ದೊಡ್ಡ ಬಂಡವಾಳ, ತುಂಬ ಕಾರ್ಮಿಕರು, ತಂತ್ರಜ್ಞಾನ, ಉಪಕರಣ ಬೇಕಿಲ್ಲ. ಶ್ರದ್ಧೆ ಮತ್ತು ಕಠಿಣ ದುಡಿಮೆ ಇದ್ದರೆ ಊರಲ್ಲಿ ಕೊಳೆತು ಹಾಳಾಗುವ ಹಲಸನ್ನು ಒಳ್ಳೆ ಆದಾಯಮೂಲವಾಗಿಸಬಹುದು. ಇದನ್ನು ತೋರಿಸಿಕೊಟ್ಟ ಶಿರಸಿಯ??ಎರಡು ಕುಟುಂಬಗಳ ಕತೆ ಇಲ್ಲಿದೆ. ಇನ್ನೊಂದಷ್ಟು ಉದ್ಯಮಶೀಲತೆ, ಬೆಂಬಲ ಸಿಕ್ಕರೆ ಹಳ್ಳಿಯ ಹಲಸು ದಿಲ್ಲಿ ಏಕೆ, ವಾಷಿಂಗ್ಟನ್, ಮಸ್ಕತ್‌ಗಳಲ್ಲೂ ಪರಿಮಳ ಸೂಸಲು ಸಾಧ್ಯವಿಲ್ಲವೇ ?

 ಹೊಸಹೊಸ ಕೃಷಿ ಎಷ್ಟು ಬಂದರೇನು?
ಬಡವರಿಗೆ ಬದುಕು ನೀಡಿದ್ದು ಹಲಸಲ್ಲವೇನು?’
    – ಶಿರಸಿ ಹಲಸು ಮೇಳ (೨೦೦೮)ಬ್ಯಾನರ್

ಒಳಗೆ ಮೇಳದಲ್ಲಿದ್ದ ಮೆಣಸಿಕೇರಿಯ ರೇಖಾ ಎಸ್. ಹೆಗಡೆ ಮುಖ ಹಿಗ್ಗಿತ್ತು. ಕಾರಣ : ‘ಒಂದೇ ದಿನ ಹದಿಮೂರು ಸಾವಿರದ ವ್ಯಾಪಾರವಾಯಿತು. ತಂದದ್ದೆಲ್ಲಾ ಖಾಲಿ. ಇಷ್ಟು ಬೇಗ ಖಾಲಿಯಾಗುತ್ತೇಂತ ಭಾವಿಸಿರಲಿಲ್ಲ.’ ಹಲಸಿನ ಋತು ಇರುವುದು ಅಬ್ಬಬ್ಬಾ ಅಂದರೆ ಮೂರ್ನಾಲ್ಕು ತಿಂಗಳು ಮಾತ್ರ. ಆದರೆ ಇವರ ಮನೆ ವರ್ಷವಿಡೀ ಹಲಸುಮಯ. ಬೇಕೆಂದಾಗಲೆಲ್ಲಾ ಹಪ್ಪಳ, ಚಿಪ್ಸ್ ರೆಡಿ.

ದಾರಿ ತೋರಿದ ಹಲಸು

ಶರಶ್ಚಂದ್ರ ವೆಂಕಟ್ರಮಣ ಹೆಗಡೆ (ಎಸ್.ವಿ.ಹೆಗಡೆ) ಶಿರಸಿ ಮೆಣಸಿನಕೇರಿಯ ಸಹಕಾರಿ ಸಂಸ್ಥೆಯೊಂದರಲ್ಲಿ ಸೇಲ್ಸ್‌ಮ್ಯಾನ್ ಉದ್ಯೋಗದಲ್ಲಿದ್ದರು.  ಕೂಡುಕುಟುಂಬ. ಹೇಗೋ ಸಂಸಾರ ಸಾಗುತ್ತಿತ್ತು. ಅಕಸ್ಮಾತ್ ಪತ್ನಿ ರೇಖಾ ಕಾಯಿಲೆ ಬಿದ್ದರು. ‘ಮುಗಿಯಿತು’ ಎನ್ನುವ ಆತಂಕದ ನಡುವೆಯೇ ಅದೃಷ್ಟದಿಂದ ಗುಣಮುಖರಾಗ ತೊಡಗಿದರು. ಅಷ್ಟರೊಳಗೆ ಲಕ್ಷದ ಹತ್ತಿರ ಸಾಲ. ಸಿಕ್ಕುವ ವೇತನ ಎಲ್ಲಿಗೂ ಸಾಕಾಗುತ್ತಿರಲಿಲ್ಲ. ನಿತ್ಯ ಆತಂಕ. ಏನಾದರೂ ಸ್ವಂತ ಮಾಡಬೇಕು ಎಂಬ ಕನಸಿನೊಂದಿಗೆ ಉದ್ಯೋಗಕ್ಕೆ ವಿದಾಯ.

ಮನೆಯೊಳಗೆ ನಡೆದಾಡುವಷ್ಟು ರೇಖಾ ಚೇತರಿಸಿದ್ದರಷ್ಟೇ. ಗಂಡನ ಚಿಂತೆಯನ್ನರಿತು ‘ನಾವ್ಯಾಕೆ ದುಡಿದು ಸಂಪಾದಿಸಬಾರದು’ ಎಂಬ ಪ್ರಶ್ನೆ ಮುಂದಿಟ್ಟರು. ‘ಏನು ಮಾಡೋಣ’ ಹೆಗಡೆಯವರ ಚಿಂತೆ. ರೇಖಾ ಹಲಸಿನ ಚಿಪ್ಸ್ ತಯಾರಿಸಿ, ಚಿಕ್ಕ ಪ್ಯಾಕೆಟ್ ಮಾಡಿ, ಗಂಡನ ಕೈಗಿತ್ತರು.

ಸ್ನೇಹಿತರಿಗೆ ಹಂಚಿದರು. ರುಚಿಯ ಬಗ್ಗೆ ಶಹಬ್ಬಾಸ್. ಕೈಗೆ ರೊಕ್ಕ ಬಂತು. ಇನ್ನಷ್ಟು ಪ್ಯಾಕೆಟ್‌ಗಳು ಸಿದ್ಧವಾದುವು.    ಹೆಗಡೆಯವರಿಗೆ ಅಲ್ಪಸ್ವಲ್ಪ ಮಾರುಕಟ್ಟೆ ಜ್ಞಾನವಿತ್ತು. ಚೊಚ್ಚಲ ಚಿಪ್ಸ್ ಮಾರಾಟವೇ ಎಲ್ಲಿಲ್ಲದ ಹುರುಪು, ಉತ್ಸಾಹ ತಂದಿತು. ಮನದಲ್ಲೇ ಮನದನ್ನೆಗೆ ಥ್ಯಾಂಕ್ಸ್!

ಅಲ್ಲಿಂದ ಶುರು, ‘ಅನ್ನಪೂರ್ಣ ಹೋಂ ಪ್ರಾಡಕ್ಟ್ಸ್’.  ಮನೆ ಜಗಲಿಯೇ ಫ್ಯಾಕ್ಟರಿ. ನಾಲ್ಕು ಕೈಗಳ ಸತತ ದುಡಿಮೆ. ಏಳು ವರುಷ ನಂತರ, ‘ಮೆಣಸಿಕೇರಿ ಚಿಪ್ಸ್ ಇದೆಯಾ’ ಎಂದು ಗ್ರ್ರಾಹಕರು ಕೇಳಿ ಪಡೆಯುವಷ್ಟು ಉದ್ದಿಮೆ ಬೆಳೆದಿದೆ. ಇದಕ್ಕೆ ಕಾರಣ ರುಚಿ ಮತ್ತು ಗುಣಮಟ್ಟ.

ಹಲಸಿನ ದೋಸೆಪುಡಿ!ಅನ್ನಪೂರ್ಣ ಹೆಗಡೆಯವರ ಹೊಸ ಉತ್ಪನ್ನವಿದು.  ಸೊಳೆ ಬಿಡಿಸಿ, ಬೀಜ ತೆಗೆದು ಬಿಸಿಲಲ್ಲಿ ಎಂಟು ದಿವಸ ಒಣಗಿಸುತ್ತಾರೆ. ಗಾಳಿಯಾಡದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟು, ಬೇಕಾದಾಗ ಮಿಕ್ಸಿಯಲ್ಲಿ ಪುಡಿ ಮಾಡಿದರೆ ‘ಹಲಸು ಪೌಡರ್’ ಸಿದ್ಧ!

‘ರಾತ್ರಿ ಅಕ್ಕಿ ರುಬ್ಬಿ, ಬೆಳಿಗ್ಗೆ ಈ ಪೌಡರನ್ನು ಮಿಶ್ರಮಾಡಿ ದೋಸೆ ಮಾಡಿ’ ಎನ್ನುವುದು ಅನ್ನಪೂರ್ಣರ ಸಲಹೆ. ದೋಸೆ ಗರಿಗರಿಯಾಗಬೇಕಾದರೆ ಮುಕ್ಕಾಲು ಪಾಲು ಪೌಡರ್ ಮತ್ತು ಕಾಲು ಪಾಲು ಅಕ್ಕಿ ಸೇರಿಸಿ. ಮೃದುವಾಗಬೇಕಾದರೆ ಮುಕ್ಕಾಲು ಪಾಲು ಅಕ್ಕಿ, ಕಾಲು ಪಾಲು ಪೌಡರ್ ಸೇರಿಸಬೇಕಂತೆ.  ಈ ಪೌಡರ್ ಮಾಡುವ ಪ್ರಯತ್ನಕ್ಕೆ ಅರಭಾವಿಯ ಲಕ್ಷ್ಮೀನಾರಾಯಣ ಹೆಗಡೆಯವರ ಸಹಕಾರ.

ವರ್ಷವಿಡೀ ಚಿಪ್ಸ್ !

‘‘ಚಿಪ್ಸ್‌ಗೆ ಅಂಬಲಿ ಹಲಸೇ ಆಗಬೇಕು. ಸಣ್ಣಕೆ ಹೆಚ್ಚಿದ ಸೊಳೆ ಕುದಿದಾಗ ಮೇಲೇರಿ ಬರಬೇಕು. ಅಂತಹ ಮರದ ಕಾಯಿ ಚಿಪ್ಸ್‌ಗೆ ಓಕೆ. ಎಣ್ಣೆಯಲ್ಲಿ ಮುಳುಗುವ ಸೊಳೆ ಆಗದು.’’ ಹಲಸಿನಕಾಯಿ ಸಿಗುವಲ್ಲಿ ವರೆಗೂ ಚಿಪ್ಸ್ ಕರಿದು, ಗಾಳಿಯಾಡದ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಡುತ್ತಾರೆ. ವರ್ಷಕ್ಕೆ ಏಳರಿಂದ ಎಂಟು ಕ್ವಿಂಟಾಲ್.  ಬೇಡಿಕೆ ಬಂದಾಗ, ಬೇಕಾದಷ್ಟೇ ತೆಗೆದು ಪುನಃ ಸಣ್ಣಗೆ ಕರಿದು, ಮಸಾಲೆ, ಉಪ್ಪು ಹಾಕಿ ಮಾರಾಟ.

ಕರಿಯಲು ವನಸ್ಪತಿ ಎಣ್ಣೆ ಬಳಕೆ. ‘ಇದನ್ನು ಬಳಸಿದರೆ ಚಿಪ್ಸ್‌ನ್ನು ವರ್ಷವಿಡೀ ಕಾಪಿಡಬಹುದು. ಯಾವುದೇ ಅಡ್ಡ ವಾಸನೆ ಬರುವುದಿಲ್ಲ. ಎಚ್ಚರದಿಂದ ಪ್ಯಾಕ್ ಮಾಡಿಟ್ಟರೆ ಹದಿನಾಲ್ಕು ತಿಂಗಳು ಉಳಿಯುತ್ತದೆ.’ ಇನ್ನೂರು ಗ್ರಾಮಿನ ಪ್ಯಾಕೆಟ್. ಕಿಲೋಗೆ ನೂರೈವತ್ತು ರೂಪಾಯಿ.

‘ಸಾಮಾನ್ಯ ಗಾತ್ರದ ಒಂದು ಹಲಸಿನ ಕಾಯಿಯಲ್ಲಿ ಅರ್ಧ ಕಿಲೋ ಕರಿದ ಚಿಪ್ಸ್ ಆಗಬಹುದು. ಇಷ್ಟಕ್ಕೆ ೩೦೦ ಗ್ರಾಂ ಎಣ್ಣೆ ಸಾಕು’ ಎನ್ನುತ್ತಾರೆ ಹೆಗಡೆ. ‘ಹಲಸಿನ ಚಿಪ್ಸ್ ಬಿಸಿಬಿಸಿಯಾಗಿ ತಿಂದರೆ ರುಚಿ ಕಡಿಮೆ. ಆದರೆ ಬಾಳೆಕಾಯಿ ಚಿಪ್ಸ್ ಬಿಸಿಯಾಗಿದ್ದಾಗಲೇ ತಿನ್ನಬೇಕು’ ಎನ್ನುವುದು ಇವರ ಕಿವಿಮಾತು.

ದಿನಕ್ಕೆ ಐನೂರು ಹಪ್ಪಳ

ಹಲಸಿನ  ಋತುವಿನಲ್ಲಿ  ಮನೆ ಕೆಲಸದೊಂದಿಗೆ ದಿನಕ್ಕೆ ಆರಾಮವಾಗಿ ಐನೂರು ಹಪ್ಪಳ ತಯಾರಿ. ‘ಓವರ್‌ಡ್ಯೂಟಿಯಲ್ಲಿ ಒಂದು ಸಾವಿರ ಮಾಡಿದ್ದೂ ಇದೆ. ಆದರೆ ಗುಣಮಟ್ಟಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ’. ಗುಣಮಟ್ಟ ಉಳಿಸಲು ಏನೇನು ಎಚ್ಚರ ಬೇಕು? ‘ಹಲಸಿನಕಾಯಿಯ ಆಯ್ಕೆಯೇ ಮುಖ್ಯ’ ಎಸ್.ವಿ.ಹೆಗಡೆ ಹೇಳುತ್ತಾರೆ. ಆಯ್ಕೆ ಹೇಗೆ? ‘ಹಪ್ಪಳ ಬಿಸಿಲಿಗೆ ಒಣಗಿದಾಗ ಬಿರಿಯಬಾರದು. ಅಂತಹ ಹಲಸು ಹಪ್ಪಳಕ್ಕೆ ಯೋಗ್ಯ. ಇದನ್ನು ಮಾಡಿ ನೋಡಿ ಗುರುತಿಸಬೇಕಷ್ಟೇ’.

ಇಂತಹ ಮರಗಳನ್ನು ಇವರು ಅನುಭವಾಧಾರದಲ್ಲಿ ಗುರುತಿಸಿ ಇಟ್ಟುಕೊಂಡಿದ್ದಾರಂತೆ. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ, ಐವತ್ತು ಮನೆಗಳ ‘ಒಳ್ಳೆಯ ಗುಣಮಟ್ಟದ’ ಹಲಸು ಮೌಲ್ಯವರ್ಧನೆಗೆ ಬಳಕೆ. ಗಾತ್ರ, ಗುಣಮಟ್ಟಕ್ಕನುಸಾರ ಒಂದು ಕಾಯಿಗೆ ೫ ರಿಂದ ೧೦ ರೂಪಾಯಿ ವರೆಗೆ ಪಾವತಿ.

ಕೈಕೆಲಸ

ಹಿಂದಿನ ದಿನವೇ ಸೊಳೆ ಬಿಡಿಸಿಟ್ಟುಕೊಳ್ಳುತ್ತಾರೆ. ಇದನ್ನು ನುಣ್ಣಗೆ ರುಬ್ಬಿ, ಪ್ಲಾಸ್ಟಿಕ್ ಶೀಟ್‌ನ ಮೇಲೆ ‘ಹಪ್ಪಳ  ಹಚ್ಚಬೇಕು.’  (ಮಂದವಾಗಿರುವ  ರುಬ್ಬಿದ ಹಿಟ್ಟನ್ನು ಕೈಯಲ್ಲಿ ಬಾಳೆ ಎಲೆ / ಪ್ಲಾಸ್ಟಿಕ್ ಹಾಳೆಗೆ ಲೇಪಿಸುವುದನ್ನು ‘ಹಪ್ಪಳ ಹಚ್ಚುವುದು’ ಎನ್ನುತ್ತಾರೆ) ‘ಹಚ್ಚುವಿಕೆ’ಯ ವ್ಯತ್ಯಾಸದಲ್ಲಿ ಹಪ್ಪಳ ಬೇಕಾದಂತೆ ದಪ್ಪ ಅಥವಾ ತೆಳು ಆಗುತ್ತದೆ. ಕೈಯನ್ನು ನೀರಲ್ಲದ್ದಿ ಹಚ್ಚಿದ ಹಪ್ಪಳವನ್ನು ‘ಪಾಲಿಶ್’ ಮಾಡಿದರೆ ಅದು ನುಣುಪು, ಅರೆಪಾರದರ್ಶಕವಾಗುತ್ತದೆ.

ಕೆಲವೊಂದು ಸಲ ಹೆಚ್ಚು ಹಲಸು ಸಿಕ್ಕಿದಾಗ ಒಣಗಿಸಲು ಡ್ರೈಯರ್ ಬಳಕೆ. ಒಂದು ಬಾರಿಗೆ ನಾನೂರು ಹಪ್ಪಳ. ಅರ್ಧ ಗಂಟೆಯಲ್ಲೇ ಒಣಗಿ ಸಿದ್ಧ. ಹಲಸು ಸಿಕ್ಕುವಲ್ಲಿವರೆಗೂ ಹಪ್ಪಳ ಆಗುತ್ತಲೇ ಇರುತ್ತದೆ. ಮಳೆ ಬರುವ ತನಕ, ಅಂದರೆ ಜೂನ್ ಮಧ್ಯದ ತನಕ ಹಪ್ಪಳ. ನಂತರ ಚಿಪ್ಸ್.  ಎರಡು ದಿನಕ್ಕೊಮ್ಮೆ ಜೀಪಿನಲ್ಲಿ ೪೦-೫೦ ಹಲಸು ತರುತ್ತಾರೆ. ಇದರಲ್ಲಿ ೧೦-೧೨ ಹಪ್ಪಳಕ್ಕೆ. ಉಳಿದದ್ದು ಚಿಪ್ಸ್‌ಗೆ. ಸಾಮಾನ್ಯ ಆಕಾರದ ಒಂದು ಹಲಸಿನ ಕಾಯಿಂದ ೧೦೦ ಹಪ್ಪಳ, ದೊಡ್ಡದಾದರೆ ೧೨೫ ಹಪ್ಪಳ ತಯಾರಿ. ಒಂದು ಹಪ್ಪಳಕ್ಕೆ ಒಂದು ರೂಪಾಯಿ. ಇಪ್ಪತ್ತರ ಪ್ಯಾಕೆಟ್‌ಗಳು.

‘ಮಸಾಲೆ ಮಿಶ್ರ ಮಾಡಿದ ಖಾರ ಹಪ್ಪಳ ಕೇಳುತ್ತಾರೆ. ಕೈಯಲ್ಲೇ ಹಪ್ಪಳವನ್ನು ಹಚ್ಚಬೇಕಾಗಿರುವುದಿಂದ ಕೈ ಉರಿಯುತ್ತದೆ. ಹಾಗಾಗಿ ಅದನ್ನು ಬಿಟ್ಟುಬಿಟ್ವಿ’

ಕ್ಲಿಕ್ಆದ ಹಣ್ಣು ಹಪ್ಪಳ

ತಂದದ್ದರಲ್ಲಿ ಚಿಪ್ಸಿಗೆ ಸೂಕ್ತವಲ್ಲದೆಯೋ, ಸಕಾಲಕ್ಕೆ ಚಿಪ್ಸ್, ಹಪ್ಪಳವಾಗಿಸದೆಯೋ ಹಲಸಿನಕಾಯಿ ಹಣ್ಣಾಗುತ್ತಿತ್ತು. ಇದನ್ನೇನು ಮಾಡೋಣ? ಹೀಗೆ ಚಿಂತಿಸಿದಾಗ ರೇಖಾರಿಗೆ ಹೊಳೆದದ್ದೇ ಹಣ್ಣು ಹಪ್ಪಳ. ಮಲೆನಾಡಿನ ಸಾಂಪ್ರದಾಯಿಕ ತಯಾರಿಯಾದ ಇದನ್ನು ಮಾರುಕಟ್ಟೆಗೆ ಹಾಕಿದ್ದು ತೀರಾ ಕಮ್ಮಿ. ಎಲ್ಲರೂ ಅಲ್ಪಸ್ವಲ್ಪ ಮನೆಯ ಪುಟಾಣಿಗಳಿಗಾಗಿ ಮಾಡಿಕೊಳ್ಳುವ ಉತ್ಪನ್ನವಿದು.

ಹೀಗೆ ‘ಕಚ್ಚಾವಸ್ತು ನಿರ್ವಹಣೆಗಾಗಿ’ ರೇಖಾ ಆರಂಭಿಸಿದ ಹಣ್ಣು ಹಪ್ಪಳ ಈಗ ಜನಪ್ರಿಯ. ಎರಡು ಹಪ್ಪಳಕ್ಕೆ ಐದು ರೂಪಾಯಿ. ಕಳೆದ ವರುಷ ಇವರು ಮಾಡಿದ ಹಣ್ಣು ಹಪ್ಪಳ ಎಂಟು ಸಾವಿರಕ್ಕೆ ಹತ್ತಿರ.

ಇದಕ್ಕೆ ಅಂಬಲಿ (ದ.ಕ.ದ ‘ತುಳುವ’) ಹಲಸೇ

ಉತ್ತಮ.  ಸೊಳೆಯನ್ನು  ಬೇಯಿಸಿ, ಅದರ ನೀರು ಆರಿಸುತ್ತಾರೆ. ತಳ  ಹಿಡಿಯದಂತೆ  ಎಚ್ಚರ  ಬೇಕು. ಬಿಸಿಯಾರಿದ ಮೇಲೆ ರುಬ್ಬಿ ಕಾಯಿಯ ಹಪ್ಪಳ ಮಾಡಿದಂತೆಯೇ ಇದನ್ನೂ ಮಾಡುತ್ತಾರೆ.

ರುಬ್ಬಿದ ತಕ್ಷಣ ಹಚ್ಚಿ ಬಿಸಿಲಿಗಿಡಲೇಬೇಕು. ನಂತರ ಹುಳಿ ಬರುವ ಸಾಧ್ಯತೆಯಿದೆ.  ಮೂರು ಬಿಸಿಲಲ್ಲಿ ಒಣಗಿದ ಈ ಹಪ್ಪಳಕ್ಕೆ ಒಂದು ವರುಷ ತಾಳಿಕೆ.

ಇದಕ್ಕೇಕೆ ಹೆಚ್ಚು ಬೆಲೆ?  ತಯಾರಿ ಹೆಚ್ಚು ಶ್ರಮ ಬೇಡುವ ಕೆಲಸ. ಬೇಯಿಸಿ ಸೊಳೆಯ ನೀರಾರಿಸುವಲ್ಲಿಂದ ಹಪ್ಪಳ ಹಚ್ಚುವ ತನಕ ಇದು ಕಿರಿಕಿರಿ ಕೆಲಸ. ಕಾಯಿಹಲಸಿನ ಹಪ್ಪಳದಂತೆ ಇದು ಚ್ಚಲು ಬರುವುದಿಲ್ಲ.’’, ವಿವರಿಸುತ್ತಾರೆ ರೇಖಾ, ಕೆಲವು ಸಲ ಕೈಗೆ,  ಪ್ಲಾಸ್ಟಿಕ್ಕಿಗೆ ಅಂಟುತ್ತದೆ. ಬೇಕಾದ ಆಕಾರ ಬರುವುದಿಲ್ಲ – ಹೀಗೆ ಒಂದಷ್ಟು ಕಷ್ಟ ಕೊಡುತ್ತದೆ. ವೇಸ್ಟ್ ಆಗುತ್ತದೆ.  ಸಾಮಾನ್ಯ ಗಾತ್ರದ ಒಂದು ಹಣ್ಣಿನಲ್ಲ್ಲಿ ಇಪ್ಪತ್ತೈದು ಹಪ್ಪಳ ಆದರೆ ಹೆಚ್ಚು.’’

ಹಣ್ಣು ಹಪ್ಪಳವನ್ನು ಕರಿಯಬೇಕಿಲ್ಲ. ಕೈಯಲ್ಲಿ ಹರಿಹರಿದು ತಿಂದರಾಯಿತು. ಮೇಣಕ್ಕೆ ಬಣ್ಣ, ಸಿಹಿ ಹಾಕಿ ಕೊಡುವ ಚ್ಯೂಯಿಂಗ್ ಗಮ್ಮಿಗಿಂತ ಎಷ್ಟೋ ಮೇಲು. ಮಕ್ಕಳಿಗಿದು ದೇಸೀ ಚೂಯಿಂಗ್ ಗಮ್ ; ದೊಡ್ಡವರಿಗೆ  ಟೈಂಪಾಸ್ ತಿನಸು.

ಹಪ್ಪಳ, ಚಿಪ್ಸ್‌ನಂತಹ ‘ಕಾಪಿಡುವ’ ಉತ್ಪನ್ನಗಳನ್ನು ಸಂರಕ್ಷಿಸುವಲ್ಲಿ ಜಾಗ್ರತೆ ಬೇಕು. ಹೊಗೆಯಾಡುವ ಅಟ್ಟ ಅಥವಾ ಬೆಚ್ಚಗಿನ ಕೋಣೆ ಸೂಕ್ತ. ಗಾಳಿಯಾಡದಂತೆ  ಪ್ಲಾಸ್ಟಿಕ್ ಚೀಲಗಳಲ್ಲಿ ಭದ್ರವಾಗಿ ಕಟ್ಟಿಟ್ಟುಕೊಳ್ಳುತ್ತಾರೆ.

ಮಗ ವೆಂಕಟ್ರಮಣನಿಗೆ ಶಾಲಾಭ್ಯಾಸದ ಹೊರತಾಗಿ ಪ್ಯಾಕೆಟ್  ಮಾಡುವ  ಕೆಲಸ. ಸೊಳೆ ಬಿಡಿಸಲು ಹತ್ತಿರದ ಪರಿಚಿತರ ಸಹಾಯ.  ‘ಲೋಕಾಭಿರಾಮ ಮಾತನಾಡುತ್ತಾ ಕೆಲಸ ಸಾಗುತ್ತದೆ. ಸಹಾಯಕ್ಕೆ ಬಂದವರಿಗೆ ಘಂಟೆಗೆ ಐದು ರೂಪಾಯಿ ಸಂಭಾವನೆ.’

ಚಿಪ್ಸ್ ಇವರ ಮುಖ್ಯ ಉತ್ಪನ್ನ. ಹಪ್ಪಳಕ್ಕೆ ನಂತರದ ಸ್ಥಾನ. ನೇರ ಮಾರುಕಟ್ಟೆ. ಮಧ್ಯವರ್ತಿಗಳಿಲ್ಲ. ‘ಮಾರಾಟವಾಗಲು ಯಾರಿಗೂ ಉಚಿತ ಕೊಟ್ಟದ್ದಿಲ್ಲ. ಉಚಿತ ಕೊಟ್ಟರೆ ನಮ್ಮ ಮ್ಹಾಲು ಖಚಿತವಲ್ಲ ಎಂದರ್ಥ.’ ಎಸ್. ವಿ.ಹೆಗಡೆ ಹೇಳುತ್ತಾರೆ.

ಕದಂಬೋತ್ಸವ, ಹಂಪಿ ಉತ್ಸವ, ಕೃಷಿಮೇಳಗಳಲ್ಲಿ ಮಾತ್ರ ಮಳಿಗೆ ತೆರೆದು ತಮ್ಮ

ಉತ್ಪನ್ನಗಳನ್ನು ಮಾರಾಟಕ್ಕಿಡುತ್ತಾರೆ. ಕೆಲವೊಂದು ಸಲ ಎರಡು-ಮೂರು ದಿನ ಮನೆಗೆ ಬೀಗ! ಮಳಿಗೆಗಳಲ್ಲಿ ರುಚಿ ಹಿಡಿಸಲು ಉತ್ಪನ್ನಗಳ ಸಣ್ಣ ಸಣ್ಣ ‘ಸ್ಯಾಂಪಲ್’ ಪ್ಯಾಕೆಟ್. ‘ಕೆಲವರು ಸ್ಯಾಂಪಲ್ ತಿಂದು, ಕೂಡಲೇ ದೊಡ್ಡ ಪ್ಯಾಕೆಟ್ ಒಯ್ಯುವುದಿದೆ.’

ಮನೆಗೆ ಬಂದು ಒಯ್ಯುವವರೇ ಹೆಚ್ಚು. ಸಮಾರಂಭವಿದ್ದರೆ ಮೊದಲೇ ಆದೇಶ ಕೊಡುವುದೂ ಇದೆ. ಉತ್ಪನ್ನಗಳ ಸಾಗಾಟಕ್ಕೆ ನಾಲ್ಕು ದಶಕಗಳ ಇವರ ನೆಚ್ಚಿನ ಸಂಗಾತಿ ಜೀಪಿನ ಬಳಕೆ. ‘ಅಂಗಡಿಗಳಿಗೆ ಕೊಡುವುದಿಲ್ಲ. ಅವರಿಂದ ಹಣ ಪಡೆಯಲು ಪಿಗ್ಮಿಯವರಂತೆ ಅಲೆಯಬೇಕಾಗುತ್ತದೆ. ಸತಾಯಿಸುತ್ತಾರೆ. ಅರ್ಧ ಬೆಲೆಗೆ ಕೇಳುತ್ತಾರೆ’.

ಕೆಲವರಿಗೆ ಹಲಸು ‘ನಂಜು’! ಅಂತಹವರಿಗೆ ಬಾಳೆಕಾಯಿ ಚಿಪ್ಸ್ ಇವರಲ್ಲಿದೆ. ಇನ್ನೂರು ಗ್ರಾಮಿನ ಪೊಟ್ಟಣಕ್ಕೆ ಇಪ್ಪತ್ತೈದು ರೂಪಾಯಿ.  ಕೃಷಿಕರಿಂದಲೇ ಬಾಳೆಕಾಯಿ ಖರೀದಿ. ಹಾಗಲಕಾಯಿ ಚಿಪ್ಸ್ ಮತ್ತೊಂದು ತಯಾರಿ. ‘ಬೆಂಗಳೂರು ಮಾರುಕಟ್ಟೆಯಲ್ಲಿ ಹಾಗಲಕಾಯಿಯ ಚಿಪ್ಸ್ ಸಿಗುತ್ತೆ ಅಂತ ಕೇಳಿದ್ದೆ. ಸ್ನೇಹಿತೆಯರಿಂದ ತರಿಸಿಕೊಂಡು ಅದೇ ರುಚಿ ಬರುವಂತೆ ಚಿಪ್ಸ್ ತಯಾರಿಸಿ ರೂಢಿಸಿಕೊಂಡೆ’ ಎನ್ನುತ್ತಾರೆ ರೇಖಾ. ಹೋಳಿಗೆ, ಒಬ್ಬಟ್ಟು,  ಚಕ್ಕುಲಿ,  ಅತ್ರಸ,  ತೊಡದೇವು ಇತರ

ಉತ್ಪನ್ನಗಳು. ಏನಿದ್ದರೂ, ಒಟ್ಟು ಉತ್ಪನ್ನಗಳಲ್ಲಿ ಹಲಸಿನದೇ ಅರ್ಧ ಪಾಲು. ವರ್ಷ ಪೂರ್ತಿ ಕೈಕೆಲಸ.

‘ಒಂದು ಹಲಸಿನ ಕಾಯಿ ಮೌಲ್ಯವರ್ಧನೆ ಯಾದಾಗ ಏನಿಲ್ಲವೆಂದರೂ ನೂರು, ನೂರಇಪ್ಪತ್ತೈದು ರೂಪಾಯಿ ತರುತ್ತದೆ. ಇದರಲ್ಲಿ ಸಾಗಾಟ, ದರ ಮತ್ತು ನಮ್ಮೆಲ್ಲರ ಶ್ರಮವೂ ಸೇರಿದೆ’ ಎನ್ನುತ್ತಾರೆ ಹೆಗಡೆ.

ಮನೆಯಲ್ಲಿ ಒಂದೆಡೆ ಹಲಸಿನ ರಾಶಿ, ಇನ್ನೊಂದೆಡೆ ಸೊಳೆ ತೆಗೆಯುವ ಧಾವಂತ, ಮತ್ತೊಂದೆಡೆ ರುಬ್ಬುವ ಗಡಿಬಿಡಿ. ಈ ಮಧ್ಯೆ ಫೋನ್ ರಿಂಗಣಿಸಿದಾಗ ಅದಕ್ಕೂ ಉತ್ತರ ಕೊಡುತ್ತಾ, ಮನೆಪೂರ್ತಿ ಓಡಾಡುವ ರೇಖಾ ಅವರ ಚುರುಕುತನವೇ ಈ ಗೃಹ ಉದ್ದಿಮೆಯ ಜೀವಾಳ.

‘ಹಲಸು ನಮ್ಮ ಬದುಕಿನ ಜೀವನಾಡಿ. ಸಾಲದಿಂದ ಮೇಲೆತ್ತಿದ್ದು, ಸ್ವಾವಲಂಬಿ ಬದುಕನ್ನು ರೂಪಿಸಲು ನೆರವಾದುದು ಹಲಸಿನ ಉತ್ಪನ್ನಗಳೇ’, ಹೊರಡುವ ಮುನ್ನ ಈ ಮಾತು ಹೇಳುವಾಗ ಇವರಿಬ್ಬರ ಮೊಗದಲ್ಲಿ ಹೆಮ್ಮೆಯಿತ್ತು.

ಮನೆಯೇ ಮಾರುಕಟ್ಟೆ

ಚಿಪಗಿಯ ಅನ್ನಪೂರ್ಣ ಹೆಗಡೆಯವರ ‘ಹಲಸು ಉದ್ದಿಮೆ’ ರೇಖಾ ಹೆಗಡೆಯವರಿಕ್ಕಿಂತ ಭಿನ್ನ. ಮನೆಯದೇ ಕಚ್ಚಾವಸ್ತು; ಮನೆಯೇ ಮಾರುಕಟ್ಟೆ.. ಬೇರೆಡೆ ಒಯ್ಯಬೇಕಾಗಿಲ್ಲ. ಈ ಆಸಕ್ತಿ ಇವರಿಗೆ ಶುರುವಾದದ್ದು ಹೇಗೆ? ಎಂದಿನಂತೆ ಹಲಸು ಬಿದ್ದು  ಹಾಳಾಗುತ್ತಿತ್ತು. ಮನೆ ಖರ್ಚಿಗೆ ಅಷ್ಟಿಷ್ಟು ಹಪ್ಪಳ ಮಾಡುತ್ತಿದ್ದರು. ನೆರೆಕರೆಯ ಕೆಲವು  ಮಂದಿ ಹುಬ್ಬಳ್ಳಿ,  ಬೆಳಗಾಂ, ಮುಂಬಯಿಯಲ್ಲಿದ್ದರು. ಅವರು ಊರಿಗೆ ಬಂದಾಗ ಹಪ್ಪಳ ಒಯ್ಯುತ್ತಿದ್ದರು. ಒಮ್ಮೆ ರುಚಿಗೊಯ್ದವರು ಮುಂದಿನ ಸಲ ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದರು. ಹೀಗೆ ಸಣ್ಣದಾಗಿ  ಉಪಕಸುಬು ಆರಂಭ. ಹನ್ನೆರಡು ವರುಷ ಹಿಂದೆ.

‘ಹಲಸು ಋತುವಿನಲ್ಲಿ ನಮ್ಮಲ್ಲಿ ಏನಿಲ್ಲವೆಂದರೂ ಮುನ್ನೂರಕ್ಕೂ ಮಿಕ್ಕಿ ಹಲಸು ಸೀಳಾಗುತ್ತದೆ’ ಎನ್ನುವ ಅನ್ನಪೂರ್ಣ ಹೆಗಡೆಯವರಿಗೆ ‘ಮನೆಯಲ್ಲಿ ಓಡಾಡಿ ಕೆಲಸ ಮಾಡಲು’ ಅವರ ಅತ್ತೆ ಜಾನಕಿ ಹೆಗಡೆಯವರೇ ಸ್ಫೂರ್ತಿ! ‘ಹಲಸು ಕೊಯ್ದು ತಂದು ಹಾಕಿದರೆ ನನ್ನ ಕೆಲಸ ಆಯಿತು. ಮತ್ತೆಲ್ಲಾ ಅವಳದೇ’ – ಪತಿ ಶ್ರೀಕಾಂತ ಹೆಗಡೆ, ‘ಹೇಳೇ ಹಪ್ಪಳದ ಕಥೆ’ – ಪತ್ನಿಯನ್ನು ಪುಸಲಾಯಿಸುತ್ತಾರೆ!

‘ಕೆಲವೊಮ್ಮೆ ದಿನಕ್ಕೆ ಏಳೆಂಟು ಹಲಸು ಕೊಯಿದು ಹಾಕ್ತೇನೆ. ಆಗ ನೆಂಟರನ್ನೂ ಬರಹೇಳುತ್ತೇವೆ. ಸೊಳೆ ಬಿಡಿಸಿದ ಹಾಗೂ ಆಯಿತು. ಅವರಿಗೆ ಹಪ್ಪಳ ಉಡುಗೊರೆ ಕೊಟ್ಟ ಹಾಗೂ ಆಯಿತು!’ ಇದು ಹೆಗಡೆಯವರ ಜಾಣ್ಮೆ.

ಸ್ವಂತ ಕಚ್ಚಾವಸ್ತು

ಬೇರೆಡೆಯಿಂದ ಹಲಸು ತರುವುದಿಲ್ಲ. ಹಿತ್ತಿಲಿನ ಆಯ್ದ ೧೦ – ೧೨ ಮರಗಳಿಂದ ಹಪ್ಪಳ, ಚಿಪ್ಸ್. ಉಳಿದ ಒಂದ್ಹತ್ತು ಮರದ ಕಾಯನ್ನು ಗುತ್ತಿಗೆಗೆ ಕೊಡ್ತಾರೆ. ಒಂದೊಂದು ಮರದಲ್ಲಿ ಕನಿಷ್ಟವೆಂದರೂ ೫೦-೬೦ಕ್ಕೂ ಮಿಕ್ಕಿದ ಕಾಯಿಗಳಿರುತ್ತವೆ.

ಇವರು ಹಪ್ಪಳ ಮಾಡುವ ವಿಧಾನ ಕರಾವಳಿಯವರಂತೆ. ದಪ್ಪಕ್ಕೆ ರುಬ್ಬಿ, ಉಂಡೆ ಮಾಡಿ, ಚಪಾತಿ ಒತ್ತುಮಣೆಯಲ್ಲಿ ಒತ್ತಿ ಮಾಡುವ ಕ್ರಮ.  ‘ರಾತ್ರಿ ಸೊಳೆ ತೆಗೆಯಬಾರದು. ಮರುದಿವಸ ಹಳಸಿರುತ್ತದೆ. ಆಯಾಯ ದಿನವೇ ಸೊಳೆ ಬಿಡಿಸಿ ಹಪ್ಪಳ ಮಾಡಬೇಕು.’ ಕೆಲವರು ಕೆಂಡದಲ್ಲಿ ಸುಡಲು ದಪ್ಪ ಹಪ್ಪಳ ಕೇಳುತ್ತಾರೆ. ಇನ್ನು ಕೆಲವರಿಗೆ ಕರಿಯಲು ತೆಳ್ಳಗೆ ಇದ್ದರೆ ಇಷ್ಟ. ‘ಒತ್ತುಮಣೆಯಲ್ಲಿ ಒತ್ತುವಾಗ ದಪ್ಪ-ತೆಳು ಸರಿಮಾಡಿಕೊಳ್ಳುತ್ತೇವೆ.’

೨೫ರ ಕಟ್ಟಿಗೆ ಹದಿನಾರು ರೂಪಾಯಿ. ಪ್ಲಾಸ್ಟಿಕ್ ಲಕೋಟೆಯಲ್ಲಿ ಕಟ್ಟಿದ ಕಟ್ಟುಗಳನ್ನು ಬೆಚ್ಚಗೆ ಉಳಿಸಲು ಡ್ರಮ್ಮಿನೊಳಗೆ ಹಾಕಿಡುತ್ತಾರೆ. ಇವರದು ‘ಹಾಟ್ ಚಿಪ್ಸ್’. ಆಗಿಂದಾಗಲೇ ತಯಾರಿಗೆ ಎವರ್‌ರೆಡಿ. ಮೊದಲೇ ಆದೇಶ ಬರುವುದೂ ಇದೆ. ಹೀಗಾಗಿ ಹುರಿದು ಹೆಚ್ಚು ಕಾಲ ಕಾದಿಡುವ ಅಗತ್ಯ ಬೀಳುವುದಿಲ್ಲ.  ಮನೆಖರ್ಚಿಗೆ ಬಳಸುವ ಚಿಪ್ಸಿಗೆ ತೆಂಗಿನೆಣ್ಣೆ ಬಳಕೆ. ಮಾರಾಟದ ಚಿಪ್ಸ್ ಸ್ವಲ್ಪ ಮೊದಲೇ ಸಿದ್ಧ ಮಾಡಬೇಕಾದುದರಿಂದ ವನಸ್ಪತಿ ಎಣ್ಣೆ ಬಳಕೆ. ಹಪ್ಪಳ, ಚಿಪ್ಸ್‌ನೊಂದಿಗೆ ಉಪ್ಪಿನಕಾಯಿ, ಸುಕೇಳಿ, ಕೋಕಂ ಸ್ಕ್ವಾಷ್ ತಯಾರಿ-ಮಾರಾಟ. ‘ಮನೆಯಿಂದಲೇ ಮಾರಾಟ. ಎಲ್ಲಿಯೂ ಮಳಿಗೆಯಲ್ಲಿ ಇಡುವುದಿಲ್ಲ’ ಎನ್ನುವುದು ವಿಶೇಷ.. ಹಲಸು, ಮಾವು ಮುಗಿದೊಡನೆ ಕೈ ಖಾಲಿಯಾಗುವುದಿಲ್ಲ. ತರಕಾರಿ ಕೃಷಿ ಶುರು. ಕ್ಯಾಬೇಜ್, ಮೂಲಂಗಿ, ಹೂಕೋಸು ಬೆಳೆಯುತ್ತಾರೆ.  ಮನೆಗೆ ಆಗಿ ಮಿಕ್ಕಿದ್ದಕ್ಕೆ ನೆರೆಕರೆಯ ಗ್ರಾಹಕರು.

ಹಿತ್ತಿಲಲ್ಲಿರಲಿ ಹಲಸು

ಅನ್ನಪೂರ್ಣ, ರೇಖಾರಂತಹ ಮಹಿಳೆಯರ ಕೈಯಲ್ಲಿ ಹಲಸು ವಾಣಿಜ್ಯ ರೂಪ ಪಡೆದಿರುವುದು ಶ್ಲಾಘನೀಯ. ಬೇರೆ ಕಾರ್ಮಿಕರ ಅವಲಂಬನೆಯಿಲ್ಲದೆ, ದುಡಿವ ಮನಸ್ಸಿದ್ದವರಿಗೆ ಹಲಸು ಹಳ್ಳಿಯಲ್ಲೇ ಸಿಗುವ ಒಳ್ಳೆ ಕಚ್ಚಾವಸ್ತು.

ಕಳೆದೆರಡು ದಶಕಗಳಿಂದ ಕೃಷಿ ವಿಸ್ತರಣೆ, ಮನೆ ನಿರ್ಮಾಣ ಎನ್ನುತ್ತಾ ‘ಹಲಸು ಹಿರಿಯಣ್ಣ’ಗಳು ಧರೆಗುರುಳಿವೆ. ಇದ್ದ ಮರಗಳು ಕೊಡಲಿಗೆ ಕತ್ತೊಡ್ಡದಂತೆ ತಡೆಯಬೇಕು. ಇನ್ನಷ್ಟು ಹಲಸಿನ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು.

ಏನಿಲ್ಲವೆಂದರೂ ಕನಿಷ್ಟ ಒಂದು ಹಲಸಿನ ಮರವಾದರೂ ಹಿತ್ತಲಲ್ಲಿರಲಿ. ಅದು ಯಾವುದೇ ಗೊಬ್ಬರ ನಿಮ್ಮಿಂದ ಕೇಳುತ್ತಿಲ್ಲ, ಆರೈಕೆ ಬಯಸುತ್ತಿಲ್ಲ. ಫಲ ನೀಡಿದಾಗ ಬುಡಕ್ಕೆ ಹೋಗಿ ಕತ್ತು ಮೇಲೆ ಮಾಡಿದರಾಯಿತು!

ರೇಖಾ ಶರಶ್ಚಂದ್ರ ವೆಂಕಟ್ರಮಣ ಹೆಗಡೆ, ಮೆಣಸಿಕೇರಿ, ಹೀಪನಹಳ್ಳಿ ಅಂಚೆ,
ಶಿರಸಿ – ೫೮೧ ೪೦೩ (ಉ.ಕ.)
೦೮೩೮೪ – ೨೨೪ ೦೦೧, ೯೨೪೧೦ ೫೦೭೯೧

ಅನ್ನಪೂರ್ಣ ಶ್ರೀಕಾಂತ ಹೆಗಡೆ,
ಅಂಚೆ : ಚಿಪಗಿ, ಶಿರಸಿ – ೫೮೧ ೪೦೨ (ಉ.ಕ.)
೦೮೩೮೪ – ೨೩೫ ೬೩೭