ಬೆಳ್ಳಾವೆ ವೆಂಕಟನಾರಾಣಪ್ಪ ಅವರು ಜನಿಸಿದ್ದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ. ತಂದೆ ವೆಂಕಟಕೃಷ್ಣಯ್ಯ, ತಾಯಿ ಲಕ್ಷ್ಮಿದೇವಮ್ಮ. ತಂದೆಯ ಶಿಸ್ತಿನ ಜೀವನ ಮತ್ತು ತಾಯಿಯ ಧಾರ್ಮಿಕ ನಂಬಿಕೆಗಳು ಇವರ ಮೇಲೆ ಪ್ರಭಾವ ಬೀರಿದವು. ಪ್ರೌಡಶಾಲೆಯ ಹಂತದವರೆಗಿನ ಶಿಕ್ಷಣವನ್ನು ತುಮಕೂರಿನಲ್ಲಿ ಮುಗಿಸಿದರು. ಅನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿ ಬಿ.ಎ. ಪದವಿ ಪಡೆದರು. ಪದವಿ ಪಡೆದ ಕೂಡಲೇ ಅದೇಕಾಲೇಜಿನಲ್ಲಿ ಅದ್ಯಾಪಕರಾಗಿ ನೇಮಕಗೊಂಡರು.ಕೆಲಸದಲ್ಲಿದ್ದಾಗಲೇ ಖಾಸಗಿಯಾಗಿ ವ್ಯಾಸಂಗ ಮಾಡಿ ಮದರಾಸು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದರು. ಮೂವತ್ತು ವರ್ಷಗಳಷ್ಟು ದೀರ್ಘಕಾಲ ಅದ್ಯಾಪಕರಾಗಿ, ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ತಮ್ಮ ಸ್ವಯಿಚ್ಚೆಯಿಂದ ನಿವೃತ್ತರಾದರು.

ಮುಂಬರುವ ತಮ್ಮ ದಿನಗಳನ್ನು ಕನ್ನಡ ಭಾಷೆ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಮೀಸಲಾಗಿರಿಸಿದರು. ವೆಂಕಟನಾರಣಪ್ಪನವರು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣಕ್ಕೆ ಒಳ್ಳೆಯ ಬುನಾದಿಯನ್ನು ಹಾಕಿದರು.

ವಿಜ್ಞಾನ ಸಾಹಿತ್ಯ ರಚನೆ ಮತ್ತು ಪ್ರಚಾರಗಳಿಗೆಂದೇ ಇವರು ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿಯನ್ನು ಸ್ಥಾಪಿಸಿದರು. ‘ವಿಜ್ಞಾನ, ಎಂಬ ಮಾಸಪತ್ರಿಕೆಯನ್ನು ಆರಂಬಿಸಿ, ಆ ಪತ್ರಿಕೆಗಾಗಿ ಅನೇಕ ಲೇಖನಗಳನ್ನು ಬರೆದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ, ಗೌರವ ಕೋಶಾದಿಕಾರಿಗಳಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಕನ್ನಡ ನಿಘಂಟಿಗೆ ಇವರು ಮೊದಲ ಪ್ರಧಾನ ಸಂಪಾದಕರಾಗಿದ್ದರು. ಜೀವವಿಜ್ಞಾನ, ಗುಣಸಾಗರ ಮತ್ತು ಕನ್ನಡ ಐದನೆಯ ಪುಸ್ತಕ, ಎಂಬ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಪಂಪಭಾರತ, ಪಂಪರಾಮಾಯಣ, ಶಬ್ದಮಣಿದರ್ಪಣ, ಸೋಮೇಶ್ವರಶತಕ, ಮತ್ತು ಕುಸುಮಾವಳಿ, ಗ್ರಂಥಗಳನ್ನು ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಇವರು ಸಲ್ಲಿಸಿದ ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಗೆ ಮನ್ನಣೆ ಎಂಬಂತೆ ಹಲವು ಬಗೆಯ ಪ್ರಶಸ್ತಿಗಳು ಇವರಿಗೆ ಲಬಿಸಿವೆ. ಜಮಖಂಡಿಯಲ್ಲಿ ೧೯೩೭ ರಲ್ಲಿ ನಡೆದ ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೈಸೂರು ಮಹಾರಾಜರ ಸರ್ಕಾರ ಇವರಿಗೆ ರಾಜಸೇವಾಸಕ್ತ ಎಂಬ ಬಿರುದನ್ನು ನೀಡಿ ಗೌರವಿಸಿತು. ಕನ್ನಡ ಸಾಹಿತ್ಯ ಪರಿಷತ್ತು ಇವರ ಜೀವನ ಚರಿತ್ರೆಯೊಂದನ್ನು ಪ್ರಕಟಿಸಿದೆ. ಹೀಗೆ ಕನ್ನಡಕ್ಕೆ ಸಲ್ಲಿಸಿದ ಅವರ ಸೇವೆ ಅಪೂರ್ವವಾದುದು.