ಏನಿದು ರೈತಕ್ಷೇತ್ರ ಪಾಠಶಾಲೆ?

ರೈತಕ್ಷೇತ್ರ ಪಾಠಶಾಲೆ, ಇದೊಂದು ಶೋಧನೆ ಮಾಡಿ ಕಲಿಯುವ ವಿಧಾನವಾಗಿದ್ದು, ಇಲ್ಲಿ ಪ್ರತಿಯೊಬ್ಬ ರೈತನ ಹಾಗೂ ಗುಂಪಿನ ಸಾಮರ್ಥ್ಯವನ್ನು ವೃದ್ಧಿಸಿ, ಕೃಷಿಯಲ್ಲಿ ಬರತಕ್ಕಂತಹ ಸಮಸ್ಯೆಗಳನ್ನು ಗುರುತಿಸಿ ಗುಂಪುಗಳಲ್ಲಿ ಪರಸ್ಪರ ಚರ್ಚಿಸಿ, ವಿಚಾರ ವಿನಿಮಯ ಮಾಡಿ, ಆತ್ಮವಿಶ್ವಾಸ ಗಳಿಸಿಕೊಂಡು ಸ್ವತಃ ನಿರ್ಧಾರಗಳನ್ನು ತೆಗೆದುಕೊಂಡು ಅನುಷ್ಠಾನಗೊಳಿಸುವ ತರಬೇತಿ. ಪ್ರಯೋಗ ಹಾಗೂ ಪೂರ್ವ ಸಿದ್ಧಾಂತಗಳ ಪರೀಕ್ಷೆ ಮೂಲಕ ರೈತರ ಕಲಿಕಾ ಸಾಮರ್ಥ್ಯತೆ ಹೆಚ್ಚಿಸಿ, ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಹಾಗೂ ಅದನ್ನು ಅಳವಡಿಸಿಕೊಳ್ಳುವ ಚತುರತೆಯನ್ನು ಹೆಚ್ಚಿಸುವುದು.

ಪ್ರಾರಂಭ ಹೇಗೆ?

 • ಕ್ಷೇತ್ರವನ್ನು ಗುರುತಿಸುವುದು ಹಾಗೂ ರೈತರ ಗುಂಪುಗಳನ್ನು ಸಜ್ಜುಗೊಳಿಸುವುದು.
 • ಆಯ್ಕೆಯಾದ ಬೆಳೆಯ ಅವಶ್ಯಕತೆ ಹಾಗೂ ಪರಿಸ್ಥಿತಿ ವಿಶ್ಲೇಷಣೆ ಮೂಲಕ, ಪರ್ಯಾಯ ಮಾರ್ಗೋಪಾಯಗಳನ್ನು ಗುರುತಿಸುವುದು ಹಾಗೂ ರೈತಕ್ಷೇತ್ರ ಪಾಠಶಾಲೆಯಲ್ಲಿ ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು.
 • ಅವಶ್ಯಕತೆಗನುಗುಣವಾಗಿ, ರೈತಕ್ಷೇತ್ರ ಪಾಠಶಾಲೆ, ಪಠ್ಯಕ್ರಮವನ್ನು ತಯಾರಿಸುವುದು ಹಾಗೂ ಪ್ರಕ್ರಿಯೆಯನ್ನು ಪುಷ್ಟೀಕರಿಸಲು ಸಹಭಾಗಿಗಳನ್ನು ಗುರುತಿಸುವುದು.
 • ಬೇಕಾಗುವ ಪರಿಕರಗಳನ್ನು ಸಿದ್ಧಪಡಿಸುವುದು.
 • ಬಿತ್ತನೆ ಮುಂಚೆ ಪೂರ್ವತರಬೇತಿಯನ್ನು ಏರ್ಪಡಿಸುವುದು.
 • ಸಂಪನ್ಮೂಲ ತರಬೇತುದಾರ ಹಾಗೂ ಅಧ್ಯಯನ ಕ್ಷೇತ್ರವನ್ನು ಗುರುತಿಸುವುದು.
 • ರೈತಕ್ಷೇತ್ರ ಪಾಠಶಾಲೆ ನಿರ್ವಹಣೆ ಹಾಗೂ ದಾಖಲಾತಿಗಳ ಬಗ್ಗೆ ಜವಾಬ್ದಾರಿ ವಹಿಸುವುದು.

ಚಟುವಟಿಕೆಗಳು ಯಾವುವು?

 • ರೈತಕ್ಷೇತ್ರ ಪಾಠಶಾಲೆ ಬೆಳೆ ಪೂರ್ಣಾವಧಿಯವರೆಗೆ ನಡೆಸಲಾಗುವುದು.
 • ಸಂಪನ್ಮೂಲ ವ್ಯಕ್ತಿಗಳಿಗೆ ಪೂರ್ವ ತರಬೇತಿಯನ್ನು ಏರ್ಪಡಿಸುವುದು.
 • ಇಲ್ಲಿ ರೈತರು ಬೆಳೆಗನುಗುಣವಾಗಿ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಕ್ಷೇತ್ರದಲ್ಲಿ ಚರ್ಚಿಸುವುದು.
 • ಪ್ರತಿಯೊಂದು ರೈತಕ್ಷೇತ್ರ ಪಾಠಶಾಲೆಯು ಕನಿಷ್ಠ ಮೂರು ಹಂತಗಳನ್ನು ಒಳಗೊಂಡಿರುತ್ತದೆ.
 • ಕೃಷಿ ಪರಿಸರ ಪದ್ಧತಿ ವಿಶ್ಲೇಷಣೆ
 • ಕಿರುಪ್ರಯೋಗಗಳು ಅಥವಾ ವಿಶೇಷ ವಿಷಯದ ಚರ್ಚೆ
 • ಗುಂಪು ಚೈತನ್ಯಗೊಳಿಸುವ ಚಟುವಟಿಕೆಗಳು

ಶತ್ರು ಹಾಗೂ ಮಿತ್ರಕೀಟಗಳ ದಾಖಲಾತಿ

ಸಾಮಾನ್ಯವಾಗಿ ರೈತಕ್ಷೇತ್ರ ಪಾಠಶಾಲೆ ಮುಂಜಾನೆ ಏಳು ಗಂಟೆಗೆ ಪ್ರಾರಂಭವಾಗುತ್ತದೆ. ತರಬೇತುದಾರರು ರೈತರಿಗೆ ಕೃಷಿ ಪರಿಸರ ಪದ್ಧತಿ ವಿಶ್ಲೇಷಣೆಗಾಗಿ ಸಲಹೆ ನೀಡುತ್ತಾರೆ.  ಇಲ್ಲಿ ಭಾಗವಹಿಸಿದವರು ಬೆಳೆಪದ್ಧತಿ ಹಾಗೂ ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸಿ, ಅಲ್ಲಿ ಕಂಡಂತಹ ಮಾದರಿಗಳನ್ನು ಉದಾಹರಣೆಗೆ ಕೀಟ, ರೋಗಗ್ರಸ್ತ ಎಲೆ, ಮಣ್ಣು ಇತ್ಯಾದಿಗಳನ್ನು ಚಿಕ್ಕ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿ ಚರ್ಚಿಸಲು ತರುವುದು.

ರೈತರು ಚಿಕ್ಕಗುಂಪುಗಳಲ್ಲಿ ಚರ್ಚಿಸಿ, ದೊಡ್ಡ ಹಾಳೆಗಳಲ್ಲಿ ಚಿತ್ರವನ್ನು ಬರೆದು ಅದರಲ್ಲಿ ಕಂಡುಕೊಂಡ ವಿಷಯಗಳನ್ನು ಮತ್ತು ನಿರ್ಣಯಗಳನ್ನು ರೈತಕ್ಷೇತ್ರ ಪಾಠಶಾಲೆಯಲ್ಲಿ ಇತರ ರೈತರಿಗೂ ಕೂಡ ವಿವರಿಸುವುದು.  ಎಲ್ಲರ ಸಲಹೆಗಳನ್ನು ಪಡೆದು, ವಿಷಯಗಳನ್ನು ಚರ್ಚಿಸಿ, ಇದೇ ಸಮಯದಲ್ಲಿ ಹಿಂದಿನ ವಾರದ ಪಾಠಶಾಲೆಯ ನಿರ್ಣಯಗಳನ್ನು ಹಾಗೂ ವೀಕ್ಷಿಸಿದ ವಿಷಯಗಳನ್ನು ಅವಲೋಕಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುವುದು.

 • ರೈತಕ್ಷೇತ್ರ ಪಾಠಶಾಲೆಯಲ್ಲಿ ಭಾಗವಹಿಸಿದ ರೈತರಿಗೆ ಲಘು ಉಪಹಾರ ವ್ಯವಸ್ಥೆ ಮಾಡುವುದು.
 • ರೈತರ ಗುಂಪುಗಳನ್ನು ಸ್ಫೂರ್ತಿಗೊಳಿಸಲು, ಬಲಪಡಿಸಲು ಮತ್ತು ಸಂಘಟನಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಗುಂಪು ಚೈತನ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

ಪ್ರಯೋಗಗಳು ಹೇಗಿರುತ್ತವೆ?

ಪರಿಸ್ಥಿತಿಗೆ ಅನುಗುಣವಾಗಿ ವಿಶೇಷ ವಿಷಯಗಳನ್ನು ಕೇವಲ ಉಪನ್ಯಾಸವಲ್ಲದೇ, ರೈತರಿಗೆ ಗುಂಪುಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಅವುಗಳ ಪರಿಹಾರವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುವುದು.

ಉದಾಹರಣೆಗೆ ಹತ್ತಿಯಲ್ಲಿ ಕಾಯಿಕೊರಕ ನಿರ್ವಹಣೆ, ಶೇಂಗಾದಲ್ಲಿ ಜಿಪ್ಸಂ ಬಳಕೆ ಇತ್ಯಾದಿ.

ಕೊನೆಗೆ ರೈತಕ್ಷೇತ್ರ ಪಾಠಶಾಲೆ ನಡೆಸಿಕೊಂಡು ಬಂದ ಕಾರ್ಯಚಟುವಟಿಕೆ ಬಗ್ಗೆ ಪರಿಷ್ಕರಿಸಿ, ಮುಂದಿನ ಪಠ್ಯದಿನದ ಪದ್ಧತಿಗಳನ್ನು ಸುಧಾರಿಸಿಕೊಳ್ಳುವುದು.

ರೈತಕ್ಷೇತ್ರ ಪಾಠಶಾಲೆಗಳ ನಡುವೆ ಕ್ಷೇತ್ರ ಭೇಟಿ ಮಾಡಿ ಗುಂಪಿನಲ್ಲಿ ನಿರ್ಣಯ ತೆಗೆದುಕೊಂಡ ಚಟುವಟಿಕೆಗಳ ಬಗ್ಗೆ ನಿಗಾ ಇಡುವುದು.  ಸಂಪನ್ಮೂಲ ವ್ಯಕ್ತಿ ಕ್ಷೇತ್ರ ಭೇಟಿ ಮಾಡಿ ಕ್ಷೇತ್ರದಲ್ಲಿ ಆದಂತಹ ಬದಲಾವಣೆ ಬರೆದಿಟ್ಟುಕೊಂಡು, ಮುಂದಿನ ರೈತಕ್ಷೇತ್ರ ಪಾಠಶಾಲೆಯಲ್ಲಿ ಚರ್ಚಿಸುವುದು.

ಬೆಳೆ ಕಟಾವು ನಂತರದ ಚಟುವಟಿಕೆಗಳೇನು?

 • ರೈತಕ್ಷೇತ್ರ ಪಾಠಶಾಲೆಯಲ್ಲಿ ತಿಳಿದುಕೊಂಡ ಅನುಭವಗಳನ್ನು ಗ್ರಾಮದ ಇನ್ನುಳಿದ ರೈತರಿಗೆ ಪ್ರಚುರಪಡಿಸಲು ಕ್ಷೇತ್ರೋತ್ಸವ ಏರ್ಪಡಿಸುವುದು.  ಫಲಿತಾಂಶಗಳನ್ನು ಹಂಚಿಕೊಳ್ಳುವುದು ಹಾಗೂ ವಿಧಾನವನ್ನು ವಿಶ್ಲೇಷಿಸಿ ಮುಂದುವರೆಸಿಕೊಂಡು ಹೋಗುವುದು.  ಈ ರೀತಿ ವಿಷಯಗಳನ್ನು ಚರ್ಚಿಸುವುದರಿಂದ ಫಲಿತಾಂಶಗಳನ್ನು ಹೆಚ್ಚು ರೈತರಿಗೆ ಪ್ರಚುರಪಡಿಸಲು ಅನುಕೂಲವಾಗುತ್ತದೆ.  ಈ ಪದ್ಧತಿಗಳನ್ನು ಮುಂದುವರೆಸಿಕೊಂಡು ಹೋಗಲು, ನಿಪುಣ ರೈತರನ್ನು ಗುರುತಿಸಲು ಈ ವಿಧಾನ ಅನುವು ಮಾಡಿಕೊಡುತ್ತದೆ.
 • ರೈತಕ್ಷೇತ್ರ ಪಾಠಶಾಲೆಯ ಮುಂಚೆ ಹಾಗೂ ಕೊನೆಯ ಹಂತದಲ್ಲಿ ರೈತರಿಗೆ ಬ್ಯಾಲೆಟ್ ಬಾಕ್ಸ್ ಪದ್ಧತಿಗಳನ್ನು ಅಳವಡಿಸಿ, ಕಲಿತ ಜ್ಞಾನವನ್ನು ಮೌಲ್ಯಮಾಪನ ಮಾಡುವುದು.
 • ರೈತಕ್ಷೇತ್ರ ಪಾಠಶಾಲೆಯ ಕೊನೆಯ ಸಭೆಯಲ್ಲಿ ಮುಂದೆ ಕೈಗೊಳ್ಳುವ ಚಟುವಟಿಕೆಗಳ ಬಗ್ಗೆ ಯೋಜನೆ ಹಾಕಿಕೊಳ್ಳುವುದು.
 • ರೈತಕ್ಷೇತ್ರ ಪಾಠಶಾಲೆಗಳನ್ನು ನಿರಂತರವಾಗಿ ನಡೆದುಕೊಂಡು ಹೋಗುವ ಸಲುವಾಗಿ ಗುಂಪುಸಭೆ ಹಾಗೂ ಪುನಶ್ಚೇತನ ತರಬೇತಿಗಳನ್ನು ಹಮ್ಮಿಕೊಳ್ಳವುದು.

ಫಲಿತಾಂಶಗಳಾವುವು?

 • ರೈತಕ್ಷೇತ್ರ ಪಾಠಶಾಲೆ ಮುಕ್ತಾಯವಾಗುವುದರೊಳಗಾಗಿ, ರೈತರು ಕೃಷಿ ಪರಿಸರ ಪದ್ಧತಿ ವಿಶ್ಲೇಷಣೆ ಹಾಗೂ ನಿರ್ಣಯ ತೆಗೆದುಕೊಳ್ಳುವಲ್ಲಿ ಸಾಮರ್ಥ್ಯವನ್ನು ಪಡೆದಿರುತ್ತಾರೆ.
 • ಬಾಹ್ಯ ಪರಿಕರಗಳನ್ನು ಕಡಿಮೆ ಮಾಡಿ ಸ್ಥಳೀಯ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಿ, ಬಳಕೆ ಮಾಡುತ್ತಾರೆ.
 • ಪ್ರಯೋಗ ಹಾಗೂ ಹೊಸ ಹೊಸ ಶೋಧನೆ ಮೂಲಕ ರೈತರನ್ನು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಬೆಳೆ ನಿರ್ವಹಣೆ ಮಾಡುವ ಶಕ್ತಿಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
 • ಸಮುದಾಯದಲ್ಲಿ ಸ್ಥಳೀಯ ಜ್ಞಾನ-ಕೌಶಲ್ಯತೆಯನ್ನು ಅಭಿವೃದ್ಧಿಪಡಿಸುತ್ತದೆ.

ಈ ಲೇಖನಕ್ಕೆ ಮಾಹಿತಿ ನೀಡಿದವರು ಎಎಮ್‌ಇ ಪ್ರತಿಷ್ಠಾನ ರಾಯಚೂರು.