ಅಬ್ಬಾ.  ಇಂತಹ ಬಟ್ಟೆ ದೊರಕಿದರೆ ಎಷ್ಟು ಚೆನ್ನ ಎಂದು ಗೃಹಿಣಿಯರು ಗೊಣಗುತ್ತಿರುವುದು ಕೇಳಿಸಿತೇ? ಮಳೆಗಾಲದಲ್ಲಿ ಬಟ್ಟೆಯನ್ನು ಹಿಂಡಿ, ಹಿಂಡಿ ತೋಳು ನೋಯಿಸಿಕೊಳ್ಳುವುದಕ್ಕಿಂತಲೂ, ಬೇಕೆಂದಾಗಷ್ಟೆ ಒದ್ದೆಯಾಗುವ ಬಟ್ಟೆ ಇದ್ದರೆ ಒಗೆಯುವುದು ಎಷ್ಟು ಸುಲಭ ಅನ್ನುವುದು ಅವರ ಅನಿಸಿಕೆ.

 

ನಿಜ. ಒದ್ದೆಯಾಗದ ಬಟ್ಟೆ ಇಲ್ಲವೇ ಇಲ್ಲ. ಹಿಂದೆ ನೈಲಾನ್ ಬಟ್ಟೆ ಬಂದಾಗ ಅದು ಒದ್ದೆಯಾಗುವುದಿಲ್ಲ. ಕೊಳೆಯೂ ಆಗುವುದಿಲ್ಲ ಎನ್ನುವ ಪ್ರತೀತಿ ಇತ್ತು. ಒದ್ದೆಯಾಗುವುದೇನೋ ಕಡಿಮೆಯೇ, ಆದರೆ ನೈಲಾನ್ ಕೊಳೆಯಾಗದೆ ಇರುವುದಿಲ್ಲ. ಸೂರತ್, ಅಹಮದಾಬಾದ್ನ ಮಿಲ್ಗಳಿಂದ ಹೊರಬರುವ ನೂರೆಂಟು ಬಗೆಯ ಪಾಲಿಯೆಸ್ಟರ್, ಮಿಶ್ರನೂಲಿನ ಬಟ್ಟೆಗಳೂ ಅಷ್ಟೆ. ತುಸು ನೀರು ಬಿದ್ದರೂ ಒದ್ದೆಯಾಗಿ ಬಿಡುತ್ತವೆ. ಒದ್ದೆಯಾದ ಬಟ್ಟೆಗಳಿಂದ ನೀರನ್ನು ಹಿಂಡಿ ತೆಗೆಯುವುದು ಸುಲಭವಲ್ಲ. ವಾಷಿಂಗ್ ಮೆಷಿನ್ನಲ್ಲಿ ಹಾಕಿ ಸುತ್ತಿದರೂ, ತುಸುವಾದರೂ ತೇವ ಉಳಿದೇ ಇರುತ್ತದೆ.

ಇಂತಹ ಸನ್ನಿವೇಶದಲ್ಲಿ ಬೇಕೆಂದಾಗಷ್ಟೆ ಒದ್ದೆಯಾಗುವಂತ ಬಟ್ಟೆ ಸಿಕ್ಕಿದರೆ ಎಷ್ಟು ಚೆನ್ನ? ಒಗೆಯುವಾಗಷ್ಟೆ ಒದ್ದೆ ಮಾಡಿ, ತಕ್ಷಣ ನೀರನ್ನು ಹೊರಹಾಕುವಂತೆ ಆದರೆ ಬಟ್ಟೆ ಹಿಂಡುವ, ಒಣಗಿಸುವ ತಾಪತ್ರಯಗಳು ಇರುವುದೇ ಇಲ್ಲ, ಅಲ್ಲವೇ? ಇದೇನು ಕನಸು ಎನ್ನಬೇಡಿ. ಅಮೆರಿಕೆಯ ಮಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಇಂಜಿನೀಯರುಗಳು ಬಟ್ಟೆಗಳನ್ನು ಹೀಗೆ ಇಚ್ಛಾವರ್ತಿಗಳನ್ನಾಗಿ ಮಾಡುವ ಉಪಾಯವನ್ನು ರೂಪಿಸಿದ್ದಾರೆ. ಪಾಲಿನೂಲಿನ ಬಟ್ಟೆಗಳು ಬೇಕೆಂದಾಗಷ್ಟೆ ಒದ್ದೆಯಾಗುವಂತೆ ಮಾಡುವ ವಿಶೇಷ ಲೇಪನ ವಿಧಾನವನ್ನು ಸಂಸ್ಥೆಯ ಮೆಕ್ಯಾನಿಕಲ್ ಇಂಜಿನೀಯರ್ ಗಾರೆತ್ ಮ್ಯಾಕ್ಕಿನ್ಲಿ ಮತ್ತು ಸಂಗಡಿಗರು ರೂಪಿಸಿದ್ದಾರೆ. ಇದನ್ನು ಹಚ್ಚಿದ ಬಟ್ಟೆಗಳು ಸಾಮಾನ್ಯವಾಗಿ ಒದ್ದೆಯಾಗುವುದಿಲ್ಲ. ಅವುಗಳ ಮೇಲೆ ಬಿದ್ದ ಎಣ್ಣೆ, ನೀರು, ಹನಿಯಾಗಿಯೇ ಇದ್ದು ಕೊಡವಿದರು ಉರುಳಿ ಹೋಗುತ್ತವೆ. ಆದರೆ ಇದೇ ಬಟೆಯನ್ನು ಸೆಟೆಯುವಂತೆ ತುಸು ಎಳೆದು ಹಿಡಿದರೆ ಸಾಕು ಮೇಲೆ ಬಿದ್ದ ನೀರನ್ನು ಹೀರಿಕೊಂಡು ಒದ್ದೆಯಾಗುತ್ತದೆ.

ಬಟ್ಟೆಗಳಷ್ಟೆ ಅಲ್ಲ, ಯಾವುದೇ ಮೇಲ್ಮೈ ಒದ್ದೆಯಾಗುವುದು ಅಂದರೆ ಮೇಲೆ ಬಿದ್ದ ದ್ರವಗಳು ಅವಕ್ಕೆ ಅಂಟಿಕೊಳ್ಳುವುದು ಎಂದರ್ಥವಷ್ಟೆ. ಬಟ್ಟೆಗಳಲ್ಲಿ ಇದು ಸುಲಭ. ಏಕೆಂದರೆ ಎಂತಹ ನೂಲಿನಿಂದ ಹೆಣೆದರೂ, ನೂಲುಗಳ ನಡುವೆ ತುಸು ಸಂಧಿ ಇದ್ದೇ ಇರುತ್ತದೆ. ಇದು ನೀರನ್ನು ಹೀರಿಕೊಂಡು ಬಟ್ಟೆ ಒದ್ದೆಯಾಗುವಂತೆ ಮಾಡುತ್ತದೆ. ಒದ್ದೆಯಾಗದಂತೆ ಮೇಲ್ಮೈಗಳ ಬಗ್ಗೆ ವಿಜ್ಞಾನಿಗಳಿಗೆ ವಿಶೇಷ ಆಸಕ್ತಿ.  ಇಂತಹ ಮೇಲ್ಮೈನ ಗಾಜಿನ ಮೇಲೆ ಬಿದ್ದ ಮಳೆನೀರು ತನ್ನಂತಾನೇ ಹರಿದು ಹೋಗುತ್ತದೆ. ವೈಪರ್ಗಳ ಅಥವಾ ಒರೆಸುವ ಬಟ್ಟೆಗಳ ಅವಶ್ಯಕತೆ ಇರುವುದಿಲ್ಲ. ವಾಹನಗಳ ಗಾಜಿನ ಕಿಟಕಿಗಳಿಗೆ ನೀರನ್ನು ಅಂಟಿಸಿಕೊಳ್ಳದಂತಹ ಪದರದ ಲೇಪನ ಮಾಡುವುದುಂಟು.  ಅಂತಹ ಗಾಜಿನ ಮೇಲೆ ಎಂತಹ ಬಿರುಮಳೆಯಲ್ಲಿಯೂ ನೀರು ನಿಲ್ಲದೆ ಹರಿದು ಹೋಗುತ್ತದೆ.

ನೀರೋ, ದ್ರವವೋ ಯಾವುದೇ ಮೇಲ್ಮೈಗೆ ಅಂಟುತ್ತದೆ ಎಂದರೆ ಅದು ಆ ಮೇಲ್ಮೈಯ ಮೇಲೆ ಸಪಾಟಾಗಿ ಕುಳಿತುಕೊಳ್ಳುತ್ತದೆ ಎಂದರ್ಥ. ಅಂಟುವುದಿಲ್ಲ ಎಂದರೆ ಆ ದ್ರವ ಪಾದರಸದ ಹನಿಗಳಂತೆ, ಮುತ್ತಿನ ಮಣಿಗಳಂತೆ ದುಂಡನೆಯ ಹನಿಗಳಾಗಿರುತ್ತದೆ. ಆ ದ್ರವದ ಗುಣ ಹಾಗೂ ಅದಿರುವ ಮೇಲ್ಮೈನ ಗುಣ ಎರಡೂ ಇಂತಹ ಮುತ್ತಿನ ಮಣಿಗಳ ರಚನೆಯನ್ನು ಪ್ರಭಾವಿಸುತ್ತವೆ. ನಯವಾದ ಮೇಲ್ಮೈನ ಮೇಲೆ ದುಂಡನೆಯ ಹನಿಗಳು ಸೃಷ್ಟಿಯಾಗುವುದು ಹೆಚ್ಚು. ಹಾಗೆಯೇ, ದ್ರವದ ಮೇಲ್ಮೈ ಸೆಳೆತ ಹೆಚ್ಚಿದ್ದಷ್ಟೂ ಅದು ದುಂಡನೆಯ ಹನಿಗಳಾಗುತ್ತದೆ. ಮೇಲ್ಮೈ ಸೆಳೆತ ಕಡಿಮೆ ಇರುವ ದ್ರವಗಳು ಎಷ್ಟೇ ನಯವಾದ ಜಾಗೆಯ ಮೇಲೆ ಬಿದ್ದರೂ ವಿಸ್ತಾರವಾಗಿ ಹರಡಿಕೊಳ್ಳುತ್ತವೆ. ಗಾಜಿನ ಮೇಲೆ ಒಂದಿಷ್ಟು ನೀರನ್ನೂ, ಸೀಮೆಎಣ್ಣೆಯನ್ನೂ ಹಾಕಿ ನೋಡಿ. ಸೀಮೆಎಣ್ಣೆ ಹರಡಿಕೊಳ್ಳುವಷ್ಟು ಸಲೀಸಾಗಿ ನೀರು ಹರಡುವುದಿಲ್ಲ. ಏಕೆಂದರೆ ನೀರಿನದಕ್ಕಿಂತಲೂ ಸೀಮೆಎಣ್ಣೆಯ ಮೇಲ್ಮೈ ಸೆಳೆತ ಕಡಿಮೆ. ಹೀಗಾಗಿ ಅದು ಕೆಸರನ್ನೂ ಅಂಟಿಸಿಕೊಳ್ಳದ ತಾವರೆಯ ಎಲೆಯ ಮೇಲೂ ಅಂಟಿಕೊಳ್ಳುತ್ತದೆ.

ನೀರು ಅಂಟದಂತಹ ನೈಸರ್ಗಿಕ ಮೇಲ್ಮೈಗೆ ತಾವರೆಯ ಎಲೆ ಉತ್ತಮ ಉದಾಹರಣೆ. ಅದರ ಹೊರಭಾಗದಲ್ಲಿ ನೀರನ್ನು ದೂರವಿಡುವ ಮಯಣದ ಲೇಪವೂ ಇದೆ. ಜೊತೆಗೆ ಸೂಕ್ಷ್ಮವಾದ ರೋಮಗಳೂ ಇವೆ. ಇವೆರಡೂ ಕೂಡಿ, ಎಲೆಯ ಮೇಲೆ ಬಿದ್ದ ನೀರು ತನ್ನ ಭಾರಕ್ಕೆ ತಾನೇ ಕುಸಿದು ಹರಡಿಕೊಳ್ಳದೆ, ದುಂಡಗೆ ಇರುವಂತೆ ನೋಡಿಕೊಳ್ಳುತ್ತವೆ. ಯಾವುದೇ ದ್ರವ ಎಷ್ಟರ ಮಟ್ಟಿಗೆ ಆ ಮೇಲ್ಮೈಗೆ ಅಂಟಿಕೊಳ್ಳುತ್ತದೆ ಎನ್ನುವುದನ್ನು ಸ್ಪರ್ಶಕೋನವನ್ನು ಅಳೆಯುವ ಮೂಲಕ ತಿಳಿದುಕೊಳ್ಳಬಹುದು. ದ್ರವದ ಹನಿಗೂ, ಮೇಲ್ಮೈಗೂ, ಗಾಳಿಗೂ ನಡುವೆ ಇರುವ ಕೋನವೇ ಸ್ಪರ್ಶಕೋನ. ಸ್ಪರ್ಶಕೋನ ಅತಿ ಹೆಚ್ಚಾದಷ್ಟೂ ದ್ರವ ದುಂಡಗಿನ ಮುತ್ತಾಗಿ ಉರುಳಿ ಹೋಗುತ್ತದೆ. ಕಮಲದ ಎಲೆಯ ಮೇಲಿರುವ ಸೂಕ್ಷ್ಮರೋಮಗಳಿಂದಾಗಿ ಅದರ ಮೇಲೆ ಬಿದ್ದ ನೀರ ಹನಿಯ ಸ್ಪರ್ಶಕೋನ ಅತಿ ಹೆಚ್ಚಾಗಿರುತ್ತದೆ. ಆದರೆ ಸೀಮೆಎಣ್ಣೆಯಂತಹ ದ್ರವಗಳಿಗೆ ಕಮಲದ ಎಲೆಯ ಮೇಲೂ ಹರಡಿಕೊಳ್ಳುವಷ್ಟು ಕಡಿಮೆ ಮೇಲ್ಮೈ ಸೆಳೆತ ಇದೆ.

ಕಮಲದ ಎಲೆಯ ಮೇಲೆ ಸೀಮೆಎಣ್ಣೆಯೂ ಹರಡಿಕೊಳ್ಳುವಂತೆ ಹೊಸದೊಂದು ಲೇಪವನ್ನು ಮ್ಯಾಕ್ಕಿನ್ಲಿ ತಂಡ ತಯಾರಿಸಿದೆ. ಫ್ಲೋರೋಡೆಸಿಲ್ ಪಿಓಎಸ್ಎಸ್ ಎನ್ನುವ ಈ ರಾಸಾಯನಿಕವನ್ನು ವಿಶೇಷ ತಂತ್ರಗಳ ಮೂಲಕ ಕಮಲದ ಎಲೆ, ಬಟ್ಟೆ ಹಾಗೂ ಬಾತುಕೋಳಿಯ ಗರಿಗಳ ಮೇಲೆ ಸಿಂಪರಿಸಿದ್ದಾರೆ. ಈ ಲೇಪನ ಮೇಲ್ಮೈಗಳ ಸೂಕ್ಷ್ಮರಚನೆಯನ್ನು ಬದಲಿಸುವುದಿಲ್ಲ. ಇದರಿಂದಾಗಿ ಅದರ ಮೇಲೆ ಬೀಳುವ ದ್ರವಗಳ ಸ್ಪರ್ಶಕೋನವನ್ನು ಬದಲಿಸಬಹುದು.  ನೀರಷ್ಟೆ ಅಲ್ಲ, ಪೆಟ್ರೋಲು ಮತ್ತು ಆಲ್ಕೊಹಾಲ್ ಕೂಡ ಇಂತಹ ಲೇಪ ಹಚ್ಚಿದ ಬಟ್ಟೆಗೆ ಅಂಟಿಕೊಳ್ಳಲಿಲ್ಲ. ಅದನ್ನು ಒದ್ದೆ ಮಾಡಲಿಲ್ಲ. ನೀರು ಅಂಟಿಕೊಳ್ಳದ ಬಹಳಷ್ಟು ಮೇಲ್ಮೈ ಲೇಪನ ತಂತ್ರಗಳು ಈಗಾಗಲೇ ಲಭ್ಯವಿವೆ. ಆದರೆ ಮೇಲ್ಮೈ ಸೆಳೆತ ಕಡಿಮೆ ಇರುವ ವಸ್ತುಗಳನ್ನು ಅಂಟಿಸಿಕೊಳ್ಳದ ಲೇಪಗಳು ಇರಲಿಲ್ಲ. ಮ್ಯಾಕ್ಕಿನ್ಲಿಯ ತಂಡ ಇದನ್ನು ಸಾಧಿಸಿದೆ.

ಅಷ್ಟೇ ಅಲ್ಲ. ಈ ಲೇಪನದಿಂದಾಗಿ ಸ್ಪರ್ಶಕೋನದಲ್ಲಿ ಆಗುವ ಬದಲಾವಣೆಗಳು ಹೇಗಿವೆ ಎಂದರೆ, ಗಾಳಿ ಮತ್ತು ದ್ರವ ಹಾಗೂ ದ್ರವ ಮತ್ತು ಬಟ್ಟೆಯ ನಡುವಣ ಕೋನಗಳಲ್ಲಿ ಬದಲಾವಣೆಗಳು ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಬಟ್ಟೆಯನ್ನು ಹಿಗ್ಗಿಸಿದಾಗ, ಅದರ ರಂಧ್ರಗಳಲ್ಲಿರುವ ಗಾಳಿಯ ಜೊತೆಗಿನ ಸ್ಪರ್ಶಕೋನ ಬದಲಾಗಿ ದ್ರವದ ಹನಿ ಕುಸಿಯುತ್ತದೆ. ಅರ್ಥಾತ್ ಬಟ್ಟೆ ಅದನ್ನು ಹೀರಿಕೊಳ್ಳುತ್ತದೆ. ಅಂದರೆ ಬಟ್ಟೆಯನ್ನು ಹಿಗ್ಗಿಸಿದಾಗ ಅದು ದ್ರವವನ್ನು ಹೀರಿಕೊಂಡು, ಸ್ವಸ್ಥಿತಿಗೆ ಮರಳಿದಾಗ ಮೊದಲಿನಂತೆಯೇ ಯಾವುದನ್ನೂ ಅಂಟಿಸಿಕೊಳ್ಳದ ಬಟ್ಟೆಯಾಗುತ್ತದೆ. ಹೀಗೆ ಇಚ್ಛಾವರ್ತಿ ಗುಣವನ್ನು ಬಟ್ಟೆಗೆ ನೀಡಬಹುದು ಎಂದು ಮ್ಯಾಕ್ಕಿನ್ಲಿ ತಂಡ ನಿರೂಪಿಸಿದೆ. ನಾಳೆ ಇಂತಹ ಲೇಪಗಳಿರುವ ಬಟ್ಟೆಗಳು ಬಂದಾಗ ಎಣ್ಣೆಯೂ ಅದಕ್ಕೆ ಅಂಟಿಕೊಳ್ಳುವುದಿಲ್ಲ. ಆದರೆ ಒರೆಸಬೇಕೆಂದಾಗ ತುಸು ಹಿಗ್ಗಿಸಿ ಒರೆಸಿದರೆ ಸಾಕು, ಸ್ಪಂಜಿನಂತೆ ಎಲ್ಲವನ್ನೂ ಹೀರಿಕೊಂಡೀತು.

1 Wonjae Choi et. al., Fabrics with tunable Oleophobicity, Advanced Materials, Vol 21, Pp 1-6, 2009 DOI:10.1002/adma.20802502