ದಶರಥನ ಬೇಟೆ

ದಶರಥನು ಯೌವ್ವನದ ದಿನಗಳಲ್ಲಿ ಬೇಟೆಯಾಡಲು ಹೋಗುತ್ತಿದ್ದ. ಒಮ್ಮೆ ಬೇಟೆಯಾಡುವಾಗ ರಾತ್ರಿಯ ಕತ್ತಲಿನಲ್ಲಿ ಆನೆಯೊಂದು ನದಿಯಲ್ಲಿ ನೀರು ಕುಡಿಯುತ್ತಿರುವಂತೆ ಶಬ್ಧ ಕೇಳಿ ಬಂತು. ಆನೆ ಇದೆ ಎಂಬ ಭ್ರಮೆಯಿಂದ ಬಾಣಬಿಟ್ಟ ಆದರೆ ಅಲ್ಲಿ ಆನೆಗೆ ಬದಲು ಒಬ್ಬ ಋಷಿಕುಮಾರ ನೀರು ತುಂಬಿಸುತ್ತಿದ್ದ ಮುನಿಕುಮಾರನನ್ನು ಕೊಂದುಬಿಟ್ಟ. ಆತ ಶ್ರವಣಕುಮಾರ; ಯಜ್ಞದತ್ತ, ತಾಂಡವಮುನಿ ಮೊದಲಾದ ಹೆಸರುಗಳೆ ಇವೆ. ದಶರಥನು ಅನ್ಯಾಯವಾಗಿ ಒಬ್ಬ ಋಷಿಕುವಾರನನ್ನು ಕೊಂದದ್ದಕ್ಕಾಗಿ ಸಂಭವಿಸುವ ಪಾಪ ಭೀತಿಯಿಂದ ಪರಿತಪಿಸುತ್ತಾನೆ. ಆಗ ಸಾಯುತ್ತಿರುವ ಮುನಿಕುಮಾರನು ತಾನು ಬ್ರಾಹ್ಮಣನಲ್ಲವೆಂದೂ ದಶರಥನಿಗೆ ಬ್ರಹ್ಮ ಹತ್ಯಾದೋಷ ಬರುವುದಿಲ್ಲವೆಂದು ತಿಳಿಸಿ ತನ್ನ ತಂದೆ ವೈಶ್ಯ, ತಾಯಿ ಶೂದ್ರಣತಿಯವಳು ಎಂದು ಧೈರ್ಯ ತುಂಬುತ್ತಾನೆ. ಆತ ಕುರುಡರಾಗಿದ್ದ ತನ್ನ ವೃದ್ಧ ಮತಾ-ಪಿತೃಗಳನ್ನು ತಕ್ಕಡಿಯಂಥ ಸಾಧನದಲ್ಲಿ ಕೂಡಿಸಿಕೊಂಡು ಭುಜದ ಮೇಲೆ ಹೊತ್ತು ತೀರ್ಥಯಾತ್ರೆಗೆ ಹೊರಟಿದ್ದ. ಅವರಿಗೆ ಬಾಯಾರಿಕೆಯಾದ್ದರಿಂದ ನದಿಯ ಸಮೀಪದಲ್ಲಿ ಅವರನ್ನು ಕೂಡಿಸಿ ನೇರು ತುಂಬಿಸಿಕೊಳ್ಳುವಾಗ ಅಚಾತುರ್ಯ ನಡೆದುಬಿಟ್ಟಿತ್ತು. ದಶರಥನು ಶ್ರವಣಕುಮಾರನ ಪೋಷಕರಿಗೆ ನಡೆದ ಸಂಗತಿಯನ್ನು ತಿಳಿಸಲಾಗಿ ಅವರು ದಶರಥನಿಗೆ ಶಾಪ ನಿಡುತ್ತಾರೆ. ಪುತ್ರ ವಿಯೋಗದ ದುಃಖದಿಂದ ನಾವು ಎದೆಯೊಡೆದು ಸಾಯುವಂತೆ ನಿನಗೂ ಪುತ್ರ ವಿಯೋಗವು ಸಂಭವಿಸಲೆಂದು ಶಪಿಸಿ, ಶ್ರವಣನ ವೃದ್ಧ ತಂದೆ ತಾಯಿಗಳಿಬ್ಬರೂ ಪ್ರಾಣಬಿಡುತ್ತಾರೆ. ಮುಂದೆ ರಾಮನು ವನವಾಸಕ್ಕೆ ಹೋದ ಸಂದರ್ಭದಲ್ಲಿ ದಶರಥನಿಗೆ ಪುತ್ರ ವಿಯೋಗದ ದುಃಖವು ತೀವ್ರವಾಗಿ ಪ್ರಾಣ ಬಿಡುವ ಸಂದರ್ಭದಲ್ಲಿ ಶಾಪವು ನೆನಪಿಗೆ ಬರುತ್ತದೆ. ಅದನ್ನು ವಿವರಿಸಿ ಆತ ಮರಣ ಹೋಂದುತ್ತಾನೆ. ಈ ಬೇಟೆಯ ಪ್ರಸಂಗದಲ್ಲಿ ರಾಜನು ಮುನಿಕುಮಾರನನ್ನು ಬೇಟೆಯಾಡಿದ ಕಾರಣ ಆತನ ತಂದೆ-ತಾಯಿಯಿಂದ ಶಾಪಗ್ರಸ್ತನಾಗುತ್ತಾನೆ. ಇವನ ಶಾಪಕ್ಕೆ ಬೇರೆ ಪರಿಹಾರ ಕೊರೆಯಲೇ ಇಲ್ಲ. ಬದಲಾಗಿ ಶಾಪವನ್ನು ಅನುಭವಿಸಲೇ ಬೇಕಾಗುತ್ತದೆ. ಇದಕ್ಕೆ ಪೂರಕವೆಂತೆ ಕೈಕೆಯ ವರಗಳನ್ನು ಕೇಳುವ ನೆಪದಲ್ಲಿ ರಾಮನಿಗೆ ೧೪ ವರ್ಷ ವನವಾಸವನ್ನೂ ವಿಧಿಸಲು ಕೇಳಿದ್ದು ಅವಳಿಗೆ ಮಂಥರೆಯು ಹೇಳಿಕೊಟ್ಟಿದ್ದು ನಡೆಯಲೇ ಬೇಕಾದ ಘಟನೆಗಳಾಗಿ ನಡೆದು ಬಿಡುತ್ತದೆ. ರಾವಣ ಸಂಹಾರಕ್ಕೆ ನಾಂದಿಯಾಗುತ್ತದೆ. ಹಾಗೆಯೇ ಸೀತೆಯ ದುರಂತಕ್ಕೂ ಗರಿಮೂಡುತ್ತದೆ. ಆದ್ದರಿಂದ ಈ ಬೇಟೆಯ ಪ್ರಕರಣವು ದಶರಥನನ್ನು ಶಾಪವು ಬೇಟೆಯಾಡಿದ ಸಂಕೇತವಾಗಿ ಕಂಡುಬರುತ್ತದೆ.

ಚಿನ್ನದ ಜಿಂಕೆಯ ಬೇಟೆ

ವನವಾಸದ ಅವಧಿಯಲ್ಲಿ ರಾಮ ಸೀತೆ ಲಕ್ಷ್ಮಣರಿಗೆ ಕಾಡಿನಲ್ಲಿ ರಾಕ್ಷಸರ ಉಪಟಳ ಹೆಚ್ಚುತ್ತಲೆ ಇರುತ್ತದೆ. ರಾವಣನ ತಂಗಿ ಶೂರ್ಪನಖೆಯು ರಾಮ ಲಕ್ಷ್ಮಣರನ್ನು ಮೋಹಗೊಂಡು, ಪ್ರೀತಿಸಿ ಅಪಮಾನಿತಳಾಗಿ ಅಣ್ಣನಲ್ಲಿ ದೂರುತ್ತಾಳೆ. ರಾಮನಿಗೆ ಒಬ್ಬಳು ಸುಂದರವಾದ ಮಡದಿ ಸೀತೆ ಇರುವುದಾಗಿಯೂ ಅವಳನ್ನು ಅಪಹರಿಸುವಂತೆಯೂ ಸಲಹೆ ನಿಡುತ್ತಾಳೆ. ರಾವಣನು ತನ್ನ ಮಂತ್ರಿ ಹಾಗೂ ಸೋದರ ಮಾವನಾಗಿದ್ದ ಮಾರೀಚನಿಗೆ ವಿಷಯ ತಿಳಿಸಿ ಚಿನ್ನದ ಜಿಂಕೆಯ ವೇಷವನ್ನು ಧರಿಸಿ ದಂಡಕಾರಣ್ಯದ ಪಂಚವಟಿ ರಾಮಾಶ್ರಮದ ಬಳಿ ಸುಳಿದಾಡುವಂತೆ ಸಂಚು ರೂಪಿಸಿದ. ಅದರಂತೆ ಮಾರೀಚನು ಚಿನ್ನದ ಜಿಂಕೆಯಾಗಿ ಸುಳಿದಾಡುತ್ತಿರಲು ಅದನ್ನು ಕಂಡ ಸೀತೆಯು ಅದು ತನಗೆ ಬೇಕೆಂದು ಹಠ ಹಿಡಿಯುತ್ತಾಳೆ. ರಾಮನು ಅದರ ಬೆನ್ನುಹತ್ತಿ ಬೇಟೆಯಾಡಲು ಹೊರಡುತ್ತಾನೆ. ಬಹು ದೂರ ಸಾಗಿದ ಬಳಿಕ ಧ್ವನಿಯನ್ನು ಅನುಕರಿಸಿ ಹಾ| ಲಕ್ಷ್ಮಣಾ ಸೀತಾ ಎಂದು ಕಿರುಚುತ್ತದೆ. ಜಿಂಕೆಯ ಓಡಾಟವನ್ನು ಗಮನಿಸಿದ ಲಕ್ಷ್ಮಣನಿಗೆ ಆರಂಭದಲ್ಲಿಯೇ ಇದು ಮಾರೀಚನ ಮಾಯಾವತಾರವೆಂದು ಅನ್ನಿಸಿ ರಾಮ ಸೀತೆಯರಲ್ಲಿ ಅನುಮಾನವನ್ನು ತೋಡಿಕೊಂಡಿದ್ದ. ಆದರೂ ಸೀತೆಯು ಬಯಸಿದಳೆಂಬ ಕಾರಣಕ್ಕೆ ರಾಮನು ಬೇಟೆಯಾಡಲು ಹೊರಟಿದ್ದ. ಲಕ್ಷ್ಮಣ ಸೀತೆಯ ರಕ್ಷಕನಾಗಿದ್ದ.

ರಮಧ್ವನಿಯು ಆರ್ಥನಾದದ ಅನುಕರಣೆಯನ್ನು ಸೀತೆಯು ನಿಜವೆಂದು ಭಾವಿಸಿ ರಾಮನಿಗೆ ತೊಂದರೆಯಾಗಿದೆ ಎಂದು ತಿಳಿದು ಲಕ್ಷ್ಮಣನನ್ನು ಅಲ್ಲಿಗೆ ಹೋಗುವಂತೆ ತಿಳಿಸುತ್ತಾಳೆ. ಆತನು ಒಪ್ಪದಿದ್ದಾಗ ದೂಷಿಸಿ ಹೋಗುವಂತೆ ಮಾಡುತ್ತಾಳೆ. ಇದರಿಂದ ರಾವಣನು ಸನ್ಯಾಸಿಯ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸಲು ಮಾರ್ಗವಾಯಿತು. ಸೀತೆಯು ಜಿಂಕೆಯ ಬಣ್ಣಕ್ಕೆ ಮಾರು ಹೋಗಿದ್ದು ಅವರ ದುರಂತಕ್ಕೆ ಕಾರಣವಾಯಿತು. ಆ ಜಿಂಕೆಯನ್ನು ಕರೆದೊಯ್ದು ತನ್ನ ಅರಮನೆಯ ಅಂತಃಪುರದ ಬಾಗಿಲಿಗೆ ಕಟ್ಟಿದರೆ ಎಷ್ಟು ಚೆನ್ನಾಗಿರುತ್ತಿತ್ತು ಅಥವಾ ಅದರೊಂದಿಗೆ ಆಟವಾಡಿಕೊಂಡಿದ್ದರೆ ಎಷ್ಟು ಚೆನ್ನಾಗಿರಬಹುದು. ಅದು ಜೀವಂತವಾಗಿ ದೊರೆಯದಿದ್ದಾಗ ಅದರ ಚರ್ಮವನ್ನಾದರೂ ತಂದುಕೊಟ್ಟರೆ ಅದರ ಮೇಲೆ ಕುಳಿತು ಸಂತೋಷಿಸುವುದಾಗಿ ಆಸೆಯನ್ನು ವ್ಯಕ್ತ ಪಡಿಸುತ್ತಾಳೆ. ಈ ಬೇಟೆಯ ಪರಿಣಾಮವು ನಿರಂತರವಾಗಿ ಸೀತೆಯ ಮೇಲಾಗುತ್ತದೆ. ಆಕೆ ಲಂಕೆಯಲ್ಲಿ ಬಂಧಿಯಾಗಿಯೂ ರಾಮನಲ್ಲಿ ಅಪವಾದ ಭರಿತಳಾಗಿಯೂ, ವಾಲ್ಮೀಕಿಯಲ್ಲಿ ಆಶ್ರಯ ಪಡೆದವಳಾಗಿಯೂ ಸಾಗಿ ಭೂದೇವಿಯಲ್ಲಿ ಲೀನವಾಗುವಂತೆ ಮಾಡಿತು.

ವಾಲ್ಮೀಕಿಯ ವೃತ್ತಾಂತ

ರಾಮಾಯಣ-ಮಹಾಭಾರತವೆಂಬ ಸಂಸ್ಕೃತ ಮಹಾಪುರಾಣವನ್ನು ರಚಿಸಿದ ವಾಲ್ಮೀಕಿಯ ವೃತ್ತಾಂತವು ಬೇಟೆಯ ಪ್ರವೃತ್ತಿಯಿಂದ ಆರಂಭಗೊಂಡ ಬೇಟೆಯ ಪ್ರಸಂಗದಿಂದ ತೆರೆದುಕೊಳ್ಳುತ್ತದೆ. ಮೂಲತಃ ಬೇಟೆಗಾರನೂ ದರೋಡೆಕೋರನೂ

ಆಗಿದ್ದ ಬೇಡನೋಬ್ಬನು ಸಪ್ತಋಷಿಗಳ ಪ್ರಭಾವದಿಂದ ತಪಸ್ಸನ್ನು ಮಾಡಿ ವಾಲ್ಮೀಕಿಯಾಗುತ್ತಾನೆ. ಈತನೊಮ್ಮೆ ಆಶ್ರಮದ ಬಳಿ ಹಿಯುತ್ತಿದ್ದ ತಾಮ ನದಿಗೆ ಮಧ್ಯಾಹ್ನ ಸ್ನಾನಕ್ಕೆಂದು ಹೋಗಿದ್ದಾಗ ಬೇಡನೊಬ್ಬನು ಕ್ರೌಂಚಪಕ್ಷಿಗಳನ್ನು ಬೇಟೆಯಾಡಿದ ಪ್ರಸಂಗವೊಂದು ಎದುರಾಗುತ್ತದೆ. ಬೇಡನು ಗಂಡುಪಕ್ಷಿಯನ್ನು ಕೊಂದಿರುತ್ತಾನೆ. ಹೆಣ್ಣುಪಕ್ಷಿಯು ಗಂಡು ಕ್ರೌಂಚಕ್ಕಾಗಿ ಹಂಬಲಿಸುತ್ತಾ ಗಂಡಿನ ಸಾವಿಗಾಗಿ ಗೋಳಿಡುತ್ತಿರುತ್ತದೆ. ಈ ಸನ್ನಿವೇಶವು ವಾಲ್ಮೀಕಿಯ ಮನಕಲದುತ್ತದೆ. ಅದರ ಮನಸ್ಸು ಹೆಣ್ಣು ಕ್ರೌಂಚದ ತಲ್ಲಣದ ಪರವಾಗುತ್ತದೆ. ಆದಕಾರಣ ಆತನು ಬೇಡವಿಗೆ ಶಾಪ ನೀಡಲು ಮುಂದಾಗುತ್ತಾನೆ. ಅಲ್ಲಿನ ನದಿಯ ಪರಿಸರ ಕ್ರೌಂಚಪಕ್ಷಿಗಳ ವಿಹಾರದ ಸಮಯ ಆ ಸಮಯದಲ್ಲಿನ ಅವುಗಳ ಭಾವತೀವ್ರತೆ ಇವೆಲ್ಲವೂ ವಾಲ್ಮೀಕಿಯ ಮನಸ್ಸಿನಲ್ಲಿ ನಾಟೆರುತ್ತವೆ. ಅಂತೆಯೇ ಬೇಡನ ಗುಣ-ಸ್ವಭಾವಗಳೂ ವಾಲ್ಮೀಕಿಗೆ ಚಿರಪರಿಚಿತವಾದವುಗಳು. ಕ್ರೌಂಚಪಕ್ಷಿಗಳೆರಡು ಮಿಥುನದಲ್ಲಿದ್ದಾಗ ಬೇಟೆಯಾಡಿದ ಬೇಡನನ್ನು ಪಾಪನಿಶ್ಚಯನೆಂದು ವೈರನಿಲಯನೆಂದು ದೂಷಿಸುತ್ತಾನೆ. ಬೇಡನ ಪಾಲಿಗೆ ನದಿಯ ಪರಿಸರವು ಬೇಟೆಗಾರಿಕೆಯ ಆಯಕಟ್ಟಿನ ಸ್ಥಳವಾಗಿ ಪರಿಣಮಿಸಿದರೆ ಬೇಟೆಯಿಂದ ಹೊರತಾದ ಹೊರತಾದ ವಾಲ್ಮೀಕಿಗೆ ಅದು ಸತ್ಪುರುಷನ ಮನಸ್ಸಿನ ಹಾಗೆ ತಿಳಿಯಾಗಿಯೂ ರಮಣೀಯವಾಗಿಯೂ ಕಾಣ್ಕೆಯನ್ನು ನೀಡುತ್ತದೆ. ಜ್ಞಾನವಾಲ್ಮೀಕದಿಂದ ಆವೃತ್ತನಾದ ವಾಲ್ಮೀಕಿಯ ಈ ಎಲ್ಲವುಗಳಿಂದ ಪ್ರಭಾವಿತನಾದ್ದರಿಂದ ಬೇಡನನ್ನು ಛಂದೋಬದ್ಧವಗಿ ಶಪಿಸುತ್ತಾನೆ. ಅಪ್ರಜ್ಞಾಪೂರ್ವಕವಾಗಿ ತನ್ನಿಂದ ಛಾಂದೋಶ್ಮೋಕ ಬಂಧದ ಬಗ್ಗೆ ಆತನಿಗೆ ಆಶ್ಚರ್ಯವಾಗುತ್ತದೆ. ಶ್ಮೋಕವು ವೇದ ಪುರಾಣ ಸಂಬಂಧಿ ಅಲೌಕಿಕ ಗ್ರಂಥಗಳಲ್ಲಿ ಬಳಕೆಯಾಗುತ್ತದೆ. ಹೀಗೆ ಕ್ರೌಂಚ ಪಕ್ಷಿಯ ಶೋಕಕ್ಕೆ ಸ್ಪಂದಿಸಿ ನೀಡಿದ ಶಾಪವು ಶ್ಲೋಕವಾದ್ದದ್ದೇ ರಾಮಾಯಣದ ರಚನೆಗೆ ಕಾರಣವಾದ ರೂಪಕವಾಗುತ್ತದೆ. ರಾವಣನು ಬೇಟೆಗಾರನಂತೆ ಸೀತೆಯನ್ನು ರಾಮನಿಂದ ಬೇರ್ಪಡಿಸಿ ಸೀತೆಯು ಹೆಣ್ಣು ಕ್ರೌಂಚದಂತೆ ಗೋಳಿಡಲು ಕಾರಣವಾಗುವುದನ್ನು ಶ್ಮೋಕವು ಸಾಂಕೇತಿಸುತ್ತದೆ. ವಾಲ್ಮೀಕಿಯು ಹೆಣ್ಣು ಕ್ರೌಂಚದ ವಿರಹವೇದನೆಯ ಪರವಾದಂತೆಯೇ ಸೀತೆಯ ಪರವೂ ಆಗಿ ರಾಮಾಯಣದ ಉದ್ದಕ್ಕೂ ಉಳಿಯುತ್ತಾನೆ. ಈ ಆಶಯದ ಮೇಲೆಯೇ ವಾಲ್ಮೀಕಿಯು ರಚಿಸಿದ ಕಾವ್ಯವು ರಮನ ಜೀವನದ ಪಯಣ; ರಾಮಾಯಣವಾಗುತ್ತದೆ.

ಲೌಕಿಕ ಬದುಕಿನಲ್ಲಿ ಬದುಕಿನ ಅವಶ್ಯಕತೆ ವಿನೋದ ಇಲ್ಲವೇ ಘನತೆಯ ಸಂಕೇತ ಇಂಥ ಅಂಶಗಳಿಗೆ ಸೀಮಿತವಾಗುವ ಬೇಟೆಯು ಪುರಾಣ ಪ್ರಸಂಗದಲ್ಲಿ ಅಲೌಕಿಕ ಬದುಕಿನ ಆಶೋತ್ತರಗಳನ್ನು ಕಟ್ಟಿಕೊಡಲು ಬದ್ಧವಾಗಿರುತ್ತದೆ. ಈ ಹಿನ್ನಲೆಯಲ್ಲಿ ರಾಮಾಯಣದ ಕಥೆಯನ್ನು ಆರಂಭಗೊಳಿಸುವ ಬೇಟೆಗಾರಿಕೆಯ ಸನ್ನಿವೇಶವು ಋಚಿಯಿಂದ ವಿಶ್ಲೇಷಣೆಗೆ ಒಳಗಾಗುತ್ತದೆ. ಅಲ್ಲದೆ ಆ ಋಷಿ ವಾಲ್ಮೀಕಿಯ ಜ್ಞಾನವನ್ನು ಜಾಗೃತಗೋಳಿಸುವಂತೆ ಪ್ರೇರೆಪಿಸುತ್ತದೆ. ಅಂತಿಮವಾಗಿ ಮಹಾಕಾವ್ಯವು ಪುರಾಣವಾಗಲು ಅನುವಾಗುತ್ತದೆ. ಇಲ್ಲಿನ ಬೇಡ ಹಾಗೂ ವಾಲ್ಮೀಕಿ ಇಬ್ಬರೂ ಒಂದೇ ಬುಡಕಟ್ಟು ಮೂಲದವರೇ ಆದರೂ ಇವರಿಬ್ಬರ ಜೀವನ ಕ್ರಮ ಆಹಾರ ವೃತ್ತಿ ಮತ್ತು ಬದುಕಿನ ಮೌಲ್ಯಗಳಲ್ಲಿ ಭಿನ್ನತೆ ಕಂಡುಬರುತ್ತದೆ. ವಾಲ್ಮೀಕಿಯ ದೃಷ್ಠಿಯಲ್ಲಿ ಪಾಪವೆಂದು ಪರಿಗಣಿತವಾದ ಬೇಟೆಯು ಬೇಟೆಗಾರನಿಗೆ ಜೀವನ ನಿರ್ವಹಣೆಯ ವೃತ್ತಿಯಾಗಿದೆ. ಆದ್ದರಿಂದಲೇ ಆತನಿಗೆ ಮತ್ತೊಂದು ಕ್ರೌಂಚದ ವೇದನೆ ಅಗಣ್ಯವಾಗುತ್ತದೆ. ವಾಲ್ಮೀಕಿ ವೃತ್ತಾಂತಕ್ಕೆ ಸಂಬಂಧಿಸಿದಂತೆಯೂ ರಾಮಾಯಣದಲ್ಲಿ ಹಲವು ವಿವರಣೆಗಳು ವಿಸ್ತಾರವಾಗುತ್ತಾ ಬೇಟೆಯ ಪ್ರತಿಮೆಯನ್ನು ಆಧರಿಸುತ್ತದೆ.

ಆನಂದ ರಾಮಾಯಣದ ಪ್ರಕಾರ ಬೇಡನೊಬ್ಬನು ಕಾಡಿನ ಮಾರ್ಗದಲ್ಲಿ ಗೋದಾವರಿಯತ್ತ ಪ್ರಯಾಣಿಸುತ್ತಿದ್ದ ಪಂಪಾತೀರದ ಶಂಖನೆಂಬ ಬ್ರಾಹ್ಮಣನನ್ನು ಬೆದರಿಸಿ ಆತನಲ್ಲಿದ್ದ ಸಕಲ ವಸ್ತುಗಳನ್ನು ಕಸಿದುಕೊಳ್ಳುತ್ತಾನೆ. ಎಲ್ಲದನ್ನೂ ತನಗೆ ನೇಡಿ ಬರಿಗಾಲಿನಲ್ಲಿ ನಡೆದುಹೋಗುತ್ತಿದ್ದ ಬ್ರಾಹ್ಮಣನ ಬಗ್ಗೆ ಬೇಡನಿಗೆ ಕನಿಕರಮೂಡಿ ಆತನಿಗೆ ಪಾದರಕ್ಷೆಗಳನ್ನು ಹಿಂದಿರುಗೆಸುತ್ತಾನೆ. ಬೇಡನ ಈ ಗುಣವನ್ನು ವಿಶ್ಲೇಷಿಸಿದ ಬ್ರಾಹ್ಮಮಣನು ಅವನ ಪೂರ್ವ ಜನ್ಮದ ಹಿನ್ನಲೆಯನ್ನೂ ಮುಂದಿನ ಜನ್ಮದ ಭವಿಷ್ಯವನ್ನೂ ಕುರಿತು ವಿವರಿಸುತ್ತಾನೆ. ತನ್ನನ್ನು ಪೀಡಿಸಿದ ಬೇಡನು ಪೂರ್ವಜನ್ಮದಲ್ಲಿ ಶ್ರೀವತ್ಸ ಗೋತ್ರದ ಸ್ತಂಭ ಬ್ರಾಹ್ಮಣನಾಗಿದ್ದನಾದರೂ ವಿಷಯ ಲಂಪಟನಾಗಿ ವೇಶ್ಯೆಯ ಸಹವಾಸದಲ್ಲಿ ಕಾಲಕಳೆಯುತ್ತಿದ್ದ, ರೋಗ ಬಾಧೆಯು ಉಲ್ಬಣವಾಗಲು ವೇಶ್ಯೆಯು ದೂರವಾದಳು. ಪತಿವ್ರತೆಯಾಗಿದ್ದ ಕಾಂತಿಮಯಿ ಪತ್ನಿಯ ಆರೈಕೆ ಮಾಡಿದಳು. ಒಮ್ಮೆ ಇತನ ಬಾಯೆಳಕ್ಕ ಔಷಧಿಯನ್ನು ಹಾಕುತ್ತಿರುವಾಗ ಸನ್ನಿಪಾತ ರೋಗಬಂದು ಪತ್ನಿಯ ಕೈ ಬರೆಯನ್ನು ತನತರಿವಿಲ್ಲದಂತೆಯೇ ಕಡಿದು ಪ್ರಾಣಬಿಟ್ಟ. ಆ ಸಮಯದಲ್ಲಿ ಆಕೆಯ ಬೆರಳು ತುಂಡಾಗಿ ಈತನ ಬಾಯಲ್ಲೇ ಉಳಿಯಿತು. ಹೀಗೆ ಮಾಂಸಸೇವನೆ ಮಾಡಿದ್ದರಿಂದ ಬೇಡನಾಗಿ ಬೇಟೆಯಾಡಿ ಮಾಂಸಾಹಾರಿಯಾಗಲಿ ದರೋಡೆ ಮಾಡಲು ಕಾರಣವಾಯಿತು. ಪಾದೋದಕವನ್ನು ತಲೆಯ ಮೇಲೆ ಚಿಮುಕಿಸಿದ್ದುದ್ದರಿಂದ ನಿನಗೆ ನನ್ನ ಪಾದರಕ್ಷೆಗಳನ್ನು ಹಿಂದಿರುಗಿಸುವಷ್ಟು ಕರುಣೆ ಉಳಿದಿದೆ. ಮತ್ತೊಂದು ಜನ್ಮಕ್ಕೆ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತಾನೆ. ಅದರಂತೆ ಮುಂದಿನ ಜನ್ಮದಲ್ಲಿ ಕೃಣು ಎಂಬ ಋಷಿ ಹಾಗೂ ನಾಗಿಣಿಯ ಮಗನಾಗಿ ಜನಿಸಿದ ಆದರೆ ಅವರು ಶಿಶುವನ್ನು ಕಾಡಿನಲ್ಲಿ ತ್ಯಜಿಸಿದ್ದರಿಂದ ಬೇಡರೊಡನೆ ಬೆಳೆದು ಕಿರಾತಸಹಜವಾದ ಬೇಟೆಗಾರಿಕೆ ಮತ್ತು ದರೋಡೆಗಳನ್ನು ವೃತ್ತಿ ಮಾಡಿಕೊಂಡಿರುತ್ತಾನೆ. ಬೇಡ ಮಹಿಳೆಯನ್ನು ಮದುವೆಯಾಗಿ ಮಕ್ಕಳನ್ನೂ ಹೊಂದಿರುತ್ತಾನೆ. ಒಮ್ಮೆ ಸಪ್ತ ಋಷಿಗಳ ಬೋಧನೆ ಮಾರ್ಗದರ್ಶನಗಳಿಂದಾಗಿ ಮಹರ್ಷಿಯಾಗಿ ರಾಮಾಯಣ ಮಹಾಕಾವ್ಯವನ್ನು ರಚಿಸುತ್ತಾನೆ. ಭಾರತೀಯರ ಪಾಲಿಗೆ ಅತ್ಯಂತ ಶ್ರೇಷ್ಠವಾದ ಪುರಾಣ ಗ್ರಂಥವಾಗಿ ಸದ್ಗತಿ ಮೋಕ್ಷ ಮುಕ್ತಗಳತ್ತ ಕೊಂಡೊಯ್ಯುವ ಪ್ರಾವಿತ್ರ‍್ಯತೆಯನ್ನು ನೀಡುವ ಸಾಧನವಾಗಿದೆ. ವಾಲ್ಮೀಕಿಯು ರಾಮಾಯಣ ರಚನೆಕಾರ ಹಾಗೂ ರಾಮಾಯಣದ ಒಂದು ಪಾತ್ರವಾಗಿಯೂ ಪರಿಚಿತವಾಗುತ್ತಾನೆ. ಆದರೆ ಭೃಗುವಿನ ಮಗ-ಮೊಮ್ಮಗ-ಸಹೋದರ; ಭಾರ್ಗವ ವಂಶಸ್ಥ ಶಾಕಲನಗರದ ಸ್ತಂಭನೆಂಬ ಬ್ರಾಹ್ಮಣ ತಪಸ್ವಿಯ ವೀರ್ಯ ಸೇವನೆ ಮಾಡಿದ ಸರ್ಪವೊಂದರ ಮಗ, ಗರುಡ ವಂಶದ ಪಕ್ಷಿರಾಜ, ಸುಮತಿ ಎಂಬ ಬ್ರಾಹ್ಮಣನ ಮಗ ಎಂಬಿತ್ಯಾದಿ ಉಲ್ಲೇಖಗಳು ಲಭಿಸುತ್ತವೆ. ಅಲ್ಲದೆ ವಾಲ್ಮೀಕಿಗೆ ಕವಿ ಎಂಬ ಹೆಸರೂ ಇದೆ. ಪುರಾಣಗಳಲ್ಲಿ ಉಕ್ತವಾಗುವ ಕವಿಯ ತಾಯಿ ಕ್ಯಾತಿ; ಸಹೋದರ ಶುಕ್ರಾಚಾರ್ಯನೆಂದು ಹೇಳಲಾಗಿದೆ. ಪ್ರಿಯವ್ರತ ಮತ್ತು ವಿಶ್ವಕರ್ಮ ದಂಪತಿಗಳ ಮಗಳು ಬರ್ಹಿಷ್ಮತಿಯ ಹತ್ತುಜನ ಮಕ್ಕಳಲ್ಲಿ ಕೊನೆಯವನು ಕವಿಯೆಂದೂ ಆತನ ಸಹೋದರರಲ್ಲಿ ಇಬ್ಬರು ಸವನ ಮತ್ತು ಮಹಾವೀರ ಎಂಬ ಹೆನರಿನವರು ವೈರಾಗ್ಯ ಹೊಂದಿ ಅರಣ್ಯಕ್ಕೆ ಹೋದರೆಂದು ವಿದರ್ಶನವಿದೆ. ಮತ್ತೊಂದು ಉಲ್ಲೀಖವು ಕವಿಯನ್ನು ಕುರುಕ್ಷೇತ್ರದ ಕೌಶಿಕನೆಂಬ ಮುನಿಯ ಏಳುಮಂದಿ ಮಕ್ಕಳಲ್ಲಿ ಐದನೆಯವನು ಎಂದು ವಿವರಿಸುತ್ತದೆ. ಒಮ್ಮೆ ಸಹೋದರರೊಂದಿಗೆ ಸೇರಿ ಈತನು ಗುರುವಾದ ಗರ್ಗ ಮುನಿಯ ಗೋವನ್ನು ಕ್ಷಾಮಕಾಲದಲ್ಲಿ ಕೊಂದು ತಿಂದು ಹಸುವನ್ನು ಹುಲಿ ತಿಂದಿತೆಂಬ ಸುಳ್ಳನ್ನು ಹೇಳಿ, ಅದು ಹೇಗೆಂದು ಪಿತೃವರ್ತಯೆಂಬ ಕಿರಿಯ ಸಹೋದರನ ನೇತೃತ್ವದಲ್ಲಿ ಶ್ರಾದ್ಧ ಮಾಡಿ ಗುರುವಿನ ಗೋಮಾಂಸವನ್ನು ಪಿತ್ಗಳಿಗೆ ಅರ್ಪಿಸಿ ತಾವೂ ತಿಂದಿದ್ದರು. ಸಹೋದರರ ಸಮೇತ ದಶಾರ್ಣದೇಶದ ಬೇಡರಾಗಿ ಮರುಜನ್ಮ ಪಡೆದರು. ಆದ್ದರಿಂದ ಕವಿ ಎಂಬ ಹೆಸರಿಗೆ ಅನ್ವಯವಾಗುವ ವಾಲ್ಮೀಕಿಯನ್ನು ಕುರಿತು ಪೌರಾಣಿಕ ಉಲ್ಲೇಖಗಳು ಪರೋಕ್ಷವಾಗಿ ಸಂಬಂಧಪಡುತ್ತವೆ. ಮತ್ತೊಂದು ಆಧಾರದ ಪ್ರಕಾರ ಕವಿಯು ವಿಶ್ವಾಮಿತ್ರನ ಮಗ. ಈತನಿಗೆ ಹಿಂಸ್ರ, ವಾಗ್ದುಷ್ಟ, ಕ್ರೋಧನ, ಪಿಶುನ, ಖಸ್ರಮ, ಪಿತೃವರ್ತಿ ಎಂಬ ಆರು ಮಂದಿ ಸಹೋದರರು ಇದ್ದರು. ಇವರೆಲ್ಲರೂ ಕುರುಕ್ಷೇತ್ರದಲ್ಲಿ ವಾಸಿಸುತ್ತಿದ್ದರು. ಅಲ್ಲದೆ ಗರ್ಗ ಋಷಿಯ ಶಿಷ್ಯರಗಿದ್ದರು. ಇವರಲ್ಲಿ ಕವಿ ಮತ್ತು ಖಸ್ರುಮರನ್ನು ಹೊರತುಪಡಿಸಿ ಉಳಿದವರು ಗುರುಗಳ ಗೋವುಗಳನ್ನು ಕೊಂಡು ತಿಂದುದರಿಂದ ಅನೇಕ ಜನ್ಮಗಳನ್ನು ಹೊಂದಿ ಕೊನೆಗೆ ಸದ್ಗತಿ ಪಡೆದರು. (ಪುರಾಣಭಾರತ ಕೋಶ, ಪು.೭೪೪) ಮುಂದಿನ ವರುಣ ಹಾಗೂ ಆತನ ಹೆಂಡತಿ ಚರ್ಪಟೆಯ ಮಗ ವಾಲ್ಮೀಕಿ ಈತನ ಸಹೋದರ ಭೃಗಋಷಿ ಎಂದು ಭಾಗವತದಲ್ಲಿ ಹೇಳಿದೆ. ವಾಲ್ಮೀಕಿಯು ಭಾರ್ಗವ ವಂಶಸ್ಥನೆಂದೂ ಈ ಕಾರಣ ವಾಲ್ಮೀಕಿಗೂ ಭಾರ್ಗವನೆಂಬ ಹೆಸರು ಅನ್ವಯವಾಗುತ್ತದೆಂದು ಹೇಳಲಾಗಿದೆ. ಅಲ್ಲದೆ. ವಾಲ್ಮೀಕಿ ಧಸ್ಸು ಎಂಬ ಹೆಸರಿಂದ ಕರೆಯಲಾಗುತಿತ್ತು ಎಂಬ ವಿವರಗಳು ಇವೆ. ದ್ರಾವಿಡರು ಭಾರತಕ್ಕೆ ಬರುವುದಕ್ಕೆ ಮೊದಲು ದಲಿತರನ್ನು ದಶ್ಯುಗಳೆಂದು ಕರೆಯುತ್ತಿದ್ದು ಬಹುಷ ಆರ್ಯರಂತೆ ದ್ರಾವಿಡರು ಕೂಡ ಹೊರಗಿನಿಂದ ಬಂದವರು. ಪುರಾಣವನ್ನು ಆಧರಿಸಿದ ಮತ್ತೊಂದು ನಿದರ್ಶನದಂತೆ ಈತನು ಪ್ರಚೇತಸೇನನ ಮಗ ಮೂಲ ಹೆಸರು ರತ್ನಾಕರ ಬೇಡರ ಗುಂಪುಗಳೊಂದಿಗೆ ಸೇರಿ ದರೋಡೆಕೋರನಾಗಿದ್ದವನು ಸಪ್ತಋಷಿಗಳು ಮತ್ತು ನಾರದಮುನಿಯ ಮಾರ್ಗದರ್ಶನದಲ್ಲಿ ಜ್ಞಾನಿಯಾದ ಬ್ರಹ್ಮನ ಆಶೀರ್ವಾದದಿಂದ ರಾಮಾಯಣ ಮಹಾಕಾವ್ಯವನ್ನು ರಚಿಸಿ ಆದಿಕವಿ ಎನಿಸಿದ ಈ ಎಲ್ಲ ನಿದರ್ಶನಗಳ ವೃತ್ತಾಂಶಗಳ ವಾಲ್ಮೀಕಿಯ ಮೂಲವು ಮುಖ್ಯವಾಗುವುದಕ್ಕಿಂತ ಬೇಡನಾಗಿದ್ದನೆಂಬುದು ವೇಧ್ಯ.

ವಿಷ್ಣುಪುರಾಣದ ನಿದರ್ಶನದಂತೆ ಇಪ್ಪತ್ತನಾಲ್ಕನೆಯ ಚತುರ್ಯುಗದಲ್ಲಿ ವೇದವ್ಯಾಸನಾಗಿದ್ದ ಋಕ್ಷನೆಂಬುವವನೇ ವಾಲ್ಮೀಕಿ. ಮತ್ತೊಂದು ಕಥೆಯ ಪ್ರಕಾರ ವಾಲ್ಮೀಕಿ ಭಾರ್ಗವಗೋತ್ರದ ಪ್ರಚೇತಸನ ಮಗ ಋಕ್ಷ; ಎಳೆಯ ಮಗುವಾಗಿದ್ದಾಗ ಈತನ ತಾಯಿಯು ನದಿಯ ದಡದಲ್ಲಿ ಮಗುವನ್ನು ಮಲಗಿಸಿ ನದಿಗೆ ಸ್ನಾನಕ್ಕೆ ಇಳಿದಳು. ಆಕೆಯು ಹಿಂದಿರುಗಿ ಬರುವಷ್ಟರಲ್ಲಿ ಮಲಗಿಸಿದ್ದೆಡೆಯಲ್ಲಿ ಮಗು ಕಾಣದೆ ಹುಡುಕಿ ಸುಮ್ಮನಾದಳು ಆದರೆ ಅಷ್ಟರೊಳಗೆ ಹದ್ದೊಂದು ಬಂದು ಮಲಗೆದ್ದ ಮಗುವನ್ನು ಎತ್ತಿಕೊಂಡು ಹೋಗಿ ಬೇರೆ ಊರಿನ ಬೇಡರಕೇರಿಯಲ್ಲಿ ಹಾಕಿ ಹೋಗಿತ್ತು. ಆದ್ದರಿಂದ ಈತನನ್ನು ಬೇಡರು ಸಾಕಿದ್ದರು. ಮುಂದೆ ರಾಮಜಪ ಮಾಡುತ್ತಾ ಕುಳಿತ ಈತನನ್ನು ಸಪ್ತರ್ಷಿಗಳು ಕರೆದಾಗ ಆವರಿಸಿದ್ದ ಹುತ್ತವನ್ನು ಬೇಧಿಸಿ ಬರಲು ವರುಣನು ಮಳೆಗರೆದು ಸಹಾಯ ಮಾಡಿದ. ಆದ್ದರಿಂದ ವಾಲ್ಮೀಕಿಯು ಅಭಿಮಾನದಿಂದ ತನ್ನನ್ನು ವರುಣ (ಪ್ರಚೇತಸ)ನ  ಪುತ್ರನೆಂದು ಹೇಳಿಕೊಂಡಿರಬಹುದೆಂದು ವಿದ್ವಾಂಸರೊಬ್ಬರು ಅಭಿಪ್ರಾಯ ಪಡುತ್ತಾರೆ.

ಸಪ್ತರ್ಷಿಗಳ ಪೂವ್ಶ್ರಮದ ಬೇಡನನ್ನು ಪಾಪರ್ಜನೆಯಿಂದ ಮುಕ್ತಗೊಳಿಸಿ ರಾಮನಾಮ ಜಪದ ಮುಕ್ತಿಯತ್ತ ಪರಿವರ್ತಿಸಲು ಪ್ರಯತ್ನಸಿದಾಗ ಆತನು ಸುಲಭವಾಗಿ ಒಪ್ಪಲಿಲ್ಲ ತನ್ನ ಹೆಂಡತಿ ಮಕ್ಕಳನ್ನು ಸಾಕಲು ತಾನು ಏನು ಮಾಡಿದರೂ ಅದು ಪಾಪವಲ್ಲವೆಂದು ಸಮರ್ಥಿಸಿಕೊಳ್ಳುತ್ತಾನೆ. ಕೊನೆಗೆ ಮನೆಗೆ ಹೋಗಿ ಹೆಂಡತಿಯಲ್ಲಿ ಕೇಳುತ್ತಾನೆ. ಆಕೆಯು ಸಂಪಾದನೆಗೆ ಮಾತ್ರ ಬಾದ್ಯಸ್ಥಳೆಂದೂ ಪಾಪ-ಪುಣ್ಯಗಳಿಗೆ ಭಾಗಸ್ಥಳಲ್ಲವೆಂದು ಹೇಳಲಾಗಿ ಆತನಿಗೆ ದುಃಖವಾಯಿತು. ಋಷಿಗಳಲ್ಲಿ ಬಂದು ತನಗೆ ಬದುಕುವ ಮಾರ್ಗವನ್ನು ತೋರಬೇಕೆಂದು ಬೇಡಿಕೊಂಡರೆ ಅವರ ಉಪದೇಶದಂತೆ ರಾಮಜಪಗೈದು ಜ್ಞಾನ ವಾಲ್ಮೀಕದಿಂದ ತೆರೆದುಕೊಳ್ಳುತ್ತಾನೆ.

ವಾಲ್ಮೀಕಿ ರಾಮಾಯಣದಲ್ಲಿ ಸ್ವತಃ ವಾಲ್ಮೀಕಿಯೇ ಹೇಳಿಕೊಂಡಿರುವಂತೆ ಪ್ರಚೇತಸ ಒಬ್ಬ ಅಥವಾ ವರುಣದೇವ-ವರುಣನೆಂಬ ಋಷಿಯ ೧೦ನೇಯ ಪುರಾಣಗಳ ಹಿನ್ನಲೆಯ ಪ್ರಕಾರ ಪ್ರಚೇತಸ ಒಬ್ಬ ಮಹರ್ಷಿ ಭೂಮಿಯ ಮೇಲೆಲ್ಲ ಆವೃತ್ತವಾಗಿದ್ದ ಕಾಡಿನ ಮರಗಿಡಗಳನ್ನು ತಪಶಕ್ತಿಯಿಂದ ನಾಶಮಾಡಿ ಜನರಿಗೆ ವಾಸಿಸಲು ಯೋಗ್ಯವಾಗುವಂಥ ನಾಡಿನ ನಿರ್ಮಾಣಕ್ಕೆ ನಾಂದಿ ಹಾಕಿದ ವೃಕ್ಷಕನ್ಯೆ ಮರೀಷಿಯನ್ನು ಮದುವೆಯಾದ ಈತ ಪ್ರಜಾಪತಿಯೂ ಆಗಿದ್ದನೆಂದು ತಿಳಿದುಬರುತ್ತದೆ. ವಾಲ್ಮೀಕಿಯನ್ನು ಕಿರಾತಕ ಯಜಮಾನನಾದ ಕಾಮೀಕೇತುವೆಂದು ಕೆಲವರು ಹೇಳುತ್ತಾರೆ. ಈತನಿಗೆ ಹನ್ನೆರಡು ಮಂದಿ ಮಕ್ಕಳಿದ್ದರೆಂದೂ ಅವರಲ್ಲಿ ಏಳು ಜನರ ನೇತೃತ್ವದಲ್ಲಿ ಏಳು ಬೇಡರ ಪಡೆಗಳಿದ್ದು ಅವುಗಳ ಮೂಲಕ ಕಾಡಿನ ಮಾರ್ಗದ ದಾರಿಹೋಕರ ದರೋಡೆ ನಡೆಸುತ್ತದ್ದನೆಂದು ಹೇಳುತ್ತಾರೆ. ಕಾಲನಂತರ ಈ ಪಡೆಗಳು ದೇಶದಾದ್ಯಂತ ಚದುರಿ ಎಲ್ಲಡೆ ನೆಲೆಕಂಡುಕೊಂಡರೆಂದು ಮೌಖಿಕ ಪರಂಪರೆಯಲ್ಲಿ ನಿದರ್ಶನವಿದೆ. ಒಮ್ಮೆ ಈ ಗುಂಪುಗಳ ನಡುವೆ ಮೂಡಿದ ಭಿನ್ನಾಭಿಪ್ರಯಗಳಿಂದ ಸಂಘರ್ಷವೇರ್ಪಟ್ಟಿತು. ಇದರಿಂದ ಸಮುದಾಯವು ವಿನಾಶದತ್ತ ಸಾಗಿತು. ಸಂದರ್ಭದ ವಿಕೋಪ ಪರಿಸ್ಥಿತಿಯನ್ನರಿತ ವಾಲ್ಮೀಕಿಯ ಹಿರುಯ ಮಗ ಮಂದಲ ಮಣೆಭಟ್ಟರಣ್ಣನು ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ಜಗಳವಾಡುತ್ತಿದ್ದವರನ್ನು ನಿಯಂತ್ರಿಸಲು ಪ್ರಯತ್ನಿಸಿದ ಈತನನ್ನು ಕಂಡ ತಕ್ಷಣವೆ ಎಲ್ಲರೂ ಹೆದರಿ ಕೆಲ ಕೆಲವು ಗುಂಪುಗಳಾಗಿ ಅಡಗಿಕುಳಿತರು. ಆಗ ಈ ಹಿರಿಯನು ಆಯಾ ಗುಂಪುಗಳನ್ನು ಪ್ರತ್ಯೇಕಿಸಿತಾನು ಗುಂಪುಗಳ ಮುಖಂಡನಾದನು. ಈತನ ವಂಶಸ್ಥತು ಮಂದಲ ಮಣೆಭಟ್ಟನ ಗೋತ್ರದವರೆಂದು ಹೆಸರಾದರು. ಈತನನ್ನು ಮಂದಲತಾತನೆಂದೂ ಕರೆಯುತ್ತಾರೆ.

ವಾಲ್ಮೀಕಿಯು ಬ್ರಾಹ್ಮಣರ ಮಗನಾಗಿದ್ದನೆಂದೂ ಬಾಲ್ಯದಲ್ಲೇ ತಂದೆ-ತಾಯಿ ತೀರಿಕೊಂಡು ಅನಾಥವಾಗಿ ಕಾಡಿನಲ್ಲಿ ತಿರುಗುತ್ತಿದ್ದವನಿಗೆ ಬೇಡರು ಆಶ್ರಯ ಕೊಟ್ಟರೆಂದೂ ಹೇಳುತ್ತಾರೆ. ಬೇಡರೊಂದಿಗೆ ಬೆಳೆದಂತೆಲ್ಲ ಅವರ ವೃತ್ತಿ-ಗುಣಗಳನ್ನು ರೂಢಿಸಿಕೊಂಡು ದರೋಡೆಕೋರ ದಾರಿಗಳ್ಳನಾಗಿ ಪರಿವರ್ತನೆ ಹೊಂದಿದ್ದ ಮುಂದೆ ಸಪ್ತರ್ಷಿಗಳ ಸಂಪರ್ಕದಿಂದ ಜ್ಞಾನೋದಯವಾಗಿ ತಪಗೈದು ಮಹರ್ಷಿಯಾದನೆಂಬ ವಿವರಣೆಗಳು ಲಭಿಸುತ್ತವೆ. ಇನ್ನು ಚ್ಯವನ ಹಾಗೂ ಭೃಗುವಿನ ವಂಶಸ್ಥನೆಂಬ ಹಿನ್ನಲೆಯನ್ನು ಪರೀಶೀಲಿಸಿದರೆ ಚ್ಯವನ ಮತ್ತು ಕವಿ ಈತನ ಮಕ್ಕಳು.

ಬೇಡರ ಹಿನ್ನಲೆಯಲ್ಲಿ ಶಬರಿ ಮತ್ತು ಗುಹ

ರಾಮಾಯಣ ಆರಂಭದ ಬೇಡನ ಬೇಟೆಯನ್ನು ಹೊರತುಪಡಿಸಿದರೆ ಇಡೀ ಕಾವ್ಯದಲ್ಲಿ ಮತ್ತೆಲ್ಲೂ ಬೇಡರ ಬೇಟೆಯ ಪ್ರಸಂಗಗಳು ಕಂಡುಬರುವುದಿಲ್ಲ. ಗುಹ ಶಬರಿಯಂಥ ಬೇಡಕುಲದ ಪ್ರತಿಮೆಗಳು ಬೇಟೆಯಿಂದ ಹೊರತಾದವರು. ಗುಹನು ಬೇಡರ ದೊರೆಯಾಗಿ ರಾಮನ ಕುಟುಂಬ ಪರಿವಾರಕ್ಕೆ ಹಿತೈಷಿಯಾಗಿದ್ದಾನೆ. ಇನ್ನೂ ಶಬರಿಯಂತೂ ರಾಮಭಕ್ತೆ, ಮತಂಗ ಮುನಿಯಿಂದ ದೀಕ್ಷೆ ಪಡೆದು ಶಿಷ್ಯೆಯಾದವಳು ಸಂಪೂರ್ಣ ಸಸ್ಯಾಹಾರಿ- ಹೀಗೆ ರಾಮಾಯಣ ಕಾಲಕ್ಕಾಲೇ ಹಲವು ಬೇಡರು ಶಿಷ್ಟ ಪರಿಧಿಗೆ ಒಳಗಾಗಿದ್ದರೆಂಬುದಕ್ಕೆ ವಾಲ್ಮೀಕಿಯೊಂದಿಗೆ ಶಬರಿಯಂಥವರನ್ನು ಗುರುತಿಸಹಬಹುದು. ನಿದರ್ಶನವೊಂದರ ಪ್ರಕಾರ ಶಬರಿ ಕೇರಳ ರಾಜ್ಯ ಪಂಪಾನದಿ ಪ್ರದೇಶದ ಕಳ್ಳರ ಮುಖಂಡನ ಮಗಳು, ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಳು. ಕಷ್ಟ-ಸುಖಗಳ ಬೆಲೆಯರಿತ ಈಕೆ ಬೆಳೆದು ದೊಡ್ಡವಳಾದ ಮೇಲೆ ತನ್ನ ಕುಲಬಾಂಧವರಿಗೆ ಬುದ್ದಹೇಳಿ ಮಾಂಸಹಾರ ಬೇಟೆ, ದರೋಡೆ-ಕಳ್ಳತನಗಳನ್ನು ಬಿಡಿಸಿದಳು. ಅವರನ್ನು ಸಸ್ಯಾಹಾರದತ್ತ ಪರಿವರ್ತಿಸಿ ಕೃಷಿಯನ್ನು ರೂಢಿಸಿಕೊಳ್ಳುವಂತೆ ಮಾಡಿದಳು. ಪ್ರಾಪ್ತವಯಸ್ಕಳಾದ ಈಕೆಗೆ ಸೋದರಮಾವನೊಂದಿಗೆ ಮದುವೆಯ ಏರ್ಪಾಟುಗಳು ನಡೆದವು. ಮದುವೆಯ ಮೊದಲ ಊಟಕ್ಕೆ ಮಾಂಸಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದಕ್ಕಾಗಿ ಕೊಲ್ಲುತ್ತಿದ್ದ ಪ್ರಾಣಿಗಳನ್ನು ಕಣ್ಣಾರೆಕಂಡ ಈಕೆ ತನ್ನ ಯೌವನವು ಕುರೂಪವಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಎಲ್ಲರನ್ನು ತೊರೆದು ಘೋರಾರಣ್ಯಕ್ಕೆ ನಡೆದು ಪೂಜೆ ಜಪತಪಗಳಲ್ಲಿ ಕಾಲ ತಳ್ಳುತ್ತ ರಾಮನ ಆಗಮನವನ್ನು ನಿರೀಕ್ಷಿಸಿ ದೀರ್ಘಾಯುಷಿಯಾಗಿ ಬದುಕಿದ್ದಳು. ರಾಮದರ್ಶನದಿಂದ ಮುಕ್ತಿ ಪಡೆದಳು(ನೋಡಿ ಆ‌ರ್ ಯರ‍್ರಗುಂಟಯ್ಯ ನಾಯಕ್, ಪುಟ ೨೫೮-೨೯೧,(ಸಂ) ಹರ್ತಿಕೋಟೆ ವೀರೇಂದ್ರ ಸಿಂಹ, ಅಮರೇಶ್ ಯತಗಲ್, ೨೦೦೮).

ಶಬರಿಯ ಆತಿಥ್ಯ ಮಾದರಿಯಾಗಿ ಉಳಿದಿದೆ. ರಾಮ-ಲಕ್ಷ್ಮಣರಿಗೆ ಹಣ್ಣು-ಹಂಪಲುಗಳನ್ನು ಕೊಡುವಾಗ ಮೊದಲು ತಾನು ರುಚಿ ನೋಡಿ ಚೆನ್ನಾಗಿರುವಂಥವುಗಳನ್ನೆ ಕೊಡುತ್ತಿದ್ದಳಂತೆ ರಾಮನು ಎಂಜಲೆಂದು ಎಣಿಸದೆ ತಿನ್ನುವಾಗ ಲಕ್ಷ್ಮಣನು ಎಂಜಿಲಿಗೆ ಹೇಸಿ ದೂರಕ್ಕೆ ಎಸೆದನಂತೆ. ಆತನು ಎಸೆದ ಹಣ್ಣುಗಳನ್ನು ಸಂಜೀವಿನಿ ವೃಕ್ಷಗಳಾಗಿ ಮುಂದೆ ಯುದ್ದದಲ್ಲಿ ಮೂರ್ಛೆ ಹೋದ ಲಕ್ಷ್ಮಣನ ಜೀವ ಉಳಿಸಲು ಸಹಾಯವಾದುವೆಂದು ಹೇಳುತ್ತಾರೆ.

ವಾಲ್ಮೀಕಿ ರಾಮಾಯಣವು ಉಲ್ಲೇಖಿಸುವ ಶಬರಿಯ ಮತಂಗಮುನಿಯ ಶಿಷ್ಯ ವೈರಾಗ್ಯದಿಂದ ಬದುಕಿದವಳು, ಅತಿವೃದ್ದೆ ತನ್ನ ಗುರುಗಳು ಯಜ್ಞೇಶನಿಗೆ ತಮ್ಮ ಶರೀರವನ್ನು ಆಹುತಿಕೊಟ್ಟು ಪ್ರಾಣತ್ಯಾಗ ಮಾಡಿದ ಸಂದರ್ಭದಲ್ಲಿ ಈಕೆಯೂ ಅವರೊಡನೆ ಪ್ರಾಣತ್ಯಾಗ ಮಾಡಲು ಸಿದ್ದಳಾದಳು. ಆಗ ಮತಂಗ ಮುನಿಯು ಆಕೆಯನ್ನು ತಡೆದು ಮುಂದೊಮ್ಮೆ ರಾಮ ಲಕ್ಷ್ಮಣರು ಆಶ್ರಮಕ್ಕೆ ಬರುತ್ತಾರೆ, ನೀನು ಅವರಿಗೆ ಆತಿಥ್ಯ ಕೊಟ್ಟು ಬಳಿಕ ನನ್ನ ಪಾದಕ್ಕೆ ಸೇರಿಕೊಳ್ಳಬೇಕು ಎಂದು ಎಚ್ಚರಿಸಿದರು. ಅಂದಿನಿಂದ ಶಬರಿಯು ರಾಮನ ಆಗಮನ ನಿರೀಕ್ಷೆಯಲ್ಲೇ ಬದುಕಿ ಅತಿವೃದ್ದೆಯಾಗಿ ಕಾಯುತ್ತಿದ್ದಳು. ರಾಮಲಕ್ಷ್ಮಣರು ಆಶ್ರಮಕ್ಕೆ ಭೇಟಿಯಿತ್ತ ಸಂದರ್ಭದಲ್ಲಿ ಆಕೆ ಹಣ್ನು-ಹಂಪಲುಗಳನ್ನಿತ್ತು ಉಪಚರಿಸಿದಳು. ರಾಮದರ್ಶನವೇ ಅವಳ ಬದುಕಿನ ಪರಮಗುರಿಯಾಗಿದ್ದರಿಂದ ಇನ್ನು ಬದುಕುವುದು ಬೇಡವೆಂದು ನಿರ್ಧರಿಸಿ, ರಾಮನ ಎದುರೇ ಚಿತೆಯೇರಿದಳು. ತನ್ನ ಕೈಯಾರೆ ತಾನೆ ಚಿತೆಗೆ ಬೆಂಕಿಯನ್ನು ಕೊಟ್ಟುಕೊಂಡು ಭಸ್ಮವಾದಳು. ಅವಳ ಆತ್ಮವು ಗುರುಪಾದಾರವಿಂದಗಳಿಗೆ ಸಮರ್ಪಿತವಾಯಿತು. ಶಬರಿ ಎಂಬ ಹೆಸರೇ ಸೂಚಿಸುವಂತೆ ಆಕೆ ಶಬರ ಜಾತಿಯ ಹೆಣ್ಣು ಮಗಳು. ಕ್ಷತ್ರಿಯ ಸ್ತ್ರೀಯರಲ್ಲಿ ವೈಶ್ಯ ಪುರುಷನಿಂದ ಹುಟ್ಟಿದ ಪ್ರತಿಲೋಮ ಕ್ರಮದ ಸಂತಾನಕ್ಕೆ ಅಂದು ಶಬರರು ಎನ್ನುತ್ತಿದ್ದರು. ಇವರು ಕಾಡುಗಳಲ್ಲಿ ಜೇನನ್ನು ಇಳುಹಿ ಆ ಜೇನನ್ನು ಹಣ್ಣಗಳನೂ ಮಾರುವ ವೃತ್ತಿಯುಳ್ಳವರಾಗಿದ್ದರು (ಕೆ.ಎಸ್. ನಾರಾಯಣಾಚಾರ್ಯ; ೨೦೦೭, ಪು. ೫೦೩) ಎಂಬ ಶಬರಿ ಮೂಲದ ಉಲ್ಲೇಖವನ್ನು ಒಪ್ಪಲು ಅಸಾಧ್ಯವೆನಿಸುತ್ತದೆ.

ರಾಮನ ಹಿತೈಷಿ ದಶರಥನ ಸ್ನೇಹಿತನಾಗಿದ್ದ ಗುಹನು ನಿಷಾದನಾಗಿದ್ದ. ಪುರಾಣದ ಪ್ರಕಾರ ಈ ನಿಷಾದಕುಲ (ಸಮುದಾಯ)ದ ವೇನನನ್ನು ಬ್ರಾಹ್ಮಣರು ಹೂಂಕಾರಗಳಿಂದ ಕೊಂದು ಆತನ ತೊಡೆಯನ್ನು ಮಥಿಸಿದಾಗ ನಿಷಿಧನು ಹುಟ್ಟುತ್ತಾನೆ. ಆತನು ಕಪ್ಪು ಬಣ್ಣ ಗುಂಗುರು ಕೂದಲು ಇತ್ಯಾದಿ ಗುಣಗಳನ್ನು ಹೊಂದಿದ್ದರಿಂದ ರಾಜಲಕ್ಷಣಗಳು ಇಲ್ಲವೆಂದು ಕಡೆಗಣಿಸುತ್ತಾರೆ. ಆದ್ದರಿಂದ ಆತನು ನಿಷಾದರ ಮೂಲಪುರುಷನಾಗುತ್ತಾನೆ. ಆತನ ಸಹೋದರ ಪೃಥವು ತಂದೆಯ ರಾಜ್ಯಕ್ಕೆ ಉತ್ತರಾಧಿಕಾರಿಯಾಗುತ್ತಾನೆ. ಇಂಥ ನಿಷಾದ ಮೂಲದ ಗುಹನು ಶೃಂಗಿಬೇರಪುರದ ಅರಸ ಕೃಷ್ಣಸಾರಂಗಮೃಗದ ಕೊಂಬು-ಕೋಡುಗಳನ್ನು ಪ್ರಾಣಿಗಳ ಶರೀರಗಳ ಆಕೃತಿಗಳನ್ನು ಮರಗಿಡಗಳಿಗೆ ತೂಗುಹಾಕಿ ಕೃತ್ರಿಮ ಆಕಾರಗಳಿಂದ ನೈಜಮೃಗಗಳನ್ನು ನಂಬಿಸಿ ಬೇಟೆಯಾಡುವುದಕ್ಕೆ ಹೆಸರಾಗಿರುವ ಊರು.

ಗುಹನು ರಾಮ ಸೀತೆ ಲಕ್ಷ್ಮಣರನ್ನು ಗಂಗಾನದಿ ದಾಟಿಸುವ ಮುನ್ನ ರಾತ್ರಿ ತನ್ನಲ್ಲಿ ಅತಿಥ್ಯ ನೀಡುತ್ತಾನೆ, ರಾಮನಿಗೆ ಒದಗಿದ ದುಸ್ಥಿತಿಗೆ ಮರುಗುತ್ತಾನೆ. ರಕ್ಷಣೆಯ ನೆಪದಲ್ಲಿ ಲಕ್ಷ್ಮಣನು ರಾಮನಿಗೆ ತೊಂದರೆಕೊಡಬಹುದೆಂದು ಶಂಕಿಸುತ್ತಾನೆ. ಭರತನನ್ನು ಅನುಮಾನದಿಂದ ನೋಡುತ್ತಾನೆ. ಪರಿಸ್ಥಿತಿಯು ಅರಿವಾದಾಗ ಪಶ್ಚಾತ್ತಾಪ ಪಡುತ್ತಾನೆ. ಇಂಥ ಗುಹನಲ್ಲಿ ರಾಮನು ಅನ್ನಾಹಾರಗಳನ್ನಾಗಲಿ, ಹಣ್ಣು-ಹಂಪಲುಗಳನ್ನಾಗಲಿ ಸೇವಿಸದೆ ಲಕ್ಷ್ಮಣನು ತಂದ ಪವಿತ್ರ ಗಂಗಾಜಲವನ್ನು ಮಾತ್ರ ಸೇವಿಸುತ್ತಾನೆ. ಕಾಲಾನಂತರ ಶಬರಿಯು ನೀಡಿದ ಹಣ್ಣುಗಳನ್ನು ಸೇವಿಸುವುದರ ಮೂಲಕ ಆಕೆಯ ಆತಿಥ್ಯವನ್ನು ಸ್ವೀಕರಿಸುತ್ತಾನೆ.

ವಾಲ್ಮೀಕಿ ವೃತ್ತಿಪಲ್ಲಟವು ಕಾವ್ಯಕ್ಕೆ ಸ್ಫೂರ್ತಿಯಾದದ್ದು: ಬೇಡನಿಗೆ ಶಾಪ ನೀಡಿದ ಪ್ರಸಂಗವನ್ನು ವಾಲ್ಮೀಕಿಯು ವಿಮರ್ಶಿಸಿಕೊಳ್ಳುತ್ತಾನೆ. ಬೇಟೆಯು ಬೇಟಡನ ವೃತ್ತಿ ಹೀಗಿರುವಾಗ ತಾನು ಅವನನ್ನು ಹಾಳಾಗಲಿ ಈ ಬೇಡ (ಮಾನಿಷದ) ಎಂದು ಶಪಿಸಿದೆನಲ್ಲಾ ಋಷಿಯಾದ ತನಗೂ ಲೌಕಿಕಸಾಮಾನ್ಯ ಮನುಷ್ಯನಿಗೂ ವ್ಯತ್ಯಾಸವೇನು? ಎಂದೆಲ್ಲ ಚಿಂತಿಸುತ್ತ ಆಶ್ರಮಕ್ಕೆ ಹಿಂದಿರುಗಿದಾಗ ಬ್ರಹ್ಮನು ಪ್ರತ್ಯ್ಷಕಗೊಂಡು ಚಿಂತೆಯನ್ನು ಪರಿಹಾರಿಸುತ್ತಾನೆ. ಬೇಟೆಯ ಘಟನೆಯಿಂದ ವಾಲ್ಮೀಕಿಯು ಕಂಡ ಕೌಂಚಪ್ರೇಮ ಅದಕ್ಕೆ ಆತ ಸಂತೋಷಿಸಿ ಜಗತ್ತಿನ ಜೀವರಾಶಿಯಲ್ಲೆಲ್ಲ ದೇವರು ಪ್ರೇಮವನ್ನು ಇಟ್ಟಿದ್ದಾನೆಂದು ಒಂದು ಪುಟ್ಟ ಕೌತುಕ ಬೇಟೆಯ ದುರಂತದಿಂದ ಒದಗಿದ ಶೋಕ ಋಷಿಯ ಕೋಪಶಾಪ ಇವೆಲ್ಲವೂ ತನ್ನ ಇಚ್ಛೆಂತೆ ನಡೆದುದೆಂದು ತಿಳಿಸಿ ಸಮಾಧಾನ ಮಾಡುತ್ತಾನೆ. ಇವೆಲ್ಲ ಅಂಶಗಳನ್ನು ಒಳಗೊಂಡಂತೆ ರಾಮಚರಿತೆಯನ್ನು ಬರೆಯಬೇಕೆಂದು, ಅದು ಭಗವಂತನಿಗೆ ಮಂಗಳ ಶ್ಲೋಕವೆಂದು ಅನುಗ್ರಹಿಸುತ್ತಾನೆ. ಮೊದಲೇ ನಾರದರಿಂದ ರಾಮಾಯಣದ ಕಥೆಯನ್ನು ಕೇಳಿದ್ದ ವಾಲ್ಮೀಕಿಗೆ ಶಾಪನಿಮಿತ್ತ ಬಳಸಿಕೊಂಡಿದ್ದ ಶ್ಲೋಕವು, ವಕ್ರೋಕ್ತಿಯಾಗಿ ಒಗ್ಗಿ ಬರುತ್ತದೆ. ಅದುವರೆಗೂ ವೇದರಚನೆಗಳಲ್ಲಿ ಬಳಕೆಯಾಗುತ್ತಿದ್ದ ಶ್ಲೋಕದ ಛಂದಸ್ಸನ್ನು ಪುರಾಣಕಾವ್ಯಕ್ಕೆ ಬಳಸಿಕೊಳ್ಳುವ ಕವಿ ಸಾಮರ್ಥ್ಯವೂ ಇದಾಗಿದೆ. ಪ್ರೀತಿಯಲ್ಲಿ ಜೊತೆಗಿದ್ದ ಕ್ರೌಂಚಮಿಥುನದಲ್ಲಿ ಒಂದನ್ನು ಕೊಂದಿರುವೆಯಾದ್ದರಿಂದ ನಿನಗೆ; ಬಹಳಕಾಲ ಒಳ್ಳೆಯದಾಗದೆ ಇರಲಿ ನೆಲೆಯಿಲ್ಲದಂತಾಗಲಿ ಮಂಗಳ ಇಲ್ಲದಂಥಾಗಲಿ ಎಂದು ಶಪಿಸಲು ಬಳಸಿದ್ದ ಶ್ಮೋಕ; “ಮಾನಿಷದ ಪ್ರತಿಷ್ಟಾಂತ್ವ : ಆಗಮ : ಶಾಶ್ವತೀ: ಸಮಾ:|ಯತ್ಕ್ರೌಂಚ ಮಿಥುನಾದೇಕಂ ಅವಧಿಃ ಕಾಮೋಹಿತಂ” ಇಂಬುದು ರಾಮಾಯಣ ಕಥೆ ಕಾಂಡಗಳಲ್ಲಿ ಸಂಗ್ರಹವಾಗುವುದನ್ನು ಚಮತ್ಕರಿಸುತ್ತದೆ. ಕ್ರೌಂಚ ಶೋಕವು ರಾಮಾಯಣದ ಸ್ತ್ರೀ ಶೋಕವಾಗುತ್ತದೆ. ಮಾನಿಷದನೆಂದು ಬೇಡನನ್ನು ಬೈದ ನಿಷೇದಾರ್ಥದ ‘ಮಾ’ ಅಕ್ಷರವು ಲಕ್ಷ್ಮೀಯನ್ನು ಧ್ವನಿಸಿ ಮಾನಿಷಿದ ಎಂಬ ಸಮಪ್ತಪದವಾಗಿ ಲಕ್ಷ್ಮೀರಮಣ ಶ್ರೀಮನ್ನಾರಾಯಣನನ್ನು ಸಂಕೇತಿಸುತ್ತದೆ. (ನೋಡ: ಕೆ.ಎಸ್. ನಾರಾಯಣಚಾರ್ಯ ೨೦೦೭; ಪು. ೫೪೮-೫೪೯) ಹೀಗೆ ರಾಮಾಯಣದ ಕ್ರೌಂಚಬೇಟೆಯ ಪ್ರಸಂಗವು ಇಡೀ ಕಥೆಯ ಬೀಜವಾಗಿದೆ. ಇದರಲ್ಲಿ ದಶರಥ ವಾಲಿ ರಾವಣ ಇವರುಗಳ ದೌರ್ಬಲ್ಯದಿಂದ ದುರಂತಗಳು ಒದಗುತ್ತವೆ. ಅವುಗಳನ್ನು ನಿವಾರಿಸಿದ ರಾಮನ ಸ್ವಂತ ಬದುಕು ದುರಂತಮಯವಾದರೂ ಸಾಂಸ್ಕೃತಿಕ ಸಾಮಾಜಿಕ ಬದುಕಿಗೆ ಆದರ್ಶವಾಗಿ ರಾಜಧರ್ಮವೆಂಬ ಮೌಲ್ಯವಾಗುತ್ತದೆ.

ರಾಮನೊಂದಿಗೆ ವಲ್ಮೀಕಿಯ ಪರಿಚಯವನ್ನು ಹೇಳಿಕೊಳ್ಳುವಂಥ ಸಂದರ್ಭಗಳು ಒಂದೆರೆಡು ಕಡೆ ಕಂಡುಬರುತ್ತವೆ. ಅವುಗಳಲ್ಲಿ ಒಂದು ಲವಕುಶರು ರಾಮನ ಅಶ್ವಮೇಧ ಸಂದರ್ಭದಲ್ಲಿ ರಾಮಾಯಣವನ್ನು ಪಠಿಸುವಾಗ ಶ್ರೀರಾಮನು ಇದನ್ನು ಬರೆದವರು ಯಾರೆಂದು ಪ್ರಶ್ನಿಸುತ್ತಾನೆ. ಆಗ ಲವಕುಶರು ಭಾರ್ಗವಗೋತ್ರದ ಬ್ರಾಹ್ಮಣ ವಾಲ್ಮೀಕಿ ಮಹರ್ಷಿಯೆಂದು ತಿಳಿಸುತ್ತಾರೆ. ಲವಕುಶರ ರಾಮಾಯಣದ ಗಾಯನಕ್ಕೆ ರಾಮನ ಆದಿಯಾಗಿ ಅಯೋಧ್ಯೆಯ ಪ್ರಜೆಗಳೆಲ್ಲರೂ ತಲೆದೂಗುತ್ತಾ ಗಾಯನವು ದಿನಗಟ್ಟಲೆ ಮುಂದುವರಿಯಿತು. ಒಂದು ದಿನ ಸಭೆಯಲ್ಲಿದ್ದ ರಾಮನು ಸೀತೆಯ ಬಗ್ಗೆ ದೂತರಲ್ಲಿ ಪ್ರಸ್ತಾಪಿಸುತ್ತಾ ಸೀತೆಯು ಈಗಲೂ ಶುದ್ಧಚಾರಳೂ ಕಲ್ಮಶ ರಹಿತಳೂ ಆಗಿರುವುದಾದರೆ ವಾಲ್ಮೀಕಿಯನ್ನು ಪ್ರಮಾಣಿಸಿ ಸಭೆಗೆ ಬಂದು ಹಾಗೆ ಪ್ರತಿಜ್ಞೆ ಮಾಡಲಿ ಎಂದ (ಕೆ.ಎಸ್. ನಾರಾಯಣಾಚಾರ್ಯ ೨೦೦೭, ಪು ೫೬೪) ಮತ್ತೊಂದು ದಿನ ವಾಲ್ಮೀಕಿಯು ಸೀತೆಯನ್ನು ಸಭೆಗೆ ಕರೆತಂದು ರಾಮನೆದುರು ನಿಲ್ಲಿಸಿ ಈಕೆ ಪರಿಶುದ್ಧಳು ಸೀಕರಿಸು ಎಂದು ರಾಮನಿಗೆ ಹೇಳುವಾಗ ತಾನು ಸುಳ್ಳು ಹೇಳುತ್ತಿಲ್ಲ ಎಂದು ಪ್ರಮಾಣಿಕರಿಸಲೋಸುವ ತನ್ನ ತಂದೆ ಮತ್ತು ಕುಲಗೋತ್ರಗಳನ್ನು “ಪ್ರಚೇತಸೋಹಂ ದಶಮಃ ಉತ್ತೋ ರಾಘವನಂಧನ” ಎಂಬುದಾಗಿ ವಿವರಿಸುತ್ತಾನೆ. ಸೀತೆಯು ತನ್ನ ಆಶ್ರಮದಲ್ಲಿ ಆಶ್ರಯ ಪಡೆದು ಲವಕುಶರಿಗೆ ಜನ್ಮವಿತ್ತು ನಿಷ್ಕಲ್ಮಶ ಜೀವನ ನಡೆಸಿದ್ದನ್ನು ತಿಳಿಸುತ್ತಾನೆ. ರಾಮ-ಸೀತೆ ಮತ್ತು ಮಕ್ಕಳನ್ನು ಒಂದುಗೂಡಿಸಬೇಕೆಂಬುದು ವಾಲ್ಮೀಕಿಯ ಆಶಯವಾಗಿತ್ತು. ಆದರೆ ಸನ್ಯಾಸಿನಿಯ ವೇಷಭೂಷಣಗಳಲ್ಲಿ ಸಭೆಗೆ ಬಂದು ಗದ್ಗತಳಾಗಿ ಸೀತೆಯು ತಾನು ರಾಮನನ್ನು ಹೊರತುಪಡಿಸಿ ಬೇರೆಯವರನ್ನು ಮನದಲ್ಲಿ ಕೂಡಿ ಚಿಂತಿಸದ ಪತಿವ್ರತೆಯಾಗಿದ್ದರೆ ತನ್ನ ತಾಯಿ ಭೂದೇವಿಯು ತನಗೆ ಆಶ್ರಯವನ್ನು ನೀಡಲಿ ತನ್ನನ್ನು ಎತ್ತಿಕೊಂಡು ಹೋಗಲಿ ಗರ್ಭದೊಳಕ್ಕೆ ಸೇರಿಸಿಕೊಳ್ಳಲಿ ಎನ್ನುತ್ತಾಳೆ. ತಕ್ಷಣವೇ ಅವಳ ಪ್ರತಿಜ್ಞೆ ಫಲಿಸುತ್ತದೆ. ಭೂಮಿಯನ್ನು ಸೀಳಿಕೊಂಡು ಹೊರಬಂದ ಭೂದೇವಿಯು ಸೀತೆಯನ್ನು ಎತ್ತಿಕೊಂಡು ಭೂಮಿಯೊಳಕ್ಕೆ ಮಾಯವಾಗುತ್ತಾಳೆ. ರಾಮ ಸೀತೆಯರ ಸಮಾಗಮವಾಗದೆ ದುರಂತವಾಗುತ್ತದೆ. ಸೀತಾವಿಯೋಗದಿಂದ ಬಳಲುತ್ತಿರುವಾಗಲೇ ಆತನ ಅವಸಾನ ಕಾಲವು ಸಮೀಪವಾಗುತ್ತದೆ. ಈ ವಿಷಯವನ್ನು ರಾಮನಿಗೆ ತಿಳಿಸಲೆಂದು ಬ್ರಹ್ಮನಿಂದ ನೇಮಕಗೊಂಡ ಕಾಲಪುರುಷನು ಬರುತ್ತಾನೆ. ಆತನೊಂದಿಗೆ ಸಮಾಲೋಷನೆ ನಡೆಸುತ್ತಿದ್ದಾಗ ಲಕ್ಷ್ಮಣನು ದ್ವಾರಪಾಲಕನಾಗಿದ್ದ. ಅದೇ ಸಮಯಕ್ಕೆ ರಾಮನನ್ನು ಕಾಣಲು ಬಂದ ದೂರ್ವಾಸ ಒಳನುಗ್ಗುತ್ತಾನಾದ್ದರಿಂದ ಲಕ್ಷ್ಮಣನಿಗೆ ಗಡಿಪಾರು ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಲಕ್ಷ್ಮಣನು ಸರಯೂ ನದಿಯ ತೀರದಲ್ಲಿ ಸಮಾಧಿ ಹೊಂದುತ್ತಾನೆ. ರಾಮನೂ ಕುಶಲವರಿಗೆ ಪಟ್ಟಕಟ್ಟಿ ಸರಯೂನದಿಯಲ್ಲಿ ಜಲಸಮಾಧಿಯಾಗುತ್ತಾನೆ. ಹೀಗೆ ರಾಮಾಯಣ ಕಾವ್ಯವು ಸಮಾಪ್ತಿಯಾಗುತ್ತದೆ.

ಮಹಾವಿಷ್ಣುವು ತಾಳಿದ ಮಾನವಾವತಾರ ಶ್ರೀರಾಮನಾಗಿರುವದರಿಂದ ರಾಮಚರಿತೆ ಪುರಾಣವಾಗಿ ಆಸ್ತಿಕ ಅಭಿಮತವನ್ನು ಉಳಿಸಿಕೊಂಡಿತು. ಸ್ವಾರ್ಥ, ತ್ಯಾಗ, ಭಕ್ತಿ ರಾಮಾಯಣದ ಮೌಲ್ಯದರ್ಶನಗಳಾಗಿವೆ. ರಾಮನು ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಸಾಹಸ ಶೂರ ಇಂದೆನಿಸಿಕೊಳ್ಳುತ್ತಾನೆ. ಪಿತೃವಾಕ್ಯ ಪರಿಪಾಲನೆ ರಾಮದರ್ಶನಕ್ಕೆ ನಾಂದಿಯಾದರೆ ಆತ ಏಕಪತ್ನಿ ವೃತಸ್ಥನೆಂಬುದು ಮೌಲ್ಯವಾಗುತ್ತದೆ. ಅಪವಾದಕ್ಕೆ ಅಂಜಿ ಸೀತಾಪರಿತ್ಯಾಗ ಮಾಡಿದ್ದು ಪ್ರಜೆಗಳ ಅನುಮಾನಗಳಿಗಾಗಿ ತ್ಯಾಗ ಮಾಡಿದರ ದ್ಯೋತಕವಾಗುತ್ತದೆ. ಪ್ರಜೆಗಳ ಅಸಮಾಧಾನಗಳನ್ನು ಪರಿಹರಿಸಲು ವೈಯುಕ್ತಿಕ ಬದುಕನ್ನೇ ಬಲಿಕೊಟ್ಟು ನಿಂದೆಯಿಂದ ಮುಕ್ತಹೊಂದಿದನೆಂಬುದನ್ನು ಹೇಳುತ್ತದೆ. ಆದರೆ ಸೀತೆ ರಾಮಾಯಣದ ಪಿತೃಪ್ರಧಾನ ವ್ಯವಸ್ಥೆಗೆ ಬಲಿಯಾದ ಅಬಲೆಯಾಗಿ ಕಂಡುಬರುತ್ತಾಳೆ. ಪತಿವ್ರತೆ ಪತಿಯನ್ನು ದೈವವೆಂದು ಭಾವಿಸಿದಳು ಆದ್ದರಿಂದಲೇ ಆಕೆ ರಾಮನನ್ನು ಪ್ರಶ್ನಿಸುವುದೇ ಇಲ್ಲ ಅವಳಂತೆಯೇ ಅಯೋಧ್ಯೆಯ ರಾಜಪರಿವಾರದ ಸ್ತ್ರೀಯರ ವ್ಯಕ್ತಿತ್ವಗಳು ಬಂಧಿತವಾಗಿವೆ. ಕೈಕೆ ಕಿಟ್ಟ ತಾಯಿ ಎನಿಸಿಕೊಳ್ಳುತ್ತಾಳೆ. ಸವತಿ ಮತ್ಸರ ಮಲತಾಯಿ ಧೋರಣೆಗಳಿಗೆ ಪ್ರತೀಕವಾಗುತ್ತಾಳೆ. ಒಟ್ಟಾರೆ ರಾಮಾಯಣವು ಸನಾತನ ನೀತಿ ಮೂಲಗಳ ಬೋಧನೆಯಾಗಿ ಆಸ್ತಿಕ ಭಾವವನ್ನು ಬೆಳೆಸುವ ಗ್ರಂಥವಾದ ಕಾರಣ ಪುರಾಣವಾಗುತ್ತದೆ. ಇದರಲ್ಲಿ ವರ್ಣಾಶ್ರಮ ಧರ್ಮದ ಸನಾತನ ವೃತ್ತಿಗಳಿಗೆ ಮಾನ್ಯತೆ ನೀಡಲಾಗಿದೆ. ಆರ್ಯಸಂಸ್ಕೃತಿ ಮತ್ತು ವಾನರ ಸಂಸ್ಕೃತಿಗಳ ಸಮತೋಲನ ಹಾಗೂ ಇವೆರಡೂ ಸಂಸ್ಕೃತಿಗಳೊಂದಿಗೆ ರಾಕ್ಷಸ ಸಂಸ್ಕೃತಿ ಮಾಡಿದ ಸಂಘರ್ಷದ ಫಲಿತಗಳು ಕೂಡ ರಾಮಾಯಣದಲ್ಲಿ ಮುಖ್ಯವಾಗುತ್ತವೆ. ಆದರೆ ರಾಮಾವತಾರವು ಮನುಷ್ಯ ಸಾಮರ್ಥ್ಯದಲ್ಲಿ ಗಳಿಸಿಕೊಂಡ ದೈವತ್ವವಾಗುತ್ತದೆ. ಕಾವ್ಯದಲ್ಲಿ ಎಲ್ಲಿಯೂ ರಾಮನು ದೈವಲೀಲೆಗಳನ್ನು ಮರೆಯುವುದಿಲ್ಲ. ಪವಾಡಗಳನ್ನು ಮಾಡುವುದಿಲ್ಲ. ಮನುಷ್ಯ ಸಾಧನೆಯೂ ಸಾರ್ಥಕ ಸಂಕೇತವಾಗಿ ಉಳಿಯುತ್ತಾನೆ. ರಾಮಾಯಣದ ಕೃತಿಕಾರನಾದ ವಾಲ್ಮೀಕಿಯು ವ್ಯಾಧನಾಗಿ, ಕವಿಯಾಗಿ, ಮಹರ್ಷಿಯಾಗಿ ಸಮಾಜದ ಸಂಸ್ಕೃತಿಯ ನೇತಾರನಾಗಿ ಕಂಡುಬರುತ್ತಾನೆ. ಯಾವುದೇ ಕವಿಯು ತನ್ನ ಮೂಲ ಸಂಸ್ಕೃತಿಯು ಮೂಲ ಸತ್ವಗಳಿಂದ ಬೇರೆಯಾಗಲಾರ ಎಂಬುದಕ್ಕೆ ವಾಲ್ಮೀಕಿ ರಾಮಾಯಣವು ಬೇಟೆಯ ಸಂದರ್ಭದೊಂದಿಗೆ ಆರಂಭಗೊಳ್ಳುವ ಸಂದರ್ಭವು ಸಾಕ್ಷಿಯಾಗುತ್ತದೆ.