“ನಾವು ಭರತಖಂಡದ ಪ್ರಜೆಗಳು ಮಾತ್ರವೇ ಅಲ್ಲ, ಇಡೀ ಭೂಭಾಗದ ಪ್ರಜೆಗಳು. ಹೀಗಿರುವಾಗ ಪಾಶ್ಚಾತ್ಯ ದೇಶಗಳಲ್ಲಿ ಶಾಖೋಪಶಾಖೆಗಳಾಗಿ ಹಬ್ಬಿರುವ ವಿಜ್ಞಾನದ ಕಡೆಗೆ ನಾವು ಲಕ್ಷ್ಯ ಕೊಡದಿದ್ದರೆ ನಮಗೆ ಉಳಿಗಾಲವೆಲ್ಲಿಯದು?”

ಸುಮಾರು ನಲವತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ ಅಧ್ಯಕ್ಷ ಸ್ಥಾನದಿಂದ ಈ ಮಾತುಗಳನ್ನು ಆಡಿದವರು ಬೆಳ್ಳಾವೆ ವೆಂಕಟನಾರಣಪ್ಪನವರು.

ಕನ್ನಡದಲ್ಲಿ ಮಾತನಾಡುವುದೂ ಅವಮಾನ ಎಂದು ಭಾವಿಸುತ್ತಿದ್ದ ಕಾಲದಲ್ಲಿ ವೆಂಕಟನಾರಣಪ್ಪನವರು ಕನ್ನಡದಲ್ಲಿ ವೈಜ್ಞಾನಿಕ ಪುಸ್ತಕಗಳನ್ನು ಬರೆದರು. ಕನ್ನಡಕ್ಕಾಗಿ ಕನ್ನಡ ಭಾಷೆಗಾಗಿ ದೇಹ ಸವೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದರು.

ಬಾಲ್ಯವಿದ್ಯಾಭ್ಯಾಸ

ಬೆಳ್ಳಾವೆ ತುಮಕೂರು ಜಿಲ್ಲೆಯಲ್ಲಿರುವ ಒಂದುಗ್ರಾಮ. ವೆಂಕಟನಾರಣಪ್ಪನವರು ಜನಿಸಿದ್ದು ಈ ಗ್ರಾಮದಲ್ಲಿ (ಫೆಬ್ರವರಿ ೧೮೭೨). ಇವರ ತಂದೆ ವೆಂಕಟಕೃಷ್ಣಯ್ಯ. ಇವರು ಅಂಚೆ ಇಲಾಖೆಯಲ್ಲಿ ಕೆಲಸದ್ಲಲಿದ್ದರು. ತಾಯಿ ಲಕ್ಷ್ಮೀದೇವಮ್ಮ. ಈಕೆಗೆ ಸಾಹಿತ್ಯದಲ್ಲಿ ಆಸಕ್ತಿ. ತೆಲುಗು ರಾಮಾಯಣವನ್ನು ಕಂಠಪಾಠ ಮಾಡಿದ್ದರು. ವೆಂಕಟನಾರಣಪ್ಪನವರ ತಂದೆಯವರು ಶಿಸ್ತಿನ ಜೀವನವನ್ನು ನಡೆಸಿದವರು. ತಂದೆಯ ಶಿಸ್ತಿನ ಜೀವನ, ತಾಯಿಯ ಸಾಹಿತ್ಯಾಸಕ್ತಿ ವೆಂಕಟನಾರಣಪ್ಪನವರ ಮೇಲೆ ಪ್ರಭಾವ ಬೀರಿದವು.

ಬಾಲಕ ವೆಂಕಟನಾರಣಪ್ಪನ ಹೈಸ್ಕೂಲು ವಿದ್ಯಾಭ್ಯಾಸ ತುಮಕೂರಿನಲ್ಲಿ ನಡೆಯಿತು. ಚುರುಕು ಬಿದ್ದಿಯ ಹುಡುಗ ಪ್ರತಿ ತರಗತಿಯಲ್ಲೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ. ಮುಂದೆ ಓದಬೇಕೆಂಬ ಆಸೆ ವೆಂಕಟನಾರಣಪ್ಪನಿಗೆ. ತಂದೆಗೂ ಅದೇ ಆಸೆ. ಆದರೆ ಮಗನ ವ್ಯಾಸಂಗಕ್ಕೆ ಆಗುವ ಖರ್ಚನ್ನು ತಡೆಯುವ ಶಕ್ತಿ ತಂದೆಗೆ ಇರಲಿಲ್ಲ. ಬರುತ್ತಿದ್ದ ಸಂಬಳ ಕೇವಲ ಎಂಟು ರೂಪಾಯಿಗಳು! ದೇವರು ನಡೆಸಿದಂತಾಗಲಿ ಎಂದು ಮಗನನ್ನು ಬೆಂಗಳೂರಿಗೆ ಕರೆದೊಯ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವೆಂಕಟನಾರಣಪ್ಪನವರಿಗೆ ಪ್ರವೇಶ ದೊರೆಯಿತು. ಭೌತಶಾಸ್ತ್ರವನ್ನು ವ್ಯಾಸಂಗದ ವಿಷಯವನ್ನಾಗಿ ಇವರು ಆರಿಸಿಕೊಂಡರು.

ಆಗ ಸೆಂಟ್ರಲ್ ಕಾಲೇಜಿನಲ್ಲಿ ಮುಖ್ಯಸ್ಥರಾಗಿದ್ದವರು ಜಾನ್ ಕುಕ್. ಇವರು ಇಂಗ್ಲೆಂಡಿನಿಂದ ಬಂದವರು. ಬಹಳ ಶಿಸ್ತಿನ ಸ್ವಭಾವದವರು. ಆದರೆ ಬುದ್ಧಿವಂತ ವಿದ್ಯಾರ್ಥಿಯೆಂದರೆ ಇವರಿಗೆ ವಿಶೇಷ ಪ್ರೀತಿ. ವೆಂಕಟನಾರಣಪ್ಪನವರು ಬಹು ಬೇಗ ಕುಕ್‌ರವರ ಮೆಚ್ಚಿನ ಶಿಷ್ಯರಾದರು. ತಂದೆಯ ಪ್ರಭಾವದಿಂದಲೇ ಕಟ್ಟುನಿಟ್ಟಾದ ಜೀವನ ರೀತಿಯನ್ನು ಕಲಿತಿದ್ದ ವೆಂಕಟನಾರಾಣಪ್ಪನವರು ಗುರುವಿನ ಪ್ರಭಾವದಿಂದ ಇನ್ನೂ ಶಿಸ್ತಿನ ಮನುಷ್ಯರಾದರು.

ವೆಂಕಟನಾರಣಪ್ಪನವರು ಕಾಲಕ್ಕೆ ಬಹಳ ಮಹತ್ವ ಕೊಡುತ್ತಿದ್ದರು. ಅವರು ಪ್ರತಿನಿತ್ಯವೂ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದರು. ತರಗತಿಗಳು ಪ್ರಾರಂಭವಾಗುವ ವೇಳೆಗೆ ಕಾಲೇಜನ್ನು ತಲುಪುತ್ತಿದ್ದರು.

ಅಧ್ಯಾಪಕರು

ವೆಂಕಟನಾರಣಪ್ಪನವರು ಬಿ.ಎ. ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದರು. ಸೆಂಟ್ರಲ್ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ನೇಮಕವಾದರು. ಆಗ ಅವರಿಗೆ ಕೇವಲ ಹತ್ತೊಂಬತ್ತು ವರ್ಷ ವಯಸ್ಸು.

ವೆಂಕಟನಾರಣಪ್ಪನವರ ಉಡುಪು ಸರಳವಾದದ್ದು. ತಲೆಯಮೇಲೆ ನೆರಿಗೆಯಿದ್ದ ಪೇಟ, ಶುಭ್ರವಾದ ಬಿಳಿಯ ಕೋಟು, ಸಣ್ಣ ಸರಿಗೆಯಂಚಿನ ಚೆನ್ನಾಗಿ ಮಡಿಸಿ ಇಸ್ತ್ರಿ ಮಾಡಿದ ಉತ್ತರೀಯ, ಶುಭ್ರವಾದ ಕಚ್ಚೆಪಂಚೆ, ಕೈಯಲ್ಲೊಂದು ಬೆತ್ತ. ಅವರ ಕೋಟಿನ ಜೇಬಿನಲ್ಲಿ ಯಾವಾಗಲೂ ಸಣ್ಣ ಗಡಿಯಾರವೊಂದು ಇರುತ್ತಿತ್ತು.

ವೆಂಕಟನಾರಣಪ್ಪನವರು ಸ್ವಾವಲಂಬಿಗಳು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಬಯಸುತ್ತಿದ್ದರು.

ವೆಂಕಟನಾರಣಪ್ಪನವರು ಸಾಮಾನ್ಯವಾಗಿ ಯಾರನ್ನೂ ಹೊಡೆಯುತ್ತಿರಲಿಲ್ಲ. ಬಾಯಿಮಾತಿನಲ್ಲಿ ಒರಟುತನವನ್ನು ತೋರಿಸಿದರೂ ಅವರ ಮನಸ್ಸು ಅತ್ಯಂತ ಮೃದು, ಕೋಮಲ.

ಎಂತಹ ಮೃದು ಮನಸ್ಸು!

ಒಮ್ಮೆ ತರಗತಿಯಲ್ಲಿ ಅವರು ಪಾಠ ಹೇಳುತ್ತಿದ್ದರು. ಹಿಂದಿನ ಬೆಂಚಿನಲ್ಲಿದ್ದ ವಿದ್ಯಾರ್ಥಿಯೊಬ್ಬ ಪಕ್ಕದ ವಿದ್ಯಾರ್ಥಿಯೊಡನೆ ಪಿಸುಗುಟ್ಟುತ್ತ ಮಾತನಾಡುತ್ತಿದ್ದುದು ಕಂಡಿತು. ವೆಂಕಟನಾರಣಪ್ಪನವರು ಸ್ವಲ್ಪ ಹೊತ್ತು ಸುಮ್ಮನಿದ್ದರು. ವಿದ್ಯಾರ್ಥಿಯು ಚೇಷ್ಟೆ ಕಡಿಮೆ ಮಾಡಲಿಲ್ಲ. ವಿದ್ಯಾರ್ಥಿಯನ್ನು ಕರೆದು,

“ಕಪ್ಪು ಹಲಗೆಯ ಮೇಲಿರುವ ಈ ಲೆಕ್ಕವನ್ನು ಪೂರ್ತಿ ಮಾಡು” ಎಂದರು. ವಿದ್ಯಾರ್ಥಿಯು ತಬ್ಬಿಬ್ಬಾದ. ತನ್ನ ಚೇಷ್ಟೆಯನ್ನು ವೆಂಕಟನಾರಣಪ್ಪನವರು ಗಮನಿಸದ್ದಾರೆಂದು ತಿಳಿದು ಹೆದರಿದ. ಅವನು ಪಾಠಕ್ಕೆ ಗಮನ ಕೊಟ್ಟಿರಲಿಲ್ಲ.

ವೆಂಕಟನಾರಣಪ್ಪನವರಿಗೆ ಕೋಪ ಬಂದಿತು. ಕೈಯಲ್ಲಿದ್ದ ಧೂಳು ಒರೆಸುವ ಬಟ್ಟೆಯನ್ನು ವಿದ್ಯಾರ್ಥಿಯತ್ತ ಬೀಸಿದರು. ಬಟ್ಟೆಯಲ್ಲಿದ್ದ ಧೂಳು ವಿದ್ಯಾರ್ಥಿಯ ಕಣ್ಣಿಗೆ ಬಿತ್ತು. ವಿದ್ಯಾರ್ಥಿಯ ಕಣ್ಣಿನಲ್ಲಿ ನೀರು ಬಂದಿತು. ಹೆದರಿಕೆಯಿಂದ ವಿದ್ಯಾರ್ಥಿಯು ಅಳಲು ಪ್ರಾರಂಭಿಸಿದ. ಏನೋ ಮಾಡಲು ಹೋಗಿ ಮತ್ತೇನೋ ಆಯಿತೆಂದು ವೆಂಕಟನಾರಣಪ್ಪನವರಿಗೆ ಕಳವಳವಾಯಿತು. ತರಗತಿಯಲ್ಲಿ ಪಾಠ ಮುಂದುವರಿಯಿತು. ತರಗತಿ ಮುಗಿದು ವೆಂಕಟನಾರಣಪ್ಪನವರು ಮನೆಗೆ ಹೋದರು. ಮನೆಯಲ್ಲಿ ಕೆಲಸ ಮಾಡಲು ಪ್ರಯತ್ನಿಸಿದರು. ಏನು ಮಾಡಿದರೂ ಶಿಷ್ಯನ ಅಳುಮುಖವನ್ನು ಮರೆಯಲು ಆಗಲಿಲ್ಲ. ಅವನನ್ನು ಸಂತೈಸಬೇಕೆಂದು ಅನ್ನಿಸಿತು.

ಕೂಡಲೇ ಪೇಟೆಗೆ ಹೋಗಿ ದ್ರಾಕ್ಷಿ, ಕಲ್ಲುಸಕ್ಕರೆ, ಬಾಳೆ ಹಣ್ಣನ್ನು ಕೊಂಡು ಶಿಷ್ಯನ ಮನೆಯತ್ತ ನಡೆದರು. ದೂರದಲ್ಲಿ ವೆಂಕಟನಾರಣಪ್ಪನವರು ತಮ್ಮ ಮನೆಯತ್ತ ಬರುತ್ತಿರುವುದನ್ನು ಕಂಡು ವಿದ್ಯಾರ್ಥಿಗೆ ಮತ್ತಷ್ಟು ಹೆದರಿಕೆಯಾಯಿತು. ತಾನು ಮಾಡಿದ ಕೆಲಸವನ್ನು ಮನೆಯಲ್ಲಿ ಹೇಳಿ ತನ್ನನ್ನು ಶಿಕ್ಷಿಸಲು ಉಪಾಧ್ಯಾಯರು ಬರುತ್ತಿದ್ದಾರೆಂದೇ ಅವನು ಭಾವಿಸಿ.

ಶಿಷ್ಯನನ್ನು ಕಾಣಲು ಬಂದ ವೆಂಕಟನಾರಣಪ್ಪನವರಿಗೆ ಸ್ವಾಗತ ದೊರಕಿದ್ದು ಹುಡುಗನ ತಂದೆಯಿಂದ. ವೆಂಕಟನಾರಣಪ್ಪನವರು ತಾವು ತಂದ ಹಣ್ಣು, ಕಲ್ಲುಸಕ್ಕರೆಗಳನ್ನು ಹೊರಕ್ಕೆ ತೆಗೆಯುತ್ತಲೇ ಹುಡುಗನ ತಂದೆ ನಕ್ಕು ಹೇಳಿದರು: “ವೆಂಕಟನಾರಣಪ್ಪಾ, ಇನ್ನೂ ನಾಲ್ಕು ಚೆನ್ನಾಗಿ ಬಿಗಿಯಬೇಕಿತ್ತು ಹುಡುಗ ಬುದ್ಧಿಯವನಿಗೆ. ಅದು ಬಿಟ್ಟು ಫಲಾಹಾರಕ್ಕಾಗಿ ದ್ರಾಕ್ಷಿ, ಕಲ್ಲುಸಕ್ಕರೆ ಬೇರೆ ತಂದೀದ್ದೀರಿ”. ಹೀಗೆಂದು ತಾವೇ ಬಾಳೆ ಹಣ್ಣು, ದ್ರಾಕ್ಷಿಯನ್ನು ತಿನ್ನಲಾರಂಭಿಸಿದರು.

ವೆಂಕಟನಾರಣಪ್ಪನವರು ಅಧ್ಯಾಪಕರಾದ ಮೇಲೂ ತಾವು ಮೊದಲು ಪಾಠವನ್ನು ಚೆನ್ನಾಗಿ ಓದಿ ಮನನ ಮಾಡಿಕೊಂಡು ಅನಂತರ ಪಾಠ ಹೇಳುತ್ತಿದ್ದರು. ಸೀನಿಯರ್ ಪ್ರೋಫೆಸರ್‌ ಆಗ ಮೇಲೆಯೂ ಅವರು ತಮ್ಮ ಪದ್ಧತಿಯನ್ನು ಬಿಡಲಿಲ್ಲ.

ಇನ್ನೂ ಓದಬೇಕೆ!

ಒಮ್ಮೆ ಅವರ ಸ್ನೇಹಿತರೊಬ್ಬರು ಕೇಳಿದರು-

“ಏನು ಸ್ವಾಮಿ, ಅಧ್ಯಾಪಕರಾದ ಮೇಲೆಯೂ ಓದುವುದನ್ನು ನಿಲ್ಲಿಸಲಿಲ್ಲವಲ್ಲಾ? ನೀವು ಇಷ್ಟು ದೊಡ್ಡ ವಿದ್ವಾಂಸರು. ವಿದ್ಯಾರ್ಥಿಯಂತೆ ನೀವೂ ಓದಬೇಕೇನು?”

ವೆಂಕಟನಾರಣಪ್ಪನವರು ಹೇಳಿದರು “ನಮ್ಮ ತರಗತಿಯಲ್ಲಿಮಹಾ ಬುದ್ಧಿವಂತರಿದ್ದಾರಪ್ಪ, ಸೂಕ್ಷ್ಮವಾದ ಪ್ರಶ್ನೆಗಳನ್ನು ಕೇಳಿಬಿಡುತ್ತಾರೆ. ತಯಾರಿಯಾಗಿಲ್ಲವೆಂದು ತಿಳಿದರೆ ಅವರ ದೃಷ್ಟಿಯಲ್ಲಿ, ನಮ್ಮ ದೃಷ್ಟಿಯಲ್ಲಿ ನಾವೇ ಸಣ್ಣವರಾಗಿಬಿಡುತ್ತೇವೆ. ನಮ್ಮ ಪಾಠದ ವಿಷಯ ನಾವು ಮೊದಲೇ ಅಭ್ಯಾಸ ಮಾಡದೆ ಹೋದರೆ ನಾವು ಕರ್ತವ್ಯಲೋಪ ಮಾಡಿದಂತಾಗುತ್ತದೆ.”

ಹೀಗಿತ್ತು ವೆಂಕಟನಾರಣಪ್ಪನವರ ಕರ್ತವ್ಯ ಪಾರಾಯಣತೆ.

ಅಧ್ಯಾಪಕರಾಗಿಯೇ ವೆಂಕಟನಾರಣಪ್ಪನವರು ಎಂ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ವಿಜ್ಞಾನದ ರೀತಿ

ವೆಂಕಟನಾರಣಪ್ಪನವರು ಭೌತಶಾಸ್ತ್ರದ ಅಧ್ಯಾಪಕರು. ಅವರು “ವಿಜ್ಞಾನದಲ್ಲಿ ತರ್ಕಕ್ಕೆ ಹೆಚ್ಚಿನ ಸ್ಥಾನವಿರಬೇಖು. ಇದು ಏಕೆ? ಅದು ಹೇಗೆ? ಇದು ಏನು? ಅದಕ್ಕೂ ಇದಕ್ಕೂ ಸಂಬಂಧವೇನು? ಹೀಗೆ ತರ್ಕ ಮಾಡಬೇಕು” ಎನ್ನುತ್ತಿದ್ದರು. “ಪದಾರ್ಥಗಳನ್ನು ಒಂದಕ್ಕೊಂದಕ್ಕೆ ಹೋಲಿಸಿ ನೋಡಿ ಸಾದೃಶ್ಯದಿಂದ ಊಹಿಸಬೇಕು. ಈ ಶಕ್ತಿ ಇದ್ದರೆ ವಿಜ್ಞಾನ ಬೆಳೆಯುತ್ತದೆ. ಬೇರೆ ಬೇರೆ ಪದಾರ್ಥಗಳಿಗೆ ಇರುವ ಸಾದೃಶ್ಯ, ಅಸಾದೃಶ್ಯಗಳನ್ನು ಗಮನಿಸಬೇಕು. ಅನಂತರ ಪರಿಣಾಮ ಏನು, ಅದರ ಕಾರಣ ಏನು ಎಂದು ಕಾರ್ಯ ಕಾರಣ ವಿಚಾರ ಮಾಡಬೇಕು” ಎನ್ನುತ್ತಿದ್ದರು.

ವಿಜ್ಞಾನ ಪ್ರಚಾರವು ಅತ್ಯಂತ ಅವಶ್ಯಕ ಎಂದು ಭಾವಿಸಿದ್ದವರು ವೆಂಕಟನಾರಣಪ್ಪನವರು. ವಿಜ್ಞಾನದ ವಿಷಯವನ್ನು ಸರಳವಾಗಿ, ಆದರೆ ಖಚಿತವಾಗಿ, ವಿದ್ಯಾರ್ಥಿಗಳ ಮನಮುಟ್ಟುವ ರೀತಿಯಲ್ಲಿ ಪಾಠ ಹೇಳುತ್ತಿದ್ದರು.

ಜೀವನದಲ್ಲಿ ವಿದ್ಯಾರ್ಥಿಯಾಗಿರುವ ಕಾಲ ಮುಖ್ಯವಾದದ್ದು. ಆಗ ತಾನೇ ವ್ಯಕ್ತಿಯ ಮನಸ್ಸು ಅರಳುತ್ತಿರುತ್ತದೆ. ಅವನನ್ನು ಸರಿಯಾದ ಮಾರ್ಗದಲ್ಲಿ ಕೊಂಡೋಯ್ದು ಒಳ್ಳೆಯ ಪ್ರಜೆಯನ್ನಾಗಿ ರೂಪಿಸುವ ಹೊಣೆ ಉಪಾಧ್ಯಾಯನದಾಗಿರುತ್ತದೆ. ಇಂತಹ ಸಮಯದಲ್ಲಿ ಉಪಾಧ್ಯಾಯನು ಜಾಗರೂಕನಾಗಿರಬೇಕಾಗುತ್ತದೆ. ಕರ್ತವ್ಯಲೋಪ ಮಾಡಬಾರದು-ಹೀಗೆ ಭಾವಿಸಿದ್ದರು ವೆಂಕಟನಾರಣಪ್ಪ.

ಕೆಲವು ಅನುಭವಗಳು

ಇಂತಹವರ ಹೆಸರನ್ನು ಕೆಡಿಸುವ ಪ್ರಯತ್ನಗಳೂ ನಡೆದವು.

ಆಗ ನಡೆದ ಘಟನೆ ಇದು.- ವೆಂಕಟನಾರಣಪ್ಪನವರು ತರಗತಿಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಅವರ ಸಹ ಅಧ್ಯಾಪಕರೊಬ್ಬರು ಕಿಟಕಿಯ ಬಳಿ ನಿಂತು ವೆಂಕಟನಾರಣಪ್ಪನವರು ಪಾಠ ಮಾಡುವುದನ್ನು ಹೊಂಚು ಹಾಕಿ ಕೇಳುತ್ತಿದ್ದರು. “ಎಲ್ಲಿಯಾದರೂ ತಪ್ಪಿ ಸಿಕ್ಕೀತೆ ಎಂದು ಹೊಂಚಿ ಕೇಳುವುದು.” ಒಂದು ಮಾತೇನಾದರೂ ಹೆಚ್ಚು-ಕಡಿಮೆಯಾದರೆ ಅದನ್ನು ಪ್ರಿನ್ಸಿಪಾಲ್ ಕುಕ್‌ರವರಿಗೆ ಚಾಡಿ ಹೇಳುವುದು. ಆಗ ವೆಂಕಟನಾರಣಪ್ಪನವರಿಗೆ ಬಡ್ತಿ ಆಗುವುದು ತಪ್ಪುತ್ತದೆ. ಅವರ ಹೆಸರೂ ಕೆಡುತ್ತದೆ”- ಇದು ಅಧ್ಯಾಪಕರ ಉಪಾಯವಾಗಿತ್ತು.

ವರಾಂಡದಲ್ಲಿ ಹೊಂಚಿ ಕೇಳುತ್ತಾ ನಿಂತಿದ್ದಾಗ ಅವರನ್ನು ನೋಡಿದವರು ಯಾರೋ ಕುಕ್‌ರವರಿಗೆ ಈ ವಿಷಯವನ್ನು ತಿಳಿಸಿದರು. ವಿಷಯದ ಸತ್ಯತೆಯನ್ನು ಅರಿಯಲು ಒಂದು ದಿನ ಕುಕ್‌ರವರೇ ಅಲ್ಲಿಗೆ ಬಂದು ಬಿಟ್ಟರು. ಹೊಂಚಿ ಕೇಳುತ್ತಿದ್ದವರನ್ನು ಕೇಳಿದರು, “ನಿಮಗೆ ವೆಂಕಟನಾರಣಪ್ಪನವರ ಪಾಠವನ್ನು ಕೇಳಲು ಅಷ್ಟೊಂದು ಇಷ್ಟವಿದ್ದರೆ ಒಳಗೆ ಹೋಗಿ ಕುಳಿತು ಕೇಳಬಹುದಲ್ಲ?”

ಆ ಪಿತೂರಿ ಅಲ್ಲಿಗೆ ಮುಗಿಯಿತು.

ವೆಂಕಟನಾರಣಪ್ಪನವರ ಮಾತು ನಿಷ್ಠುರ; ಆದರೆ ಅವರ ಹೃದಯ ಮೃದು. ಒಮ್ಮೆ ಸೆನೆಟ್ ಸಭೆ ಸೇರಿತ್ತು. ಆಗ ವಿದ್ಯಾರ್ಥಿಗಳ ಹಾಜರಿ-ಗೈರು ಹಾಜರಿಗಳನ್ನು ಗುರುತು ಮಾಡುವುದೇ ಬೇಡವೇ ಎಂಬ ವಿಷಯ ಚರ್ಚೆಗೆ ಬಂತು. ಹಾಜರಿ-ಗೈರು ಹಾಜರಿಗಳನ್ನು ಗುರುತು ಮಾಡುವುದು ಬೇಡ ಎಂದು ಹಲವರು ಯೂರೋಪಿಯನ್ ವಿದ್ವಾಂಸರು ಹೇಳಿದರು. ವೆಂಕಟನಾರಣಪ್ಪನವರು ಇದನ್ನು ಒಪ್ಪಲಿಲ್ಲ. ಈ ಸೂಚನೆಯನ್ನು ಸಮರ್ಥಿಸಿದವರು ಹೇಳಿದರು, “ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿ ತಿಳಿದಿರುತ್ತದೆ. ಅವರು ಓದುವರೋ ಇಲ್ಲವೋ ಎಂದು ತನಿಖೆ ಏಕೆ ಮಾಡಬೇಕು?”

ವೆಂಕಟನಾರಣಪ್ಪ: ತನಿಖೆಯಿಲ್ಲದಿದ್ದರೆ ಕೆಡುವವರು ನಮ್ಮ ಹುಡುಗರು. ಅವರು ಕೆಟ್ಟರೆ ನಷ್ಟವಾಗುವುದು ನಮಗೇ!

ವೆಂಕಟನಾರಣಪ್ಪನವರ ಮಾತು ಕಟುವಾಗಿತ್ತು ನಿಜ. ಆದರೆ ಅದರಲ್ಲಿ ಸತ್ಯವಿಲ್ಲದೆ ಇರಲಿಲ್ಲ.

ವೆಂಕಟನಾರಣಪ್ಪನವರು ಎಷ್ಟೇ ಪ್ರಾಮಾಣಿಕ ವ್ಯಕ್ತಿಯಾಗಿದ್ದರೂ ಅವರಿಗೆ ಬೇಸರವಾಗುವ ಘಟನೆ ನಡೆಯಿತು. ಅವರ ಕೈಕೆಳಗಿದ್ದವರೊಬ್ಬರಿಗೆ ಮೇಲಿನ ಹುದ್ದೆಯನ್ನು ನೀಡಲಾಯಿತು. ಇದರಿಂದ ನೊಂದ ವೆಂಕಟನಾರಣಪ್ಪನವರು ತಮಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಸರ್ಕಾರಕ್ಕೆ ಬರೆದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿ ವೆಂಕಟನಾರಣಪ್ಪನವರು ಕೆಲಸಕ್ಕೆ ರಾಜೀನಾಮೆಯನ್ನು ನೀಡಿದರು. ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ರವರು ವೆಂಕಟನಾರಣಪ್ಪನವರ ಶಿಷ್ಯರು. ಇವರು ವೆಂಕಟನಾರಣಪ್ಪನವರಿಗೆ ಬೇರೆ ಹುದ್ದೆಯನ್ನು ದೊರಕಿಸಲು ಮುಂದಾದರು. ಅದನ್ನು ಕೇಳಿದಾಗ ವೆಂಕಟನಾರಣಪ್ಪನವರು, “ಸಾಕಪ್ಪಾ ಸಾಕು, ಇಲ್ಲಿಯ ಕಿರುಕುಳವನ್ನು ಅನುಭವಿಸಿದ್ದೇ ಸಾಕಾಗಿದೆ. ಇನ್ನು ಯಾವ ಕೆಲಸವೂ ಬೇಡ. ನನ್ನ ಪಾಡಿಗೆ ನಾನು ಹಾಯಾಗಿರಲು ಬಿಟ್ಟುಬಿಡಿ” ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿಗಾಗಿ

ವೆಂಕಟನಾರಣಪ್ಪನವರು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದವರು. ಆದರೆ ಅವರಿಗಿದ್ದ ಕನ್ನಡದ ಮೇಲಿನ ಅಭಿಮಾನ ಅಪಾರ. ತಾವು ಬದುಕಿರುವವರೆಗೂ ಕನ್ನಡಕ್ಕಾಗಿ, ಕನ್ನಡದ ಜನತೆಗಾಗಿ ಸೇವೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂಬ ಸಂಸ್ಥೆ ಇದೆ. ಇದಕ್ಕಾಗಿ ಹಗಲಿರುಳೂ ದುಡಿದು ಅದರ ಬೆಳವಣಿಗೆಗೆ ಕಾರಣರಾದವು ವೆಂಕಟನಾರಣಪ್ಪನವರು. ಕನ್ನಡಕ್ಕಾಗಿ ಕೆಲಸ ಮಾಡುವುದು, ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವುದು, ಕನ್ನಡದ ಮೇಲಿನ ಅಭಿಮಾನವನ್ನು ಬೆಳೆಸುವುದು, ಅದಕ್ಕಾಗಿ ಕೆಲಸ ಮಾಡುವುದು-ಇವು ಈ ಸಂಸ್ಥೆಯ ಉದ್ದೇಶಗಳು.

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದದ್ದು ೧೯೧೫ ರಲ್ಲಿ. ಬೆಳ್ಳಾವೆ ವೆಂಕಟನಾರಣಪ್ಪನವರು ಸುಮಾರು ಇಪ್ಪತ್ತು ವರ್ಷಗಳ ಕಾಲ ಪರಿಷತ್ತಿನ ಸೇವೆಯನ್ನು ಮಾಡಿದರು. ೧೯೨೧ ರಿಂದ ೧೯೨೬ರ ವರೆಗೆ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದರು. ೧೯೨೬ ರಿಂದ ೧೯೩೪ರ ವರೆಗೆ ಗೌರವ ಕೋಶಾಧಿಕಾರಿಗಳಾಗಿದ್ದರು. ಇಷ್ಟು ದೀರ್ಘಕಾಲ ಕೆಲಸ ಮಾಡಿದರೂ ಅವರು ಯಾವ ಪ್ರತಿಫಲವನ್ನೂ ಬಯಸಲಿಲ್ಲ. ಪ್ರತಿಫಲವಿಲ್ಲ ಎಂದು ಕೆಲಸವನ್ನೂ ಕೀಳಾಗಿ ಕಂಡವರಲ್ಲ.

ವೆಂಕಟನಾರಣಪ್ಪನವರು ಪ್ರತಿನಿತ್ಯ ಬೆಳಿಗ್ಗೆ ಏಳು-ಏಳೂವರೆ ಗಂಟೆಯ ಸುಮಾರಿಗೆ ನಡೆದುಕೊಂಡೇ ಪರಿಷತ್ತಿಗೆ ಹೋಗುತ್ತಿದ್ದರು. ಇವರನ್ನು ನಿತ್ಯ ರಸ್ತೆಯಲ್ಲಿ ನೋಡುತ್ತಿದ್ದ ಮಹನೀಯರೊಬ್ಬರು ಅವರನ್ನು ಕೇಳಿದರಂತೆ: “ಏನು ವೆಂಕಟನಾರಣಪ್ಪನವರೇ, ಪ್ರತಿದಿನ ಬೆಳಿಗ್ಗೆ ನಡೆದು ಹೋಗುತ್ತೀರಲ್ಲ, ಎಲ್ಲಿಗೆ?”

ವೆಂಕಟನಾರಣಪ್ಪ: ಪರಿಷತ್ತಿಗೆ.

ಆ ಮಹನೀಯರು ವೆಂಕಟನಾರಣಪ್ಪನವರಿಗೆ ಪರಿಷತ್ತಿನಲ್ಲಿ ದೊಡ್ಡ ಸಂಬಳ ಬರುತ್ತಿದೆಯೆಂದು ಭಾವಿಸಿದ್ದರು. ಅವರು ಕೇಳಿದರು, “ನಿಮಗೆ ಅಲ್ಲಿ ಎಷ್ಟು ಸಂಬಳ ಕೊಡುತ್ತಾರೆ?”

ವೆಂಕಟನಾರಣಪ್ಪನವರು ಸಂಬಳವೇನೂ ಇಲ್ಲ. ನನ್ನ ಸಂತೋಷಕ್ಕೋಸ್ಕರ ಕೆಲಸ ಮಾಡುತ್ತೇನೆ.

ಮಹನೀಯರು: ನಿಮಗೆ ಕಾಲೇಜಿನಲ್ಲಿ ಸಂಬಳ ಕೊಡುತ್ತಾರಲ್ಲಾ, ಹಾಗೆಯೇ ಇಲ್ಲಿ ಏನೂ ಕೊಡುವುದಿಲ್ಲವೇ?

ವೆಂಕಟನಾರಣಪ್ಪ: ಇಲ್ಲ ಸ್ವಾಮಿ, ಇದು ದೇಶಕ್ಕೆ ಸೇರಿದ ಸಂಸ್ಥೆ, ಇಲ್ಲಿ ಹಣವಿಲ್ಲ, ಇಲ್ಲಿ ಬೇಕಾಗಿರುವುದು ದೇಶಾಭಿಮಾನವೊಂದೇ.

ಮಹನೀಯರು: ಹಾಗಾದರೆ ಯಾರಾದರೂ ಬಿಟ್ಟಿಯಾಗಿ ದುಡಿಯುತ್ತಾರೆಯೇ? ಅದೆಂಥಾ ಪರಿಷತ್ತು! ಅಭಿಮಾನವಂತೆ ಅಭಿಮಾನ, ಎಂಥ ಒಣ ಅಭಿಮಾನ- ತರಕಾರಿ ಕೂಡ ಗಿಟ್ಟಲಾರದಂತಹ ಅಭಿಮಾನ!

ಮಹನೀಯರ ಕಣ್ಣಿನಲ್ಲಿ ವೆಂಕಟನಾರಣಪ್ಪನವರು ತುಂಬಾ ದಡ್ಡರೆಂದು ಕಂಡರು.

ವೆಂಕಟನಾರಣಪ್ಪನವರು ಯಾವ ಕೆಲಸದಲ್ಲಿಯೂ ಮೇಲು-ಕೀಳು ಎಂಬ ಭೇದವನ್ನು ಮಾಡುತ್ತಿರಲಿಲ್ಲ. ಪರಿಷತ್ತಿನ ಕೆಲಸದ ಹುಡುಗ ತಡವಾಗಿ ಬರುತ್ತಿದ್ದ. ವೆಂಕಟನಾರಣಪ್ಪನವರು ಬೆಳಿಗ್ಗೆ ಏಳು ಘಂಟೆಗೆ ಪರಿಷತ್ತಿಗೆ ಹೋಗುತ್ತಿದ್ದರಷ್ಟೆ. ಕಸಪೊರಕೆ ಎತ್ತಿಕೊಂಡು ತಾವೇ ಕಸವನ್ನು ಗುಡಿಸಿಬಿಡುತ್ತಿದ್ದರು!

ಪ್ರಾಚೀನ ಕೃತಿಗಳು ಈಗಿನವರ ಕೈಗೆ

ಪರಿಷತ್ತು ಕೈಗೊಂಡ ಕೆಲಸಗಳಲ್ಲಿ ಮುಖ್ಯವಾದುದು ಕನ್ನಡದಲ್ಲಿರುವ ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಮುದ್ರಿಸುವುದು. ಇದರಲ್ಲಿ ವೆಂಕಟನಾರಣಪ್ಪನವರ ಪಾತ್ರ ಅಸಾಧಾರಣ. ೧೯೩೦ ರಲ್ಲಿ “ಪಂಪ ಭಾರತ”ದ ಪರಿಷ್ಕರಣ ಕಾರ್ಯ ಆರಂಭವಾಯಿತು. ಮುದ್ರಿಸಲು ತಕ್ಕಷ್ಟು ಶುದ್ಧವಾದ ಓಲೆಯ ಪ್ರತಿಗಳು ಸಿಕ್ಕದೆ ಕೆಲವು ಪದಗಳೂ ವಾಕ್ಯಗಳೂ ಮೊದಲನೆಯ ಮುದ್ರಣದಲ್ಲಿ ಬಿಟ್ಟು ಹೋಗಿದ್ದವು. ಕೆಲವು ಕಡೆ ಗ್ರಂಥ ಅರ್ಥವಾಗದಷ್ಟು ಕಠಿಣವಾಗಿತ್ತು. ಈ ದೋಷಗಳನ್ನು ನಿವಾರಣೆ ಮಾಡಲು ಕೆಲಸ ವೆಂಕಟನಾರಣಪ್ಪನವರ ನೇತೃತ್ವದಲ್ಲಿ ನಡೆದಿತ್ತು.

ಇದಕ್ಕಾಗಿ ಪ್ರತಿ ರಾತ್ರಿ ಎಂಟರಿಂದ ಹನ್ನೊಂದು ಗಂಟೆಯವರೆಗೆ ಸಭೆ ಸೇರಿ ಕೆಲಸ ಮಾಡುವುದೆಂದು ಸಮಿತಿಯ ಸದಸ್ಯರು ನಿಶ್ಚಯಿಸಿದರು. ಕಟ್ಟುನಿಟ್ಟಾಗಿ ವೆಂಕಟನಾರಣಪ್ಪನವರು ನಡೆದುಕೊಂಡುದುದರಿಂದಲೇ “ಪಂಪ ಭಾರತ” ಹೊರಬರುವಂತಾಯಿತು. ಒಂದು ಕಷಣವೂ ವ್ಯರ್ಥವಾಗದಂತೆ ವೆಂಕಟನಾರಣಪ್ಪನವರು ದುಡಿದರು. ಸದಸ್ಯರಿಂದ ಕೆಲಸ ಮಾಡಿಸಿದರು.

“ಪಂಪ ಭಾರತ” ದ ಪರಿಷ್ಕರಣ ಕಾರ್ಯ ಮುಗಿದ ನಂತರ “ಪಂಪ ರಾಮಾಯಣ”, ಶಬ್ದಮಣಿದರ್ಪಣ, ಸೋಮೇಶ್ವರ ಶತಕ, ಕುಸುಮಾವಳಿ ಮೊದಲಾದ ಪ್ರಾಚೀನ ಕೃತಿಗಳ ಪರಿಷ್ಕರಣ ಕಾರ್ಯವೂ ನಡೆಯಿತು.

ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದು ಪರಿಷತ್ತಿನ ಮುಖ್ಯವಾದ ಕೆಲಸಗಳಲ್ಲೊಂದು. ಕನ್ನಡದಲ್ಲಿ ವಿಚಾರಗೋಷ್ಠಿಗಳನ್ನು ಏರ್ಪಡಿಸುವುದು, ಆ ಮೂಲಕ ಕನ್ನಡದಲ್ಲಿ ಆಗಿರುವ ಕೆಲಸಗಳನ್ನು ತಿಳಿಸುವುದು, ಕನ್ನಡ ಸಾಹಿತ್ಯ ನಡೆಯುತ್ತಿರುವ ದಾರಿ, ಮುಂದಿನ ಭವಿಷ್ಯವನ್ನು ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವುದು, ಇವುಗಳಿಗೆ ಸಮ್ಮೇಳನದಲ್ಲಿ ಅವಕಾಶ ಇರುತ್ತದೆ. ಕನ್ನಡದಲ್ಲಿ ವಿದ್ವಾಂಸರಾಗಿರುವವರು, ಕನ್ನಡಕ್ಕಾಗಿ ಸೇವೆ ಸಲ್ಲಿಸಿರುವವರನ್ನು ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಚುನಾಯಿಸುತ್ತಾರೆ. ಇಂತಹ ಅನೇಕ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ ಹೊಣೆ ಹೊತ್ತವರು ವೆಂಕಟನಾರಣಪ್ಪನವರು.

೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಜಮಖಂಡಿ ಬಿಜಾಪುರ ಜಿಲ್ಲೆಯಲ್ಲಿರುವ ಒಂದು ತಾಲೂಕು. ಈ ಸಮ್ಮೇಳನಕ್ಕೆ ಬೆಳ್ಳಾವೆ ವೆಂಕಟನಾರಣಪ್ಪನವರನ್ನು ಅಧ್ಯಕ್ಷರನ್ನಾಗಿ ಆರಿಸಿ ಕನ್ನಡ ನಾಡು ಅವರನ್ನು ಗೌರವಿಸಿತು. ಅವರ ಅಧ್ಯಕ್ಷ ಭಾಷಣ ಪುಟ್ಟದಾಗಿದ್ದರೂ ಕನ್ನಡಿಗರ ಮನಮುಟ್ಟುವಂತೆ ಇತ್ತು. ಹರಿದು ಹಂಚಿಹೋಗಿರುವ ಕನ್ನಡ ನಾಡು “ಕರ್ನಾಟಕ” ಆಗಬೇಕು ಎಂದು ಅವರು ಹೇಳಿದರು. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಪ್ರಾಮುಖ್ಯವನ್ನು ಎತ್ತಿ ಹಿಡಿದರು. ವಿಜ್ಞಾನವನ್ನು ಕಡೆಗಣಿಸಬಾರದು, ಹಾಗೆ ಮಾಡಿದರೆ ದೇಶಕ್ಕೆ ಉಳಿಗಾಲ ಇಲ್ಲ ಎಂದು ಎಚ್ಚರಿಸಿದರು.

 

ಬೆಳ್ಳಾವೆಯವರು, ಅವರ ಕೃತಿಗಳು. ಹಿನ್ನೆಲೆ: ಸೆಂಟ್ರಲ್ ಕಲೇಜು, ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಾಹಿತ್ಯ ಪರಿಷತ್ತು ೧೯೭೦ ರ ಡಿಸೆಂಬರ್ ನಲ್ಲಿ ಚಿನ್ನದ ಹಬ್ಬವನ್ನು ಆಚರಿಸಿತು. ಇದು ನಡೆದುದು ಬೆಂಗಳೂರಿನ ಕೋಟೆ ಪ್ರೌಢಶಾಲೆಯ ಆವರಣದಲ್ಲಿ. ಅದಕ್ಕಾಗಿ ರಚಿಸಿದ ವಿಶಾಲವಾದ ಮಂಡಪಕ್ಕೆ ಹೆಸರೇನು ಗೊತ್ತೆ? “ಬೆಳ್ಳಾವೆ ವೆಂಕಟನಾರಣಪ್ಪ ಮಂಟಪ”. ಪರಿಷತ್ತಿಗಾಗಿ ಹಗಲೂ ರಾತ್ರಿ ದುಡಿದು ದೇಹ ಸವೆಸಿದ ವೆಂಕಟನಾರಣಪ್ಪನವರಿಗೆ ಇದು ಸಲ್ಲಬೇಕಾದ ಗೌರವ.

ಸೆಂಟ್ರಲ್ ಕಾಲೇಜಿನಲ್ಲಿ ವೆಂಕಟನಾರಣಪ್ಪನವರು ಅಧ್ಯಾಪಕರಾಗಿದ್ದಾಗ ಅಲ್ಲಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು/ ಕನ್ನಡ ಭಾಷೆಗೆ ಪ್ರೋತ್ಸಾಹ ನೀಡುವುದೇ ಈ ಸಂಸ್ಥೆಯ ಮುಖ್ಯ ಗುರಿಯಾಗಿತ್ತು. ಭೌತಶಾಸ್ತ್ರದ ಅಧ್ಯಾಪಕರಾದ ವೆಂಕಟನಾರಣಪ್ಪನವರು ಕನ್ನಡದ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದುದು ಕನ್ನಡಿಗರಿಗೊಂಡು ಹೆಮ್ಮೆ.

ಕನ್ನಡದಲ್ಲಿ ವೈಜ್ಞಾನಿಕ ಬರಹ

ವೆಂಕಟನಾರಣಪ್ಪನವರು ಕನ್ನಡಕ್ಕೆ ಸೇವೆ ಸಲ್ಲಿಸುವುದಷ್ಟರಲ್ಲೇ ತೃಪ್ತರಾಗಲಿಲ್ಲ. ಅವರು ವಿಜ್ಞಾನದ ಪಾಠ ಹೇಳುತ್ತಿದ್ದವರು. ಅವರ ಮನೆಮಾತು ತೆಲುಗು. ವ್ಯಾಸಂಗ ನಡೆದದ್ದು ಇಂಗ್ಲೀಷಿನಲ್ಲಿ ಸೇವೆ ಸಲ್ಲಿಸಿದ್ದು ತಾವು ಬದುಕಿ ಬಾಳಿದ ಕನ್ನಡನಾಡಿನ ಕನ್ನಡ ಭಾಷೆಗೆ; ತಮಗೆ ಪ್ರಿಯವಾದ ವಿಜ್ಞಾನಕ್ಕೆ ಆಗಿನ ಕಾಲದಲ್ಲಿ ಶಾಲೆಗಳಲ್ಲಿ ವಿದ್ಯಾಭ್ಯಾಸವೂ ಇಂಗ್ಲಿಷಿನಲ್ಲಿಯೇ ಆಗುತ್ತಿತ್ತು. ಸರ್ಕಾರಿ ಕಛೇರಿಗಳಲ್ಲಿಯೂ ಇಂಗ್ಲಿಷ್ ವ್ಯವಹಾರ ಭಾಷೆ. ಕನ್ನಡದಲ್ಲಿ ಮಾತನಾಡುವುದು ಅವಮಾನ ಎಂದುಭಾವಿಸಿದ್ದ ಕಾಲ ಅದು. ವಿಜ್ಞಾನದ ವಿಷಯಗಳನ್ನು ಪ್ರತಿಪಾದಿಸಲು ಕನ್ನಡದಲ್ಲಿ ಸಾಧ್ಯವೇ ಇಲ್ಲ ಎಂದು ಜನತೆ ನಂಬಿದ್ದ ಕಾಲದಲ್ಲಿ, ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಸರಳವಾಗಿ ಹೇಳುವಂತಹ ಲೇಖನಗಳು ಪ್ರಕಟವಾಗಬೇಕು ಎಂಬ ಆಸೆ ಹೊತ್ತವರು ವೆಂಕಟನಾರಣಪ್ಪನವರು. ಅವರು ಕೆಲವು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಸ್ಥಾಪಿಸಿದರು. ಇದೇ ಕರ್ನಾಟಕ ವಿಜ್ಞಾನ ಪ್ರಚಾರಣೀ ಸಮಿತಿ. “ವಿಜ್ಞಾನ” ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುವ ಕಾರ್ಯಕ್ರಮ ಹಾಕಿಕೊಂಡರು. ಅಂದವಾದ ಹಾಗೂ ಆಕರ್ಷಕವಾದ ಮುಖಚಿತ್ರಗಳನ್ನೊಳಗೊಂಡ, ಚಿತ್ರಸಹಿತವಾದ ಈ ಪತ್ರಿಕೆಯಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳನ್ನು ಪ್ರಕಟಿಸುವ ಯೋಜನೆ ಹಾಕಿದರು. ಗೊತ್ತಾದ ದಿನಾಂಕಕ್ಕೆ ಪತ್ರಿಕೆ ಪ್ರಕಟವಾಗಲೇಬೇಕು ಎಂದು ವ್ರತ ತೊಟ್ಟಿದ್ದರು. ಲೇಖನಗಳನ್ನು ಪರಿಷ್ಕರಿಸುವಾಗ ಕೆಲವೊಮ್ಮೆ ಬಿಕ್ಕಟ್ಟು ತಲೆದೋರುತ್ತಿತ್ತು. ಕನ್ನಡದ ಮಾತುಗಳ ರೂಪದಲ್ಲಿ ಅನಿಶ್ಚಯತೆ ತಲೆದೋರುತ್ತಿತ್ತು. ಉದಾಹರಣೆಗೆ: ಬಂತು, ಬಂದಿತು, ಬಂದದ್ದಾಯಿತು-ಇವುಗಳಲ್ಲಿ ಯಾವ ರೂಪವನ್ನಾರಿಸಬೇಕು? ಪತ್ರಿಕೆಯಲ್ಲಿ ಲೇಖನ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗುವವರೆಗೂ ಯಾವ ರೂಪವನ್ನು ಇಟ್ಟುಕೊಂಡರೆ ಸರಿಹೋದೀತು ಎಂದು ಹೆಣಗುತ್ತಿದ್ದರು. ಪತ್ರಿಕೆ ಗೊತ್ತಾದದಿನ ಪ್ರಕಟವಾಗಲೇ ಬೇಕಲ್ಲ! ಹೀಗಾಗಿ ಕಾಲದ ನಿಯಮಕ್ಕೆ ಒಳಗಾಗಿ ಪರೀಕ್ಷೆ ಅಂತ್ಯವಾಗುತ್ತಿತ್ತು. ಅಚ್ಚಾದ ಅನಂತರ ತಾವೇ ಕರಡು ಪ್ರತಿಯನ್ನು ತಿದ್ದುತ್ತಿದ್ದರು. ರಕ್ಷಾಪತ್ರ ಮಾಡಿಸಿ ಎಕಲಸ ಮುಗಿಯುವವರೆಗೆ ಎದುರಿಗಿದ್ದು, ಹತ್ತಿರವಿರುವ ಚಂದಾದದಾರರ ಮನೆಗೆ ತಾವೇ ಪತ್ರಿಕೆಯನ್ನು ಮುಟ್ಟಿಸುತ್ತಿದ್ದರು.

ಇಷ್ಟು ಶ್ರದ್ಧೆ ವಹಿಸಿ ಪತ್ರಿಕೆಯನ್ನು ನಡೆಸಿದ ವೆಂಕಟನಾರಣಪ್ಪನವರಿಗೆ ದೊರೆತ ಪ್ರೋತ್ಸಾಹ ಅತಿ ಸ್ವಲ್ಪ. ಇಂಗ್ಲಿಷ್ ವ್ಯಾಮೋಹವಿದ್ದ ಕಾಲದಲ್ಲಿ ಕನ್ನಡ ಪತ್ರಿಕೆಯನ್ನು ಅದರಲ್ಲೂ ವಿಜ್ಞಾನದ ಪತ್ರಿಕೆಯನ್ನು, ಕೊಂದು ಓದುವ ಆಸೆ ಇದ್ದುದು ಕೇವಲ ಬೆರಳೆಣಿಕೆಯಲ್ಲಿ ಸಿಗುವಷ್ಟು ಮಂದಿಗೆ. ಹಾಗಾಗಿ ಚಂದಾದಾರರ ಸಂಖ್ಯೆ ಹೆಚ್ಚಲಿಲ್ಲ. ಎರಡು ವರ್ಷವಾಗುವ ವೇಳೆಗೆ ಪತ್ರಿಕೆಯನ್ನು ನಿಲ್ಲಿಸುವ ಸ್ಥಿತಿ ಬಂದಿತು. ಆದರೆ ಕೇವಲ ಎರಡು ವರ್ಷಗಳಲ್ಲಿ “ವಿಜ್ಞಾನ” ಪತ್ರಿಕೆ ಸಾಧಿಸಿದ ಪ್ರಗತಿ ಅಪಾರ.

“ಕರ್ನಾಟಕ ವಿಜ್ಞಾನ” ಪ್ರಚಾರ ಸಮಿತಿಯನ್ನು ಹಿಂದೆಯೇ ಸ್ಥಾಪಿಸಿದ್ದರಷ್ಟೇ?” ವಿಜ್ಞಾನ” ಪತ್ರಿಕೆಗೆ ದೊರೆತ ಸ್ವಾಗತದಿಂದ ನಿರುತ್ಸಾಹಗೊಂಡಿದ್ದರೂ ವೆಂಕಟನಾರಣಪ್ಪನವರು ತಮ್ಮ ವಿಜ್ಞಾನ ಪ್ರಚಾರ ಕಾರ್ಯವನ್ನು ಕೈಬಿಡಲಿಲ್ಲ. ಸಮಿತಿಯ ಆಶ್ರಯದಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು.  ಪ್ರಾರಂಭೋತ್ಸವದ ದಿನ ಎಂ. ವಿಶ್ವೇಶ್ವರಯ್ಯನವರು ಪ್ರಾರಂಭ ಭಾಷಣ ಮಾಡಿದರು. ವೆಂಕಟನಾರಣಪ್ಪನವರು ಮಾಯಾಲಾಂದ್ರದ ಚಿತ್ರಗಳನ್ನು ತೋರಿಸಿ ಕನ್ನಡದಲ್ಲಿ ಉಪನ್ಯಾಸ ಮಾಡಿದರು. ಅವರ ಸ್ನೇಹಿತರಾದ ನಂಗಪುರಂ ವೆಂಕಟೇಶ ಅಯ್ಯಂಗಾರ ಅವರು ಖಗೋಳ ಶಾಸ್ತ್ರದ ಮೇಲೆ ಮಾತನಾಡಿದರು.

ಮೊದಲ ದಿನದ ಉಪನ್ಯಾಸಕ್ಕೆ ಸಭಾಮಂದಿರಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನರು ಬಂದರು. ಎರಡನೆಯ ದಿನ ಸ್ವಲ್ಪ ಕಡಿಮೆ. ಮೂರನೆಯ ದಿನ ಇನ್ನೂ ಕಡಿಮೆ. ಹೀಗಾದರೂ ವೆಂಕಟನಾರಣಪ್ಪನವರ ಉತ್ಸಾಹ ಭಂಗವಾಗಲಿಲ್ಲ. ಆದರೆ ಉಪನ್ಯಾಸ ಮಾಡಲು ಒಪ್ಪಿದವರ ಉತ್ಸಾಹ ಉಳಿಯಲಿಲ್ಲ.

ಆಗ ನಡೆದ ಉಪನ್ಯಾಸಗಳಲ್ಲಿ ಕೆಲವು ಸ್ವಲ್ಪ ಕಾಲದ ನಂತರ ಪುಸ್ತಕ ರೂಪದಲ್ಲಿ ಪ್ರಕಟವಾದವು.

ಇಂಗ್ಲಿಷ್ಕನ್ನಡ ನಿಘಂಟು

“ವಿಜ್ಞಾನ” ಪತ್ರಿಕೆ ನಡೆಸುತ್ತಿದ್ದಾಗ ಕನ್ನಡ ಮಾತುಗಳ ರೂಪದಲ್ಲಿ ಅನಿಶ್ಚಯತೆ ತಲೆ ಹಾಕುತ್ತಿದ್ದುದನ್ನು ಹಿಂದೆಯೇ ಹೇಳಿದೆ. ಆಗ ವೆಂಕಟನಾರಣಪ್ಪನವರಿಗೆ “ಇಂಗ್ಲಿಷ್-ಕನ್ನಡ ನಿಘಂಟು”ವಿನ ಅವಶ್ಯಕತೆಯ ಮನದಟ್ಟಾಯಿತು. ಮಿರ್ಜಾ ಇಸ್ಮಾಯಿಲ್ ಅವರು ಆಗ ಹಿಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ತಮ್ಮ ಗುರುಗಳೆಂದರೆ ಅವರಿಗೆ ಅಪಾರ ವಿಶ್ವಾಸ. ವೆಂಕಟನಾರಣಪ್ಪನವರು ಮಿರ್ಜಾರವರಲ್ಲಿ ತಮ್ಮ ಮನಸ್ಸಿನಲ್ಲಿದ್ದ ಇಂಗ್ಲಿಷ್-ಕನ್ನಡ ನಿಘಂಟಿನ ಆಲೋಚನೆಯನ್ನು ಹೇಳಿದರು.

ಆಗಿನ ಪ್ರಜಾಪ್ರತಿನಿಧಿ ಸಭೆಗೆ ಈಗಿರುವ ವಿಧಾನಸಭೆಗಿರುವ ಅಧಿಕಾರ ಇತ್ತು. ವೆಂಕಟನಾರಣಪ್ಪನವರು ಪ್ರಜಾಪ್ರತಿನಿಧಿಯ ಸದಸ್ಯರಲ್ಲಿ ಒಬ್ಬರು. ೧೯೨೫ ರಲ್ಲಿ ದಸರಾ ಹಬ್ಬದಲ್ಲಿ ನಡೆದ ವಿಶೇಷ ಸಭೆಯಲ್ಲಿ ವೆಂಕಟನಾರಾಣಪ್ಪನವರು ಒಂದು ನಿರ್ಣಯವನ್ನು ಮಂಡಿಸಿದರು. “ನಮಗೆ ಇಂಗ್ಲಿಷ್-ಕನ್ನಡ ನಿಘಂಟಿನ ಅವಶ್ಯಕತೆ ಹೆಚ್ಚಾಗಿದೆ. ಹಾಗೆಯೇ ಕನ್ನಡದಲ್ಲಿ ವಿಶ್ವಕೋಶದ ರಚನೆಯಾಗಬೇಕು. ಇದನ್ನು ಸರ್ಕಾರ ತೀವ್ರವಾಗಿ ಆಲೋಚಿಸಿ ಕಾರ್ಯರೂಪಕ್ಕೆ ತರಬೇಕು.” ವೆಂಕಟನಾರಾಣಪ್ಪನವರ ಈ ನಿರ್ಣಯಕ್ಕೆ ಪ್ರಚಂಡ ಬಹುಮತ ದೊರೆಯಿತು.

ಸರ್ಕಾರವು ನಿಘಂಟು ರಚನೆಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿತು.- “ಈ ಕೆಲಸವನ್ನು ಮೈಸೂರು ವಿಶ್ವವಿದ್ಯಾಲಯ ಕೈಗೊಳ್ಳಬೇಕು. ಇಂಗ್ಲಿಷ್-ಕನ್ನಡ ನಿಘಂಟನ್ನು ಹನ್ನೆರಡು ಭಾಗಗಳಲ್ಲಿ ಪ್ರಕಟಿಸಬೇಕು.” ಇದಕ್ಕಾಗಿ ಒಂದು ಸಂಪಾದಕ ಮಂಡಳಿ ರಚನೆಯಾಯಿತು. ಅದರ ಪ್ರಧಾನ ಸಂಪಾದಕ ಬೆಳ್ಳಾವೆ ವೆಂಕಟನಾರಾಣಪ್ಪನವರು.

“ಇಂಗ್ಲಿಷ್-ಕನ್ನಡ ನಿಘಂಟು” ರಚನೆಗಾಗಿ ವೆಂಕಟನಾರಾಣಪ್ಪನವರು ಶ್ರದ್ಧೆಯಿಂದ, ಉತ್ಸಾಹದಿಂದ ಕೆಲಸ ಮಾಡಿದರು. ಬೆಳಗ್ಗೆ ೧೧ ಘಂಟೆಗೆ ಕಚೇರಿಯಲ್ಲಿ ಕುಳಿತು ಕೆಲಸ ಪ್ರಾರಂಭಿಸಿದರೆ ಸಂಜೆ ೫ ಗಂಟೆಯವರೆಗೆ ವಿಶ್ರಾಂತಿಯಿಲ್ಲ. ತಾವೊಬ್ಬರೇ ಅಲ್ಲ, ಉಳಿದವರೂ ಹಾಗೆಯೇ ಕಟ್ಟುನಿಟ್ಟಾಗಿ ಕೆಲಸ ಮಾಡುವಂತೆ ನೋಡಿಕೊಂಡರು. ಯಾವ ವಿಷಯವನ್ನೇ ಆಗಲಿ ನಾಲ್ಕು-ಐದು ಬಾರಿ ಕೂಲಂಕುಷವಾಗಿ ನೋಡಿ ಕೊನೆಯ ತೀರ್ಮಾನವನ್ನು ಕೈಗೊಳ್ಳುತ್ತಿದ್ದರು. ಅವರ ಬಿಡುವಿಲ್ಲದ ದುಡಿಮೆಯ ಫಲ-ಕೇವಲ ಮೂರೇ ವರ್ಷಗಳಲ್ಲಿ ನಿಘಂಟಿನ ಪ್ರಥಮ ಭಾಗ ಪ್ರಕಟವಾದುದು.

ಇಂಗ್ಲಿಷ್-ಕನ್ನಡ ನಿಘಂಟಿನ ಪ್ರಥಮ ಭಾಗಕ್ಕೆ ಜನತೆಯಿಂದ ಪ್ರಚಂಡ ಸ್ವಾಗತ ದೊರೆಯಿತು. ಇದರಿಂದ ಉತ್ಸಾಹಗೊಂಡು ಸಂಪಾದಕ ಸಮಿತಿ ಕೆಲಸವನ್ನು ಶೀಘ್ರವಾಗಿ ಮುಂದುವರಿಸಿತು. ಆದರೆ ನಿಘಂಟಿನ ಹನ್ನೆರಡು ಭಾಗಗಳನ್ನು ಪೂರ್ತಿ ಪ್ರಕಟಿಸುವ ವೇಳೆಗೆ ವೆಂಕಟನಾರಾಣಪ್ಪನವರು ಬದುಕಿರಲಿಲ್ಲ. ೧೯೪೬ ರಲ್ಲಿ ಹನ್ನೆರಡು ಭಾಗಗಳ ನಿಘಂಟು ಪೂರ್ಣ ಪ್ರಮಾಣದಲ್ಲಿ ಪ್ರಕಟವಾಯಿತು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಬೆಲೆ ಬಾಳುವ ಗ್ರಂಥವೊಂದು ದೊರೆಯಿತು.

ಅಂದು ವೆಂಕಟನಾರಾಣಪ್ಪನವರು ಕಂಡ ಕನ್ನಡ ವಿಶ್ವಕೋಶದ ರಚನೆ ಇಂದು ನನಸಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಆಶ್ರಯದಲ್ಲಿ ಕನ್ನಡ ವಿಶ್ವಕೋಶ ರಚನೆ ಸಾಗುತ್ತಿದೆ.

ವೆಂಕಟನಾರಾಣಪ್ಪನವರು ಕಾಲಕ್ಕೆ ಬಹು ಮಹತ್ವ ಕೊಡುತ್ತಿದ್ದರು. ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕ ಸಮಿತಿಯ ಸಭೆ ತಿಂಗಳಿಗೆ ಒಮ್ಮೆ ಸೇರುತ್ತಿತ್ತು. ಅನಂತರ ಕೆಲಸ ಶೀಘ್ರವಾಗಿ ಆಗಬೇಕೆಂಬ ಕಾರಣದಿಂದ ಸಮಿತಿಯ ಸಭೆ ಮತ್ತೆ ಮತ್ತೆ ಸೇರುತ್ತಿತ್ತು. ಸಭೆ ಹನ್ನೆರಡರಿಂದ ಐದು ಗಂಟೆಯವರೆಗೆ ಎಂದು ಗೊತ್ತು ಮಾಡಿರುತ್ತಿತ್ತು. ಹನ್ನೆರಡಾಯಿತೆಂದರೆ ತೀರಿತು ಕಟ್ಟುನಿಟ್ಟಾಗಿ ಸಭೆ ಆರಂಭವಾಗಬೇಕು. ಅನೇಕ ದಿವಸ ಆರು-ಆರೂವರೆ ಗಂಟೆಯವರೆಗೂ ಸಭೆ ಮುಂದುವರಿಯುತ್ತಿತ್ತು.

ಇಂಗ್ಲಿಷ್-ಕನ್ನಡ ನಿಘಂಟಿನಂತೆಯೇ ವೆಂಕಟನಾರಣಪ್ಪನವರು ಮತ್ತೊಂದು ನಿಘಂಟನ್ನು ತಾವೊಬ್ಬರೇ ಸಂಪಾದಿಸಿದರು. ಇದೇ ಷಟ್ಪದಿ ಕಾವ್ಯಗಳ ನಿಘಂಟು.

ವೆಂಕಟನಾರಣಪ್ಪನವರು ತಾವೇ ಕೆಲವು ಕೃತಿಗಳನ್ನು ರಚಿಸಿದರು. ವಿಜ್ಞಾನದ ವಿಷಯವನ್ನು ಸರಳವಾಗಿ, ಮಕ್ಕಳಿಗೆ ಅರ್ಥವಾಗುವಂತೆ ಮಾತೃಭಾಷೆಯಾದ ಕನ್ನಡದಲ್ಲಿ ಹೇಳಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ನಂಬಿದ್ದ ಕಾಲದಲ್ಲಿ ವೆಂಕಟನಾರಣಪ್ಪನವರು “ಜೀವ ವಿಜ್ಞಾನ” ಎಂಬ ಪುಸ್ತಕವನ್ನು ಹೊರತಂದರು. ಇದು ಪ್ರಕಟವಾದದ್ದು ೧೯೩೯ ರಲ್ಲಿ. ಇದನ್ನು ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕಾಗಿ ಬರೆದುಕೊಟ್ಟಿದ್ದು ಈ ಪುಸ್ತಕದ ಶೈಲಿ ಸುಂದರವಾಗಿದೆ. ಸರಳವಾಗಿದೆ. ಈ ಪುಸ್ತಕದಲ್ಲಿ ವಿಜ್ಞಾನದ ವಿಷಯಗಳನ್ನು ಖಚಿತವಾಗಿ ನಿರೂಪಿಸಿದ್ದಾರೆ.

ಇತರ ಕೃತಿಗಳು

“ಜೀವ ವಿಜ್ಞಾನ” ವಲ್ಲದೆ “ಗುಣಸಾಗರ”, “ಕನ್ನಡ ಐದನೆಯ ಪುಸ್ತಕ” ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

ಹಿಂದೆ ಲಂಡನ್ ನಗರದಲ್ಲಿ ಡಿಕ್ ವಿಟ್ಟಿಂಗ್‌ಟನ್ ಎಂಬ ವ್ಯಕ್ತಿಯಿದ್ದ. ಬಡವನಾಗಿದ್ದು ಕಾಲಕ್ರಮೇಣ ತನ್ನ ಸಾಮರ್ಥ್ಯದಿಂದ ಐಶ್ವರ್ಯವಂತನಾಗಿ ಸ್ಥಾನಮಾನಗಳನ್ನು ಗಳಿಸಿಕೊಂಡ ವ್ಯಕ್ತಿ. ಇವತ ಕತೆಯನ್ನು ಕನ್ನಡದಲ್ಲಿ “ಗುಣಸಾಗರ” ಎಂಬ ಹೆಸರಿನಿಂದ ಬರೆದಿದ್ದಾರೆ. ವೆಂಕಟನಾರಣಪ್ಪನವರು ಬರೆದ ಕನ್ನಡ ಐದನೆಯ ಪುಸ್ತಕದಲ್ಲಿ ಅನೇಕ ನೀತಿಕತೆಗಳಿವೆ. ಸಾಹಸದ ಕತೆಗಳಿವೆ. ವಿಜ್ಞಾನಕ್ಕೆ ಸಂಬಂಧಪಟ್ಟ ಕತೆಗಳನ್ನೂ ವಿಜ್ಞಾನದಿಂದಾಗುವ ಉಪಯೋಗಗಳನ್ನೂ ಎಳೆಯರ ಮನಸ್ಸಿಗೆ ಸುಲಭವಾಗಿ ಹಿಡಿಸುವಂತೆ ವರ್ಣಿಸಿದ್ದಾರೆ.

ವ್ಯಕ್ತಿತ್ವದ ಕೆಲವು ಮುಖಗಳು

ತಮಗೆ ಸರಿಯೆಂದು ತೋರಿದ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಲು ವೆಂಕಟನಾರಣಪ್ಪನವರು ಹಿಂದುಮುಂದು ನೋಡುತ್ತಿರಲಿಲ್ಲ. ವಿಶ್ವವಿದ್ಯಾನಿಲಯದ ಸೆನೆಟ್ ಸಭೆಯಲ್ಲಿಯಾಗಲಿ, ಇನ್ನಾವುದೇ ಸಭೆಯಲ್ಲಾಗಲಿ ಯಾವುದಾದರೂ ಅಭಿಪ್ರಾಯವನ್ನು ಅನುಮೊದಿಸುವಾಗ, ವಿರೋಧಿಸುವಾಗ ಎಷ್ಟು ಸದಸ್ಯರು ತಮ್ಮ ಜೊತೆಗಿದ್ದಾರೆಂದು ಅವರು ನೋಡುತ್ತಿರಲಿಲ್ಲ. ಒಬ್ಬರೇ ನಿಂತಾದರೂ ಧೈರ್ಯವಾಗಿ ತಮ್ಮ ಸಲಹೆಯನ್ನು ಮಂಡಿಸುತ್ತಿದ್ದರು.

ವೆಂಕಟನಾರಣಪ್ಪನವರು ತಮ್ಮ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದರು. ಮಕ್ಕಳೂ ಸಹ ತಂದೆಯನ್ನು ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಇಟ್ಟುಕೊಂಡಿದ್ದರು. ಮಕ್ಕಳು ಬೆಳಗ್ಗೆ ಬೇಗ ಏಳಲಿ ಎಂದು ತಾವು ನಾಲ್ಕು ಗಂಟೆಗೇ ಎದ್ದು ಬಿಡುತ್ತಿದ್ದರಂತೆ. ತಾವೇ ಸ್ವತಃ ಕೆಲಸಮಾಡಿ ಮಕ್ಕಳಿಗೆ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಿದ್ದರು.

ವೆಂಕಟನಾರಣಪ್ಪನವರಿಗೆ ನೇಮ ನಿಷ್ಠೆ ಸ್ವಲ್ಪ ಹೆಚ್ಚು. ಅವರು ಎಲ್ಲಿಯೂ ಉಪಾಹಾರವನ್ನು ಸ್ವೀಕರಿಸುತ್ತಿರಲಿಲ್ಲ. ಸಮ್ಮೇಳನಗಳಿಗೆ ಸ್ನೇಹಿತರ ಜೊತೆ ಹೊರಟಾಗ, ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೊರಟಾಗ ವೆಂಕಟನಾರಣಪ್ಪನವರು ತಾವೇ ಅಡಿಗೆ ಮಾಡಿ ಸ್ನೇಹಿತರಿಗೂ ಬಡಿಸಿ ತಾವೂ ಊಟ ಮಾಡುತ್ತಿದ್ದರು. ತಾವು ಕಾಫಿ ಕುಡಿಯದಿದ್ದರೂ ಸ್ನೇಹಿತರಿಗಾಗಿ ಬೆಳಗಿನ ಝಾವ ಎದ್ದು ಕಾಫಿ ಮಾಡಿಟ್ಟು ಸ್ನೇಹಿತರು ಏಳುವುದನ್ನು ಕಾಯುತ್ತಿದ್ದರು. ಅಷ್ಟು ವಾತ್ಸಲ್ಯಮಯ ಸ್ನೇಹಪೂರಿತ ಹೃದಯ ಅವರದು.

ವೆಂಕಟನಾರಣಪ್ಪನವರಿಗೆ ಕೆಲಸವೆಂದರೆ ಬೇಸರವಿಲ್ಲ. ಒಮ್ಮೆ ಅವರು ಸ್ನೇಹಿತರೊಡನೆ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದಾಗ ನಡೆದ ಪ್ರಸಂಗ ಇದು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಹೊರಡುವ ಸಮಯವಾಗಿತ್ತು. ವೆಂಕಟನಾರಣಪ್ಪನವರು ಗೆಳೆಯರನ್ನು ಆತುರಪಡಿಸುತ್ತಾ ಎಂದರು, “ಇದೇನಪ್ಪಾ, ಇನ್ನೂ ಯಾರೂ ತಯಾರಿಯಾಗಿಲ್ಲವಲ್ಲಾ, ಮೆರವಣಿಗೆ ಹೊರಡುವ ಸಮಯವಾಯಿತು, ಎಲ್ಲರೂ ಏಳಿ.”

ಎಲ್ಲರನ್ನೂ ಎಬ್ಬಿಸುವುದರಲ್ಲೇ ಮಗ್ನರಾಗಿದ್ದ ವೆಂಕಟನಾರಣಪ್ಪನವರು ತಾವೇ ಹೊರಡಲು ತಯಾರಾಗಿಲ್ಲವೆಂಬುದು ಸ್ನೇಹಿತರ ಗಮನಕ್ಕೆ ಬಂತು. ಅವರು ವೆಂಕಟನಾರಣಪ್ಪನವರನ್ನು, “ನೀವೇ ಸಿದ್ಧವಾಗಿಲ್ಲವಲ್ಲಾ” ಎಂದು ಕೇಳಿದರು. “ನನ್ನದೇನಪ್ಪಾ, ಇದೋ ತಯಾರಿ ಆಗಿಯೇ ಹೋಯಿತು” ಎಂದು ತಮ್ಮ ಪೆಟ್ಟಿಗೆಯಿಂದ ಕೋಟನ್ನು ತೆಗೆದರು. ಜೊತೆಗೆ ಒಂದು ಸೂಜಿದಾರ ಗುಂಡಿಗಳನ್ನು ತೆಗೆದು, ದಾರವನ್ನು ಸೂಜಿಗೆ ಪೋಣಿಸುತ್ತ ಕುಳಿತರು. ಇವರ ಕೆಲಸವನ್ನು ನೋಡಿ ಸ್ನೇಹಿತರಿಗೆ ಅಚ್ಚರಿ.

ವೆಂಕಟನಾರಣಪ್ಪನವರು ಹೇಳಿದರು-“ನೋಡಪ್ಪಾ, ಈ ಅಗಸರವನನ್ನು ನಂಬುವಂತೆಯೇ ಇಲ್ಲ. ಪ್ರತಿಸಲ ಕೋಟನ್ನು ಅಗಸನಿಗೆ ಹಾಕಿದಾಗ ಗುಂಡಿಗಳನ್ನು ಒಡೆಯದೇ ವಾಪಸ್ಸು ಕೊಡುವುದಿಲ್ಲ. ಆದ್ದರಿಂದ ಅಗಸನಿಗೆ ಬಟ್ಟೆ ಹಾಕುವ ಮೊದಲು ಗುಂಡಿಗಳನ್ನು ಕಿತ್ತಿಟ್ಟುಕೊಂಡು ಹಾಕುತ್ತೇನೆ. ಅಗಸನಿಂದ ಬಂದ ನಂತರ ಮತ್ತೆ ಹೊಲಿಯುತ್ತೇನೆ.” ಹೀಗೆ ಹೇಳಿ ಕೋಟಿಗೆ ಗುಂಡಿ ಹೊಲಿಯಲು ಪ್ರಾರಂಭಿಸಿದರು. ಸ್ನೇಹಿತರು ಹೇಳಿದರು, “ಇದರಿಂದ ನಿಮ್ಮ ಸಮಯ ವ್ಯರ್ಥವಾಗುವುದಿಲ್ಲವೇ?” ವೆಂಕಟನಾರಣಪ್ಪ: “ನೋಡಿ, ಐದು ನಿಮಿಷದ ಕೆಲಸ. ಅಷ್ಟರಲ್ಲಿ ಹೊಲಿದು ಬಿಡುತ್ತೇನೆ.”

ಆ ಮಾತನ್ನಾಡುವ ವೇಳೆಗೆ ಕೋಟಿಗೆ ಗುಂಡಿ ಹಾಕಿ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹೊರಡುವ ತಯಾರಿಯಾಗಿತ್ತು.

ವೆಂಕಟನಾರಣಪ್ಪನವರು ಜಮೀನು ಕೊಂಡು ತಾವೇ ವ್ಯವಸಾಯ ಮಾಡುವ ಪ್ರಯತ್ನವನ್ನು ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಮುಖ್ಯವಾದ ಅಂಶ ಎಂದರೆ ಅವರಿಗೆ ಬೇಸಾಯ, ಗೋಡೆ ಕಟ್ಟುವುದು-ಯಾವ ಪ್ರಾಮಾಣಿಕ ಕೆಲಸವಾಗಲಿ ತಮ್ಮ ಯೋಗ್ಯತೆಗೆ ಕಿರಿದು ಎಂಬ ಭಾವನೆ ಇರಲಿಲ್ಲ.

ದೇವಸ್ಥಾನಕ್ಕಾಗಿ

ವೆಂಕಟನಾರಣಪ್ಪನವರು ವಾಸವಾಗಿದ್ದುದು ಬೆಂಗಳೂರಿನ ಬಡಾವಣೆಗಳಲ್ಲಿ ಒಂದಾದ ಬಸವನಗುಡಿಯಲ್ಲಿ. ಆಗಿನ ವೆಂಕಟನಾರಣಪ್ಪನವರು ಯೋಚಿಸಿದರು. “ಈ ಪ್ರದೇಶದಲ್ಲಿ ಒಂದು ದೇವಸ್ಥಾನವಿಲ್ಲವಲ್ಲ, ಗುಡಿಯಿಲ್ಲದ ಸ್ಥಳ ವಾಸಕ್ಕೆ ಯೋಗ್ಯವಲ್ಲ” ಗುಡಿ ನಿರ್ಮಾಣಕ್ಕೆ ಮನಸ್ಸಿನಲ್ಲೇ ಯೋಜನೆಯನ್ನು ಹಾಕಿಕೊಳ್ಳುತ್ತಿದ್ದರು.

ಒಂದು ಬೆಳಗ್ಗೆ ತಂಗಾಳಿಯ ಸೇವನೆಗೆಂದು ಸುತ್ತಾಡಿ ಬರಲು ಹೊರಟಿದ್ದರು. ಕಾಡಿನಂತಿದ್ದ ಪ್ರದೇಶದಲ್ಲಿ ಒಂದು ಸಣ್ಣ ಹಳೆಯ ಮಂಟಪ ಕಣ್ಣಿಗೆ ಬಿತ್ತು. ಕುತೂಹಲದಿಂದ ಒಳಗೆ ಹೋಗಿ ಒಳಗೆ ಹೋಗಿ ನೋಡಿದರು. ಅಲ್ಲೊಂದು ಶಿವಲಿಂಗ ಕಾಣಿಸಿತು. ವೆಂಕಟನಾರಣಪ್ಪನವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆ ಕ್ಷಣದಲ್ಲಿಯೇ ನಿರ್ಧರಿಸಿದರು. “ಇಲ್ಲೊಂದು ಗುಡಿಯನ್ನು ಕಟ್ಟಬೇಕು” ಎಂದು. ಸರ್ಕಾರದ ಕಚೇರಿಗೆ ಕೂಡಲೇ ಹೋದರು. ದೇವಸ್ಥಾನದ ನಿರ್ಮಾಣಕ್ಕೆ ಬೇಕಾಗುವ ಸೌಲಭ್ಯಗಳನ್ನು ಅಧಿಕಾರಿಗಳಿಂದ ಪಡೆದರು. ಸುತ್ತಮುತ್ತಲ ಪ್ರದೇಶದ ಪರೀಕ್ಷೆಯೂ ಆಯಿತು.

ಸುಮಾರು ೧೯೦೩-೧೯೦೪ರ ವೇಳೆಗೆ ದೇವಸ್ಥಾನದ ಕಟ್ಟದ ಪೂರ್ತಿಯಾಗಿ ಶಾಸ್ತ್ರೋಕ್ತವಾಗಿ ಲಿಂಗವನ್ನು ಪ್ರತಿಷ್ಠಾಪಿಸಿದರು. ಇದೇ ಈಗ ಬಸವನಗುಡಿಯಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ.

ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸರ್ಕಾರದಿಂದ ಸಹಾಯಧನವನ್ನು ಸಂಪಾದಿಸಲು ವೆಂಕಟನಾರಾಣಪ್ಪನವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕಡೆಗೂ ಆಗಿನ ದಿವಾನರಾಗಿದ್ದ ವಿ.ಪಿ.ಮಾಧವರಾಯದಿಂದ ದೇವಸ್ಥಾನಕ್ಕೆ ಸರ್ಕಾರದ ನೆರವು ಬಂದಿತು.

ಯಾವ ಸಂದರ್ಭದಲ್ಲಿಯೇ ಆಗಲಿ ವೆಂಕಟನಾರಣಪ್ಪನವರು ದೇವಸ್ಥಾನಕ್ಕೆ ಹೋಗಿಬರುವುದನ್ನು ತಪ್ಪಿಸುತ್ತಿರಲಿಲ್ಲ. ಸೋಮವಾರವಂತೂ ಎಷ್ಟೇ ಹೊತ್ತಾಗಲಿ ತಾವೇ ಹೋಗಿ ಮಂಗಳಾರತಿ ಮಾಡಿ ಬರುತ್ತಿದ್ದರು. ಅನಂತರ ಫಲಾಹಾರ. “ವಿಜ್ಞಾನ” ಮಾಸಪತ್ರಿಕೆ ನಡೆಸುತ್ತಿದ್ದ ಕಾಲದಲ್ಲಿ ಎಷ್ಟೋ ಬಾರಿ ಮುದ್ರಣಾಲಯದ ಕೆಲಸ ಮುಗಿಯುವ ವೇಳೆಗೆ ರಾತ್ರಿ ಹನ್ನೆರಡು ಮೀರಿರುತ್ತಿತ್ತು. ಆಯಾಸವಾಗಿದ್ದರೂ ಬೇಸರ ಪಡದೆ ದೇವಸ್ಥಾನಕ್ಕೆ ಹೋಗಿ ಸೇವೆ ಸಲ್ಲಿಸಿ ಬರುತ್ತಿದ್ದರು.

ದೇವಸ್ಥಾನದ ಲೆಕ್ಕಪತ್ರಗಳನ್ನು ವೆಂಕಟನಾರಾಣಪ್ಪನವರೇ ನೋಡಿಕೊಳ್ಳುತ್ತಿದ್ದರು. ಕಾರ್ತಿಕ ಮಾಸದ ಅಮಾವಾಸ್ಯೆಯ ರಾತ್ರಿ ಮಲ್ಲಿಕಾರ್ಜುನ ಸ್ವಾಮಿಯ ಭಕ್ತದಿಗಳ ವಾರ್ಷಿಕ ಸಭೆ ಸೇರುತ್ತಿತ್ತು. ಆಗ ವೆಂಕಟನಾರಣಪ್ಪನವರು ಸಮಿತಿಯ ಮುಂದೆ ದೇವಸ್ಥಾನ ಲೆಕ್ಕಪತ್ರಗಳನ್ನು ವೆಂಕಟನಾರಣಪ್ಪನವರೇ ನೋಡಿಕೊಳ್ಳುತ್ತಿದ್ದರು. ಕಾರ್ತಿಕ ಮಾಸದ ಅಮಾವಾಸ್ತೆಯ ರಾತ್ರಿ ಮಲ್ಲಿಕಾರ್ಜುನ ಸ್ವಾಮಿಯ ಭಕ್ತಾದಿಗಳ ವಾರ್ಷಿಕ ಸಭೆ ಸೇರುತ್ತಿತ್ತು. ಆಗ ವೆಂಕಟನಾರಣಪ್ಪನವರು ಸಮಿತಿಯ ಮುಂದೆ ದೇವಸ್ಥಾನದ ಲೆಕ್ಕಪತ್ರಗಳನ್ನು ಇಡುತ್ತಿದ್ದರು. ಒಂದು ಪೈಸೆಯನ್ನೂ ಬಿಡದೆ ಲೆಕ್ಕವಿಡುತ್ತಿದ್ದರು. “ದೇವರ ಕಾಸು. ಆದ್ದರಿಂದ ಎಲ್ಲದಕ್ಕೂ ಲೆಕ್ಕವಿರಬೇಕು. ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು.”- ಇದು ವೆಂಕಟನಾರಾಣಪ್ಪನವರ ದೃಷ್ಟಿ.

ಕ್ಲಬ್ಬಿಗಾಗಿ

ವೆಂಕಟನಾರಣಪ್ಪನವರು ಸ್ನೇಹಪರರು. ಸ್ನೇಹಿತರ ಸಹವಾಸದಲ್ಲಿ ಅವರು ಸದಾ ಸಂತೋಷವನ್ನು ಕಾಣುತ್ತಿದ್ದರು. ಬಸವನಗುಡಿಯಲ್ಲಿ ಅವರು ವಾಸವಾಗಿದ್ದರಷ್ಟೆ. ಆಗ ಯೋಚಿಸುತ್ತಿದ್ದರು.- “ಇಲ್ಲಿ ಮನೆಗಳಾಗುತ್ತಿವೆ. ಮುಂದೆ ಬೆಳೆಯುವ ಸೂಚನೆಯೂ ಇದೆ. ಸಂಜೆ ನಾಲ್ಕು ಜನ ಸ್ನೇಹಿತರು ಒಂದು ಕಡೆ ಕಲೆತು ಸಂತೋಷವಾಗಿ ಕಾಲ ಕಳೆಯಲು ಒಂದು ಜಾಗ ಬೇಕಲ್ಲ.”

ಹೀಗೆ ಯೋಚಿಸುತ್ತಿದ್ದಾಗ ಅವರ ಮನದಲ್ಲಿ ರೂಪ ತಾಳಿದ್ದು “ಬಸವನಗುಡಿ ಕ್ಲಬ್‌”- ಕ್ಲಬ್ ಮಾಡುವ ಯೋಚನೆ ಮನಸ್ಸಿಗೆ ಬಂದದ್ದೆ ತಡ ಕಾರ್ಯರೂಪಕ್ಕಿಳಿಸಲು ಪ್ರಯತ್ನಿಸಿದರು. ಮುನಿಸಿಪಾಲಿಟಿಯಿಂದ ಕಟ್ಟಡದ ನಿವೇಶನವನ್ನು ಸಂಪಾದಿಸಿದ್ದಾಯಿತು. ಕಾಲೇಜಿನಲ್ಲಿ ಪ್ರೊಫೆಸರರಾಗಿದ್ದವರು, ಬಿಸಿಲನ್ನು ಲೆಕ್ಕಿಸದೇ ತಾವೇ ನಿಂತು ಕೆಲಸದ ಮೇಲ್ವಿಚಾರಣೆ ನಡೆಸುತ್ತಿದ್ದರು. ಕೆಲಸ ನಿಧಾನವಾದರೆ ತಾವೇ ಕರಣೆ ಹಿಡಿದು ಕಟ್ಟಡದ ಗೋಡೆಯನ್ನು ಕಟ್ಟಲು ಪ್ರಾರಂಭಿಸಿಬಿಡುತ್ತಿದ್ದರು.

ಅಂದು ವೆಂಕಟನಾರಾಣಪ್ಪನವರು ಸ್ಥಾಪಿಸಿದ ಕ್ಲಬ್ ಇಂದು “ಬಸವನಗುಡಿ ಯೂನಿಯನ್ ಅಂಡ್ ಸರ್ವೀಸ್ ಕ್ಲಬ್” ಎಂಬ ಹೆಸರಿನಿಂದ ಮುಖ್ಯವಾದ ಕ್ಲಬ್‌ಗಳಲ್ಲಿ ಒಂದಾಗಿದೆ. ಅನೇಕ ಪ್ರಮುಖರು ಈ ಕ್ಲಬ್‌ನ ಸದಸ್ಯರಾಗಿದ್ದಾರೆ. ಇಲ್ಲಿ ಒಂದು ವಾಚನಾಲಯವೂ ಒಂದು ಪುಸ್ತಕ ಭಂಡಾರವೂ ಹಲವು ಆಟಗಳನ್ನು ಆಡುವ ಸೌಕರ್ಯವೂ ಇವೆ.

ಸಂತೋಷಗಳನ್ನು ಹೇಗೆ ಬಿಡಲಿ?”

ವೆಂಕಟನಾರಾಣಪ್ಪನವರು ಅವರ ಕಡೆಯ ದಿನಗಳಲ್ಲಿ ವ್ಯಾಧಿಗ್ರಸ್ಥರಾದರು. ಅವರು ಅದೇ ಮೊದಲನೆಯ ಸಲ ಮತ್ತು ಕಡೆಯ ಸಲ ಹಾಸಿಗೆ ಹಿಡಿದಿದ್ದುದು. ಹುಡಿಗೆಮ್ಮು ತೊಂದರೆ ಕೊಡಲು ಪ್ರಾರಂಭಿಸಿತು. ವೆಂಕಟನಾರಾಣಪ್ಪನವರ ಶಿಷ್ಯರಲ್ಲಿ ಅನೇಕರು ಬೆಂಗಳೂರಿನಲ್ಲಿ ಡಾಕ್ಟರುಗಳಾಗಿದ್ದರು. ಅವರಲ್ಲೊಬ್ಬರು ವೆಂಕಟನಾರಾಣಪ್ಪನವರನ್ನು ಪರೀಕ್ಷಿಸಿ ಹೇಳಿದರು: “ನಿಮಗೆ ದೇಹದಲ್ಲಿ ಕಾಯಿಲೆಯೇನೂ ಇಲ್ಲ. ಆದರೆ ಕಾಲಿನ ಮೂಳೆಗಳೂ ನರಗಳೂ ದುರ್ಬಲವಾಗಿವೆ. ನೀವು ಕೆಲವು ಕಾಲ ನಿಮ್ಮ ಕಾಲಿಗೆ ವಿಶ್ರಾಂತಿ ಕೊಡಬೇಕು.

ವೆಂಕಟನಾರಾಣಪ್ಪನವರ ನಡಿಗೆಯೋ ಸಾಮಾನ್ಯನಾದವನು ಓಡುವ ಓಟಕ್ಕಿಂತ ವೇಗವಾದದ್ದು. ಅವರಿಗೆ ಒಂದು ನಿಮಿಷವೂ ವ್ಯರ್ಥವಾಗಕೂಡದು. ನೇರವಾಗಿ, ವೇಗವಾಗಿ ನಡೆದು ತಲುಪಬೇಕಾದ ಸ್ಥಳಕ್ಕೆ ಕಾಲಕ್ಕೆ ಸರಿಯಾಗಿ ತಲುಪುತ್ತಿದ್ದರು. ಹೀಗೆ ಮಾಡುತ್ತಿದ್ದವರ ಕಾಲಿಗೆ ವಿಶ್ರಾಂತಿ ಕೊಡುವುದು ಹೇಗೆ?

ಕೆಲವು ಕಾಲ ಹೀಗೆ ಕಳೆಯಿತು. ಕರಾಚಿಯಲ್ಲಿ ಕಾಲಿನ ಚಿಕಿತ್ಸೆ ಮಾಡಿಸಿಕೊಂಡರು. ಗುಣವಾಗಲಿಲ್ಲ. ಕಾಲಿನ ದುರ್ಬಲತೆ ಹೆಚ್ಚಾಯಿತು. ಜೊತೆಗೆ ಜ್ವರವೂ ಬರಲಾರಂಭವಾಯಿತು.

ಆ ದಿನಗಳಲ್ಲಿ ವೆಂಕಟನಾರಾಣಪ್ಪನವರು ರಸ್ತೆಗೆ ಸೇರಿದಂತಿದ್ದ ಕೊಠಡಿಯಲ್ಲಿ ಮಲಗುತ್ತಿದ್ದರು. ಅವರ ದೇಹಸ್ಥಿತಿಯನ್ನು ವಿಚಾರಿಸಲು ಬಂದ ಸ್ನೇಹಿತರೊಬ್ಬರು ಅವರಿಗೆ ಹೀಗೆ ಸಲಹೆ ಕೊಟ್ಟರು:

“ಈ ಕೊಠಡಿ ರಸ್ತೆ ಪಕ್ಕದಲ್ಲಿದೆ. ರಸ್ತೆಯಲ್ಲಿ ಕಾರು ಬಸ್ಸುಗಳು ಹೋಗುತ್ತಲೇ ಇರುತ್ತವೆ. ಧೂಳು ಎದ್ದರೆ ಇಲ್ಲಿಗೆ ಬರುತ್ತದೆ. ಜೊತೆಗೆ ಗಲಾಟೆ ಬೇರೆ. ನೀವೇಕೆ ಒಳಗಡೆ ಇರುವ ಕೊಠಡಿಯಲ್ಲಿ ಮಲಗಬಾರದು?”

ವೆಂಕಟಪ್ಪನವರು, “ಯೋಚಿಸುತ್ತೇನೆ” ಎಂದರು.

ಮರುದಿನ ಪುನಃ ಅದೇ ಸ್ನೇಹಿತರು ಬಂದರು. ಮತ್ತೆ ಅದೇ ಮಾತನ್ನು ಎತ್ತಿದರು. ಅವರಿಗೆ ವೆಂಕಟನಾರಾಣಪ್ಪನವರು ಕೊಟ್ಟ ಉತ್ತರ ಇದು:”ನೀವು ಹೇಳುವುದು ಸರಿಯಪ್ಪ. ಆದರೆ ಈ ಕೊಠಡಿಯಲ್ಲಿರುವುದರಿಂದ ನನಗೆ ಸಿಗಬಹುದಾದ ಸುಖ ಸಂತೋಷಗಳು ಬೇರೆ ಕೊಠಡಿಗೆ ಹೋಗುವುದರಿಂದ ಸಿಗುವುದಿಲ್ಲ. ಒಂದು- ಇಲ್ಲಿ ಪಕ್ಕದ ಕೊಠಡಿಯಲ್ಲಿ ನನ್ನ ಮೊಮ್ಮಕ್ಕಳು ಇರುತ್ತಾರೆ. ಅವರ ಆಟ-ಪಾಠ, ಮಾತುಕತೆ ಕೇಳುತ್ತಿದ್ದರೆ ಮನಸ್ಸು ಉಲ್ಲಾಸವಾಗಿರುತ್ತದೆ. ಎರಡು-ನನ್ನ ಮೊಮ್ಮಗಳು ಪಕ್ಕದ ಕೊಠಡಿಯಲ್ಲಿ ಸಂಗೀತ ಪಾಠ ಮಾಡುತ್ತಾಳೆ. ಅದನ್ನು ಕೇಳಲು ನನಗೆ ಬಹಳ ಇಷ್ಟ. ಈ ಸಂತೋಷಗಳನ್ನು ಹೇಗೆ ಬಿಡಲಿ?”

ಇದಕ್ಕೆ ಆ ಸ್ನೇಹಿತರು ಏನು ಉತ್ತರ ಹೇಳುತ್ತಾರೆ? ಮಕ್ಕಳ ಆಟ-ಪಾಠಗಳಲ್ಲಿಯೂ, ಸಂಗೀತದಲ್ಲಿಯೂ, ಆಸಕ್ತಿಯನ್ನೂ ಸಂತೋಷಪಡುವ ಶಕ್ತಿಯನ್ನೂ ಉಳಿಸಿಕೊಂಡವರು ವೆಂಕಟನಾರಾಣಪ್ಪನವರು.

ಈ ಸಂತೋಷಗಳನ್ನು ಹೇಗೆ ಬಿಡಲಿ

ವೆಂಕಟನಾರಾಣಪ್ಪನವರ ನಾಡು, ನುಡಿಗಳ ಸೇವೆಗಾಗಿ ಅವರನ್ನು ಅಭಿನಂಧಿಸಲು ೧೯೪೧ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಮಾರಂಭ ಜರುಗಿತು. ಆ ಸಮಾರಂಭದಲ್ಲಿ ವೆಂಕಟನಾರಣಪ್ಪನವರಿಗೆ ಮಾನಪತ್ರವನ್ನು ಸಮರ್ಪಿಸಿ ಪರಿಷತ್ತು ಅವರನ್ನು ಗೌರವಿಸಿತು.

ವೆಂಕಟನಾರಣಪ್ಪನವರು ಮಾಡಿದ ಸಾರ್ವಜನಿಕ ಸೇವೆಗೆ ಸರ್ಕಾರವು ಅವರಿಗೆ “ರಾಜಾಸೇವಾಸಕ್ತ” ಎಂಬ ಬಿರುದನ್ನು ನೀಡಿತು.

ವೆಂಕಟನಾರಣಪ್ಪನವರು ೧೯೪೩ ರ ಆಗಸ್ಟ್‌ ೩ ರಂದು ತೀರಿಕೊಂಡರು. ಆಗ ಅವರಿಗೆ ೭೧ ವರ್ಷ ವಯಸ್ಸು.

ವಿಜ್ಞಾನ-ಸಾಹಿತ್ಯಗಳೆರಡಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದ ಹಿರಿಯ ನುಡಿಸೇವಕರನ್ನು ಕನ್ನಡ ನಾಡು ಕಳೆದುಕೊಂಡಂತಾಯಿತು.