ಒಂದು ಅಡವಿಯಲ್ಲಿ ಒಬ್ಬ ಬೇಡರ ಹುಡುಗನಿದ್ದ. ಅವನು ಗಿಳಿಗಳನ್ನು ಹಿಡಿದು ಪಟ್ಟಣದಲ್ಲಿ ಮಾರಿ ಉಪಜೀವನ ಸಾಗಿಸುತ್ತಿದ್ದ. ಒಂದು ಸಲ ಅವನ ಬಲೆಯಲ್ಲಿ ಒಂದು ಅಪರೂಪದ ಗಿಳಿ ಸಿಕ್ಕಿಬಿತ್ತು. ಇನ್ನೇನು, ಆ ಗಿಳಿಯನ್ನು ಹಿಡಿಯಬೇಕೆನ್ನುವಷ್ಟರಲ್ಲಿ ಆ ಗಿಳಿ ಮನುಷ್ಯರಂತೆ ಮಾತಾಡಿತು: “ಹುಡುಗಾ ಹುಡುಗಾ ನನ್ನನ್ನು ಹಿಡೀಬೇಡ. ನಿನಗೆ ಮುಂದೆ ಒಳ್ಳೆಯದಾದೀತು.’’ ಆಗ ಆ ಹುಡುಗ ಹೇಳಿದ. “ಅದೇನೋ ಸರಿ. ಆದರೆ ನಿನ್ನನ್ನು ಬಿಟ್ಟರೆ ಈ ದಿನ ನಾನು ಉಪವಾಸ ಇರಬೇಕಾಗುತ್ತದಲ್ಲಾ-”

“ಹಾಗೋ! ನಿನ್ನ ಈ ಬಲೆ ಇನ್ನೊಂದು ಗಳಿಗೆ ಹೀಗೇ ಇರಲಿ. ಇಷ್ಟರಲ್ಲೇ ಇಲ್ಲಿಗೊಂದು ಪಂಚವರ್ಣದ ಗಿಳಿ ಬರುತ್ತದೆ. ಅದನ್ನೊಯ್ದು ರಾಜನಿಗೆ ಕೊಡು. ರಾಜ ನಿನಗೆ ಬೇಕಾದಷ್ಟು ಮರ್ಯಾದೆ ಮಾಡುತ್ತಾನೆ.’’

ಈ ಮಾತು ಕೇಳಿ ಹುಡುಗ ಗಿಳಿಯನ್ನು ಬಿಟ್ಟ. ಒಂದರ್ಧ ಗಳಿಗೆ ಬಲೆ ಹಾಕಿ ಹಾಗೆಯೇ ಕೂತ. ಅಷ್ಟರಲ್ಲಿ ಪಂಚವರ್ಣದ ಗಿಳಿ ಹಾರಿ ಬಂದು ಬಲೆಯಲ್ಲಿ ಸಿಕ್ಕಿಬಿತ್ತು. ಹುಡುಗನಿಗೆ ಸಂತೋಷವಾಯಿತು. ಅದನ್ನು ಮಾರುವುದಕ್ಕಾಗಿ ರಾಜನ ಬಳಿಗೆ ಹೋದ. ರಾಜನಿಗೂ ಆ ಗಿಳಿಯನ್ನು ನೋಡಿ ಆನಂದವಾಯಿತು. ಕೂಡಲೇ ಆ ಹುಡುಗ ಕೇಳಿದಷ್ಟು ಬೆಲೆ ತೆತ್ತು, ಮೇಲೆ ಬಹುಮಾನವನ್ನೂ ಕೊಟ್ಟ. ಪಂಚವರ್ಣದ ಗಿಳಿಗಾಗಿ ಒಂದು ಬಂಗಾರದ ಪಂಜರ ಮಾಡಿಸಿದ. ದಿನದಿನಕ್ಕೆ ಆ ಗಿಳಿಯು ಮಾತು ಕೂಡ ಕಲಿತಿತ್ತು. ಆಗಂತೂ ರಾಜನ ಆನಂದಕ್ಕೆ ಪಾರವೇ ಇಲ್ಲದಾಯಿತು. ಸಮಯ ಸಿಕ್ಕಾಗಲೆಲ್ಲ ಆತ ಅದರೊಂದಿಗೆ ಸರಸದಲ್ಲಿ ಕಾಲಕಳೆಯುತ್ತಿದ್ದ.

ಆ ರಾಜನಿಗೊಬ್ಬ ಧೂರ್ತ ಮಂತ್ರಿ ಇದ್ದ. ಒಬ್ಬ ಯಃಕಶ್ಚಿತ್ ಬೇಡರ ಹುಡುಗ ಹೇರಳ ಹಣ ಒಯ್ದದ್ದು, ಅವನು ಕೊಟ್ಟ ಗಿಳಿಯೊಂದಿಗೆ ರಾಜ ಹಗಲೂ ರಾತ್ರಿ ಚಕ್ಕಂದವಾಡುವುದು ಮಂತ್ರಿಯ ಮನಸ್ಸಿಗೆ ಹಿಡಿಸಲಿಲ್ಲ. ರಾಜನಂತೂ ದಿನ ಬಿಟ್ಟು ದಿನ ಆ ಬೇಡರ ಹುಡುಗನ ಯೋಗಕ್ಷೇಮ ವಿಚಾರಿಸುತ್ತಿದ್ದ. ಏನು ಮಾಡಿದರೆ ರಾಜ ಆ ಹುಡುಗನನ್ನು ಮರೆತಾನು? ಅವನನ್ನು ಕೊಲ್ಲಿಸುವುದೂ ಸಾಧ್ಯವಿರಲಿಲ್ಲ. ಕೊನೆಗೊಂದು ದಿನ ಸಂದರ್ಭ ನೋಡಿಕೊಂಡು ಮಂತ್ರಿ ರಾಜನ ಕಿವಿಯಲ್ಲಿ ಊದಿದ! “ರಾಜರೇ, ಇಂಥ ಪಂಚವರ್ಣದ ಗಿಳಿಗೆ ಬರೀ ಒಂದು ಬಂಗಾರದ ಪಂಜರವೆಂದರೆ ನಿಮಗೆ ಶೋಭೆ ತರುವ ಮಾತಲ್ಲ. ಗಿಳಿಗೂ ಶೋಭೆಯಲ್ಲ. ಇದಕ್ಕೊಂದು ದಂತದ ಮಂಟಪ ಕಟ್ಟಿ ಅದರಲ್ಲಿಟ್ಟರೆ ಚಂದ. ಅದರಿಂದ ನಿಮ್ಮ ಕೀರ್ತಿಯೂ ಹೆಚ್ಚುತ್ತದೆ.’’

‘‘ಅದೇನೋ ನಿಜ. ಒಂದೋ ಎರಡೋ ದಂತ ಸಿಕ್ಕಾವು. ಆದರೆ ಒಂದು ಮಂಟಪಕ್ಕೆ ಆಗುವಷ್ಟು ದಂತ ಎಲ್ಲಿ ಸಿಕ್ಕಾವು?’’

“ಯಾಕೆ ಯೋಚನೆ ಮಾಡುತ್ತೀರಿ? ಆ ಬೇಡರ ಹುಡುಗ ಇದ್ದಾನಲ್ಲಾ. ಆತ ಮಹಾ ಗಟ್ಟಿಗ. ಅವನಿಗೆ ಈ ಕೆಲಸ ವಹಿಸಿದರೆ ಖಂಡಿತಾ ತರುತ್ತಾನೆ.’’

ರಾಜನಿಗೆ ಸರಿಯೆನ್ನಿಸಿತು. ಮಂತ್ರಿಯ ಮೂಲಕ ಹುಡುಗನಿಗೆ ಆಜ್ಞೆ ಕಳಿಸಿದ. ಮಂತ್ರಿ ಹುಡುಗನ ಬಳಿ ಹೋಗಿ,

“ನೋಡೋ ಹುಡುಗ. ಪಂಚವರ್ಣದ ಗಿಳಿಗೆ ಒಂದು ದಂತದ ಮಂಟಪ ಕಟ್ಟಿಸಬೇಕಾಗಿದೆ.  ಒಂದು ಹುಣ್ಣಿಮೆ, ಒಂದು ಅಮವಾಸ್ಯೆ ಮುಗಿಯುವುದರೊಳಗೆ ಮಂಟಪಕ್ಕೆ ಸಾಕಾಗುವಷ್ಟು ದಂತ ತರಬೇಕು. ತಂದುಕೊಟ್ಟರೆ ನೀನು ಬದುಕಿದೆ, ಇಲ್ಲಾ ಸತ್ತೆಯೆಂದು ತಿಳಿ’’ ಎಂದು ಹೇಳಿದ. ಹುಡುಗ ಕೈ ಮುಗಿದು,

“ಸ್ವಾಮಿ, ಒಂದೋ ಎರಡೋ ದಂತ ತಂದೇನು, ಮಂಟಪಕ್ಕೆ ಸಾಕಾಗುವಷ್ಟು ದಂತ ಎಲ್ಲಿಂದ ತರಲಿ?’’ ಎಂದ.

“ಎಲ್ಲಿಂದಾದರೂ ಸರಿ ನನಗೆ ಅದೆಲ್ಲ ಗೊತ್ತಿಲ್ಲ. ರಾಜರ ಆಜ್ಞೆ ಹೇಳುವುದಷ್ಟೇ ನನ್ನ ಕೆಲಸ’’ ಎಂದು ಹೇಳಿ ಸರ್ರನೆ ಮಂತ್ರಿ ಬಂದುಬಿಟ್ಟ.

ಬೇಡರ ಹುಡುಗ ತಲೆಯ ಮೇಲೆ ಕೈಹೊತ್ತು ಕುಳಿತ. ಯಾಕಾದರೂ ಆ ಪಂಚವರ್ಣದ ಗಿಳಿಯನ್ನು ದೊರೆಗೆ ಕೊಟ್ಟೆನೊ, ಇನ್ನು ತನಗೆ ಒಂದು ತಿಂಗಳಷ್ಟೆ ಆಯುಷ್ಯವೆಂದುಕೊಂಡ. ಅಷ್ಟರಲ್ಲಿ ಇವನ ಕೈಯಿಂದ ಮೊದಲು ಪಾರಾಗಿ ಹೋದ ಗಿಳಿ ಎಲ್ಲಿಂದಲೋ ಹಾರಿ ಬಂದು ಇವನ ಮುಂಗೈ ಮೇಲೆಯೇ ಕುಳಿತು,

“ಯಾಕೆ ಚಿಂತೆ ಮಾಡುತ್ತಿ?’’ ಎಂದಿತು.

“ನನ್ನ ಕಥೆ ಏನು ಹೇಳಲಿ? ಮೊದಲು ಗಿಳಿ ಮಾರಿ ಉಪಜೀವನ ಸಾಗಿಸುತ್ತ ಸುಖದಿಂದದ್ದೆ. ಅಷ್ಟರಲ್ಲಿ ಆ ಪಂಚವರ್ಣದ ಗಿಳಿಯನ್ನು ನೀನು ತಂದುಕೊಟ್ಟೆ. ಅದನ್ನು ರಾಜರಿಗೆ ಮಾರಿ ಸುಖದಿಂದ ಇರೋಣ ಅಂದರೆ, ಇಂದು ರಾಜರೇ ಆಜ್ಞೆ ಕೊಟ್ಟಿದ್ದಾರೆ. ಒಂದು ಹುಣ್ಣಿಮೆ ಒಂದು ಅಮಾವಾಸ್ಯೆ ಮುಗಿಯುವುದರೊಳಗೆ ಒಂದು ಮಂಟಪಕ್ಕಾಗುವಷ್ಟು ದಂತ ತರಬೇಕು – ಅಂತ. ಅಷ್ಟೊಂದು ದಂತವನ್ನು ಎಲ್ಲಿಂದ ತರಿಲಿ? ಆಗುವುದಿಲ್ಲ ಎಂದರೆ ಕೊಲ್ಲುತ್ತಾರೆ.’’

“ಚಿಂತೆ ಬಿಡು ಹುಡುಗಾ, ಪೂರ್ವದಿಕ್ಕಿಗೆ ಹೋಗು. ಅಲ್ಲೊಂದು ಕಾಡಿದೆ. ಕಾಡಿನ ಮಧ್ಯೆ ಒಂದು ಕೆರೆಯಿದೆ. ಕಾಡಿನ ಆನೆಗಳೆಲ್ಲ ಮೇದು ನೀರು ಕುಡಿಯಲು ಅಲ್ಲಿಗೇ ಬರುತ್ತವೆ. ಅವುಗಳಲ್ಲೊಂದು ಮುದಿ ಆನೆ ಇದೆ. ಅದೇ ಗಜರಾಜ. ಅದರ ಕಾಲು ಹಿಡಿ. ನಿನ್ನ ಕೆಲಸವಾಗುತ್ತದೆ. ಹೋಗು’’ ಎಂದಿತು ಆ ಗಿಳಿ.

ಮರುದಿನ ಹುಡುಗ ಪೂರ್ವದಿಕ್ಕಿಗೆ ಪ್ರಯಾಣ ಮಾಡಿದ. ಗಿಳಿ ಹೇಳಿದಂತ ಕಾಡು ಸಿಕ್ಕಿತು. ಕಾಡಿನಲ್ಲಿದ್ದ ಕೆರೆ ಸಿಕ್ಕಿತು. ಮಧ್ಯಾಹ್ನದ ಹೊತ್ತಿಗೆ ಆನೆಗಳು ಮೇದು ಬಂದು ನೀರಲ್ಲಿ ಚೆಲ್ಲಾಟವಾಡಿದವು. ಇಳಿ ಹೊತ್ತಾದ ಮೇಲೆ ಅವೆಲ್ಲ ಎದ್ದು ಮತ್ತೆ ಮೇಯಲು ಹೊರಟವು. ಎಲ್ಲವೂ ಮುಂದೆ ಹೋಗಿ ಹಿಂದೆ ಮುದಿಯ ಗಜರಾಜ ಒಂದೇ ಉಳಿಯಿತು. ಹುಡುಗ ಹೋಗಿ ಅದರ ಕಾಲು ಹಿಡಿದು “ಗಜರಾಜ ಕಾಪಾಡು’’ ಎಂದ. ಗಜರಾಜ “ತಮ್ಮಾ, ಯಾರು ನೀರು? ಯಾಕೆ ಕಾಲುಹಿಡಿದೆ?’’ ಎಂದು ಕೇಳಿತು. ಹುಡುಗ ತನ್ನ ಸಮಾಚಾರವನ್ನೆಲ್ಲ ಹೇಳಿದ. ತಾನು ಬಂದ ಕಾರಣ ತಿಳಿಸಿ ಕಾಪಾಡಬೇಕೆಂದು ಕೈ ಮುಗಿದ. ಅದಕ್ಕೆ ಗಜರಾಜ,

“ನೋಡು ತಮ್ಮಾ, ಈ ಕಾಡಿನಲ್ಲೊಂದು ಸಿಂಹ ಇದೆ. ಅದು ದಿನಾಲು ನಮ್ಮ ಹಿಂದಿನ ಒಂದೊಂದು ಆನೆ ಕೊಲ್ಲುತ್ತಿದೆ. ಅದರ ಕಾಟದಿಂದ ನಮ್ಮನ್ನು ಪಾರುಮಾಡು; ದಂತ ಕೊಡುತ್ತೇನೆ’’ ಎಂದಿತು.

ಹುಡುಗನಿಗೆ ಏನು ಮಾಡಬೇಕೆಂದು ತಿಳಿಯದಾಯ್ತು. ನಿಂತು ನಿಂತು ನೀರಡಿಕೆಯಾಯಿತು. ನೀರು ಕುಡಿಯಬೇಕೆಂದು ಕೆರೆಗೆ ಹೋದ. ನೀರಲ್ಲಿ ಮೂಡಿದ ತನ್ನ ಪ್ರತಿಬಿಂಬ ನೋಡಿದೊಡನೆ ಅವನಿಗೆ ಒಂದು ಉಪಾಯ ಹೊಳೆಯಿತು. ಊರಿಗೆ ಹೋಗಿ ದೊಡ್ಡ ಎರಡು ಕನ್ನಡಿಗಳನ್ನು ಮಧ್ಯೆ ಸ್ಥಳಬಿಟ್ಟು ಎದುರು ಬದುರಾಗಿಟ್ಟ. ಪಕ್ಕದಲ್ಲಿ ಹಾಡುತ್ತ ಕುಳಿತ.

ಮನುಷ್ಯರ ವಾಸನೆ ಹಿಡಿದು ಸಿಂಹ ಗರ್ಜಿಸುತ್ತ ಬಂತು. ಹುಡುಗ ಹೆದರದೆ ಹಾಡುತ್ತ ಕುಳಿತಿದ್ದ. ಸಿಂಹಕ್ಕೆ ಆಶ್ಚರ್ಯವಾಯಿತು.

“ಯಾಕೋ ಸೊಕ್ಕಿನ ಹುಡುಗಾ, ನನ್ನನ್ನು ನೋಡಿ ನಾ-ನೀ ಎಂಬಂಥ ವೀರಾಧಿವೀರರೂ ಗಡಗಡ ನಡುಗುತ್ತಾರೆ. ನಿನಗೆ ಹೆದರಿಕೆಯೇ ಇಲ್ಲವೇನು?’’ ಎಂದು ಕೇಳಿತು.

ಹುಡುಗ ಹೆದರದೆ ಹೇಳಿದ –

“ನಿನ್ನಂಥಾ ಸಾವಿರಾರು ಸಿಂಹಗಳನ್ನು ಹಿಡಿದು ಪಂಜರದಲ್ಲಿಟ್ಟವ ನಾನು. ನಾನು ಯಾಕೆ ಹೆದರಲಿ?’’

ಸಿಂಹಕ್ಕೆ ಸಿಟ್ಟು ಬಂತು. ಅಡವಿಗೆ ಅಡವಿಯೇ ನಡುಗುವ ಹಾಗೆ ಗರ್ಜನೆ ಮಾಡಿತು.

“ಸುಳ್ಳು ಹೇಳಿ ನನ್ನಿಂದ ಪಾರಾದೇನೆಂದು ಭಾವಿಸಿದೆಯೇನೋ ಹುಚ್ಚು ಹುಡುಗಾ?’’

“ಸುಳ್ಳು ಯಾಕೆ? ಇಲ್ಲೇ ಇವೆ. ಬೇಕಾದರೆ ಬಂದು ನೋಡಬಹುದಲ್ಲ.’’

“ನಿನ್ನ ಆಯುಷ್ಯ ತೀರಿತೆಂದು ತಿಳಿ’’ ಎನ್ನುತ್ತ ಸಿಂಹ ಬಂದು ಎರಡೂ ಕನ್ನಡಿಗಳ ಮಧ್ಯೆ ನಿಂತು ನೋಡಿತು. ಎರಡೂ ಕನ್ನಡಿಗಳಲ್ಲಿ ಅಸಂಖ್ಯ ಸಿಂಹಗಳ ಬಿಂಬ ಮೂಡಿ ಇದನ್ನೇ ನೋಡುತ್ತಿದ್ದವು. ಈಗ ಮಾತ್ರ ಸಿಂಹದ ಜಂಘಾಬಲ ಉಡುಗಿ ಹೋಯಿತು. ಸತ್ತೇನೋ ಬದುಕಿದೆನೋ ಎಂದು ಸಿಂಹ ತಿರುಗಿ ಕೂಡ ನೋಡದೆ ಆ ಕಾಡನ್ನು ಬಿಟ್ಟು ಬೇರೆಲ್ಲಿಗೋ ಓಡಿಹೋಯಿತು.

ಸಿಂಹದ ಗುಡುಗಾಟ ಕೇಳಿ ಆನೆಗಳೆಲ್ಲಾ ಗುಂಪುಗೂಡಿದ್ದವು. ಸಿಂಹ ಓಡಿಹೋದುದನ್ನು ನೋಡಿ ಸಂತೋಷದಿಂದ ಕುಣಿದಾಡಿದವು. ಗಜರಾಜ ಜಾಣತನ ಹೊಗಳಿತು. ಈವರೆಗೆ ಸಿಂಹ ಆನೆಗಳನ್ನು ತಿಂದು ತಿಂದು ಗವಿಯಲ್ಲಿ ದಂತದ ರಾಶಿ ಹಾಕಿತ್ತು. ಗಜರಾಜ ಅದನ್ನು ತೋರಿಸಿ ದೊಡ್ಡ ದೊಡ್ಡ ಹೊರೆ ಕಟ್ಟಿ ನಾಲ್ಕೈದು ಆನೆಗಳ ಮೇಲೆ ಹೇರಿ ಹುಡುಗನೊಂದಿಗೆ ಕಳಿಸಿಕೊಟ್ಟಿತು.

ದಂತಹೊತ್ತ ಆನೆಗಳೊಂದಿಗೆ ಬೇಡರ ಹುಡುಗ ಬಂದು ರಾಜನೆದುರಿಗೆ ಹಾಜರಾದ. ರಾಜನಿಗೆ ಸಂತೋಷವೂ ಮಂತ್ರಿಗೆ ಹೊಟ್ಟೆಕಿಚ್ಚೂ ಆಯಿತು. ರಾಜ ಆ ಹುಡುಗನನ್ನು ಅನೇಕ ರೀತಿಯಿಂದ ಸನ್ಮಾನಿಸಿದ. ಅವನನ್ನು ಗಜಪತಿಯನ್ನಾಗಿ ನಿಯಮಿಸಿಕೊಂಡ. ಚತುರರಾದ ಶಿಲ್ಪಿಗಳಿಂದ ದಂತದ ಮಂಟಪ ಕಟ್ಟಿಸಿದ. ಅದರಲ್ಲಿ ಅ ಪಂಚವರ್ಣದ ಗಿಳಿಯನ್ನು ಬಿಟ್ಟರು. ಆದರೆ ಮಂತ್ರಿಯ ಲೆಕ್ಕಾಚಾರವೆಲ್ಲ ತಲೆಕೆಳಗಾಗಿತ್ತು. ಮಂಟಪಕ್ಕಾಗುವಷ್ಟು ದಂತ ತರುವುದೇನು ಸಾಮಾನ್ಯವೇ? ತರಲಾರದೆ ಹುಡುಗ ಶಿಕ್ಷೆ ಅನುಭವಿಸುತ್ತಾನೆಂದು ಅವನ ಎಣಿಕೆಯಾಗಿತ್ತು. ಆದರೆ ಆ ಹುಡುಗ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದ. ಈ ಬೇಡನನ್ನು ಏನಾದರೂ ಮಾಡಿ ಮುಗಿಸಲೇಬೇಕೆಂದು ಮಂತ್ರಿ ಮತ್ತೆ ಯುಕ್ತಿ ಹುಡುಕಲಾರಂಭಿಸಿದ.

ರಾಜ ಪಂಚವರ್ಣ ಗಿಳಿಯೊಂದಿಗೆ ಮಾತಾಡುತ್ತ ಸಂತೋಷದಿಂದ ಇದ್ದ ಸಮಯ ನೋಡಿದಾಗ ಆ ಮಂತ್ರಿಯ ತಲೆಯಲ್ಲಿ ದುರಾಲೋಚನೆ ಹೊಳೆಯಿತು.

“ರಾಜರೇ, ಇಷ್ಟೊಂದು ಚಂದ ಮಾತಾಡುವ ಗಿಳಿ ಹಾಡುವುದಿಲ್ಲ ಎಂದರೇನರ್ಥ?’’

“ಬಹುಶಃ ಇದಕ್ಕೆ ಹಾಡಲಿಕ್ಕೆ ಬರುವುದಿಲ್ಲವೇನೋ.’’

“ಗಿಳಿಗೆ ಹಾಡಲು ಬರುವುದಿಲ್ಲವೆಂದರೆ ಹೇಗೆ ನಂಬಲಾದೀತು? ಮೊದಲು ಸಾಕಿದವರು ಮುಂದೆ ಬಂದರೆ ಹಾಡು ಮರೆತ ಹಕ್ಕಿಯೂ ಹಾಡುತ್ತದೆಂದು ಹಿರಿಯರು ಹೇಳುತ್ತಾರೆ. ಮೊದಲು ಸಾಕಿದವರನ್ನು ಕರೆಸಿದರೆ ಗೊತ್ತಾದೀತು.’’

ರಾಜನಿಗೆ ಚಿಂತೆಯಾಯಿತು.

“ನಿಜ, ಇದನ್ನು ಮೊದಲು ಸಾಕಿದದವರು ಯಾರೆಂದು ಗೊತ್ತಿಲ್ಲವಲ್ಲ.’’

“ನಮ್ಮ ಗಜಪತಿಗೆ, ಅಂದರೆ ಅದೇ ಆ ಬೇಡರ ಹುಡುಗನಿಗೆ ಇದು ತಿಳಿದಿರಲೇಬೇಕು.’’

ರಾಜನಿಗೆ ಹೌದು ಎನಿಸಿತು. ಮಂತ್ರಿಯ ಮೂಲಕ ಬೇಡರ ಹುಡುಗನಿಗೆ ಮತ್ತೆ ಆಜ್ಞೆ ಕಳುಹಿಸಿದ. ಮಂತ್ರಿ ಆ ಹುಡುಗನ ಹತ್ತಿರ ಹೋಗಿ –

“ನೋಡಪ್ಪ, ಒಂದೇ ಹುಣ್ಣಿಮೆ, ಒಂದು ಅಮಾವಾಸ್ಯೆ ಮುಗಿಯುವುದರೊಳಗೆ ಆ ಪಂಚವರ್ಣದ ಗಿಳಿಯನ್ನು ಮೊದಲು ಯಾರು ಸಾಕಿದ್ದರೋ, ಅವರನ್ನು ಕರೆತರಬೇಕು. ಕರೆದು ತಂದರೆ ಬದುಕಿದೆ. ಇಲ್ಲದಿದ್ದರೆ ಸತ್ತೆಯೆಂದು ತಿಳಿ’’ ಎಂದು ಹೇಳಿದ. ಹುಡುಗ ತಬ್ಬಿಬ್ಬಾದ.

“ಸ್ವಾಮೀ, ನಾನದನ್ನು ತಂದದ್ದು ಕಾಡಿನಿಂದ, ಮೊದಲು ಸಾಕಿದವರು ಯಾರೆಂದು ನನಗೆ ತಿಳಿಯದು.’’

“ಅದೆಲ್ಲ ನನಗೆ ಗೊತ್ತಿಲ್ಲ. ರಾಜರ ಆಜ್ಞೆ ತಿಳಿಸುವುದಷ್ಟೇ ನನ್ನ ಕೆಲಸ’’ ಎಂದು ಹೇಳಿ ಮಂತ್ರಿ ಹೋಗಿಯೇ ಬಿಟ್ಟ.

ಹುಡುಗ ಚಿಂತೆ ಮಾಡುತ್ತ ತನ್ನ ಮನೆಯ ಹೊಸ್ತಿಲ ಮೇಲೆ ಕುಳಿತುಕೊಂಡ. ಹಿಂದೊಂದು ಸಲ ಹೇಗೋ ಪಾರದದ್ದಾಯ್ತು. ಈಗೇನು ಮಾಡುವುದು? ಇಂದಿಗೆ ಈ ನೆಲದ ಋಣ ತೀರಿತೆಂದು ಚಿಂತಿಸುತ್ತಿದ್ದಾಗ ಮತ್ತೆ ಹಿಂದಿನ ಗಿಳಿಯೇ ಹಾರಿ ಬಂದು ಇವನ ತೊಡೆಯ ಮೇಲೆ ಕುಳಿತುಕೊಂಡಿತು.

‘ಏನು ಚಿಂತೆ?’ ಎಂದು ಕೇಳಿತು.

‘ಏನಂತ ಹೇಳಲಿ? ಆ ಪಂಚವರ್ಣದ ಗಿಳಿಯನ್ನು ಮೊದಲು ಯಾರು ಸಾಕಿದ್ದರೋ ಅವರನ್ನು ಕರೆದು ತರಬೇಕೆಂದು ರಾಜರ ಆಜ್ಞೆಯಾಗಿದೆ. ಒಂದು ತಿಂಗಳಲ್ಲಿ ಕರೆತರದಿದ್ದರೆ ನನ್ನನ್ನು ಮುಗಿಸುತ್ತಾರಂತೆ. ಏನು ಮಾಡಲಿ?’ ಅಂದ.

‘ಹೀಗೋ? ಹಾಗಿದ್ದರೆ ಬಾ’ ಎಂದು ಹೇಳಿ ಗಿಳಿ ಹಾರತೊಡಗಿತು. ಹುಡುಗ ಹಿಂದಿನಿಂದ ಅದರ ಬೆನ್ನು ಹತ್ತಿದ. ಇಬ್ಬರೂ ಕಾಡಿನಲ್ಲಿಯ ಒಂದು ದೇವಸ್ಥಾನಕ್ಕೆ ಬಂದರು. ಅಲ್ಲಿ ಒಂದು ಕೀಲುಕುದುರೆ ಇತ್ತು. ಗಿಳಿ ಹೇಳಿತು:

ಈ ಕುದುರೆಯನ್ನು ಏರು. ಅದು ಹಾರುತ್ತದೆ. ಸಮುದ್ರದ ಮೇಲೆ ಹಾರಾಡುವಾಗ ಕೆಳಗಡೆ ಒಂದು ಚಂದದ ದ್ವೀಪ ಕಾಣಿಸುತ್ತದೆ. ಅಲ್ಲಿ ಕುದುರೆಯನ್ನು ಇಳಿಸು. ಆ ಕೂಡಲೇ ಅಲ್ಲಿಯ ದಾಸಿಯರು ಇದನ್ನು ನೋಡಲಿಕ್ಕೆ ಓಡಿ ಬರುತ್ತಾರೆ. ಅವರಿಗೆ ಕುದುರೆ ಹತ್ತುವುದು ಹೇಗೆ, ಹಾರುವುದು ಹೇಗೆ, ಇಳಿಸುವುದು ಹೇಗೆ – ಎಂದು ತೋರಿಸು. ಕುದುರೆ ಹತ್ತಿಸಿಕೊಂಡು ಅಷ್ಟಿಷ್ಟು ಹಾರಿಸಿ ತೋರಿಸು. ಆಮೇಲೆ ಅವರ ಒಡತಿ ರಾಜಕುಮಾರಿ ಕುದುರೆಯನ್ನು ನೋಡುವುದುಕ್ಕೆ ಬರುತ್ತಾಳೆ. ಅವಳು ಇದರ ಮೇಲೆ ಹತ್ತುವುದಷ್ಟೇ ತಡ ಕುದುರೆ ಮೇಲೇರಿಸಿ ಕರೆದುಕೊಂಡು ಬಾ’ – ಎಂದು, ಕೀಲುಕುದುರೆ ಹತ್ತುವ, ಅದನ್ನು ಮೇಲೆ ಏರಿಸುವ, ಇಳಿಸುವ ವಿಧಾನ ಹೇಳಿಕೊಟ್ಟಿತು. ಬೇಡರ ಹುಡುಗ ಅದನ್ನು ಹತ್ತಿ ಸಾಗಿದ.

ಆಕಾಶದಲ್ಲಿ ಹಾರಾಡುವಾಗ, ಆ ಗಿಳಿ ಹೇಳಿದಂಥ ದ್ವೀಪ ಕಾಣಿಸಿತು. ಕುದುರೆಯನ್ನು ಇಳಿಸಿದ. ದಾಸಿಯರೆಲ್ಲ ನೋಡಬಂದರು. ಅವರಿಗೆ ಅಷ್ಟಿಷ್ಟು ಏರಿಸಿ, ಹಾರಿಸಿ, ಇಳಿಸಿ ತೋರಿಸಿದ. ಕೊನೆಗೆ ರಾಜಕುಮಾರಿ ಬಂದಳು. ಅವಳು ಕೀಲು ಕುದುರೆ ಹತ್ತಿದೊಡನೆ ಕುದುರೆಗೆ ಕೀಲಿಕೊಟ್ಟು ತಿರುಗಿಸಿ ಹಾರಿಸಿದ. ರಾಜಕುಮಾರಿ ಮೊದಮೊದಲು ಇದು ಬರೀ ವಿನೋದವೆಂದು ಎಣಿಸಿದಳು. ಕೊನೆಗೆ ಹೆದರಿ ಚೀರಿ ಅತ್ತರೂ ಪ್ರಯೋಜನವಾಗಲಿಲ್ಲ. ಅವಳನ್ನು ಕರೆದುಕೊಂಡು ರಾಜನ ಅರಮನೆಗೇ ಬಂದ. ಪಂಚವರ್ಣದ ಗಿಳಿ ಈ ರಾಜಕುಮಾರಿಯನ್ನು ನೋಡಿದೊಡನೆ ಹಾಡಲಾರಂಭಿಸಿತು. ರಾಜ ಸಂತೋಷದಿಂದ ಕುಣಿದಾಡಿದ. ರಾಜನನ್ನು ರಾಜಕುಮಾರಿಯೂ ರಾಜಕುಮಾರಿಯನ್ನು ರಾಜನೂ ನೋಡಿ ಪರಸ್ಪರ ಮೆಚ್ಚಿದರು. ಕೆಲ ದಿನಗಳಲ್ಲಿಯೇ ಅವರು ಮದುವೆಯಾದರು. ಬೇಡರ ಹುಡುಗನನ್ನು ರಾಜ ಸನ್ಮಾನಿಸಿ ಈ ಸಲ ತನ್ನ ಸೇನಾಪತಿಯಾಗಿ ನಿಯಮಿಸಿಕೊಂಡ. ಮಂತ್ರಿಯ ಹೊಟ್ಟೆಕಿಚ್ಚು ಹೆಚ್ಚಾಗಿ ಇನ್ನೂ ಸಂಕಟವಾಯಿತು. ಕಾಡಿನಲ್ಲಿ ಅಲೆದಾಡುವ ಬೇಡರ ಹುಡುಗ ಗಜಪತಿಯಾದ. ಈಗ ಸೇನಾಪತಿಯಾದ; ಇನ್ನು ಮುಂದೆ ಮಂತ್ರಿಯೂ ಆದಾನು, ಇವನನ್ನು ಹೀಗೆಯೇ ಬಿಟ್ಟರೆ ತನಗೆ ಅಪಾಯವೆಂದು ಲೆಕ್ಕ ಹಾಕಿದ.

ಹೀಗೆಯೇ ಕೆಲವು ದಿನ ಕಳದ ಬಳಿಕ ಆ ದ್ವೀಪದ ರಾಜಕುಮಾರಿಗೆ ಹೊಟ್ಟೆ ನೋವು ಬಂತು. ರಾಜವೈದ್ಯರೆಲ್ಲ ಚಿಕಿತ್ಸೆ ನಡೆಸಿ ಸೋತರು. ರಾಜ ರೇಗಾಡತೊಡಗಿದ. ಆಗ ವೈದ್ಯರು, ‘ರಾಜರೇ, ತಮ್ಮ ರಾಣಿಯವರು ನಮ್ಮ ನಿಮ್ಮಂಥ ಮನುಷ್ಯ ವ್ಯಕ್ತಿ ಅಲ್ಲವೆಂದು ತೋರುತ್ತದೆ. ಯಾರೋ ದೇವಲೋಕದವರೇ ಇರಬೇಕು. ಅದಕ್ಕೆ ನಮ್ಮ ಔಷಧಿಗಳು ಅವರ ದೇಹದ ಮೇಲೆ ಏನೂ ಪರಿಣಾಮ ಮಾಡಲಿಲ್ಲ. ಅವರಿದ್ದ ದ್ವೀಪದವರೇ ಯಾರಾದರೂ ಬಂದರೆ ಅವರ ಹೊಟ್ಟೆನೋವು ವಾಸಿಯಾದೀತು’ ಎಂದರು. ಮಂತ್ರಿ ಇದೇ ಅವಕಾಶವೆಂದು,

‘ವೈದ್ಯರು ಹೇಳಿದ್ದು ನಿಜ ರಾಜರೇ’ ಅಂದ.

‘ಹಾಗಾದರೆ ಆ ದ್ವೀಪಕ್ಕೆ ಹೋಗುವವರು ಯಾರು?’

‘ಅದಕ್ಕೆ ಯಾಕಿಷ್ಟು ಚಿಂತೆ? ನಮ್ಮ ಸೇನಾಪತಿ, ಆ ಬೇಡರ ಹುಡುಗ ಇದ್ದಾನಲ್ಲಾ, ಅವನನ್ನೇ ಕಳುಹಿಸಿ.’

ರಾಜ ಮತ್ತೆ ಬೇಡರ ಹುಡುಗನನ್ನು ದ್ವೀಪಕ್ಕೆ ಕಳುಹಿಸಲು ಸಿದ್ಧನಾದ. ಆಗ ದ್ವೀಪದ ರಾಣಿ, ‘ಅಯ್ಯೋ, ಅಲ್ಲಿಗೆ ಹೋದರೂ ಪ್ರಯೋಜನವಿಲ್ಲ. ಈ ಹೊಟ್ಟೆನೋವಿಗೆ ಔಷಧಿ ಗೊತ್ತಿದ್ದವಳು – ನನ್ನ ಸಖಿ ಮಾತ್ರ. ಆಕೆ ಗಿಳಿಯಾಗಲೆಂದು ಮುಂಗೋಪದಿಂದ ನಾನು ಶಾಪ ಹಾಕಿದ್ದೆ. ಗಿಳಿಯಾಗಿ ಎಲ್ಲೆಲ್ಲೋ ಕಾಡಿನಲ್ಲಿ ಹಾರಾಡುತ್ತಿರುವ ಅವಳು ಇನ್ನೆಲ್ಲಿ ಸಿಗುತ್ತಾಳೆ? – ಇನ್ನು ನನಗೆ ಸಾವೇ ಗತಿ’ ಎಂದು ನಿರಾಸೆಯಿಂದ ಹೇಳಿದಳು.

ಬೇಡರ ಹುಡುಗ ತಮ್ಮ ಮನೆಗೆ ಬಂದು ‘ರಾಣಿಯನ್ನು ಹೇಗೆ ಉಳಿಸುವುದು?’ ಎಂದು ಚಿಂತೆ ಮಾಡುತ್ತಾ ಕುಳಿತ. ಆಗ ಮತ್ತೆ ಮೊದಲಿನ ಗಿಳಿಯು ಹಾರಿ ಬಂದು ಅವನ ಮುಂಗೈ ಮೇಲೆ ಕುಳಿತುಕೊಂಡಿತು.

‘ಚಿಂತೆ ಯಾಕೆ?’ – ಎಂದು ಕೇಳಿತು.

‘ಏನು ಹೇಳಲಿ? ದ್ವೀಪದ ರಾಣಿಗೆ ಹೊಟ್ಟೆನೋವು ಬಂದಿದೆ. ಆ ನೋವಿಗೆ ಔಷಧಿ ಗೊತ್ತಿದ್ದದ್ದು ಅವಳ ಸಖಿಗೆ ಮಾತ್ರವಂತೆ. ಆ ಸಖಿ ಗಿಳಿಯಾಗಲೆಂದು ರಾಣಿ ಶಾಪ ಹಾಕಿದ್ದರಿಂದ ಅವಳು ಎಲ್ಲೋ ಕಾಡಿನಲ್ಲಿ ಗಿಳಿಯಾಗಿ ಹಾರಾಡುತ್ತಿರಬಹುದು. ತನಗಿನ್ನು ಸಾವೇ ಗತಿ ಎಂದು ರಾಣಿ ದುಃಖಿಸುತ್ತಿದ್ದಾಳೆ. ರಾಜರೂ ಅಷ್ಟೆ. ಪಾಪ, ಅವರಿಗೆ ಹೇಗೆ ಸಹಾಯ ಮಾಡಬೇಕೆಂಬುದೇ ನನಗೆ ತಿಳಿಯುತ್ತಿಲ್ಲ.’

‘ಹಾಗೋ? ಹಾಗಾದರೆ ನನ್ನನ್ನೇ ಅಲ್ಲಿಗೆ ಕರೆದುಕೊಂಡು ಹೋಗು’ ಎಂದು ಗಿಳಿ ಹೇಳಿತು.

ಗಿಳಿಯ ಮಾತಿನಂತೆ ಅದನ್ನು ಅರಮನೆಗೆ ಕರೆದುಕೊಂಡು ಹೋದ. ರಾಣಿಯ ಸುತ್ತ ರಾಜನೂ ಪರಿವಾರದವರೂ ಆಕೆಯ ಸಂಕಟ ನೋಡಲಾರದೆ ದುಃಖತಪ್ತರಾಗಿ ನಿಂತಿದ್ದರು. ಬೇಡರ ಹುಡುಗ ಒಯ್ದ ಗಿಳಿಯನ್ನು ನೋಡಿದೊಡನೆ ರಾಣಿ, ತನ್ನ ಸಖಿ ಇವಳೇ ಎಂದು ಗುರುತಿಸಿ ಕೂಡಲೇ ಅವಳನ್ನು ಮನುಷ್ಯಳನ್ನಾಗಿ ಮಾಡಿದಳು. ಆ ಸಖಿ ಬಹಳ ಚೆಲುವೆಯಾಗಿದ್ದಳು. ಬೇಡರ ಹುಡುಗ ಮೆಚ್ಚುಗೆಯಿಂದ ಇವಳನ್ನೇ ನೋಡುತ್ತಿದ್ದ. ಆ ಸಖಿ ಔಷಧಿ ಮಾಡಿ ರಾಣಿಗೆ ಕುಡಿಸಿದಳು. ರಾಣಿಗೆ ಗುಣವಾಯಿತು. ಆಗ ರಾಜ ಆ ಬೇಡರ ಹುಡುಗನನ್ನೇ ಮಂತ್ರಿಯನ್ನಾಗಿ ಮಾಡಿದ. ಹಾಗೂ ತನ್ನ ರಾಣಿಯ ಸಖಿಯೊಂದಿಗೆ ಮದುವೆ ಮಾಡಿದ. ಮೊದಲಿದ್ದ ಮಂತ್ರಿಯ ದುಷ್ಟ ಬುದ್ಧಿಯನ್ನರಿತು ಅವನನ್ನು ಗಡೀಪಾರು ಮಾಡಿದ. ಅವರೆಲ್ಲ ಅಲ್ಲಿ ಸುಖವಾಗಿದ್ದರು. ನಾವಿಲ್ಲಿ ಹೀಗಿದ್ದೇವೆ.

* * *