ನಾವು ಶ್ರಮವಹಿಸಿ ಕೆಲಸ ಮಾಡಿದಾಗ, ಆಟವಾಡಿದಾಗ, ಪರಿಸರದ ತಾಪಮಾನ ಹೆಚ್ಚಿದಾಗ, ಜ್ವರ ಪೀಡಿತರಾಗಿದ್ದಾಗ ನಮ್ಮ ಮೈ ಬೆವರುವದನ್ನು ನಾವೆಲ್ಲ ಅನುಭವಿಸುತ್ತೇವೆ.

ತ್ವಚೆಯು ದೇಹದಲ್ಲಿನ ನೀರಿನಂಶವನ್ನು ಹೊರಗೆ ಹಾಕುವದೇ ಬೆವರು. ನಮ್ಮ ಅನುಭವಕ್ಕೆ ಬರದಿದ್ದರೂ ನಮ್ಮ ತ್ವಚೆ ದಿನಂಪ್ರತಿ ಬೆವರನ್ನು ಅಲ್ಪ ಪ್ರಮಾಣದಲ್ಲಿ ಹೊರಹಾಕುತ್ತದೆ. ಇದಕ್ಕೆ ಅಗ್ರಾಹ್ಯ (insensible perspiration) ಬೆವರುವಿಕೆ ಎನ್ನುತ್ತಾರೆ.

ದೇಹದ ತಾಪಮಾನವನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸಲು ತ್ವಚೆ ನೀರಿನಂಶವನ್ನು ಬೆವರಿನ ರೂಪದಲ್ಲಿ ಹೊರಹಾಕುತ್ತದೆ. ತ್ವಚೆಯಮೇಲೆ ಸಂಗ್ರಹವಾದ ಬೆವರು ತ್ವಚೆಯಲ್ಲಿನ ಉಷ್ಣತೆಯಿಂದ ಆವಿಯಾಗಿ ಹೊರ ವಾತಾವರಣ ಸೇರುವದು. ಹೀಗೆ ಬೆವರು ದೇಹದ ತಾಪಮಾನವನ್ನು ಕಡಿಮೆ ಮಾಡುವದು.

ಸಾಮಾನ್ಯವಾಗಿ ಪುರುಷರು ಸ್ತ್ರೀಯರಿಗಿಂತ ಹೆಚ್ಚು ಬೆವರು ಸುರಿಸುತ್ತಾರೆ. ಉಷ್ಣವಲಯದಲ್ಲಿನ ಜನರು ತಂಪು ಪ್ರದೇಶದ ನಿವಾಸಿಗಳಿಗಿಂತ ಹೆಚ್ಚು ಬೆವರು ಸುರಿಸುತ್ತಾರೆ. ಶ್ರಮಜೀವಿಗಳು ಇತರರಿಗಿಂತ ಹೆಚ್ಚು ಬೆವರು ಸುರಿಸುತ್ತಾರೆ.

ತ್ವಚೆಯ ಚಿತ್ರ ನೋಡಿರಿ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಕಾಣುವ ಒಳತ್ವಚೆಯಲ್ಲಿ ಬೆವರಿನ ಗ್ರಂಥಿಗಳಿವೆ. ಈ ಗ್ರಂಥಿಗಳು ಸುರುಳಿಯಾಕಾರದಲ್ಲಿದ್ದು ಅವುಗಳ ನಾಳ ಮೇಲಕ್ಕೆ ಸಾಗುತ್ತ ಅವುಗಳ ರಂಧ್ರ ಬಾಹ್ಯ ತ್ವಚೆಯಮೇಲೆ ತೆರೆದಿರುತ್ತದೆ. ಒಳತ್ವಚೆಯಲ್ಲಿರುವ ಬೆವರು ಗ್ರಂಥಿಗಳು ರಚನಾತ್ಮಕವಾಗಿ ಎರಡು ಪ್ರಕಾರದಲ್ಲಿವೆ. (೧) ಹೊರಸುರಿಕ (eccrine sweat gland) ಚಿತ್ರದಲ್ಲಿ ತೋರಿಸಿದಂತೆ ಈ ಗ್ರಂಥಿಗಳ ನಾಳದ ಬಾಯಿ ಹೊರತ್ವಚೆಯ ಮೇಲೆ ತೆರೆದಿರುತ್ತದೆ. ಈ ಗ್ರಂಥಿಗಳಿಂದ ಹೊರಬಿದ್ದ ಬೆವರು ನಾಳದಲ್ಲಿ ಹರಿದು ನೇರವಾಗಿ ಹೊರತ್ವಚೆಯಮೇಲೆ ಹರಿಯುವದು. ಅಂಗೈ, ಅಂಗಾಲುಗಳಲ್ಲಿ ಈ ಬಗೆಯ ಗ್ರಂಥಿಗಳು ಹೆಚ್ಚಿಗೆ ಇವೆ. (೨) ಕೋಶಸುರಿಕ ಬೆವರು ಗ್ರಂಥಿ (apocrine sweat gland) ಎರಡನೆಯ ಬಗೆಯ ಬೆವರು ಗ್ರಂಥಿ. ಈ ಬಗೆಯ ಬೆವರು ಗ್ರಂಥಿಯ ನಾಳದ ಬಾಯಿ ಕೂದಲಿನ ಕಾಂಡಕ್ಕೆ ಅಂಟಿಕೊಂಡಿರುತ್ತದೆ. ಕೂದಲಿನ ಕಾಂಡದ ಸನಿಹದಲ್ಲಿ ವಸತಿ ಮಾಡಿಕೊಂಡಿರುವ ಕೆಲವು ಬಗೆಯ ಜೀವಾಣುಗಳು (bacteria) ಈ ಗ್ರಂಥಿಗಳ ಬೆವರಿನ ಮೇಲೆ ಮಾಡುವ ತಮ್ಮ ರಾಸಾಯನಿಕ ಕ್ರಿಯೆಯಿಂದ ಬೆವರಿಗೆ ವಾಸನೆ ತರುತ್ತವೆ. ಈ ಜೀವಾಣುಗಳು ರೋಗಜನಕ ಜೀವಾಣುಗಳಲ್ಲ. ಕಂಕುಳು, ತೊಡೆಯಸಂದು ಮುಂತಾದ ದೇಹದ ರೋಮಮಯ ತ್ವಚೆಯ ಭಾಗದಲ್ಲಿ ಈ ಬಗೆಯ ಬೆವರು ಗ್ರಂಥಿಗಳು ಹೆಚ್ಚಿನ ಪ್ರಮಾಣದಲ್ಲಿವೆ.

ತಲೆಬುರುಡೆಯಲ್ಲಿರುವ ಮಿದುಳಿನ (brain) ಒಂದು ಭಾಗವಾದ ಹೈಪೊಥಲಮಸ್ (hypothalamas) ದೇಹದ ತಾಪಮಾನ ಕಾಯ್ದುಕೊಳ್ಳಲು ಸದಾ ಪ್ರಯತ್ನಿಸುತ್ತದೆ. ಇದರಲ್ಲಿ ತಾಪಮಾನವನ್ನು ಗುರುತಿಸುವ ವಿಶಿಷ್ಟ ಬಗೆಯ ನರಕೋಶಗಳಿವೆ. ತಾಪಮಾನಕ್ಕನುಗುಣವಾಗಿ ಈ ನರಕೋಶಗಳು ಹೊರಡಿಸುವ ನರಸಂವೇದನೆಗಳು ವಿವಿಧ ನರಗಳ ಮುಖಾಂತರ ಪ್ರವಹಿಸಿ ತ್ವಚೆಯಲ್ಲಿನ ಬೆವರು ಗ್ರಂಥಿಗಳಿಗೆ ತಲಪುತ್ತವೆ. ಅದಕ್ಕೆ ಪ್ರತಿಕ್ರಿಯಿಸಿ ಬೆವರು ಗ್ರಂಥಿಗಳು ಬೆವರು ಸುರಿಸುತ್ತವೆ. ತ್ವಚೆಯಮೇಲೆ ಸಂಗ್ರಹವಾದ ಈ ನೀರು ಆವಿಯಾಗಿ ವಾತಾವರಣ ಸೇರುವ ಮುನ್ನ ಅದನ್ನು ನಾವು ಕಾಣುತ್ತೇವೆ. ದೇಹದ ತಾಪಮಾನ ಹೆಚ್ಚಿದಾಗ (ಜ್ವರಪೀಡಿತರಾದಾಗ), ಬಾಹ್ಯಪರಿಸರದ ತಾಪಮಾನ ಹೆಚ್ಚಿದಾಗ ಅತ್ಯಂತ ಹೆಚ್ಚಿನ ಶ್ರಮದಾಯಕ ಕೆಲಸ ಮಾಡಿದಾಗ ಬೆವರು ಹೆಚ್ಚು ಸ್ರವಿಸಲ್ಪಡುತ್ತದೆ.

ತ್ವಚೆಯಲ್ಲಿ ಎಲ್ಲೆಡೆಗೆ ಇರುವ ಒಟ್ಟು ಬೆವರು ಗ್ರಂಥಿಗಳು ಸುಮಾರು ೨೦-೩೦ ಲಕ್ಷ (೨-೩ ಮಿಲಿಯನ್) ಎಂದು ತಜ್ಞರು ಲೆಕ್ಕ ಹಾಕಿದ್ದಾರೆ. ಅಂಗೈ, ಅಂಗಾಲು, ಕಂಕುಳು, ತೊಡೆಯ ಸಂದುಗಳಲ್ಲಿ ಇವು ಹೆಚ್ಚು ಕೇಂದ್ರಿತವಾಗಿವೆ.

ಬೆವರು ಮುಖ್ಯವಾಗಿ ನೀರು. ಆದರೆ ಅದರಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸೋಡಿಯಂ ಕ್ಲೋರಾಯ್ಡ್, ಲ್ಯಾಕ್ಟೇಟ್, ಯೂರಿಯ, ಅಮೋನಿಯಾ ರಾಸಾಯನಿಕಗಳು ಇವೆ.

ಕ್ವಚಿತ್ತಾಗಿ ಕೆಲವು ರೋಗಗಳಲ್ಲಿ ಬೆವರು ಅಧಿಕ ಪ್ರಮಾಣದಲ್ಲಿ ಉತ್ಪಾದಿತವಾಗುತ್ತದೆ. ಉದಾಹರಣೆಗೆ ಸಕ್ಕರೆ ಕಾಯಿಲೆ, ಗಳಗ್ರಂಥಿಯ ರೋಗ (thyrotoxicosis). ಹೆಂಗಸರಲ್ಲಿ ಋತುಸ್ರಾವ ಸಂಪೂರ್ಣವಾಗಿ ನಿಂತ (menopause) ಋತುಬಂಧ ಅಥವಾ ಗತಾರ್ತವ ಘಟ್ಟದಲ್ಲಿ ಚೋದನಿಕಗಳ ಪ್ರಭಾವದಿಂದ ಬಿಸಿಬೆವರುವಿಕೆ (hot sweats) ಕೆಲವರಲ್ಲಿ ಹೆಚ್ಚಿಗೆ ಕಂಡುಬರುತ್ತದೆ.

ಬೆವರುವದು ನೈಸರ್ಗಿಕವಾದ ಕ್ರಿಯೆ. ದೇಹದ ತಾಪಮಾನ ಕಾಯ್ದುಕೊಳ್ಳಲು ತ್ವಚೆ ಮಾಡುವ ಕಾರ್ಯ. ಕೆಲವೊಮ್ಮೆ ಭಯ, ಕಾತರಗಳು (ಮಾನಸಿಕ) ಹೆಚ್ಚು ಬೆವರು ಉತ್ಪಾದಿಸಬಹುದಾಗಿದೆ. ಅಂಗೈ, ಅಂಗಾಲು ಮತ್ತು ಕಂಕುಳಿನಲ್ಲಿ ಇದು ಹೆಚ್ಚು ಕಂಡುಬರುತ್ತದೆ.

ಅತಿ ಕಾರದ ಆಹಾರ ತಿಂದಾಗ ಕೆಲವರು ಬೆವರುವದುಂಟು. ಇದಕ್ಕೆ  ರಸನೇಂದ್ರಿಯಜನ್ಯ (gustatory) ಬೆವರುವಿಕೆ ಎನ್ನುತ್ತಾರೆ. ಇದು ಮುಖ್ಯವಾಗಿ ಸ್ಥಾನಿಕವಾಗಿ ಮುಖದಮೇಲೆ ಕುತ್ತಿಗೆಯಮೇಲೆ ಕಂಡುಬರುತ್ತದೆ.

ಕೆಲವರಲ್ಲಿ ಅಕಾರಣವಾಗಿ (ರೋಗಗಳಿಲ್ಲದೇ, ತಾಪಮಾನಕ್ಕೆ ಸಂಬಧಿಸಿರದೇ) ಅತಿಬೆವರುವಿಕೆ ಅಗುವದು. (hyperhidrosis) ಇದು ಮುಖ್ಯವಾಗಿ ಅಂಗೈ ಮತ್ತು ಅಂಗಾಲುಗಳಲ್ಲಿ ಮತ್ತು ಕಂಕುಳಲ್ಲಿ ಕಾಣಿಸಿಕೊಳ್ಳುತ್ತದೆ. ಇಂಥವರು ಸಾಮಾಜಿಕ ಸಂದರ್ಭಗಳಲ್ಲಿ ಸಂಕೋಚಗಳುಂಟಾಗಿ ಮಾನಸಿಕ ತೊಂದರೆಗೀಡಾಗಬಹುದಾಗಿದೆ. ಇದಕ್ಕೆ ಕೆಲವು ಬಗೆಯ ಚಿಕಿತ್ಸೆಗಳು ಲಭ್ಯವಿದ್ದು ಅಂಥ ವ್ಯಕ್ತಿಗೆ  ಯಾವ ಚಿಕಿತ್ಸೆ ಸೂಕ್ತವೆಂದು ವೈದ್ಯರು ಹೇಳಬಹುದಾಗಿದೆ.

ಕೆಲವು ಅತ್ಯಂತ ವಿರಳ ರೋಗಗಳಲ್ಲಿ ಕಡಿಮೆ ಬೆವರು ಸುರಿಸುವ ಸಾಧ್ಯತೆ ಇದೆ. ಕೆಲವು ನರರೋಗಗಳಲ್ಲಿ  ದೇಹದ  ನಿರ್ದಿಷ್ಟ ಭಾಗದಲ್ಲಿ ಮಾತ್ರ ಬೆವರದಿರುವದು ಕಂಡುಬರುತ್ತದೆ.