ಲಗಾಮು ಹರಿದು, ಕಂಡಾಬಟ್ಟೆ ತೊಂಡು ಮೇಯುವ
ಈ ಕುದುರೆಗಳನ್ನೆಲ್ಲ ಹಿಡಿಸು, ಪಳಗಿಸಿ,
ಕಡಿವಾಣ ಹಾಕಿ, ಈ ದೊಡ್ಡ ರಥಕ್ಕೆ ಹೂಡಿ
ಸಲೀಸಾಗಿ ನಡೆಸಬಲ್ಲಂಥ ಅಶ್ವಾರೋಹಿ
ಅಗತ್ಯವಾಗಿ ಬೇಕಾಗಿದೆ –

ನಿಮಿಷಕ್ಕೊಮ್ಮೆ ಬಣ್ಣ ಬದಲಾಯಿಸುವ ಈ
ಗೋಸುಂಬೆಗಳನ್ನೆಲ್ಲ ಹಿಡಿದು,
ಎಂದೂ ಬದಲಾಗದಂಥಾ ಬಣ್ಣ ಬರುವಂಥ
ಇಂಜಕ್ಷನ್ ಚುಚ್ಚುವ
ವೈದ್ಯ ಮಹನೀಯನೊಬ್ಬ
ಅರ್ಜೆಂಟಾಗಿ ಬೇಕಾಗಿದೆ-

ದೊಡ್ಡ ಮಾತುಗಳ ಬಿಲದೊಳಗೆ ಸದಾ ಹುದುಗಿಸುತ್ತಾ
ತಮ್ಮಲ್ಪಗಾತ್ರಗಳನ್ನು,
ಮೇಲೆ ಯಾರ‍್ಯಾರೊ ಬೆಳೆದದ್ದನೆಲ್ಲಾ
ಒಳಗೊಳಗೆ ರವಾನಿಸುತ್ತಾ
ತುಟಿಗು-ತುತ್ತಿಗು
ನಡುವೆ ವಿಪತ್ತಾಗಿ ಕೊಬ್ಬಿರುವ
ಭಾರೀ ಇಲಿ-ಹೆಗ್ಗಣಗಳನ್ನು ಹಿಡಿಯುವ
ಬೋನು ಮಾಡುವ ಕುಶಲಿ
ಬೇಕಾಗಿದೆ –

ಎಲ್ಲೆಲ್ಲೂ ಬೇರೂರದೆ
ಸಿಕ್ಕಿದ್ದಕ್ಕೆಲ್ಲಾ ಸುತ್ತಿಕೊಂಡು
ವಿಚಿತ್ರವಾದ ಹೂ-ಹಣ್ಣು-ಕಾಯಿಗಳನ್ನು ಬಿಡುವ ಈ
ಬಂದಳಿಕೆ ಸಸ್ಯಗಳನ್ನೆಲ್ಲಾ ಕತ್ತರಿಸಿ,
ನಮ್ಮ ನೆಲದಲ್ಲೇ ಬೇರೂರಿಸಿ, ಈ ಮಣ್ಣರಸ ಕುಡಿಸಿ,
ಕಸಿ ಮಾಡುವಂಥ ತೋಟಿಗನೊಬ್ಬ
ಅಗತ್ಯ ಬೇಕಾಗಿದೆ-

ಖೋಟಾನಾಣ್ಯಗಳ ಕಾರ್ಖಾನೆ ಕೇಂದ್ರಗಳನ್ನೆ ಸ್ಥಾಪಿಸಿ,
ಸಾಚಾ ನಾಣ್ಯಗಳನ್ನೆಲ್ಲ ತಲೆಯೆತ್ತದಂತೆ ಮಾಡುತ್ತ,
ನಮ್ಮ ಅರ್ಥ- ಮೌಲ್ಯಗಳನ್ನೆಲ್ಲ ಅವ್ಯವಸ್ಥೆಗೆ ತಂದು
ಚಪ್ಪಾಳೆ-ಹಾರ-ಮೆರವಣಿಗೆಯಲ್ಲಿ ಮೆರೆಯುವ ಮಹಾ
ಮೇಧಾವಿಗಳನೆಲ್ಲ ಬಯಲಿಗೆ ತರುವ
ಭಾರೀ ಗೂಢಚಾರ ಪ್ರಭೃತಿ
ಬೇಕಾಗಿದೆ.

ಹಾಕಿರಿ ಅರ್ಜಿ ; ಬೇಕಾದದ್ದು
ನಿಯತ್ತು ಮತ್ತು
ತಾಕತ್ತು-