ನಿನ್ನಡಿಯ ಹುಡಿ ನನ್ನ
ಮುಡಿಯ ಸಿಂಗರಿಸಿರಲಿ,
ಕಡೆಗಾನು ಹುಡಿಯಾಗಿ
ನಿನ್ನಡಿಗೆ ಸಲಲಿ.

ನಿನ್ನೊಲವಿನಂಬುಧಿಗೆ
ನನ್ನೆದೆಯ ಕರೆಯತೊರೆ
ಸಂತತವು ಹೊನಲಾಗಿ
ಹರಿಯುತಿರಲಿ.

ನಿನ್ನ ಕರುಣೆಯ ಕಿರಣ
ನಾನೆಂಬ ಹಿರಿಮಂಜ
ಕರಗಿಸುತ ಹೊಳೆ ಹೊಳೆದು
ಬೆಳಗುತಿರಲಿ.

ನನ್ನ ದೋಷಗಳೆಲ್ಲ
ನಿನ್ನ ಕ್ಷಮೆಯಾಯುಧದಿ
ಸಿಡಿಸಿಡಿದು ಹುಡಿಯಾಗಿ
ಹೋಗುತಿರಲಿ.

ಮುನ್ನ ಗುಣಗಳನುಳಿದು
ನಿನ್ನ ಗುಣದಲಿ ಬೆರೆದು
ಹೊಳೆ ಕಡಲಿಗಿಳಿವಂತೆ
ನಾನಳಿಯಲಿ.