ಒಂದು ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಅದರಲ್ಲಿ ಬಹಳ ದಿನಗಳಿಂದ ಒಂದು ಕಾಗೆ ವಾಸಮಾಡಿಕೊಂಡಿತ್ತು. ಮರದ ಕೆಳಗೆ ವಾಸ ಮಾಡಲಿಕ್ಕೆ ಹಿಂಡಿನಿಂದ ತಪ್ಪಿಸಿಕೊಂಡ ಒಂದು ಜಿಂಕೆಯೂ ಬಂತು. ಕೆಲವು ದಿನಗಳಲ್ಲಿಯೇ ಕಾಗೆಗೂ ಜಿಂಕೆಗೂ ಗೆಳೆತನ ಬೆಳೆಯಿತು. ಬೆಳಿಗ್ಗೆ ಎದ್ದರೆ ಒಂದರ ಮುಖ ಒಂದು ನೋಡುತ್ತಿದ್ದವು. ಪರಸ್ಪರ ನಮಸ್ಕಾರ ಮಾಡುತ್ತಿದ್ದವು. ಆಹಾರಕ್ಕಾಗಿ ಬೇರೆ ಕಡೆಗೆ ಹೋಗುತ್ತಿದ್ದವು. ರಾತ್ರಿ ಮತ್ತೆ ಕೂಡಿ ಸುಖ ದುಃಖ ಮಾತಾಡಿಕೊಳ್ಳುತ್ತಿದ್ದವು. ಹೀಗೆ ಎಷ್ಟೊ ದಿವಸ ನಡೆದುಬಂತು.

ಜಿಂಕೆ ಮೇಯುತ್ತಿದ್ದಾಗ ಆ ಕಾಡಿನಲ್ಲಿದ್ದ ಒಂದು ನರಿ ಅದನ್ನು ನೋಡಿತು. ಜಿಂಕೆಯ ದಷ್ಟಪುಷ್ಟವಾದ ದೇಹ ನೋಡಿ ನರಿಯ ಬಾಯಲ್ಲಿ ನೀರು ಬಂತು. ಏನಾದರೂ ಮಾಡಿ ಈ ಜಿಂಕೆಯ ಮಾಂಸ ತಿನ್ನಬೇಕೆಂದು ಹೊಂಚುಹಾಕಿತು. ಕೊನೆಗೆ ಒಂದು ಉಪಾಯ ಮಾಡಿತು. ಒಂದು ದಿನ ಜಿಂಕೆ ಮೇಯುವಾಗ ನರಿ ಅದರ ಹತ್ತಿರ ಹೋಗಿ ಸುಮ್ಮನೇ ಕಣಿರು ಸುರಸಲಾರಂಭಿಸಿತು. ಜಿಂಕೆಗೂ ಕೆಡುಕೆನಿಸಿ, ‘ಯಾಕೆ ಅಳುತ್ತೀ ನರಿಯಣ್ಣ, ಅಂಥದ್ದೇನಾಯಿತು?’ ಎಂದು ಕೇಳಿತು.

‘ಏನು ಹೇಳಲಿ? ಎಷ್ಟೊಂದು ಜನ ಅಣ್ಣ ತಮ್ಮಂದಿರಿದ್ದೆವು. ಎಲ್ಲರನ್ನೂ ಕಳೆದುಕೊಂಡು ಈಗ ಏಕಾಕಿಯಾಗಿದೆನೆ. ಬೇಜಾರಾಗಿದೆ’ ಎಂದಿತು ನರಿ. ಜಿಂಕೆಗೆ ಈ ಮಾತನ್ನು ಕೇಳಿ ಮರುಕ ಉಂಟಾಯಿತು. ‘ಆದದ್ದು ಆಯ್ತಲ್ಲ; ನನ್ನ ಜೊತೆ ಇದ್ದುಬಿಡು. ಇಬ್ಬರೂ ಕೂಡಿ ಇರೋಣ’ ಎಂದು ಹೇಳಿತು. ಆ ದಿನ ರಾತ್ರಿ ಜಿಂಕೆ ನರಿಯನ್ನು ತನ್ನ ಜೊತೆಗೆ ಆಲದ ಮರಕ್ಕೆ ಕರೆದು ತಂದಿತು. ಇವರಿಬ್ಬರ ಸ್ನೇಹ ನೋಡಿ ಕಾಗೆಗೆ ಚಿಂತೆಯಾಯಿತು. ‘ಇದೆಂಥ ಹುಚ್ಚತನ ಈ ಜಿಂಕೆಯದು’ ಎಂದುಕೊಂಡು ಸುಮ್ಮನಾಯಿತು. ನರಿ ಇಲ್ಲದ ಸಂದರ್ಭ ನೋಡಿ ಹೇಳಿಯೂ ಬಿಟ್ಟಿತು: ‘ಜಿಂಕೆ, ಎಂಥ ಹುಚ್ಚಿ ನೀನು. ನರಿಯ ಸ್ನೇಹ ಒಳ್ಳೆಯದಲ್ಲ. ಇದು ಅಡವಿಯ ಸಣ್ಣ ಇರುವೆಗೂ ಗೊತ್ತು. ನಿನಗಿಷ್ಟೂ ತಿಳಿಯಬಾರದೆ?’

‘ಅದನ್ನು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ ಕಾಗಣ್ಣ. ಪಾಪ, ಅದೂ ಒಂದು ಪ್ರಾಣಿ. ಬಂಧುಬಳಗ ಕಳೆದುಕೊಂಡಿದ್ದಾನೆ. ಹಿಂದೆ ಮುಂದೆ ತನಗೆ ಯಾರೂ ಇಲ್ಲ ಅಂತ ನನ್ನ ಮುಂದೆ ಅತ್ತ, ನನ್ನ ಮನಸ್ಸೂ ಕರಗಿತು ಸ್ನೇಹಿತರಾಗಿದ್ದೇವೆ. ಇದರಲ್ಲಿ ತಪ್ಪೇನಿದೆ?’

ಆಗ ಏನು ಹೇಳಬೇಕೆಂದು ಕಾಗೆಗೆ ಹೊಳೆಯಲಿಲ್ಲ. ಆದರೆ ಜಿಂಕೆಯ ಬಗ್ಗೆ ಚಿಂತೆಯಾಯಿತು. ನರಿ, ಜಿಂಕೆಯ ಸ್ನೇಹ ದಿನದಿನಕ್ಕೆ ಹೆಚ್ಚಾಯಿತು. ಬರುಬರುತ್ತ, ಅವು ಕೂಡಿಯೇ ಮೇಯಲಿಕ್ಕೆ ಹೋಗುತ್ತಿದ್ದವು.

ಹೀಗಿರುತ್ತ ನರಿ ಒಂದು ದಿನ, ‘ಜಿಂಕೆ, ಇಲ್ಲೇ ಸಮೀಪದಲ್ಲಿ ಒಂದು ಸೌತೇಕಾಯಿ ಹೊಲವಿದೆ. ಸುತ್ತೂ ಹಸಿರಾದ ಗರಿ ಗರಿ ಹುಲ್ಲಿದೆ. ಹೋಗೋಣ ಬಾ’ ಎಂದಿತು. ಎರಡೂ ಕೂಡಿ ಹೋದವು. ನರಿ ನಿಜ ಹೇಳಿತ್ತು. ಅಲ್ಲೊಂದು ಸೌತೆಕಾಯಿ ತೋಟವಿತ್ತು. ನರಿ ತನಗೆ ಬೇಕಾದಷ್ಟು ಸೌತೇಕಾಯಿ ತಿಂದಿತು. ಜಿಂಕೆ ಹೊಟ್ಟೆ ತುಂಬಾ ಹುಲ್ಲು ಮೇಯಿತು. ಅವೆರಡೂ ಈಗ ಪ್ರತಿದಿನ ಅದೇ ಹೊಲಕ್ಕೆ ಮೇಯಲು ಹೋಗುತ್ತಿದ್ದವು. ನರಿ ಜಿಂಕೆಯೊಂದಿಗೆ ಹೋಗುತ್ತಿದ್ದರೂ ಮರುದಿನದಿಂದ ಸೌತೇಕಾಯಿ ತಿನ್ನದೆ ಬೇರೆಲ್ಲಿಯೋ ಹೋಗಿ ಹೊಟ್ಟೆ ತುಂಬಿಸಿಕೊಂಡು, ಬರುವಾಗ ಜಿಂಕೆಯೊಂದಿಗೆ ಸೇರುತ್ತಿತ್ತು. ಜಿಂಕೆ ಸ್ವಚ್ಛಂದವಾಗಿ ಆ ಹೊಲದ ಸುತ್ತಲಿನ ಹುಲ್ಲಲ್ಲಿ ಮೇದು ಬರುತ್ತಿತ್ತು. ಹೀಗೆ ಕೆಲ ದಿನ ಸಾಗಿತು. ಹೊಲದ ಒಡೆಯನಿಗೆ ಹೆಜ್ಜೆ ಗುರುತು ಹತ್ತಿ ಪ್ರತಿದಿನ ಇಲ್ಲೊಂದು ಜಿಂಕೆ ಮೇಯಲಿಕ್ಕೆ ಬರುತ್ತಿದೆ – ಎಂದು ತಿಳಿಯಿತು. ಆತ ಒಂದು ದಿನ ಜಿಂಕೆಯನ್ನು ಹಿಡಿಯಲು ಬಲೆ ಹಾಕಿದ. ಎಂದಿನಂತೆ ಜಿಗಿಯುತ್ತ ಬಂದ ಜಿಂಕೆ ಬಲೆಯಲ್ಲಿ ಸಿಕ್ಕಿಬಿತ್ತು.

ಜಿಂಕೆ ಬಲೆಯಲ್ಲಿ ಬಿದ್ದು ಒದ್ದಾಡುವುದನ್ನು ನರಿ ಮರೆಯಲ್ಲಿ ನಿಂತು ನೋಡಿತು. ಇಷ್ಟು ದಿನ ಹೊಂಚಿದ್ದಕ್ಕೆ ಇಂದು ಪ್ರತಿಫಲ ಸಿಕ್ಕಿತೆಂದು ಸಂತೋಷಪಟ್ಟಿತು. ಜಿಂಕೆಯ ಹತ್ತಿರ ಹೋಗಿ ಸಂತಾಪಗೊಂಡವರಂತೆ ನಟಿಸುತ್ತ ಹೀಗಾಯಿತಲ್ಲಾ ಎಂದು ಕೈ ಕೈ ಹೊಸಕಿತು. ಜಿಂಕೆ ಒದ್ದಾಡುತ್ತ, ‘ಸ್ನೇಹಿತನೇ, ಸರಿಯಾದ ಸಮಯಕ್ಕೆ ಬಂದೆ, ಬೇಗನೇ ಈ ಬಲೆಯನ್ನು ಕಡಿದು ಹಾಕಿ ನನ್ನನ್ನು ಪಾರುಮಾಡು’ ಎಂದಿತು.

‘ಅದೇನೋ ನಿಜ. ಆದರೆ ಈ ದಿನ ನನ್ನದೊಂದು ವ್ರತ ಇದೆ. ನಾನು ಏನನ್ನೂ ಬಾಯಿಂದ ಕಚ್ಚುವ ಹಾಗಿಲ್ಲ. ನಾಳೆ ಬೆಳಗಾಗಲಿ. ಈ ಬಲೆ ಕಡಿದು ಹಾಕಿ ನಿನ್ನನ್ನು ಪಾರುಮಾಡುತ್ತೇನೆ-’ ಎಂದು ಹೇಳಿ ನರಿ ಅಲ್ಲಿಂದ ಕಾಲ್ದೆಗೆಯಿತು. ಪಕ್ಕದ ಒಂದು ಪೊದೆಯಲ್ಲಿ ಅಡಗಿಕೊಂಡು ಜಿಂಕೆ ಒದ್ದಾಡಿ ಸಾಯುವುದನ್ನೇ ಕಾಯಲಾರಂಭಿಸಿತು.

ಆ ದಿನ ರಾತ್ರಿ ಜಿಂಕೆ ಬಾರದಿದ್ದನ್ನು ಕಂಡು ಕಾಗೆಗೆ ಕಳವಳವಾಯಿತು. ಬೆಳಗಿನ ತನಕ ಅದಕ್ಕೆ ನಿದ್ರೆಯೇ ಬರಲಿಲ್ಲ. ಬೆಳಿಗ್ಗೆ ಎದ್ದೊಡನೆಯೇ ಅದು ಜಿಂಕೆಯನ್ನು ಹುಡುಕುತ್ತ ಹೋಯಿತು. ಕೊನೆಗೆ ಜಿಂಕೆ ಬಲೆಯಲ್ಲಿ ಸಿಕ್ಕಿಬಿದ್ದು ಕಾಣಿಸಿತು. ಅಲ್ಲೇ ಪಕ್ಕದಲ್ಲಿ ಪೊರೆಯ ಮರೆಗೆ ನರಿ ಹೊಂಚಿ ಅಡಗಿ ಕುಳಿತದ್ದೂ ಕಂಡಿತು. ಕಾಗೆ ಜಿಂಕೆಯ ಬಳಿ ಬಂದು ‘ಯಾಕೆ ಹೀಗಾಯಿತು?’ ಎನ್ನುತ್ತ ಕುಳಿತುಕೊಂಡಿತು. ‘ಏನು ಹೇಳಲಿ, ಅಂದೇ ನಿನ್ನ ಮಾತನ್ನು ಕೇಳಿ ಈ ಠಕ್ಕ ನರಿಯ ಸಹವಾಸ ಬಿಟ್ಟಿದ್ದರೆ ನನಗೆ ಈ ಗತಿ ಬರುತ್ತಿರಲಿಲ್ಲ. ಈಗೇನು ಮಾಡೋದು?’ ಎಂದು ಜಿಂಕೆ ತನ್ನ ಸಂಕಟ ತೋಡಿಕೊಂಡಿತು.

‘ಧೈರ್ಯಗೆಡಬೇಡ. ಆ ನರಿಗೂ ಯೋಗ್ಯ ಪ್ರತಿಫಲ ಸಿಕ್ಕೀತು. ಇಲ್ಲೇ ಪೊದೆಯ ಮರೆಗೆ ಹೊಂಚಿಕೊಂಡು ಕೂತಿದ್ದಾನೆ.’

‘ಅದು ಹೋಗಲಿ ಮಹಾರಾಯ. ನಾನು ಈಗ ಪಾರಾಗುವ ಬಗೆ ಹೇಗೆ?’

‘ಹೀಗೆ: ಇನ್ನೇನು ರೈತ ಬರುವ ಹೊತ್ತಾಯಿತು. ನೀನು ಹೊಟ್ಟೆ ಉಬ್ಬಿಸಿ, ಕಾಲು ಸೆಟಿಸಿ ಸತ್ತವರ ಹಾಗೆ ಬಿದ್ದುಬಿಡು. ನೀನು ಹೇಗೂ ಸತ್ತಿದ್ದೀಯಲ್ಲಾ ಅಂತ ತಿಳಿದು ರೈತ ನಿನ್ನ ಬಲೆ ಬಿಚ್ಚುತ್ತಾನೆ. ಅದೇ ಸಮಯಕ್ಕೆ ನಾನು ಕಾಕಾ ಎಂದು ಕೂಗುತ್ತೇನೆ. ತಕ್ಷಣ ಎದ್ದವನೇ ಓಡಿಬಿಡು.’-ಎಂದು ಹೇಳಿ ಪಕ್ಕದ ಗಿಡದ ಮೇಲೆ ಹಾರಿ ಕೆಳಗೆ ಕೂಡುಕೊಂಡಿತು.

ಜಿಂಕೆ ಸತ್ತ ಹಾಗೆ ಬಿದ್ದುಕೊಂಡಿತು. ರೈತ ಬಂದು ನೋಡಿ ಅದು ಸತ್ತಿದೆಯೆಂದೇ ತಿಳಿದು ಬಲೆ ಬಿಚ್ಚಿದ ಕೂಡಲೇ ಕಾಗೆ ಕಾಕಾ ಎಂದು ಕೂಗಿತು. ಜಿಂಕೆ ತಕ್ಷಣವೇ ಎದ್ದು ಓಡಿತು. ಅದು ಓಡುವುದನ್ನು ನೋಡಿದ ರೈತ ‘ಎಲಾ ಕಳ್ಳ ಜಿಂಕೆ!’ ಎಂದವನೇ ಕೈಯಲ್ಲಿಯ ಕೋಲನ್ನು ಅದರ ಕಡೆಗೆ ಬೀಸಿ ಎಸೆದ. ಅದು ನಿರಾಶೆಯಿಂದ ಪೊದೆಯ ಮರೆಯಿಂದ ಹೊರಗೆ ಬರುತ್ತಿದ್ದ ನರಿಗೆ ತಾಗಿ ಅದು ಅಲ್ಲಿಯೇ ಪ್ರಾಣಬಿಟ್ಟಿತು.

ಗೆಳೆಯರಿಬ್ಬರೂ ಆಮೇಲೆ ಸುಖದಿಂದ ಇದ್ದರು. ನಾವಿಲ್ಲಿ ಹೀಗಿದ್ದೇವೆ.

* * *