ಸುರಂಗದ ನೀರು ಟ್ಯಾಂಕಿಗಳಲ್ಲಿ ಸಂಗ್ರಹ

ಎರಡು ಎಕರೆ ಜಾಗ. ಪೂರ್ತಿ ಇಳಿಜಾರು. ನೀರಿಲ್ಲ, ಮರ- ಗಿಡಗಳಿಲ್ಲ. ಪೊದರುಗಳಂತೂ ಇಲ್ಲವೇ ಇಲ್ಲ. ಮನೆ ಕಟ್ಟಲು ಅಸಾಧ್ಯ. ಸಮತಟ್ಟು ಮಾಡದೆ ಕೃಷಿಯಂತೂ ದೂರದ ಮಾತು- ಇದು ಮೂವತ್ತೇಳು ವರುಷದ ಹಿಂದೆ ಮಹಾಲಿಂಗ ನಾಯ್ಕರು ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕ ಸಮೀಪದ ‘ಅಮೈ’ ಎಂಬ ಗುಡ್ಡದಲ್ಲಿ ನಿಂತಾಗ ಕಂಡ ದೃಶ್ಯ.

ಮಹಾಲಿಂಗ ನಾಯ್ಕರು ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದರು. ಸಂಸಾರದ ಭಾರ ಹೆಗಲಿಗೆ ಬಿತ್ತು. ದುಡಿಯುವುದು ಅನಿವಾರ್ಯವಾಯಿತು. ಮಡದಿ, ಮಕ್ಕಳನ್ನು ಸಾಕುವ ಜವಾಬ್ದಾರಿ ಮತ್ತೊಂದೆಡೆ. ಸುತ್ತ-ಮುತ್ತ ಕೂಲಿ ಕೆಲಸ ಮಾಡಿ ಬದುಕು ಹೇಗೇಗೋ ಸಾಗುತ್ತಿತ್ತು.

ನಾಯ್ಕರ ಕಾಯಕಷ್ಟವನ್ನು ನೋಡಿದ ಅಮೈ ಮಹಾಬಲ ಭಟ್ಟರ ಬೆಂಬಲದಿಂದಾಗಿ ಎರಡೆಕರೆ ಗುಡ್ಡವು ‘ದರ್ಖಾಸ್ತು’ ರೂಪದಲ್ಲಿ ಪ್ರಾಪ್ತವಾಯಿತು. ‘ಇಲ್ಲೇ ಭವಿಷ್ಯದ ಬದುಕಿಗೆ ನೆಲೆಯಾಗಬೇಕು’ ಎಂಬ ಕನಸನ್ನು ಕಟ್ಟಿಕೊಂಡರು. ತೆಂಗಿನ ಗರಿಯಿಂದ ಗುಡ್ಡದ ತುದಿಯಲ್ಲಿ ಚಿಕ್ಕ ಸೂರು. ಬದುಕಿಗಾಗಿ ದಿನದಲ್ಲಿ ಅರ್ಧ ದಿವಸ ಕೂಲಿ. ಉಳಿದರ್ಧ ದಿವಸ ಗುಡ್ಡವನ್ನು ಸಮತಟ್ಟು ಮಾಡುವ ದುಡಿಮೆ.

ಅಗೆದ ಮಣ್ಣನ್ನೂ ಕಾಪಾಡುವುದು ಜತೆ- ಜತೆಗೆ ಆಗಬೇಕಾದ ಕೆಲಸ. ಇಲ್ಲದಿದ್ದರೆ ಮಳೆಗಾಲದಲ್ಲಿ ಮಣ್ಣು ಕೊಚ್ಚಿಹೋಗಿ ಇನ್ನಷ್ಟು ರಾದ್ಧಾಂತ ನಿಶ್ಚಿತವಾಗಿತ್ತು. ಇದಕ್ಕಾಗಿ ಕಲ್ಲಿನ ‘ಕಟ್ಟಪುಣಿ’ಯ (ತಡೆಗಟ್ಟ) ರಚನೆ. ಕೂಲಿ ಕೆಲಸಕ್ಕಾಗಿ ಕೆಳಭಾಗದಲ್ಲಿರುವ ತೋಟಗಳಿಗೆ ದಿನಕ್ಕೊಮ್ಮೆ ಇಳಿಯಲೇ ಬೇಕಾಗಿತ್ತಲ್ಲಾ. ಹೀಗೆ ಕೂಲಿ ಕೆಲಸ ಮಾಡಿ ಮರಳುವಾಗಲೆಲ್ಲಾ ತಪ್ಪಲಿನಲ್ಲಿದ್ದ ಕಲ್ಲುಗಳನ್ನು ಹೊತ್ತು ಮೇಲೇರುತ್ತಿದ್ದರು. ದಿನಕ್ಕೆರಡರಂತೆ ಕಲ್ಲುಗಳು ಗುಡ್ಡ ತಲುಪುತ್ತಿದ್ದುವು. ಸುಮಾರು 50- 60 ಕಲ್ಲುಗಳಾಗುವಾಗ ಕಟ್ಟಪುಣಿ ರಚನೆ. ಮತ್ತೆ ಪುನಃ ಕಲ್ಲು ಸಾಗಾಟ. ಹೀಗೆ ಇಂಚಿಂಚು ಕೆಲಸ.

ಅಡಿಕೆ ಮರಕ್ಕೆ ನೀರುಣಿಕೆ

ಗುಡ್ಡದಲ್ಲೀಗ ಇಂತಹ ಏಳು ತಟ್ಟುಗಳ ರಚನೆಗಳಿವೆ. ಕೆಲವೆಡೆ ಇವು ಒಂದಾಳು ಎತ್ತರ ಮೀರಿವೆ. ‘ಒಟ್ಟೂ ಕಟ್ಟಪುಣಿಯ ಉದ್ದ ಸರಿಸುಮಾರು ಇನ್ನೂರೈವತ್ತು ಮೀಟರ್, ಎತ್ತರ ಎರಡು ಮೀಟರಿನಂತೆ ಹಿಡಿದರೂ, ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಮೀರಿದ ದುಡಿತ!’

ಗುಡ್ಡಕ್ಕೆ ಕನ್ನ!

ಗುಡ್ಡದಲ್ಲಿ ನೀರಿಗೆ ತತ್ವಾರ. ತೆರೆದ ಬಾವಿ ತೋಡಿದರೂ ನೀರು ಸಿಕ್ಕದಂತಹ ಸ್ಥಿತಿ. ನಾಲ್ಕು ಫರ್ಲಾಂಗು ದೂರದಿಂದ ನೀರನ್ನು ಬಿಂದಿಗೆಯಲ್ಲಿ ಹೊತ್ತು ತಂದು ಗಿಡಗಳಿಗೆ ಉಣಿಕೆ. ‘ಇದು ಎಷ್ಟು ದಿನಾ ಅಂತ ಮಾಡಬಹುದು’ – ಎಂಬ ಆಲೋಚನೆಯಲ್ಲಿದ್ದಾಗ ಅವರಿಗೆ ಹೊಳೆದುದು ಸುರಂಗ ಕೊರೆತ! ಅರ್ಧ ದಿವಸ ಕೂಲಿ, ಉಳಿದರ್ಧ ದಿವಸದಲ್ಲಿ ಸುರಂಗ ಕೊರೆತ. ಸೀಮೆಎಣ್ಣೆ ಬುಡ್ಡಿ ಇಟ್ಟು ರಾತ್ರಿ ಕೂಡಾ! ದಿನಕ್ಕೆ ಆರು ಗಂಟೆಗಳ ಕಠಿಣ ಶ್ರಮ. ಮೊದಲ ಸುರಂಗ ಕೈಕೊಟ್ಟಾಗ ನಾಯ್ಕರ ಛಲ ಹೆಚ್ಚಾಯಿತೇ ವಿನಾ, ಅಧೀರರಾಗಲಿಲ್ಲ. ಮತ್ತೊಂದು, ಇನ್ನೊಂದು ಎನ್ನುತ್ತಾ ಮೂರು ಸುರಂಗಗಳನ್ನು ಕೊರೆದರು. ಗಂಗೆಯ ಕಣ್ಣಾಮುಚ್ಚಾಲೆ! ಗೇಲಿಯಾಡುವವರ ಭವಿಷ್ಯ ಸತ್ಯವಾಯಿತು!

‘ನನ್ನ ಗುಡ್ಡ ಜಾಗದಲ್ಲಿ ನೀರು ಪಡೆದೇ ಪಡೆಯುತ್ತೇನೆ ಎಂಬ ಛಲ’ ನಾಯ್ಕರನ್ನು ನಾಲ್ಕನೆ ಸುರಂಗದ ಕೊರೆತಕ್ಕೆ ಸಜ್ಜು ಮಾಡಿತು. ಇಪ್ಪತ್ತೈದು ಕೋಲು(ಒಂದು ಕೋಲು ಎಂದರೆ ಎರಡೂವರೆ ಅಡಿ) ಸುರಂಗ ಕೊರೆತ ಸಾಗುತ್ತಿದ್ದಂತೆ ನಾಯ್ಕರ ಬೆವರ ಶ್ರಮಕ್ಕೆ ಭಾಗೀರಥಿ ಒಲಿದಳು.

ಇಲ್ಲಿನ ಸುರಂಗದ ಮೇಲ್ಬದಿಯಲ್ಲಿ ನೀರಿನ ಒಸರು ಕಂಡ ನಾಯ್ಕರು, ಇನ್ನೂ ಮೇಲ್ಬದಿಯಲ್ಲಿ ತೋಡಿದರೆ ಹೆಚ್ಚು ನೀರು ಸಿಗಬಹುದು ಎನ್ನುತ್ತಾ ಮತ್ತೊಂದು ಸುರಂಗವನ್ನು ಕೊರೆದರು. ಯಥೇಚ್ಛ ನೀರು! ಈ ಸುರಂಗದ ಉದ್ದ ಒಂದುನೂರ ಇಪ್ಪತ್ತೈದು ಕೋಲು! ಇಲ್ಲೇ ಮಣ್ಣಿನ ಟ್ಯಾಂಕಿ ಮಾಡಿ ನೀರನ್ನು ಸಂಗ್ರಹಿಸಿದ್ದಾರೆ. ಇಷ್ಟೆಲ್ಲಾ ಸುರಂಗ ರಚನೆಯಾಗುವಾಗ ಕೆಲವು ವರ್ಷಗಳೇ ಸಂದುಹೋಗಿದ್ದವು.

ಸುರಂಗದ ಮುಂದೆ ಮಹಾಲಿಂಗ ನಾಯ್ಕ

ಮನೆಯ ಹಿಂಬದಿಯಲ್ಲೂ ಸುರಂಗ ಕೊರೆದು, ಅ ನೀರೂ ಫೆರೋಸಿಮೆಂಟ್ ಟ್ಯಾಂಕಿಯಲ್ಲಿ ಸಂಗ್ರಹ. ಎರಡು ತಟ್ಟುಗಳಲ್ಲಿದ್ದ ತೋಟಕ್ಕೆ ಗ್ರಾವಿಟಿ ಮೂಲಕ ತುಂತುರು ನೀರಾವರಿ. ಮತ್ತೊಂದಕ್ಕೆ ಹೋಸ್ ಇರಿಗೇಶನ್. ನೀರಿನ ಸಂಪನ್ನತೆಯಿಂದಾಗಿ ತೋಟ ಎಬ್ಬಿಸುವ ನಾಯ್ಕರ ಕನಸು ರೂಪ ಪಡೆಯಿತು. ಐದು ತಟ್ಟುಗಳ ಪೈಕಿ ನಾಲ್ಕರಲ್ಲಿ ಅಡಿಕೆ, ಇನ್ನೊಂದರಲ್ಲಿ ತೆಂಗು ತೋಟ. ಸುಮಾರು ಮುನ್ನೂರು ಅಡಿಕೆ ಮರಗಳು. ಟ್ಯಾಂಕಿಯಿಂದ ನೀರು ಗ್ರಾವಿಟಿಯಲ್ಲಿ ಹರಿದು ಬರುತ್ತದೆ. ಹಟ್ಟಿ ಗೊಬ್ಬರ, ಕಾಂಪೋಸ್ಟ್ ಹೊರತು ಮತ್ಯಾವ ಗೊಬ್ಬರವೂ ನಾಯ್ಕರಿಗೆ ಗೊತ್ತಿಲ್ಲ!

ಕೈತೊಳೆದ ನೀರು, ಸ್ನಾನದ ನೀರನ್ನು ಕೆಳಗಿನ ತೋಟದ ಸ್ವಲ್ಪ ಎತ್ತರದಲ್ಲೇ ಮೂರೂವರೆ ಸಾವಿರ ಲೀಟರಿನ ಟ್ಯಾಂಕಿಯಲ್ಲಿ ಸಂಗ್ರಹ. ವಾರಕ್ಕೊಮ್ಮೆ ಇದು ಭರ್ತಿಯಾಗುತ್ತದೆ. ‘ನೂರು ಅಡಿಕೆ ಮರಗಳಿಗೆ ಈ ನೀರು ಧಾರಾಳ ಸಾಕು’ ಎನ್ನುತ್ತಾರೆ ನಾಯ್ಕರು. ಅವರ ಭೂಮಿಯ ಮೇಲ್ಬಾಗದಲ್ಲಿ ಸರ್ಕಾರಿ ಸ್ವಾಮ್ಯದ ಗೇರು ತೋಟವಿದೆ. ಅಲ್ಲೂ ಇಂಗುಗುಂಡಿಗಳನ್ನು ರಚಿಸಿ, ಮಳೆನೀರನ್ನು ಹಿಡಿದಿಟ್ಟು ಇಂಗಿಸುತ್ತಾರೆ.

ಶ್ರಮಕ್ಕೆ ತಕ್ಕ ಪ್ರತಿಫಲ

ಗುಡ್ಡ ಜಮೀನಿನ ತಟ್ಟಿನಲ್ಲಿ ದಶಕದ ಕಾಲ ಭತ್ತದ ಬೇಸಾಯ ಮಾಡಿದ ದಿನವನ್ನು ನಾಯ್ಕರು ನೆನಪಿಸಿಕೊಳ್ಳುತ್ತಾರೆ. “ಕೋಣವನ್ನು ಕಟ್ಟಿ ಹೂಟೆ ಮಾಡಲಿಲ್ಲ. ಸ್ವತಃ ಗುದ್ದಲಿ, ಹಾರೆಯಿಂದ ಉಳುಮೆ. ದೊಡ್ಡ- ದೊಡ್ಡ ಮಣ್ಣಿನ ಹೆಂಟೆ ಸಿಕ್ಕಾಗ ಮಕ್ಕಳಾದ ರಘುನಾಥ, ಬಾಲಕೃಷ್ಣ, ಶಾರದೆ ಅದನ್ನು ಕಾಲಿನಿಂದಲೇ ಪುಡಿಗಟ್ಟುತ್ತಿದ್ದರು. ಹೀಗೆ ಮಾಡಿ ವರುಷಕ್ಕೆ ಹತ್ತು ಮುಡಿ ಭತ್ತ ಪಡೆದಿದ್ದೇನೆ. ಬಳಿಕ ಅವರಿಗೆ ಕಷ್ಟವಾದಾಗ ಭತ್ತದ ಬೇಸಾಯವನ್ನೇ ನಿಲ್ಲಿಸಿ ಅಡಿಕೆ ಸಸಿ ಹಾಕಿದ್ದೇನೆ”. ಇದೀಗ ಜಮೀನಿನ ಪಕ್ಕದ ಚಿಕ್ಕ ಗದ್ದೆಯಲ್ಲಿ ಮಾತ್ರ ಭತ್ತದ ಬೇಸಾಯ ಮಾಡುತ್ತಾರೆ. ಬೇಸಿಗೆಯಲ್ಲಿ ಇಲ್ಲೇ ತರಕಾರಿ ಬೆಳೆಯುತ್ತಾರೆ ಕೂಡ.

“ಫಸಲು ನೀಡುವ ಇನ್ನೂರೈವತ್ತು ಅಡಿಕೆ ಮರಗಳಲ್ಲಿ ಮೂರೂವರೆ ಕ್ವಿಂಟಾಲ್ ಅಡಿಕೆ; ನಲವತ್ತು ತೆಂಗಿನ ಮರಗಳಲ್ಲಿ ಒಂದು ಸಾವಿರದ ಐನೂರಕ್ಕೂ ಮಿಕ್ಕಿ ತೆಂಗಿನಕಾಯಿ, ಕಾಳುಮೆಣಸು, ಗೇರು.. ಹೀಗೆ ಉತ್ಪತ್ತಿ. ಮನೆ ಬಳಕೆಗೆ ತರಕಾರಿಯಿದೆ. ನನ್ನ ಜೀವನಕ್ಕೆ ತೊಂದರೆಯಿಲ್ಲ. ಯಾರಿಂದಲೂ ಸಾಲ ಮಾಡಿಲ್ಲ. ನಾನು ಮತ್ತು ನನ್ನ ಹೆಂಡತಿ ದಣಿವರಿಯದೆ ದುಡಿದಿದ್ದೇವೆ. ಅದರ ಪ್ರತಿಫಲ ಈಗ ಉಣ್ಣುತ್ತಿದ್ದೇವೆ” ಎಂದು ಸಂತೋಷದಿಂದ ಹೇಳುತ್ತಾರೆ ಮಹಾಲಿಂಗ ನಾಯ್ಕರು.

2001ರಲ್ಲಿ ಸ್ವಂತ ಮನೆ ಕಟ್ಟಿದರು. ಮನೆ ಸನಿಹವೇ ದನದ ಕೊಟ್ಟಿಗೆ. ತನ್ನ ಮನೆ ವರೆಗೆ ರಸ್ತೆ, ದೂರವಾಣಿ, ಟಿವಿ.. ಹೀಗೆ ಬದುಕಿಗೆ ಬೇಕಾದ ಎಲ್ಲವನ್ನೂ ನಾಯ್ಕರಿಗೆ ‘ದುಡಿಮೆ’ ಸಂಪಾದಿಸಿಕೊಟ್ಟಿದೆ. ಮಡದಿ ಲಲಿತಾ, ನಾಯ್ಕರ ದುಡಿಮೆಯ ಪ್ರೇರಕ ಶಕ್ತಿ. ಗಂಡನ ದಾರಿಯಲ್ಲಿ ಸಾಗುವ ಗೃಹಿಣಿ.

ಬೋಳು ಗುಡ್ಡದ ಮೇಲೆ ನೀರಿನ ಸಂಪನ್ಮೂಲವನ್ನು ನೋಡಲು ಬರುವ ರೈತರಿಗೆ ನಾಯ್ಕರು ಹೇಳುವುದು ಒಂದೇ ಮಾತು; “ಮಳೆ ನೀರನ್ನು ಇಂಗಿಸಿ”. ಇದು ಅವರಿಗೆ ಹೇಳಿ ಕೊಟ್ಟ ಮಾತಲ್ಲ. ಅನುಭವದಿಂದ ಕಲಿತ ಪಾಠ.

ಹತ್ತು ವರುಷದ ಹಿಂದೆ ತೆಂಗಿನ ಮರದಿಂದ ಬಿದ್ದು ಗಾಯ ಮಾಡಿಕೊಂಡಿದ್ದರು. ಎರಡ್ಮೂರು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ. “ದುಡಿದು ಉಳಿಸಿದ್ದು ಆ ಕಾಲಕ್ಕೆ ಬಳಕೆಯಾಯಿತು” ಎನ್ನುತ್ತಾರೆ. ಅಲ್ಲಿಂದ ನಂತರ ಕೂಲಿಗೆ ಹೋಗಲಾಗುತ್ತಿಲ್ಲ. ಸೊಂಟದ ತ್ರಾಣ ಕುಂಠಿತವಾಯಿತು. ಮರ ಏರಲು ಅಸಾಧ್ಯ. “ಮೊದಲಿನಂತೆ ಅಡಿಕೆ ಮರ ಏರಲು ಅಗುತ್ತಿಲ್ಲವಲ್ಲಾ” ಎಂಬ ಕೊರಗು ಸ್ವಲ್ಪ ದಿವಸ ನಾಯ್ಕರನ್ನು ಬಾಧಿಸಿದರೂ, ತನ್ನ ಜಮೀನಿನಲ್ಲೇ ದುಡಿಯುತ್ತಾ ಆ ನೋವನ್ನು ಮರೆತರು!

ತಾವೇ ನಿರ್ಮಿಸಿದ ಕಟ್ಟಪುಡಿ ಬಳಿ ನಾಯ್ಕರು

‘ಆದಾಯದಷ್ಟೇ ಖರ್ಚು’ ನಾಯ್ಕರ ಶ್ರಮ ಬದುಕಿನ ಯಶಸ್ವೀ ಸೂತ್ರ. ಕನಿಷ್ಠ ಐದು ರೂಪಾಯಿಯಾದರೂ ದಿನದ ಕೊನೆಗೆ ಉಳಿಯಬೇಕು. ಇದಕ್ಕೆ ತಕ್ಕಂತೆ ನಿತ್ಯದ ಆದಾಯ- ಖರ್ಚಿನ ಯೋಜನೆ ರೂಪಿಸುತ್ತಾರೆ. ‘ಪರರ ಹಂಗು ಬೇಡ. ತನ್ನ ಕಾಲ ಮೇಲೆ ನಿಲ್ಲ್ಲಬೇಕೆಂಬ ಪಾಲಿಸಿ’.

ನಾಯ್ಕರಿಗೆ ಸುಮ್ಮನೆ ಕೂರುವುದೆಂದರೆ ಅಲರ್ಜಿ. ದುಡಿಯುತ್ತಾ ಇರುವುದು ಜಾಯಮಾನ. ಅನಾವಶ್ಯಕ ಹರಟೆಯಿಲ್ಲ. ಪರದೂಷಣೆಯಿಲ್ಲ. ಲೋಕದಲ್ಲಿ ಏನಾಗುತ್ತದೆ ಎಂಬುದು ಟಿವಿಯಿಂದ ಅರಿತರೂ, ‘ತನಗೇನು ಬೇಕು’ ಎಂಬ ಅರಿವಿನ ಅಲಾರಂ ಓಡುತ್ತದೆ. ಮನೆ ಕಟ್ಟುವಾಗ ಸಂಬಂಧಿಕರಿಂದ ಒಂದಷ್ಟು ಕೈಕಡ ಪಡೆದುದು ಬಿಟ್ಟರೆ ಮಿಕ್ಕಂತೆ ಸಾಲಕ್ಕಾಗಿ ಬ್ಯಾಂಕಿಗೆ ಅಲೆದಿಲ್ಲ; ಸಬ್ಸಿಡಿ, ಸಹಾಯಧನಕ್ಕಾಗಿ ಕಚೇರಿಗಳಿಗೆ ತಿರುಗಾಡಿಲ್ಲ.

ವಾರಣಾಶಿ ಸಂಶೋಧನಾ ಪ್ರತಿಷ್ಠಾನವು ಇವರಿಗೆ ‘ವರುಷದ ವ್ಯಕ್ತಿ’ ಪುರಸ್ಕಾರ ನೀಡಿ ಸನ್ಮಾನಿಸಿದೆ. ನೀರಿನ ಸಮರ್ಥ ಬಳಕೆಗಾಗಿ ಕರ್ನಾಟಕ ಸರಕಾರವು ಎರಡು ವರುಷದ ಹಿಂದೆ ‘ಕೃಷಿ ಪಂಡಿತ ಪ್ರಶಸ್ತಿ’ ನೀಡಿದೆ. ನಾಯ್ಕರ ಏಕವ್ಯಕ್ತಿ ಸಾಧನೆಯನ್ನು ದೂರದರ್ಶನ ತನ್ನ ‘ವಾಟರ್ ವಾರಿಯರ್’ ಧಾರಾವಾಹಿಯಲ್ಲಿ ಬಿತ್ತರಿಸಿದೆ.

ನಾಯ್ಕರ ಕೃಷಿಯಲ್ಲಿ ಕಣ್ಣಿಗೆ ಕಾಣುವಂತಾದ್ದು ಏನಿಲ್ಲವಿರಬಹುದು. ಆದರೆ ‘ಬದುಕೇ ಛಲ’ವಾಗಿ, ಬೋಳು ಗುಡ್ಡದಲ್ಲಿ ಹಸಿರೆಬ್ಬಿಸಿದ, ನೀರುಕ್ಕಿಸಿದ, ಇದ್ದ ಉತ್ಪತ್ತಿಯಲ್ಲಿ ನಗುನಗುತ್ತಾ ಬದುಕುವ ನಾಯ್ಕರ ಕುಟುಂಬದ ‘ಸ್ವಾವಲಂಬಿ ಜೀವನ’ದಲ್ಲಿ ಮಹತ್ತಿದೆ.