ಬೇಟೆ ಮತ್ತು ಕ್ಷತ್ರೀಯ ಧರ್ಮ : ಪೌರಣಿಕ ನಿದರ್ಶನಗಳು

ದುಷ್ಟ ಪ್ರಾಣಿಗಳಿಂದ ಪ್ರಜೆಗಳನ್ನು ರಕ್ಷಿಸುವಲ್ಲಿ ಬೇಟೆ ರಾಜಧರ್ಮವಾಗಿತ್ತು ಎಂಬುದಕ್ಕೆ ಪೌರಣಿಕ ಪ್ರಸಂಗಗಳ ನಿದರ್ಶನಗಳಿವೆ.

ಸುಮತಿ ಮತ್ತು ವಜ್ರಬಾಹು ಎಂಬ ರಾಜ ದಂಪತಿಗಳ ಮಗ ಭದ್ರಾಯು ಎಂಬುವವನು ಒಮ್ಮೆ ಬೇಟೆಗೆ ಹೋಗಿದ್ದಾಗ, ಬ್ರಾಹ್ಮಣ ಪತ್ನಿಯನ್ನು ಹುಲಿ ಕೋಂದಿತು, ಭದ್ರಾಯುವಿಗೆ ಹುಲಿಯಿಂದ ಆಕೆಯನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅದಕ್ಕೆ ಪ್ರತಿಯಾಗಿ ಬ್ರಾಹ್ಮಣನು ಭದ್ರಾಯುವಿನ ಹೆಂಡತಿ ಕೀರ್ತಿಮಾಲಿನಿಯನ್ನು ತನಗೆ ನೀಡುವಂತೆ ಕೋರಿದನು. ಭದ್ರಾಯುವು ಅಂತೆಯೇ ಮಾಡಿ ಅಗ್ನಿ ಪ್ರವೇಶಕ್ಕೆ ಅನುವಾಗಲು ಶಿವನು ಪ್ರತ್ಯಕ್ಷನಾಗಿ ತಾನೇ ಬ್ರಾಹ್ಮಣವೇಷದಲ್ಲಿ ಪರೀಕ್ಷೆ ಮಾಡಿದೆನೆಂದು ಹೇಳಿ ಭದ್ರಾಯುವಿಗೆ ಆತನ ಪತ್ನಿಯನ್ನು ಹಿಂದಿರುಗಿಸಿದನು ಅಲ್ಲದೆ ಪತ್ನಿಯೊಡನೆ ಹತ್ತುಸಾವಿರ ವರ್ಷಕಾಲ ಬದುಕುವ ನೀಡಿದನು. ನಂತರ ಭದ್ರಾಯು ಸದ್ಗತಿ ಹೊಂದಿದನು.

ರತ್ನಪುರದ ರಾಜ ಮಯೂರಧ್ವಜ ಆತನ ಮಗ ತಾಮ್ರಧ್ವಜರು ಧಮ್ರಾಯನ ಅಶ್ವಮೇಧ ತುರಗವನ್ನು ಕಟ್ಟಿ ಕೃಷ್ನಾರ್ಜುನರನ್ನು ಸೋಲಿಸಿದ ಸಂದರ್ಭ; ಕೃಷ್ನಾರ್ಜುನರು ಬ್ರಾಹ್ಮಣ ಮತ್ತು ಬ್ರಾಹ್ಮಣ ಪುತ್ರನ ವೇಷತಾಳಿ ಬಂದು ದಾರಿಯಲ್ಲಿ ಬರುವಾಗ ಸಿಂಹವೊಂದು ತನ್ನ ಮಗನೊಬ್ಬನನ್ನು ಸಿಂಹವೊಂದು ಹಿಡಿದಿದೆಯೆಂದು ತಿಳಿಸಿದ. ಅಲ್ಲದೆ ಮಯೂರಧ್ವಜನ ದೇಹದ ಅರ್ಧಭಾಗದ ಮಾಂಸವನ್ನು ಅದಕ್ಕೆ ನೀಡಿದರೆ ಅದು ತನ್ನ ಮಗನನ್ನು ಬಿಡುವುದೆಂದು ಹೇಳಿದನು. ಅದಕ್ಕೆ ಒಪ್ಪಿದ ಮಯೂರಧ್ವಜನು ತನ್ನ ಪತ್ನಿ ಹಾಗೂ ಮಗನಿಂದ ತನ್ನ ಶರೀರ ಅರ್ಧಭಾಗವನ್ನು ಗರಗಸದಿಂದ ಸೀಳಿಸಿಕೊಳ್ಳುತ್ತಿದ್ದನು. ಇದನ್ನು ಮೆಚ್ಚಿ ಕೃಷ್ಣನು ಪ್ರತ್ಯಾಕ್ಷನಾಗಿ ದರ್ಶನವನ್ನು ನೀಡಿದನು.

ಆಗ್ನಿಯು ತನಗಾದ ಅಜೀರ್ಣವನ್ನು ಪರಿಹರಿಸಿಕೊಳ್ಳಲು ಖಾಂಡವ ವನವನ್ನು ಭಕ್ಷಿಸಲು ಅರ್ಜುನನ ಆಶ್ರಯದಲ್ಲಿ ಇಡೀ ವನವನ್ನು ದಹಿಸುತ್ತಾನೆ. ಇದಕ್ಕೆ ಸಹಕರಿಸಿದ ಅರ್ಜುನನು ಖಾಂಡವವನದ ಯಾವ ಜೀವ-ಜಂತು ಪಕ್ಷಿಗಳೂ ತಪ್ಪಿಸಿಕೊಳ್ಳದಂತೆ ಭಾಣಗಳ ಹಂದರ ಬೇರಿಗಳನ್ನು ನಿಮಿಸಿಕೊಡುತ್ತಾನೆ. ಇದು ಕೂಡ ಬೇಟೆಯ ಪೂರಕ ವ್ಯವಸ್ಥೆಯಾಗಿದೆ. ಶಿಬಿ ಚಕ್ರವರ್ತಿ ಅಥವಾ ವೃಷಧಬಳನನ್ನು ಪರೀಕ್ಷಿಸಲು ಇಂದ್ರನು ಬೇಟೆಯಾಡಲು ಬಂದಾಗ; ಪಾರಿವಾಳವು ಶಿಬಿಯಲ್ಲಿ ರಕ್ಷಣೆ ಕೋರಲಾಗಿ, ಆತನು ಪಾರಿವಾಳಕ್ಕೆ ಬದಲಾಗಿ ತನ್ನ ಶರೀರದ ಮಾಂಸವನ್ನು ನೀಡಿದ ಮತ್ತೊಂದು ಪ್ರಸಂಗ ಕೂಡ ಸ್ವರಣಾರ್ಹವಾದುದು.

ಪುರಾಣದ ಉಲ್ಲೇಖಗಳಲ್ಲಿ ಬೇಟೆ ರಾಜರ ಪಾಲಿಗೆ ಅಂತರ್ಯಗದ ಅವಾಂತರಗಳ ನಾಂದಿಗೆ ಹಿನ್ನಲೆಯಾಗಿ ಮೂಡಿದೆ. ಪರೀಕ್ಷಿತನು ಬೇಟೆಯಾಡಲೆಂದು ಬಂದ ಪರೀಕ್ಷಿತ ಅಥವಾ ಪರೀಕ್ಷಿತಾಜನು ಸಮಾಧಿಯಲ್ಲಿದ್ದ ಶಮೀಕನೆಂಬ ಋಷಿಯ ಕೊರಳಿಗೆ ಸತ್ತಹಾವನ್ನು ಸುತ್ತಿ ಹೋಗುತ್ತಾನೆ. ಇದನ್ನು ಕಂಡ ಶಮೀಕನ ಮಗ ಶೃಂಗಿಯ ಈ ಕೆಲಸವನ್ನು ಮಾಡಿದವನಿಗೆ ತಕ್ಷಕನು ಕಚ್ಚಲಿ ಎಂದು ಶಾಪನೀಡಿದ ಅದರಂತೆ ಪರೀಕ್ಷಿತನು ಅವಸಾನ ಹೊಂದಿದ. ಹೀಗೆ ಬಹುಪಾಲು ರಾಜರ ಬೇಟೆಯ ಪ್ರಸಂಗಗಳಲ್ಲಿ ಋಷಿಶಾಪವು ತಟ್ಟಿದ ಪುರಾವೆಗಳಿವೆ. ಪರೀಕ್ಷಿತನ ಮಗ ಶಲನು ಬೇಟೆಗೆ ಹೋಗಿದ್ದಾಗ ಬೇಟೆಯಲ್ಲಿ ಬಳಲಿದ್ದ ತನ್ನ ಕುದುರೆಗಳಿಗೆ ಬದಲಾಗಿ ವಾಮದೇವನೆಂಬ ಮುನಿಯಿಂದ ಕುದುರೆಗಳನ್ನು ಪಡೆದ ಆದರೆ ಅವುಗಳನ್ನು ಮತ್ತೆ ಮಗನಿಗೆ ಹಿಂದೆ ಒಪ್ಪಿಸಲಿಲ್ಲಾವಾದ್ದರಿಂದ ಮುನಿಯು ತನ್ನ ತಪ್ಪೋಶಕ್ತಿಯಿಂದ ಉಕ್ಕೀನ ಶರೀರದ ರಾಕ್ಷಸರನ್ನು ನಿರ್ಮಿಸಿ ಕಳುಹಿಸಿದ ಅವರು ಹೋಗಿ ದಲಸ ತಮ್ಮಿಶಲನನ್ನು ಕೊಲ್ಲುವ ದಲನ ತಮ್ಮ ಶಲನನ್ನು  ಕೊಲ್ಲಲು ದಲನು ಮುನಿಗೆ ಕುದುರೆಗಳನ್ನು ಹಿಂದುರಿಗಿಸಿದ. ಕಿಂದಮನೆಂಬ ಮುನಿಯು ತನ್ನ ಪತ್ನಿಯೊಂದಿಗೆ ಮೃಗ ವೇಷದಿಂದ ಕ್ರಿಡಿಸುತ್ತಿದ್ದಾಗ, ಪಾಂಡುರಾಜನು ಬೇಟೆಗೆ ಹೋಗಿದ್ದವನು ಅವರನ್ನು ಮೃಗಗಳೆಂದು ತಿಳಿದು ಬೇಟೆಯಾಡುತ್ತಾನೆ. ಆಗ ಕಿಂದಮನು ‘ನೀನು ನಿನ್ನ ಪತ್ನಿಯೊಂದಿಗೆ ಕೂಡಿದಾಗ ಸಾಯಿ’ ಎಂದು ಶಾಪನೀಡುತ್ತಾನೆ. ಅದರಂತೆ ಒಮ್ಮೆ ಮಾದ್ರಿಯನ್ನು ಕೂಡಿದ ಪಾಂಡುರಾಜನು ಮರಣಿಸುತ್ತಾನೆ.

ಬೇಟೆ ಕ್ಷತ್ರೀಯ ಧರ್ಮವೆಂಬ ಸಾಮಾಜಿಕ ಮನ್ನಣೆ ಪಡೆದಿತ್ತಾದರೂ ಬೇಟೆಯಾಡುವಾಗಿನ ಅಭಿರ್ಯದಿಂದಾಗಿ ಋಷಿ ಶಾಪಕ್ಕೆ ಅನಿವಾರ್ಯವಾಗಿ ಗುರಿಯಾಗಬೇಕಾಗಿತ್ತು. ವೈವಸ್ವತ ಮನುವಿನ ಎಂಟನೆಯ ಮಗನಾದ ಪೃಷದ್ರನೆಂಬ ಕ್ಷತ್ರಿಯನು ವಸಿಷ್ಠರ ದನಗಳನ್ನು ಕಾಯುತ್ತಿರುವಾಗ ಹುಲಿಯೊಂದು ದನದಕೊಟ್ಟಿಗೆಯೊಳಕ್ಕೆ ನುಗ್ಗಿತು. ವೃಷದ್ರನು ಅದನ್ನು ಕೊಲ್ಲಲು ಹೋಗಿ ಹುಲಿಯೆಂದು ತಿಳಿದು ಹಸುವನ್ನು ಕೊಂದು ವಸಿಷ್ಠನಿಂದ ಶೂದ್ರನಾಗುವಂತೆ ಶಾಪಹೊಂದಿದ. ಸೂರ್ಯ ವಂಶದ ಇಕ್ಷ್ವಾಕುವಿನ ಮಗ ವಿಕುಕ್ಷಿ ಎಂಬುವವನು ಶ್ರದ್ಧಕ್ಕೆ ಮಾಂಸತರಲು ಬೇಟೆಗೆಂದು ಹೊರಟು ಮೊಲವೊಂದನ್ನು ಕೊಂದ. ಅವರ ಮಾಂಸವನ್ನು ತರುವ ಬದಲು ತಾನೇ ತಿಂದು ಅದರ ಅವಶೇಷವನ್ನು ತಂದು ತಂದೆಗೆ ಒಪ್ಪಿಸಿ ದುಷ್ಟಮೃಗವು ಮಾಂಸವನ್ನು ಕಸಿದುಕೊಂಡಿತು ಎಂದು ಸುಳ್ಳು ಹೇಳಿದ, ಆದರೆ ಇಕ್ಷ್ವಾಕುವಿಗೆ ವಶಿಷ್ಠನ ಯೋಗಶಕ್ತಿಯಿಂದ ನಿಜವಾದ ವಿಷಯ ತಿಳಿದು ಮಗನನ್ನು ದೇಶದಿಂದ ಹೊರ ಹಾಕಿದ, ವಿಕುಕ್ಷಿಯು ಮೊಲದ ಮಾಂಸವನ್ನು ತಿಂದದ್ದರಿಂದ ಶಶಂದನೆಂದು ಕರೆಯಲ್ಪಟ್ಟನು.

ಕೆಲವೊಮ್ಮೆ ಪುರಾಣಪುರುಷರಿಗೆ ಋಷಿಶಾಪದಿಂದ ಮೃಗವೂ ಜಂತವೂ ಆಗಬೇಕಾಗುತ್ತದೆ. ಶಾಪಗ್ರಸ್ತನ ವಂಶಸ್ಥನೊಬ್ಬ ಅದನ್ನು ಮುಂದೆ ಒಂದು ದಿನ ಸಂಧಿಸಲು ಶಾಪವಿಮೋಚನೆಯಾಗುತ್ತದೆ. ನಹ್ರಷನು ಇಂದ್ರನ ಪತ್ನಿ ಶಚಿದೇವಿಯನ್ನು ವಿವಾಹವಾಗುವಂತೆ ಕೇಳುತ್ತಾನೆ. ಆಕೆಯು ಸಪ್ತರ್ಷಿಗಳಿಂದ ಪಲ್ಲಕ್ಕಿಯನ್ನು ಹೊರಿಸಿಕೊಂಡು ಬರುವಂತೆ ಹೇಳುತ್ತಾಳೆ. ಅಂತೆಯೇ ಬರುತ್ತಿರುವಾಗ ನಹ್ರಷನು ಸರ್ಪ ಸರ್ಪ (ಬೇಗ ನಡಿ) ಎಂದು ಹೇಳುತ್ತಾ ಕಾಲಿನಿಂದ ಆಗಸ್ತನ ತಲೆಯನ್ನು ತುಳಿದನು. ಕುಷಿತಗೊಂಡ ಆತನು ನಹ್ರಷನನ್ನು ಸರ್ಪವಾಗುವಂತೆ ಶಪಿಸಿದ ವಿಮೋಚನೆಗೆ ನಿನ್ನ ವಂಶಸ್ಥರು ಸಂಭಾಷಣೆ ಮಾಡಬೇಕೆಂದು ಹೇಳಿದ. ಅಂತೆ ಮುಂದೆ ಒಮ್ಮೆ ಭೀಮನು ಬೇಟೆಗೆ ಹೋಗಿದ್ದಾಗ ಹೆಬ್ಬಾವಾಗಿದ್ದ ನಹ್ರಷನು ಹಿಡಿಯಲು ಧಮ್ರಾಯನು ಭೀಮನನ್ನು ಬಿಡುವಂತೆ ಪ್ರಾರ್ಥಿಸಿದ ಉರಗೆವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಭೀಮನನ್ನು ಬಿಡಿಸಿದ. ನಹ್ರಷನ ಶಾಪವಿಮೋಚನೆಯಾಯಿತು.

ಪುರಾಣ ನಿದರ್ಶನಗಳ ಬೇಟೆಯು ಫಲಿತಗಳು ಬಹುಪಾಲು ಕೆಡುಕಿನ ಸಂಬವದ ಸೂಚನೆಗಳಾಗಿ ಸಂಕೇತವಾಗುತ್ತವೆ. ಒಮ್ಮೆ ಶಿವಪಾರ್ವತಿಯರು ಶರವಣದಲ್ಲಿ ಕ್ರೀಡಿಸುತ್ತಿರಲು ಅಲ್ಲಿಗೆ ಪ್ರವೇಶಿಸಿದ ಪುರುಷರನ್ನು ಕಂಡು ಪಾರ್ವತಿಗೆ ಕೋಪಬಂದು ಆಕೆಯು ಈ ವನವನ್ನು ಪ್ರವೇಶಿಸಿದ ಪುರುಷರು ಸ್ತ್ರೀಯಾಗಲಿ ಎಂದು ಶಪಿಸಿದಳು. ವೈವಸ್ವತ ಮನುವಿನ ಮಗನಾದ ಇಲನು ಬೇಟೆಯ ನಿಮಿತ್ತ ಆ ವನವನ್ನು ಪ್ರವೇಶಿಸಲು ಶಾಪ ಫಲಿಸಿ ಸ್ತ್ರೀಯಾದನು. ನಂತರ ಬುಧನಿಂದ ಪುರೂರವನೆಂಬ ಮಗನನ್ನು ಪಡೆದು ಕಾಲಾನಂತರ ಶಿವನ ಅನುಗ್ರಹದಿಂದ ಒಂದು ತಿಂಗಳು ಸ್ತ್ರೀಯಾಗಿ ಮತ್ತೊಂದು ತಿಂಗಳು ಪುರುಷನಾಗಿ ಇರುವಂತಾಯಿತು.

ಒಮ್ಮೆ ಉತ್ತಮಪಾದನ ಮಗ ಉತ್ತಮನು ಹಿಮಾಲಯದ ಸಾನು ಪ್ರದೇಶಕ್ಕೆ ಬೇಟೆಗೆ ಹೋಗಿದ್ದಾಗ ಅಲ್ಲಿದ್ದ ಯಕ್ಷರು ಅವನನ್ನು ಕೋಲ್ಲುತ್ತಾರೆ. ಇದನ್ನು ಕೇಳಿದ ಉತ್ತಮನ ಸೋದರ ಧೃವನು ಯಕ್ಷರ ರಾಜ ಕುಬೇರನ ಮೇಲೆ ಯುದ್ಧ ಮಾಡುತ್ತಾನೆ. ಅಲ್ಲಿಗೆ ಧಾವಿಸಿದ ಸ್ವಾಯಂಭುವಮನುವು ಧ್ರುವನಿಗೆ ಶಾಂತಿ ಉಪದೇಶವನ್ನು ಮಾಡಿ ಯುದ್ಧ ನಿಲ್ಲಿಸುತ್ತಾನೆ. ಕೆಲವೊಮ್ಮೆ ಬೇಟೆಯ ನೆನಪು ಮೋಕ್ಷವನ್ನು ಒದಗಿಸಿದ ನಿದರ್ಶನಗಳಿವೆ. ಉದಾಹರಣೆಗೆ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿದ್ದ ಆನೆಯ ರುಂಡವನ್ನು ಕತ್ತರಿಸಿ ತಂದು ಗಣಪತಿಗೆ ತಲೆಯನ್ನಾಗಿಸಿದ ಪ್ರಸಂಗದಲ್ಲಿ ಬೇಟೆಗೆ ಒಳಗಾದ ಆನೆಯ ಶಿರವು ದೈವತ್ವಕ್ಕೆ ಸಂದಿದ ಸಂದರ್ಭವನ್ನು ಇಲ್ಲಿ ನೆನೆಯಬಹುದು. ಅಂತೆಯೇ ಮಹಾಭಾರತದಲ್ಲಿ ಕೃಷ್ಣನು ತನ್ನ ಅವತಾರ ಅಂತ್ಯವನ್ನು ಕಂಡುಕೊಂಡದ್ದು ಸಹ ಜರನೆಂಬ ಬೇಡನ ಬಾಣಕ್ಕೆ ಗುರಿಯಾಗಿ ಮಾತ್ರ ಬೇಡನು ಬೇಟೆಯ ಮೃಗವೆಂದು ಭ್ರಮಿಸಿ ಮುಸಲವನ್ನು ಹೂಡಲು ಕೃಷ್ಣನು ವೈಕುಂಠಕ್ಕೆ ಹೊರಡಲು ಅನುವಾದ ಅಂತೆಯೇ ಮೂಕದಾನವನು ಹಂದಿಯ ವೇಷದಲ್ಲಿದ್ದಾಗ ಸಂಹರಿಸಿದ ಶಿವನು ಆತನ ಮುಕ್ತಿಗೆ ಕಾರಣನಾದ. ಒಮ್ಮೆ ರಾಮನು ಬೇಟೆಯಲ್ಲಿ ಸಿಂಹವೊಂದನ್ನು ಕೊಲ್ಲಲು ತಕ್ಷಣವೇ ಅದರ ಶರೀರದಿಂದ ವಿದ್ಯಾಧರನೊಬ್ಬ ಕಾಣಿಸಿಕೊಂಡು ಇಂದಿಗೆ ಸಿಂಹರೂಪದ ತನ್ನ ಶಾಪ ವಿಮೋಚನೆಯಾಯಿತೆಂದು ಹೇಳಿ ಹಿಂದಿನ ವೃತ್ತಾಂತರವನ್ನು ವಿವರಿಸುತ್ತದೆ. ಅದರಂತೆ ಆ ವಿಧ್ಯಾದರನು ಹಿಂದೊಮ್ಮೆ ಋಷಿಪತ್ನಿಯೊಬ್ಬಳನ್ನು ಬಲತ್ಕರಿಸಿದಾಗ ಆಕೆ ‘ನೀನು ಕ್ರೂರಸಿಂಹ’ವಾಗು ಎಂದು ಶಪಿಸಿದ್ದಳು. ರಾಮ ಬಾಣದಿಂದ ಶಾಪವಿಮೋಚನಾ ಮಾರ್ಗವನ್ನು ತಿಳಿಸಿದ್ದಳು.

ಕೆಲವೊಮ್ಮೆ ಬೇಟೆಯನ್ನು ಪ್ರಾಣಿ ಹಿಂಸೆಯೆಂದು ಪರಿಗಣಿಸಿ ರಾಜನು ಅದನ್ನು ತ್ಯಾಜಸಿದ್ದರ ಸುಳಿವುಗಳು ಪುರಾಣಗಳಲ್ಲಿ ವ್ಯಕ್ತವಾಗಿವೆ. ಸೂರ್ಯವಂಶದ ವಿವಿಂಶನ ಮಗ ಖನೀನೇತ್ರ ನಿಂಬುವವನಿಗೆ ಮಕ್ಕಳಿರಲಿಲ್ಲ, ಆತನು ತನ್ನ ಪಿತೃಗಳ ಶ್ರಾದ್ಧಕ್ಕಾಗಿ ಬೇಟೆಯಾಡಿ ಮಾಂಸವನ್ನು ತರಲು ಕಾಡಿಗೆ ಹೋಗುತ್ತಾನೆ. ಅಲ್ಲಿ ಒಂದು ಜಿಂಕೆಯು ತನಗೆ ಮಕ್ಕಳಿಲ್ಲದ್ದರಿಂದ ತನ್ನನ್ನು ಕೊಲ್ಲುವಂತೆಯೂ ಮತ್ತೊಂದು ಜಿಂಕೆಯು ತನಗೆ ಬಹಳಷ್ಟು ಮಕ್ಕಳು ಇದ್ದು ಅವುಗಳನ್ನು ರಕ್ಷಿಸಲು ಅಸಮರ್ಥವಾಗಿರುವುದರಿಂದ ತನ್ನನ್ನು ಕೊಲ್ಲುವಂತೆಯೂ ಪೀಡಿಸಿದವು. ಆಗ ಖನೀನೇತ್ರನು ಪ್ರಾಣಿ ಹಿಂಸೆ ಮಾಡಬಾರದೆಂದು ನಿರ್ಧರಿಸಿ ಹಿಂದಿರುಗಿದನು, ಪ್ರಭಂಜನೆಂಬ ರಾಜನು ಬೇಟೆಯಾಡುತ್ತಿದ್ದಾಗ ಪೊದೆಯಲ್ಲಿ ಹಾಲುಣಿಸುತ್ತಿದ್ದ ಜಿಂಕೆಗೆ ಬಾಣಹೊಡೆದನು. ಅದು ಸಾಯುವಾಗ ರಾಜನನ್ನು ಹುಲಿಯಾಗುವಂತೆ ಶಪಿಸಿತು. ಅದರಂತೆ ಹುಲಿಯಾಗಿ ಪುಣ್ಯಕೋಟಿ ಹಸುವನ್ನು ಹಿಡಿಯಲು ಹೋದಾಗ ಅದು ತನ್ನ ಕರುವಿಗೆ ಹಾಲುಣಿಸಿ ಬರುವೆನೆಂದು ಹೇಳಿಹೋಯಿತು. ಮಾತಿನ ಪ್ರಕಾರ ಹಿಂದಿರುಗಿ ಬಂದ ಪುಣ್ಯಕೋಟಿಯು ದರ್ಶನದಿಂದ ಹುಲಿಗೆ ಶಾಪ ವಿಮೋಚನೆಯಾಗಿ ಮತ್ತೆ ರಾಜನಾದನು.

ಅಪರೂಪಕ್ಕೆ ಬೇಟೆಯಿಂದ ಸಂಭವಿಸಿದ ಅಚಾತುರ್ಯಗಳಿಗೆ ಋಷಿಗಳು ಕ್ಷಮಿಸಿದ ನಿದರ್ಶನಗಳು ಇವೆ. ಪರಪುರಂಜಯನೆಂಬ ರಾಜ ಬೇಟೆಗೆ ಹೋದಾಗ ಜಿಂಕೆಯೆಂಬ ಭ್ರಾಂತಿಯಿಂದ ತಾರ್ಕ್ಷ್ಯಮುನಿ (ತಾರ‍್ಕ ಋಷಿಮುನಿ)ಯ ಮಗನನ್ನು ಕೊಂದನು. ತನ್ನ ಅಚಾತುರ್ಯನ್ನು ಕ್ಷಮಿಸುವಂತೆ ತಾರ‍್ಕ ಋಷಿಮುನಿಯನ್ನು ವಿನಂತಿಸಿಕೊಳ್ಳಲು ಆತನು ಈತನನ್ನು ಕ್ಷಮಿಸಿ ತನ್ನ ಮಗನ ಹೆಸರಿಟ್ಟು ಕರೆಯಲು ಮಗನು ಇಚ್ಚಾ ಮರಣಿಯಾಗಿದ್ದುದ್ದರಿಂದ ಎದ್ದು ಬಂದನು ತಪಶಕ್ತಿಯಿಂದ ಎಲ್ಲವೂ ಸಾಧ್ಯವೆಂದು ರಾಜನು ತಿಳಿಸಿದನು. ಕೆಲವೊಮ್ಮೆ ಮೃಗಭ್ರಾಂತಿಯಿಂದ ಋಷಿಮುನಿಗಳನ್ನು ಮುನಿ ಪುತ್ರರು ಬೇಟೆಯಾಡಿದ ಪ್ರಸಂಗಗಳಿವೆ. ಅಂಥವುಗಳಿಗೆ ಯಾವುದೋ ಶಾಪ ಹಿನ್ನಲೆಯಾಗಿರುತ್ತದೆ. ರಭಕನೆಂಬ ಮುನಿಯು ಮೃಗಚರ್ಮವನ್ನು ಹೊದ್ದು ಕಾಡಿನಲ್ಲಿ ಸಂಚರಿಸುತ್ತಿರಲು ಆತನ ಮಗ ಪರಾವಸವು ಮೃಗವೆಂದು ಭ್ರಮಿಸಿ ಹೊಡೆದು ಸಾಯಿಸುತ್ತಾನೆ. ಇದಕ್ಕೆ ಭಾರಧ್ವಜನ ಶಾಪ ಹಿನ್ನಲೆಯಾಗಿದೆ. ಅದೆಂದರೆ ರೈಭ್ಯನು ಸೃಷ್ಠಿಸಿದ ಕ್ಷುದ್ರದೇವತೆಯು ಆತನ ಮಗ ಪರಾವಸುವಿನ ಹೆಂಡತಿಯ ಶೀಲವನ್ನು ಕೆಡಿಸುತ್ತದೆ. ಪರಾವಸುವಿಗೆ ಭಾರಧ್ವಜನ ಮಗ ಯುವಕ್ರಿತನೇ ಹೀಗೆ ಮಾಡಿದ್ದಾನೆ ಎನಿಸಿ ಕ್ಷುದ್ರಭೂತಗಳಿಂದ ಯುವಕ್ರೀತನನ್ನು ಕೊಲ್ಲಿಸುತ್ತಾನೆ. ಆಗ ಭಾರಧ್ವಜನು ರಭಾಕನನ್ನು ಆತನ ಹಿರಿಯ ಮಗನು ಸಾಯಿಸಲಿ ಎಂದು ಸಪಿಸಿ ಅಗ್ನಿಪ್ರವೇಶ ಮಾಡಿ ದೇಹತ್ಯಾಗ ಮಾಡಿದ್ದರಿಂದ ರೈಭ್ಯನನ್ನು ಮಗ ಪರಾವಸುವು ಮೃಗವೆಂದು ತಿಳಿದು ಕೊಲ್ಲುವಂತಾಯಿತು.

ಕೃಷ್ಣನು ಬಕನನ್ನು (ಬಕಾಸುರನನ್ನು) ಕೊಂದ ಪ್ರಸಂಗ

ದನ ಮೆಯಿಸುತ್ತಿದ್ದ ಕೃಷ್ಣನು ನೀರು ಕುಡಿಸಲು ಯಮುನಾನದಿಯ ಮಡುವಿಗೆ ಬಂದಾಗ ಕಂಸನ ಗೆಳೆಯನಾದ ಬಕಾಸುರನೆಂಬ ರಾಕ್ಷಸನು ಬಕಪಕ್ಷಿಯ ರೂಪದಲ್ಲಿ ಬಂದು ಕೃಷ್ಣನನ್ನು ಕುಕ್ಕಿಕೊಲ್ಲುಲು ಯತ್ನಿಸಿದ ಆಗ ಕೃಷ್ಣನು ಅದನ್ನು ಎರಡು ಸೀಳಾಗಿ ಸಿಗಿದು ಕೊಂದನು. ಬಾಲಕೃಷ್ಣ ಯಮುನಾನದಿ ತೀರದಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ, ಕಂಸನಿಂದ ನಿರ್ದೇಶಿತನಾಗಿ ಕೃಷ್ಣನನ್ನು ಕೊಲ್ಲಲು ಮತ್ಸಾಸುರನೆಂಬ ರಾಕ್ಷಸನು ಬಂದು; ದನಮುಂದೆಯಲ್ಲಿ ಕರುವಿನ ಆಕಾರದಲ್ಲಿ ಸೇರಿಕೊಳ್ಳುತ್ತಾನೆ. ಕೃಷ್ಣನು ಅದನ್ನು ಗಿರಗಿರನೆ ತಿರುಗಿಸಿ ಬೊಲದ ಮರಕ್ಕೆ ಎಸೆದು ಕೊಲ್ಲುತ್ತಾನೆ. ಅಂತೆಯೇ ಕಾಲಿಯನೆಂಬ ಸರ್ಪನು ಗೋಪರು ಯತ್ತಿ ಅವರ ಗೋವುಗಳನ್ನು ತನ್ನ ವಿಷಜ್ವಾಲೆಯಿಂದ ಹಿಂಸಿಸುತ್ತಿದ್ದಾಗ ಕೃಷ್ಣನು ಅದನ್ನು ಕೊಂದದ್ದು ಕೂಡ ಬೇಟೆಯೇ ಆಗಿದೆ. ಕೃಷ್ಣನಿಗೆ ಶಮಂತರ ಮಣಿಯು ದೊರೆಯಬೇಕಾದರೆ ಬೇಟೆಯ ಸಂದರ್ಭವೊಂದರ ಸಂಶವು ಕಾರಣವಾಗಿದೆ. ಅದೆಂದರೆ ಸುಕ್ರಾಜಿತನಲ್ಲಿದ್ದ ಶಮಂತಕ ಮಣಿಯನ್ನು ಪಡೆಯಲು ಕೃಷ್ಣನು ಪ್ರಯತ್ನಿಸುತ್ತಿರಲು ಅದನ್ನು ತಿಳಿದ ಸತ್ರಾಜಿತನು ತಮ್ಮನಾದ ಪ್ರಸೇನಜಿತನಿಗೆ ಕೊಟ್ಟನು. ಅದನ್ನು ಧರಿಸಿ ಪ್ರಸೇನಜಿತನು ಬೇಟೆಗೆ ಹೋಗಿರಲು ಸಿಂಹವೊಂದು ಅತನನ್ನು ಕೊಂದುಬಿಟ್ಟಿತು. ಜಾಂಬವನು ಸಿಂಹದಿಂದ ಆ ಮಣಿಯನ್ನು ಕಿತ್ತುಕೊಂಡು ತನ್ನ ಗುಹೆಯಲ್ಲಿ ಸೇರಿದ್ದನು. ಪ್ರಸೇನಜಿತನನ್ನು ಕೃಷ್ಣನು ಕೊಂದಿದ್ದಾನೆಂದು ಯಾದವರು ಅನುಮಾನಿಸಲು ಕೃಷ್ಣನು ಅದರ ನಿವಾರಣೆಗಾಗಿ ಜಾಂಬವನನ್ನು ಹಿಡಿದು ಆ ಮುಣೆಯನ್ನು ತಂದನು ಆಗ ಜಾಂಬವನ ಮಗಳು ಜಾಂಬವತಿ ಹಾಗೂ ಸತ್ರಾಜಿತನ ಮಗಳು ಸತ್ಯಾಭಾಮೆಯನ್ನು ಮದುವೆಯಾಗಿ ಮುಂದೆ ಅಕ್ರೋರನಿಂದ ಶ್ರೀಮಂತ ಮಣಿಯನ್ನು ಪಡೆಯುತ್ತಾನೆ.

ಕೆಲವೊಮ್ಮೆ ಪುರಾಣಪುರಷರು ಬೇಟೆಗೆ ಹೋಗಿದ್ದಾಗ ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಅವಾಂತರಗಳು ಸಂಭವಿಸಿದ್ದನ್ನು ಕೆಲವಡೆ ಕಾಣಬಹುದು. ಪಾಂಡವರು ಕಾಮ್ಯಕವನದಲ್ಲಿದ್ದಾಗ ಅರ್ಜುನನು ಪಾಶುಪತಾಸ್ತ್ರಕ್ಕಾಗಿ ತಪ್ಪನ್ನು ಮಾಡಲು ಹೋಗಿರುತ್ತಾನೆ; ಭೀಮನೂ ಬೇಟೆಗೆಂದುಹೋಗಿದ್ದ ಆಗ ಬಕನೆಂಬ ರಾಕ್ಷಸನು ಬಂದು ಉಳಿದ ಪಾಂಡವರನ್ನು ದ್ರೌಪದಿಯನ್ನು ಅಡ್ಡಗಟ್ಟಿ ಎತ್ತಿಕೊಂಡು ಹೋಗುತ್ತಿದ್ದ ಬೇಟೆಯಿಂದ ಹಿಂತಿರುಗಿದ ಭೀಮನು ಕಿಮ್ಮಾರನನ್ನು ಸಂಧಿಸಿ ಆತನನ್ನು ಕೊಂದು ಇವರೆನ್ನೆಲ್ಲ ಬಿಡಿಸುತ್ತಾನೆ. ಕ್ಷತ್ರಿಯರು ಬೇಟೆಗೆ ಹೋಗಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಅವರಿಗೆ ಕಾಡಿನಲ್ಲಿ ಅನಾಥ ಶಿಶುಗಳು ಕಂಡುಬಂದು ಅವರುಗಳನ್ನು ತಂದು ಸಾಕಿದ ಪ್ರಸಂಗಗಳಿವೆ. ಕುಳಿಂದನೆಂಬ ಚಂದನಾವತಿಯ ಅರಸನು ಬೇಟೆಗೆ ಹೋಗಿದ್ದಾಗ ಅವನಿಗೆ ಕಾಡಿನಲ್ಲಿ ಚಂಪಾಲರು ಬಿಟ್ಟು ಹೋಗಿದ್ದ ಚಂದ್ರಹಾಸನೆಂಬ ಬಾಲಕನು ದೊರೆಯುತ್ತಾನೆ. ಸಂತಾನ ಹೀನನಾಗಿದ್ದ ಆ ರಾಜನು ಚಂದ್ರಹಾಸನನ್ನು ತಂದು ಸಾಕುತ್ತಾನೆ. ಹಾಗೆಯೇ ರಾಮಾಯಣದಲ್ಲಿ ಕೈಕೆಯ ತಂದೆ ಅಶ್ವಪತಿರಾಜನು ಬೇಟೆಗೆ ಹೋಗಿದ್ದಾಗ ಕಾಡಿನಲ್ಲಿ ಅನಾಥ ಶಿಶು ಮಂಥರೆಯ ರೋಧನವು ಕೇಳಿಸುತ್ತದೆ. ಹೋಗು ನೋಡಲಾಗಿ ಕರುಣೆ ಉಕ್ಕಿ ಮಗುವನ್ನು ಅರಮನೆಗೆ ತಂದು ಸಾಕಿಸುತ್ತಾನೆ. ಮುಂದೆ ಮಂಥರೆಯಿಂದ ರಾಮಾಯಣದ ದುರಂತಕ್ಕೆ ನಾಂದಿಯಾಗುತ್ತದೆ. ಶಂತನು ಬೇಟೆಯ ಸಮಯದಲ್ಲಿ ಸಿಕ್ಕಿದ ಕೃಪ ಮತ್ತು ಕೃಪೆಯನ್ನು ಪೋಷಿಸುತ್ತಾನೆ.

ಬೇಟೆಯಾಡಲು ಹೊರಟ ರಾಜರಿಗೆ ಹಲವು ಸಂದರ್ಭಗಳಲ್ಲಿ ಹೆಣ್ಣು ಎದುರಾಗಿ ಆಕರ್ಷಕವಾಗುವ ಪ್ರಸಂಗಗಳು ಇವೆ. ಶಂತನು ಬೇಟೆಗೆ ಹೋಗಿದ್ದಾಗ ಗಂಗೆಯನ್ನು ಕಂಡು ಮದುವೆಯಾಗುವ ಬಯಕೆಯನ್ನು ತೋರುತ್ತಾನೆ. ಆಕೆಯು ತನಗೆ ಯಾವ ಕಾರಣಕ್ಕಾದರೂ ಅಡ್ಡಿಪಡಿಸಿದರೆ ತೊರೆದುಹೋಗುವ ಶರತ್ತಿನೊಂದಿಗೆ ವಿವಾಹವಾಗುತ್ತಾಳೆ. ಹುಟ್ಟಿದ ಮಕ್ಕಳನ್ನೆಲ್ಲ ನದಿಗೆ ಎಸೆಯುತ್ತಿರುತ್ತಾಳೆ. ಒಮ್ಮೆ ಹೀಗೆಕೆ ಮಾಡುವೆ ಎಂದು ಕೇಳಲಾಗಿ ಮಗ ಭೀಷ್ಮನನ್ನು ಬಿಟ್ಟು ಹೊರಟುಹೋಗುತ್ತಾಳೆ. ಕಾಲನಂತರ ಮತ್ತೊಮ್ಮೆ ಶಂತನು ಬೇಟೆಗೆ ಹೋಗಿದ್ದಾಗ ದಶರಾಜನು ಮಗಳು ಸತ್ಯವತಿಯನ್ನು ಕಂಡು ವಿವಾಹವಾಗುವಂತೆ ಕೇಳ್ಳುತ್ತಾನೆ. ಆಕೆಯು ತಂದೆಯು ತನ್ನ ಮಗಳಿಗೆ ಹುಟ್ಟುವ ಮಕ್ಕಳಿಗೆ ರಾಜ್ಯ ಕೊಡುವುದಾದರೆ ಮಾತ್ರ ತನ್ನ ಮಗಳನ್ನು ಮದುವೆ ಮಾಡಿಕೊಳ್ಳುತ್ತೇನೆ ಎನ್ನಲು ಶಂತನು ಅದಕ್ಕೊಪ್ಪದೆ ಹಿಂದಿರುಗುತ್ತಾನೆ. ಇದನ್ನು ತಿಳಿದ ಶಂತನು ಮಗ ಭೀಷ್ಮನು ದಾಶರಾಜನನ್ನು ಭೇಟೆಮಾಡಿ ತಾನು ಬ್ರಹ್ಮಚಾರಿಯಾಗಿ ಉಳಿಯುವುದಾಗಿ ತಿಳಿಸಿ ತಂದೆಗೆ ಸತ್ಯವತಿಯೊಂದಿಗೆ ಮದುವೆ ಮಾಡಿಸುತ್ತಾನೆ.

ದುಶ್ಯಂತನು ಬೇಟೆಗೆ ಹೋಗಿದ್ದಾಗ ಶಕುಂತೆಲೆಯನ್ನು ಕಂಡು ಪ್ರೀತಿಸಿ ಗಂಧರ್ವವಿವಾಹವಾಗುತ್ತಾನೆ. ಒಮ್ಮೆ ಶುಕ್ರಚಾರ್ಯನ ಮಗಳು ದೇವಯಾನಿ ಹಾಗೂ ರಾಕ್ಷಸ ರಾಜ ವೃಷಪರ್ವನ ಮಗಳಾದ ಶರ್ಮಿಷ್ಠೆ ಕೊಳವೊಂದರಲ್ಲಿ ಜಲಕ್ರಿಡೆಯಾಡುತ್ತಿರಲು ಇಂದ್ರನು ಗಾಳಿಯ ರೂಪದಲ್ಲಿ ಬಂದು ದಡದಲ್ಲಿದ್ದ ಅವರ ಸೀರೆಗಳನ್ನೆಲ್ಲ ಒಟ್ಟುಮಾಡಿ ಹೋದನು. ಮೊದಲಿಗೆ ಜಲಕ್ರಿಡೆಯನ್ನು ಮುಗಿಸಿ ದಡಕ್ಕೆ ಬಂದ ಶರ್ಮಿಷ್ಠೆಯು ತಿಳಿಯದೆ ದೇವಯಾನಿಯ ಸೀರೆಯನ್ನು ಉಟ್ಟಳು. ಇದನ್ನೂ ಕಂಡ ದೇವಯಾನಿಯು ಶರ್ಮಿಷ್ಠೆಯನ್ನು ರಾಕ್ಷಸಿಪುತ್ರಿಯೆಂದು ಬೈದಳು ಶರ್ಮಿಷ್ಠೆಯು ಕೋಪಗೊಂಡು ದೇವಾಯಾನಿಯನ್ನು ಅಲ್ಲಿದ್ದ ಬಾವಿಗೆ ನುಕಿ ಹೋದಳು. ಬೇಟೆಗೆ ಹೋಗಿದ್ದ ಯಯಾತಿ ರಾಜನು ಆಕೆಯನ್ನು ಮೇಲಕ್ಕೆತ್ತಿದನು ಅಲ್ಲದೆ ವಿವಾಹವಾದನು ಶರ್ಮಿಷ್ಠೆಯು ಮಾಡಿದ ತಪ್ಪಿನಿಂದಾಗಿ ತನಗೆ ದಾಸಿಯಾಗಬೇಕೆಂದು ದೇವಯಾನಿಯು ಹಠಹಿಡಿದಳು. ಶುಕ್ರಚಾರ್ಯನು ಇದನ್ನು ಆಕೆಯ ತಂದೆ ವೃಷಪರ್ವತರಾಜನಿಗೆ ತಿಳಿಸಿ ಶರ್ಮಿಷ್ಠೆಯನ್ನು ದೇವಯಾನಿಗೆ ಸೇವಕಿಯನ್ನಾಗಿ ಮಾಡಿದರು. ಶರ್ಮಿಷ್ಠೆ ಯಯಾತಿಯನ್ನು ಬೇಡಿ ದೇವಯಾನಿಗೆ ತಿಳಿಯದಂತೆ ಆತನಿಂದ ಮಕ್ಕಳನ್ನು ಪಡೆದಳು. ಇದರಿಂದ ಕುಪಿತಗೊಂಡ ದೇವಯಾನಿಯು ಯಯಾತಿಗೆ ವೃಧ್ಯಾಪ್ಯಬರುವಂತೆ ತನ್ನ ತಂದೆಯಿಂದ ಶಾಪ ಕೊಡಿಸಿದಳು. ಆತನ ವೃಧ್ಯಾಪ್ಯವನ್ನು ದೇವಯಾನಿಯು ಪುತ್ರರು ಒಪ್ಪದಿರಲು ಶರ್ಮಿಷ್ಠೆಯ ಮಗ ಪುರುವು ತೆಗೆದುಕೊಳ್ಳುತ್ತಾನೆ. ಕೆಲಕಾಲನಂತರ ಯಯಾತಿಯ ಮಗ ಪುರುವಿಗೆ ಆತನ ಯೌವ್ವನವನ್ನು ಹಿಂದಿರುಗಿಸಿ ಸಿಂಹಾಸನಕ್ಕೆ ಒಡೆಯನನ್ನಾಗಿ ಮಾಡಿ ತಾನು ವಾನಪ್ರಸ್ಥಶ್ರಮವನ್ನು ಸ್ವೀಕರಿಸಿದನು.

ಬೇಟೆಯಿಂದ ಹಿಡಿದು ಪಳಗಿಸಿದ ಪ್ರಾಣಿ-ಪಕ್ಷಿಗಳನ್ನು ಮಾನವ ನಿಯೋಜಿತ ಕೆಲಸಗಳಿಗೆ ಬೆಳಸುತ್ತಿದ್ದುದುಂಟು. ವಿವಾಹ ಪೂರ್ವದಲ್ಲಿ ನಳಮಹಾರಾಜನು ಬೇಟೆಯಿಂದ ಹಿಡಿದು ತಂದ ಹಂಸವನ್ನು ದಮಯಂತಿಗೆ ತನ್ನ ಪ್ರಣಯ ಸಂದೇಶವನ್ನು ತಿಳಿಸಲು ಬಳಸಿಕೊಳ್ಳುತ್ತಾನೆ.

ಬೇಟೆಯು ಕೆಲವೊಮ್ಮೆ ರಾಜನನ್ನು ಮೋಸಗೊಳಿಸಲು ಅತಿಮಾನುಷ ಹಿನ್ನಲೆಯನ್ನು ಪ್ರದರ್ಶನಗೊಳಿಸಿದ್ದರ ಸಾಕ್ಷ್ಯಗಳು ಪುರಾಣಗಳಲ್ಲಿ ಗೋಚರವಾಗುತ್ತವೆ. ಜೂಜಿನಲ್ಲಿ ಸೋತು ದೇಶ ಭ್ರಷ್ಟನಾದ ನಳನು ವನವಾಸ ಮಾಡುತ್ತಿರಲು ಚಿನ್ನದಂತೆ ಹೊಳೆದ ರೆಕ್ಕೆಗಳ ಪಕ್ಷಿಗಳನ್ನು ಕಂಡು ಅವುಗಳನ್ನು ಹಿಡಿಯಲು ತಾನು ಉಟ್ಟಿದ್ದ ವಸ್ತ್ರವನ್ನು ತೆಗದು ಅವುಗಳ ಮೇಲಕ್ಕೆ ಎಸೆಯಲು ಅವು ಅದನ್ನು ಎತ್ತಿಕೊಂಡು ಆಕಾಶ ಮಾರ್ಗದಲ್ಲಿ ಹಾರಿಹೋದವು. ಅಲ್ಲದೆ ತಾವು ಸಾಮಾನ್ಯ ಪಕ್ಷಿಗಳು ಅಲ್ಲವೆಂದೂ ಜೂಜಾಡುವಾಗ ಇದ್ದ ದಾಳಗಳೆಂದೂ ಉತ್ತರಿಸಿ ವಿಸ್ಮಯವನ್ನು ಉಂಟುಮಾಡಿದವು. ನಿಷದ ದೇಶದ ರಾಜನಾಗಿದ್ದ ನಳಮಹಾರಾಜನು ಕಾಡಿನಲ್ಲಿ ತನ್ನ ಪತ್ನಿ ದಮಯಂತಿಯನ್ನು ತೊರೆದ ನಂತರ ಆಕೆಯನ್ನು ಹೆಬ್ಬಾವು ಹಿಡಿಯಲು ಬೇಡನೊಬ್ಬ ಅದನ್ನು ಕೊಂದು ಆಕೆಯನ್ನು ಬಿಡಿಸಿದ. ಪೂರ್ವದಲ್ಲಿ ದಮಯಂತಿ ಬೇಡತಿಯಾಗಿದ್ದಳೆಂದು ಶಿವಪುರಾಣದಲ್ಲಿ ಸುಳಿವು ದೊರೆಯುತ್ತದೆ. ಅದರ ಪ್ರಕಾರ ಆಗ ಅವಳಲ್ಲಿಗೆ ಶಿವನು ಯತಿವೇಷದಿಂದ ಬಂದಿದ್ದನು. ಆ ರಾತ್ರಿ ಅವಳು ಯತಿಯನ್ನು ತನ್ನ ಗುಡಿಸಿಲಿನ ಒಳಗೆ ಮಲಗಿಸಿಕೊಂಡಿದ್ದರಿಂದ ಗಂಡನು ಗುಡಿಸಿಲಿನ ಹೊರಗೆ ಮಲಗಿದ. ಆಗ ಹುಲಿಯೊಂದು ಬಂದು ಬೇಡನನ್ನು ತಿಂದುಹಾಕಿತು. ಬೇಡತಿಯು ಸಹಗಮನಕ್ಕೆ ಸಿದ್ದಳಾಗಲು ಶಿವನು ಪ್ರತ್ಯ್ಷಕನಾಗಿ ವಿಷಯವನ್ನೆಲ್ಲ ತಿಳಿಸಿದ ಮುಂದೆ ವಿದರ್ಭ ದೇಶದ ಭೀಮ ರಾಜನ ಮಗಳು ದಯವಂತಿಯಾಗಿ ಜನಿಸಿ ನಳನನ್ನು ಸ್ವಯಂವರದಲ್ಲಿ ವರಿಸಿ ವಿವಾಹವಾದಳು. ನಳರಾಜನು ಹಿಂದಿನ ಜನ್ಮದಲ್ಲಿ ಆಹುಕನೆಂಬವನ್ನು ಪಡೆದನೆಂಬ ಲಿಂಗಪುರಾಣದಿಂದ ತಿಳಿದುಬರುತ್ತದೆ.

ಶಿವನು ಮೃಗವ್ಯಾಧನಾಗಿ ನಕ್ಷತ್ರ ರೂಪದಲ್ಲಿ ಉಳಿದವನೆಂಬ ನಂಬಿಕೆಯನ್ನು (ನಿದರ್ಶನವನ್ನು) ಬೇಟೆಯ ಪ್ರಸಂಗವೊಂದು ಪುಷ್ಟಿಗೊಳಿಸುತ್ತದೆ. ಬ್ರಹ್ಮನು ಸರಸ್ವತಿಯನ್ನು ಸೃಷ್ಠಿಸಿ ಆಕೆಯ ಸೌಂದರ್ಯಕ್ಕೆ ಮರುಳಾಗಿ ಮೋಹಿಸಲು ಆಕೆಯು ಹೆಣ್ಣು ಜಿಂಕೆಯಾಗಿ ಓಡಿದಳು. ಬ್ರಹ್ಮನು ಗಂಡು ಜಿಂಕೆಯ ರೂಪದಲ್ಲಿ ಅವಳನ್ನು ಹಿಂಬಲಿಸುತ್ತಿರಲು ಶಿವನು ವ್ಯಾದರೂಪದಿಂದ ಅದರ ತಲೆಯನ್ನು ಕತ್ತರಿಸಿದ ಆಗ ಅದರ ದೇಹದಿಂದ ತೇಜಸ್ಸು ಹೊರಹೊಮ್ಮಿ ಅದು ಆಕಾಶದಲ್ಲಿ ಮೃಗಶಿರ ನಕ್ಷತ್ರವಾಗಲು ಶಿವನು ಅದರ ಬಳಿ ಮೃಗವ್ಯಾದ ನಕ್ಷತ್ರವಾಗಿ ಉಳಿದನು.

ಋತುವರ್ಣನ ಮಗ ಸುದಾಸನ  ಪುತ್ರನಾದ ಸೌದಾಸನೆಂಬುವವನು ಒಮ್ಮೆ ಬೇಟೆಗೆ ಹೋಗುದ್ದಾಗ ಇಬ್ಬರು ರಾಕ್ಷಸರು ಕಂಡರು. ಅವರಲ್ಲಿ ಒಬ್ಬನನ್ನು ಕೊಲ್ಲುವಾಗ ಮತ್ತೊಬ್ಬನು ತಪ್ಪಿಸಿಕೊಂಡನು. ಸೌದಾಸನು ಯಜ್ಞದೀಕ್ಷತನಾಗಿದ್ದಾಗ ಆ ರಾಕ್ಷಸನು ವಸಿಷ್ಟನ ವೇಷದಲ್ಲಿ ಬಂದು ಅಲ್ಲಲ್ಲಿ ಇಟ್ಟಿದ್ದ ಮಾಂಸವನ್ನು ತಿಂದು ನರಮಾಂಸವನ್ನು ಅಲ್ಲಿಟ್ಟು ಮಾಯವಾದ ಅಲ್ಲಿಗೆ ಬಂದ ವಶಿಷ್ಟನು ನರಮಾಂಸ ಭಕ್ಷಕನಾದ ರಕ್ಷಸನಾಗುವಂತೆ ಸವದಾಮಿನಿಗೆ ಶಾಪನೀಡಿದ. ನಿರಪರಾಧಿಯಾದ ತನಗೆ ಶಾಪ ನಿಡಿದ ವಶಿಷ್ಟನಿಂದ ಪ್ರತಿಶಾಪನೀಡಲು ಸೌದಾಮನು ಸಿದ್ಧನಾಗಲು ಆತನ ಹೆಂಡತಿಯ ಹಾಗೆ ಮಾಡಬಾರದೆಂದು ಎಂದು ಬುದ್ಧಿಹೇಳಲು ಶಾಪೋದಕವನ್ನು ತನ್ನ ಪಾದಗಳ ಮೇಲೆಯೇ ಬಿಟ್ಟುಕೊಂಡನು. ಅದರಿಂದ ಪಾದಗಳು ಕಪ್ಪಾಗಲು ಕಲ್ಮಷಪಾದನಾದನು. ವಸಿಷ್ಟನ ಶಾಪದಿಂದ ರಾಕ್ಷಸನಾಗಲು ವಿಶ್ವಾಮಿತ್ರ ಕಿಂಕರನೆಂಬ ಒಬ್ಬ ರಾಕ್ಷಸನು ಈತನ ದೇಹವನ್ನು ಪ್ರವೇಶಿಸುವಂತೆ ಮಾಡಿ ವಸಿಷ್ಟನ ನೂರು ಮಕ್ಕಳನ್ನು ಕೊಲ್ಲಿಸಿದನು. ಸೌದಾಪನು ರಾಕ್ಷಸನಾಗಿ ನರಮಾಂಸ ಭಕ್ಷಕನಾಗಿ ಬ್ರಹ್ಮಹತ್ಯೆಗೆ ಕಾರಣನಾದನು. ಒಮ್ಮೆ ನವಬ್ರಾಹ್ಮಣ ದಂಪತಿಗಳಲ್ಲಿ ವರನನ್ನು ತಿಂದನು. ಆಗ ವಧುಪು ನೀನು ಸ್ತ್ರೀಸಂಗ ಮಾಡಿದಾಗ ಸಾಯುಂವತಾಗಲಿ ಎಂದು ಶಾಪನೀಡಿದಳು. ವಶಿಷ್ಟನ ಶಾಪದ ಅವಧಿಯು ಮುಗಿದ ಬಳಿಕ ಈತನು ಪತ್ನಿಯು ಸಂಯೋಗಕ್ಕೆ ಹೋಗುವ ಮುನ್ನ ಬ್ರಹ್ಮತ್ಯಾಪಾಪ ನಿವಾರಣಗೆ ತೀರ್ಥಕ್ಷೇತ್ರ ಯಾತ್ರೆಯನ್ನು ಪತ್ನಿ ಸಮೇತ ಕೈಗೊಂಡು ಪರಿಶುದ್ಧನಾದನು.

ಶಂಕರಪಾಂಡ್ಯನೆಂಬ ಪಾಂಡರಾಜನು ಬೇಟೆಗೆ ಹೋಗಿದ್ದಾಗ ಹುಲಿದೊಗಲನ್ನು ಹೊದ್ದು ತಪ್ಪಸ್ಸುಮಾಡುತ್ತಿದ್ದ ಶಾಕಲ್ಯ ಮಹರ್ಷಿಯನ್ನು ಹುಲಿಯೆಂದು ಭಾವಿಸಿ ಕೊಂದುಹಾಕುತ್ತಾನೆ. ಇದರಿಂದ ಬ್ರಹ್ಮಹತ್ಯಾ ದೋಷವೊದಗಿ ಚಿಂತಿಸುತ್ತಿರಲು ಆಕಾಶವಾಣಿಯ ನಿರ್ದೇಶನದಿಂದ ಒಂದು ವರ್ಷಸೇತು ಸ್ನಾನವನ್ನು ಮಾಡಿ ರಾಮಲಿಂಗವನ್ನು ಪೂಜಿಸಿ ಪಾಪದಿಂದ ಬಿಡುಗಡೆ ಹೊಂದುತ್ತಾನೆ.

ರಾಜನಾದವನು ಪ್ರಾಣಿಬೇಟೆಯಾಡಬಹುದೇ ಹೊರಡು ಮನುಷ್ಯ ಬೇಟೆ ಆಡುವಂತಿಲ್ಲ ತ್ರೇತಾಯುಗದಲ್ಲಿ ವಿಧೃತನೆಂಬ ರಾಜನು ತನ್ನ ರಾಜ್ಯದಲ್ಲಿ ದುಷ್ಟರಿಗೆ ಆಶ್ರಯನೀಡಿದ್ದನು. ಇದರ ಪರಿಣಾಮವಾಗಿ ಇವನ ರಾಜ್ಯವು ಶತ್ರುಗಳ ಪಾಲಾಯಿತು. ಆದ್ದರಿಂದ ಇವನು ಕಾಡಿನಲ್ಲಿ ವಾಸಿಸುತ್ತಾ ಮನುಷ್ಯ ಮತ್ತು ಪ್ರಾಣಿಗಳ ತಲೆಗಳನ್ನು ಹೊಡೆದು ತಿಂದು ಬದುಕುತ್ತಿದ್ದನು. ಹೀಗೆ ಇವನ ಪಾಪರಾಶಿ ಹೆಚ್ಚು ಅವಸಾನಕಾಲ ಒದಗಿಬರಲು ಹರನಾಮಸ್ಮರಣೆ ಮಾಡಿ ಕೈಲಾಸಕ್ಕೆ ಸಂದಿದನು. ಬೇಟೆಯ ಸಂದರ್ಭದಲ್ಲಿ ವೈಯಕ್ತಿಕ ದ್ವೇಷವನ್ನು ಸಾಧಿಸಿದ ಪುರಾಣ ಘಟನೆಯಾಗಿದೆ. ವಿದರ್ಭರಾಜನಾದ ವಪ್ರಷ್ಮಂತನು, ದಶಾಕರ್ಣ ದೇಶದ ಅಧಿಪತಿ ಪಾರುವರ್ಮನ ಮಗಳಾದ ಸುಮನೆಯು ಸ್ವಯಂವರದಲ್ಲಿ ದಮನನ್ನು ಮದುವೆಯಾದಳೆಂದು ಅವನನ್ನು ಅಪಮಾನಗೊಳಿಸಲು ಹೋಗಿ ಪರಾಜಿತನಾಗಿದ್ದ ಒಮ್ಮೆ ವಪ್ರಷ್ಮಂತನು ಬೇಟೆಗೆ ಹೋಗಿದ್ದಾಗ ದಮನ ತಂದೆ ಪರಿಷ್ಯಂತನು ವಾನಪ್ರಸ್ಥಶ್ರಮದಲ್ಲಿದ್ದುದ್ದನ್ನು ನೋಡಿ ವಧಿಸುತ್ತಾನೆ. ಇದನ್ನು ಕೇಳಿದ ದಮನು ದಂಡೆತ್ತಿ ಹೋಗಿ ವಪ್ರಷ್ಮಂತನನ್ನು ಕೊಂದುಹಾಕುತ್ತಾನೆ.

ಒಮ್ಮೆ ಶರ್ಯಾತಿ ರಾಜನು ಬೇಟೆಗೆಂದು ಹೋಗುವಾಗ ಜೋತೆಯಲ್ಲಿ ಆತನ ಮಗಳು ಸುಕನ್ಯೆಯೂ ಸಖಿಯರೊಂದಿಗೆ ಹೊರಟಳು. ಆ ಅರಣ್ಯದಲ್ಲಿ ಚ್ಯವನ ಮಹರ್ಷಿಯು ಹುತ್ತದಲ್ಲಿ ಕುಳಿತು ತಪಸ್ಸನ್ನು ಆಚರಿಸುತ್ತಿರಲು ಹುತ್ತದ ಒಳಗಿನಿಂದ ಅವನ ಕಣ್ಣುಗಳು ಹೊಳೆಯುತ್ತಿದ್ದವು. ಅದೇನೆಂದು ತಿಳಿಯಲು ಸುಕನ್ಯೆಯು ಹುತ್ತದ ಕಿಂಡಿಗಳನ್ನು ಕಡ್ಡಿಯಿಂದ ಚುಚ್ಚಿದಳು. ತಕ್ಷಣವೇ ಋಷಿಯ ಕಣ್ಣುಗಳಿಂದ ರಕ್ತವು ಸುರಿಯಲಾರಂಭಿಸಿತು. ಅದರ ಪ್ರಭಾವದಿಂದ ಅಲ್ಲಿದ್ದ ರಾಜ ಸೇನೆ ಹಾಗೂ ಪರಿವಾರಕ್ಕೆ ಮಲಮೂತ್ರಗಳು ಕಟ್ಟಿಕೊಂಡವು ಮುದುಕನಾಗಿದ್ದ ಚ್ಯವನು ಸುಕನ್ಯೆಯ ಮೂರ್ಖತನದಿಂದ ಕುರುಡನಾದ್ದರಿಂದ ಅವನನ್ನು ನೋಡಿಕೊಳ್ಳಲೆಂದು ಶರ್ಯಾತಿರಾಜನು ತನ್ನ ಮಗಳನ್ನು ಸುಕನ್ಯೆಯನ್ನು ಕೊಟ್ಟು ಮದುವೆ ಮಾಡಿದನು. ಮುಂದೆ ಸುಕನ್ಯೆಯು ಅಶ್ವಿನಿ ದೇವತೆಗಳಿಂದ ಚ್ಯವನಿಗೆ ಯೌವನವನ್ನು ಕೊಡಿಸಿದಳು.

ಪುರಾಣದಲ್ಲಿ ವಸಿಷ್ಟ ಮತ್ತು ವಿಶ್ವಾಮಿತ್ರರ ಪರಸ್ವರ ಗುದ್ದಾಟವು ಹರಿಶ್ಚಂದ್ರನ ಗತಿಕೇಡಿಗೆ ಕಾರಣವಾಯಿತಾದರೂ ಬೇಟೆಯ ಪ್ರಸಂಗದಿಂದ ಹರಿಶ್ಚಂದ್ರನು ವಿಶ್ವಾಮಿತ್ರನ ಮಾತಿಗೆ ಬಂದಿಯಾಗಲು ಸಾಧ್ಯವಾಯಿತು. ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಹುಸಿಕನೆನಿಸಲು ಪೂರ್ವಭಾವಿ ಸಿದ್ಧತೆಯನ್ನು ರೂಪಿಸಿಕೊಂಡಿದ್ದರ ಮೊದಲ ಹಂತವೇ ದೃಷ್ಟಮೃಗಗಳ ಹಾವಳಿಯನ್ನು ಸೃಷ್ಠಿಸಿದ್ದಾಗಿದೆ. ಹರಿಶ್ಚಂದ್ರನು ಬೇಟೆಗೆ ಹೋಗಿದ್ದಾಗ ವಿಶ್ವಾಮಿತ್ರನ ಮಾಯಾಪುತ್ರಿಯರು ರಾಜನನ್ನು ತಮ್ಮ ಗಾಯನ ನೃತ್ಯಗಳಿಂದ ರಂಜಿಸಿ ತಮ್ಮನ್ನು ವಿವಾಹವಾಗುವಂತೆ ಕೇಳುತ್ತಾರೆ. ಅವರು ಹೊಲತಿಯರಾದ್ದರಿಂದ ಹಾಗೂ ತನಗೆ ಮದುವೆಯಾಗಿರುವುದರಿಂದ ಅವರನ್ನು ಆತ ಒಲ್ಲೆಯೆನ್ನುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ವಿಶ್ವಾಮಿತ್ರನೊಂದಿಗೆ ಸಂಭಾಷಿಸುವಾಗ ಮಾತಿನ ಚಕಮಕಿಯಲ್ಲಿ ತನ್ನ ರಾಜ್ಯ ಮತ್ತು ಇತರೆ ಸಂಪತ್ತನ್ನಾದರೂ ತೊರೆದೇನು ಅವರನ್ನು ವಿವಾಹವಾಗಲಾರೆ ಎಂದನು. ಅದನ್ನೆ ನೆಪಮಾಡಿಕೊಂಡ ವಿಶ್ವಾವಿತ್ರನ ಹರಿಶ್ಚಂದ್ರನಿಂದ ದೇಶ-ಕೋಶಗಳನ್ನು ಕಸಿದುಕೊಂಡು ಹೊರಹಾಕಿದ್ದಲ್ಲದೆ ಮುಂದೆ ಆತನನ್ನು ಸತ್ಯಸಂದನೆಂದು ಸಾಭಿತು ಮಾಡಿದ. ದುಷ್ಟಪ್ರಾಣಿಗಳ ಉಪಟಳದಿಂದ ಆರಂಭಗೊಂಡು ಹರಿಶ್ಚಂದ್ರನು ಬೇಟೆಯಾಡಿದ ಪ್ರಸಂಗ ಮತ್ತು ಮುಂದುವರಿದ ಆತನ ಶೋಧನೆಯ ದಿನಗಳೆಲ್ಲ ಹರಿಶ್ಚಂದ್ರನ ಅನುಭದಲ್ಲಿ ವಾಸ್ತವವಾದರೂ ವಿಶ್ವಾಮಿತ್ರನು ಅಲ್ಲೆಲ್ಲ ತುಂಬಿದ ಪಾತ್ರಗಳು ಅತಿಮಾನುಷ ಶಕ್ತಿಗಳಾಗಿದ್ದರೂ ಈ ದೃಷ್ಟಿಯಿಂದ ಇಲ್ಲಿನ ಬೇಟೆಯ ಪ್ರಸಂಗಕ್ಕೆ ವಿಶಿಷ್ಟತೆ ಇದೆ.

ಒಮ್ಮೆ ದುರ್ಯೊಧನ ಮತ್ತು ಕರ್ಣ ಬೇಟೆಗೆ ಹೋಗಿದ್ದಾಗ ಸತ್ಯಂತಿರೆಂಬ ಋಷಿಯ ಆಶ್ರಮಕ್ಕೆ ಬೇಟೆ ನೀಡಿದರು. ಆ ಋಷಿಯು ಕರ್ಣನಿಗೆ ಕುಳಿತುಕೊಳ್ಳಲು ಉನ್ನತ ಪೀಠವನ್ನು ನೀಡಿದ. ಇದರಿಂದ ಅಸಮಧಾನಗೊಂಡ ದುರ್ಯೊಧನನು ಹೀಗೆಕೆ ಮಾಡಿದಿರಿ ಎಂದು ಋಷಿಯನ್ನು ರಗಸ್ಯವಾಗಿ ಕೇಳಿದ. ಆಗ ಋಷಿಯು ಕರ್ಣನ ಜನ್ಮ ರಹಸ್ಯವನ್ನು ತಿಳಿಸಿದ ಹೀಗೆ ಬೇಟೆಯ ಪೌರಣಿಕ ನಿದರ್ಶನಗಳು ರಹಸ್ಯ ಭೇದಕಗಳಾದ ಸಾಧ್ಯತೆಗಳೂ ಇವೆ. ಬೇಟೆಯ ನಿಮಿತ್ತ ರೂಪಿಸುವ ಒಳಸಂಚು ಕುಟಿಲೋಪಾಯಗಳು ಫಲಿಸದೆ ಸಾಧನಾತ್ಮಕವಾದ ಘಟನೆಗಳೂ ಇವೆ. ಶಬರಿಮಲೆಯ ಅಯ್ಯಪ್ಪನ ಪುರಾಣದಲ್ಲಿ ಮಲತಾಯಿಯ ಬಾಲಕ ಅಯ್ಯಪ್ಪನನ್ನು ತನ್ನ ತಲೆನೋವಿನ ನಿವಾರಣೆಗೆ ಹುಲಿಯ ಹಾಲನ್ನು ತರಬೇಕೆಂದು ನೆಪವೊಡ್ಡಿ ಕಾಡಿಗೆ ಕಳುಹಿಸುತ್ತಾಳೆ. ಆದರೆ ಆತನು ಕಾಡಿನಿಂದ ಹುಲಿಯನ್ನು ಪಳಗಿಸಿ ತರುತ್ತಾನೆ.

ಅರಣ್ಯ ವಾಸಿಗಳಾಗಿದ್ದ ರಾಕ್ಷಸ ರಾಕ್ಷಸಿಯರು ಕಾಡಿನಲ್ಲಿ ಸಂಚರಿಸುತ್ತಿದ್ದ ಮನುಷ್ಯರನ್ನು ಬೇಟೆಯಾಡಿ ತಿನ್ನುತ್ತಿದ್ದ ನಿದರ್ಶನಗಳು ರಾಮಾಯಣ ಮಹಾಭಾರತಗಳಲ್ಲಿ ಕಾಣಿಸಿಗುತ್ತವೆ. ತಾಟಕೆ ಹಾಗು ಆಕೆಯ ಮಕ್ಕಳಾದ ಸುಬಾಹು ಮತ್ತು ಮಾರೀಚ ಇವರ ಉಪಟಳವನ್ನು ರಾಮಲಕ್ಷ್ಮಣರು ಅಡಗಿಸಿದ್ದು ಇಂಥ ಹಿನ್ನಲೆಯಲ್ಲಿ ಎಂದು ಹೇಳಬಹದು. ಹಾಗೂ ರಾವಣನತಂಗಿ ಶೂರ್ಪಸಖಿ ದಂಡಕಾರಣ್ಯದಲ್ಲಿ ರಾಮಲಕ್ಷ್ಮಣರನ್ನು ತಿನ್ನಲೆಂದು ಬಂದವಳು ಅವರನ್ನು ಕಂಡು ಮೋಹಿತಳಾಗಿ ತನ್ನನ್ನು ಯಾರಾದರೂ ಒಬ್ಬರು ಮದುವೆಯಾಗುವಂತೆ ಪೀಡಿಸಿದಳು. ಸೀತೆಯನ್ನು ನುಂಗಲು ಹೋದಳು. ಲಕ್ಷ್ಮಣನಿಂದ ಸಂಹಾರವಾದಳು. ಮಹಾಭಾರತದಲ್ಲಿ ಹಿಡಿಂಬ ಮತ್ತು ಅವನ ಸೋದರಿ ಹಿಡಿಂಬೆಯು ಅರಣ್ಯದಲ್ಲಿ ಮನುಷ್ಯರನ್ನು ಕೊಂದು ತಿನ್ನುತ್ತಿದ್ದರು. ಭೇಮನು ತನ್ನ ತಾಯಿ ಹಾಗೂ ಸಹೋದರರನ್ನು ಅರಗಿನ ಮನೆಯ ಅಗ್ನಿಅಹುತಿ ದುರಂತದಿಂದ ಪಾರುಮಾಡಿ ಹೊತ್ತೊಯ್ದ ಕಾಡಿನಲ್ಲಿ ಅವರನ್ನು ರಕ್ಷಿಸುತ್ತಿದ್ದಾಗ ಹಿಡಿಂಬ ಹಿಡಿಂಬಿಯರು ಅವರನ್ನು ತಿನ್ನಲು ಬರುತ್ತಾರೆ. ಭೀಮನು ಹಿಡಿಂಬವನನ್ನು ಕೊಂದ ಬಳಿಕ ಹಿಡಿಂಬೆಯು ಭೀಮನಿಂದ ಮೋಹಿತಳಾಗಿ ತನ್ನನ್ನು ವಿವಾಹವಾಗುವಂತೆ ಯಾಚಿಸುತ್ತಾಳೆ. ಬಕಾಸುರನೆಂಬ ರಾಕ್ಷಸನು ಊರಿಗೆ ನುಗ್ಗಿ ಜನರನ್ನು ಹಿಡಿದು ತಿನ್ನುತ್ತಿದ್ದ ಆತನಿಗೆ ಸರದಿಯ ಪ್ರಕಾರ ದಿನಕ್ಕೊಬ್ಬ ಮನುಷ್ಯನೊಂದಿಗೆ ಬಂದು ಬಂಡಿಯ ಆಹಾರ ಹಾಗೂ ಬಂಡಿನೆ ಕಟ್ಟಿದ ಜೋಡಿ ಎತ್ತುಗಳನ್ನು ಒಪ್ಪಿಸಲಾಗುತ್ತಿತ್ತು. ಸರದಿಯಲ್ಲಿ ಹೋದ ಭೀಮನು ಬಕಾಸುರನನ್ನು ಕೊಂದನು. ಇಲ್ವಲ ಹಾಗೂ ಆತನ ತಮ್ಮ ವಾತಾಪಿ ಇವರಿಬ್ಬರೂ ಋಷಿಗಳಿಗೆ ಮಾಂಸದ ಔತಣವೇರ್ಪಡಿಸಿ ಗೋರಿಗೊಳಿಸಿ ಗೋರಿಗೊಳಿಸಿ ಕೊಂದು ತಿನ್ನುತ್ತಿದ್ದರು. ಇವರ ಉಪಾಯದ ಪ್ರಕಾರ ವಾತಾಪಿಯು ಆಡಿನ ಮಾಂಸವಾಗುತ್ತಿದ್ದ; ಇಲ್ವಲನು ನೀಡಿದ ಆಡಿನ ಮಾಂಸವನ್ನು ಬ್ರಾಹ್ಮಣ ಋಷಿಗಳು ಸೇವಿಸಲಾಗಿ ಅವರ ಹೊಟ್ಟೆಯನ್ನು ಭೇದಿಸಿಕೊಂಡು ವಾತಪಿಯು ಹೊರಬರುತ್ತಿದ್ದ. ಒಮ್ಮೆ ಅಗಸ್ತ್ಯನಿಗೂ ಹೀಗೆಯೇ ಮಾಡಲಾಗಿ ಇವರ ತಂತ್ರವನ್ನು ಅರಿತ ಆತನು ತನ್ನ ತಪೋಮಹಿಮೆಯಿಂದ ವಾತಾಪಿ ಜೀರ್ಣೋಭವ ಎಂದು ಹೇಳಿ ಜೀರ್ಣಿಸಿಕೊಂಡನು.

ದಂಡಕನೆಂಬ ರಾಜನು ಬೇಟೆಯಾಡಲು ಹೋದಾಗ ಸಂದರ್ಭಗಳಲ್ಲಿ ಋಷಿಪುತ್ರಿಯರನ್ನು ಬಲತ್ಕಾರವಾಗಿ ಭೋಗಿಸಿ ಶಾಪಪ್ರಾಪ್ತನಾಗಿ ಅವನ ರಾಜ್ಯವೆಲ್ಲವೂ ಅರಣ್ಯವಾದ ದುರಂತವು ಇದೆ. ಇವನು ಒಮ್ಮೆ ಶುಕ್ರಾಚಾರ್ಯ ಆಶ್ರಮದಲ್ಲಿ ಇಲ್ಲದೆ ಇರುವ ಸಂದರ್ಭದಲ್ಲಿ ಆತನ ಮಗಳು ಅರಜೆಯನ್ನು ಮಾನಭಂಗ ಮಾಡಿದ ಇದನ್ನು ತಿಳಿದ ಶುಕ್ರಾಚಾರ್ಯರು ದಂಡಕನ ರಾಜ್ಯವೆಲ್ಲವೂ ಅರಣ್ಯವಾಗುವಂತೆ ಶಾಪನೀಡಿದ. ಏಳು ದಿನಗಳಲ್ಲಿ ಈತನ ರಾಜ್ಯವು ಧೂಳು ಸುರಿದು ನೆಲವೆಲ್ಲ ಬೆಂಗಾಡಗಿ ದಂಡಕಾರಣ್ಯವೆಂಬ ಹೆಸರು ಪಡೆಯಿತು. ರಾಮಾಯಣದ ಕಾಲದಲ್ಲಿ ಇದು ಜನಸ್ಥಾನವೆಂಬ ಹೆಸರನ್ನು ಪಡೆಯಿತು. ಈ ಹೆಸರನ್ನು ಪಡೆಯಲು ಮತ್ತೊಂದು ಪ್ರಸಂಗವು ಪೂರಕವಾಗುತ್ತದೆ. ದಂಡಕನು ಬೇಟೆಗೆ ಹೋದಾಗ ಭೃಗುವಿನ ಆಶ್ರಮಕ್ಕೆ ಹೋಗಿ ಅಲ್ಲಿ ಮುನಿಪುತ್ರಿಯೊಬ್ಬಳನ್ನು ಭೋಗಿಸಿದನು. ಇದರಿಂದ ಕುಪಿತನಾದ ಭೃಗುಮಹರ್ಷಿಯು ಆ ಪ್ರದೇಶವು ನೂರು ಯೋಜನಗಳಷ್ಟು ದೂರ ಸುಟ್ಟು ಬೂದಿಯಾಗಲೆಂದು ಅಗಸ್ತ್ಯರು ಕಾಶಿಯಿಂದ ಅಲ್ಲಿಗೆ ಬಂದ ನಂತರ ಮಂಗಳವನ್ನು ಕಂಡು ಶ್ರೀರಾಮನಿಂದ ಪಾದನವಾಗಲೆಂದು ಹೇಳಿದನು. ಮಹಾವಿಷ್ಣುವು ತನ್ನ ಭಕ್ತರು ರಾಕ್ಷಸರಾಗಿ ಅವತರಿಸಿದಾಗ ಅವರನ್ನು ಶಾಪದಿಂದ ಮುಕ್ತಗೊಳಿಸಲು ತಾನೇ ಆಯುಧಗಳಿಂದ ಸಂಹರಿಸಿದ. ಅಲ್ಲದೆ ಕೂರ್ಮಾವತಾರ ಮತ್ಸ್ಯಾವತಾರ ವರಹವತಾರಗಳಿಂದ ರಾಕ್ಷಸ ಸಂಹಾರ ಮಾಡಿದ್ದಾನೆ. ವ್ಯಕ್ತಿಯು ದುಷ್ಟನಾದಾಗ ಆತ ಪ್ರಾಣಿ ಸಮಾನನಾದ್ದರಿಂದ ಕೊಲ್ಲಬಹುದೆಂಬ ಧರ್ಮ ಆತನದು ಒಮ್ಮೆ ಜಯವಿಜಯರು ಯಜ್ಞವೊಂದರಲ್ಲಿ ಅತಿಯಾದ ಸಂಪತ್ತನ್ನು ಗಳಿಸಿ ಅದನ್ನು ಪಾಲುಮಾಡಿಕೊಳ್ಳುವಾಗ ಪರಸ್ಪರ ಜಗಲವಾಡಿದರು. ಇದರ ಪರಿಣಾಮವಾಗಿ ಜಯನು ವಿಜಯನನ್ನು ಮೊಸಳೆಯಾಗುವಂತೆ ಶಪಿಸಿದ. ವಿಜಯನು ಜಯನನ್ನು ಆನೆಯಾಗುವಂತೆ ಶಪಿಸಿದ. ಒಮ್ಮೆ ಆನೆಯು ನೀರುಕುಡಿಯಲು ನದಿಗೆ ಇಳಿದಾಗ ಮೊಸಳೆಯು ಅದನ್ನು ಹಿಡಿಯಿತು. ಆಗ ಆನೆಯು ಮಿಷ್ಣುವನ್ನು ಪ್ರಾರ್ಥಿಸಲು ಆತನು ತನ್ನ ಸುದರ್ಶನ ಚಕ್ರದಿಂದ ಮೊಸಳೆಯನ್ನು ಕೊಂದು ಅನೆಯನ್ನು ಬದುಕಿಸಿ ತನ್ನ ದರ್ಶನವನ್ನು ನೀಡಲಾಗಿ ಜಯ ವಿಜಯರು ಶಾಪವಿಮೋಚನೆ ಹೊಂದಿದರು. ವಿಷ್ಣುವು ನರಸಿಂಹಾವತಾರದಲ್ಲಿ ಹಿರಣ್ಯಕಶಿಪುವನ್ನು ಕೊಂದು ನಂತರ ಚಂಚುಲಕ್ಷ್ಮಿಯೆಂಬ ಬೇಟೆಗಾರ ಕನ್ಯೆಯಿಂದ ಪಳಗುತ್ತಾನೆ. ಹಿರಣ್ಯಕಶಿಪುವನ್ನು ಕೊಂದು ಮದೋನ್ಮತ್ತನಾದ ನರಸಿಂಹನನ್ನು ವೀರೆಶನು ಶರಭಾವತಾರವನ್ನು ತಾಳಿ ಕೊಂದು ನರಸಿಂಹನ ತಲೆ ಮತ್ತು ಚರ್ಮವನ್ನು ತಂದು ಶಿವನಿಗೆ ಒಪ್ಪಿದನು. ಶಿವನು ನರಸಿಂಹನ ಮುಖಕ್ಕೆ ಕೀರ್ತಿಮುಖನೆಂದು ಹೆಸರಿಟ್ಟು ಅದನ್ನು ಭೂಷಣ ಮಾಡಿಕೊಂಡನು. ಹಾಗೆಯೇ ಚರ್ಮವನ್ನು ತನ್ನ ಸಿಂಹಾಸನದ ಮೇಲೆ ಹಾಕಿಸಿಕೊಂಡನು.

ಪುರಾಣಗಳ ಬೇಟೆಯ ಪ್ರಸಂಗಗಳು ನಡೆದ ಘಟನೆಗಳೆಂದು ಘಟನೆಗಳನ್ನು ಸ್ಥಳಗಳಿಗೆ ಆರೋಪಿಸಿ ಹೇಳುವ ಸ್ಥಳೈತಿಹ್ಯಗಳು ನಮ್ಮಲ್ಲಿ ಹೆರಳವಾಗಿ ದೊರೆಯುತ್ತವೆ. ಅವುಗಳಲ್ಲಿ ಚಿನ್ನದ ಜಿಂಕೆಯನ್ನು ರಾಮನು ರಾಮನು ಬೇಟೆಯಾಡಲು ಹೋದ ಸ್ಥಳ, ಹಿಡಿಂಬನು ಭೀಮಾಧಿಗಳನ್ನು ಬೇಟೆಯಾಡಲು ಪ್ರಯತ್ನಿಸಿದ ಸ್ಥಳ ಹೀಗೆ ಹಲವಾರು ಸ್ಥಳಗಳು ಆರೋಪಿತವಾಗಿವೆ.

ಹೀಗೆ ಪುರಾಣಗಳ ಬೇಟೆಯ ನಿದರ್ಶನಗಳು ಹಲವು ಆಯಾಮಗಳಿಂದ ಕೂಡಿವೆ. ಒಟ್ಟಾರೆ ಬೇಟೆ ಇಂದು ನಿಷೇಧಕ್ಕೆ ಒಳಪಟ್ಟಿರುವ ಸಂದರ್ಭದಲ್ಲಿಯೂ ಬೇಟೆಯ ಹಿನ್ನಲೆಗಳಾಗಿರುವ ಸಾಂಸ್ಕೃತಿಕ ಅಂಶಗಳು ಪರಂಪರೆಯನ್ನು ಪೋಷಿಸುತ್ತಾ ಬಂದಿವೆಯೆಂಬುದು ಸಾಂಸ್ಕೃತಿಕ ಸತ್ಯವಾಗಿದೆ.

ಪರಾಮರ್ಶನ ಗ್ರಂಥಗಳು

೧. ಮಂಜುನಾಥ ಬೇವಿನಕಟ್ಟೆ, ತಾರಿಹಳ್ಳಿ ಹನುಮಂತಪ್ಪ ಸಂ. ವಾಲ್ಮೀಕಿ ಸಂಪದ ೨೦೦೬; ಶ್ರೀ ವಾಲ್ಮೀಕಿ ಮಹಾ ಸಂಸ್ಥಾನ, ರಾಜನಹಳ್ಳಿ.

೨. ಹರ್ತಿಕೋಟೆ ವೀರೇಂದ್ರಸಿಂಹ, ಅಮರೇಶ ಯಾತಗಲ್ ಸಂ. ವಾಲ್ಮೀಕಿ ಮಂದಾರ ೨೦೦೮, ವಾಲ್ಮೀಕಿ ಸಾಹಿತ್ಯ ಸಂಪದ-ಹರ್ತಿಕೋಟೆ.

೩. ಕೆ.ಎಸ್. ನಾರಾಯಣಾಚಾರ್ಯ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ೨೦೦೭ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ.

೪. ಯಜ್ಞ ನಾರಾಯಣ ಉಡುಪ, ಪುರಾಣ ಭಾರತಕೋಶ ೨೦೦೩, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.

೫. ಮಂಜುನಾಥ ಬೇವಿನಕಟ್ಟಿ ಸಂ. ವ್ಯಾದಚರಿತೆ, ೨೦೦೭, ವ್ಯಾದಚರಿತೆ, ಕ.ವಿ.ವಿ. ಹಂಪಿ

೬. ನರೇಂದ್ರ ಕೈ ದೇರ್ಲ, ೨೦೦೭; ಬೇಟೆ, ಕನಸು ಪ್ರಕಾಶನ