ಒಂದೂರಿನಲ್ಲಿ ಮೂರು ಜನ ಅಣ್ಣತಮ್ಮಂದಿದ್ದರು. ಕೊನೆಯವನೇ ಹುಚ್ಚಯ್ಯ. ಅವನ ಹೆಸರು ಏನಿತ್ತೋ, ಅವನು ಹುಚ್ಚನಾದ್ದರಿಂದ ಜನ ಅವನನ್ನು ಹುಚ್ಚಯ್ಯನೆಂದೇ ಕರೆಯುತ್ತಿದ್ದರು. ಹಾಗೆಂದು ಕರೆದರೆ ಅವನಿಗೂ ಸಿಟ್ಟಿಲ್ಲ. ಹುಚ್ಚಯ್ಯ ಮುಚ್ಚಿ ಆಡುವ ಮನುಷ್ಯನಲ್ಲ. ರಹಸ್ಯವೆಂಬುದು ಅವನಿಗೆ ಗೊತ್ತೇ ಇಲ್ಲ. ಕೆಲವರು ಊರಲ್ಲಿ ಹಬ್ಬಬೇಕಾದ ಸುದ್ದಿಗಳನ್ನು ಹುಚ್ಚಯ್ಯನಿಗೆ ಹೇಳಿ, ‘ಯಾರ ಮುಂದೆಯೂ ಹೇಳಬೇಡ ಹುಚ್ಚಯ್ಯ’ ಎಂದು ಹೇಳುತ್ತಿದ್ದರು. ಹುಚ್ಚಯ್ಯ ಊರಿನ ಪ್ರತಿಯೊಬ್ಬರಿಗೂ ಆ ಸುದ್ದಿ ಹೇಳಿ, ‘ಯಾರ ಮುಂದೂ ಹೇಳಬೇಡ’ ಎಂದು ಹೇಳುತ್ತಿದ್ದ.

ಅವನ ಇಬ್ಬರೂ ಅಣ್ಣಂದಿರಿಗೆ ಮದುವೆಯಾಗಿತ್ತು. ಆದ್ದರಿಂದ ಇಬ್ಬರೂ ಅಣ್ಣಂದಿರು ಆಸ್ತಿ ಹಂಚಿಕೊಂಡು ಬೇರೆ ಆದರು. ಈ ಹುಚ್ಚಯ್ಯನೊಬ್ಬ ಇಬ್ಬರಲ್ಲಿಯೂ ಉಂಡಾಡಿಕೊಂಡಿರಲಿ ಎಂದುಕೊಂಡರು. ಆದರೆ ಹುಚ್ಚಯ್ಯ ಬಿಡಬೇಕಲ್ಲ-

‘ಅಣ್ಣಗಳಿರಾ, ನೀವು ಅನ್ಯಾಯ ಮಾಡುತ್ತಿದ್ದೀರಿ. ನಾನೂ ನಮ್ಮಪ್ಪನಿಗೇ ಹುಟ್ಟಿದವನು. ನನಗೂ ಪಾಲು ಬೇಕು’

– ಎಂದು ಹಟ ಹಿಡಿದ. ಇಬ್ಬರು ಅಣ್ಣಂದಿರೂ ‘ನಿನಗೆ ಏನು ಬೇಕು, ಹೇಳು ಹುಚ್ಚಯ್ಯ?’ ಎಂದರು. ಈಗ ಮಾತ್ರ ಏನು ಕೇಳಬೇಕೆಂದು ಅವನಿಗೆ ತಿಳಿಯದಾಯಿತು. ಕೊನೆಗೆ ಏನೂ ತಿಳಿಯದೆ ‘ನನಗೆ ಈ ಎತ್ತು ಬೇಕು’ಎಂದು ಹೇಳಿದ. ಅವರ ಮನೆಯಲ್ಲೊಂದು ದುಡಿಯಲಾರದ ಎತ್ತು ಇತ್ತು. ಅದನ್ನು ಸಂತೋಷದಿಂದ ಕೊಟ್ಟರು.

ಅಣ್ಣಂದಿರ ಮನೆಯಲ್ಲಿ ಊಟ ಮಾಡಿದರೂ ತಾನು ಬೇರೆ ಇದ್ದೆನೆಂದೇ ಅವನ ತರ್ಕ. ಯಾಕೆಂದರೆ ಅಂದಿನಿಂದ ತನ್ನ ಎತ್ತಿನೊಂದಿಗೆ ಹಿತ್ತಲಲ್ಲಿಯೇ ಇರತೊಡಗಿದ. ಅದರ ಮೈ ತಿಕ್ಕುವುದೇನು! ಮೇವು ತಿನ್ನಿಸುವುದೇನು! ನೀರು ಕುಡಿಸುವುದೇನು! ಒಂದು ಕೂಸಿನಂತೆ ಅದರ ರಕ್ಷಣೆ ಮಾಡುತ್ತಿದ್ದ. ಸಾಲದ್ದಕ್ಕೆ ಅದರೊಂದಿಗೆ ಮಾತುಕತೆ ಆಡುತ್ತಿದ್ದ. ಇವನು ಹೇಳಿ ಕೇಳಿದ್ದಕ್ಕೆ ಅದು ಕತ್ತು ಅಲುಗಿಸಿದರೇ ಕಿವಿಯಿಂದ ನೊಣ ಹೊಡೆದುಕೊಂಡರೆ, ಬಾಲ ಅಲುಗಿಸಿದರೆ ಅದಕ್ಕೊಂದು ಅರ್ಥ ಹಚ್ಚಿ, ಅದನ್ನೂ ತಾನೇ ಹೇಳಿಕೊಡುತ್ತಿದ್ದ. ಆ ಎತ್ತು ಮೇವು ಇಲ್ಲದ್ದಕ್ಕೆ ಇವನ ಮೈ ನೆಕ್ಕಿದರೆ, ‘ದನದಂಥ ದನಕ್ಕೂ ಏನು ಪ್ರೀತಿ!’ ಎಂದು ಹೋಗಿ ಬರುವವರಿಗೆ ಹೇಳುತ್ತಿದ್ದ. ಸಾಲದೆಂದು ಬಸವಕುಮಾರ ಎಂದು ಅದಕ್ಕೆ ಹೆಸರು ಇಟ್ಟಿದ್ದ. ಒಂದೆಂಟು ದಿನಗಳಂತೂ, ‘ನಮ್ಮ ಬಸವಕುಮಾರ ಈ ದಿನ ಯಾಕೋ ನೀರು ಕುಡಿಯಲಿಲ್ಲ’, ‘ಇಂದು ಯಾಕೋ ಬಾಲ ಅಲುಗಿಸಿಲ್ಲ’, ‘ಈ ಹೊತ್ತು ಒದರಲಿಲ್ಲ’ ಎಂದು ಅದರ ತಾಯಿಗೆ ಹಾಗೆ ಹೇಳುತ್ತಿದ್ದ. ಆ ಮುದಿ ಎತ್ತಿಗೆ ಇವನ ಭಾಷೆ ತಿಳಿಯಲಿಲ್ಲ. ಒಂದು ಸಲ ಹುಚ್ಚಯ್ಯ ಅದರ ಬಾಲ ಹಿಡಿದು, ‘ಬಸವಾ ಕುಮಾರಾ, ಬಾಲವನ್ನೇಕೆ ಅಲುಗಿಸುತ್ತಿಲ್ಲ?’ ಎನ್ನುತ್ತ ಕೈಯಾಡಿಸಿದ. ಎತ್ತು ಬಿದ್ದುಬಿಟ್ಟಿತು. ಹುಚ್ಚಯ್ಯನಿಗೆ ಆ ಕ್ಷಣವೇ ಎತ್ತಿನ ಬಗ್ಗೆ ವೈರಾಗ್ಯ ಹುಟ್ಟಿತು.

ಅಣ್ಣಂದಿರ ಬಳಿ ಎರಡು ಹಸುಗಳಿದ್ದವು. ಅಡಚಣೆಗಾಗಿ ಅವರು ಪಕ್ಕದ ಊರಿಗೆ ಹೊಡೆದುಕೊಂಡು ಹೋಗಿ ಮಾರಿ ಬಂದರು. ಹುಚ್ಚಯ್ಯ ಇದನ್ನು ನೋಡಿ ತಾನೂ ತನ್ನ ಮುದಿ ಎತ್ತನ್ನು ಮಾರಬೇಕೆಂದು ಪಕ್ಕದ ಊರಿನ ಸಂತೆಗೆ ಹೋದ. ಆದರೆ ಇವನದು ಮುದಿ ಎತ್ತು. ಯಾರು ಕೊಳ್ಳುತ್ತಾರೆ? ಸಾಯಂಕಾಲದ ತನಕ ನಿಲ್ಲಿಸಿಕೊಂಡು ಮಾರಲಿಲ್ಲವೆಂದು ವಾಪಸು ಬರುತ್ತಿದ್ದ. ದಾರಿಯಲ್ಲಿ ಒಗಿದ ಮರ ಗಾಳಿಗೆ ಅಲುಗಿ, ‘ಗಿರಕ್ ಗಿರಕ್’ ಎಂದು ಶಬ್ದ ಮಾಡಿತು. ಇವನು ಹೇಳಿ ಕೇಳಿ ಹುಚ್ಚಯ್ಯ. ಅಷ್ಟೇ ಸಾಕು,

‘ಏನು ಮರಪ್ಪ, ಈ ಎತ್ತಿಗೆ ಏನು ಬೆಲೆ ಎಂದು ಕೇಳಿದೆಯೋ?’ ಎಂದ. ಮರ ಮತ್ತೂ ಹಾಗೆ ಸಪ್ಪಳ ಮಾಡಿತು. ಹುಚ್ಚಯ್ಯ ಹೇಳಿದ. ‘ಇದಕ್ಕೆ ಕೊನೇಪಕ್ಷ ಇಪ್ಪತ್ತೈದು ರೂಪಾಯಿ ಇಲ್ಲದೆ ಕೊಡೋದಿಲ್ಲ ನೋಡು’ ಅಂದ. ಮರ ‘ಗಿರಕ್ ಗಿರಕ್’ ಎಂದು ಸಪ್ಪಳ ಮಾಡಿತು. ‘ಏನು? ಇಪ್ಪತ್ತೈದು ರೂಪಾಯಿ ಕೊಡುತ್ತೇನೆಂದೆಯಾ?’ ಮರ ‘ಗಿರಕ್’ ಎಂದಿತು. ‘ಸರಿ ಅಂದೆಯಾ? ತಗೊ ಹಾಗಾದರೆ, ನನ್ನ ರೂಪಾಯಿ ಕೊಡು’ ಎಂದ. ಮರ ‘ಗಿರಕ್ ಗಿರಕ್’ ಎಂದಿತು. ಹುಚ್ಚಯ್ಯ, ‘ಆಯ್ತು ಬಿಡು’ ಅಂದವನೇ ಹೋಗಿ ತನ್ನ ಮುದಿ ಎತ್ತನ್ನು ಆ ಮರಕ್ಕೆ ಕಟ್ಟಿಹಾಕಿದ. ಮರ ಮತ್ತೆ ‘ಗಿರಕ್ ಗಿರಕ್’ ಎಂದಿತು. ‘ಏನಂತೆ? ದುಡ್ಡ ನಾಳೆ ಕೊಡುತ್ತೀಯಾ? ಕೊಡು. ಹಾಗೇ ಆಗಲಿ’ ಎಂದು ಹೇಳಿ ಮನೆಗೆ ಹೋದ.

ಮನೆಯಲ್ಲಿ ಊಟಕ್ಕೆ ಕುಳಿತಾಗ ಅಣ್ಣಂದಿರು, ‘ನಿನ್ನ ಎತ್ತು ಎಲ್ಲಿ ಹುಚ್ಚಯ್ಯ?’ ಎಂದು ಕೇಳಿದರು.

‘ಮಾರಿ ಬಂದೆನಲ್ಲ.’

‘ಎಷ್ಟಕ್ಕೆ?’

‘ಇಪ್ಪತ್ತೈದು ರೂಪಾಯಿಗೆ.’

ತಮ್ಮ ಪರವಾಯಿಲ್ಲ. ಆ ಮುದಿ ಎತ್ತನ್ನೂ ಇಪ್ಪತ್ತೈದಕ್ಕೆ ಮಾರಿದನಲ್ಲಾ ಎಂದುಕೊಂಡರು. ‘ರೂಪಾಯಿ ಎಲ್ಲಿ?’ ಎಂದರೆ ‘ನಾಳೆ ಕೊಡುತ್ತೇನೆಂದ’ ಎಂದು ಹೇಳಿ ಊಟ ಮುಗಿಸಿ ಎದ್ದ. ಇದ್ದರೂ ಇರಬಹುದೆಂದು ಅವರೂ ಸುಮ್ಮನಾದರು.

ಮಾರನೇ ದಿನ ಹುಚ್ಚಯ್ಯ ಆ ಮರದ ಬಳಿಗೆ ಹೋದ. ಎತ್ತನ್ನು ಯಾರೋ ಬಿಚ್ಚಿಕೊಂಡು ಹೋಗಿದ್ದರು. ‘ಏನಪ್ಪಾ ಮರಪ್ಪಾ, ಕೊಡು ನನ್ನ ಹಣ’ ಅಂದ. ಮರ ಆಗೂ ‘ಗಿರಕ್ ಗಿರಕ್’ ಎಂದೇ ಧ್ವನಿ ಮಾಡಿತು. ‘ಏನಂತೆ? ನಾಳೆ ಕೊಡುವೆಯಾ? ನಾಳೆ ತಪ್ಪಿಸಬೇಡ. ಮತ್ತೆ ನಾಳೆ ಬಾ, ನಾಡಿದ್ದು ಬಾ – ಇಂಥಾದ್ದೆಲ್ಲ ವ್ಯವಹಾರವೇ ಅಲ್ಲ. ಏನೋ ಬಾಯಿಬಿಟ್ಟು ಕೇಳಿದ್ದೀಯಾ, ಇದೊಮ್ಮೆ ಆಗಲಿ’ ಅಂದುಕೊಂಡು ಮನೆಗೆ ಬಂದ. ಆ ದಿನವೂ ಅಣ್ಣಂದಿರು, ‘ಹಣ ಎಲ್ಲಿ’ ಎಂದು ಕೇಳಿದರು. ‘ಇಲ್ಲ ನಾಳೆ ಕೊಡುತ್ತಾನಂತೆ’ ಎಂದ.

‘ಹೋಗಲಿ, ಮಹಾರಾಯಾ, ಯಾರಿಗೆ ಮಾರಿದೆ ಹೇಳು.’

‘ದಾರಿಯ ಬದಿಯ ಮರಕ್ಕೆ.’

ಅಣ್ಣಂದಿರು ಇದನ್ನು ಕೇಳಿ, ‘ಎಂದಿಗೆ ಇವನಿಗೆ ಬುದ್ಧಿ ಬಂದೀತೋ!’ ಎಂದು ಬೈದರು. ‘ಪಾಪ ಬಹಳ ಒತ್ತಾಯ ಮಾಡಿದ. ಮನಸ್ಸು ಕರಗುವ ಹಾಗೆ ಕೇಳಿಕೊಂಡ. ಅದಕ್ಕೆ ಕೊಟ್ಟೆ’ ಎಂದು ಹುಚ್ಚಯ್ಯ ಹೇಳಿದ. ಅದು ಮೊದಲೇ ಮುದಿ ಎತ್ತಾದ್ದರಿಂದ ಹೊತ್ತು ಹುಗಿಯುವ ತೊಂದರೆ ತಪ್ಪಿತಲ್ಲಾ ಎಂದು ಅವರೂ ಸುಮ್ಮನಾದರು.

ಮಾರನೇ ದಿನ ಹುಚ್ಚಯ್ಯ ಕೊಡಲಿ ಹಿಡಿದುಕೊಂಡೇ ಮರದ ಬಳಿ ಬಂದ. ‘ಇಂದಾದರೂ ಹಣ ಕೊಡುತ್ತೀಯೋ ಇಲ್ಲೋ’ ಎಂದ. ಮರ ಎಂದನಂತೆ ‘ಗಿರಕ್ ಗಿರಕ್’ ಎಂದಿತು. ‘ನಿನ್ನ ಗಿರಕ್ಕೂ ಇಲ್ಲ. ಪರಕ್ಕೂ ಇಲ್ಲ. ನಾ ಕೇಳೋದಿಲ್ಲ. ನನ್ನ ಇಪ್ಪತ್ತೈದು ರೂಪಾಯಿ ಕೊಡಬೇಕು. ಇಲ್ಲಾ ಇಪ್ಪತ್ತೈದು ಸಲ ಈ ಕೊಡಲಿಯಿಂದ ಏಟು ತಿನ್ನಬೇಕು; ಏನಂತಿ?’’

ಮರ ‘ಗಿರಕ್ ಗಿರಕ್’ ಎಂದಿತು. ಹುಚ್ಚಯ್ಯ ಸಿಟ್ಟಿಗೆದ್ದು, ಒಂದು, ಎರಡು, ಮೂರು ಎಣಿಸುತ್ತ ಕೊಡಲಿಯಿಂದ ಏಟು ಹಾಕಲಾರಂಭಿಸಿದ. ಅದು ಮೊದಲೇ ಒಣಗಿದ ಮರ. ಇವನು ಹತ್ತೆಂಟು ಏಟು ಹಾಕುವುದರಲ್ಲಿ ಬಿದ್ದು ಬಿಟ್ಟಿತು. ಆದರೆ ಯಾರೋ ಕಳ್ಳರು ಕದ್ದ ಬೆಳ್ಳಿ, ಬಂಗಾರವನ್ನು ಅದರ ಪೊಟರೆಯೊಳಗೆ ಸಂಗ್ರಹಿಸಿ ಇಟ್ಟಿದ್ದರು. ಅದೀಗ ಹೊರಗೆ ರಾಶಿಯಾಗಿ ಬಿದ್ದಿತು. ಹುಚ್ಚಯ್ಯ ಅಷ್ಟಿಷ್ಟು ಕಟ್ಟಿಕೊಂಡು ಮನೆಗೆ ಓಡಿಹೋಗಿ, ಊಟಕ್ಕೆ ಕೂತ ಅಣ್ಣಂದಿರ ಮುಂದೆ ಸುರುವಿಟ್ಟ. ಅಣ್ಣಂದರಿಗೆ ಸಂತೋಷ ಆಶ್ಚರ್ಯ ಎರಡೂ ಆದವು.

‘ಎಲ್ಲಿಯದೋ ಹುಚ್ಚಯ್ಯ?’ ಎಂದರು ಅವರು.

‘ನಾನು ಹೇಳಿರಲಿಲ್ಲವೆ. ಮರಕ್ಕೆ ಎತ್ತು ಮಾರಿದ್ದೇನೆ ಅಂತ? ಅದು ರೂಪಾಯಿ ಕೊಡಲಿಲ್ಲ. ಬೆಳ್ಳಿ ಬಂಗಾರ ಕೊಟ್ಟಿತು. ಇನ್ನೂ ಅದರ ಹತ್ತಿರ ಬಹಳ ಬೆಳ್ಳಿ ಬಂಗಾರ ಬಿದ್ದಿದೆ’ ಅಂದ. ‘ನಡೆ ಹಾಗಾದರೆ’ ಎಂದು ಇಬ್ಬರೂ ಅಣ್ಣಂದಿರು ಅವನೊಂದಿಗೆ ಓಡಿ ಹೋದರು.

ಹುಚ್ಚಯ್ಯನ ಮಾತಿನಂತೆ ಅಲ್ಲಿ ಬೆಳ್ಳಿ ಬಂಗಾರದ ಹೇರಳ ರಾಶಿಯಿತ್ತು. ಅಷ್ಟನ್ನು ಬಳಿದು ಕಟ್ಟಿಕೊಂಡರು. ಹುಚ್ಚಯ್ಯನ ಮೇಲೆ ಸಣ್ಣದೊಂದು ಗಂಟು ಹೊರೆಸಿದರು. ‘ನಮಗೆ ಬೆಳ್ಳಿ ಬಂಗಾರ ಸಿಕ್ಕಿದ್ದನ್ನ ಬೇರೆಯವರಿಗೆ ಹೇಳಬೇಡ ಹುಚ್ಚಯ್ಯ?’ ಎಂದರು. ಆಗಲೆಂದ,

ಮೂವರೂ ಅವಸರದಿಂದ ಮನೆಯ ಕಡೆಗೆ ಬರುತ್ತಿರುವಾಗ ದಾರಿಯಲ್ಲಿ ಯಾವುದೋ ಊರಿಗೆ ಹೋಗಿದ್ದ ಆ ಊರಿನ ಪುರೋಹಿತರು ಸಿಕ್ಕಿದರು. ‘ಏನ್ರಯ್ಯಾ, ತಲೆಯ ಮೇಲೆ ಏನು ಹೊತ್ತುಕೊಂಡು ಹೊರಟಿದ್ದೀರಿ?’ ಅಂದರು. ಹಿರಿಯಣ್ಣ, ‘ಏನಿಲ್ಲ, ಜೋಳ, ಕಾಳು ಹೊತ್ತುಕೊಂಡು ಹೊರಟಿದ್ದೇವೆ’ ಅಂದ. ಹುಚ್ಚಯ್ಯ, ‘ಏ ಅಣ್ಣಾ, ಪುರೋಹಿತರ ಮುಂದೆಯೂ ಸುಳ್ಳು ಹೇಳೋದೆ? ಪುರೋಹಿತರೇ, ಬೆಳ್ಳಿ ಬಂಗಾರ ಹೊತ್ತುಕೊಂಡು ಹೊರಟಿದ್ದೇವೆ. ಬೇಕಾದರೆ ನೋಡಿ’ ಎಂದು ಗಂಟು ಬಿಚ್ಚಿ ಬೊಗಸೆಯಷ್ಟು ಬಂಗಾರವನ್ನು ತಮ್ಮ ಜೊಳಗೆಗೆ ಇಳಿಸಿದರು.  ಹುಚ್ಚಯ್ಯ ರೇಗಿ ‘ಭಲಾ’ ಎಂದು ಹೇಳಿ ಕೈಯಲ್ಲಿಯ ಸಲಿಕೆಯಿಂದ ಪುರೋಹಿತರ ತಲೆ ಕುಕ್ಕಿದ ಪುರೋಹಿತರು ಅಲ್ಲೇ ‘ಶಿವಾ’ ಎಂದರು. ಅಣ್ಣಂದಿರು ಮರುಗಿ ಹುಚ್ಚಯ್ಯನ ಮೇಲೆ ಸಿಟ್ಟು ಮಾಡಿ ಹೆಣವನ್ನು ಒಂದು ತಗ್ಗಿನಲ್ಲಿ ಎಸೆದು ಹೊರಟುಹೋದರು.

 

(ಚಿತ್ರ ೦೯)

 

ಆದರೆ ಅದೇ ದಿನರಾತ್ರಿ ಹುಚ್ಚಯ್ಯನಿಗೆ ಗೊತ್ತಾಗದಂತೆ ಆ ಹೆಣ, ಆ ತಗ್ಗಿನಲ್ಲೊಂದು ಸತ್ತ ಹೋತವನ್ನು ಎಸೆದು ಹೊರಟುಹೋದರು.

ಒಂದೆರಡು ದಿನ ಬಿಟ್ಟು ಪುರೋಹಿತ ಕಾಣಿಯಾಗಿದ್ದಾರೆ ಎಂದು ಜನಗಳಲ್ಲಿ ಹುಯ್ಯಲೆದ್ದಿತು. ಹುಚ್ಚಯ್ಯ, ‘ಹೌದು, ಹೌದು, ಅವರನ್ನೇ ನಾನೇ ಸಲಿಕೆಯಿಂದ ಹೊಡೆದು ಕೊಂದು ತಗ್ಗಿನಲ್ಲಿ ಹಾಕಿ ಬಂದೆ’ ಎಂದ. ಜನ ‘ಎಲ್ಲಿ ನೊಡೋಣ’ ಎಂದು ಬಂದರು. ಹುಚ್ಚಯ್ಯ ಪುರೋಹಿತರನ್ನು ಎಸೆದ ತಗ್ಗಿಗೆ ಜನರನ್ನು ಕರೆದುತಂದು,

‘ಹೌದು.’

‘ಪುರೋಹಿತರ ತಲೆಯ ಮೇಲೆ ಎರಡು ಕೊಂಬಿದ್ದುವಲ್ಲ?’ ಅಂದರ ಇವನು ಮೊದಲೇ ಹುಚ್ಚನೆಂದುಕೊಂಡು ಬಂದು ನೋಡಿದರೆ ಅಲ್ಲಿ ಸತ್ತ ಹೋತವಿತ್ತು. ‘ಆಯಿತು ಹುಚ್ಚಯ್ಯನಿಗೊಂದು ಬುದ್ಧಿ ಇಲ್ಲವೆಂದರೆ ಅವನ ಮಾತು ನಂಬಿ ನಾವೂ ಬುದ್ಧಿ ಕಳೆದುಕೊಂಡೆವು’ ಎಂದು ಅವರೆಲ್ಲ ಹಳಹಳಸಿ ತಿರುಗಿ ಹೋದರು. ಮುಂದೆ ಹುಚ್ಚಯ್ಯ ತಮಗೆ ಮರ ಬೆಳ್ಳಿ ಬಂಗಾರ ಕೊಟ್ಟಿತೆಂದು ಹೇಳಿದರೂ ಯಾರೂ ಅವನ ಮಾತನ್ನು ನಂಬಲಿಲ್ಲ. ಅಣ್ಣಂದಿರು ಹುಚ್ಚಯ್ಯನೊಂದಿಗೆ ಸುಖವಾಗಿದ್ದರು.

ಅವರಲ್ಲಿ. ನಾವಿಲ್ಲಿ.

* * *