ನನ್ನಾ ಮಾಧವನನು ಕೊಡು ಮಾಧವಿ ನನಗೆ,
ನನ್ನೊಲವನು, ನನ್ನಿನಿಯನ ಕೊಡು ನನಗೆ.
ನೀನವನನು ಕೊಟ್ಟರೆ, ದಾಸಿಯವೋಲಿರುವೆನು ನಾ
ನಿನ್ನಯ ಮನೆಯೊಳಗೆ !

ನಿನ್ನೆದೆಯೊಳಗವನನ್ನೇತಕೆ ಬಚ್ಚಿಟ್ಟಿಹೆ ಮಾಧವಿ?
ಕೊಡು ನನ್ನಿನಿಯನ ನನಗೆ.
ನಾ ಮುಗ್ಧಳು ; ನನ್ನೊಳಗೇತಕೆ
ನಿನಗೀ ತೆರದ ಹಗೆ?

ಮೀನಿಗೆ ನೀರೆಂತಂತೆಯೆ
ನನಗವನೇ ಆಧಾರ.
ಅವನಿಲ್ಲದೆ ಜೀವಿಸೆ ನಾ
ಜೀವನವೇ ನಿಸ್ಸಾರ !

ಓ, ಕೊಡು, ಮಾಧವಿ, ಬೇಡುವೆ,
ನನ್ನಾ ಮಾಧವನನು ನನಗೆ ;
ಕೊಡು ಹಿಂದಕೆ
ನನ್ನಿನಿಯನ ನನಗೆ.