ಮೈಫ್‌ಪ್ರಿಸ್ಟೋನ್ (Mifepristone), ಮೈಫ್‌ಜಸ್ಟ್ (Mifegest), ಮೈಫ್‌ಪ್ರಿನ್ (Mifeprin) ಮಾತ್ರೆಗಳು ಮಾರುಕಟ್ಟೆಯಲ್ಲಿ ಮಹಿಳೆಯರ ಸಹಾಯಕ್ಕೆ ಸಿದ್ಧವಾಗಿವೆ. ಇವು ಗರ್ಭಪಾತಕ್ಕೆಂದೇ ಸೃಷ್ಟಿಯಾದ ಹೊಸ ಗುಳಿಗೆಗಳು. ಅಮೆರಿಕಾದ ಫೆಡರಲ್ ಔಷಧಿ ನಿರ್ವಾಹಕರು ೨೦೦೦ನೇ ಇಸವಿಯಲ್ಲಿ ಇದನ್ನು ಮಾರುಕಟ್ಟೆಗೆ ತಂದರು. ಇಸವಿ ೨೦೦೨ರಿಂದ ಭಾರತ ಸರಕಾರ ಇಲ್ಲಿ ಮಾರಾಟಕ್ಕೆ ತನ್ನ ಒಪ್ಪಿಗೆ ನೀಡಿದೆ. ಭಾರತದ ಜನಪ್ರಿಯ ಔಷಧಿ ಕಂಪೆನಿಗಳಾದ ಸಿಪ್ಲಾ, ಕಡಿಲಾ ಹಾಗೂ ಸನ್‌ಫಾರ್‍ಮಾ ಈ ಮಾತ್ರೆಗಳನ್ನು ಮಾರುವ ಹೊಣೆ ಹೊತ್ತಿವೆ. ೨೦೦ ಮಿ.ಗ್ರಾಂನ ಒಂದು ಮಾತ್ರೆಗೆ ೩೧೦ ರೂ. ಮಾತ್ರ. ಆಸ್ಪತ್ರೆ ವಾಸ, ಅನಸ್ತೇಸಿಯಾ, ಡಿ ಎಂಡ್ ಸಿ ಮುಂತಾದ ಸಮಸ್ಯೆಗಳಿಲ್ಲದೆ ವ್ಯವಹಾರ ಸುಸೂತ್ರ.

ಔಷಧಿ ತಯಾರಕರ ಪ್ರಕಾರ, ಮೊದಲು ಮೈಫ್‌ಪ್ರಿಸ್ಟೋನ್‌ನ ಮೂರು ಮಾತ್ರೆಗಳನ್ನು ವೈದ್ಯರ ಸೂಚನೆಯಂತೆ ತೆಗೆದುಕೊಳ್ಳಬೇಕು. ಇದು ಪ್ರೊಜೆಸ್ಪೆರೋನ್ ಹಾರ್ಮೋನನ್ನು ನಿಯಂತ್ರಿಸುತ್ತದೆ. ಇದರಿಂದ ಗರ್ಭಾಶಯ ರೂಪುಗೊಳ್ಳುತ್ತಿರುವ ಭ್ರೂಣವನ್ನು ಹೊರದೂಡುತ್ತದೆ. ಈ ಕೆಲಸ ಮುಟ್ಟು ನಿಂತ ೪೯ ದಿನಗಳೊಳಗೆ ನಡೆಯಬೇಕು. ಭ್ರೂಣ ಜಾರಿದ ಮೇಲೆ ಅಂದರೆ ಮೈಫ್‌ಪ್ರಿಸ್ಟೋನ್ ತೆಗೆದುಕೊಂಡ ಎರಡು ದಿನದ ನಂತರ ಎರಡು ಮೀಸೋಪ್ರೊಸ್ಟೋಲ್ ಮಾತ್ರೆ ತೆಗೆದುಕೊಳ್ಳಬೇಕು. ಈ ಹಾರ್‍ಮೋನ್ ಗರ್ಭದ್ವಾರದ ಕುಗ್ಗುವಿಕೆಯನ್ನು ಸರಿಗೊಳಿಸುತ್ತದೆ. ಮೈಫ್‌ಪ್ರಿಸ್ಟೋನ್ ತೆಗೆದುಕೊಂಡ ೧೪ ದಿನದ ನಂತರ ಮತ್ತೊಮ್ಮೆ ಗರ್ಭವನ್ನು ಪರೀಕ್ಷಿಸಿಕೊಳ್ಳಬೇಕು. ಆಗಲೂ ಭ್ರೂಣ ಉಳಿದಿದ್ದರೆ ಡಿ ಎಂಡ್ ಸಿ ಮಾಡಿಸಬೇಕಾಗುತ್ತದೆ. ಮೈಫ್‌ಪ್ರಿಸ್ಟೋನ್ ತೆಗೆದುಕೊಂಡ ನಂತರ ಒಮ್ಮೊಮ್ಮೆ ೯-೧೬ ದಿನಗಳವರೆಗೆ ರಕ್ತಸ್ರಾವ ಆಗುವ ಸಾಧ್ಯತೆ ಇದೆ. ಸೂಕ್ತ ಎಚ್ಚರಿಕೆ ತೆಗೆದುಕೊಳ್ಳದಿದ್ದರೆ ಸಾವೂ ಸಂಭವಿಸಬಹುದು. ಸೊರಬದ ವೈದ್ಯ ಡಾ. ಎಂ.ಕೆ. ಭಟ್ ಈ ಮಾತ್ರೆ ಮುಕ್ತವಾಗಿ ಮಾರುಕಟ್ಟೆಯಲ್ಲಿ ಸಿಗತೊಡಗಿದರೆ ಸ್ವವೈದ್ಯ ಹೆಚ್ಚಾಗಿ ಅನಾಹುತಗಳ ಸರಮಾಲೆ ಆರಂಭವಾಗಬಹುದು. ದ್ವೇಷಾಸೂಯೆಯಿಂದ ಇನ್ನೊಬ್ಬರ ಗರ್ಭ ಜಾರಿಹೋಗುವಂತೆ ಮಾಡುವ ಕ್ರಿಮಿನಲ್‌ಗಳೂ ತಯಾರಾಗಬಹುದು. ಅದಕ್ಕಾಗಿ ವೈದ್ಯರ ಸಲಹೆ ಇಲ್ಲದೆ ಇದನ್ನು ಕೊಡಬಾರದೆನ್ನುವ ಕಾನೂನನ್ನೂ ಜೊತೆಯಲ್ಲಿ ತರಬೇಕು ಎನ್ನುತ್ತಾರೆ.

ಆದರೆ ಇದಕ್ಕಿಂತ ಪರಿಣಾಮಕಾರಿ ಗುಳಿಗೆ ಲೆವೊನಾರ್ ಜೆಸ್ಟ್ರಲ್. ಸರಕಾರ ಇದರ ಪ್ರವೇಶಕ್ಕೂ ಮಾನ್ಯತೆ ನೀಡಿದೆ. ತತ್‌ಕ್ಷಣ ಗರ್ಭ ಧರಿಸುವಿಕೆ ತಡೆಯುವ ಮಾತ್ರೆ ಎನ್ನುವ ಪ್ರಚಾರವೂ ಇದಕ್ಕಿದೆ. ಒಂದು ಮಾತ್ರೆಗೆ ಕೇವಲ ೩೫ ರೂ. ಮಾತ್ರ. ಆರ್ಮನ್ ರೆಮಿಡೀಸ್ ಇದರ ತಯಾರಕರು. ಅತ್ಯಾಚಾರಕ್ಕೊಳಗಾದವರು ಮತ್ತು ಮೋಸಹೋದವರಿಗೆ ಇದು ವರದಾನ ಎನ್ನಲಾಗಿದೆ. ಲೆವೊನಾರ್‌ಜೆಸ್ಟ್ರೆಲ್ ಒಂದು ಹಾರ್ಮೋನ್. ಕೇವಲ ಎರಡೇ ಮಾತ್ರೆ ಫಲಿತಗೊಂಡ ಅಂಡಾಣುವನ್ನು ಗರ್ಭಾಶಯದಲ್ಲಿ ನಿಲ್ಲದಂತೆ ತಡೆಯುತ್ತದೆ. ಲೈಂಗಿಕ ಕ್ರಿಯೆಯ ೭೨ ಗಂಟೆಯೊಳಗೆ (೩ ದಿನದೊಳಗೆ) ಮೊದಲ ಮಾತ್ರೆ ತೆಗೆದುಕೊಳ್ಳಬೇಕು. ೧೨ ತಾಸಿನ ನಂತರ ಮತ್ತೊಮ್ಮೆ ಮಾತ್ರೆ ತೆಗೆದುಕೊಳ್ಳಬೇಕು. ಇದರ ಅಡ್ಡಪರಿಣಾಮಗಳು ತಿಳಿದುಬಂದಿಲ್ಲ. ಆದರೆ ವೈದ್ಯರ ಅನುಮತಿ ವಿನಃ ಈ ಮಾತ್ರೆ ಸಿಗುವುದಿಲ್ಲ. ಈಗಾಗಲೇ ಕಂಪೆನಿಗಳು ಈ ಮಾತ್ರೆಗಳ ಮೇಲೆ ೧ ಕೋಟಿ ಡಾಲರ್ ಹೂಡಿವೆ.

ಭಾರತದಲ್ಲಿ ಅಧಿಕೃತವಾಗಿ ಪ್ರತಿವರ್ಷ ೬೭,೦೦೦ ಗರ್ಭಪಾತಗಳು {ಇಸವಿ ೨೦೦೩ರ ವರದಿ} ನಡೆಯುತ್ತಿವೆ. ಅನಧಿಕೃತವೂ ಸೇರಿದರೆ ಇದು ೨,೦೦,೦೦೦ ಆಗಬಹುದು. ೫೦,೦೦೦ ಮಹಿಳೆಯರು ಗರ್ಭಪಾತ ಮಾಡಿಸಿಕೊಂಡಿದ್ದರ ಕಹಿಯನ್ನು ಮುಪ್ಪಿನಲ್ಲಾದರೂ ಅನುಭವಿಸುತ್ತಾರೆ. ಹೀಗಿರುವಾಗ ಗರ್ಭಪಾತದ ಔಷಧಿ ಎಷ್ಟು ಒಳ್ಳೆಯರು ಎನ್ನುವ ಪ್ರಶ್ನೆ ಏಳುತ್ತದೆ.

ಮೇಲಿನ ಎರಡೂ ರೀತಿಯ ಮಾತ್ರೆಗಳನ್ನು ಮುಂಬೈನ ಮಹಿಳಾವಾದಿಗಳು ಸಂತೋಷದಿಂದ ಸ್ವಾಗತಿಸಿದ್ದಾರೆ. ಮಹಿಳೆಯರ ಬಹುದೊಡ್ಡ ಹೊರೆಯನ್ನು ಇಳಿಸಲು ಬಂದ ದೇವತೆ ಎಂದೂ ಕೆಲವರು ನುಡಿದಿದ್ದಾರೆ. ಪತ್ರಿಕೆಗಳು ಇದು ಸ್ವೇಚ್ಛೆಗೆ ಇನ್ನಷ್ಟು ಸಹಕಾರಿ, ಸೌಂದರ್ಯ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಮಕ್ಕಳು ಬೇಡವೆನ್ನುವವರಿಗೆ ಇದು ಸಹಾಯಕ ಎಂದು ವ್ಯಂಗ್ಯವಾಡಿದೆ.

ಮರೆಯಬೇಡಿಸ್ವಯಂ ವೈದ್ಯ ಅಪಾಯಕಾರಿ. ವೈದ್ಯರ ಸೂಚನೆಯಿಲ್ಲದೆ ಯಾವುದೇ ಔಷಧ ಸೇವನೆ ಕೂಡದು.

– ಈ ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.