಗ್ನ ಭಿಕ್ಷುಕನಿಗೆ ಶಾಲನ್ನು ಹೊದಿಸಿ ಹೊರಟುಹೋದರು.
ಪುಣೆಯಲ್ಲಿ ಜನ ಅಪೂರ್ವ ಗ್ರಂಥಗಳನ್ನು ಕಾಣಿಕೆಯನ್ನಾಗಿ ಕೊಟ್ಟರು. ಅವುಗಳನ್ನೆಲ್ಲವನ್ನೂ ವಿದ್ಯಾರ್ಥಿಗಳಿಗೆ ಇವರು ದಾನ ಮಾಡಿದರು. ಇವರ ಔದಾರ್ಯ, ವೈರಾಗ್ಯ ಕಂಡು ಪುಣೆಯ ಜನರು ವಿಸ್ಮಿತರಾದರು.
ಅನಂತಶಾಸ್ತ್ರಿಗಳಿಗೆ ಎಲ್ಲಿ ಲೋಕ ಕಟ್ಟಿ ಹಾಕುವುದೋ ಎಂಬ ಭಯ. ಅದಕ್ಕಾಗಿ ಅವರು ಪುಣೆ ಬಿಡಲು ನಿರ್ಧರಿಸಿದರು.
ಕೀರ್ತಿಶನಿ ಬೇಡ
ಅಂದೇ ಬರೋಡಾ ಮಹಾರಾಜರು ಒಂದು ವಿದ್ವತ್ ಸಭೆಯನ್ನು ಕರೆದಿದ್ದರು. ಶಾಸ್ತ್ರಿಗಳು ಭಾಗವಹಿಸಲೇ ಬೇಕೆಂದು ಮಹಾರಾಜರು ವಿನಂತಿಸಿದರು. ಇಷ್ಟವಿಲ್ಲದಿದ್ದರೂ ಸಭೆಯಲ್ಲಿ ಶಾಸ್ತ್ರಿಗಳು ಭಾಗವಹಿಸಿದರು. ಸರಸ್ವತಿ ಇವರ ನಾಲಿಗೆಯಲ್ಲಿ ನೆಲೆಸಿದ್ದುದನ್ನು ಕಂಡು ಬರೋಡಾ ಮಹಾರಾಜರು ಆನಂದಗೊಂಡರು. ಜೋಡಿ ಶಾಲು, ಎರಡು ನೂರು ರೂಪಾಯಿಗಳನ್ನು ಕೊಟ್ಟು ಸತ್ಕರಿಸಿದರು. ಅರಮನೆಯಲ್ಲಿ ಒಂದೆರಡುದಿನ ಇರಬೇಕೆಂದು ಕೇಳಿಕೊಂಡಾಗ ನಕ್ಕರು.
‘ಅಸ್ತು ಪ್ರೇಮ ವೃದ್ಧಿಃ” ಎಂದು ಜಾರಿಕೊಂಡರು.
ಹೊಸ ಸ್ನೇಹ
ಕೀರ್ತಿ ಶನಿಯಾಗಬಾರದೆಂದು ಪುಣೆಯನ್ನು ತಕ್ಷಣ ಬಿಟ್ಟರು. ತೀರ್ಥಯಾತ್ರೆ ಪುನರಾರಂಭ ಮಾಡಿದರು. ತ್ರ್ಯಂಬಕ ಕ್ಷೇತ್ರ, ಪ್ರಯಾಗ, ಕಾಶಿಗೆ ಭೇಟಿ ಕೊಟ್ಟರು. ಗಂಗಾಸ್ನಾನ ಮಾಡಿದರು. ಗುರುವು ಸಿಕ್ಕಲಿಲ್ಲವೆಂದು ಕೊರಗಹತ್ತಿದರು. ಗಯೆಯಿಂದ ಅಯೋಧ್ಯೆಗೆ ಬಂದರು. ಸರಯೂ ನದಿಯಲ್ಲಿ ಸ್ನಾನ ಮಾಡಿದರು. ಬೈರಾಗಿಗಳನ್ನು ಮಾತನಾಡಿಸಿದರು. ಇವರಲ್ಲಿ ಯಾರಾದರೂ ನನ್ನ ಗುರು ಆದಾರೇ? ಹುಡುಕಿದರು. ಯಾರೂ ಸಿಗಲಿಲ್ಲ. ನೈಮಿಷಾರಣ್ಯ, ಬದರಿ, ಕೇದಾರ, ಮಥುರಾದಿಂದ ಇಂದೂರಿಗೆ ಬಂದರು. ಮಾರುತಿ ಮಂದಿರದಲ್ಲಿ ಉಳಿದುಕೊಂಡರು. ಭೈಯ್ಯಾ ಸಾಹೇಬ್ ಮೋಡಕ್ ಎಂಬ ಭಾವುಕರು ಇವರನ್ನು ನೋಡಿದರು. ಆಕರ್ಷಿತರಾದರು. ತಮ್ಮ ಮನೆಗೆ ಆಹ್ವಾನಿಸಿದರು. ಅವರ ಮನೆಗೆ ಶಾಸ್ತ್ರಿಗಳು ಹೋದರು. ಅಲ್ಲೇ ಉಳಿದುಕೊಂಡರು. ಹಾಗೇ ಮಾತನಾಡುತ್ತಿರುವಾಗ ಗೋಂದಾವಲೇಕರ್ ರಾಮದಾಸಿ ಬುವಾ ಎಂಬುವರು ಪ್ರವಚನ ಮಾಡಲು ಬಂದಿದ್ದಾರೆ ಎಂದು ತಿಳಿಯಿತು.
ಭೈಯ್ಯಾಸಾಹೇಬರು ತಾವು ಪ್ರವಚನ ಕೇಳುವುದಕ್ಕೆ ಹೋಗುತ್ತಿರುವುದಾಗಿ ಹೇಳಿ ಶಾಸ್ತ್ರಿಗಳನ್ನು ವಿಶ್ರಾಂತಿ ತೆಗೆದುಕೊಳ್ಳಿ ಎಂದು ವಿನಂತಿಸಿದರು.
ಇವರು ಬೇಡ
ಭೈಯ್ಯಾಸಾಹೇಬರು ಹೋದಮೇಲೆ, ನಾನೂ ಹೋಗ ಬಹುದಾಗಿತ್ತಲ್ಲ, ಆ ಸತ್ಪುರುಷನ ದರ್ಶನ ಮಾಡಬಹುದಿತ್ತಲ್ಲ ಎಂದುಕೊಂಡರು. ಹಾಗೇ ನಿದ್ದೆಹೋದರು. ಬೆಳಗಾಯಿತು. ಭೈಯ್ಯಾಸಾಹೇಬರು ಶಾಸ್ತ್ರಿಗಳನ್ನು ನೋಡಲು ಬಂದರು. ಶಾಸ್ತ್ರಿಗಳು ಹಿಂದಿನ ದಿನದ ಪ್ರವಚನಕಾರನ ಬಗ್ಗೆ ವಿಚಾರಿಸಿದರು. ಭೈಯ್ಯಾಸಾಹೇಬರು ಪ್ರವಚನ ಕಾರರು ಮತ್ತಾರೂ ಅಲ್ಲದೆ ಗೋಂದಾವಲೇಕರ ಬ್ರಹ್ಮಚೈತನ್ಯರು, ಮಾರುತಿಯ ಅವತಾರ ಎಂದು ಹೇಳಿದರು. ಶ್ರೀರಾಮನಾಮ ಅವರ ಉಪದೇಶದಸಾರ ಎಂದು ಹೇಳಿ ಶಾಸ್ತ್ರಿಗಳನ್ನು ಬ್ರಹ್ಮಚೈತನ್ಯರ ದರ್ಶನಕ್ಕಾಗಿ ಕರೆದೊಯ್ದರು.
ಇವರಿಬ್ಬರ ಭೇಟಿ ವಿಚಿತ್ರವಾಯಿತು. ಬ್ರಹ್ಮಚೈತನ್ಯರು ಸ್ತ್ರೀಯರ ಮಧ್ಯೆ ಕುಳಿತಿದ್ದರು. ಹೆಣ್ಣು ಮಕ್ಕಳು ಭಕ್ತಿಭಾವದಿಂದ ಕಾಲೊತ್ತುತ್ತಿದ್ದರು. ಅನಂತಶಾಸ್ತ್ರಿಗಳಿಗೆ ವಿಪರೀತ ಕೋಪ ಬಂತು. ಇವನೆಂತಹ ಸದ್ಗುರು? ಎಂದು ಸೀದಾ ಮನೆಗೆ ಬಂದುಬಿಟ್ಟರು.
ಭೈಯ್ಯಾಸಾಹೇಬರಿಗೆ ಏನು ಮಾಡ ಬೇಕೆಂಬುದೇ ತೋಚಲಿಲ್ಲ. ಸದ್ಗುರುಗಳ ಮತ್ತು ಶಾಸ್ತ್ರಿಗಳ ನಡುವೆ ತರ್ಕ ವಿತರ್ಕಗಳು ನಡೆಯುತ್ತವೆಂದು ಭಾವಿಸಿದ್ದ ಅವರಿಗೆ ನಿರಾಸೆಯಾಯಿತು. ದುಃಖವಾಯಿತು. ಮನೆಗೆ ಬಂದು ಅನಂತಶಾಸ್ತ್ರಿಗಳನ್ನು ಏಕೆ ಹಾಗೆ ಬಂದುಬಿಟ್ಟರೆಂದು ಕೇಳಿದರು.
‘ವಾಕ್ಚಾತುರ್ಯದಿಂದ ವೇಷಭೂಷಣಗಳಿಂದ ಭಾವುಕರನ್ನು ಮೋಸಗೊಳಿಸುವವನು ಹೇಗೆ ಸತ್ಪುರುಷ ನಾದಾನು?’ ಕ್ರೋಧದಿಂದ ಕೇಳಿದರು. ಭೈಯ್ಯಾ ಸಾಹೇಬರು ಏನೂ ಮಾಡಲಾರದಾದರು.
ಬೇಡ ಎಂದುಬಿಟ್ಟೆನಲ್ಲ !
ಶಾಸ್ತ್ರಿಗಳು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ನರಸಿಂಹವಾಡಿಗೆ ಬಂದರು. ಅದು ದತ್ತಾತ್ರೇಯ ಕ್ಷೇತ್ರ. ಪ್ರಕೃತಿಯ ರಮಣೀಯತೆಗೆ ಹೆಸರುವಾಸಿ. ಅಲ್ಲೂ ಆ ನೀರವತೆ ಶಾಸ್ತ್ರಿಗಳಿಗೆ ಸಮಾಧಾನ ನೀಡಲಿಲ್ಲ. ಏಕೋ ಏನೋ ಇಂದೂರಿಗೆ ವಾಪಸ್ಸು ಹೋಗ ಬೇಕೆನ್ನಿಸಿತು. ಬ್ರಹ್ಮಚೈತನ್ಯರನ್ನು ಮತ್ತೆ ನೋಡ ಬೇಕೆನ್ನಿಸಿತು. ಅದು ಭಗವಂತನ ಪ್ರೇರಣೆಯೆಂದು ಭಾವಿಸಿದರು. ಇಂದೂರಿಗೆ ಬಂದರು. ಭೈಯ್ಯಾ ಸಾಹೇಬರಲ್ಲಿ ಉಳಿದರು. ಬ್ರಹ್ಮಚೈತನ್ಯರ ಬಗ್ಗೆ ವಿಚಾರಿಸಿದರು. ಹಿಂದಿನ ದಿನ ತಾನೆ ಬ್ರಹ್ಮಚೈತನ್ಯರು ಇಂದೂರಿಗೆ ಬಂದಿದ್ದರು. ಅವರ ದರ್ಶನ ಮಾಡಿಸ ಬೇಕೆಂದು ಭೈಯ್ಯಾಸಾಹೇಬರುನ್ನು ವಿನಂತಿಸಿದರು.
ಗುರು ಪ್ರಾಪ್ತಿ
ಮನಸ್ಸು ವಿಹ್ವಲಗೊಂಡಿತ್ತು. ಗುರುದರ್ಶನ ಕ್ಕಾಗಿ ಕಾತುರ ತುಂಬಿತು. ಆತುರ ಬೇರೆ. ಅದೇ ಸಂಜೆ ಭೈಯ್ಯಾಸಾಹೇಬರೊಡಗೂಡಿ ಗುರು ದರ್ಶನಕ್ಕೆ ಶಾಸ್ತ್ರಿಗಳು ಹೊರಟರು. ಬ್ರಹ್ಮಚೈತನ್ಯರನ್ನು ನೋಡಿ ಪಾದಮುಟ್ಟಿ ನಮಸ್ಕರಿಸಿದರು. ಭಾವಪೂರಿತರಾದರು. ಕಣ್ಣಲ್ಲಿ ನೀರು ತುಂಬಿ ಬಂತು. ದಂತಕಥೆ ಇರುವಂತೆ ಬ್ರಹ್ಮಚೈತನ್ಯರು ಕೋತಿ ಆಕಾರದಲ್ಲಿದ್ದರಂತೆ. ಅನಂತಶಾಸ್ತ್ರಿಗಳು ಈ ವ್ಯಕ್ತಿ ಮಾರುತಿಯ ಅವತಾರವೆಂದು ನಂಬಿದರಂತೆ. ಅದಕ್ಕೆ ಪೋಷಕವಾಗುವ ಹಾಗೆ ಅವರ ಮುಖದಿಂದ ಈ ಅಭಂಗ ಹೊರಬಿದ್ದಿತಂತೆ :
ಮಾಝೆ ಸದ್ಗುರುರಾಮ್
ಮಾರುತಿ ಅವತಾರ
ಕೋಣಿಹೋ ಸಂದೇಹ ಧರೂನಯೇ
ಬ್ರಹ್ಮಚೈತನ್ಯರು ಅನಂತಶಾಸ್ತ್ರಿಗಳನ್ನು ಬಾಚಿ ಅಪ್ಪಿಕೊಂಡರು. ಬೆನ್ನು ಸವರಿದರು. ಅನಂತಶಾಸ್ತ್ರಿ ಗಳಿಗೆ ಗುರು ಪ್ರಾಪ್ತಿಯಾಯಿತು. ಕರ್ನಾಟಕಕ್ಕೆ ರಾಮನಾಮದ ವಾಹಕರಾಗಿ ಅನಂತಶಾಸ್ತ್ರಿಗಳು ದೊರಕಿದರು.
ಗುರು ಸೇವೆ
ದಿನಕಳೆದಂತೆ ಬುದ್ಧಿಜೀವಿ ಅನಂತಶಾಸ್ತ್ರಿಗಳು ಭಾವುಕರಾಗುತ್ತಾ ಬಂದರು. ರಾಮನಾಮ ಭವರೋಗ ನಿವಾರಕವೆಂದು ನಂಬಿದರು. ಮಹಾರಾಜರ ಪ್ರೇಮ ಪ್ರವಾಹದಲ್ಲಿ ಅನಂತ ಶಾಸ್ತ್ರಿಗಳು ಮಿಂದೆದ್ದರು. ಹಗಲು ರಾತ್ರಿ ಗುರು ಸೇವೆ ಮಾಡಿದರು. ಗುರುವಿನ ಬಗ್ಗೆ ಅನನ್ಯ ಭಕ್ತಿ.
ಒಮ್ಮೆ ಮಾಳಿಗೆಯ ಮೇಲೆ ಹುಲ್ಲನ್ನು ಹರಡುತ್ತಿದ್ದರು. ಮಹಾರಾಜರು ಶಾಸ್ತ್ರಿಗಳನ್ನು ಕೂಗಿದರು. ಧ್ವನಿ ಕೇಳಿಸಿದ್ದೇ ತಡ ಮಾಳಿಗೆಯಿಂದ ಜಿಗಿದರು. ಗುರುವಿನ ಮುಂದೆ ಕೈಜೋಡಿಸಿ ನಿಂತರು. ಹೀಗೆ ಸದಾ ಕಾಲ ಗುರುಸೇವೆ ಮಾಡುತ್ತಿದ್ದರು.
ಆದರೂ ಬ್ರಹ್ಮಚೈತನ್ಯರಿಗೆ ಅವರನ್ನು ಪರೀಕ್ಷಿಸ ಬೇಕೆಂದೆನಿಸಿತು. ಪಂಢಾರಪುರಕ್ಕೆ ಗುರುಗಳು ಹೊರಟಿದ್ದರು. ಕುದುರೆಯ ಮೇಲೆ ಗುರುಗಳು, ಹಿಂದೆ ಶಾಸ್ತ್ರಿಗಳು ನಡೆಯುತ್ತಾ ಹೊರಟರು. ಕಾಡುಮೇಡುಗಳಲ್ಲಿ ಹಾದು ಪಂಢಾರಪುರಕ್ಕೆ ಬಂದರು. ಬರಿಯ ಕಾಲಿನಲ್ಲಿ ನಡೆದಿದ್ದು, ಕಲ್ಲು ಮುಳ್ಳುಗಳು ಚುಚ್ಚಿದ್ದು ರಕ್ತ ಸೋರುತ್ತಿತ್ತು. ಆದರೂ ಗುರುಸೇವೆಗೆ ಹಾಜರು. ಮಧುಕರಿ ಮಾಡಿ ಗುರುಗಳಿಗೆ ಊಟ ಹಾಕಿದರು. ದೇಹಬಾಧೆ ಅವರ ಲೆಕ್ಕಕ್ಕೆ ಬರಲಿಲ್ಲ. ಇವರ ನಿಷ್ಠೆ ಗುರುವಿಗೆ ಗೊತ್ತಾಯಿತು. ಪುಲಕಿತರಾದರು. ಅಮೃತಹಸ್ತದಿಂದ ಶಿಷ್ಯನ ಮೇಲೆ ಕೈಯಾಡಿಸಿದರು. ಶಾಸ್ತ್ರಿಗಳ ಮಾತುಗಳಲ್ಲೆ ಹೇಳುವುದಾದರೆ,
‘ಸದ್ಗುರುನಾಥನ ಕೈಸೋಕಿದಂತೆ ಹೊಸ ಚೈತನ್ಯ ಉಂಟಾಯಿತು. ವಿದ್ಯುತ್ ಸಂಚಾರವಾಯಿತು. ದೇಹಬಾಧೆ ಕಡಿಮೆಯಾಯಿತು.’
ಬ್ರಹ್ಮಾನಂದರು
ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಮತ್ತೊಂದು ಪರೀಕ್ಷೆ ಮಾಡಿದರು. ಸುವಾಸಿನಿಯರಿಗೆ ದಾನ ಕೊಡುವುದಕ್ಕಾಗಿ ಕೆಲವು ಸೀರೆಗಳನ್ನು, ಖಣಗಳನ್ನು ತರಿಸಿದರು. ಶಿಷ್ಯರೆಲ್ಲರನ್ನು ಕರೆಸಿದರು. ಒಂದು ಒಳ್ಳೆಯ ಸೀರೆಯನ್ನು ಆರಿಸಿಕೊಡಿ ಎಂದರು. ಪ್ರತಿಯೊಬ್ಬರೂ ಆರಿಸಿದರು. ಅನಂತಶಾಸ್ತ್ರಿಗಳು ಸುಮ್ಮನೇ ನಿಂತಿದ್ದರು. ಗುರು ಕೇಳಿದರು : ‘ನೀನೇಕೆ ಆರಿಸುವುದಿಲ್ಲ?’ ತಕ್ಷಣ ಶಾಸ್ತ್ರಿಗಳು ‘ಗುರುವೇ, ಇದೊಂದು ವಿಷಯ ನನಗರ್ಥವಾಗುವುದಿಲ್ಲ’ ಎಂದರು. ಅನಂತ ಶಾಸ್ತ್ರಿಗಳಿಗೆ ಸಂಸಾರವಾಸನೆ ಇಲ್ಲವೆಂದು ಎಲ್ಲರಿಗೂ ತೋರಿಸಿ ಕೊಟ್ಟರು. ಶಾಸ್ತ್ರಿಗಳನ್ನು ‘ಬ್ರಹ್ಮಾನಂದ’ ರೆಂದು ಕರೆದರು. ಬ್ರಹ್ಮಜ್ಞಾನವನ್ನು ಬೋಧಿಸಿದರು. ಅಂದಿನಿಂದ ಅನಂತ ಶಾಸ್ತ್ರಿಗಳು ಬ್ರಹ್ಮಾನಂದರಾದರು.
ಬ್ರಹ್ಮಾನಂದರಿಗೆ ಲೋಕಸಂಗ್ರಹ ಮಾಡಬೇಕೆಂದು ಗುರುವಾಜ್ಞೆಯಾಯಿತು. ಬ್ರಹ್ಮಾನಂದರು ಕಠಿಣವಾದ ಅನುಷ್ಠಾನ ಮಾಡಿದರು. ಕೃಶರಾದರು. ಗುರುಗಳು ಇವರನ್ನು ಕರೆದರು. ಇಂದೂರಿಗೆ ಹೋಗಿ ಭೈಯ್ಯಾಸಾಹೇಬರನ್ನು ಕಂಡುಬರುವಂತೆ ಹೇಳಿದರು. ಬ್ರಹ್ಮಾನಂದರು ಇಂದೂರು ತಲುಪಿದರು. ಗುರುವಿನಿಂದ ಪತ್ರವೊಂದು ಭೈಯ್ಯಾ ಸಾಹೇಬರಿಗೆ ಬಂದಿತ್ತು. ಅದರ ಒಕ್ಕಣೆ ಹೀಗಿತ್ತು : ‘ಬ್ರಹ್ಮಾನಂದ ಪದವಿಗೆ ಏರಿದ ಅನಂತ ಶಾಸ್ತ್ರಿಗಳು ನಿಮ್ಮಲ್ಲಿಗೆ ಬರುತ್ತಾರೆ. ಒಂದೆರಡು ದಿನ ನಿಮ್ಮಲ್ಲಿ ಅವರನ್ನು ಉಳಿಸಿಕೊಂಡು ಆದರಾತಿಥ್ಯ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.’ ಗುರುವಿನ ಪ್ರೇಮದ ಹೃದಯ ಕಂಡು ಬ್ರಹ್ಮಾನಂದರು ಪುಳಕಿತ ಗೊಂಡರು. ಗದ್ಗದಿತರಾದರು. ಇಂದೂರಿನಿಂದ ಗೋಂದಾವಲೆಗೆ ವಾಪಸು ಬಂದರು.
ರಾಮನಾವನ್ನು ಅಂಕಿತಗೊಳಿಸು
ಮಹಾರಾಜರು ಇವರನ್ನು ಕುರಿತು ‘ನಿನ್ನ ಸೇವೆಯಿಂದ ಸಂತೃಷ್ಟನಾಗಿದ್ದೇನೆ. ಲೋಕಸಂಗ್ರಹಕ್ಕಾಗಿ ಇರಬೇಕಾದವನು ನೀನು. ಜನರಿಗೆ ಉಪಕಾರ ಮಾಡಬೇಕಾದ ನಿನ್ನನ್ನು ನನ್ನ ಬಳಿ ಇಟ್ಟುಕೊಳ್ಳುವುದು ಸರಿಯಲ್ಲ. ನಿನ್ನ ಹುಟ್ಟು ಪ್ರದೇಶವಾದ ಕರ್ನಾಟಕಕ್ಕೆ ಹೋಗು. ಜನಮಾನಸದಲ್ಲಿ ರಾಮನಾಮವನ್ನು ಅಂಕಿತಗೊಳಿಸು’ ಎಂದರು.
ಗುರುವನ್ನು ಅಗಲುವುದು ಸುಲಭವಾಗಿರಲಿಲ್ಲ. ಬ್ರಹ್ಮಾನಂದರು ಅಳುತ್ತಾ ನಿಂತರು. ಆಗ ಬ್ರಹ್ಮಚೈತನ್ಯರು ತಾವು ಧರಿಸುತ್ತಿದ್ದ ನಿಲುವಂಗಿ ಯನ್ನು ಟೋಪಿಯನ್ನು ಒಂದಷ್ಟು ಹಣವನ್ನು ಕೊಟ್ಟು ‘ಹೋಗಿ ಬನ್ನಿ ’ ಎಂದರು.
ಬ್ರಹ್ಮಾನಂದರು ಕರ್ನಾಟಕಕ್ಕೆ ಹೊರಟರು. ಭಾರವಾದ ಹೃದಯದಿಂದ ರಾಮನಾಮವನ್ನು ಹೇಳುತ್ತಾ ಜಾಲಿಹಾಳಕ್ಕೆ ಬಂದರು. ಊರಿನ ವಿಠಲ ಮಂದಿರದಲ್ಲಿ ಇಳಿದುಕೊಂಡರು. ಸುಂದರ ಕಂಠ ದಿಂದ ಹಾಡತೊಡಗಿದರು. ಸುತ್ತಲೂ ಜನ ಸೇರಿದರು. ಯಾರಿಗೂ ಇವರನ್ನು ಕಂಡುಹಿಡಿಯಲಾಗಲಿಲ್ಲ. ಫಲಾಹಾರವನ್ನು ಸ್ವೀಕರಿಸಿ, ಬೆಳಧಡಿಗೆ ಬಂದರು. ಗುರುವಾಜ್ಞೆಯಂತೆ ಅಲ್ಲೇ ಉಳಿದರು. ಪ್ರತಿನಿತ್ಯ ಭಾಗವತ, ಪುರಾಣ ಹೇಳುತ್ತಿದ್ದರು. ರಾಮನನ್ನು ಕುರಿತು ಹಾಡುತ್ತಿದ್ದರು. ಉಳಿದ ಕಾಲ ಮೌನವಾಗಿರುತ್ತಿದ್ದರು.
ದಿನಕಳೆದಂತೆ ಊರಿನ ಜನ ಇವರನ್ನು ಗೌರವಿಸ ತೊಡಗಿದರು. ಆ ಊರಿನ ರಂಗರಾವ್ ಇನಾಂದಾರ್ ಅವರ ಪತ್ನಿ ದ್ವಾರಕಾಬಾಯಿ. ಬ್ರಹ್ಮಾನಂದರು ಈಕೆಯನ್ನು ಕಾಕಿ ಎಂದು ಕರೆಯುತ್ತಿದ್ದರು. ಅವರಿಗೆ ಮಹಾರಾಜರ ಅಗಾಧ ಲೀಲೆಗಳನ್ನು ಹೇಳುತ್ತಿದ್ದರು.
ನಾಲಿಗೆ ರಾಮನಾಮದ ಸ್ವತ್ತು
ಹೀಗಿರುವಾಗ ಒಮ್ಮೆ ಬ್ರಹ್ಮಾನಂದರು ಕುರ್ತು ಕೋಟಿಗೆ ಹೋಗಿದ್ದರು. ಇವರ ವೇದಾಂತ ಶಾಸ್ತ್ರದ ಪಾಂಡಿತ್ಯವನ್ನು ಪರೀಕ್ಷಿಸುವುದಕ್ಕಾಗಿ ಲಿಂಗನಗೌಡ ಎಂಬುವರು ಅನೇಕ ಪ್ರಶ್ನೆಗಳನ್ನು ಕೇಳಿದರು. ಬ್ರಹ್ಮಾನಂದರು ನಮ್ರತೆಯಿಂದ ಮುಗುಳು ನಕ್ಕರು.
‘ಲಿಂಗನಗೌಡರೆ, ಮಹಾರಾಜರಿಂದ ಅನುಗ್ರಹೀತ ನಾದ ಮೇಲೆ ನನ್ನ ನಾಲಿಗೆಯನ್ನು ರಾಮನಾಮಕ್ಕೆ ಮಾರಿಕೊಂಡು ಬಿಟ್ಟಿದ್ದೇನೆ. ಸಕಲ ಶಾಸ್ತ್ರಗಳನ್ನು ಮತ್ತು ಸಂಸ್ಕೃತವನ್ನು ಮರೆತಿದ್ದೇನೆ’ ಎಂದರು.
ಮಹಾರಾಜರ ದರ್ಶನವಾದ ಮೇಲೆ ಅವರೆಂದೂ ಸಂಸ್ಕೃತದಲ್ಲಿ ಮಾತನಾಡಲಿಲ್ಲ. ವೇದಾಂತದ ಬಗ್ಗೆ ಚರ್ಚಿಸಲಿಲ್ಲ. ರಾಮನಾಮ ಹೊರತು ಬೇರೊಂದು ಶಬ್ದ ಬಾಯಿಂದ ಬರಲಿಲ್ಲ.
ಊರಿನ ಇನಾಂದಾರರು ರಾಮಮಂದಿರಕ್ಕಾಗಿ ನಿವೇಶನವೊಂದನ್ನು ಕೊಟ್ಟರು. ಸ್ವತಃ ಬ್ರಹ್ಮಾನಂದರೇ ಕಲ್ಲನ್ನು ಹೊರುತ್ತಿದ್ದರು. ರಾಮಪ್ರತಿಷ್ಠೆಗೆ ಬ್ರಹ್ಮಚೈತನ್ಯರೇ ಆಗಮಿಸಿದರು. ಊರಿನ ಸಕಲ ಜನಗಳನ್ನು ಕರೆಸಿ, ಅವರ ಕೈಯಿಂದ ವಿಗ್ರಹವನ್ನು ಮುಟ್ಟಿಸಿ ಪ್ರತಿಷ್ಠಾಪನೆಯನ್ನು ಮಾಡಿದರು. ಸಹಸ್ರಾರು ಜನರಿಗೆ ಅನ್ನದಾನ ಮಾಡಿದರು. ಬ್ರಹ್ಮಾನಂದರು ಬೆಟಗೇರಿ, ಗದಗ, ವೆಂಕಟಾಪುರ, ದಕ್ಷಿಣ ಕನ್ನಡ ಜಿಲ್ಲೆ ಮುಂತಾದ ಕಡೆ ರಾಮನಾಮದ ಮಹಿಮೆಯನ್ನು ಪ್ರಚಾರ ಮಾಡಿದರು. ದೇವಸ್ಥಾನಗಳನ್ನು ಕಟ್ಟಿಸಿದರು.
ಹೀಗೆ ಕಾಲ ಉರುಳುತ್ತಿರಲು ಒಬ್ಬ ವ್ಯಕ್ತಿ ವಿಷವನ್ನು ಬೆರೆಸಿದ ಆಹಾರವನ್ನು ಅವರಿಗಿತ್ತ. ಅವರು ಅದನ್ನು ಗುರುಗಳಿಗೆ ನೈವೇದ್ಯ ತೋರಿಸಿ ತಿಂದೇಬಿಟ್ಟರು. ಅದರಿಂದ ಮೈ ತುಂಬಾ ಗುಳ್ಳೆಗಳು, ಭೇದಿ ಇತ್ಯಾದಿ ಶುರುವಾಯಿತು. ಔಷಧಿ ರೂಪದಲ್ಲಿ ಎದೆಯ ಮೇಲೆ ‘ಶ್ರೀರಾಮ’ ಎಂದು ಬರೆದುಕೊಂಡರು. ಕಾಯಿಲೆಯೇನೋ ವಾಸಿಯಾಯಿತು. ಆದರೆ ನಿತ್ರಾಣವಾದರು. ವಿಷ ಹಾಕಿದ ವಿಷಯವನ್ನು ಸ್ವತಃ ಬ್ರಹ್ಮಾನಂದರೇ ಹೇಳಿದ್ದುಂಟು.
ಅಖಂಡ ನಾಮಸ್ಮರಣೆ, ಪುರಾಣ ಪುಣ್ಯಕಥೆಗಳು ಇವರ ಜೀವನದ ಉಸಿರಾಗಿತ್ತು. ಪ್ರತಿನಿತ್ಯದ ಕಠೋರ ಆಚರಣೆಯಿಂದಾಗಿ ದೇಹ ಕೃಶವಾಗತೊಡಗಿತು.
ರಾಮನಾಮವನ್ನು ಎಲ್ಲ ನಾಲಿಗೆಗಳಲ್ಲಿ ಬಿತ್ತಿದರು
ಕರ್ನಾಟಕದ ವೆಂಕಟಾಪುರ, ಕಾರ್ಕಳ, ಬೆಳಧಡಿ, ಬಳ್ಳಾರಿ, ಹೊಸಪೇಟೆ ಮುಂತಾದ ಕಡೆಗಳಲ್ಲಿ ಸ್ವತಃ ಮಹಾರಾಜರು ಬರುವಂತೆ ಮಾಡಿದರು. ಜನಗಳ ಸಂಘಟನೆ ಮಾಡಿದರು. ರಾಮನಾಮದ ಹೆಸರಿನಲ್ಲಿ ಜನಗಳ ನಡುವಿನ ಭೇದವನ್ನು ತೊಡೆದುಹಾಕಿದರು. ಜಾತಿಯ ಅಡ್ಡಗೋಡೆಯನ್ನು ಕಿತ್ತುಹಾಕಿದರು. ಸರ್ವರೂ ಒಂದೆಂಬ ಭಾವನೆಯನ್ನು ತಂದು ಲೋಕಸಂಗ್ರಹ ಮಾಡಿದರು. ಮಹಾರಾಜರ ಅನುಜ್ಞೆಯಂತೆ ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಮುಂತಾದ ಕಡೆಗಳಲ್ಲಿ ರಾಮನಾಮದ ಘೋಷವನ್ನು ಮೊಳಗಿಸಿದರು.
ಈ ಮಧ್ಯೆ ಒಂದು ಘಟನೆ ನಡೆಯಿತು. ಪಿಂಪಳದಲ್ಲಿ ರಾಮಪ್ರತಿಷ್ಠೆ. ಅದಕ್ಕಾಗಿ ಹವನ ಹೋಮಗಳು ಏರ್ಪಾಡಾಗಿದ್ದವು. ಶೃಂಗೇರಿಯಿಂದ ಸೀತಾರಾಮ ಶಾಸ್ತ್ರಿಗಳನ್ನು ಕರೆಸಲಾಗಿತ್ತು. ಪ್ರತಿಷ್ಠಾಪನೆ ಮುಗಿದ ಮೇಲೆ ಸ್ವತಃ ಬ್ರಹ್ಮಾನಂದರೇ ತೀರ್ಥ ಕೊಡುತ್ತಿದ್ದರು. ಎಲ್ಲರೂ ತೀರ್ಥಪ್ರಸಾದ ಸ್ವೀಕರಿಸಿದರು. ಸೀತಾರಾಮ ಶಾಸ್ತ್ರಿಗಳು ಮಾತ್ರ ತೀರ್ಥಕ್ಕೆ ಮುಂದೆ ಬರಲಿಲ್ಲ. ತೊನ್ನು ಹಿಡಿದವರಿಂದ ಹೇಗೆ ತೀರ್ಥವನ್ನು ಸ್ವೀಕರಿಸುವುದೆಂದು ಅವರ ಶಂಕೆ. ಅದನ್ನು ತಿಳಿದ ಬ್ರಹ್ಮಾನಂದರು ಪಕ್ಕದ ಶಿಷ್ಯರಿಗೆ ಹೇಳಿದರು : ‘ನೀವೇ ಸ್ವಲ್ಪ ತೀರ್ಥ ಕೊಡಿರಿ.’ ಸೀತಾರಾಮ ಶಾಸ್ತ್ರಿಗಳಿಗೆ ತಪ್ಪು ಅರಿವಾಯಿತು. ಕಾಲಿಗೆ ಬಿದ್ದು ಕ್ಷಮೆ ಕೇಳಿದರು.
ಅಂದು ಅವರಾಡಿದ ಮಾತುಗಳು ಅವರದೇ ಭಾಷೆಯಲ್ಲಿ ಓದಿ. ‘ನಾಮಸ್ಮರಣೆ ಮಾಡುವಾಗ ಮೈಯೆಲ್ಲಾ ರೋಮಾಂಚನೆಯಾಗಬೇಕು. ಕಣ್ಣಿಂದ ಆನಂದಬಾಷ್ಪಗಳು ಹರಿಯಬೇಕು. ಅಂತರಂಗದಲ್ಲಿ ಭಗವಂತನ ಸಾಕ್ಷಾತ್ಕಾರ ಕ್ಕಾಗಿ ತಳಮಳವಿರಬೇಕು. ಆಗ ಕರ್ಮ ಕಳೆದು ಮನುಷ್ಯ ಮೋಕ್ಷ ಪದವಿಗೆ ಅರ್ಹನಾಗುತ್ತಾನೆ. ರಾಮನನ್ನು ನಂಬಿ ಹನುಮ ಸಮುದ್ರ ಜಿಗಿದ, ವಿಶ್ವಾಸದ ಶಕ್ತಿಗೆ ಇದೊಂದು ಉದಾಹರಣೆ.’
ಗುರುವಿನ ಸಂದೇಶವನ್ನು ಹಬ್ಬಿಸಲು
ಈ ಮಧ್ಯೆ ಬ್ರಹ್ಮಚೈತನ್ಯರು ತೀರಿಕೊಂಡರು. ಬ್ರಹ್ಮಾನಂದರಿಗೆ ಬರಸಿಡಿಲು ಬಡಿದಂತಾಯಿತು. ಗೋಂದಾವಲೆಗೆ ಬಂದು ಅಲ್ಲಿ ದೇವಸ್ಥಾನದ ವ್ಯವಸ್ಥೆ ಮಾಡಿದರು. ಸದ್ಗುರು ಮಹಾರಾಜರ ಮಡದಿಯಾದ ಆಯೀ ಸಾಹೇಬರಿಗೆ ಜೀವನಕ್ಕೆ ವ್ಯವಸ್ಥೆ ಮಾಡಿದರು. ಮಹಾರಾಜರ ವೈಕುಂಠಕ್ಕೆ ಬಂದ ಸಹಸ್ರಾರು ಜನರಿಗೆ ರಾಮನಾಮದ ಪ್ರಚಾರಕ್ಕಾಗಿ ಪ್ರೇರಣೆ ನೀಡಿದರು. ಮಹಾರಾಜರ ಜಾಗದಲ್ಲಿ ಬ್ರಹ್ಮಾನಂದರನ್ನು ಜನ ಗುರುತಿಸಿದರು. ಆದರೂ ಬ್ರಹ್ಮಾನಂದರಿಗೆ ಗುರುವಿಲ್ಲದ ಜೀವನ ಬಹಳ ಕಷ್ಟವಾಯಿತು. ಮಹಾರಾಜರ ಪಾದುಕೆಯನ್ನು ಪೂಜಿಸುತ್ತಾ, ಸರ್ವತ್ರ ಸ್ಫೂರ್ತಿ ನೀಡಿದರು.
ಮೈಸೂರು ಸಂಸ್ಥಾನದ ಜಿ. ವೆಂಕಣ್ಣಯ್ಯನವರು, ಎ. ಪಿ. ಸುಬ್ಬರಾಯರು ಮುಂತಾದವರು ಬ್ರಹ್ಮಾನಂದರ ಅನುಜ್ಞೆ ಪಡೆದು ರಾಮನಾಮದ ಪ್ರಚಾರಕ್ಕಾಗಿ ನಿಂತರು. ಇವರ ಇನ್ನೊಬ್ಬ ಜೀವಗೆಳೆಯರಾದ ಕಾಂತರಾಜಪುರದ ಎಚ್. ವಿ. ನಂಜಪ್ಪನವರು ಬೆಂಬಲಿಗರಾಗಿ ನಿಂತರು. ಈ ಮೂರು ಜನ ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ ಬ್ರಹ್ಮಚೈತನ್ಯ ಶ್ರೀರಾಮ ಮಂದಿರವನ್ನು ಕಟ್ಟುವ ಸಾಹಸ ಮಾಡಿದರು. ಅವರ ಜೊತೆ ಅನೇಕ ಮಿತ್ರರು ಸೇರಿದರು. ಇಂದಿಗೆ ಚಿಂತಾಮಣಿ ಕ್ಷೇತ್ರ ಬ್ರಹ್ಮಚೈತನ್ಯರು ಮತ್ತು ಬ್ರಹ್ಮಾನಂದರ ಜೀವನ ಕಾರ್ಯವಾದ ರಾಮನಾಮ ಸ್ಮರಣೆಗೆ ಶ್ರೀಕ್ಷೇತ್ರವಾಗಿ ನಿಂತಿದೆ.
ಬ್ರಹ್ಮಾನಂದರು ಇಡೀ ಉತ್ತರ ಕರ್ನಾಟಕವನ್ನು ರಾಮನಾಮಮಯವನ್ನಾಗಿ ಮಾಡಿದರು. ಅನೇಕ ಜನ ಧರ್ಮದತ್ತಿಯನ್ನು ಬ್ರಹ್ಮಾನಂದರಿಗೆ ಅರ್ಪಿಸಿದರು. ಬ್ರಹ್ಮಾನಂದರು ರಾಮನಾಮದ ಪ್ರಸಾರ ಮಾಡುತ್ತಾ ಕೃಶರಾಗುತ್ತಾ ಬಂದರು. ಸುತ್ತಲಿದ್ದ ಜನಕ್ಕೆ ಇದು ಅರ್ಥ ವಾದರೂ ಅವರಿಗೆ ಏನನ್ನೂ ಹೇಳುವ ಧೈರ್ಯವಿರಲಿಲ್ಲ.
ಶ್ರೀ ರಾಮ ಪಾದದಲ್ಲಿ ಲೀನ
ಬುದ್ಧಿ ಪುರಸ್ಸರವಾಗಿ ಕಾಗವಾಡಕ್ಕೆ ಬಂದರು. ಅದು ಕೃಷ್ಣಾ ನದಿಯ ದಂಡೆಯ ಮೇಲಿದೆ. ಅವರ ಜೊತೆಯಲ್ಲಿ ಬಾಬುರಾಯ, ಹರಿಭಾವು ಮುಂತಾದ ಶಿಷ್ಯರಿದ್ದರು. ಅವರಿಳಿದುಕೊಂಡ ತೋಟದಲ್ಲಿ ಕದಂಬ ವೃಕ್ಷವಿತ್ತು. ಅದನ್ನು ತೋರಿಸಿ ಬ್ರಹ್ಮಾನಂದರು ‘ಶ್ರೀ ಕೃಷ್ಣ ದೇಹತ್ಯಾಗ ಮಾಡಿದ್ದು ಈ ಮರದ ಕೆಳಗೆ’ ಎಂದರು.
ಹರಿಭಾವು ಅವರನ್ನು ಕುರಿತು :
‘ಮರಣ ಅಂದರೆ ಏನು?’
‘ಅದಕ್ಕೆ ನೀನು ಹೆದರುವೆ ಏನು?’ ಎಂದು ಕೇಳಿದರು. ರಾಮನಾಮವನ್ನು ಸ್ಮರಣೆ ಮಾಡುವವರಿಗೆ ಮರಣ ಬಾಧೆ ಇರುವುದಿಲ್ಲ’ ಎಂದು ಮಾತು ಮುಗಿಸಿದರು.
ಅಂದು ಸಂಜೆ ಭಾವಪೂರಿತವಾಗಿ ಹಾಡಿದರು. ದೇವರೆದುರು ಮೈಮರೆತು ನರ್ತಿಸಿದರು. ಮನತುಂಬಿ ಆರತಿ ಎತ್ತಿದರು. ಪ್ರಸಾದ ಹಂಚಿದರು.
ಬಾಬುರಾಯನನ್ನು ಹತ್ತಿರಕ್ಕೆ ಕರೆದರು. ನನಗೆ ಹೊರಗಡೆ ಮಲಗಲು ಏರ್ಪಾಡು ಮಾಡು. ಕುಡಿಯುವುದಕ್ಕೆ ಸ್ವಲ್ಪ ನೀರಿಡು ಮುಂತಾಗಿ ಕ್ಷೀಣಸ್ವರದಲ್ಲಿ ಹೇಳಿದರು. ಕೇವಲ ಬ್ರಹ್ಮಚೈತನ್ಯರ ತೀರ್ಥವನ್ನು ತೆಗೆದುಕೊಂಡು ಮಲಗಿದರು.
ಬೆಳಿಗ್ಗೆ ಯಥಾ ಪ್ರಕಾರ ನಸುಕಿನಲ್ಲೇ ಎದ್ದರು. ಹಾಸಿಗೆಯ ಮೇಲೆ ಕುಳಿತು ‘ರಾಮ ರಾಮ’ ಎಂದರು. ‘ಮಹರಾಜ್ ಮಹರಾಜ್’ ಎಂದರು. ಮತ್ತೆ ಮಲಗಿ ಕೊಂಡರು. ಗೊರಕೆ ಪ್ರಾರಂಭವಾಯಿತು. ಬ್ರಹ್ಮಾನಂದರು ಆಯಾಸಗೊಂಡಿದ್ದಾರೆಂದು ಎಲ್ಲರೂ ಬಗೆದರು. ಗುರುಗಳು ಕೊನೆಯ ಸಮಯಕ್ಕೆ ತಯಾರಾಗಿದ್ದರು. ಶಿಷ್ಯರೆಲ್ಲರೂ ಸುತ್ತಲೂ ನೆರೆದರು. ಬ್ರಹ್ಮಾನಂದರು ಎಲ್ಲರನ್ನೂ ಒಮ್ಮೆ ನೋಡಿದರು. ಯಾರೂ ಅಳಬಾರ ದೆಂದು ಆಜ್ಞಾಪಿಸಿದರು. ಶ್ರೀರಾಮ ಎಂದು ಹೇಳಿ ಕಣ್ಣು ಮುಚ್ಚಿದರು.
ಶರಣರ ಗುಣವನ್ನು ಮರಣದಲ್ಲಿ ನೋಡು ಎಂಬುದು ಸತ್ಯವಾಯಿತು. ಅಕ್ಟೋಬರ್ ನಾಲ್ಕರಂದು ಭಾದ್ರಪದ ಅಮಾವಾಸ್ಯೆಯಂದು ಕಾಗವಾಡದ ಕೃಷ್ಣಾ ತಟಾಕದ ನವಭಾಗ ಎಂಬ ತೋಟದಲ್ಲಿ ದೇಹತ್ಯಾಗ ಮಾಡಿದರು ಎಂದು ಚರಿತ್ರೆ ಹೇಳುತ್ತದೆ.
ಶರೀರವನ್ನು ಬ್ರಹ್ಮಾನಂದರ ಇಚ್ಛೆಯಂತೆ ಕೃಷ್ಣಾ ನದಿಯಲ್ಲಿ ವಿಸರ್ಜಿಸಲಾಯಿತು. ಇಂದಿಗೂ ವೆಂಕಟಾಪುರ ದಲ್ಲಿ ಬ್ರಹ್ಮಾನಂದರ ಸಮಾಧಿ ಇದೆ. ಅವರು ಬಳಸುತ್ತಿದ್ದ ಪಾದುಕೆ, ಬಟ್ಟೆ ಎಲ್ಲವೂ ಇದೆ.
ಸ್ವಲ್ಪ ಹೆಚ್ಚು ಹುಚ್ಚು-ಶ್ರೀರಾಮನ ಹುಚ್ಚು
ಬ್ರಹ್ಮಾನಂದರು ಜೀವನವನ್ನು ರಾಮನಾಮಕ್ಕೆ ಅರ್ಪಿಸಿದರು. ದೇಹಬಾಧೆ ಅವರ ಲೋಕಸಂಗ್ರಹಕ್ಕೆ ಅಡ್ಡಿಯಾಗಲಿಲ್ಲ. ಜನ ಅವರನ್ನು ಹುಚ್ಚರೆಂದು ಕರೆದರು. ‘ಹೌದು ಎಲ್ಲರಿಗೂ ಒಂದೊಂದು ಹುಚ್ಚು, ನನಗೆ ಸ್ವಲ್ಪ ಹೆಚ್ಚು’ ಎನ್ನುತ್ತಿದ್ದರು. ಕರ್ನಾಟಕದಲ್ಲಿ ರಾಮದಾಸಿ ಪಂಥವನ್ನು ಪ್ರಚುರ ಪಡಿಸಿದವರು ಬ್ರಹ್ಮಾನಂದರು. ಎಲ್ಲವನ್ನೂ ತ್ಯಾಗಮಾಡುವುದು ಸುಲಭ. ಆದರೆ ಕೀರ್ತಿಯನ್ನು ತ್ಯಾಗಮಾಡುವುದು ಕಷ್ಟ. ಬ್ರಹ್ಮಾನಂದರು ಅದನ್ನೂ ಗೆದ್ದಿದ್ದರು. ನಿಚ್ಚಳವಾದ ರಾಮಭಕ್ತಿ, ಗುರುಭಕ್ತಿ ಎಂತಹವರಿಗೂ ಮೋಕ್ಷ ಪ್ರಾಪ್ತಿಯನ್ನು ತಂದುಕೊಡುತ್ತದೆ ಎಂದು ತೋರಿಸಿಕೊಟ್ಟರು. ರಾಮನಾಮಕ್ಕಾಗಿ ತನ್ನ ನಾಲಿಗೆಯನ್ನೇ ಅರ್ಪಿಸಿದರು.
ಕರ್ನಾಟಕದ ಸಂತ ಬೆಳಧಡಿಯ ಬ್ರಹ್ಮಾನಂದರು ಹೀಗಿದ್ದರು ಎಂಬುದೇ ನಮ್ಮ ಹೆಮ್ಮೆ. ಬುದ್ಧಿಗೊಪ್ಪಿದ ಮೇಲೆ ನಿಷ್ಠೆಯಿಂದ ಬಾಳ್ವೆ ನಡೆಸಿದ ಅವರ ಚರಿತ್ರೆ ನಮ್ಮೆಲ್ಲರಿಗೂ ದಾರಿ ದೀಪವಾಗಲಿ.
Leave A Comment