ಹೈಬ್ರಿಡ್ ಬೆಳೆಗಳ ಭರಾಟೆಯ ಮಧ್ಯೆ ಕಳೆದೇ ಹೋಗಿದ್ದ ಬರಗ ಎಂಬುವ ತೃಣಧಾನ್ಯ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ಈಗ ಕಾಣಿಸಿಕೊಂಡಿದೆ. ಉತ್ಕೃಷ್ಠ ಗುಣಮಟ್ಟದ ಪೋಷಕಾಂಶಗಳನ್ನು ಹೊಂದಿರುವ ಈ ಅಕ್ಕಿಯನ್ನು ಬಸಿದು ಅನ್ನ ಮಾಡಿದರೆ ಘಮಘಮಿಸುವ ಪರಿಮಳ ಹೊರಹೊಮ್ಮುತ್ತದೆ ಅದರ ವಿವರ ಇಲ್ಲಿದೆ ಓದಿ. |
‘ನೀವು ಬರಗದ ಅಕ್ಕಿ ನೋಡಿದ್ದೀರಾ? ಎಂದು ಯರನ್ನಾದರೂ ಕೇಳಿದರೆ ‘ನೆಲ್ಲಕ್ಕಿ, ನವಣಕ್ಕಿ, ಸಬ್ಬಕ್ಕಿ ಗೊತ್ತು, ಜೊತೆಗೆ ಈಚೆಗೆ ಹಳ್ಳಿಯಿಂದ ಬಂದ ಸಾವಕ್ಕಿನೂ ಗೊತ್ತು ಆದರೆ ಬರಗ ಎಂಬ ಅಕ್ಕಿ ಮಾತ್ರ ಗೊತ್ತೇ ಇಲ್ಲ’ ಎಂದು ಬರಗದ ಹೆಸರು ಕೇಳಿದವರು ಬೆರಗಾಗಿ ಹೀಗೆ ಹೇಳುವುದು ಗ್ಯಾರಂಟಿ.
ಹಾಗೆ ಹೇಳಬೇಕೆಂದರೆ ಸುಮಾರು ನಲ್ವತ್ತು ವರ್ಷಗಳ ಹಿಂದೆ ಕೃಷ್ಣಾ ಹಾಗೂ ತುಂಗಭದ್ರಾ ತೀರದ ರೈತರನ್ನು ಹೊರತುಪಡಿಸಿದರೆ ಉತ್ತರ ಕರ್ನಾಟಕ ಭಾಗದ ಬಹುತೇಕ ರೈತರಿಗೆ ಬರಗ ಬಿಟ್ಟರೆ ನೆಲ್ಲಕ್ಕಿಯ ಪರಿಚಯವೇ ಇದ್ದಿಲ್ಲ ಎನ್ನಬಹುದು. ಅವರಿಗೆ ಅಕ್ಕಿ ಅನ್ನ ಎಂದರೆ ಅದೇನಿದ್ದರೂ ನಿತ್ಯ ಬೇಯಿಸುವ ‘ಬರಗದ’ ಅಕ್ಕಿಯ ಅನ್ನ, ಅದು ತಪ್ಪಿದರೆ ಹಬ್ಬಕ್ಕೊಮ್ಮೆ ಮಾಡುವ ‘ಸಾವಿ’ ಅಕ್ಕಿಯ ಅನ್ನ, ಇನ್ನು ರಟ್ಟೆ ಗಟ್ಟಿ ಇದ್ದವರು ಕುಟ್ಟಿ ಮಾಡುತ್ತಿದ್ದ ‘ಹಾರ್ಕ್’ ಅಕ್ಕಿಯ ಅನ್ನ, ಅತಿಥಿಯಂತೆ ಆಗಾಗ ಮಾಡುತ್ತಿದ್ದ ನವಣೆ ಅನ್ನ ಈ ನಾಲ್ಕು ಅಕ್ಕಿ ಬಿಟ್ಟರೆ ಮತ್ತಾವ ಅಕ್ಕಿಗಳ ಬಳಕೆ ಆ ಸಂದರ್ಭದಲ್ಲಿ ಇದ್ದಿಲ್ಲ.
ಶ್ರಮದಾಯಕ ಕೆಲಸ ಮಾಡುವ ರೈತರು ಒಂದು ಹೊತ್ತು ‘ಬರಗ’ದ ಅನ್ನ ಉಂಡರೆ ಎರಡನೇ ಹೊತ್ತಿಗೆ ಬೇಗ ಹಸಿವೆ ಆಗದಷ್ಟು ಗಟ್ಟಿ ಹಾಗೂ ಪೋಷಕಾಂಶಗಳನ್ನು ಹೊಂದಿದ ಆಹಾರ ಬೆಳೆ ಇದಾಗಿತ್ತು. ‘ಬರಗದ ಬಿಸಿ ಅನ್ನಕ್ಕ ತುಪ್ಪ ಹಾಕ್ಕೊಂಡು ನುಂಗಿದರ, ಆಹಾ… ಅದೆಂತಹ ರುಚಿರ್ರೀ! ಅದು ಅನ್ನವಲ್ಲ ಪರಮನ್ನವೇ ಸರಿ’ ಎಂದು ಬಾಲ್ಯದಲ್ಲಿ ನಿತ್ಯ ಸಾವೆ ಅನ್ನ ಸವಿಯುತ್ತಿದ್ದ ಕೊಪ್ಪಳ ಜಿಲ್ಲೆಯ ಶಾಖಾಪುರ ಗ್ರಾಮದ ವೃದ್ಧ ಬಸಪ್ಪಜ್ಜ ಕೇಳಿದವರ ಬಾಯಿಯಲ್ಲಿ ನೀರೂರುವ ಹಾಗೆ ಹೇಳುತ್ತಾರೆ. ಬರಗದ ಬಿಸಿ ಅನ್ನದ ಮೇಲೆ ಒಂದಿಷ್ಟು ತುಪ್ಪ, ಮಜ್ಜಿಗೆ, ಇಲ್ವೆ ಗೊಜ್ಜು ಹಾಕಿಕೊಂಡು ಸವಿದರಂತೂ ಆಹಾಃ ಅದೆಂತಹ ಮಧುರ. ಇನ್ನು ಬಾಣಂತಿಯರಿಗೆ ಹಾಗೂ ಶೀತದಿಂದ ಬಳಲುವವರಿಗಂತೂ ಈ ಬರಗದ ಅನ್ನ ಹೇಳಿ ಮಡಿಸಿರುವ ಔಷಧಿಯಾಗಿತ್ತು ಎಂದೆಲ್ಲ ಹೇಳುತ್ತಾರೆ.
ಬರಗ–ಬೆರಗು:
ಸಿರಿಧಾನ್ಯಗಳಲ್ಲಿ ಒಂದಾದ ಬರಗದ ವೈಜ್ಞಾನಿಕ ಹೆಸರು ‘ಪ್ಯಾನಿಕಮ್ ಮಿಲೇಸಿಯಮ್’ ಇಂಗ್ಲಿಷ್ನಲ್ಲಿ ‘ಪ್ರೊಸೊ ಮಿಲೆಟ್’ ಎಂದು ಕರೆಯಾಲಾಗುತ್ತಿದೆ. ಚೀನಾ ಹಾಗೂ ಪಶ್ಚಿಮ ಯೂರೋಪ್ನ ಕೆಲ ಪ್ರದೇಶUಳಲ್ಲಿ ಈಗಲೂ ಬರಗ ಬೆಳೆಯಲಾಗುತ್ತದೆ. ಭಾರತದ ಬಿಹಾರ, ಅಂಧ್ರ, ಮಹಾರಾಷ್ಟ್ರ
ಹಾಗೂ ತಮಿಳುನಾಡಿನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ತೆಳುಹಳದಿ ಬಣ್ಣದ ಬರಗದ ಕಾಳುಗಳು ಕಣ್ಣಿಗೆ ಫಳಫಳ ಹೊಳೆಯುತ್ತವೆ.
ಇನ್ನು ಪೌಷ್ಟಿಕಾಂಶದ ವಿಷಯಕ್ಕೆ ಬಂದರೆ, ಅಕ್ಕಿಗಿಂತ ಅಧಿಕ ಪ್ರಮಣದ ಪ್ರೋಟೀನ್, ನಾರು, ಖನಿಜಾಂಶ ಹಾಗೂ ಕ್ಯಾಲ್ಸಿಯಂ ಈ ಬರಗದಲ್ಲಿ ಇವೆ.
ಸಂಸ್ಕರಿಸುವುದು ಹೇಗೆ? :
ನೆಲ್ಲಕ್ಕಿ, ನವಣೆಯಂತೆ ಈ ಬರಗ ಅಕ್ಕಿಯನ್ನು ಸಂಸ್ಕರಿಸಬೇಕು. ಹಿಟ್ಟಿನ ಗಿರಣಿಯಲ್ಲಿಯೇ ರವೆಯ ಹಾಗೆ ಬೀಸಿದರೆ ಅಕ್ಕಿ ಬರುತ್ತದೆ. ನಂತರ ಒರಳಿನಲ್ಲಿ ಹಾಕಿ ಒಂದಿಷ್ಟು ಥಳಿಸಿದರೆ ಮುಗಿಯಿತು ಬೆಳ್ಳನೆ ಅಕ್ಕಿ ಸಿದ್ಧ. ಹಿಂದೆ ಗಿರಣಿ ಇದ್ದಿಲ್ಲ ಪ್ರತಿಯೊಬ್ಬರ ಮನೆಯಲ್ಲಿ ಬರಗ ಬೀಸುವ ಕಲ್ಲು ಇರುತ್ತಿದ್ದವು. ಅನ್ನ ಬೇಯುವಾಗಲೇ ಮನೆತುಂಬ ಘಮ-ಘಮ ಪರಿಮಳ ತುಂಬುತ್ತದೆ. ನಂತರ ಉಂಡವರ ಒಡಲೂ ತಣಿಯುತ್ತದೆ. ಇಂತಹ ಗುಣಮಟ್ಟದ ಹಾಗೂ ಆರೋಗ್ಯಕರ ಸಿರಿಧಾನ್ಯ, ತೃಣಧಾನ್ಯ ಎಂದೆಲ್ಲ ಕರೆಯುವ ಈ ಬರಗ ಹೈಬ್ರಿಡ್ ಬೀಜದ ಅಬ್ಬರದ ಮಧ್ಯೆ ಹೇಳ ಹೆಸರಿಲ್ಲದೇ ಹೊರಟು ಹೋಗಿತ್ತು.
ಆದರೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ ಗ್ರಾಮದ ದುರಗಪ್ಪ ಕುರಿ ಉಳಿಸಿಕೊಂಡು ಬಂದಿರುವುದು ಆಶ್ಚರ್ಯವೇ ಸರಿ. ಪ್ರತಿ ವರ್ಷ ತನ್ನ ಮನೆಗೆ ಬೇಕಾಗುವಷ್ಟು ಬಿತ್ತನೆ ಮಾಡಿಕೊಂಡು ಬರುತ್ತಿದ್ದಾರೆ. “ಕಳ್ಕೊಂಡ್ ಬಿಟ್ಟಿದ್ವಿರಿ ಈ ಬರಗಾನ… ಮತ್ ಇಲ್ನೋಡಿ ಖುಷಿ ಆತ್ರಿ… ಒಂದಷ್ಟು ಬಿತ್ಲಿಕ್ಕೆ
ಬರಗದ್ ಬೀಜಾ ಕೊಡ್ರಿ” ಎಂದು ಬರಗದ ಪರಿಚಯವಿರುವ ಹಿರಿಯರು ಇವರ ಬರಗದ ಬೆಳೆ ನೋಡಿದಾಗ ಕೇಳುತ್ತಾರೆ. ಹಾಗೆ ಕೇಳಿದವರಿಗೆ ರಾಶಿ ಮಾಡಿದ ನಂತರ ಬಂದ ಉಚಿತವಾಗಿ ತೊಗೊಂಡು ಹೋಗ್ರಿ, ಆದ್ರ ಅದು ಉಣ್ಣೋಕ್ಕಲ್ಲ ಬಿತ್ತಿ ಬೆಳೆಯೋಕೆ ಎಂದು ದುರುಗಪ್ಪ ಬಿತ್ತನೆಗೆಂದು ಆಗಾಗ ಇತರೆ ರೈತರಿಗೆ ಮುಷ್ಠಿ ಬರಗದ ಬೀಜ ಕೊಡುತ್ತಲೇ ಬಂದಿದ್ದಾರೆ.
ಅತ್ಯಂತ ಕಡಿಮೆ ಮಳೆಯ ಮಧ್ಯೆ ಫಲವತ್ತಾಗಿರುವ ಅಥವಾ ಫಲವತ್ತಾಗಿರದೇ ಇರುವ ನೆಲದಲ್ಲೂ ಬೆಳೆಯುವ ಸಿರಿಧಾನ್ಯಗಳದ್ದು ಬೆರಗಿನ ಲೋಕ. ಸಿಕ್ಕಷ್ಟು ಮಳೆನೀರನ್ನೇ
ಬಳಸಿಕೊಂಡು ವತಾವರಣದಲ್ಲಿನ ತೇವಾಂಶ ಬಳಸಿಕೊಂಡು ಇವು ಬೆಳೆಯುತ್ತವೆ. ಸಾವಿರಾರು ವರ್ಷಗಳಿಂದ ವಾತಾವರಣಕ್ಕೆ ಹೊಂದಿಕೊಂಡು ಬೆಳೆದ ಈ ಸಿರಿಧಾನ್ಯಗಳಿಗೆ
ಕೀಟ-ರೋಗ ನಿರೋಧಕ ಶಕ್ತಿಯಿದೆ. ಹೀಗಾಗಿ ಬಹುತೇಕ ರೀಗಗಳು ಈ ಬೆಳೆಯತ್ತ ಸುಳಿಯದಿರುವುದರಿಂದ ಬೇಸಾಯಕ್ಕೆ ಹೆಚ್ಚಿನ ಖರ್ಚು ಕೂಡ ಆಗದು. ಆದರೆ ಹಸಿರು ಕ್ರಾಂತಿಯ ಪರಿಣಾಮವಾಗಿ ಕೃಷಿPತ್ರದಲ್ಲಿ ಅಧಿಕ ಇಳುವರಿಯ ವಾಣಿಜ್ಯ ಬೆಳೆ ಪ್ರವೇಶಿಸಿ, ಇವು ‘ಕಿರುಧಾನ್ಯ’ ಎಂಬ ಮೂದಲಿಕೆಗೆ ಒಳಗಾಗಿರುವುದು ವಿಷಾಧನೀಯ. ವಿಜ್ಞಾನಿಗಳಂತೂ ಕಂಪೆನಿಗಳ ಹೈಬ್ರಿಡ್ ತಳಿ ಬೀಜಗಳಿಗೆ ಕೊಟ್ಟ ಆದ್ಯತೆಯನ್ನು ನಮ್ಮ ನೆಲದ ಧಾನ್ಯಗಳಿಗೆ ಕೊಡಲಿಲ್ಲ ಎಂಬ ಅಸಮಧಾನ ಈಗಲೂ ಉಳಿದಿದೆ.
ನಿರಾಶೆಯ ಕತ್ತಲಲ್ಲೂ ಅಲ್ಲಲ್ಲಿ ಇಂತಹ ದೇಶೀಯ ಧಾನ್ಯಗಳು ಬೆಳೆದು ಬೀಜದ ಬೆಳಕು ಕಾಣಿಸುವಂತಾಗಿರುವುದು ಸಂತಸದ ಮಾತೇ ಸರಿ.
ಬರಗದ ಬೇಸಾಯ:
ದುರುಗಪ್ಪ ನಂತಹ ಕೆಲವೇ ಕೆಲವು ರೈತರು ಹಳೆಯ ಆಹಾರಧಾನ್ಯಗಳ ಮೇಲಿನ ಒಲವಿನಿಂದ ಈಗಲೂ ಇಂತಹ ಬೀಜಗಳನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. “ಅಕ್ಕಿ ಅನ್ನ ತಿಂದ್ರ ಕೆಲಸ ಮಡ್ಲಿಕ್ಕ ಆಗಂಗಿಲ್ರಿ. ಬರಗದ ಅನ್ನ ಊಟ ಮಡಿದ್ರ ನಾಕ್ ತಾಸು ಹೆಚ್ಚು ಕೆಲಸ ಮಡ್ಬಹುದು” ಎಂದು ಹೇಳುವ ದುರಗಪ್ಪ ಕುರಿ ಬರಗ ಕೃಷಿಯಲ್ಲಿ ಪರಿಣಿತ. ತೊಗರಿ, ನವಣೆ ಜತೆಗೆ ಮನೆ ಬಳಕೆಗೆಂದು ಈ ಬರಗ ಬೆಳೆಯುತ್ತಿದ್ದಾರೆ. ರೋಹಿಣಿ, ಮೃಗಶಿರಾ ಮಳೆ ನPತ್ರದ ಅವಧಿಯಲ್ಲಿ (ಮೇ ಹಾಗೂ ಜೂನ್) ಬರಗದ ಬಿತ್ತನೆ ನಡೆಯುತ್ತದೆ. ಉಸುಕು ಮಿಶ್ರಿತ, ಸವುಳು, ಗಟ್ಟಿ… ಹೀಗೆ ಯವುದೇ ಮಣ್ಣಿನಲ್ಲೂ ಬರಗ ಬೆಳೆಯಬಲ್ಲದು. ಬಿತ್ತನೆಯದ ಬಳಿಕ ನಾಲ್ಕಾರು ಸಲ ಅಲ್ಪ ಪ್ರಮಣದ ಮಳೆಯದರೂ ಸಾಕು. ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಬರಗ, ಎಕರೆಗೆ ಎಂಟರಿಂದ ಹತ್ತು ಚೀಲ ಇಳುವರಿ ಕೊಡುತ್ತದೆ.
“ಮುಂಜಾನಿ ಊಟಕ್ಕ ನಮ್ಗ ಬರಗ ಬೇಕು. ರೇಷನ್ ಅಕ್ಕಿ ಊಟ ಮಡಿದ್ರ ಎರ್ಡ ತಾಸಿಗೆ ಹಸಿವಿ ಆದ್ರ, ಬರಗದ ಅನ್ನ ಉಂಡ್ರ ಐದಾರು ತಾಸು ಕೆಲ್ಸ ಮಡ್ತೀವ್ರಿ” ಎಂದು ಹೇಳುವ ಹನುಮಮ್ಮ ಬರಗದ ಅನ್ನಕ್ಕೆ ಮೊಸರು ಹಾಗೂ ಕಾರದ ಪುಡಿ ಇದ್ದರೆ ಬೇರೇನೂ
ಬೇಡ. ಅದರ ರುಚಿಯೇ ವಿಶಿಷ್ಟ ಎಂದು ಬಣ್ಣಿಸುತ್ತಾರೆ.
ಹರಡಿದ ಬೀಜದ ಐಶಿರಿ:
ಇಲ್ಲಿಂದ ಬೀಜ ಪಡೆದವರ ಪೈಕಿ ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿಯ ನಾರಾಯಣರಾವ್ ಕುಲಕರ್ಣಿ ಎಂಬ ರೈತರು ತಮ್ಮ ವ್ಯವಸಾಯಕ್ಕೆ ನಿರುಪಯುಕ್ತ ಎಂದು ಹಲವು ವರ್ಷಗಳಿಂದ ಖಾಲಿಯಾಗಿಯೇ ಬಿಟ್ಟಿದ್ದ ಒಂದು ಎಕರೆ ಚವಳು ಭೂಮಿಯಲ್ಲಿ ಬರಗ ಬಿತ್ತನೆ ಮಾಡಿದ್ದರು. “ಆರಂಭದಲ್ಲಿ ಸ್ವಲ್ಪ ಮಳೆ ಬಂತು. ನಂತರ ತೀರಾ ಕಡಿಮೆ ಸುರಿಯಿತು. ಆದರೆ ನಮಗೆ ಅಚ್ಚರಿಯಗುವಂತೆ ಬರಗದ ಪೈರು ಅತ್ಯುತ್ತಮ ಎಂಬಂತೆ ಬೆಳೆದು ನಿಂತಿತು, ಕಾಳುಗಳಂತೂ ನೋಡಲು ಚೆಂದ!” ಎಂದು ಅವರು ಬರಗದ ಪರಿ ಬಣ್ಣಿಸುತ್ತಾರೆ. ಮೇಲುಗೊಬ್ಬರ ಹಾಕಿಲ್ಲ; ಒಂದಿಷ್ಟೂ ಕೀಟ ಬಾಧೆ, ರೋಗ ಬಂದಿಲ್ಲ ಎಂಬುದು ಇದರ ಮತ್ತೊಂದು ವಿಶೇಷ.
ಹೊಸ ತಲೆಮರಿನ ರೈತರು ಇದರ ಬಗ್ಗೆ ಕುತೂಹಲ ತಾಳಿದ್ದರೆ, ಹಳೆಯ ರೈತರಿಗೆ ಬರಗದ ನೆನಪು ಕಣ್ಮುಂದೆ ಬರುತ್ತಿವೆ. “ಭಾಳ ದಿನ್ದ ಹಿಂದ ಹಾಕ್ತಿದ್ವಿ. ಮನೀಗೆ ಎಷ್ಟ್ ಬೇಕೋ ಅಷ್ಟು ಬೆಳ್ಕೋತಿದ್ವಿ. ಆಮೇಲೆ ಮರ್ತೇ ಹೋಗಿತ್ತು. ನಿಮ್ ಹೊಲ್ದಾಗ ಬರಗ ನೋಡಿ, ಮತ್
ಬೆಳೆಯೋ ಹಂಗಾಗ್ಯಾದ” ಎಂದು ಬರಗದ ಬೆಳೆ ನೋಡಲೆಂದು ಬಂದಿದ್ದ ರಾಮಣ್ಣ ಜಗ್ಗಲ ಎಂಬ ರೈತ ಆಸೆ ವ್ಯಕ್ತಪಡಿಸುತ್ತಿದ್ದರು.
Leave A Comment