ಬೇಡ ಇವಳು ಹತ್ತಿರ,
ಇರಲಿ ಇವಳು ದೂರ ದೂರ, ಈ ತೀರದ
ಈಚೆಯೇ –
ಸಾಕು ನನಗೆ ಆ ತೀರದ ಪರ್ಣಕುಟಿಯ ರಕ್ಷೆಯೇ.

ಬೇಡ ಇವಳು ಹತ್ತಿರ ;
ಇವಳು ಮಾಯೆ, ಇವಳು ಮೋಹ
ಇವಳಿದ್ದರೆ ಸದಾ ದಾಹ.
ಇವಳ ಕಣ್ಣ ಮಿಂಚಿನೀಟಿ
ತಿವಿಯದಿರುವ ರಕ್ಷೆ ಬೇಕು ;
ಇವಳುಸುರಿನ ಸುಟ್ಟುರೆಯಿಂ-
ದಾಚೆ ದೂರ ನಿಲ್ಲಬೇಕು,
ಹತ್ತಿರಿದ್ದರೆಳೆದು ನನ್ನ
ಬೆಳುದಿಂಗಳ ಮಡುವಿನಲ್ಲಿ
ಅದ್ದಿಬಿಡುವ ಮೋಡಿಯಿವಳು-
ಬೇಡ ಬೇಡ ಬೇಡ ಇನ್ನು
ಇವಳು ನನ್ನ ಹತ್ತಿರ.

ಬೇಡ ಇವಳು ಹತ್ತಿರ ;
ಸದಾ ಜ್ವಲಿಪ ಕುಲುಮೆ ಇವಳು,
ಇವಳ ಬೆಂಕಿಯೆದುರು ನಾನು
ತೆರೆಯಲಾರೆ ನೂರು ಬಗೆಯ
ಕಬ್ಬಿಣಗಳ ಡೊಂಕನು.

ಇವಳ ಗರುಡಗಣ್ಣಿನೆದುರು
ತೆರೆದು ಆಡದಿಹುದು ಸರ್ಪ
ತನ್ನ ಮಣಿಯ ಹೆಡೆಯನು !
ಬೇಡ ಬೇಡ ಬೇಡ ಇವಳು
ಇನ್ನು ನನ್ನ ಹತ್ತಿರ !
ಬಿಟ್ಟೆನೆಂದು ದೂರದೂರ
ಸರಿದಷ್ಟೂ ಸೆಳೆವುದಿವಳ
ಬಂಗಾರದ ರೇಸಿಮೆಯೆಳೆ ಸೂಜಿಗಲ್ಲ ಸೂತ್ರವು !
ತೋರಣಗಳ ಕೆಳಗೆ ತೂರಿ
ಹೊಸ್ತಿಲುಗಳ ತೆಮರನೇರಿ
ರಂಗೋಲಿಯ ದಾರಿಗಳಲಿ
ಸದಾ ಬಂದೆ ಬರುವುದಿವಳ
ಗೆಲುವಿನಟ್ಟಹಾಸವು !

ಬೇಡ ಇವಳು ಹತ್ತಿರ ;
ಇರಲಿ ಇವಳು ದೂರ ದೂರ, ಈ ತೀರದ
ಈಚೆಯೇ-
ಸಾಕು ನನಗೆ ಆ ತೀರದ ಪರ್ಣಕುಟಿಯ ರಕ್ಷೆಯೇ.