ಒಬ್ಬ ರಾಜನಿದ್ದ. ಎಷ್ಟು ಕಾಲವಾದರೂ ಅವನಿಗೆ ಮಕ್ಕಳಾಗಲಿಲ್ಲ. ಒಮ್ಮೆ ಒಬ್ಬ ಋಷಿ ಅವನ ಅರಮನೆಗೆ ಬಂದ. ರಾಜ ಅವನ್ನು ಭಕ್ತಿಯಿಂದ ಸತ್ಕರಿಸಿ, “ನನಗೆ ಮಕ್ಕಳಾಗುವವೋ ಇಲ್ಲವೋ ಹೇಳಬೇಕು’ ಎಂದು ಕೈ ಮುಗಿದು ಕೇಳಿಕೊಂಡ. ಆಗ ಋಷಿ,

‘ಇಷ್ಟರಲ್ಲೇ ರಾಜ್ಯ ನಿನ್ನ ಕೈ ತಪ್ಪಿ ಹೋಗಿ ನಿನಗೆ ವನವಾಸ ಪ್ರಾಪ್ತವಾಗುತ್ತದೆ. ಅಲ್ಲಿಯೇ ನಿನಗೆ ಮಕ್ಕಳಾಗುತ್ತಾರೆ. ಮುಂದೆ ಮಕ್ಕಳು ದೊಡ್ಡವರಾಗಿ ಅವರಿಂದ ಮತ್ತೆ ರಾಜ್ಯ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿ ಹೋದ. ‘ರಾಜ್ಯ ಹೋದರೂ ಚಿಂತೆಯಿಲ್ಲ; ಮಕ್ಕಳಾಗುತ್ತಾರಲ್ಲ’ ಎಂದು ರಾಜ ಸಂತೋಷದಿಂದಲೇ ಇದ್ದ.

ಕೆಲವು ದಿನಗಳಲ್ಲಿಯೇ ವೈರಿ ರಾಜರು ಇವನ ರಾಜ್ಯದ ಮೇಲೆ ದಂಡೆತ್ತಿ ಬಂದರು. ರಾಜನಿಗೆ ಅವರನ್ನು ಎದುರಿಸಲು ಸಾಧ್ಯವಾಗಲಿಲ್ಲ. ಉಟ್ಟ ಬಟ್ಟೆ ಬಿಟ್ಟು ಬೇರೇನೂ ತೆಗೆದುಕೊಳ್ಳದೆ ಹೆಂಡತಿಯೊಂದಿಗೆ ಆತ ವನವಾಸಕ್ಕೆ ಹೋದ. ಅಲ್ಲಿ ಋಷಿಯ ಮಾತಿನಂತೆ ಇಬ್ಬರು ಗಂಡು ಮಕ್ಕಳಾದರು. ದೊಡ್ಡವನಿಗೆ ರಾಮ ಎಂದೂ ಸಣ್ಣವನಿಗೆ ಭೀಮ ಎಂದೂ ಹೆಸರಿಟ್ಟ. ವಿದ್ಯಾ ಬುದ್ಧಿ ಕಲಿಸಿದ. ಮಕ್ಕಳು ಬೆಳೆದು ದೊಡ್ಡವರಾಗಿ ತಂದೆ ತಾಯಿ ಕಷ್ಟಪಡುವುದನ್ನು ನೋಡಿದರು. ಬೇರೆ ನಾಡಿಗೆ ಹೋಗಿ ಹಣ ಸಂಪಾದಿಸಬೇಕೆಂದು ಯೋಚಿಸಿ ತಂದೆ ತಾಯಿಗಳ ಆಶೀರ್ವಾದ ಪಡೆದು ಹೊರಟರು.

ಅಡವಿಯಲ್ಲಿ ಹೋಗುತ್ತಿದ್ದಾಗ ದಣಿವಾಗಿ ಒಂದು ಮಾವಿನ ಮರದಡಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆ ಮರದಲ್ಲಿ ಒಂದೇ ಒಂದು ಹಣ್ಣು ಇತ್ತು. ಆ ಮರವನ್ನು ಹತ್ತಿ ಅದನ್ನು ಹರಿಯಬೇಕೆನ್ನುವಷ್ಟರಲ್ಲಿ ಅದು ತಾನಾಗೇ ಕೆಳಗೆ ಬಿತ್ತು. ತೆಗೆದುಕೊಂಡರು. ಅಷ್ಟರಲ್ಲಿ ಅಲ್ಲಿಗೊಬ್ಬ ಸನ್ಯಾಸಿ ಬಂದು, ‘ಈ ಮಾವಿನ ಮರದಲ್ಲೊಂದು ಹಣ್ಣಿತ್ತು; ಕಂಡಿರಾ?’ ಎಂದ. ಇಬ್ಬರೂ ‘ಇಲ್ಲ’ ಅಂದರು. ಸನ್ಯಾಸಿ, ‘ಅಯ್ಯೋ’ ನಾನು ಹನ್ನೆರಡು ವರ್ಷಗಳಿಂದ ಕುಳಿತು ಕಾದದ್ದು ವ್ಯರ್ಥವಾಯಿತು’ ಎಂದು ದುಃಖಿಸಲಾರಂಭಿಸಿದ. ಇಬ್ಬರಿಗೂ ಆಶ್ಚರ್ಯವಾಯಿತು. ‘ಆ ಹಣ್ಣಿನಲ್ಲಿ ಅಂಥಾದ್ದೇನಿದೆ?’ ಎಂದು ಕೇಳಿದರು.

‘ಅದು ಸಾಮಾನ್ಯ ಹಣ್ಣಲ್ಲ. ಹನ್ನೆರಡು ವರುಷಕ್ಕೆ ಒಮ್ಮೆ ಮಾತ್ರ ಕಾಣಿಸಿಕೊಳ್ಳುವ ಹಣ್ಣು. ಆ ಹಣ್ಣು ತಿಂದವ ರಾಜನಾಗುತ್ತಾನೆ. ಒಳಗಿನ ಗೊರಟು ತಿಂದವನು ನಕ್ಕಾಗಲೆಲ್ಲಾ ಮುತ್ತು, ರತ್ನ ಸುರಿಯುತ್ತವೆ’ ಎಂದು ಸನ್ಯಾಸಿ ಹೇಳಿ ದುಃಖಿಸುತ್ತ ತನ್ನ ಆಶ್ರಮಕ್ಕೆ ಹೋದ. ಅಣ್ಣ ತಮ್ಮ ಇಬ್ಬರೂ ನಡೆಯುತ್ತ ಮುಂದೆ ಹೋದರು. ಮುಂದೊಂದು ಸರೋವರ ಬಂತು. ಇಬ್ಬರೂ ನೀರಲ್ಲಿ ಕೈಕಾಲು ಮುಖ ತೊಳೆದುಕೊಂಡು ತಮ್ಮ ಬಳಿಯ ಮಾವಿನಹಣ್ಣು ತೆಗೆದರು. ಹಣ್ಣನ್ನು ಅಣ್ಣ ತಿಂದ. ಒಳಗಿನ ಗೊರಟನ್ನು ತಮ್ಮ ತಿಂದ. ದಣಿವಾರಿಸಿಕೊಂಡು ಮುಂದುವರಿದರು.

ಮುಂದೊಂದು ಪಟ್ಟಣ ಸಿಕ್ಕಿತು. ಆ ಪಟ್ಟಣದ ರಾಜನಿಗೆ ಮಕ್ಕಳಿರಲಿಲ್ಲ. ವಯಸ್ಸಾಗಿತ್ತು. ಆದ್ದರಿಂದ ಪಟ್ಟದಾನೆಯ ಸೊಂಡಿಲಿಗೆ ಮಾಲೆ ಹಾಕಿ, ಅದು ಯಾರ ಕೊರಳಿಗೆ ಮಾಲೆ ಹಾಕುವುದೋ ಅವರಿಗೆ ಪಟ್ಟಗಟ್ಟಬೇಕೆಂದು ಆನೆ ಬಿಟ್ಟಿದ್ದರು. ಅದು ಅವರಿವರನ್ನು ಸರಿಸಿ ರಾಮನ ಕೊರಳಿಗೇ ಮಾಲೆ ಹಾಕಿತು. ವೈಭವದಿಂದ ಅವನಿಗೆ ಪಟ್ಟಗಟ್ಟಿದರು.

ಸಣ್ಣವನಾದ ಭೀಮ ಮಾತ್ರ ಅಣ್ಣನೊಂದಿಗೆ ಇರಲಿಕ್ಕೆ ಒಪ್ಪಲಿಲ್ಲ. ತನ್ನ ಅದೃಷ್ಟವನ್ನು ತಾನೇ ಹುಡುಕುವೆನೆಂದು ಹೇಳಿ ಮುಂದೆ ಹೋದ. ಒಂದು ಪಟ್ಟಣ ಸಿಕ್ಕಿತು. ಆ ಪಟ್ಟಣದ ಒಬ್ಬಳು ನರ್ತಕಿಯ ರೂಪಕ್ಕೆ ಮಾರುಹೋಗಿ ಅವಳಲ್ಲಿಯೇ ಇದ್ದ. ಅವಳು ಈತನನ್ನು ನೃತ್ಯ ಸಂಗೀತಗಳಿಂದ ತೃಪ್ತಿಪಡಿಸಿ ನಗಿಸಿದರು. ಆಗ ಅವನ ಬಾಯಿಂದ ಮುತ್ತು ರತ್ನ ಬಿದ್ದವು. ನರ್ತಕಿ ಓಡಿ ಹೋಗಿ ತನ್ನ ತಾಯಿಗೆ ಈ ಸುದ್ದಿ ಹೇಳಿದಳು. ತಾಯಿ ಮಗಳು ಇಬ್ಬರೂ ಕೂಡಿ ಇವನ ಕೈಕಾಲು ಒತ್ತುತ್ತ ಸೇವೆ ಮಾಡತೊಡಗಿದರು. ಅವನ ಮನಸ್ಸನ್ನು ಸಂತೋಷಪಡಿಸಿ, ‘ನಿಮ್ಮ ಬಾಯಿಂದ ಮುತ್ತು ರತ್ನ ಬಿದ್ದುವಲ್ಲ, ಹೇಗೆ? ಹೇಳಲೇಬೇಕು’ ಎಂದು ಒತ್ತಾಯ ಮಾಡಿದರು. ಕಪಟವರಿಯದ ಭೀಮ ತಾನೊಂದು ಅಪೂರ್ವದ ಮಾವಿನ ಹಣ್ಣಿನ ಗೊರಟು ತಿಂದುದಕ್ಕೆ ಹೀಗಾಯಿತೆಂದು ಹೇಳಿಬಿಟ್ಟ. ಆ ಮುದುಕಿ ಇವನಿಗೆ ಗೊತ್ತಾಗದಂತೆ ವಾಂತಿಯಾಗುವ ಮದ್ದು ಕೊಟ್ಟಳು. ಭೀಮ ವಾಂತಿ ಮಾಡಿದ. ತಿಂದ ಗೊರಟು ಅವನಿಗೆ ಗೊತ್ತಿಲ್ಲದಂತೆ ಹೊರಗೆ ಬಿತ್ತು. ಅವಳು ಗೊರಟನ್ನು ತಾನೇ ನುಂಗಿ ಭೀಮನ್ನು ಮನೆಯಿಂದ ಹೊರಕ್ಕೆ ದೂಡಿದಳು.

ಪಶ್ಚಾತ್ತಾಪ ಪಡುತ್ತ ಭೀಮ ಊರ ಹೊರಗೆ ಒಂದು ಮರದ ಬುಡದಲ್ಲಿ ಮಲಗಿದ. ಅಲ್ಲಿಗೆ ಒಬ್ಬ ಗುರು ತನ್ನ ನಾಲ್ಕು ಜನ ಶಿಷ್ಯರೊಂದಿಗೆ ಬಂದ. ಅವನು ಶಿಷ್ಯರನ್ನು ಕರೆದು, ‘ಶಿಷ್ಯರೇ, ನನ್ನ ಕಾಲ ಮುಗಿಯಿತು. ಇಷ್ಟು ದಿನ ನೀವು ನನ್ನ ಸೇವೆ ಮಾಡಿದಿರಿ. ನನ್ನ ಹತ್ತಿರ ಇದೊಂದು ದಂಡ, ಒಂದು ಚೀಲ, ಒಂದು ಜೊತೆ ಪಾದುಕೆ ಹಾಗೂ ಟೋಪಿ ಇವೆ. ದಂಡಕ್ಕೆ ಇಂಥವರನ್ನು ಹೊಡೆ ಎಂದು ಆಜ್ಞೆ ಕೊಟ್ಟರೆ ಸಾಕು, ಅವರನ್ನು ಹೊಡೆಯುತ್ತದೆ. ನೀವು ಬಯಸಿದ್ದನ್ನು ಚೀಲ ಕೊಡುತ್ತದೆ. ಪಾದುಕೆ ಧರಿಸಿ ಇಂಥಲ್ಲಿ ಹೋಗು ಎಂದರೆ ಅಂಥಲ್ಲಿಗೆ ಹೋಗುತ್ತದೆ. ಈ ಟೊಪ್ಪಿಗೆ ಹಾಕಿ ಇಂಥಾ ಪಟ್ಟಣ ನಿರ್ಮಾಣವಾಗಲೆಂದು ಹೇಳಿದರೆ ಮರುಕ್ಷಣವೇ ಅಂಥಾ ಪಟ್ಟಣ ಸಿದ್ಧವಾಗಿರುತ್ತದೆ. ತಲಾ ಒಂದರಂತೆ ಇವುಗಳನ್ನು ತಕ್ಕೊಂಡು ಸುಖದಿಂದ ಇರಿ’ ಎಂದು ಹೇಳಿ ಆ ಗುರು ಸತ್ತ. ಆ ವಸ್ತುಗಳನ್ನು ಅಲ್ಲೇ ಬಿಟ್ಟು ಅವನ ಶಿಷ್ಯರು ಗುರುಗಳನ್ನು ಸಮಾಧಿ ಮಾಡಲು ಹೋದರು.

ಇದನ್ನೆಲ್ಲ ಮಲಗಿಕೊಂಡು ನೋಡುತ್ತಿದ್ದ ಭೀಮ ಶಿಷ್ಯರು ಅತ್ತ ಹೋದೊಡನೆ ಆ ದಂಡ, ಚೀಲ, ಪಾದುಕೆ ಹಾಗೂ ಟೋಪಿಗಳನ್ನು ತಗೊಂಡು ಪರಾರಿಯಾದ. ಬೇರೊಂದು ಸ್ಥಳಕ್ಕೆ ಹೋಗಿ ಚೀಲವನ್ನು ಬೇಡಿ, ಬೇಕು ಬೇಕಾದ ತಿಂಡಿ ತಿನಿಸು ತಿಂದ. ಆಮೇಲೆ ಪಾದುಕೆ ಹತ್ತಿ ಮತ್ತೆ ಆ ನರ್ತಕಿಯ ಮನೆಗೇ ಹಿಂದಿರುಗಿದ.

ನರ್ತಕಿ ಹಾಗೂ ಅವಳ ತಾಯಿ ಮತ್ತೆ ಸುಳ್ಳು ಪ್ರೀತಿ ತೋರಿಸಿದರು. ನಂಬಿಕೆ ಹುಟ್ಟುವಂತೆ ಅವನ ಸೇವೆ ಮಾಡಿದರು. ಟೋಪಿಯ ಸಹಾಯದಿಂದ ಒಂದು ಸುಂದರವಾದ ಪಟ್ಟಣ ನಿರ್ಮಿಸಿದರು. ಅಲ್ಲಿ ಭೀಮ ನರ್ತಕಿಯನ್ನೆ ರಾಣಿಯಾಗಿರಿಸಿಕೊಂಡು ಸುಖದಿಂದ ಇದ್ದ. ಅಡಿಗೆ ಮಾಡಬೇಕಿರಲಿಲ್ಲ. ಯಾಕೆಂದರೆ ಬೇಡಿದ್ದನ್ನು ಚೀಲ ಕೊಡುತ್ತಿತ್ತು. ವಾಹನ ಬೇಕಿರಲಿಲ್ಲ. ಪಾದುಕೆಗಳು ಬೇಕಾದಲ್ಲಿಗೆ ಅವನನ್ನು ಒಯ್ಯುತ್ತಿದ್ದವು. ವೈರಿಗಳ ಭಯವೂ ಇರಲಿಲ್ಲ. ಯಾಕೆಂದರೆ ಯಾರು ಬಂದರೂ ದಂಡಿಸಲು ದಂಡವಿತ್ತು. ಈ ವಿಚಿತ್ರ ನೋಡಿ ಮತ್ತೆ ನರ್ತಕಿ ಹಾಗೂ ಅವಳ ತಾಯಿಗೆ ದುರಾಸೆ ಹುಟ್ಟಿತು. ಮತ್ತೆ ಮತ್ತೆ ಭೀಮನ ಸೇವೆ ಮಾಡಿದರು. ಮೈ ಕೈ ತಿಕ್ಕಿದರು. ಹೆಜ್ಜೆಗೊಮ್ಮೆ ನೀನೇ ದೊಡ್ಡವನೆಂದರು. ಕೊನೆಗೊಮ್ಮೆ ಈ ವೈಭವ ನಿನಗೆ ಹೇಗೆ ಸಿಕ್ಕಿತೆಂದು ಕೇಳಿದರು. ಭೀಮ ಈ ಸಲವೂ ಮೋಸ ಹೋದ. ದಂಡ, ಚೀಲ, ಪಾದುಕೆ, ಟೋಪಿಗಳನ್ನು ತೋರಿಸಿದ. ಅವುಗಳ ಮಹಿಮೆಯನ್ನು ಬಣ್ಣಿಸಿದ.

ಒಂದು ದಿನ ಆ ನರ್ತಕಿ ಭೀಮನ ಬಳಿ ಬಂದು, “ನನ್ನದೊಂದು ಹರಕೆಯಿದೆ. ಸಮುದ್ರದ ನಡುಗಡ್ಡೆಯಲ್ಲಿ ಒಂದು ದೇವಸ್ಥಾನವಿದೆ. ಅಲ್ಲಿಯ ದೇವರಿಗೆ ಪೂಜೆ ಮಾಡಿ ಬರಬೇಕು; ಹೋಗೋಣ ಬನ್ನಿ’ ಎಂದಳು. ಆಗಲೆಂದು ತಾಯಿ ಮಗಳನ್ನು ಪಾದುಕೆಯ ಮೇಲೆ ಹತ್ತಿಸಿಕೊಂಡು ನಡುಗಡ್ಡೆಗೆ ಹೋದ.

ನರ್ತಕಿಯ ತಾಯಿ ಪೂಜಾ ಸಾಮಗ್ರಿಗಳನ್ನು ಅಣಿ ಮಾಡಿದಳು. ಆಮೇಲೆ, ‘ನೀವು ಮಡಿ ಮಾಡಿಕೊಂಡು ಹೂ ಪತ್ರೆ ತನ್ನಿ’ ಎಂದು ಭೀಮನಿಗೆ ಹೇಳಿದಳು. ಭೀಮ ಹಾಗೆಯೇ ಆಗಲೆಂದು ಬಟ್ಟೆ ಕಳಚಿಟ್ಟು ಸ್ನಾನ ಮಾಡಲು ಹೋದ. ಇದೇ ಅವಕಾಶವೆಂದುಕೊಂಡ ಅವರು ದಂಡ, ಚೀಲ, ಟೋಪಿಗಳನ್ನು ತಗೊಂಡು ಪಾದುಕೆಗಳ ಮೇಲೆ ಹತ್ತಿ, ಭೀಮನನ್ನು ಅಲ್ಲಿಯೇ ಬಿಟ್ಟು ಊರಿಗೆ ಬಂದರು.

ಮಡಿಯಾಗಿ ಹೂ ಪತ್ರೆ ತರಲು ಹೋದ ಭೀಮ ತಿರುಗಿ ಬಂದು ನೋಡಿದರೆ ಅಲ್ಲಿ ಯಾರೂ ಇರಲಿಲ್ಲ. ತನ್ನ ವಸ್ತುಗಳೂ ಮಾಯವಾಗಿದ್ದವು. ಈ ಸಲವೂ ಮೋಸ ಮಾಡಿದರಲ್ಲಾ ಎಂದು ಮತ್ತೆ ಪಶ್ಚಾತ್ತಾಪ ಪಟ್ಟು ಇನ್ನೇನು ಮಾಡುವುದು? ದೇವರು ಮಾಡಿದಂತಾಗಲೆಂದು ಅಲ್ಲೇ ತಿರುಗಾಡುತ್ತಿದ್ದ. ಹೀಗೆ ಅಡ್ಡಾಡುತ್ತಿದ್ದಾಗ ಒಂದು ಹಣ್ಣಿನ ತೋಟ ಸಿಕ್ಕಿತು. ಇವನಿಗೆ ಹಸಿವಾಗಿತ್ತು. ಒಂದು ಹಣ್ಣಿನ ಮರಕ್ಕೆ ಕೈ ಹಾಕುತ್ತಿರುವಾಗ ಒಬ್ಬ ದೇವಕನ್ಯೆ ಕಾಣಿಸಿಕೊಂಡು, ‘ಹಾ! ತಾಳು, ತಾಳು’ ಎಂದು ಹೇಳಿದಳು. ಯಾಕೆಂದು ಕೇಳಿದ. ‘ಈ ಮರದಲ್ಲಿಯ ಹಣ್ಣು ತಿಂದರೆ ತಿಂದವನು ಕೋತಿಯಾಗುತ್ತಾನೆ. ಅಗೋ ಅ ಮರದ ಹಣ್ಣನ್ನು ತಿಂದವರು ಹಂದಿಯಾಗುತ್ತಾರೆ. ಅಗೋ ಆ ಇನ್ನೊಂದು ಮರವಿದೆಯಲ್ಲ, ಅದರ ಹಣ್ಣು ತಿಂದರೆ, ತಿಂದವರು ಹಕ್ಕಿಯಾಗುತ್ತಾರೆ ಇದೊಂದು ವಿಚಿತ್ರ’ ಎಂದಳು.

‘ನೀನು ಯಾರು?’ – ಎಂದು ಭೀಮ ಕೇಳಿದ. ‘ನಾನು ಈ ತೋಟ ಕಾಯುವ ದೇವಕನ್ಯೆ’ ಎಂದಳು. ಇಬ್ಬರಿಗೂ ಪರಸ್ಪರ ಪ್ರೀತಿಯಾಯಿತು. ಇಬ್ಬರೂ ಅಲ್ಲಿಯೇ ಇದ್ದ ಗುಡಿಗೆ ಹೋಗಿ ಗಾಂಧರ್ವ ವಿವಾಹವಾದರು. ಭೀಮ ಅಲ್ಲಿ ಕೆಲ ದಿನ ಇದ್ದು ಇನ್ನು ನಮ್ಮ ರಾಜ್ಯಕ್ಕೆ ಹೋಗೋಣವೆಂದು ಹೇಳಿದ. ಅವಳೂ ಒಪ್ಪಿದಳು. ಬರುವಾಗ (ತಿಂದರೆ) ಹಂದಿ ಮತ್ತು ಕೋತಿಯಾಗುವ ಹಣ್ಣುಗಳನ್ನು ಕಿತ್ತುಕೊಂಡು ಬಂದರು.

ಆತ ತನ್ನ ಅಣ್ಣನ ಹತ್ತಿರ ಹೋಗಿ ಹೆಂಡತಿಯನ್ನು ಅವರ ಮನೆಯಲ್ಲಿ ಬಿಟ್ಟ. ಆ ಕ್ಷಣವೇ ನರ್ತಕಿಯ ಮನೆಗೆ ಹೋದ. ಈ ಸಲ ಇನ್ನೇನು ತಂದಿದ್ದಾನು ಎಂಬ ಆಶೆಯಿಂದ ನರ್ತಕಿ ಕೂಡಲೇ ಬಾಗಿಲು ತೆರೆದಳು. ‘ಹಣ್ಣ ತಂದಿದ್ದೇನೆ ತಿನ್ನೋಣ ಬನ್ನಿ’ ಎಂದು ಹೇಳಿ ಕರೆದ. ಇಬ್ಬರಿಗೂ ಒಂದೊಂದು ಹಣ್ಣು ಕೊಟ್ಟ. ಈ ಸಲ ಅವರೇ ಮೋಸ ಹೋದರು. ಹಣ್ಣು ತಿಂದೊಡನೆ ನರ್ತಕಿ ಕೋತಿಯಾದಳು. ಅವಳ ತಾಯಿ ಹಂದಿಯಾದಳು. ಹಂದಿಗೆ ವಾಂತಿಯಾಗುವ ಮದ್ದು ಕೊಟ್ಟು ಮಾವಿನ ಗೊರಟು ಕಕ್ಕಿಸಿದ. ಆಮೇಲೆ ಅವಳನ್ನು ಹೊರಗಟ್ಟಿದ. ಕೋತಿ ಗಿಡ ಮರ ಹಾರುತ್ತ ಓಡಿಹೋಯಿತು. ಅವರ ಮನೆಯಲ್ಲಿದ್ದ ದಂಡ, ಚೀಲ, ಪಾದುಕೆ ಹಾಗೂ ಟೋಪಿಗಳನ್ನು ತೆಗೆದುಕೊಂಡು ಭೀಮ ತನ್ನ ಅಣ್ಣನ ಹತ್ತಿರ ಬಂದ.

ಇಬ್ಬರೂ ಕೂಡಿ ತಮ್ಮ ತಂದೆ ಕಳೆದುಕೊಂಡಿದ್ದ ರಾಜ್ಯವನ್ನು ಗೆದ್ದರು. ಒಂದು ರಾಜ್ಯಕ್ಕೆ ರಾಮನೂ ಇನ್ನೊಂದಕ್ಕೆ ಭೀಮನೂ ರಾಜರಾಗಿ, ವನವಾಸದಲ್ಲಿದ್ದ ತಂದೆ ತಾಯಿಗಳನ್ನು ಕರೆಸಿಕೊಂಡು, ಅವರ ಸೇವೆ ಮಾಡುತ್ತ ಕಾಲ ಕಳೆದರು.

ಅವರು ಅಲ್ಲಿ ಸುಖದಿಂದ ಇದ್ದರು. ನಾವಿಲ್ಲಿ ಹೀಗಿದ್ದೇವೆ.

* * *