ಕಾಡಿನಲ್ಲಿ ವಾಸಿಸುವ ಅಥವಾ ಬಯಲುಸೀಮೆಯ ಹೊಲಗದ್ದೆ ತೋಟಗಳ ವ್ಯಾಪ್ತಿಯಲ್ಲಿ ಜೀವಿಸಿಕೊಂಡಿರುವ ಪ್ರಾಣಿ ಪಕ್ಷಿ ಉರಗ ಜಲಚರಗಳನ್ನು ತಂತ್ರ ಪರಿಕರಗಳಿಂದ ಹೊಡೆದು ಕೊಲ್ಲುವುದನ್ನು ಬೇಟೆಗಾರಿಕೆಯನ್ನು ಎನ್ನುತ್ತೇವೆ. ದಟ್ಟಅಡವಿ ನೀರ್ದಾಣ ಗಿರಿಶಿಖರ ಕಣಿವೆ ದುರ್ಗಮ ಪ್ರದೇಶ ಹಲ್ಲುಗಾವಲು ವಿಶಾಲವಾದ ಬಯಲು ಇತ್ಯಾದಿ ತಾಣಗಳು ಬೇಟೆಗಾರಿಕೆಯ ಆಯಕಟ್ಟಿನ ಸ್ಥಳಗಾಳಗಿರುತ್ತವೆ. ಮೂಲದಲ್ಲಿ ಮಾನವನು ಕಾಡಿನಲ್ಲಿ ಬದುಕು ಸಾಗಿಸುತ್ತದ್ದ ದುನಗಳಲ್ಲಿ ತನಗೆ ತೊಂದರೆ ಕೊಡುವ ಪ್ರಾಣಿ ಪಕ್ಷಿಗಳನ್ನು ಹೊಡೆದು ಕೊಲ್ಲತೊಡಗಿದ, ಕೆಲವನ್ನು ತಿನ್ನತೊಡಗಿದ. ಮಾಸಹಾರ ರೂಢಿಯಾದ ಬಳಿಕ ಕೆಲವು ಸಸ್ಯಾಧಾರಿತ ಪ್ರಾಣಿಪಕ್ಷಿಗಳನ್ನು ಬೇಟೆಯಾಡಿ ಆಹಾರವನ್ನು ರೂಢಿಸಿಕೊಂಡನೆಂದು ಹೇಳಬಹುದು. ಹೀಗೆ ಆದಿಮಾನವನಲ್ಲಿ ಅಸ್ಥಿತ್ವದ ಉಳಿವು ಹಾಗೂ ಆಹಾರದ ಭಾಗವಾಗಿ ಬೇಟೆಗಾರಿಕೆಯ ಸಂಸ್ಕೃತಿ ರೂಪಗೊಂಡಿತು. ಕಾಲಕ್ರಮೇಣ ಆದ ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳಿಂದ ಬೇಟೆಗಾರಿಕೆಯನ್ನು ಪ್ರಾಣಿ ಹಿಂಸೆ ಕ್ರೌರ್ಯ ಎಂದು ಪರಿಗಣೆಸುತ್ತಾ ಬಂದಂತೆ ಆಹಾರ ಕ್ರಮದಲ್ಲಿ ಬದಲಾವಣೆಗಳಾಗತೊಡಗಿದವು. ಆದರೂ ಕೆಲವು ಸಮುದಾಯಗಳು ಬೇಟೆಯನ್ನು ತಮ್ಮ ಸಂಸ್ಕೃತಿಗೆ ಒಗ್ಗಸಿಕೊಂಡು ಕಾಡಿನಲ್ಲೇ ಬದುಕಿಗೆ ನೆಲೆಯನ್ನು ಕಂಡುಕೊಂಡರು. ಅಂಥವರಲ್ಲಿ ಬೇಡರು ಪ್ರಮುಖರು.

ಆಳುವ ಅರಸರ ಕಾಲದಲ್ಲಿ ಅರಸನ ಆದ್ಯ ಕರ್ತವ್ಯವಾಗಿದ್ದ ಪ್ರಜಾರಕ್ಷಣೆಯಲ್ಲಿ ಶತ್ರುಗಳ ದಾಳಿ ಮತ್ತು ಕಾಡು ಪ್ರಾಣಿಗಳ ಹಾವಳಿ ಇವೆರಡೂ ತೊಡಕುಗಳಾಗಿ ಪರಿಣಮಿಸಿದ್ದವು. ಅಂಥ ಸಂದರ್ಭಗಳಲ್ಲಿ ರಾಜನು ಕಾಡು ಪ್ರಾಣಿಗಳ ಬೇಟೆಗೆ ಅನುವಾಗಲು ಬೇಟೆಗಾರ ಬೇಡರೇ ಪ್ರೇರಣೆಯಾಗಬೇಕಾಗಿತ್ತು. ಬೇಡರ ಮುಖಂಡನು ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ಅಧಿಕೃತವಾಗಿ ನಿವೇದಿಸಿಕೊಂಡು ಅವುಗಳನ್ನು ಬೇಟೆಯಾಡಲು ತಮ್ಮ ತಂಡ ಸಜ್ಜಾಗಿರುವುದರೊಂದಿಗೆ ರಾಜನನ್ನು ಸಿದ್ದಗೊಳ್ಳುವಂತೆ ಸೂಚಿಸಿದ ನಂತರವೇ ಆತನು ತನ್ನ ಸೈನ್ಯ ಪರಿವಾರಗಳೊಂದಿಗೆ ಬೇಟೆಗೆ ಹೊರಡುತ್ತಿದ್ದ. ಈ ಸಂದರ್ಭದಲ್ಲಿ ಬೇಡರ ಮುಖಂಡನು ಆ ಮೊದಲು ತಾನು ಬೇಟೆಯಲ್ಲಿ ಸಂಗ್ರಹಿಸಿದ್ದ ಹುಲಿಚರ್ಮ, ಕಸ್ತೂರಿ, ಮುತ್ತಿನಮಣಿ, ಆನೆಯ ದಂತ ಇತ್ಯಾದಿ ಅಮೂಲ್ಯ ವಸ್ತುಗಳನ್ನು ಕಾಣಿಕೆಯಾಗಿ ನೀಡುತ್ತಿದ್ದ. ನಗರ ಸಂಸ್ಕೃತಿಯಲ್ಲಿ ಹೀಗೆ ಬೇಡರು ಕಾಣಿಕೆಯ ರೂಪದಲ್ಲಿ ತೆರಿಗೆಯನ್ನು ಸಲ್ಲಿಸುತ್ತಿದ್ದರು. ಬೇಡರ ಪರಂಪರೆಯಲ್ಲಿ ಆಭ್ಯಾಸ ಹವ್ಯಾಸ ಪ್ರವೃತ್ತಿ ವೃತ್ತಿ ಸಂಸ್ಕೃತಿಯಾಗಿ ಅರಸನ ಪರಿವಲಯಲ್ಲಿ ಸಾಹಸ ವಿನೋದ ಕ್ರೀಡೆ ಎಂಬ ಮೋಜಿನ ಪರಿಪಾಟವಾಗಿ ಪರಿಚಲನಗೊಂಡಿತು. ಜೂಜು ಕುಡಿತಗಳಂಥ ದುಶ್ಚಟಗಳಲ್ಲಿ ಬೇಟೆಗಾರಿಕೆಯು ಅತ್ಯಾಸಕ್ತಿಯಾಗಿ ಸೇರಿತು. ಧರ್ಮರಾಯ, ನಳ ಚಕ್ರವರ್ತಿಗಳಂಥವರನ್ನು ಸಪ್ತ ವ್ಯಸನೆಗೆ ಒಳಗಾಗಿದ್ದವರೆಂದು ಗುರುತಿಸಿ ಹೇಳುವಾಗ ಬೇಟೆಯೂ ಅದರಲ್ಲಿ ಸೇರುತ್ತದೆ. ಆದರೆ ಇಂಥ ವಾಡಿಕೆ ಬೇಡರಿಗೆ ಅನ್ವಯಿಸುವುದಿಲ್ಲ. ರಾಜಮಾರ್ಯದೆಯಲ್ಲಿ ಬೇಟೆಯಾಡಿ ಇಟ್ಟಗುರಿಯನ್ನು ತಪ್ಪದ ಗುರಿಕಾರರು ಬೇಡರು. ಪ್ರಾಕೃತಿಕವಾದ ಗುಡ್ಡಗಾಡು ಅರಣ್ಯ, ವನ, ನದಿಬಯಲು ಇತ್ಯಾದಿ ಪ್ರದೇಶಗಳಲ್ಲಿ ಪಕ್ಷಿ ಪ್ರಾಣಿಗಳನ್ನು ಆಯುಧ ಅಥವಾ ತಂತ್ರಗಳಿಂದ ಕೊಲ್ಲುವುದನ್ನು ಬೇಟೆಯೆಂದು ಪರಿಗಣಿಸುತ್ತಾರೆ. ಜಲಚರಪ್ರಾಣಿ ಅಥವಾ ಉರಗ ಪ್ರಬೇಧಗಳನ್ನು ಬೇಟೆಯೆಂಬ ಹೆಸರಿನಿಂದ ಕರೆಯುವುದಿಲ್ಲ. ಮೀನು ಹಿಡಿಯುವುದು ಏಡಿ ಹಿಡಿಯುವುದು ಹಾವು ಹಿಡಿಯುವುದು ಹೀಗೆಯೇ ಕರೆಯುತ್ತಾರೆ. ಪಾಲನೆ ಪೋಷಣೆಗೆಂದು ಕಾಡಿನಲ್ಲಿ ಸೆರೆಹಿಡಿದು ತರುವ ಪ್ರಾಣಿ ಪಕ್ಷಿಗಳನ್ನು ಬೇಟೆಯೆನ್ನುವುದಿಲ್ಲ. ಜನಪದ, ಕಥೆ, ಪುರಾಣಕಥೆ ಅಥವಾ ಲಿಖಿತ ಸಾಹಿತ್ಯದಲ್ಲಿ ಬೇಡರು ಏಕಾಂಗಿಗಳಾಗಿ ಸಮೂಹಿಗಳಾಗಿ ಎರಡೂ ರೀತಿಯಲ್ಲಿ ಬೇಟೆಯಾಡುತ್ತಿದ್ದ ನಿದರ್ಶನಗಳಿವೆ. ಇಂದಿಗೂ ಬೇಟೆಯಾಡಿದ ಮಾಂಸವನ್ನು ಮಾರಾಟ ಮಾಡುವ ಸಂಪ್ರದಾಯಗಳಿಲ್ಲ. ಆದ್ದರಿಂದ ಬೇಟೆ ಇವರ ಸ್ವಯಂ ರಕ್ಷಣೆ ಮತ್ತು ಆಹಾರ ನಿರ್ವಹಣೆಯ ಅನಿವಾರ್ಯವಾಗಿತ್ತೇ ಹೊರತು ವ್ಯಾಪಾರ ಉಧ್ಯಮವಾಗಿರಲಿಲ್ಲವೆಂದು ಹೇಳಬಹುದು. ಊರಗಳಲ್ಲಿ ನೆಲೆ ನಿಂತ ಹಂತದಲ್ಲಿ ಬೇಡರು ಕೃಷಿ, ಪಶುಪಾಲನೆ ಮತ್ತಿತರ ವೃತ್ತಿಗಳನ್ನು ಅವಲಂಬಿತವಾಗಲೂ ಬೇಟೆಯನ್ನು ಆಚರಣೆಯಾಗಿ ರೂಢಿಸಿಕೊಂಡರು. ಇಂಥ ಸಮುದಾಯವನ್ನು ಮಾನವಸಂಸ್ಕೃತಿ ಮತ್ತು ಬೇಟೆಯ ಸಂಸ್ಕೃತಿಗಳೆರಡರ ಹಿನ್ನಲೆಯಲ್ಲಿ ವಿಶ್ಲೇಷೆಸಬಹುದು. ಬೇಟೆಗಾರಿಕೆಯು ಕೇವಲ ಪ್ರಾಣಿಗಳನ್ನು ಹಿಡಿದು ಕೊಲ್ಲುವ ತಂತ್ರ ಮಾತ್ರವೇ ಅಲ್ಲ. ಅದು ಪ್ರಾಣಿಗಳ ಗುಣ ಸ್ವಾಭಾವ ಚಲನವಲನ ಆಹಾರಕ್ರಮ ಸಂತತಿ ವಂಶಾಭಿವೃದ್ಧಿಯಕಾಲ ಬೇಟೆಯ ವಿಶೇಷತೆ ಪ್ರಾಣಿಯಿಂದ ಒದಗುವ ಅಪಾಯ ಇತ್ಯಾದಿಗಳ  ಸಂಶೋಧನೆ. ಮನುಕುಲ ವಿಕಾಸದ ವೃತ್ತಿ-ಪ್ರವೃತ್ತಿಗಳಲ್ಲಿ ಪ್ರಮುಖವಾದದ್ದು ಬೇಟೆಗಾರಿಕೆಯ ಸಂಸ್ಕೃತಿ. ಜೀವ ಸಂಕುಲವು ಆಹಾರಾನ್ವೇಷಣೆಯಲ್ಲಿ ಆವಿಷ್ಕಾರಗೊಳಿಸಿಕೊಂಡ ಪ್ರಾಕೃತಿಕ ಜೈವಿಕ ಪ್ರಕ್ರಿಯೆಯಾಗಿ ಪರಂಪರೆಯಾಗಿ ಬೆಳವಣಿಗೆ ಪಡೆದಿದೆ. ಅಧೀನ ಸಾಮರ್ಥ್ಯದ ಜೀವಗಳನ್ನು ಪ್ರಧಾನ ಸಾಮರ್ಥ್ಯದ ಜೀವಿಗಳು ಹಿಡಿದು ತಿನ್ನುವು‌ದು ಪ್ರಾಣಿ ಪ್ರಭೇದ ಪಕ್ಷಿಸಂಕುಲ ಹಾಗೂ ಉರಗ ಸಮುದಾಯದಲ್ಲಿ ಸಾಮಾನ್ಯ ಅಂಶ. ಸಸ್ಯಹಾರಿ ಪ್ರಾಣಿಗಳನ್ನು ಮಾಂಸಹಾರಿ ಪ್ರಾಣಿಗಳು ಬೇಟೆಯಾಡುವುದು ಸಾಮಾನ್ಯ ಸಂಗತಿ. ಕೆಲವೊಮ್ಮೆ ಆಯಾ ಗುಂಪಿನ ಪ್ರಾಣಿ ವರ್ಗದಲ್ಲಿ ಕಲಹಗಳೇರ್ಪಡುವುದು ಸಾಮಾನ್ಯವಾದರೂ ತಮ್ಮ ಗುಂಪಿನೊಳಗೆ ಬೇಟೆಯಾಡುವುದು ಅತಿ ವಿರಳ. ದೊಡ್ಡ ಹಾವು ಸಣ್ಣ ಹಾವನ್ನು ದೊಡ್ಡ ಮೀನು ಸಣ್ಣ ಮೀನನ್ನು ಹಿಡಿದು ತಿನ್ನುವುದು, ಕೆಲವು ಪ್ರಾಣಿಗಳು ತಮ್ಮದೇ ಆದ ನವಜಾತಮರಿಗಳನ್ನು ತಕ್ಷಣವೇ ತಿಂದು ಬದುಕುವುದು ದೈಹಿಕ ಆಶಕ್ತತೆಯನ್ನು ಉಳಿಸಿಕೊಳ್ಳಲೊಸುಗ ಮಾತ್ರವಾಗಿರುತ್ತದೆ.

ಶತ್ರು ಆಕ್ರಮಣದ ಸೂಚನೆಯನ್ನು ಸಹಾಯಕ ಪ್ರಾಣಿಗಳು ಪರಸ್ಪರ ಬಿತ್ತರಿಸಿಕೊಳ್ಳುತ್ತವೆ. ಜಿಂಕೆ, ಮೊಲ, ಕಾಡೆಮ್ಮೆಗಳಂಥ ಪ್ರಾಣಿಗಳಿಗೆ ಮಂಗಗಳು ಶತ್ರು ಆಗಮಿಸುತ್ತಿರುವ ಸೂಚನೆಯನ್ನು ತಿಳಿಸಲು ಕೊಂಬೆ-ರೆಂಬೆಗಳಿಗೆ ಹಾರಿ ಕಿರುಚುವ ಮೂಲಕ ಸುದ್ದಿಯನ್ನು ಹರಡುತ್ತವೆ. ಹಾವು ಹೊಂಚು ಹಾಕುತ್ತಿರುವ ಸಂಚನ್ನು ಅರಿತ ಪಕ್ಷಿಗಳು ಗಾಬರಿಗೊಂಡು  ಗಟ್ಟಿಯಾಗಿ ದನಿಗೈದು ಎಚ್ಚೆತ್ತುಕೊಳ್ಳಲು ಅನುವು ಮಾಡಿಕೊಡುತ್ತವೆ. ಆದರೂ ಜೀವ ಜಾಲದ ಸಮತೋಲನಕ್ಕೆ ಪ್ರಾಣಿ ಸಮುದಾಯದೊಳಗೆ ನಡೆಯುವ ಬೇಟೆಗಾರಿಕೆಯು ಪೂರಕವಾಗಿರುತ್ತದೆ. ಸಸ್ಯ ಸಮೃದ್ಧಿಯು ಕೆಲವು ಜೀವಿಗಳಿಗೆ ಆಹಾರವಾದಂತೆ ಹಲವು ಜೀವಗಳು ಮತ್ತೆ ಕೆಲವಕ್ಕೆ ತಿನ್ನಲು ಆಧಾರವಾಗುವುದು ಸೃಷ್ಟಿ ನಿಯಮವಾಗಿದೆ. ಇಂಥ ವೈವಿಧ್ಯಮಯ ಜೀವಸಂಕುಲ ಮತ್ತು ಸಸ್ಯ ಸಮೃದ್ಧಿಯ ಚೈತನ್ಯದಲ್ಲಿ ಮನುಷ್ಯ ಚೇತನದ ಗಮ್ಯ-ಆಗಮ್ಯಗಳು ವಿಶಿಷ್ಠವಾಗಿವೆ. ಪ್ರಾಣಿ ಸಮಾಜದಲ್ಲಿ ಸಂಬಂಧಗಳು ಅಗಣ್ಯವಾಗಿವೆಯಾದರೂ ಆಯಾ ವರ್ಗದಲ್ಲಿ ಒಗ್ಗಟ್ಟು ಕಂಡುಬರುತ್ತದೆ. ಆದರೆ ಮನುಷ್ಯ ರೂಪಿಸಿಕೊಂಡ ಸಮಾಜದಲ್ಲಿ ಸಾಂಸ್ಕೃತಿಕ ಧಾರ್ಮಿಕ ಹಾಗೂ ಆಡಳಿತಾತ್ಮಕ ವಲಯಗಳು ಸಂಬಂಧಗಳನ್ನು ನಿರಂತರಗೊಳಿಸುತ್ತವೆ. ಈ ನಿಟ್ಟಿನಲ್ಲಿ ಮಾನವ ಸಂಸ್ಕೃತಿ ವಿಕಾಸಗೊಂಡು ಪ್ರಾಣಿಗಳಿಗಿಂತ ಮನುಷ್ಯ ಬುದ್ಧಿ-ಭಾವಗಳ ಸಾಮರ್ಥ್ಯದಲ್ಲಿ ಭಿನ್ನವಾಗುತ್ತಾ ಪರಂಪರೆಯನ್ನು ಪಡೆದುಕೊಂಡಿದ್ದನ್ನು ಗಮನಿಸಬಹುದು.

ಮನುಷ್ಯ ಸಸ್ಯಹಾರಿಯಾದರೂ ನಿಸರ್ಗದ ಪ್ರಾಣಿ ವರ್ಗಗಳ ಹೊಂದಾಣಿಕೆ ಒಡಂಬಡಿಕೆ ಬಿಕ್ಕಟ್ಟು ಮತ್ತು ಸಂಘರ್ಷಗಳನ್ನು ಗಮನಿಸಿದ್ದಾನೆ. ಅಲ್ಲಿನ ಅನುಭವಗಳನ್ನು ಗ್ರಹಿಸಿದ್ದಾನೆ. ಸಬಲ ಪ್ರಾಣಿವರ್ಗ ಅಬಲ ಪ್ರಾಣಿವಗದ ಮೇಲೆ ಮಾಡುವ ಆಕ್ರಮಣದಿಂದ ಆಹಾರ ಪೂರೈಸಿಕೊಳ್ಳುವ ಕ್ರಮವನ್ನು ಅರಿಯುತ್ತಾ ಅನುಭವಗಳನ್ನು ಗಟ್ಟಿಗೊಳಿಸಿಕೊಂಡಿದ್ದಾನೆ. ಬಲಶಾಲಿಯಾದಂಥ ಆನೆ ಕಾಡೆಮ್ಮೆ ಕಾಡುಕೋಣಗಳಂಥ ಮೃಗಗಳನ್ನು ಗುಂಪು ಗುಂಪಾಗಿ ಹಿಡಿಯುವ ತೋಳಗಳು ಇಲ್ಲವೇ ಗುಳ್ಳೇನರಿಗಳಂಥವುಗಳಲ್ಲಿ ತಂತ್ರಗಳನ್ನು ವೇಧ್ಯವಾಗಿಸಿಕೊಂಡಿದ್ದಾನೆ. ಮನುಷ್ಯ ಕಾಡಿನ ನಿಲೆಯಲ್ಲಿ ಪ್ರಾಣಿಗಳಂತೆಯೇ ಬದುಕು ಸಾಗಿಸುತ್ತಿದ್ದ ಕಾಲಘಟ್ಟದಲ್ಲಿ ಪ್ರಾಣಿಗಳಿಂದ ತನಗೆ ಒದಗಿದ ವಿಪತ್ತುಗಳಿಂದ ದೂರವಾಗಲು ಪ್ರಾಣಿಗಳನ್ನು ಬೇಟೆಯಾಡಲು ಮನಸ್ಸು ಮಾಡಿದ್ದಾನೆ. ಸಸ್ಯಹಾರಿ ಪ್ರಾಣಿಗಳಿಂದ ಸಸ್ಯಸಮೃದ್ಧಿ ಕ್ಷೀಣಿಸಿ ತನಗೆ ಆಹಾರದಲ್ಲಿ ಕೊರತೆಯುಂಟಾಗಬಹುದೆಂಬ ಸಂದರ್ಭದಲ್ಲಿ ಅವುಗಳನ್ನು ಕೊಲ್ಲುವುದನ್ನು ಭಕ್ಷಿಸುವುದನ್ನು ರೂಢಿಸಿಕೊಂಡಿದ್ದಾನೆ. ಅಂತಯೇ ತನ್ನ ಮೇಲೆ ಆಕ್ರಮಣ ಮಾಡಿ ಆಪತ್ತು ತಂದೊಡ್ಡುವ ಉಗ್ರಪ್ರಾಣಿಗಳನ್ನು ಆತ್ಮರಕ್ಷಣೆಗೊಸ್ಕರ ಕೊಂದು ನಾಶ ಮಾಡುತ್ತಾ ಬಂದಿದ್ದಾನೆ. ಹೀಗೆ ಮನುಷ್ಯ ಆಹಾರನ್ವೇಷಣೆಯಲ್ಲಿ ಸಸ್ಯಾಹಾರದಿಂದ ಮಾಂಸಾಹಾರಕ್ಕೆ ಪರಿವರ್ತನೆಗೊಳ್ಳುವುದಕ್ಕೆ ಕಾರಣಗಳಿವೆ. ಕಾಡಿನ ಪ್ರಕೃತಿಯನ್ನು ತನಗೆ ಅನುವಾಗುವಂತೆ ಬದಲಾಯಿಸಿಕೊಳ್ಳಲು ಮನುಷ್ಯ ಪ್ರಯತ್ನಿಸುತ್ತಾ ಹೋದಂತೆಲ್ಲ ಸಂಸ್ಕೃತಿಯೆಂಬುದನ್ನೂ ಬೆಳೆಸಿಕೊಂಡನೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಪ್ರಕೃತಿಯೊಂದಿಗೆ ಹೊಂದಾಣಿಕೆಯಾಗಲು ಮಾಡಿಕೊಂಡ ಮಾರ್ಪಾಡುಗಳು ಸಂಸ್ಕೃತಿಯನ್ನೂ ನಾಗರೀಕತೆಯಡೆಗೆ ಕೊಂಡೊಯ್ಯುವಂತೆ ಮಾಡಿದೆ. ಉದಾಃ ಬಿಸಿಲು ಮಳೆ ಗಾಳಿಗಳಿಂದ ರಕ್ಷಿಸಿಕೊಳ್ಳಲು ವಸತಿ ನಿರ್ಮಾಣದಲ್ಲಾದ ಪ್ರಯತ್ನಗಳು ಓಡಾಟಕ್ಕೆ ದಾರಿಯನ್ನು ಕಂಡುಕೊಂಡದ್ದು ಪ್ರಯಾಣ ಸಾಧನಗಳನ್ನೂ ರೂಪಿಸಿಕೊಂಡಿದ್ದು ವಾಯು ಜಲ ಮತ್ತು ಭೂಮಾರ್ಗಗಳ ಸಾಧನಗಳ ಆವಿಷ್ಕಾರಗಳು ಇತ್ಯಾದಿಗಳ ಹಿಂದೆ ವೈವಿಧ್ಯಮಯ ಜೀವ ಸಂಕುಲದ ವಿಶಿಷ್ಟ ಸಾಮರ್ಥ್ಯಗಳನ್ನು ಮನುಷ್ಯ ಸಂಶೋಧಿಸಿಕೊಂಡಿದ್ದ. ಆದ್ದರಿಂದಲೇ ಕುದುರೆಯನ್ನು ವೇಗದ ಓಟಕ್ಕೆ ಆನೆ ಎತ್ತು ಕತ್ತೆ ಎಮ್ಮೆಕೋಣಗಳನ್ನು ಶ್ರಮಕ್ಕೆ ಬಳಸಿಕೊಂಡ. ಪಕ್ಷಿಗಳಂತೆ ಹಾರಲು ವೇಗವಾಗಿ ದೂರಸಾಗಲು ತಂತ್ರಜ್ಞಾನವನ್ನು ಕಂಡುಕೊಳ್ಳತೊಡಗಿದ. ಬದುಕಿನ ಅನುಕೂಲತೆಗಳನ್ನು ಹೆಜ್ಜಿಸಿಕೊಂಡಂತೆಲ್ಲ ಪ್ರಾಣಿವರ್ಗದಲ್ಲೆಲ್ಲ ಆದ್ವೀತಿಯ ಬುದ್ಧಿಜೀವಿಯಾಗಿ ವಿಕಾಸ ಹೊಂದಿದೆ. ಅಭಿರುಚಿಗೆ ತಕ್ಕಂತೆ ಮಾಂಸಹಾರ ಮತ್ತು ಶಾಖಾಹಾರಗಳನ್ನು ರೂಢಿಸಿಕೊಂಡ.

ಮಾನವ ವಿಕಾಸದಲ್ಲಿ ಬೇಟೆಗಾರಿಕೆ ಅನಿವಾರ್ಯವಾಗಿದ್ದರೂ ಕಾಲನಂತರ ಕಾಡಿನಿಂದ ನಾಡಿಗೆ ಸ್ಥಿತ್ಯಂತರಗೊಳ್ಳುತ್ತಾ ಗ್ರಾಮ ಪಟ್ಟಣ ನಗರಗಳವರೆಗೆ ಬೆಳೆದದ್ದು ಒಂದು ಹಂತ. ಇದರೊಂದಿಗೆ ಜಲಶೋಧ ಗಗನಶೋಧ ಗ್ರಹನಕ್ಷತ್ರ ಉಪಗ್ರಹಗಳವರೆಗೆ ಯಾನ ಇತ್ಯಾದಿಗಳ ಸಾಹಸ ಶೋಧವು ಮನುಷ್ಯನನ್ನು ಸುಖ ಜೀವನಕ್ಕೆ ಪ್ರೇರೆಪಿಸಿತು. ಅನಿವಾರ್ಯವಾಗಿ ಜೀವನಕ್ರಮ ಆಹಾರಪದ್ಧತಿ ಆಚಾರ ವಿಚಾರಗಳಲ್ಲಿ ಬದಲಾವಣೆಗಳಾಗುತ್ತಾ ಹೋದವು. ಆದರೂ ಮನುಷ್ಯ ಮನುಷ್ಯರ ನಡುವಿನ ಸಂಘರ್ಷಗಳಿಗೆ ಪರಿಹಾರವಾಗಿ ಪ್ರಾಣಿಸಹಜ ಸ್ವಭಾವಗಳ ಗ್ರಹಿಕೆಯನ್ನು ತಂತ್ರವಾಗಿ ಕಂಡುಕೊಂಡಿದ್ದೇವೆ. ಬಲಶಾಲಿಯಾದ ಪ್ರಾಣಿಯು ಅಬಲ ಪ್ರಾಣಿಯನ್ನು ಬೇಟೆಯಾಡಿ ಆಹಾರ ಪೂರೈಸಿಕೊಳ್ಳುವಿಕೆಯ ತಂತ್ರವನ್ನು ಪ್ರಾಣಿವರ್ಗದಿಂದಲೇ ಕಲಿತಿದ್ದೇವೆ. ಮನುಷ್ಯ ಮನುಷ್ಯನನ್ನೇ ಕೊಂದು ತಿನ್ನುವ ಕಾಲವೊಂದಿತ್ತು. ಆದರೆ ಈಗ ಅದು ಪರಿವರ್ತನೆಗೊಂಡು ಪರಸ್ಪರ ದ್ವೇಷಿಸಿಕೊಳ್ಳುವುದಕ್ಕೆ ಸೀಮಿತವಾಗಿದೆ. ಇಲ್ಲೆಲ್ಲ ಹಾವು-ಮುಂಗುಸಿಯ ದ್ವೇಷವನ್ನು ನೆನಪಿಸಿಕೊಳ್ಳುತ್ತೇವೆ. ಹದ್ದು ಹಾವನ್ನು ಎತ್ತಿಕೊಂಡು ಹೋಗಿ ತಿನ್ನುವುದನ್ನು, ಹಾವು ತನ್ನ ಮರಿಗಳನ್ನೇ ಆಟವಾಡಿಸಿ ತಿನ್ನುವುದನ್ನು ನಿದರ್ಶಿಸಿಕೊಳ್ಳುತ್ತೇವೆ. ಬೆಕ್ಕು ಇಲಿಯನ್ನು ಕೊಂದು ತಿನ್ನುವುದನ್ನು ನೆನಪಿಸಿಕೊಳ್ಳುತ್ತೇವೆ.

ಬೇಡರ ಸಾಮಾಜಿಕ ಸ್ಥಾನಮಾನ : ಸಂಸ್ಕೃತಿಯ ವಿಕಾಸವು ನಾಗರೀಕತೆಯಲ್ಲಿ ಪರಿಚಲನೆಗೊಳ್ಳುತ್ತಿದ್ದರೂ ಪ್ರಕೃತಿ-ಸಂಸ್ಕೃತಿಯ ನಡುವಿನ ನಾಡಾಡಿ ಹೆಗ್ಗುರುತುಗಳಾಗಿ ಹಲವು ಬುಡಕಟ್ಟುಗಳು ಉಳಿದಿವೆ. ಗುಡ್ಡಗಾಡು ಜನರೆಂದು ಕಾಡುಮನುಷ್ಯರೆಂದು ಅಲೆಮಾರಿಗಳೆಂದು ಕರೆಯಲ್ಪಡುವ ಇವರು ಬೇಟೆಗಾರಿಕೆಯನ್ನು ಅವಲಂಬಿಸಿ ಕಾಡಿನಲ್ಲಿಯೇ ನೆಲೆಸಿದ್ದರು. ಇವರಿಗೆಲ್ಲ ಬೇಟೆಯ ತಂತ್ರಗಳನ್ನೂ ತೋರಿಸಿಕೊಟ್ಟವರು ಬಹುಶಃ ಬೇಡ ಬುಡಕಟ್ಟಿನ ಜನರೇ ಇರಬಹುದು. ಆಹಾರನ್ಚೇಷಣೆಯ ಅನಿವಾರ್ಯ ಕ್ರಿಯೆಯಾಗಿದ್ದ ಸಂದರ್ಭದಲ್ಲಿ ಬೇಟೆಯನ್ನು ಪ್ರಮುಖ ವೃತ್ತಿಯಾಗಿ ರೂಪಿಸಿಕೊಂಡರಿವರು. ವೃತ್ತಿ-ಪ್ರವೃತ್ತಿ-ಹವ್ಯಾಸ-ಚಟಗಳಿಗೆ ವ್ಯತ್ಯಾಸವಿಲ್ಲದೆ ಬೇಟೆಗಾರಿಕೆಯನ್ನೂ ಪಾಲಿಸಿದ್ದರಿಂದಲೇ ವೃತ್ತಿ ಪೂರಕವಾದ ಬೇಟೆಯ ಹೆಸರು ಜಾತಿಸೂಚಕವಾಗಿ ಅನ್ವಯವಾಗಿದೆ. ಬೇಡ ಬುಡಕಟ್ಟು ಆಹಾರಕ್ಕಾಗಿ ಪ್ರಾಣಿಗಳನ್ನು ಕೊಂದು ತಿಂದು ದಷ್ಟಪುಷ್ಟರಾಗಿದ್ದರಲ್ಲದೆ ಆತ್ಮರಕ್ಷಣೆಗಾಗಿ ಉಗ್ರ ಹಾಗೂ ಬಲಿಷ್ಠ ಪ್ರಾಣಿಗಳನ್ನು ಕೊಲ್ಲುವ ತಂತ್ರಗಳಲ್ಲಿ ಪಳಗಿದವರಾಗಿದ್ದರು. ಅವಶ್ಯಕ ಪ್ರಾಣಿಗಳನ್ನು ಪಳಗಿಸುವುದರಲ್ಲಿ ಪರಿಣಿತರಾಗಿದ್ದರು. ಈ ಮೂಲಕ ಹೋರಾಟಕ್ಕೆ ಹೆಸರುವಾಸಿಯಾದ ಬೇಡರಿಗೆ ಆಡಳಿತಾತ್ಮಕ ರಾಜಕೀಯ ಹೋರಾಟಗಳಲ್ಲಿ ಆಧ್ಯತೆ ದೊರೆಯಿತು. ಯೋಧ, ಸೇನಾಧಿಪತಿ, ದಳಪತಿ, ಪಾಳೆಗಾರ, ತಳವಾರ ಮಹಾರಾಜರವರೆಗೆ ನಾಡಿನ ಸಂಬಂಧಿನಿರ್ವಹಣೆಯಲ್ಲಿ ಅವಿರತವಾಗಿ ತೊಡಗಿಕೊಳ್ಳಲು ಸಾಧ್ಯವಾಯಿತು. ಕಾಡು -ನಾಡುಗಳ  ಸಂಸ್ಕೃತಿಯ ಸಂಕರಾವಸ್ಥೆಯಲ್ಲಿ ಕಾಡಿನ ಸಂಪತ್ತನ್ನು ‌ದೋಚುವ ಕಾಡುಗಳ್ಳರಾಗದೆ, ಕಾಡಿನ ಮಾರ್ಗದಲ್ಲಿ ಓಡಾಡುವ ಶ್ರೀಮಂತ ಲೋಲುಪವರ್ಗದ ಒಡವೆವಸ್ತು ನಗ-ನಾಣ್ಯಗಳನ್ನು ದೋಚುವ ‌ದರೋಡೆಕೋರರಾಗಿ ಕಂಡುಬರುತ್ತಾರೆ.ಇವರ ಧೈರ್ಯ ಆಳುವ ರಾಜರನ್ನು ಆಕರ್ಷಿಸಿದ್ದರಿಂದ ಆಸ್ಥಾನದ ಆಡಳಿತಾತ್ಮಕ ಜವಾಬ್ದಾರಿಗಳನ್ನು ನೀಡಿದರು. ಅಲ್ಲಿಯೂ ಸ್ವಾಮಿನಿಷ್ಠೆಗೆ ಹೆಸರುವಾಸಿಯಾಗಿ ರಾಜನ ಅಧೀನ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಆದರೆ ಸ್ವಾಮಿನಿಷ್ಠೆಯ ಗುಣವು ಪರಕಾಷ್ಟೆಯೆಂಬಂತೆಯೂ ಅತಿರೇಕವೆಂಬಂತೆಯೂ ಸಂಚಲನಗೊಂಡದ್ದು ಬೇಡ-ನಾಯಕರ ದುರಂತವೆನ್ನಬಹುದು.

ಅಭಿಮಾನ ಅಹಂಕಾರಗಳಿಗೆ ಹೆಸರಾದ ಈ ಸಮುದಾಯವು ಸ್ವಾರ್ಥಿಗಳು ಲೋಭಿಗಳು ಆಗದಿರುವುದು ಹೆಗ್ಗಳಿಕೆ. ಆದರೆ ಹಠವೆಂಬ ಹುಂಬತನ ಜಾಣತನವನ್ನು ಮರೆಮಾಚುತ್ತದೆ. ಜನಾಂಗದ ಪರಂಪರೆ ಹಾಗೂ ಸಂಸ್ಕೃತಿಯು ಶೋಷಣೆಗೆ ಒಳಗಾಗುವುದರಲ್ಲೇ ದಾಸ್ಯ ಮತ್ತು ತುಳಿತಗಳಿಗೆ ಒಳಪಟ್ಟಿತು ಎಂಬುದು ಚಾರಿತ್ರಿಕ ಸತ್ಯ. ಆದರೆ ಇಂದಿಗೂ ಮೊಸ ವಂಚನೆ ಕುಯುಕ್ತಿಗಳ ದಟ್ಟ ನೆರಳಿನಿಂದ ದೂರವಾಗಿ ಉಳಿದು ಬದುಕುತ್ತಿದ್ದಾರೆ. ಅಚಾತುರ್ಯಗಳನ್ನು ಸಮಾಚದಲ್ಲಿ ಅನಾವರಣಗೊಳಿಸಿ ಸರಿ-ತಪ್ಪುಗಳ ಸಮತೋಲನವನ್ನು ಕಾಯ್ದುಕೊಳ್ಳವವರನ್ನು ಈ ಸಮಾಜವು ಇಂದಿಗೂ ಆದರಿಸುತ್ತದೆ. ತಪ್ಪುಗಳನ್ನು ಮರೆಮಾಚಿಕೊಂಡು ಸಭ್ಯರಂತೆ ವರ್ತಿಸುವ ನಯವಂಚಕರನ್ನು ತಿರಸ್ಕರಿಸುವದರೊಂದಿಗೆ ಜನಾಂಗಕ್ಕೆ ಸಲ್ಲದವರು ಎಂದು ಅಲಕ್ಷ ಮಾಡುತ್ತದೆ. ಬೇಡಸಮುದಾಯದಲ್ಲಿ ವಸ್ತು ಸಂಪತ್ತಿಗೆ ಆಧ್ಯತೆ ಕೊಡುವುದಿಲ್ಲ.

ಬದಲಾಗಿ ವ್ಯಕ್ತಿಯ ಆತ್ಮನಿಷ್ಠೆಗೆ ಹೆಚ್ಚು ಮಹತ್ವವಿದೆ. ಎಲ್ಲರೂ ಹರಿಶ್ಚಂದ್ರನಷ್ಟು ಸತ್ಯಸಾಧಕರು ಆಗಬೇಕೆಂಬ ಉಪೇಕ್ಷೆ ಇಲ್ಲವಾದರೂ ನಡೆದಂತೆ ನುಡಿಯುವ ನುಡಿದಂತೆ ನಡೆಯುವ ಹಂಬಲ ಹಾಗೂ ಧೈರ್ಯ ಇವರಿಗೆ ಪ್ರಯತ್ನ ಪರಂಪರಾಗತವಾಗಿ ಲಭಿಸಿರುತ್ತದೆ. ಆಧುನಿಕತೆ ನಾಗರಿಕತೆಗಳ ಅಬ್ಬರದಲ್ಲಿ ಅತಿ ನಯ-ನಾಜೂಕಿನಿಂದ ಕೂಡಿದ ಇಂದಿನ ಸಾಂಸ್ಕೃತಿಕ ಪರಿಸರದಲ್ಲಿ ಜಾಗತೀಕರಣದ ಶಾಪವಾಗಿರುವ ಭಯೋತ್ಪಾದನೆಯ ನೆರಳಿನಲ್ಲಿ: ಬೇಡಜನಾಂಗದ ದಿಟ್ಟತೆಗೆ ಮೂಲ ಇವರ ಬೇಟೆಪರಂಪರೆಯ ಜ್ಞಾನದ ಮಜಲುಗಳೆಂದರೆ ಅತಿಶಯೋಕ್ತಿಯಾಗಲಾರದು. ಪಶುಪಾಲನೆಯ ಹಂತದಲ್ಲಿ ತಮ್ಮ ಪ್ರಾಣಿಗಳನ್ನು ಕಬಳಿಸಲು ಬರುತ್ತಿದ್ದ ಪ್ರಾಣಿಗಳನ್ನೂ, ಶತ್ರುಗುಂಪುಗಳನ್ನೂ ನಿರಂತರವಾಗಿ ಬೇಟೆಯಾಡಿದ ನಿದರ್ಶನಗಳು ಇಂದು ಐತಿಹಾಸಿಕ ಸತ್ಯಗಳಾಗಿ ಉಳಿದಿವೆ. ಕೃಷಿಯ ಕಾರಣಕ್ಕಾಗಿ ಒಂದೆಡೆ ನೆಲೆಯನ್ನು ಕಂಡುಕೊಂಡ ಗುಂಪುಗಳು ಒಂದು ವರ್ಗವಾಗಿ ಉಳಿದು ಅಲೆಮಾರಿ ಗುಂಪುಗಳ ಜೊತೆಯಲ್ಲಿ ಅಸಮಾಧಾನವನ್ನು ಕಟ್ಟಿಕೊಂಡು ಸಮುದಾಯ ಹಲವು ಗುಂಪುಗಳಾಗಿ ಕವಲೊಡೆಯುವಂತೆ ಆಯಿತು.

ಸಾಂಸ್ಕೃತಿಕ ತಿರುವುಗಳ ಸ್ಥಿತ್ಯಂತರಗಳಿಂದಾಗಿ ಒಟ್ಟಾರೆ ಬೇಡಸಮುದಾಯದಲ್ಲಿ ಪುರುಷ ಪ್ರಧಾನ್ಯತೆ ಹೆಚ್ಚಾಗಿರುವಂತೆ ಕಂಡುಬರುತ್ತದೆ. ಬುಡಕಟ್ಟು ಮೂಲದ ಮಾತೃ ಪ್ರಧಾನಿ ಕುಟುಂಬ ಮೌಲ್ಯಗಳು ಆಚರಣೆಯಲ್ಲಿ ಉಳಿದು ಬಂದಿವೆ. ಅಲಲ್ಲಿ ಮಾತೃ ಮೂಲ ಕುಟುಂಬ ವ್ಯವಸ್ಥೆಯ ಧಾರ್ಮಿಕ ಅಥವಾ ಸಾಮಾಜಿಕ ನಿಯಮಗಳ ನೆಪದಲ್ಲಿ ಸ್ತ್ರೀಶೋಷಣೆಯು ನಡೆಯುತ್ತಲೇ ಇದೆ. ಮೂಢ ನಂಬಿಕೆಗಳ ಮೌಢ್ಯತೆಯನ್ನು ಆಧಾರವನ್ನಾಗಿಸಿ ಇತರರು ಅಮಾಯಕ ಅಬಲೆಯರನ್ನು ದೇವಾದಾಸಿಯಂತ ಅನಿಷ್ಟ ಪದ್ಧತಿಗಳಿಗೆ ತಳ್ಳುತ್ತಿದ್ದಾರೆ. ಇಂತವರ ಸ್ಥಿತಿ ಇಂದಿಗೂ ಚಿಂತಾಜನಕವಾದದು. ಆದರೆ ಬೇಡ ಸಮುದಾಯದಲ್ಲಿ ಇವರೊಂದಿಗಿನ ವೈವಾಹಿಕ ಸಂಬಂಧಗಳಿಗೆ ನಿರ್ಭಂದವಿಲ್ಲ. ಬೇಡರಲ್ಲಿ ಮದುವೆಯಸಾಲು, ಕೂಡಾವಳಿಸಾಲು ಹಾ‌ಗೂ ಬಸವಿಸಾಲು ಎಂದೂ ಮೂರು ವಿಧಗಳ ಪರಂಪರೆ ಕಂಡುಬರುತ್ತದೆ. ಮದುವೆಯಾದ ದಂಪತಿಗಳ ಸಂತತಿಯು ಮದುವೆಯಸಾಲಾವಳಿ ಎಂದು ಪರೀಗಣಿಸಲ್ಪಡುತ್ತದೆ. ಶಾಸ್ತ್ರೋಕ್ತವಾಗಿ ಮದುವೆಯಾಗದೇ ಇರುವ ದಂಪತಿಗಳನ್ನು ಕೂಡಿಕೆಯಾದವರು ಎಂದು ಕರೆಯುತ್ತಾರೆ. ಹಂಡನ ದೃಢೀಕರಣವಿಲ್ಲದ ಸಂತಾನ ಪರಂಪರೆಯನ್ನು ಬಸವಿಸಾಲು ಎಂದು ಕರೆಯುತ್ತಾರೆ. ಈ ಮೂರು ಸಾಲುಗಳ ವೈವಾಹಿಕ ಸಂಬಂಧಗಳಿಗೆ ಆಧ್ಯತೆ ಇದೆ. ಆದರೆ ಸ್ವಗೋತ್ರ ವಿವಾಹಕ್ಕೆ ನಿಷೇಧವಿದೆ. ಅಲ್ಲದೆ ವೈವಾಹಿಕ ಸಂಬಂಧಗಳಿಗೆ ಬಸವಿಯ ಸಾಲು ಶ್ರೇಷ್ಠವೆಂದು ಹೇಳುತ್ತಾರೆ. ಇದು ಸಂಸ್ಕೃತಿಯ ಮೂಲದಲ್ಲಿ ಅನಿವಾರ್ಯವಾಗಿ ವಿಕಾಸದಲ್ಲಿ ಅನಿಷ್ಟವಾಗಿ ಪರಿಣಮಿಸಿ ಶೋಷಣೆಗೆ ಒಳಗಾದ ಗುಂಪನ್ನು ಪುನರುಜ್ಜೀವನಗೋಳಿಸಿದ ಸಾಂಸ್ಕೃತಿಕ ಹೆಗ್ಗುರುತಾಗಿ ಕಂಡುಬರುತ್ತದೆ. ಬೇಡ ಮಹಿಳೆಯರು ನುರಿತ ಬೇಟೆಗಾರ್ತಿಯರಾಗಿದ್ದರೆಂಬುದಕ್ಕೆ ನಿದರ್ಶನಗಳಿವೆ. ಅಂತೆಯೇ ಪಶುಪಾಲನೆ ಕೃಷಿ ದಿನಗೂಲಿಯಂಥ ಶ್ರಮಿಕ ವಲಯದಲ್ಲಿ ಪುರುಷನಿಗೆ ಸರುಸಮಾನವಾಗಿ ದುಡಿಯುತ್ತಾ ಬಂದಿದ್ದಾರೆ. ಹಣ್ಣು ತರಕಾರಿಗಳ ವ್ಯಾಪಾರದಂತಹ ಸಣ್ಣಪುಟ್ಟ ವಹಿವಾಟುಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಇವರು ಇತ್ತೀಚಿಗೆ ವಿದ್ಯಾವಂತ ಉದ್ಯೋಗಸ್ಥ ವಲಯದಲ್ಲಿ ಬೇಡ ಮಹಿಳೆಯರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆಗೆಲಸದಿಂದ ಕಛೇರಿಗಳ ಅಧಿಕೃತ ಸೇವೆಯವರೆಗೆ ದಿಟ್ಟತನದಿಂದ ತೊಡಗಿಸಿಕೊಂಡಿದ್ದಾರೆ.

ಪರಂಪರೆಯ ಆಯಾಮಗಳು

ಬೇಡರು ಭಾರತದ ಮೂಲನಿವಾಸಿಗಳಲ್ಲಿ ಪ್ರಮುಖವಾದ ಸಮುದಾಯವೆಂಬುದರಲ್ಲಿ ಸಂಶಯವಿಲ್ಲ. ಇವರು ವೇದಪೂರ್ವಕಾಲದ ಮೂಲನಿವಾಸಿಗಳಾದ ಕಿರಾತ, ಪುಳಿಂದ, ವ್ಯಾಧ, ಪಣಿ, ನಾಗ, ವಾನರ, ಅಸುರ ಎಂಬಿತ್ಯಾದಿ ಗುಂಪುಗಳಲ್ಲಿ ಹಂಚಿಹೋಗಿದ್ದರು. ಇವರೆಲ್ಲರೂ ಆರ್ಯ-ದ್ರಾವಿಡ ಸಮುದಾಯಗಳಿಗಿಂತ ಮೊದಲೇ ನೆಲೆಸಿದ್ದವರು ಎಂಬುದಾಗಿ ಅಧ್ಯಯನಗಳಿಂದ ತಿಳಿದು ಬರುತ್ತದೆ. ಗಿರಿಶಿಖರ ಕಣಿವೆ ಪ್ರದೇಶ ನದಿಬಯಲು ಹುಲ್ಲುಗಾವಲು ದಟ್ಟ ಅರಣ್ಯ ಇವರು ನೆಲೆಸಿದ್ದ ತಾಣಗಳು. ಆದಿಮಾನವನ ಮೂಲ ವೃತ್ತಿಯಾದ ಬೇಟೆಯನ್ನು ಮುಖ್ಯ ಕಸುಬು ಜೀವನ ವಿಭಾನವಾಗಿ ಉಳಿಸಿಕೊಂಡರು. ಹಿಮಾಲಯ ಪರ್ವತದ ತಪ್ಪಲಿನಲ್ಲಿ ಕಿರಾತ ರಾಜ್ಯವು ಪ್ರಾಚೀನ ಕಾಲದಲ್ಲಿಯೇ ಅಸ್ಥಿತ್ವದಲ್ಲಿತ್ತೆಂದು, ಆರ್ಯರಿಗಿಂತ ಮುಂಚೆಯೇ ಇವರ ಗುಂಪುಗಳು ಹರಪ್ಪ-ಮಹೆಂಜೋದಾರೋ ಸಂಸ್ಕೃತಿಗಳ ನೇಕಾರರಾಗಿದ್ದವರೆಂದು ವಿದ್ವಾಂಸರ ಅಭಿಪ್ರಾಯವಾಗಿದೆ. ಆರ್ಯ-ದ್ರಾವಿಡರೊಂದಿಗೆ ಉಂಟಾದ ಸಂಘರ್ಷಗಳಿಂದಾಗಿ ಇವರು ಕಟ್ಟಿಕೊಂಡಿದ್ದ ನಗರಗಳನ್ನು ಬಿಟ್ಟು ಪುನಃ ಕಾಡುನ್ನು ಸೇರಿ ಪ್ರಾಣಿಗಳು ಕ್ರಮಗಳು ರೀತಿ-ವಿಧಾನಗಳಿಗೆ ಅನುಗುಣವಾಗಿ ಇವರಿಗೆ ಹಲವು ಹೆಸರುಗಳು ಅನ್ವಯವಾದವು. ಉದಾಃ ಪುಳಿಂದ, ಕುಳಿಂದ, ಬಿಲ್ಲ, ಕಿರಾತ, ಶಬರ, ವ್ಯಾಧ, ನಿಷಾದ, ವೇಡ, ಬೇಟೆಕಾರ, ವಿಯದರ(ಬಿಯದರ) ಇತ್ಯಾದಿ ಆರ್ಯ-ದ್ರಾವಿಡ ಪದಗಳು ಸಮುದಾಯ ಸೂಚಕ ಪರ್ಯಾಯ ನಾಮಗಳಾಗಿದ್ದವು.

ವಾಲ್ಮೀಕಿಯ ಕಾಲಕ್ಕಾಗಲೇ ಬೇಟೆಯ ವೃತ್ತಿಯಿಂದ ಬೇಡರು ಪಲ್ಲಟವಾಗುತ್ತದ್ದುದು ಸ್ಪಷ್ಟವಾಗುತ್ತದೆ. ವಾಲ್ಮೀಕಿಯ ತಂದೆ ಪ್ರಚೇತಸನು ಅನವಶ್ಯಕವಾದ ಕಾಡನ್ನು ಕಡಿದು ಬಯಲೂಗೊಳಿಸಿದನೆಂದು ಆತನ ಪತ್ರಿ ವೃಕ್ಷಕನ್ಯೆ ಮಾರಿಷೆ ಅಥವಾ ವಾರ್ಕ್ಷೀ ಎಂಬ ಪೌರಣಿಕ ಆಧಾರಗಳು ಲಭಿಸುತ್ತವೆ. ಭೂಮಿಯಲೆಲ್ಲ ಗಿಡಮರಗಳಿಂದ ಕೂಡಿದ ಕಾಡು ಆವರಿಸಿರುವಾಗ ವಾಲ್ಮೀಕಿಯ ತಂದೆ ಪ್ರಷೇತಸ ಅನವಶ್ಯಕವಾದ ಕಾಡನ್ನು ತನ್ನ ತಪಶ್ಯಕ್ತಿಯಿಂದ ನಾಶಮಾಡಿ ಜನರಿಗೆ ವಾಸಿಸಲು ಸಾಧ್ಯವಾಗುವಂತೆ ಮಾಡಿದ ಈ ಸಂದರ್ಭವು ಕಾಡಿನಿಂದ ನಾಡನ್ನು ರೂಪಿಸಿದ್ದನ್ನು ತಿಳಿಯಪಡಿಸುತ್ತದೆ. ಇನ್ನೂ ವಾಲ್ಮೀಕಿಯು ನಾರದ ಮಹರ್ಷಿ ಮತ್ತು ಸಪ್ತರ್ಷಿಗಳ ಮಾರ್ಗದರ್ಶನ ಹಾಗೂ ಬ್ರಹ್ಮನ ಅನುಗ್ರಹದಿಂದ ಮಹರ್ಷಿಯಾಗಿ ಬೇಟೆಗಾರನಾದ. ಬೇಡನೊಬ್ಬನನ್ನು ಶಪಿಸಿದ ಪರಿಯು ರಾಮಾಯಣ ರಚಿಸಲು ಕಾರಣವಾಯಿತು. ರಾಮಾಯಣದಲ್ಲಿ ಬರುವ ಶಬರಿಯು ಬೇಡತಿಯಾದರೂ ಬೇಟೆ ಮತ್ತು ಮಾಂಸಹಾರ ಜೀವನ ಕ್ರಮದಿಂದ ಹೊರತಾಗಿ ದೀರ್ಘಕಾಲ ಬದುಕಿದ್ದವಳು. ಗುಹನು ಬೇಡರ ದೊರೆಯಾಗಿದ್ದವನು ಮಹಾಭಾರತದ ಏಕಲವ್ಯನು ನಿಷಾದ ರಾಜನ ಮಗ ಬೇಟೆಯ ಕೌಶಲ್ಯವನ್ನು ಯುದ್ಧ ಕೌಶಲ್ಯವನ್ನಾಗಿ ಮುಂದುವರೆಸಿದವನು ಈತನೇ. ಧರ್ಮವ್ಯಾದನು ಮಾಂಸವನ್ನು ಕೊಯ್ದು ನಾಡಿಗರಿಗೆ ಮಾರಾಟ ಮಾಡುತ್ತಿದ್ದವನು ವ್ಯಾಧನ ವೇಷಧಾರಿ ಶಿವನು ಬೇಟೆಯಾಡಿದ ಪ್ರಾಣಿಯ ಮೇಲಿನ ಹಕ್ಕಿನ ಸಾಮ್ಯವನ್ನು ತೋರಿಸಿಕೊಟ್ಟನು. ಹಾಗೂ ಹೋರಾಟ ಮಾಡಿಯಾದರೂ ಹಕ್ಕನ್ನು ಪಡೆದುಕೊಳ್ಳಬೇಕೆಂದು ಸಾಬೀತುಗೊಳಿಸಿದವನು. ಶಿವನ ಪಡೆಯು ಬೇಡರ ಪಡೆಯಾಗಿತ್ತು ಬೇಡರ ಗಣ್ಯರಾಜ್ಯಗಳಿಗೆ ‘ಬೇಡವಟ್ಟು’ಗಳೆಂದು ಕರೆಯುತ್ತಿದ್ದುದನ್ನು ಬೇಡಪಡೆ(ಸೈನ್ಯ)ಗಳನ್ನು ಬೇಡರಘಟ್ಟಗಳೆಂದು ಹೆಸರಿಸಿರುವುದನ್ನು ಸ್ಮರಿಸಬಹುದು.

ಕರ್ನಾಟಕದ ಮಟ್ಟಿಗೆ ಬೇಡರು ಪಶುಪಾಲನೆ ಮತ್ತು ಆಡಳಿತಾತ್ಮಕ ವಲಯಗಳಿಗಾಗಿ ಹೊರಗಿನಿಂದ ವಲಸೆ ಬಂದವರೆಂದು ಕೆಲ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಮತ್ತೆ ಕೆಲವರು ವಲಸಿಗರಿವರು ಬರುವ ಮೊದಲೇ ಕರ್ನಾಟಕ ಮೂಲ ನಿವಾಸಿಗಳಲ್ಲಿ ಒಬ್ಬರಾಗಿ ಬೇಡರು ವಾಸಿಸುತ್ತಿದ್ದರೆಂಬುದನ್ನು ಸ್ಪಷ್ಟಪಡಿಸುತ್ತರೆ. ಇವರೆಡೂ ಅಂಶಗಳು ಸರಿಯಾದಂಥವುಗಳಾಗಿವೆ. ಕೆಲವು ಬೇಡರ ಮಾತೃಭಾಷೆ ಇಂದಿಗೂ ಕನ್ನಡವೇ ಆಗಿರುವುದು ಇವರ ಒಂದು ವಿಶೇಷವಾದರೆ, ಉಳಿದಂತೆ ಬೇಡರು ಪರಂಪರೆಯಲ್ಲಿ ತೆಲುಗು ಇಲ್ಲವೇ ತೆಲುಗುಮಿಶ್ರಿತ ಕನ್ನಡ ಭಾಷೆಯನ್ನು ಕಾಣುತ್ತೇವೆ. ಕರ್ನಾಟಕದ ಆಂಧ್ರದ ಗಡಿಪ್ರದೇಶಗಳಲ್ಲಿ ಇಂಥ ವೈವಿಧ್ಯತೆ ಕಂಡುಬರುವುದರಿಂದ ಇದನ್ನು ಪ್ರಾದೇಶಿಕ ಪರಿಣಾಮವೆಂದೂ ಪರಿಗಣಿಸಬಹುದು. ಆದರೆ ಪಶುಪಾಲನೆಯನ್ನು ಅನುಸರಿಸಿದ ಬೇಡರ ಗುಂಪುಗಳ ಮಾತೃಭಾಷೆ ತೆಲುಗು-ಕನ್ನಡದ ಸಮ್ಮಿಶ್ರ ಭಾಷೆಯು ವಿಶಿಷ್ಟತೆಯಿಂದ ಕೂಡಿದೆ. ಇವರು ಹೈನುಗಾರಿಕೆಯ ಉತ್ಪನ್ನಗಳನ್ನು ನಾಡಿನ ಜನರಿಗೆ ನೇಡಿ ಅವರಿಂದ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪಡೆಯುವ ವಿನಿಮಯದ ಸಂದರ್ಭದಲ್ಲಿ ಭಾಷಾ ಸಮ್ಮಿಶ್ರಣವಾಗಿರಬಹುದು. ಇವರ ದೈವಗಳ ಬೇಟೆಗಾರ ವೀರರು ಮತ್ತು ಬೇಟೆಯ ಆಯುಧಗಳಾಗಿವೆ. ಒಟ್ಟಾರೆ ಸಮುದಾಯದ ಕುಲದೈವಗಳಾದ ಬೇಟೆರಾಯ, ರಂಗಯ್ಯ, ಸರಸಿಂಹ, ಶಿವ ಮತ್ತು ದೇವತೆಗಳ ಆಚರಣೆಗಳಿಗೆ ಬೇಟೆಯ ಹಿನ್ನಲೆ ಕಾರಣವಾಗಿದೆ.

ಬೇಡರ ಪಾಲಿಗೆ ಬೇಟೆಗಾರಿಕೆ ಕೇವಲ ಆಹಾರ ನಿರ್ವಹಣೆಯಾಗಿ ಉಳಿಯದೆ ಉಡುಗೆ-ತೊಡುಗೆಗಳ ಅವಶ್ಯಕತೆಗೆ ಪೂರಕವಾಗಿ ವಿಕಾಸಗೊಂಡಿತು. ಹುಲಿ, ಸಿಂಹ, ಚರಿತೆ, ಜಿಂಕೆ, ಇತ್ಯಾದಿ ಪ್ರಾಣಿಗಳ ಚರ್ಮವು ರಾಜ ಹಾಗು ‌ಋಷಿ ವರ್ಗಗಳ ಘನತೆಯ ದ್ಯೋತಕಗಳಾದವು. ಕೆಲವು ಪ್ರಾಣಿಗಳ ಉಗುರು ತಲೆಬುರುಡೆ ಮತ್ತು ಮೂಳೆಗಳು ಲೌಕಿಕ ಪ್ರಯೋಜನ ಪಡೆದುದಲ್ಲದೆ, ಮಾಂತ್ರಿಕ ವಲಯದ ಯಕ್ಷಿಣಿವಿದ್ಯೆಗಳಿಗೆ ಭಯಪ್ರೇರಣೆ ಹಾಗು ನಿವಾರಣೆಗೆ ಬಳಕೆಯಾಗತೊಡಗಿದವು. ಬೇಟೆಗೆ ಆಯುಧ ಸಲಕರಣೆಗಳಾಗಿ, ಕೆಲವೊಮ್ಮೆ ಬೇಟೆಯ ಪ್ರಾಣಿಗಳನ್ನು ಆಕರ್ಷಿಸುವ ತಂತ್ರಗಳಿಗಾಗಿ ಬೇಟೆಯಾಡಿದ ಪ್ರಾಣಿಗಳ ಪಳಿಯುಳಿಕೆಗಳನ್ನು ಬಳಸಿಕೊಳ್ಳುವ ತಂತ್ರವನ್ನು ಬೇಡರು ಶೋಧಿಸಿದರು. ವಸ್ತುಗಳನ್ನು ಸಂಗ್ರಹಿಸುವ ಸಾಧಾನಗಳಾಗಿ ಚರ್ಮದ ಚೀಲದ ಮರದ ಡಬ್ಬಿ, ಪಾತ್ರೆಗಳ ಆಯುಧ ಎಂದು ಆವಿಷ್ಕಾರ; ಚೀಲಗಳ ರಚನೆ ಮುಂತಾದವು ರಕ್ಷಣೆಯ ವುಶೀಷತೆಗಳನ್ನು ಪರಿಷಯಿಸಲು ಅನವು ಮಾಡಿಕೊಟ್ಟರು. ಮಂಸಾಹಾರ ಸೇವನೆಯಲ್ಲಿಯೂ ಎಲ್ಲ ಜೀವಿಗಳನ್ನು ಮನುಷ್ಯ ಭಕ್ಷಿಸುವುದಿಲ್ಲ. ಆಹಾರ ಸೇವನೆಗೆ ಉತ್ತೇಜನವಾಗುವಂಥವು ಯಾವುವು, ಅನಾರೋಗ್ಯಕರವಾದುವು ಯಾವುವು ಯಾವ ಪ್ರಾಣಿಗಳ ಮಾಂಸ ಸೇವನೆಯಿಂದ ಏನೇನು ತೊಂದರೆಗಳಾಗುತ್ತವೆ ಎಂಬ ಜ್ಞಾನ ಬೇಟೆಗಾರರಾದ ಬೇಡರಿಗೆ ಪರಂಪರೆಯಿಂದ ಬಂದಿರುತ್ತದೆ. ಜೊತೆಗೆ ಮನುಷ್ಯನ ಹಾಗೂ ಸಾಕುಪ್ರಾಣಿಗಳ ರೋಗ ನಿವಾರಣೆಗೆ ಬೇಟೆ ಪ್ರಾಣಿಗಳ ಉತ್ಪನ್ನಗಳ ಮೂಲಕ ಔಷಧ ಕಂಡುಹಿಡಿಯಲು ಕಾರಣವಾಗಿ ಔಷಧಿಯ ಅವಶ್ಯಕತೆಗಳಿಗಾಗಿ ಕೆಲವು ಜೀವಿಗಳನ್ನು ಪಾಲನೆ ಮಾಡಲು ಸಾಧ್ಯವಾಯಿತು.

ಬೇಟೆಗಾರನು ಪ್ರಾಣಿಗಳ ಚಲನವಲನಗಳನ್ನು ಗಮನಿಸುವಾಗ ಅವುಗಳ ಆಹಾರಕ್ರಮ ಹಾಗೂ ಆರೋಗ್ಯ ವೃದ್ಧಿಯ ಬಗ್ಗೆಯೂ ಶೋಧನೆಗಳನ್ನು ನಡೆಸಿದ್ದಾನೆ. ಅನಾರೋಗ್ಯದಿಂದ ಮುಕ್ತವಾಗಲು ಯಾವ ಯಾವ ಜೀವಿಯು ಯಾವ ಯಾವ ಸಸ್ಯ ಭಾಗಗಳನ್ನು ಉತ್ಪನ್ನಗಳನ್ನು ತಿನ್ನುತ್ತವೆ ಎಂಬುದನ್ನೂ ಕಂಡುಕೊಂಡಿದ್ದಾನೆ. ಹೀಗೆ ಬೇಟೆಯ ಮೂಲದ ಪಾರಂಪರಿಕ ಜ್ಞಾನದಲ್ಲಿ ಸಸ್ಯ ಸಂಬಂಧಿ ಪ್ರಾಣಿ ಆಹಾರದ ಗುಣ ವಿಶೇಷಗಳ ಮೌಖಿಕ ಅಧ್ಯಯನ ಮುಂದುವರಿಯುತ್ತಿರುತ್ತದೆ. ಅತಿಮಾನುಷ ಶಕ್ತಿಗಳನ್ನು ಒಲಿಸಿಕೊಳ್ಳಲು ಮನುಷ್ಯ ಮಾಡಿದ ಪ್ರಯತ್ನಗಳಲ್ಲಿ ಬಲಿ ನೀಡುವ ಪದ್ಧತಿಯೂ ಒಂದು. ಬೇಟೆಯ ಹಿನ್ನಲೆಯಲ್ಲಿ ಇಂಥ ಆಚರಣೆ ನಂಬಿಕೆಗಳು ಪರಿಚಲನೆಗೊಂಡಿದ್ದು ದುಪ್ಟ-ಶಿಷ್ಟ ಶಕ್ತಿಗಳನ್ನು ಒಲಿಸಿಕೊಳ್ಳಲು ಬೇಟೆಯಾಡಿ ಜೀವಂತವಾಗಿ ಸೆರೆಹಿಡಿದ ಪ್ರಾಣಿ ಪಕ್ಷಿಗಳನ್ನು ಬಲಿಕೊಡುತ್ತಿದ್ದರು. ಇಂದಿಗೂ ಇಂಥ ಪ್ರಾಣಿ ಬಲಿಯು ಬೇಟೆಕಡಿಯುವುದು ಎಂಬ ಹೆಸರಿನಲ್ಲಿ ಪ್ರಚಲಿತವಿರುವುದನ್ನು ಗಮನಿಸಬಹುದು. ಬೇಟೆಯು ಬೇಟೆಗಾರನ ಮುಖ್ಯ ಕಸುಬು ಆಗಿದ್ದುದರ ಜೊತೆಗೆ ಹಲವು ವೃತ್ತಿ ಕಸುಬುಗಳಿಗೆ ಆಧಾರವಾಯಿತು. ಪ್ರಾಣಿ-ಪಕ್ಷಿ ಮೂಲದ ವಸ್ತು ತಯಾರಕರು, ನಾಟೆವೈದ್ಯರು ಆಯುಧ ತಯಾರಕರು ಮೊದಲಾದವರ ಜ್ಞಾನಪರಿಣಿತಿಗೆ ಬೇಟೆಯ ಉತ್ಪನ್ನಗಳು ಪೂರಕವಾಗಿವೆ. ಅಲ್ಲದೆ ಬೇಟೆ ಬೇಡರ ಮೂಲ ವೃತ್ತಿ ಆಗಿದ್ದುದರ ಜೊತೆಗೆ ಕಾಡಿನ ಉತ್ಪನ್ನಗಳ ಸಂಗ್ರಹಣೆ ಉಪವೃತ್ತಿಯಾಯಿತು. ಈ ಹಿನ್ನಲೆಯಲ್ಲಿ ಬೇಡರ ನೆಲೆಗಳನ್ನು ಬೇಡರಹಳ್ಳಿ ಬೇಡರಹಟ್ಟಿ ಬೇಡರಘಟ್ಟ ಬೇಡರಕುಂಟೆ ಎಂಬುದಾಗಿ ಹಲವಡೆಗಳಲ್ಲಿ ಗುರುತಿಸಬಹುದು. ಜೊತೆಗೆ ಬೇಡರಲ್ಲಿನ ಬೇಟೆಯ ವೃತ್ತಿಗೆ ಪೂರಕವಾದ ಗೋತ್ರ-ಬಳುಗಳು ಸಹ ಗ್ರಾವನಾಮಗಳಾಗಿ ಇವರ ನೆಲೆಗಳನ್ನು ಸೂಚಿಸುತ್ತವೆ. ಉದಾಹರಣೆಗೆ ಗುಜ್ಜಲರು ಬಿಲ್ಲರು ಈಟಿಯರು ಕುಕ್ಕಲವರು ಜಿಂಕಲವರು ಕಂಕರೂ ಕಿರಾತರೂ ಇತ್ಯಾದಿ ಶಬ್ಧಸೂಚಕ ಸ್ಥಳನಾಮಗಳು ಬೇಟೆಗಾರರ ಪರಿಣೆತ ಗುಂಪುಗಳ ವಾಸದ ತಾಣಗಳಾಗಿದ್ದುದ್ದನ್ನು ಸೂಚಿಸುತ್ತದೆ.

ಬೇಟೆಯನ್ನು ಸಾಹಸವೆಂದು ಪರಿಗಣಿಸಿದ ಕಾಲಘಟ್ಟಗಳಲ್ಲಿ ಬೇಟೆಗರನಿಗೆ ಮಾನ್ಯತೆ ಇತ್ತು. ಬೇಟೆಯ ತಂತ್ರಗಳು ಯುದ್ಧ ತಂತ್ರಗಳಾಗಿ ವಿಕಾಸ ಹೊಂದಿದವು. ಬೇಟೆಯ ಕಾರಣಕ್ಕಾಗಿ ಕಾಡಿನ ನಿಸರ್ಗದ ನಿಗೂಢ ನೆಲೆಗಳನ್ನು ಶೋಧಿಸಿ ಭೇದಿಸಲು ಸಾಧ್ಯವಾಗುವ ಸಾವರ್ಥ್ಯ ಎದೆಗಾರಿಕೆ ಬೇಟೆಗಾರನಿಗೆ ರೂಢಿಸಿತು. ಕಾಡಿನ ಓಡಾಟದಲ್ಲಿ ಎದುರಾದ ಸವಾಲುಗಳು ರೋಮಾಂಚನ ಮೂಡಿಸುತ್ತಿದ್ದವು ಬೇಟೆಯ ಪ್ರಸಂಗದ ಸಂದರ್ಭಗಳು ಹಲವು ರಾಜವಂಶಗಳ ಸ್ಥಾಪನೆಗೆ ಕಾರಣವಾಗಿ ರಾಜ್ಯ-ರಜಧಾನಿ ಕೋಟೆ-ಕೊತ್ತಲ ದೇವಾಲಯ ಇತ್ಯಾದಿ ನಿರ್ಮಾಣಗಳಿಗೂ ನಾಂದಿಯಾಗಿರುವುದನ್ನು ದಂತಕಥೆ ಐತಿಹ್ಯ ಹಾಗೂ ಇತಿಹಾಸದಿಂದ ತಿಳಿಯಬಹುದು.

ಬೇಟೆಯ ಫಲಾನುಫಲಗಳು

ಬೇಟೆಗಾರನಿಗೆ ಬೇಟೆ ಒದಗುವುದು ಬೇಟೆಯ ಪ್ರಮುಖ ಪ್ರತಿಫಲ. ಇದರೊಂದಿಗೆ ಕಂಟಪ್ರಾಯವಾಗಿದ್ದ ಜೀವಜಂತುಗಳನ್ನು ಬೇಟೆಯಾಡಿದನೆಂಬ ಹೊಗಳಿದೆ ಲಭಿಸುತ್ತಿತ್ತು ರಾಜ ಮಾರ್ಯದೆಗೆ ಪಾತ್ರವಾಗುತ್ತಿದ್ದ ಸಾಮಾಜಿಕ ಪ್ರತಿಫಲವು ಮತ್ತೊಂದು ಅಂಶ. ಬೇಟೆಯ ಸಂದರ್ಭದ ನನೆಪು ಹಾಗೂ ವೀರ ಬೇಟೆಗಾರನ ಸಾಹಸದ ಕೀರ್ತಿ ಚಿರಸ್ಥಾಯಿಯಾಗಲೆಂದು ಶಾಸನ ವೀರಗಲ್ಲುಗಳನ್ನು ನೆಡೆಸುತ್ತದ್ದರು. ಬೇಟೆಯ ಕಾರಣಕ್ಕಾಗಿ ದುರಂತ ಸಾವನ್ನಪ್ಪಿದ ಬೇಟೆಗಾರ ಹಾಗೂ ಆತನ ಸಾಕುನಾಯಿಗಳ ಬೇಟೆಯ ಪರ-ವೈಖರಿಯೂ ಶಾಸನ ವೀರಗಲ್ಲುಗಳಲ್ಲಿ ಚಿತ್ರಣಗೊಂಡು ವೀರತ್ವವನ್ನೂ ದಾಖಲಿಸಿದೆ. ಇದು ಯುದ್ಧವೀರರಿಗೆ ಸರಿಸಮಾನವಾದದು. ವೀರಗಲ್ಲು-ಶಾಸನಗಳಲ್ಲಿ ಬೇಟೆಗೆ ಸಹಕರಿಸಿದ ಬೇಟೆನಾಯಿಗಳ ಉಲ್ಲೇಖವಿರುವಷ್ಟು ಯುದ್ಧಕ್ಕೆ ಸಹಕರಿಸಿದ ಆನೆ ಕುದುರೆಗಳ ಪ್ರಸ್ತಾಪಗಳೂ ಹೇರಳವಾಗಿ ಕಾಣದಿರುವುದೂ ಆಶ್ಚರ್ಯ ಮತ್ತು ಕೂತುಹಲದ ಸಂಗತಿ. ರಾಜನು ಯುದ್ಧ ಸಂದರ್ಭಗಳನ್ನು ಹೊರತುಪಡಿಸಿ ಬಿಡುವಿನ ವೇಳೆಯಲ್ಲಿ ಬೇಟೆಗೆ ಅನುವಾಗುತ್ತಿದ್ದ ಕೆಲವೊಮ್ಮೆ ದಿಗ್ವಿಜಯದ ನಂತರವೂ ಬೇಟೆಗೆ ಹೊರಡುತ್ತಿದ್ದ. ಇವೆರೆಡು ವಿನೋದಕ್ಕಾಗಿ ಬೇಟೆಯಾಡುತ್ತಿದ್ದ ಸಂದರ್ಭಗಳು. ಇನ್ನೂ ಕಾಡುಪ್ರಾಣಿಗಳ ಹಾವಳಿಯನ್ನು ಹತ್ತಿಕ್ಕಲು ರಾಜ ಸನ್ನದ್ದವಾಗುವ ಬೇಟೆಯು ಆತನ ಆದ್ಯ ಕರ್ತ್ಯವ್ಯಗಲ್ಲಿ ಒಂದಾಗಿತ್ತು. ಇವಿಲ್ಲದರಲ್ಲಿಯೂ ಬೇಡರು ಪಾಲ್ಗೊಳ್ಳದೆ ಬೇಟೆ ಮುಂದುವರೆಯುತ್ತಿರಲಿಲ್ಲ. ಬೇಟೆಗಾರರ ನಾಯಕ ಮುಖಂಡನ ಚಾಕಚಾಕ್ಯತೆ ಯುದ್ಧ ಮುಖಂಡರ ಯುದ್ಧತಂತ್ರಗಳಿಗೆ ಪ್ರೇರಣೆಯಾಯಿತು. ಈ ಬೇಟೆಗಾರರು ಸೈನಿಕರು ಸೇನಾಮುಖಂಡರು ಆಗಲು ಕಾರಣವಾಯಿತು. ಅಂತೆಯೇ ಆಡಳಿತಾತ್ಮಕ ಹುದ್ದೆ-ಸ್ಥಾನಗಳಲ್ಲಿ ಬೇಡನಾಯಕರು ಗಟ್ಟಿಗೊಳ್ಳಲು ಅಡಿಪಾಯವಾಯಿತು. ಸಾಹಿತ್ಯ ಹಾಗೂ ಪುರಾಣಗಳಲ್ಲಿ ವ್ಯಕ್ತವಾದ ಬೇಟೆಯು ಅಭಿವ್ಯಕ್ತಿ ಪರಿಕಲ್ಪನೆಗಳು ಭಿನ್ನ ನೆಲೆಗಳ ವೈವಿಧ್ಯತೆಗಳಳ್ಳಿ ಪ್ರಕಟವಾಗಿವೆ. ರಾಜ ಮತ್ತು ಬೇಟೆಗಾರನ ಸಂಬಂಧಗಳನ್ನು ಗಮನಿಸಿದಾಗ ಅರಸನು ಬೇಟೆಯ ಪ್ರಸಂಗಗಳಲ್ಲಿ ಕಾಡಿನ ಕನ್ಯೆಯರನ್ನು ವರಿಸಿ ಮದುವೆಯಾದ ಸಂದರ್ಭಗಳು ದೊರೆಯುತ್ತವೆ. ಪುರಾಣಗಲ್ಲಿ ಬೇಟೆಯ ನಿಮಿತ್ತ ರಾಜನು ಋಷಿಯ ಶಪಕ್ಕೆ ಒಳಗಾದ ಘಟನೆಗಳೇ ಹೆಚ್ಚು. ಎಷ್ಟೋ ವೇಳೆ ಅರಸನಿಗೆ ಬೇಟೆಗಾರನು ನೀಡುತ್ತಿದ್ದ ಕಾಣಿಕೆಯಲ್ಲಿ ಆತನ ಮನೆಯ ಕನ್ಯಾರತ್ನವು ಸೇರಿರುತ್ತಿತ್ತು. ಆದರೆ ಬೇಟೆಗಾರನ ಸಾಹಸಕ್ಕೆ ಮೆಚ್ಚಿ ರಾಜನು ನೀಡುತ್ತಿದ್ದ ಬಹುಮಾನಗಳಲ್ಲಿ ಅರಮನೆಯ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟ ಸಂದರ್ಭಗಳು ಅಷ್ಟಾಗಿ ಕಂಡುಬರುವುದಿಲ್ಲ.

ಬೇಟೆಗಾರರು ಬೇಟೆಯಾಡುವ ಸಂದರ್ಭದಲ್ಲಿ ಬೇಟೆಗೆ ಈಡಾದ ಪ್ರಾಣಿ, ಪಕ್ಷಿ ಅಥವಾ ಉರಗ ಜಲಾಚರ ಸಂಕುಲವನ್ನು ಕೊಂದು ಮಾಂಸವನ್ನು ಊರಿಗೆ ತರುವುದು ಒಂದು ಕ್ರಮವಾದರೆ, ಕೊಂದಂಥವುಗಳನ್ನು ಊರೆಲ್ಲಾ ಮೆರವಣಿಗೆ ಮಾಡುವುದು ಮತ್ತೊಂದು ಕ್ರಮ. ಬೇಟೆಗಾರನ ಮುಂದಿನ ಬೇಟೆಯ ತಂತ್ರಗಳಿಗೆ ಅವಶ್ಯಕವಾಗಿ ಬೇಕಾಗಿರುವ ಕಾಡಿನ ಪಶುಪಕ್ಷಿಗಳನ್ನು ಕೊಲ್ಲದೆ ಜೀವಂತವಾಗಿ ಸೆರೆಹಿಡಿದು ದೀವಗಳಾಗಿ ಪಳಗಿಸುವುದು ಅಥವಾ ಶ್ರಮದ ಕೆಲಸಗಳಿಗೆ ಇಲ್ಲವೇ ಮನರಂಜನಾತ್ಮಕ ಜನಪದ ಕಲೆಗಳಿಗೆ ಬಳಸಿಕೊಳ್ಳುವುದು ಇತ್ತಾದಿ ಉದ್ದೇಶಗಳಲ್ಲದೆ ಜೀವಂತ ಬೇಟೆಯನ್ನು ಊರಿನೊಳಕ್ಕೆ ತರುವ ವಿಷಯದಲ್ಲಿ ನಿಷೇಧವಿತ್ತು. ಏಕೆಂದರೆ ಅದು ಕಾಡು ಪ್ರಾಣಿಯಾಗಿದ್ದೂ ಊರಿನೊಳಕ್ಕೆ ಪ್ರವೇಶಿಸಿದ್ದರ ಸಂಕೇತವಾಗುತ್ತದೆ. ಆದ್ದರಿಂದ ಅಂಥದ್ದನ್ನು ಊರಿಗೆ ಕೇಡು ನಾಶದ ಸೂಚನೆ ಎಂದು ಪರಿಭಾವಿಸುತ್ತಾರೆ. ಆದ್ದರಿಂದಲೇ ಬೇಟೆಯ ಸಂದರ್ಭದಲ್ಲಿ ಕಾಡಿನಿಂದ ತಪ್ಪಿಸಿಕೊಂಡು ಊರಿಗೆ ನುಗ್ಗಿದ ಪ್ರಾಣಿಯನ್ನು ಕೊಂದು ಊರ ಮಧ್ಯದಲ್ಲಿ ಹೂಳುತ್ತಾರೆ. ಇಂದಿಗೂ ಯಾವುದೇ ಊರಿನೊಳಕ್ಕೆ ಜೀವಂತ ಮೊಲವು ಬರುವಂತಿಲ್ಲ; ಯಾರು ತರುವಂತೆಯೂ ಇಲ್ಲ. ಊರಿನ ಬೀದಿನಾಯಿಗಳನ್ನು ಭೇದಿಸಿ ಮೊಲವು ಊರನ್ನು ಪ್ರವೇಶಿಸಿತೆಂದರೆ ಅಂಥ ಊರು ಬೇರೊಬ್ಬರ ಅಧಿನಕ್ಕೆ ಒಳಗಾಗುತ್ತದೆ ಎಂಬ ನಂಬಿಕೆ ಇದೆ. ಕಾಡುಹಂದಿಯು ಊರಿಗೆ ಪ್ರವೇಶಿಸಿದರೆ ಅದನ್ನು ಲಕ್ಷ್ಮೀಯಪ್ರವೇಶ ಎಂದು ಪರಿಭಾವಿಸುತ್ತಾರೆ. ಅಂತೆಯೇ ಲಕ್ಷ್ಮೀಯು ಊರುಬಿಟ್ಟು ಹೋಗಬಾರದೆಂದು ಹಂದಿಯನ್ನು ಕೊಂದ ಊರ ಮಧ್ಯದಲ್ಲಿ ಹೂಳುತ್ತಾರೆ. ಹಂದಿಯೂ ಯಾರ ಮನೆಗಾದರೂ ನುಗ್ಗಿದರೆ ಅದನ್ನು ಮನೆಯ ಒಳಗಡೆಯೇ ಒಳಗಡೆಯೇ ಕೊಂದು ಅಲ್ಲಿಯೇ ಹೂಳಬೇಕು ಅದು ಹೊಸ್ತಿಲುದಾಟಿ ಹೊರಗೆ ಹೋದರೆ ಅಪಶಕುನವಾಗುತ್ತದೆ. ಮಾಂಸವನ್ನು ಭಕ್ಷಿಸುವ ಕಾಗೆ, ಗೂಗೆ, ಹದ್ದು, ಇತ್ಯಾದಿ ಪಕ್ಷಿಗಳು ಮನೆಯನ್ನು ಪ್ರವೇಶಿಸಿದರೆ ಕೇಡು ಎಂಬ ನಂಬಿಕೆಯನ್ನು ಗಮನಿಸಬಹುದು.

ಬೇಟೆಯಲ್ಲಿ ಗಬ್ಬದ ಜಿಂಕೆ, ಮರಿಮಾಡಿದ ನವಿಲು ಇತ್ಯಾದಿ ಮಿಥುನದ ಪ್ರಾಣಿ ಪಕ್ಷಿ ಉರಗಗಳೂ ನಲಿಯಾದರೆ ಆ ಪ್ರಯೋಗ ಮಾಡಿದ ಬೇಟೆಗಾರನಿಗೆ ಕೇಡಾಗುತ್ತದೆ ಎಂದು ಹೇಳುತ್ತಾರೆ. ರೆಕ್ಕೆ ಬಲಿಯದ ಪಕ್ಷಿಮರಿಗಳನ್ನು ಗುಟುಕು ತಿನ್ನುವ ದಿನಗಳಲ್ಲಿ ಹಿಡಿದು ತರುವುದಿಲ್ಲ. ಇಂದಿಗೂ ಬೆಕ್ಕು ಮುಂಗುಸಿ ಮೊಲ ಗಿಣಿ ಪಾರಿವಾಳ ಇತ್ಯಾದಿಗಳನ್ನು ಸಾಕಲು ಹಳೆಯ ತಲೆಮಾರಿನ ಯಜಮಾನರು ಸಮ್ಮತಿಸುವುದಿಲ್ಲ. ಆದರೆ ನಾಯಿ ಕೌಜುಗ ಕಾಡುಕೋಳಿ ಮುಂತಾದವುಗಳನ್ನು ಸಾಕಬಹುದು. ಇದಕ್ಕೆ ಭಿನ್ನ ಕಾರಣಗಳಿವೆ. ಪಾರಿವಾಳಗಳು ನಳಮಹಾರಾಜನನ್ನು ಮರಳು ಮಾಡಿದ ಘಟನೆಯಂತವು ಕೂಡಾ ಸಾಕಾಣಿಕೆಯ ನಿಷೇಧಕ್ಕೆ ಮುಖ್ಯವಾಗುತ್ತವೆ. ಹೀಗೆ ಬೇಟೆಯ ಪರಂಪರೆ ಹಾಗೂ ಬೇಡರ ಸಂಸ್ಕೃತಿಯು ವೈಶಿಷ್ಟ್ಯಪೂರ್ಣವಾಗಿ ಕಂಡುಬರುತ್ತದೆ.

ಬೇಟೆ ಹಿನ್ನಲೆಯಲ್ಲಿ ವಾಲ್ಮೀಕಿ ರಾಮಾಯಣ

ಬೇಟೆಗಾರಿಕೆ ಎಂಬುದು ಆದಿಮಾನವ ಸಂಸ್ಕೃತಿಯ ಪ್ರವೃತ್ತಿಯಾಗಿದ್ದು, ವಿಕಾಸದ ಹಂತಗಳಲ್ಲಿ ಹಲವು ಪರಿಗಳಲ್ಲಿ ಹರಡಿತು. ವೃತ್ತಿಯಾಗಿ ಹವ್ಯಾಸ ಕ್ರೀಡೆಯಾಗಿ ಮೋಜಿನ ಸಂಗತಿಯಾಗಿ ಸಾಹಸಪ್ರದರ್ಶನವಾಗಿ ಹೊರಹೊಮ್ಮಿತು. ಜನಪರಂಪರೆಗಳು ಭಿನ್ನವಾದಂತೆಲ್ಲ ಬೇಟೆಯ ಕುರಿತಂತೆ ಜನ ತಾಳಿದ ಪರಿಕಲ್ಪನೆಗಳು ಹಾಗೂ ಧೋರಣೆಗಳಲ್ಲಿ ವ್ಯತ್ಯಯಗಳಾಗತೊಡಗಿದವು. ಆದರೆ ಬೇಟೆಯನ್ನು ಆಶ್ರಯಿಸಿದ ಬೇಡ ಸಮುದಾಯವು ತನ್ನ ಬದುಕಿನ ಶೈಲಿ ಹಾಗೂ ಜೀವನ ವಿಧಾನವಾಗಿದ್ದ ಬೇಟೆಗಾರಿಕೆಗೆ ಅರಿತುಕೊಳ್ಳವಂತಾಯಿತು. ಸ್ವಭಾವತಃ ಇವರಲ್ಲಿದ್ದ ಬೇಟೆಯ ಪ್ರವೃತ್ತಿ ಕಾಡಿನ ಸಂಬಂಧವನ್ನು ನಿರಂತರ ಪ್ರಕ್ರಿಯೆಯಾಗುವಂತೆ ಮಾಡಿತು. ಮಾನವ ಸಂಸ್ಕೃತಿಯ ನಾಗರೀಕರಣದತ್ತ ಪರಿವರ್ತನೆ ಪಡೆಯುವ ಹಂತಗಳಲ್ಲಿ ಅರಸೊತ್ತಿಗೆಯ ಕಾಲವೊಂದು ಬಂದೊದಗಿದ್ದುದು ಐತಿಹಾಸಿಕ ಸಂಗತಿ. ಈ ಸಂದರ್ಭದಲ್ಲಿ ಬೇಟೆ ತಾಳಿದ ತಿರುವುಗಳು ಹಲವುಗಳಾಗಿ ಬೇಟೆ ಒಂದು ಕಲೆಯಾಗಿ ರೂಪುಗೊಂಡಿತು. ನಾಗರೀಕತೆಯ ಸಂದರ್ಭದಲ್ಲಿ ಬೇಟೆಗೆಂದು ಕಾಡಿಗೆ ಹೋಗುವ ಪರಿ, ಹಸಿವು ರಕ್ಷಣೆ ಮತ್ತು ಬೇಟೆಯ ಸಿದ್ಧತೆ ಕಾಡು ಪ್ರಾಣಿಗಳೊಂದಿಗೆ ನಡೆಸಿದ ಶೋಧಗಳು ಮುಖ್ಯವಾಗುತ್ತವೆ. ಜನಪರಂಪರೆಯ ವಾಙ್ಮಯ ಶಾಖೆಗಳಲ್ಲಿ ಅಂದಂದಿನ ಬೇಟೆಯ ಮಾದರಿಗಳು ಪ್ರಚಲಿತ ಬೇಟೆಯ ಮಾಹಿತಿಗಳ ಮತ್ತು ವಿಧಾನಗಳ ಬಗ್ಗೆ ಹಾಗೂ ಬೇಟೆಗಾರರಿಗೆ ಆದ ಆಧರಾಪಮಾನಗಳ ಕುರಿತು ಉಲ್ಲೇಖ ನಿದರ್ಶನಗಳು ಉಳಿದುಕೊಂಡಿವೆ. ಅಂಥ ವಾಙ್ಮಯ ಜಗತ್ತಿನಲ್ಲಿ ಪುರಾಣ ಪ್ರಪಂಚವು ವಿಶಿಷ್ಟವಾದದು. ಪುರಾಣವು ಹಲವು ಅತಿಮಾನವ ಸಾಹಸಗಳ ಸಂಕಲನವಾಗಿದ್ದು ಅಸಾಧ್ಯವಾದ ಅಂಶಗಳನ್ನು ಸಹಜ ಸಾಧ್ಯವೆಂದು ಸಾಬೀತು ಮಾಡಿದ ಮಾಧ್ಯಮ ಪುರಾಣ ಪಾತ್ರಗಳು ವಾಸ್ತವ ಜಗತ್ತಿನ ಅಸಾಧ್ಯತೆಗಳನ್ನು ತಮ್ಮ ಅತಿಮಾನವ ಸಾಮರ್ಥದಿಂದ ಸಾಧಿಸಿ ಸಾಧ್ಯವೆಂದು ಸಾಬೀತುಮಾಡುತ್ತಾರೆ. ಇಂಥ ಪುರಾಣ ಪ್ರಪಂಚದಲ್ಲಿ ಲೌಕಿಕ ಚಟುವಟಿಕೆಯಂದ ಬೇಟೆಯ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಪುರಾಣದ ಲೋಕವು ಅವಾಸ್ತವಾದರೂ ಅಲ್ಲಿ ಬರುವ ಬೇಟೆಯ ಪ್ರಸಂಗ ವಾಸ್ತವವಾದುದಾಗಿರುತ್ತದೆ. ಲೌಕಿಕ ಜಗತ್ತಿನ ಕಾಡಿನಂತೆಯೇ ಅಲ್ಲಿಯೂ ಕಾಡು ಮತ್ತು ಕಾಡಿನ ಜೀವ ಜಂತುಗಳು ಸಹಜವಾದವುಗಳಾಗಿವೆ. ಆದರೆ ಬೇಟೆಯ ನಂತರ ಪರಿಣಾಮವು ಅಲೌಕಿಕವಾದುದು ಅಮೂರ್ತವಾದುದು ಆಗಿ ಕೆಲವೊಮ್ಮೆ ಅತಿಘೋರವಾಗಿ ಪರಿಣಮಿಸುತ್ತದೆ. ಆದರೆ ಬೇಟೆಯು ಸ್ವಾರಸ್ಯಗಳ ರೋಮಾಂಚನವಾಗಿದ್ದು ಪೌರಾಣಿಕ ಸಂದರ್ಭಕ್ಕೆ ಬೇರೊಂದು ತಿರುವು ನೀಡಲು ಸಂಘಟಿತವಾಗಿರುತ್ತವೆ. ರಾಮಾಯಣದಲ್ಲಿ ಬರುವ ಬೇಟೆಯ ನಿದರ್ಶನಗಳು ಲೋಕ ಸಹಜ ಚಟುವಟಿಕೆಗಳಾಗಿ ಆರಂಭಗೊಂಡು ಶಾಪವೆಂಬ ನಾಶದ ಮೂಲಕ ಅಲೌಕಿಕ ಆದರ್ಶಕ್ಕೆ ಕೊಂಡೊಯ್ಯುತ್ತದೆ.

ವಾಲ್ಮೀಕಿ ರಾಮಾಯಣವು ರಾಮಚರಿತೆಯನ್ನೊಳಗೊಂಡ ಕಾವ್ಯ ಹಾಗೂ ಪುರಾಣ ಇದರಲ್ಲಿನ ವೃತ್ತಾಂತಗಳು ಹಲವು ಸಾಂಕೇತಿಕಾರ್ಥಗಳನ್ನು ಧ್ವನಿಸುತ್ತದೆ. ಕವಿಯ ಹೆಸರಿನಿಂದ ಮೊದಲ್ಗೊಂಡು ಕಾವ್ಯರಂಭದಿಂದ ಮುಕ್ತಾಯದವರೆಗೂ ಇದನ್ನು ಗಮನಿಸಬಹುದು. ಕ್ರೌಂಚಪಕ್ಷಿಯ ಬೇಟೆಯ ದುರಂತ ಪ್ರಸಂಗವು ರಾಮಾಯಣ ರಚನೆಗೆ ಸ್ಫೂರ್ತಿಯಾದಂತೆ, ದಶರಥನ ಬೇಟೆಯ ದುರಂತವು ರಾಮನು ವನವಾಸದ ಮೂಲಕ ಮಾಡುವ ಜೀವನಪಯಣಕ್ಕೆ ಕಾರಣವಾಯಿತು. ಸೀತೆಗಾಗಿ ರಾಮನು ಚಿನ್ನದ ಜಿಂಕೆಯಾಡಲು ಹೊರಟ ಪ್ರಸಂಗವು ಸೀತೆಯ ಬಾಳದಾರಿಯ ಬದಲಾವಣೆಗೆ ನಾಂದಿಯಾಯಿತು. ಈ ದುರಂತಗಳಿಂದ ರಾಮಾಯಣ ಕಥೆಗೆ ತಿರುವುಗಳನ್ನು ಕೊಡಲು ಸಾಧ್ಯವಾಯಿತು. ಋಷಿಯು ಹೆಣ್ಣು ಕ್ರೌಂಚದ ದುಃಖಕ್ಕೆ ಸ್ಪಂದಿಸಿ ವಾಧ್ಯನಿಗೆ ಹಾಳಾಗಿ ಹೋಗಲಿ ಈ ಬೇಡ ಎಂದು ಶಪಿಸಿದ್ದೆ ಮುಂದೆ ಸೀತೆಯ ದುಃಖಕ್ಕೆ ಸ್ಪಂದಿಸಿ ರಾವಣನ ನಾಶವನ್ನು ತರಲು ಅನುವಾಯಿತು. ಕ್ರೌಂಚದುರಂತದಲ್ಲಿ ವಾಲ್ಮೀಕಿಯೂ ಸಂಕೇತವಾಗುತ್ತಾನೆ. ಅಲ್ಲದೆ ರಾಮಾಯಣದಲ್ಲಿ ಬರುವ ನಂತರದ ಬೇಟೆಯ ಪ್ರಸಂಗಗಳೆರೆಡೂ ಮೋಹವನ್ನು ಬೆನ್ನು ಹತ್ತಿ ದುರಂತಕ್ಕೊಳಗಾಗುವುದನ್ನು ಸೂಚಿಸುತ್ತವೆ. ಅಲ್ಲದೆ ಪರಸ್ಪರ ಸಂಬಂಧಗಳಲ್ಲಿ ಮೋಹದುರಂತವನ್ನು ತ್ಯಾಗವು ಗೆಲ್ಲುವ ಮೂಲಕ ಆದರ್ಶ ಪ್ರಾಯವಾಗುತ್ತದೆ.